Friday, 13th December 2024

ಬದುಕಿನ ಸಂಕೀರ್ಣತೆಗಳನ್ನು ನಿಭಾಯಿಸುವ ಕಲೆಗಾರರಾಗಿ

ಶ್ವೇತಪತ್ರ

shwethabc@gmail.com

ಮನುಷ್ಯನೊಳಗೆ ಅನೇಕ ಸಂಕೀರ್ಣತೆಗಳೇ ಅಡಗಿವೆ. ಏನವು ಸಂಕೀರ್ಣತೆಗಳು? ಎನ್ನುವ ಕುತೂಹಲದ ಪ್ರಶ್ನೆ ಕಾಡುವುದು ಸಹಜ. ನಮ್ಮನ್ನು ತೀವ್ರವಾಗಿ ಒದ್ದಾಡಿಸ ಬಹುದಾದ ಮಾನಸಿಕ ಸಮಸ್ಯೆಗಳನ್ನು ಸಂಕೀರ್ಣತೆಗಳು ಎನ್ನಲು ಅಡ್ಡಿಯಿಲ್ಲ.

ನಮ್ಮ ಬಗ್ಗೆ ನಾವೇ ಸ್ಪಷ್ಟವಾದ ಚಿತ್ರಣವನ್ನು ಕಣ್ಣೆದುರಿಗೆ ತರಿಸಿಕೊಂಡರೆ ಮನಸ್ಸಿನ ಸಂಕೀರ್ಣತೆಗಳ ಬಗೆಗೆ ನಿಖರತೆ ನಮಗೆ ದೊರಕುತ್ತದೆ. ಯಾವಾಗ ಮನುಷ್ಯನ ಅಹಂ ಸೋತುಹೋಗಿರುತ್ತದೆಯೋ ಆಗೆಲ್ಲ ಆತ ತಾನು ಇತರರಿಗಿಂತ ಕಡಿಮೆ ಎಂಬ ಕೀಳರಿಮೆ ಯನ್ನು ಬೆಳೆಸಿಕೊಂಡಿರುತ್ತಾನೆ. ಅಹಮ್ಮನ್ನು ನಾವು ಅಪೇಕ್ಷಿಸದೇ ಹೋದರೂ, ಬದುಕಲ್ಲಿ ನಮ್ಮೆಲ್ಲರಿಗೂ ನಮ್ಮ ಹಿತಾಸಕ್ತಿಯೇ ಪ್ರಧಾನವಾಗುತ್ತದೆ.

ಯಾವುದಕ್ಕಾದರೂ ಪ್ರಾಮುಖ್ಯವನ್ನು ನೀಡಬೇಕಾದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ‘ನಾನು’ ಎನ್ನುವ ಪರಿಕಲ್ಪನೆ ಮೊದಲಾಗಿ ಬಿಟ್ಟಿರುತ್ತದೆ. ಡಾರ್ವಿನ್ನನ ವಿಕಾಸದ ಸಿದ್ಧಾಂತವನ್ನು ಇಣುಕಿ ನೋಡಿದಾಗ ‘ಸರ್ವೈವಲ್ ಆಫ್ ದ ಫಿಟ್ಟೆಸ್ಟ್’ ಪರಿಕಲ್ಪನೆಯು ಪ್ರಕೃತಿಯ ಸಹಜ ನಿಯಮವಾಗಿ, ನಾವೆಲ್ಲರೂ ಬದುಕುಳಿಯುವಿಕೆಗಾಗಿಯೇ ನಮ್ಮ ಸಮಯ ಮತ್ತು ಶಕ್ತಿಯನ್ನು ಎಳೆಯುತ್ತಾ, ನಮ್ಮ ಹಾಗೂ ನಮ್ಮ ಪ್ರೀತಿ ಪಾತ್ರರನ್ನು ಬದುಕಿಸಿಕೊಳ್ಳುವ ಪ್ರಯತ್ನದಲ್ಲಷ್ಟೇ ಇದ್ದೇವೆಯೇ? ಹಾಗಿದ್ದರೆ ನಮಗೂ ಮತ್ತು ಪ್ರಾಣಿಗಳಿಗೂ ವ್ಯತ್ಯಾಸ ವೇನು? ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಸುಲಭ ಉತ್ತರ ಆತ್ಮಗೌರವ.

