ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಭಾರತದ ಕ್ರೂಸ್ ಪ್ರವಾಸೋದ್ಯಮದಲ್ಲಿ ೨೦೨೩ರ ಜನವರಿ ೧೩ರಂದು ಹೊಸ ಅಧ್ಯಾಯವು ಪ್ರಾರಂಭವಾಯಿತು. ಅಂದು‘ಎಂ.ವಿ. ಗಂಗಾವಿಲಾಸ್ ಕ್ರೂಸ್’ಗೆ ಪ್ರಧಾನಿ ನರೇಂದ್ರ ಮೋದಿಯವರು ಹಸಿರು ನಿಶಾನೆ ತೋರಿದರು. ವಾರಾಣಸಿಯಿಂದ ಹೊರಟು ೨೭ ನದಿಗಳನ್ನು ದಾಟಿ ಬಾಂಗ್ಲಾದೇಶದ
ಮೂಲಕ ಸಾಗಿ ಅಸ್ಸಾಂನ ದಿಬ್ರುಗಢ್ ಎಂಬಲ್ಲಿಗೆ ತಲುಪುವ ಬರೋಬ್ಬರಿ ೩,೨೦೦ ಕಿ.ಮೀ. ಅಂತರದ, ೫೧ ದಿನಗಳ ಅವಧಿಯ ಕ್ರೂಸ್ ಪ್ರವಾಸವಿದು. ಸದರಿ ‘ಗಂಗಾವಿಲಾಸ್’ ಯಾನ ವಿಶ್ವದಲ್ಲೇ ಅತಿ ಉದ್ದದ ಕ್ರೂಸ್ ಪ್ರವಾಸ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂಬುದು ನಿಮ್ಮ ಗಮನಕ್ಕೆ.
ಸಮುದ್ರ ವಿಹಾರನೌಕಾ ಪ್ರವಾಸೋದ್ಯಮವು ಭಾರತದಲ್ಲಿ ನಿಧಾನವಾಗಿಯಾದರೂ ಸ್ಪಷ್ಟವಾಗಿ ಹೆಜ್ಜೆಗುರುತು ಮೂಡಿಸುತ್ತಿದೆ. ಇದು ೨೦೧೪ರ ನಂತರದಲ್ಲಿ ಆಗಿರುವ ಬೆಳವಣಿಗೆ. ಅತ್ಯಂತ ರೋಚಕ ಮತ್ತು ಐಷಾರಾಮಿ ಪ್ರವಾಸದ ಅನಿರ್ವಚನೀಯ ಅನುಭವ ನೀಡುವ ವಿಹಾರನೌಕಾ ಪ್ರವಾಸೋದ್ಯಮಕ್ಕೆ ‘ಕ್ರೂಸ್ ಟೂರಿಸಂ’ ಎನ್ನುತ್ತಾರೆ. ಸಮುದ್ರ, ನದಿ ಗಳನ್ನು ಬಳಸಿಕೊಂಡು ವಿಶಿಷ್ಟ ದೋಣಿ ಅಥವಾ ಹಡಗುಗಳ ಮೂಲಕ ರೂಪಿಸ ಲಾಗುವ ಕ್ರೂಸ್ ಪ್ರವಾಸೋದ್ಯಮ ವಿದೇಶ ಗಳಲ್ಲಿ ಅತಿಹೆಚ್ಚು ಜನಪ್ರಿಯವಾಗಿದ್ದರೂ ಭಾರತದಲ್ಲಿನ್ನೂ ಶೈಶವಾವಸ್ಥೆಯಲ್ಲಿದೆ.
