Thursday, 7th December 2023

ಬೇಕಿರುವುದು ಸುರಂಗ ರಸ್ತೆಯೋ, ಸೈಕಲ್ ಪಥವೋ ?

ಅಭಿಮತ

ಡಾ.ದಯಾನಂದ ಲಿಂಗೇಗೌಡ

ಡೆನ್ಮಾರ್ಕ್ ದೇಶದ ನಗರಗಳು ಸೈಕಲ್ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವುದರಿಂದ ಹಲವಾರು ಮಹತ್ವದ ಗುರಿಗಳನ್ನು ಸಾಧಿಸಿ ದ್ದಾರೆ. ಸೈಕಲ್‌ ಗಳನ್ನು ಉಪಯೋಗಿಸುವುದರಿಂದ ಅಲ್ಲಿನ ನಗರಗಳ ವಾಯುಮಾಲಿನ್ಯ ಕಡಿಮೆಯಾಗಿದೆ. ಅದು ಅಲ್ಲದೆ ಅಲ್ಲಿ ಟ್ರಾಫಿಕ್ ಸಮಸ್ಯೆ ಬಹುತೇಕ ಇಲ್ಲವೇ ಇಲ್ಲ ಎಂದು ಹೇಳಬಹುದು.

ಪ್ರವಾಸ ಕಥನಗಳ ಮೂಲಕ ಯೂಟ್ಯೂಬ್ ನಲ್ಲಿ ಪ್ರಸಿದ್ಧಿ ಪಡೆದಿರುವ ಕನ್ನಡದ ಯೂಟ್ಯೂಬ್ ತಾರೆ ‘ಡಾ.ಬ್ರೋ’ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ‘ಡಾ. ಬ್ರೋ’ ಅವರು ಚೀನಾದಲ್ಲಿ ಪ್ರವಾಸ ಮಾಡುತ್ತಾ ‘ಚೀನಾ ಎಷ್ಟು ಅಭಿವೃದ್ಧಿ ಹೊಂದಿದೆ ಎಂದರೆ ಮುಂದಿನ ೭೦ ವರ್ಷಗಳ ನಂತರವೂ ಈ ಮಟ್ಟಕ್ಕೆ ಭಾರತ ಅಭಿವೃದ್ಧಿ ಹೊಂದುವುದು ಸಾಧ್ಯವಿಲ್ಲ’ ಎಂಬ ಮಾತುಗಳನ್ನು ಆಡಿದ್ದರು. ಈ ಮಾತುಗಳು ಜಾಲತಾಣದಲ್ಲಿ ದೊಡ್ಡ ವಿವಾದವನ್ನೇ ಹುಟ್ಟು ಹಾಕಿತ್ತು.

ಒಂದು ಗುಂಪು ‘ಚೀನಾದಂತಹ ಶತ್ರು ರಾಷ್ಟ್ರವನ್ನು ‘ಡಾ. ಬ್ರೋ’ ಹೊಗಳಿದ್ದು ಸರಿಯಲ್ಲ ‘ಎಂದು ವಾದಮಾಡಿದರೆ, ಮತ್ತೊಂದು ಗುಂಪು ‘ಡಾ.ಬ್ರೋ’ ‘ತನ್ನ ಅನಿಸಿಕೆಗಳನ್ನು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇವರ ವಾದ ವಿವಾದಗಳನ್ನು ನೋಡಿದಾಗ,
ಯಾರು ಚೀನಾವನ್ನು ಹೊಗಳುವುದನ್ನು ವಿರೋಧಿಸುತ್ತಿದ್ದಾರೆಯೋ ಅವರು ಇದುವರೆಗೂ ಚೀನಾ ದೇಶದ ದಿನ ದೇಶಕ್ಕೆ ಪ್ರವಾಸ ಮಾಡಿಲ್ಲ ಎಂಬುದು
ಸ್ಪಷ್ಟವಾಗಿತ್ತು. ಚೀನಾ ದೇಶಕ್ಕೆ ಪ್ರವಾಸ ಮಾಡಿದ ಎಲ್ಲರಿಗೂ ‘ಬ್ರೋ’ ಮಾತುಗಳಲ್ಲಿ ಯಾವುದೇ ಅತಿಶಯೋಕ್ತಿ ಏನು ಇಲ್ಲ ಎಂಬುದನ್ನು ಒಪ್ಪುವುದರಲ್ಲಿ ಸಂಶಯವಿಲ್ಲ.