ಬಹು ಸಂದರ್ಭಗಳಲ್ಲಿ ಆತ್ಮಗೌರವವು ಋಣಾತ್ಮಕವಾದ ಆಕಾರವನ್ನು ಪಡೆದುಕೊಂಡುಬಿಡುತ್ತದೆ. ನಾವು ಅಪೇಕ್ಷಿಸುವ ಆತ್ಮ ಗೌರವವನ್ನು ಜನರು ಪ್ರತಿಷ್ಠೆಯ ಸಂಕೇತವಾಗಿ ತಪ್ಪು ತಿಳಿದುಕೊಳ್ಳುವ ಸಾಧ್ಯತೆಗಳು ಹೆಚ್ಚು. ಮನುಷ್ಯನ ಈ ವರ್ತನೆಯೇ ಅವನೊಳಗೆ ಸಂಕೀರ್ಣತೆಗಳು ಹೆಪ್ಪುಗಟ್ಟು ವಂತೆ ಮಾಡುತ್ತದೆ. ಅವನ ಈ ವರ್ತನೆಯ ಹಿಂದೆ ವಿವೇಕವಂತೂ ಖಂಡಿತ ವಾಗಿಯೂ ಅಡಗಿರುವುದಿಲ್ಲ, ಆದರೆ ಅಹಂಕಾರವಂತೂ ತುಂಬಿಕೊಂಡಿರುತ್ತದೆ. ಮನುಷ್ಯನ ಈ ಟೊಳ್ಳು ವರ್ತನೆಯು ಆತನ ವ್ಯಕ್ತಿತ್ವದ ಮೇಲೆ ಋಣಾತ್ಮಕ ಪ್ರಭಾವವನ್ನೇ ಬೀರಿರುತ್ತದೆ.

ಸಂಕೀರ್ಣತೆಯ ವಿಷಯ ಬಂದಾಗ ಮೇಲರಿಮೆ ಮತ್ತು ಕೀಳರಿಮೆ ಭಾವಗಳು ಬಹಳ ಮುಖ್ಯವಾಗುತ್ತವೆ. ಮೇಲರಿಮೆ ಎಂದಾಗ ವ್ಯಕ್ತಿ ತನ್ನ ಸುತ್ತಲಿನ ಜಗತ್ತನ್ನು ತನಗೆ ಯಾವುದೇ ಕಾರಣಕ್ಕೂ ಸಮನಿಲ್ಲ ಎಂಬ ಭ್ರಮೆಯ ಭಾವದಲ್ಲೇ ಪರಿಭಾವಿಸುವುದೇ ಆಗಿರುತ್ತದೆ. ತನ್ನ ಶಿಕ್ಷಣ, ಕೌಶಲ, ಬಟ್ಟೆ-ಬರೆ, ಸಿರಿತನ, ಹಣ ಇವೆಲ್ಲವುಗಳಲ್ಲೂ ತಾನು ಇತರರಿಗಿಂತ ಮೇಲು ಎಂಬ ಅಂಶವೇ ವ್ಯಕ್ತಿಯ ತಲೆಯಲ್ಲಿ ತುಂಬಿ ಬಿಟ್ಟಿರುತ್ತದೆ. ಈ ಕಾರಣದಿಂದಾಗಿಯೇ ಇತರರನ್ನು ಕೀಳಾಗಿ ಕಾಣುವ ವರ್ತನೆಯನ್ನು ಅಂಥ ವ್ಯಕ್ತಿಗಳು ರೂಢಿಸಿಕೊಂಡಿರುತ್ತಾರೆ.