ಆದರೆ ಇದನ್ನು ಅಭಿವೃದ್ಧಿಪಡಿಸಲು ಭಾರತದಲ್ಲಿ ಪ್ರಶಸ್ತ ವಾತಾವರಣವಿದೆ. ಅಂದರೆ, ೧೨ ದೊಡ್ಡ ಬಂದರು, ೨೦೦ ಸಣ್ಣ ಪ್ರಮಾಣದ ಬಂದರು, ೭,೫೦೦ ಕಿ.ಮೀ.ಗೂ ಹೆಚ್ಚಿನ ಕರಾವಳಿ ಪ್ರದೇಶ, ೨೦,೦೦೦ ಕಿ.ಮೀ. ನಷ್ಟಿರುವ ಸಂಚಾರಯೋಗ್ಯವಾದ ೧೧೦ ಜಲಮಾರ್ಗ ಹಾಗೂ ೪೦೦ ನದಿಗಳನ್ನು ಸಂಪರ್ಕಿಸುವ ಜಲಮಾರ್ಗ- ಈ ಸೌಲಭ್ಯಗಳು ಪ್ರಕೃತಿದತ್ತವಾಗಿ ನಮಗೆ ಸಿಕ್ಕಿವೆ. ಇಷ್ಟೇ ಅಲ್ಲದೆ, ೧,೩೦೦ ದ್ವೀಪಗಳು ಕರಾವಳಿಯನ್ನು ಹೊಂದಿಕೊಂಡು ಅಥವಾ ರಾಷ್ಟ್ರೀಯ ಜಲಮಾರ್ಗದ ದಂಡೆಯಲ್ಲಿವೆ. ವಿಶ್ವದ ೮೦೦ ಬಿಲಿಯನ್ ಡಾಲರ್ ಮೌಲ್ಯದ ಕ್ರೂಸ್ ಮಾರುಕಟ್ಟೆಯಲ್ಲಿ ಭಾರತದ ಪಾಲಿರುವುದು ಕೇವಲ ಶೇ.೧ರಷ್ಟು. ಪ್ರಾಕೃತಿಕವಾಗಿ ಪ್ರಶಸ್ತವಾಗಿರುವ ಪರಿಸರವನ್ನು, ಸೂಕ್ತ ಯೋಜನೆ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಕ್ರೂಸ್ ಪ್ರವಾಸೋದ್ಯಮಕ್ಕೆ ಬಳಸಿಕೊಂಡರೆ, ದೇಶದ ಆರ್ಥಿಕತೆಯ ಬೆಳವಣಿಗೆಗೆ ಅದು ಪೂರಕವಾಗುವುದರ ಜತೆಗೆ ವಿಪುಲ ಉದ್ಯೋಗ ಸೃಷ್ಟಿಗೆ ಕಾರಣವಾಗುವುದು.
ಸಮುದ್ರದ ಕ್ರೂಸ್ ಪ್ರವಾಸದ ಯಶಸ್ಸಿಗೆ ಸುಸಜ್ಜಿತ ಟರ್ಮಿನಲ್ ಅಗತ್ಯ ಹಾಗೂ ಬಂದರುಗಳಲ್ಲಿ ಆದ್ಯತೆಯ ಮೇಲೆ ಕ್ರೂಸ್ ಹಡಗುಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಬೇಕು. ವಿದೇಶಿ ಪ್ರವಾಸಿಗರಿಗೆ ಇ-ವೀಸಾ ಸೌಲಭ್ಯ ನೀಡಬೇಕು. ಈಗಾಗಲೇ ಮುಂಬಯಿ, ಕೊಚಿನ್, ಗೋವಾ, ಚೆನ್ನೈ ಮತ್ತು ಮಂಗಳೂರು ಬಂದರುಗಳಲ್ಲಿ ಇ-ವೀಸಾ ಸೌಲಭ್ಯ ಕಲ್ಪಿಸಲಾಗಿದ್ದು, ಶೀಘ್ರದಲ್ಲಿಯೇ ವಿಶಾಖಪಟ್ಟಣ, ಪೋರ್‌ಬಂದರ್ ಹಾಗೂ ಪೋರ್ಟ್‌ಬ್ಲೇರ್‌ಗೂ ಈ
ಸೌಲಭ್ಯವನ್ನು ವಿಸ್ತರಿಸಲಾಗುವುದು.
ಕ್ರೂಸ್ ಪ್ರವಾಸೋದ್ಯಮದ ಕಾಯಕಲ್ಪಕ್ಕೆ ಮೋದಿ ಸರಕಾರ ಅನೇಕ ಮೂಲಭೂತ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಚೆನ್ನೈ ಬಂದರಿನಲ್ಲಿ ೨,೮೮೦ ಚದರ ಮೀಟರ್ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಿರುವ ಕ್ರೂಸ್ ಟರ್ಮಿನಲ್‌ಗೆ ೩,೦೦೦ ಪ್ರಯಾಣಿಕರನ್ನು ಮತ್ತು ಮುಂಬೈನ ಬಲ್ಲಾರ್ಡ್ ಪಿಯರ್ ನಲ್ಲಿರುವ ಟರ್ಮಿನಲ್‌ಗೆ ವಾರ್ಷಿಕವಾಗಿ ೭ ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವಿದೆ. ಮರ್ಮ ಗೋವಾ, ಕೊಚಿನ್, ನವಮಂಗಳೂರು ಮತ್ತು ವಿಶಾಖ ಪಟ್ಟಣದಲ್ಲಿ ಟರ್ಮಿನಲ್ ನಿರ್ಮಾಣಕಾರ್ಯ ಪ್ರಗತಿಯಲ್ಲಿದ್ದು ೨೦೨೪ರಲ್ಲಿ ಇವು ಕಾರ್ಯಾರಂಭ ಮಾಡಲಿವೆ.