ಚೀನಾದ ನಗರಗಳು ಮೂಲ ಸೌಕರ್ಯ ವ್ಯವಸ್ಥೆಗಳಾಗಲಿ ರಸ್ತೆ ಗುಣಮಟ್ಟದಗಲಿ ಯಾವುದೇ ಪಾಶ್ಚಿಮಾತ್ಯ ದೇಶಗಳ ಗುಣಮಟ್ಟಕ್ಕೆ ಕಡಿಮೆ ಏನಿಲ್ಲ ಎಂಬುದು ಸತ್ಯ. ಚೀನಾದ ಅಭಿವೃದ್ಧಿ ಕೇವಲ ಕೆಲವು ನಗರಗಳ ಕೇಂದ್ರೀಕೃತ ವಾಗಿರದೆ, ತಕ್ಕಮಟ್ಟಿಗೆ ದೇಶದ ಉದ್ದಗಲಕ್ಕೂ ಕಾಪಾಡಿಕೊಂಡಿರುವುದು ಸುಳ್ಳೇನಲ್ಲ. ಹಾಗೆಂದು ಚೀನಾದ ಅಭಿವೃದ್ಧಿ ನಮಗೆ ಮಾದರಿಯೇ? ಚೀನಾವು ಎಷ್ಟೇ ಅತ್ಯುತ್ತಮವಾದ ರಸ್ತೆಗಳನ್ನು ನಿರ್ಮಿಸಿದರೂ ಸಂಚಾರದಟ್ಟಣೆ
ಸಮಸ್ಯೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಚೀನಾದಲ್ಲಿ ಸಂಚಾರದಟ್ಟಣೆಯ ತೊಂದರೆ ಎಷ್ಟು ಗಂಭೀರವಾಗಿದೆ ಎಂದರೆ, ಬೀಚಿಂಗ್ ನಗರಗಳಲ್ಲಿ
ಸಂಚಾರ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡ ಕಾರು ಗಳಿಂದ ಜನರನ್ನು ರಕ್ಷಿಸಲು ಕೆಲವೊಂದು ಆಪ್ ಗಳು ಇವೆ.

ಆ ಆಪ್‌ನ ಸಹಾಯದಿಂದ ಕಾರಿನಲ್ಲಿರುವವರು ಕರೆ ಮಾಡಿದಾಗ ಅಲ್ಲಿಗೆ ಬೈಕಿನಲ್ಲಿ ಕಂಪನಿಯವರು ಬರುತ್ತಾರೆ ಮತ್ತು ಅವರನ್ನು ತಲುಪಿಸಬೇಕಾದ ಜಾಗಕ್ಕೆ ಕರೆದೊಯ್ಯುತ್ತಾರೆ. ಅದು ಅಲ್ಲದೆ ಅವರ ಕಾರುಗಳನ್ನು ಅವರ ಮನೆಗಳಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗುತ್ತದೆ!