ಇಂಥವರು ಮನಸ್ಸಿನಲ್ಲಿ ಗೋಡೆಗಳನ್ನು ಕಟ್ಟಿಕೊಂಡುಬಿಟ್ಟಿರುವುದರಿಂದ ಹೊರಗಿನವರ ಯಾವುದೇ ಒಳ್ಳೆಯ ಸಲಹೆಗಳನ್ನು, ಯೋಜನೆಗಳನ್ನು ಒಪ್ಪಲು ತಯಾರಾಗಿರುವುದಿಲ್ಲ. ಮೇಲರಿಮೆಯು ವ್ಯಕ್ತಿತ್ವಕ್ಕೆ ಎಷ್ಟು ಧಕ್ಕೆಯೋ, ಕೀಳರಿಮೆಯೂ ವ್ಯಕ್ತಿತ್ವಕ್ಕೆ
ಒಂದು ಧಕ್ಕೆ. ವ್ಯಕ್ತಿ ತನ್ನನ್ನು ತನ್ನ ಸಾಮರ್ಥ್ಯಗಳನ್ನು ನಂಬದೇ ಯಾವುದೇ ಒಂದು ಕೆಲಸವನ್ನು ಮಾಡಲು ಅಸಮರ್ಥ ನಾಗುವುದೇ ಈ ಕೀಳರಿಮೆ. ವ್ಯಕ್ತಿ ದೊಡ್ಡವನೋ, ಸಣ್ಣ ವನೋ ಎಂಬುದು ಆತನ ಯೋಚನೆಯಲ್ಲಿ ಇರುತ್ತದೆ.

ಬೇರೆಯವರು ನಿಮ್ಮನ್ನು ಸರಿಯಾಗಿ ನಡೆಸಿಕೊಳ್ಳದೆ ಇರುವುದು ಬೇರೆಯದೇ ವಿಚಾರ; ಆದರೆ ನಿಮ್ಮನ್ನು ನೀವೇ ಸರಿಯಾಗಿ ನಡೆಸಿಕೊಳ್ಳದೆ ಹೋಗಿಬಿಟ್ಟರೆ ನಿಮ್ಮ ಸಹಾಯಕ್ಕೆ ಯಾರೂ ಬರಲು ಸಾಧ್ಯವಾಗುವುದಿಲ್ಲ. ಎಂದಾದರೂ ನಿಮ್ಮನ್ನು ಸಿರಿವಂತಿ ಕೆಯ ಭಾವ ಕಾಡಿದೆಯೇ? ಅಂದರೆ ‘ನಾನು ಬ್ರಾಂಡೆಡ್ ಬಟ್ಟೆಗಳನ್ನು ಧರಿಸಬೇಕು, ತುಂಬಾ ದುಡಿಯಬೇಕು, ಒಡವೆ ಕೊಳ್ಳಬೇಕು ದುಬಾರಿ ಕಾರುಗಳನ್ನು ನನ್ನವಾಗಿಸಿಕೊಳ್ಳಬೇಕು’ ಹೀಗೆ… ಈ ಯಾವ ಭಾವಗಳೂ ನಿಮ್ಮನ್ನು ಕಾಡಿಲ್ಲವೆಂದಾದರೆ ಅದು ನಿಮ್ಮ ವ್ಯಕ್ತಿತ್ವದ ದೊಡ್ಡ ಶಕ್ತಿಯೇ ಎಂದು ತಿಳಿಯಿರಿ.