ವಾರಾಣಸಿಯಲ್ಲೂ ಟರ್ಮಿನಲ್ ನಿರ್ಮಾಣಕ್ಕೆ ಸರಕಾರ ಅನುಮೋದಿಸಿದೆ. ಭಾರತದಲ್ಲಿ ಕ್ರೂಸ್ ಹಡಗುಗಳ ಸಂಚಾರ ಸಂಖ್ಯೆಯು ೨೦೧೫-೧೬ರಲ್ಲಿ ೧೨೮ರಷ್ಟು ಇದ್ದುದು ೨೦೧೯-೨೦ರಲ್ಲಿ ೪೫೧ಕ್ಕೆ ಏರಿಕೆಯಾಗಿದ್ದರೆ, ಈ ವರ್ಷಗಳಲ್ಲಿ ಪ್ರವಾಸಿಗರ ದಟ್ಟಣೆಯು ಅನುಕ್ರಮವಾಗಿ ೧.೨೬ ಲಕ್ಷದಿಂದ ೪.೬೮ ಲಕ್ಷಕ್ಕೆ ಏರಿದೆ. ಕ್ರೂಸ್ ಹಡಗುಗಳ ಸಂಖ್ಯೆಯು ೨೦೨೩ರಲ್ಲಿ ೨೦೮ರಷ್ಟಿದ್ದು, ಇದು ೨೦೩೦ರಲ್ಲಿ ೫೦೦ಕ್ಕೆ ಮತ್ತು ೨೦೪೭ರ ವೇಳೆಗೆ ೧,೧೦೦ಕ್ಕೆ ಹೆಚ್ಚಾಗು ತ್ತದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಕ್ರೂಸ್ ಸೇವೆಗಳನ್ನು ಬಳಸುವ ಪ್ರಯಾಣಿಕರ ಸಂಖ್ಯೆಯೂ ಹಾಲಿ ೪ ಲಕ್ಷದಿಂದ ೨೦೩೦ರ ವೇಳೆಗೆ ೧೦ ಲಕ್ಷ ಮುಟ್ಟುವ ನಿರೀಕ್ಷೆಯಿದೆ.
ಕ್ರೂಸ್ ಪ್ರವಾಸೋದ್ಯಮದ ಬೆಳವಣಿಗೆಗೆ ಮತ್ತು ಅಗತ್ಯವಿರುವ ಉತ್ತೇಜನದ ಸಲುವಾಗಿ ೨೦೨೩ರಲ್ಲಿ ರಾಷ್ಟ್ರೀಯ ಕರಡು ನೀತಿಯನ್ನು ರೂಪಿಸ ಲಾಗಿದ್ದು ಇದರಲ್ಲಿ ಈ ವಲಯದ ಮುನ್ನೋಟವನ್ನು ಸವಿಸ್ತಾರವಾಗಿ ದಾಖಲಿಸಲಾಗಿದೆ ಹಾಗೂ ಅತಿಹೆಚ್ಚು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಕೇಂದ್ರವಾಗಿ ಕೇರಳವನ್ನು ಗುರುತಿಸಲಾಗಿದೆ. ಆದಾಯ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಗುರಿಯೊಂದಿಗೆ ವ್ಯಾಪಕ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ.