ಯಾವ ದೇಶಗಳಲ್ಲಿ ಸಂಚಾರಕ್ಕೆ ಜನರು ಹೆಚ್ಚು ಹೆಚ್ಚು ಖಾಸಗಿ ವಾಹನಗಳನ್ನು ಉಪಯೋಗಿಸುತ್ತಾರೋ, ಅಲ್ಲ ಎರಡು ಸಾಮಾನ್ಯ ಸಂಗತಿ
ಗಮನಿಸಬಹುದು. ಒಂದು ಅತಿಯಾದ ರಸ್ತೆಯ ಸಂಚಾರ ದಟ್ಟನೆ ಮತ್ತು ವಾಯುಮಾಲಿನ್ಯ. ಅದು ಚೀನಾ ನಗರಗಳು ಇರಬಹುದು ಅಥವಾ ಭಾರತದ
ನಗರ ಗಳಿರಬಹುದು. ಹೆಚ್ಚು ಜನರು ಸಂಚಾರ ಮಾಡಲು ಖಾಸಗಿ ವಾಹನಗಳನ್ನು ಉಪಯೋಗಿಸಿದಷ್ಟು, ಯಾವ ಅಭಿವೃದ್ಧಿಗಳು ಕೂಡ ನಿರೀಕ್ಷಿತ
ಮಟ್ಟದಲ್ಲಿ ಸಂಚಾರ ದಟ್ಟಣೆ ನೀಗಿಸಲು ಆಗುವುದಿಲ್ಲ. ಅದೇ, ಸಂಚಾರಕ್ಕೆ ಅತ್ಯುತ್ತಮ ಸಾರ್ವಜನಿಕ ಸಂಚಾರ ವ್ಯವಸ್ಥೆ (ಮೆಟ್ರೋ, ಟ್ರಾಮ, ಬಸ್ಸು)
ಇರುವ ನಗರಗಳಲ್ಲಿ, ಜನರು ತಮ್ಮ ಸ್ವಂತ ಕಾರು ವಾಹನಗಳಿದ್ದರೂ, ಕಡಿಮೆ ಸಮಯದಲ್ಲಿ ಪ್ರಯಾಣ ಮಾಡಲು ಸಾರ್ವಜನಿಕ ಸಂಚಾರ ಮಾರ್ಗ ಗಳನ್ನು ಉಪಯೋಗಿಸುವುದು ಕಂಡು ಬರುತ್ತದೆ. ಉದಾಹಣೆಗೆ ಸಿಂಗಾಪುರ, ನ್ಯೂಯಾರ್ಕ್ ವಾಯುಮಾಲಿನ್ಯ ಕಡಿಮೆ ಯಾದರೂ ಸಂಚಾರ ದಟ್ಟಣೆ ಹಾಗೇ ಉಳಿದು ಕೊಂಡಿದೆ.

ಹಾಗಾದರೆ ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯಕ್ಕೆ ಎಂಬ ಎರಡು ಸಮಸ್ಯೆಗಳನ್ನು ಬಗೆಹರಿಸುವ ಅಭಿವೃದ್ಧಿ ಯಾವುದು ಎಂಬ ಪ್ರಶ್ನೆಯನ್ನು
ಮಾಡಿಕೊಂಡಾಗ ನಮಗೆ ಕೆಲವೊಂದು ಯೂರೋಪಿಯನ್ ದೇಶಗಳ ಮಾದರಿ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಡೆನ್ಮಾರ್ಕ್ ದೇಶ ಸೈಕಲ್‌ಗಳ ನಗರ
ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಸೈಕಲ್ ಇಲ್ಲದ ಮನೆಗಳಿಲ್ಲ. ಸೈಕಲ್‌ಗಳಲ್ಲೂ ಹಲವಾರು ಮಾದರಿಯ ಸೈಕಲ್‌ಗಳನ್ನು ನೋಡಬಹುದು. ತ್ರಿಚಕ್ರ ಸೈಕಲ್‌ಗಳಲ್ಲಿ ಗಂಡ ಹೆಂಡತಿ ಮಕ್ಕಳು ಪ್ರಯಾಣಿಸುವ ದೃಶ್ಯ ಸಾಮಾನ್ಯ. ತಾಯಂದಿರು ತಮ್ಮ ಮಕ್ಕಳನ್ನು ಶಾಲೆಯಿಂದ ಕರೆತರುವುದು,  ಶಾಲೆಗೆ ಬಿಡುವುದು ಮತ್ತು ಇತರ ಚಟುವಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವುದಕ್ಕೂ ಇಲ್ಲಿ ತ್ರಿಚಕ್ರ ಸೈಕಲ್‌ಗಳಲ್ಲಿ ಉಪಯೋಗಿಸುತ್ತಾರೆ.