ನೀವು ದೊಡ್ಡಣ್ಣನೆಂಬ ಮನೋಭಾವಕ್ಕೆ ಒಳಗಾಗಿಲ್ಲವೆಂದೇ ಅದರ ಅರ್ಥ. ಅಧಿಕಾರ ಮತ್ತು ಹಣ ನಮ್ಮ ಬಳಿ ಇರುವಾಗ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದೇ ನಮ್ಮ ವ್ಯಕ್ತಿತ್ವದ ಬಹುಮುಖ್ಯ ಪರೀಕ್ಷೆಯಾಗಿರುತ್ತದೆ. ನಮ್ಮದೇ ಸಂಕೀರ್ಣತೆಗಳನ್ನು ಎದುರಿಸಲು ನಮಗೆ ಬೇಕಿರುವುದು ನಮ್ಮೊಳಗಿನ ದೃಢತೆ ಮತ್ತು ಆತ್ಮವಿಶ್ವಾಸ. ನಮಗೆಲ್ಲ ನೆನಪಿರಬೇಕಾದ ಒಂದು ವಿಷಯ ವೆಂದರೆ, ಬೇರೆಯವರಿಗಿಂತ ನಾವು ಆಸ್ತಿಪಾಸ್ತಿಯಲ್ಲೋ, ಐಶ್ವರ್ಯದಲ್ಲೋ ಕಡಿಮೆ ಇರಬಹುದು; ಆದರೆ ನಾವು ಅವರಿಗಿಂತ
ಉತ್ತಮವಾದ ಆರೋಗ್ಯವನ್ನೂ, ನೋವು ನುಂಗುವ ಸಹಿಷ್ಣುತೆಯನ್ನೂ ಪಡೆದಿರುತ್ತೇವೆ. ಜತೆಗೆ ನಾವು ಬಹಳ ಅದೃಷ್ಟವಂತ ರಾದರೆ ಎಲ್ಲೂ ಕೊಳ್ಳಲಾಗದ ದಿವ್ಯ ಮಾನಸಿಕ ನೆಮ್ಮದಿಯನ್ನೂ ಪಡೆದಿರುತ್ತೇವೆ.

ಹಾಗಾಗಿ ನಾವು ಮುಖ್ಯವಾಗಿ ಗೌರವಿಸಬೇಕಿರುವುದು ನಮ್ಮ ಜ್ಞಾನವನ್ನು, ನಮ್ಮೊಳಗಿನ ಆತ್ಮವಿಶ್ವಾಸವನ್ನು. ಅದು ಬಿಟ್ಟು ಬೇರೆಯ ವರಿಗೆ ನಮ್ಮನ್ನು ಹೋಲಿಸಿ ನೋಡುತ್ತಾ ಕೀಳರಿಮೆಗಳಿಂದ ಬಳಲುವುದಕ್ಕಿಂತ ಮಾನಸಿಕ ನೆಮ್ಮದಿಗಾಗಿ ನಾವು ಹೆಚ್ಚು
ಹೆಚ್ಚು ಹಾತೊರೆಯಬೇಕು. ನಮ್ಮದೇ ಸಂಕೀರ್ಣತೆಗಳಿಂದ ನಮ್ಮ ಬಗೆಗಿನ ನಮ್ಮದೇ ಬಗೆಗಿನ ಆಪನಂಬಿಕೆಗಳಿಂದ ಹೊರಬರಲು ಇಲ್ಲೊಂದಿಷ್ಟು ದಾರಿಗಳಿವೆ, ನೋಡಿ:

ಮೊದಲನೆಯ ದಾರಿ: ಯಶಸ್ವೀ ವ್ಯಕ್ತಿಯ ಚಿತ್ರವನ್ನು ಬಿಡಿಸಿ. ನಾವೆಲ್ಲಾ ನಮ್ಮ ಭವಿಷ್ಯದ ಚಿತ್ರಗಳನ್ನು ನಮ್ಮ ಕಣ್ಣ ಮುಂದೆ ತೆಗೆದುಕೊಂಡು ಬರಲು ಪ್ರಯತ್ನಿಸುತ್ತೇವೆ.