ಕ್ರೂಸ್ ಪ್ರವಾಸೋದ್ಯಮ ಕೇವಲ ದೇಶೀಯವಾಗಿ ಕೈ ಗೊಳ್ಳುವ ಪ್ರಕಲ್ಪವಲ್ಲ; ವಿಶ್ವದ ನೂರಾರು ಕ್ರೂಸ್ ಹಡಗುಗಳು ಭಾರತದ ಕಡಲ ತೀರಕ್ಕೆ ಬಂದಿಳಿಯುವಂತೆ ಮಾಡುವುದು ಬಹುಮುಖ್ಯ. ಇದಕ್ಕಾಗಿ ಭಾರತ ಸರಕಾರ ಹಲವಾರು ಉತ್ತೇಜಕ ನೀತಿಗಳನ್ನು ಅಳವಡಿಸಿಕೊಂಡಿದ್ದು, ತನ್ಮೂಲಕ
ಹೆಚ್ಚೆಚ್ಚು ಕ್ರೂಸ್‌ಗಳು ಭಾರತಕ್ಕೆ ಬರುವಂತಾಗಲು ಪ್ರೋತ್ಸಾಹ ದೊರೆಯುತ್ತಿದೆ. ವಿದೇಶಿ ಪ್ರವಾಸಿಗರ ಆಗಮನವಾದಾಗ ದೇಶೀಯ ಆರ್ಥಿಕತೆಯ ಮೇಲೆ ಲಾಭದಾಯಕ ಪರಿಣಾಮ ವಾಗುತ್ತದೆ. ಕೋವಿಡ್ ಸಂಕಷ್ಟಕ್ಕೆ ಮುನ್ನ ಭಾರತಕ್ಕೆ ೧೧ ಲಕ್ಷ ವಿದೇಶಿ ಕ್ರೂಸ್ ಪ್ರವಾಸಿಗರು ಭೇಟಿಯಿತ್ತಿದ್ದರು. ಕ್ರೂಸ್
ಪ್ರವಾಸೋದ್ಯಮಕ್ಕೆ ವಿದೇಶಿ ವಿನಿಮಯ ಗಳಿಕೆಯ ಸಾಮರ್ಥ್ಯವಿರುವುದರಿಂದ ಇದಕ್ಕೆ ಮತ್ತಷ್ಟು ಶಕ್ತಿ ತುಂಬುವ ಪೂರಕ ನೀತಿಯನ್ನು ಸರಕಾರ ರೂಪಿಸಿದೆ.
೨೦೨೩ರಲ್ಲಿ ವಿಶ್ವಾದ್ಯಂತ ೫೪ ಕಂಪನಿಗಳ ೫೨೪ ಕ್ರೂಸ್ ಹಡಗುಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರವಾಸೋದ್ಯಮದ ಪ್ರಮುಖ ಭಾಗವಾಗಿ ಕ್ರೂಸಿಂಗ್ ಮಾರ್ಪಟ್ಟಿದೆ. ವಿಶ್ವದ ಅತಿದೊಡ್ಡ ಕ್ರೂಸ್ ಲೈನರ್‌ಗಳಲ್ಲಿ ನೂರಕ್ಕೂ ಹೆಚ್ಚು ಹಡಗು ಹೊಂದಿರುವ ‘ಕಾರ್ನಿವಲ್’, ೪೦ ಹಡಗುಗಳನ್ನು ಹೊಂದಿರುವ ‘ರಾಯಲ್ ಕೆರಿಬಿಯನ್’ ಮತ್ತು ೩೦ ಹಡಗುಗಳ ಸಾಮರ್ಥ್ಯವಿರುವ ‘ನಾರ್ವೇಜಿಯನ್’ ಸಂಸ್ಥೆಗಳು ಸೇರಿವೆ. ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತ ಸರಕಾರವು ಕೈಗೊಂಡಿರುವ ಉಪಕ್ರಮಗಳಲ್ಲಿ, ಮೂಲ ಸೌಕರ್ಯದ ಉನ್ನತೀಕರಣ, ಬಂದರು ಶುಲ್ಕಗಳ ತರ್ಕಬದ್ಧ ಗೊಳಿಸುವಿಕೆ, ಹಡಗುಗಳಿಗೆ ಆದ್ಯತೆಯ ಬರ್ತಿಂಗ್ ನೀಡುವಿಕೆ, ಇ-ವೀಸಾ ಸೌಲಭ್ಯ ಒದಗಿಸುವಿಕೆ, ಕ್ರೂಸ್‌ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕೌಶಲಾಭಿವೃದ್ಧಿ ಯೋಜನೆ
ಯಡಿ ವಿಶೇಷ ತರಬೇತಿ ನೀಡುವಿಕೆ ಸೇರಿವೆ. ಕರ್ನಾಟಕದಲ್ಲಿ ನವಮಂಗಳೂರು ಬಂದರು ಕ್ರೂಸ್ ಪ್ರವಾಸದ ಪ್ರಮುಖ ತಾಣವಾಗಿದ್ದು, ವಾರ್ಷಿಕವಾಗಿ ಹತ್ತಾರು ವಿದೇಶಿ ಕ್ರೂಸ್‌ಗಳು ಇಲ್ಲಿಗೆ ಬಂದಿಳಿಯುತ್ತವೆ.