ಡೆನ್ಮಾರ್ಕ್‌ನಲ್ಲಿ ಸೈಕಲ್ ಸಂಸ್ಕೃತಿ ಪ್ರೋತ್ಸಾಹಿಸುವುದಕ್ಕೆ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಸೈಕಲ್ ನಡೆಸುವುದಕ್ಕೆ ನಗರಗಳ
ಉದ್ದಗಲಕ್ಕೂ, ನಗರಗಳ ಮೂಲೆ ಮೂಲೆಯಲ್ಲೂ ಪ್ರತ್ಯೇಕವಾದ ಸೈಕಲ್ ಪಥಗಳು ಇವೆ. ಈ ಪಥ ಗಳಲ್ಲಿ ಮೋಟಾರು ವಾಹನಗಳು ಅಥವಾ ನಡೆದಾ
ಡುವುದು ನಿಷಿದ್ಧ. ಇದರಿಂದ ಯಾವುದೇ ಅಡೆತಡೆ ಇಲ್ಲದೆ ಸೈಕಲ್‌ಗಳಲ್ಲಿ ನಗರದ ಯಾವುದೇ ಭಾಗಕ್ಕೂ ಸುರಕ್ಷಿತವಾಗಿ ತಲುಪಬಹುದು. ಎಲ್ಲ ನಿಲ್ದಾಣ
ಗಳಲ್ಲೂ ಸೈಕಲ್‌ಗಳನ್ನು ನಿಲ್ಲಿಸಲು ಬಹು ಮಹಡಿ ಸೈಕಲ್ ನಿಲ್ದಾಣಗಳನ್ನು ಕಾಣಬಹುದು.

ದೂರದ ಪ್ರಯಾಣಕ್ಕೆ ಅನುಕೂಲವಾಗಲಿ ಎಂದು ಸೈಕಲ್ ಗಳನ್ನು ಮೆಟ್ರೋ ಬಸ್ಸುಗಳಲ್ಲಿ ಕೊಂಡೊಯ್ಯುವ ವ್ಯವಸ್ಥೆ ಇದೆ. ಡೆನ್ಮಾರ್ಕ್ ದೇಶದ ನಗರಗಳು ಸೈಕಲ್ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವುದರಿಂದ ಹಲವಾರು ಮಹತ್ವದ ಗುರಿಗಳನ್ನು ಸಾಧಿಸಿದ್ದಾರೆ. ಸೈಕಲ್‌ಗಳನ್ನು ಉಪಯೋಗಿಸುವುದರಿಂದ ಅಲ್ಲಿನ ನಗರಗಳ ವಾಯುಮಾಲಿನ್ಯ ಕಡಿಮೆಯಾಗಿದೆ. ಅದು ಅಲ್ಲದೆ ಅಲ್ಲಿ ಟ್ರಾಫಿಕ್ ಸಮಸ್ಯೆ ಬಹುತೇಕ ಇಲ್ಲವೇ ಇಲ್ಲ ಎಂದು ಹೇಳಬಹುದು. ಪ್ರತಿಯೊಬ್ಬರು ಸೈಕಲ್‌ಗಳನ್ನು ಉಪಯೋಗಿಸುವುದರಿಂದ ಅಲ್ಲಿನ ಜನರ ಆರೋಗ್ಯ ಗುಣಮಟ್ಟ ತಂತಾನಾಗಿ ಹೆಚ್ಚಿದೆ. ಆರೋಗ್ಯ ಗುಣಮಟ್ಟ ಹೆಚ್ಚಿರುವುದರಿಂದ ಮತ್ತು ವಾಯು ಮಾಲಿನ್ಯ ಕಡಿಮೆಯಾಗುವುದರಿಂದ ಇಲ್ಲಿನ ಆರೋಗ್ಯ ವ್ಯವಸ್ಥೆಯ ಮೇಲೆ ಬಹಳಷ್ಟು ಒತ್ತಡ ಕಡಿಮೆಯಾಗಿದೆ.

ಜನರಿಗೆ ಪ್ರತ್ಯೇಕವಾದ ವ್ಯಾಯಾಮ ಸಮಯ ಇಲ್ಲದೆ ಇದ್ದವರೂ, ಪ್ರತಿನಿತ್ಯ ಸೈಕಲ್‌ಗಳನ್ನು ಉಪಯೋಗಿಸುವುದರಿಂದ ತಂತಾನೆ ದೈಹಿಕ ವ್ಯಾಯಾಮದ ನಡೆದುಕೊಂಡು ಹೋಗುತ್ತಿದೆ. ಇಡೀ ಪ್ರಪಂಚದಲ್ಲಿ ಅತಿ ಕಡಿಮೆ ಬೊಜ್ಜು ಇರುವಂತಹ ದೇಶ ಡೆನ್ಮಾರ್ಕ್ ಎಂಬ ಹೆಗ್ಗಳಿಕೆಯು ಕೂಡ ಇದು ಕಾರಣವಾಗಿದೆ. ಇದಕ್ಕೆ ಸೈಕಲ್ಸ ಸಂಸ್ಕೃತಿಯ ಕೊಡುಗೆ ಬಹು ದೊಡ್ಡದು.