ಆದರೆ ಎಷ್ಟೋ ಸಲ ಅದರಲ್ಲಿ ಸೋತುಹೋಗಿಬಿಡುತ್ತೇವೆ. ಹಾಗಾಗಿ ಕಣ್ಣ ಮುಂದೆ ತರಿಸಿಕೊಂಡ ಈ ಚಿತ್ರಗಳಿಗೆ ನಿಜವಾದ ಚಿತ್ರವನ್ನು ಬರೆದು ಅವುಗಳಿಗೊಂದು ಪೆನ್ಸಿಲಿನ ಸ್ಕೆಚ್ ರೂಪವನ್ನು ಕೊಡಿ. ಆ ರೂಪವನ್ನು ಪಡೆದ ಚಿತ್ರಗಳು ವಾಸ್ತವವಾಗಿ ಪರಿಣಾಮಕಾರಿಯಾಗಿ ಬದಲಾಗುತ್ತಾ ಹೋಗುತ್ತವೆ. ನಮ್ಮ ತಲೆಯೊಳಗೆ ನಮ್ಮ ಮನಸ್ಸಿನಲ್ಲಿ ಮೂಡಿದ ಕಲ್ಪನೆಯ ಚಿತ್ರಗಳು ಡ್ರಾಯಿಂಗ್ ಶೀಟ್ ಮೇಲಿನ ಚಿತ್ರಗಳಾಗಿ ಬದಲಾಗುತ್ತಾ, ಬದುಕಿನಲ್ಲೂ ನಿಜವಾದ ಚಿತ್ರಗಳಾಗಿ ಬದಲಾಗುತ್ತಲೇ ಹೋಗುತ್ತವೆ. ಆ
ಮೂಲಕ ನಾವು ಉತ್ತಮ ವ್ಯಕ್ತಿತ್ವವನ್ನು, ಆತ್ಮವಿಶ್ವಾಸವನ್ನು, ದೃಢತೆಯನ್ನು ಬೆಳೆಸಿಕೊಳ್ಳಬಹುದು.

ಎರಡನೆಯ ದಾರಿ: ಮನಸ್ಸಿನ ಒಳಗಿನ ಋಣಾತ್ಮಕ ಯೋಚನೆಗಳನ್ನು ಹೊಡೆದೋಡಿಸಿ ಸಕಾರಾತ್ಮಕ ಆಲೋಚನೆಗಳನ್ನು ನಮ್ಮವಾಗಿಸಿಕೊಳ್ಳಬೇಕು. ನಮ್ಮ ಭವಿಷ್ಯದ ಕುರಿತಾಗಿ ನಾವು ಯೋಚಿಸಿದಾಗ ಆ ಯೋಚನೆಗಳು ಎಂದಿಗೂ ಪಾಸಿಟಿವ್ ಆಗಿರಲಿ, ಅದರೊಳಗೆ ಭಯಗಳು ಮತ್ತು ಅಭದ್ರತೆಗಳು, ಅಸ್ಥಿರತೆಗಳು, ಅಪನಂಬಿಕೆಗಳು ಕಾಡದಿರಲಿ. ನಮ್ಮ ಮನಸ್ಸಿನೊಳಗೆ ಕೂತುಬಿ ಟ್ಟಿರುವ ಋಣಾತ್ಮಕ ಆಲೋಚನೆಗಳೇ ನಮ್ಮ ಸೋಲಿಗೆ ಬಹುಮುಖ್ಯ ಕಾರಣವಾಗುತ್ತವೆ. ಹಾಗಾಗಿ ಈ ಋಣಾತ್ಮಕ ಆಲೋಚನೆ ಗಳನ್ನು ಮನಸ್ಸಿನಿಂದ ತೊಡೆದುಹಾಕುವುದು ಬಹಳ ಮುಖ್ಯ ಪ್ರಕ್ರಿಯೆಯಾಗುತ್ತಾ ಹೋಗುತ್ತದೆ.

ಋಣಾತ್ಮಕ ಆಲೋಚನೆಗಳನ್ನು ಹೊಡೆದೋಡಿಸುವುದು ಎಷ್ಟು ಮುಖ್ಯವೋ ಸಕಾರಾತ್ಮಕ ಆಲೋಚನೆಗಳನ್ನು ನಮ್ಮವಾಗಿಸಿ ಕೊಳ್ಳುವುದೂ ಅಷ್ಟೇ ಮುಖ್ಯ. ಅದರಲ್ಲೂ ಭಯವಿಲ್ಲದ ಮನಸ್ಸು ನಮ್ಮದಾದರೆ ಭಯವಿಲ್ಲದ ಭವಿಷ್ಯ ಖಂಡಿತವಾಗಿಯೂ ನಮ್ಮದಾಗುತ್ತದೆ.