ಮಂಗಳೂರು, ಉಡುಪಿ, ಕಾರವಾರ ಮತ್ತು ಗೋಕರ್ಣ ಸ್ಥಳಗಳು ದೇಶೀಯ ಕ್ರೂಸ್ ಪ್ರವಾಸಕ್ಕೆ ಪ್ರಶಸ್ತವಾಗಿದ್ದು ಇವುಗಳ ಅಭಿವೃದ್ಧಿಯ ಹೊಣೆ ರಾಜ್ಯ ಸರಕಾರದ್ದಾಗಿದೆ. ಕ್ರೂಸ್ ಪ್ರವಾಸಿಗರನ್ನು ಸೆಳೆಯಲು ಸುವ್ಯವಸ್ಥಿತ ಮೂಲಸೌಕರ್ಯವನ್ನು ಕಲ್ಪಿಸಬೇಕು. ವಿಷಯಾಧಾರಿತ ಪ್ರವಾಸಗಳ ಯೋಜನೆ ಯನ್ನು ಮತ್ತು ಕ್ರೂಸ್ ಉದ್ದೇಶಿತ ಬಂದರು ತಲುಪಿದ ತರುವಾಯ ಒಳ ನಾಡಿನ ಪ್ರವಾಸದಲ್ಲಿ ಆಕರ್ಷಣೀಯ ಸ್ಥಳಗಳ ಆಯ್ಕೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ನಮ್ಮ ಸಂಸ್ಕೃತಿ ಹಾಗೂ ಐತಿಹಾಸಿಕ ಪ್ರದೇಶಗಳ ಪರಿಚಯವು ಕ್ರೂಸ್ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಬೇಕು.
ಪಂಚತಾರಾ ಸೌಲಭ್ಯ ನೀಡುವ ಐಷಾರಾಮಿ ಹಡಗಿನಲ್ಲಿ ಸಂಚರಿಸುವುದು, ಅದರೊಳಗಿನ ಅದ್ದೂರಿತನ ಕ್ರೂಸ್ ಪ್ರವಾಸದ ಪ್ರಮುಖ ಆಕರ್ಷಣೆ. ಜತೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿರುತ್ತಾರೆ. ವೈವಿಧ್ಯಮಯ ರುಚಿಗಳ ಗುಣಮಟ್ಟದ ಆಹಾರ ಇಲ್ಲಿನ ಮತ್ತೊಂದು ವಿಶೇಷ. ಪ್ರವಾಸವು ಅರೆಕ್ಷಣವೂ ನೀರಸವಾಗದಂತೆ ಕಾರ್ಯಕ್ರಮ ರೂಪಿಸುವುದು ಕ್ರೂಸ್ ಪ್ರವಾಸದ ಯಶಸ್ಸಿನ ಜೀವಾಳ. ಬದಲಾದ ಭಾರತದ ಯಶೋಗಾಥೆಯಲ್ಲಿ ಕ್ರೂಸ್ ಪ್ರವಾಸೋದ್ಯಮದ ಕೊಡುಗೆಯೂ ಸೇರಿದೆ.
ಈ ಮೊದಲು ಭಾರತೀಯರು ಹೊರದೇಶದಲ್ಲಷ್ಟೇ ಕ್ರೂಸ್ ನಲ್ಲಿ ವಿಹರಿಸಬೇಕಿತ್ತು. ಆದರೀಗ ನಮ್ಮಲ್ಲೂ ಇಂಥ ಅನುಭವ ದೊರೆಯುವಂಥ ಅವಕಾಶ ವನ್ನು ಸೃಷ್ಟಿಸುವ ಮೂಲಕ ಮೋದಿ ಸರಕಾರ ತನ್ನ ಸಾಧನೆಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದೆ.
(ಲೇಖಕರು ಬಿಜೆಪಿಯ ಮಾಜಿ ಮಾಧ್ಯಮ ಸಂಚಾಲಕರು)