ಎಲ್ಲ ವಿಷಯಗಳು ಇಲ್ಲಿ ಪ್ರಸ್ತಾಪವಾಗುವುದಕ್ಕೆ ಕಾರಣ ಕರ್ನಾಟಕ ಸರಕಾರ ನಿರ್ಮಿಸಲು ಹೊರಟಿರುವ ಸುರಂಗ ಮಾರ್ಗ ಯೋಜನೆ. ಎಲ್ಲಿಯವರೆಗೆ
ಸಾರ್ವಜನಿಕರು ತಮ್ಮ ದೈನಂದಿನ ಕಾರ್ಯಕ್ರಮ ಗಳಿಗೆ ಖಾಸಗಿ ವಾಹನಗಳನ್ನು ಉಪಯೋಗಿಸುತ್ತಾರೋ, ಅಲ್ಲಿಯವರೆಗೆ ಇಡೀ ಬೆಂಗಳೂರಿನ
ತುಂಬಾ ಸಾವಿರ ಸುರಂಗ ರಸ್ತೆ ಮಾಡಿದರೂ ಪ್ರಯೋಜನವಿಲ್ಲ.

ಬೆಂಗಳೂರಿನ ಜನ ಸ್ವಯಂ ಪ್ರೇರಿತವಾಗಿ ಸೈಕಲ್ ನಲ್ಲಿ ಸಂಚರಿಸುತ್ತೇವೆ ಎಂದು ಅಂದುಕೊಂಡರೆ ಪ್ರಥಮವಾಗಿ ಅವರಿಗೆ ಮನೆಯವರೇ ಅಡ್ಡಿಪಡಿ
ಸುತ್ತಾರೆ. ನಮ್ಮ ನಗರದಲ್ಲಿ ಪ್ರತ್ಯೇಕ ಸೈಕಲ್ ಪಥ ಗಳು ಇಲ್ಲದಿರುವುದರಿಂದ , ಸೈಕಲ್‌ನಲ್ಲಿ ಹೋಗುವಾಗ ಯಾವುದಾದರೂ ಬಸ್ಸೋ ಲಾರಿಯೋ
ಬಂದು ಗುದ್ದಿದರೆ ಏನು ಮಾಡುವುದು ಎಂಬ ಆತಂಕ ಸಹಜವಾದದ್ದು. ಸೈಕಲ್ ಪಥ ಬಿಡಿ. ಬೆಂಗಳೂರಿನ ಪಾದಚಾರಿ ಮಾರ್ಗಗಳನ್ನೇ ಗಮನಿಸಿ.
ಎಗ್ಗು ತಗ್ಗುಗಳಿಲ್ಲದ, ರಸ್ತೆ ಬದಿ ವ್ಯಾಪಾರಿಗಳಿಂದ ವ್ಯಾಪಿಸಿಕೊಳ್ಳದ, ತೆರೆದ ಚರಂಡಿಗಳಿಂದ ಕೂಡಿರದ, ಕಸವಿರದ, ಮೂತ್ರ ಮಾಡಿರದ ಒಂದಾದರು
ಉದ್ದವಾದ ಪಾದಚಾರಿ ಮಾರ್ಗಗಳಿಯೇ? ಇನ್ನು ಜನರು ಸಮೀಪದ ಸ್ಥಳಗಳಿಗೂ ವಾಹನವನ್ನು ಅವಲಂಬಿಸದೆ ಏನು ಮಾಡಿಯಾರು? ನಮ್ಮ ರಾಜಕಾರಣಿಗಳು ಬಹಳಷ್ಟು ಜನ ವಿದೇಶ ವನ್ನು ಸುತ್ತಿಬರುತ್ತಾರೆ.