ಮೂರನೆಯ ದಾರಿ: ನಿಮ್ಮವೇ ಅಡ್ಡಿಗಳೇನೆಂದು ಗುರುತಿಸಿ. ಎಷ್ಟೋ ಬಾರಿ ನಾವು ನಮ್ಮದೇ ಅಡ್ಡಿಗಳನ್ನು, ನಮ್ಮದೇ ನೆಗೆಟಿವಿಟಿ ಗಳನ್ನು ಗುರುತಿಸಲು ಸೋತುಬಿಟ್ಟಿರುತ್ತೇವೆ. ನಮ್ಮೊಳಗಿನ ನ್ಯೂನತೆಗಳನ್ನು ನಾವು ಗುರುತಿಸಿಕೊಂಡಾಗ ಉನ್ನತ ವಾದುದನ್ನು ಸಾಧಿಸಲು ಸಾಧ್ಯವಾಗುತ್ತಾ ಹೋಗುತ್ತದೆ. ಕಾಯಿಲೆ ಯಾವುದೆಂದು ಮೊದಲು ನಾವು ಗುರುತಿಸಬೇಕು, ಆಮೇಲೆ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುವುದು ಸುಲಭವಾಗುತ್ತದೆ. ಹಾಗೆ ನಮ್ಮ ಬದುಕಿನಲ್ಲಿ ನಮ್ಮನ್ನು ಮುಂದೆ ಹೋಗಲು ತಡೆಯುತ್ತಿರುವ ಅಡ್ಡಿ ಯಾವುದೆಂದು ಮೊದಲು ನಾವು ಗುರುತಿಸಿಕೊಂಡರೆ, ಮುಂದೆ ಹೋಗುವುದು ಬಹಳ ಸುಲಭವಾಗುತ್ತದೆ.

ನಾಲ್ಕನೆಯ ದಾರಿ: ಬೇರೆಯವರನ್ನು ನಕಲುಮಾಡಲು ಹೋಗಬೇಡಿ. ಎಷ್ಟೋ ಜನ ಯಶಸ್ಸನ್ನು ಪಡೆಯುವ ಹಾದಿಯಲ್ಲಿ ಬೇರೆಯವರನ್ನು ನಕಲು ಮಾಡುವುದಕ್ಕೇ ಪ್ರಾಮುಖ್ಯವನ್ನು ನೀಡುವುದಿದೆ. ನಮ್ಮೊಳಗೂ ಸೃಜನಶೀಲ ಅಂಶಗಳಿರುತ್ತವೆ. ಅವುಗಳಿಗೆ ನಾವು ಕಾವು ಕೊಟ್ಟಾಗ ನಮ್ಮೊಳಗಿನ ಉತ್ತಮವಾದ ಪ್ರತಿಮೆ ಹೊರ ಬರುವುದಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ ಸಹಜ ವಾದ ಅಸಲಿ ನಮ್ಮನ್ನು ನಾವೇ ಪರಿಚಯಿಸಿಕೊಳ್ಳಬೇಕಿದೆ.

ಐದನೆಯ ದಾರಿ: ನಮ್ಮನ್ನು ನಾವು ಮೊದಲು ತಿಳಿದು ಕೊಳ್ಳಲು ಪ್ರಯತ್ನಿಸಬೇಕು. ನಮ್ಮೊಳಗಿನ ಅಪನಂಬಿಕೆ ಗಳನ್ನು ನಾವು ಗೆಲ್ಲಬೇಕು, ನಮ್ಮ ಸಾಮರ್ಥ್ಯಗಳೇನೆಂದು ಗುರುತಿಸಿಕೊಳ್ಳಬೇಕು. ನಮ್ಮ ಆತ್ಮವಿಶ್ವಾಸ ಏಕೆ ಕುಗ್ಗಿದೆ ಎಂಬುದನ್ನು ಕಂಡುಹಿಡಿಯ ಬೇಕು. ನಮ್ಮ ಈ ಎಲ್ಲಾ ಋಣಾತ್ಮಕ ಅಂಶಗಳಿಗೂ ಕಾರಣವೇನು ಎಂಬ ಆತ್ಮಾವಲೋಕನ ಮಾಡಿಕೊಂಡು, ಒಂದೊಂದನ್ನೇ ಹೆಕ್ಕಿ ತೆಗೆಯುತ್ತ ಅವುಗಳಿಗೆ ಉತ್ತರಗಳನ್ನು ಹುಡುಕುತ್ತಾ ಹೋದಂತೆ ನಮ್ಮೊಳಗಿನ ಉತ್ತಮಿಕೆ ಆಚೆ ಬರಲು ಸಾಧ್ಯವಾಗುತ್ತದೆ.