ಅವರೆಲ್ಲ ಅಲ್ಲಿ ಏನು ನೋಡಿ ಬರುತ್ತಾರೆಯೋ ಗೊತ್ತಿಲ್ಲ. ಬಹುಶಃ ಅವರು ವಿದೇಶಕ್ಕೆ ಹೋದಾಗ, ಅಭ್ಯಾಸದಂತೆ ಸುತ್ತಾಟಕ್ಕೆ ಖಾಸಗಿ ಕಾರುಗಳನ್ನು ಉಪಯೋಗಿಸುತ್ತಿರಬಹುದು. ಹಾಗಾಗಿ ಅವರಿಗೆ ಅಲ್ಲಿನ ದೈನಂದಿನ ಜನಜೀವನದ ಪರಿಚಯವೇ ಬಹುಶಃ ನಮ್ಮ ರಾಜಕಾರಣಿಗಳಿಗೆ ಆಗುವುದಿಲ್ಲ.
ಬಹುಶಃ ನೂರು ವರ್ಷಗಳ ಹಿಂದೆ ಹೆಚ್ಚು ವಾಹನಗಳು ಉಪಯೋಗಿಸಿದರೆ ವಾಯುಮಾಲಿನ್ಯ ಉಂಟಾಗುತ್ತದೆ ಎಂದು ಯಾರಾದರೂ ಹೇಳಿದ್ದರೆ, ಅವರಿಗೆ ಪ್ರಗತಿ ವಿರೋಧಿ ಎಂಬ ಪಣ ಪಟ್ಟಿ ಬೀಳುತ್ತಿತ್ತು. ಆದರೆ ಇಂದು ವಾಹನಗಳಿಂದ ವಾಯು ಮಾಲಿನ್ಯ ಕಣ್ಣ ಮುಂದಿರುವ ಸತ್ಯ.

ವಾಯು ಮಾಲಿನ್ಯದಿಂದ ನಗರಗಳಲ್ಲಿ ವಾಸಿಸುವ ಜನರಿಗೆ ಸುಮಾರು ಹತ್ತು ವರ್ಷದಷ್ಟು ಆಯುಷ್ಯ ಕಡಿಮೆ ಯಾಗುತ್ತಿದೆ ಎಂಬುದನ್ನು ಇತ್ತೀಚಿನ ವರದಿಗಳು ಹೇಳುತ್ತಿವೆ. ಅಲ್ಲದೆ ವಾಯು ಮಾಲಿನ್ಯದಿಂದ ಹಲವಾರು ರೋಗ ರುಜಿನಗಳು ಹೆಚ್ಚಾಗಿವೆ. ವಾಯು ಮಾಲಿನ್ಯದಿಂದ ದೆಹಲಿಯಲ್ಲಿ ಶಾಲೆಗಳಿಗೆ ಬಹಳಷ್ಟು ಸಾರಿ ರಜೆಗಳನ್ನು ಘೋಷಿಸಿದ್ದಾರೆ. ವಾಯು ಮಾಲಿನ್ಯದಿಂದ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ.

ನಮಗೆ ಮುಂದಿನ ೩೦೦-೪೦೦ ವರ್ಷ ದೂರದರ್ಶಿತ್ವವುಳ್ಳ ಅಭಿವೃದ್ಧಿ ಬೇಕೇ ಹೊರತು, ನಮ್ಮ ಮುಂದಿನ ಐದು ವರ್ಷದಲ್ಲಿ ಎಷ್ಟು ಹಣ ಮಾಡಿ
ಕೊಳ್ಳಬಹುದು ಎಂಬ ಆಲೋಚನೆ ಇರುವ ಯೋಜನೆಗಳಲ್ಲ. ನಮ್ಮ ನಗರಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಡೆಗಳಲ್ಲಿ ಎಷ್ಟೇ ಖರ್ಚಾದರೂ
ನಗರದ ಮೂಲೆ ಮೂಲೆಗಳಿಗೂ ಮೆಟ್ರೋದಂತಹ ಸಂಪರ್ಕಗಳು ಬೇಕು. ಪ್ರತಿ ನಗರಗಳಲ್ಲಿ ಸೈಕಲ್ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಪ್ರತ್ಯೇಕ ಪಥ
ಗಳು, ಸೈಕಲ್ ನಿಲ್ದಾಣಗಳು ಬೇಕು. ಖಾಸಗಿ ವಾಹನದಲ್ಲಿಗಿಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಚಲಿಸಿದರೆ ಹೆಚ್ಚು ವೇಗವಾಗಿ ತಲುಪಬಹುದು ಎನ್ನಿಸಬಹುದಾದ ಸಾರ್ವಜನಿಕ ಸಾರಿಗೆ ಬೇಕು.