? ಆರನೆಯ ದಾರಿ: ಪ್ರತಿದಿನ ನಿಮಗೆ ನೀವೇ ಸಕಾರಾತ್ಮಕ ಮಾತುಗಳನ್ನು ಹೇಳಿಕೊಳ್ಳಲು ಶುರು ಮಾಡಿ. ‘ಇದು ನನ್ನಿಂದ ಸಾಧ್ಯವಾಗುತ್ತದೆ’ ಈ ಮಾತು ನಿಮ್ಮ ದಿನನಿತ್ಯದ ಮಂತ್ರವಾಗಬೇಕು. ಇದು ನಿಮ್ಮ ದೃಢತೆಯನ್ನು, ಆತ್ಮವಿಶ್ವಾಸವನ್ನು ಹೆಚ್ಚಿಸಿ, ನೀವು ಮಾಡಿ ಮುಗಿಸಬಹುದಾದ ಕೆಲಸವನ್ನು ಸಂಪೂರ್ಣವಾಗಿಸಲು ಖಂಡಿತವಾಗಿಯೂ ಸಹಾಯಮಾಡುವ ಅತ್ಯುತ್ತಮ ವಾದ ಮಂತ್ರವಾಗಿದೆ.

ಏಳನೆಯ ದಾರಿ: ಯಶಸ್ಸಿನ ದಾರಿಯಲ್ಲಿ ನಡೆಯಬೇಕಾದರೆ ಕೆಲವೊಮ್ಮೆ ತಪ್ಪುಗಳಾಗುವುದು ಸಹಜ. ಕೆಲವೊಮ್ಮೆ ದೈಹಿಕ ವಾದ, ಮಾನಸಿಕವಾದ ಬಳಲಿಕೆಗಳು ಸಹಜ. ಆದರೆ ಇವೆಲ್ಲವನ್ನೂ ಸಹಜವೆಂದೇ ಪರಿಗಣಿಸಿ, ಅವುಗಳ ಬಗ್ಗೆ ಯಾವುದೇ ಕೀಳರಿಮೆಗಳನ್ನು ಬೆಳೆಸಿಕೊಳ್ಳದೆ ನಿಮ್ಮನ್ನು ನೀವು ಉತ್ತಮವಾಗಿಸಿಕೊಳ್ಳುತ್ತಾ ಆ ಎಲ್ಲಾಕೀಳರಿಮೆಗಳಿಂದ ಹೊರಬಂದು ನಿಮ್ಮ ಸಾಮರ್ಥ್ಯವನ್ನು ಸಾಣೆ ಹಿಡಿಯಬೇಕು.

ಸಂಕೀರ್ಣತೆಯನ್ನು ಮೀರುವ ಕೊನೆಯ ದಾರಿ: ನಿಮ್ಮ ಬಗ್ಗೆ ನಿಮಗೆ ಅತಿಹೆಚ್ಚಿನ ನಂಬಿಕೆ ಇರಲಿ; ನಿಮ್ಮನ್ನು ನೀವು ನಂಬಿದಷ್ಟು ಈ ಜಗತ್ತಿನಲ್ಲಿ ಇನ್ನಾರೂ ನಂಬಲಾರರು, ಆ ನಂಬಿಕೆ ನಿಮ್ಮದಾಗಲಿ! ಚಿಯರ್ಸ್.