ಬಸ್ಸು, ಮೆಟ್ರೋ ಮತ್ತು ಯಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಸಾಗಲು ಏಕರೂಪದ, ಡಿಜಿಟಲ್ ಪಾವತಿ ವ್ಯವಸ್ಥೆ ಬೇಕು. ಸರಕಾರಕ್ಕೆ ಅತಿ ದೊಡ್ಡ ಹಣಕಾಸು ವೆಚ್ಚದ ಯೋಜನೆಗಳಲ್ಲಿ ಆಸಕ್ತಿ ಇರುವುದು ಸಹಜವೇ. ನಮ್ಮ ನಗರಗಳಲ್ಲಿ ಪ್ರತ್ಯೇಕವಾದ ಸೈಕಲ್ ಪಥ ಗಳನ್ನು ಮಾಡಬೇಕು, ಪ್ರತ್ಯೇಕವಾದ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕು ಎಂಬುದಕ್ಕೆ ಆಸಕ್ತಿ ಇಲ್ಲದಿರುವುದು ಕೂಡ ಸಹಜವೇ. ಏಕೆಂದರೆ ಇದಕ್ಕೆ ಸುರಂಗ ಮಾರ್ಗಕ್ಕೆ ಬೇಕಾದಷ್ಟು ಹಣ ಖರ್ಚಾಗುವುದಿಲ್ಲ. ಸೋನಿಯಾ ಗಾಂಧಿಯವರು ವಾಯು ಮಾಲಿನ್ಯ ಕಾರಣದಿಂದ ದೆಹಲಿಯಿಂದ ಜೈಪುರಕ್ಕೆ ಸ್ಥಳಾಂತರವಾಗಿದ್ದಾರೆ ಎಂಬ ಸುದ್ದಿ ಇದೆ.

ಇಂತಹ ಅನುಕೂಲ ಶೇಕಡ ೯೯.೯೯ ಭಾರತೀಯ ಜನರಿಗೆ ಸಾಧ್ಯವಿಲ್ಲ. ಆದ್ದರಿಂದ ದೀಪಾವಳಿ ವಾಯು ಮಾಲಿನ್ಯ ಬಗ್ಗೆ ತಲೆಕೆಡಿಸುಕೊಳ್ಳುವ ಬದಲು, ದೈನಂದಿನ ವಾಯು ಮಾಲಿನ್ಯವನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಭಾರತೀಯರಿಗೆ ಸೈಕಲ್‌ನ ಬಗ್ಗೆ ಒಂದು ಬಗೆಯ ಅಸಡ್ಡೆ, ಕೀಳರಿಮೆ ಬೆಳೆದುಕೊಂಡಿದೆ. ಈ ಕೀಳರಿಮೆ ಯನ್ನು ಹೋಗಲಾಡಿಸಿ , ಸೈಕಲ್ ಸಂಸ್ಕೃತಿಯನ್ನು ಜನಪ್ರಿಯಗೊಳಿಸಲು, ಮೋದಿಯವರಂಥ ನಾಯಕರು ರಾಯಭಾರಿಯಾಗಿ ಪ್ರಚಾರ ಕೊಡ ಬೇಕು. ಯೋಗಕ್ಕೆ ಸಿಕ್ಕ ಪ್ರಚಾರದಂತೆ ಸೈಕಲ್ ಸವಾರಿಗೂ ಮೂಲಭೂತ ಸೌಕರ್ಯ ಮತ್ತು ಪ್ರಚಾರ ಸಿಕ್ಕರೆ, ಪರಿಸರ ರಕ್ಷಣೆಯ ಕ್ಷೇತ್ರ ಮತ್ತು ಅರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಯಾ ಗುವ ಸಂಭವವಿದೆ.

ಕೊನೆ ಮಾತು: ಹಿಂದೆ ಬಡವರ ಮನೆಯಲ್ಲಿ ಸೈಕಲ್ ಇರುತ್ತಿತ್ತು. ಈಗ ಶ್ರೀಮಂತರ ಮನೆಯಲ್ಲಿ ಸೈಕಲ್ ಗಳು ಇವೆ.

(ಲೇಖಕರು: ರೇಡಿಯೊಲೊಜಿಸ್ಟ್ , ಕೋಲ್ಕತಾ)

Leave a Reply

Your email address will not be published. Required fields are marked *

error: Content is protected !!