Saturday, 14th December 2024

ದಲಿತ ಸಿಎಂ ಕೂಗಿನ ಹಿಂದೆ ನೋವಿನ ನೆನಪುಗಳಿವೆ

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಕರ್ನಾಟಕಕ್ಕೆ ದಲಿತ ಸಿಎಂ ಬೇಕು ಎಂಬ ಕೂಗು ಪುನಃ ಮೇಲೆದ್ದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ
ಸಿದ್ಧರಾಮಯ್ಯ ನಡುವೆ ಭವಿಷ್ಯದ ನಾಯಕತ್ವಕ್ಕಾಗಿ ಶುರುವಾಗಿರುವ ಪೈಪೋಟಿ ಇಂಥ ಕೂಗಿಗೆ ಕಾರಣ. ಅಂದ ಹಾಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವಣ ಜಟಾಪಟಿಗೆ ಕಾರಣಗಳಿವೆ.

ಇವೇ ಕಾರಣಗಳು ಉಭಯ ನಾಯಕರ ಮಧ್ಯೆ ಅಪನಂಬಿಕೆಯ ಸುನಾಮಿ ಮೇಲೇಳುವಂತೆ ಮಾಡಿವೆ. ಡಿ.ಕೆ.ಶಿವಕುಮಾರ್ ಅವರು ಪ್ರಚಾರಕ್ಕೆ ನೇಮಕ
ಮಾಡಿಕೊಂಡ ತಂಡವೊಂದು ತಮ್ಮ ವರ್ಚಸ್ಸನ್ನು ಹಾಳುಗೆಡಹುವ ಕೆಲಸದಲ್ಲಿ ತೊಡಗಿದೆ ಎಂಬುದು ಸಿದ್ದರಾಮಯ್ಯ ಅವರ ಅನುಮಾನವಾದರೆ, ಸುಮ್ಮನೆ ಇದ್ದರೆ ೨೦೧೩ರಲ್ಲಿ ಜಿ. ಪರಮೇಶ್ವರ್ ಅವರಿಗಾದ ಗತಿಯೇ ನನಗೂ ಬರಬಹುದು ಎಂಬ ಅನುಮಾನ ಡಿ.ಕೆ.ಶಿವಕುಮಾರ್ ಮಿದುಳಿನಲ್ಲಿ ಕಲಸಿ ಹೋಗಿದೆ.
ಇಂಥ ಕಾರಣಗಳಿಗಾಗಿ ಈ ಇಬ್ಬರು ನಾಯಕರ ಮಧ್ಯೆ ಶೀತಲ ಸಮರ ಶುರುವಾಗಿದ್ದರೆ, ಅದೇ ಕಾಲಕ್ಕೆ ಕರ್ನಾಟಕಕ್ಕೆ ದಲಿತ ಸಿಎಂ ಬೇಕು ಎಂಬ ಕೂಗು ಮತ್ತೆ ಮೇಲಕ್ಕೆದ್ದಿದೆ. ಅಂದ ಹಾಗೆ ಜ್ಯೋತಿಷ್ಯ ಶಾಸ ಮನುಷ್ಯನ ಯೋಗಗಳ ಬಗ್ಗೆ ಹೇಳುವಾಗ ನೀಚಭಂಗ ರಾಜಯೋಗದ ಬಗ್ಗೆ ಹೇಳುತ್ತದೆ.

ಎರಡು ಪ್ರಬಲ ಗ್ರಹಗಳು ಪರಸ್ಪರ ಘರ್ಷಿಸಿದರೆ ಮೂರನೇ ಗ್ರಹಕ್ಕೆ ಲಾಭವಾಗುತ್ತದೆ ಎಂದು ಹೇಳುತ್ತದೆ. ಅರ್ಥಾತ್, ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂದಂತೆ. ಈ ಹಿಂದೆ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ತೇಜಸ್ವಿನಿ ಅವರನ್ನು ಕಣಕ್ಕಿಳಿಸುವುದರ ಹಿಂದಿದ್ದ ಪ್ರಬಲ ಕಾರಣಗಳಲ್ಲಿ ನೀಚಭಂಗ ರಾಜಯೋಗದ ಮಾತು ಕೆಲಸ ಮಾಡಿತ್ತು. ನೀಚಭಂಗ ರಾಜಯೋಗ ಇರುವ ತೇಜಸ್ವಿನಿ ಅವರನ್ನು ಕಣಕ್ಕಿಳಿಸಿದರೆ ದೇವೇ ಗೌಡರು ಸೋಲುತ್ತಾರೆ ಅಂತ ಅವತ್ತು ಇದೇ ಡಿ.ಕೆ. ಶಿವಕುಮಾರ್ ಅವರು ಪಟ್ಟು ಹಿಡಿದು ತೇಜಸ್ವಿನಿ ಅವರಿಗೆ ಟಿಕೆಟ್ ಕೊಡಿಸಿ, ಪ್ರಚಾರಕ್ಕೂ ಧುಮುಕಿದ್ದರು.

ಅದರರ್ಥ, ದೇವೇಗೌಡ ಮತ್ತು ತಾವು ಪ್ರಬಲ ಗ್ರಹಗಳು, ತಮ್ಮಿಬ್ಬರ ನಡುವಣ ಘರ್ಷಣೆ ತೇಜಸ್ವಿನಿ ಅವರಿಗೆ ಲಾಭವಾಗುತ್ತದೆ ಎಂಬುದು ಡಿ.ಕೆ. ಶಿವಕುಮಾರ್ ಅವರ ಲೆಕ್ಕಾಚಾರವಾಗಿತ್ತು. ತೇಜಸ್ವಿನಿ ಅವರ ವಿಷಯದಲ್ಲಿ ಅದು ನಿಜವಾಯಿತು ಎಂಬುದು ಬೇರೆ ಮಾತು. ಆದರೆ ದಶಕಗಳ ಕಾಲದಿಂದ ಪ್ರಬಲ ನಾಯಕರ ಮಧ್ಯದ ಹೋರಾಟ ದಲಿತ ನಾಯಕರೊಬ್ಬರಿಗೆ ಸಿಎಂಗಿರಿ ದಕ್ಕಿಸಿ ಕೊಡುತ್ತದೆ ಎಂಬ ಭಾವನೆ ಇದೆಯಾದರೂ, ಅದು ನಿಜವಾಗುತ್ತಿಲ್ಲ. ವಸ್ತುಸ್ಥಿತಿ ಎಂದರೆ ಕರ್ನಾಟಕದಲ್ಲಿ ದಲಿತರಿಗೆ ಸಿಎಂ ಹುದ್ದೆ ದಕ್ಕುತ್ತದೆ ಎಂಬ ಮಾತು ಮೂರು ದಶಕಗಳಿಗಿಂತ ಹಿಂದೆಯೇ ಕೇಳಿ ಬಂದಿತ್ತು. ಅವತ್ತು ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ರಾಮಕೃಷ್ಣ ಹೆಗಡೆ ಅವರಿಗೆ ರಾಷ್ಟ್ರ ರಾಜಕಾರಣದ ಮೋಹ ಶುರುವಾಗಿತ್ತು.

ಆದರೆ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಮೊದಲು ಕರ್ನಾಟಕದಲ್ಲಿ ದಲಿತ ಇಲ್ಲವೇ ಮುಸ್ಲಿಂ ನಾಯಕರೊಬ್ಬರನ್ನು ಸಿಎಂ ಹುದ್ದೆಗೆ ತಂದು ಕೂರಿಸಬೇಕು ಅಂತ ಹೆಗಡೆ ಲೆಕ್ಕ ಹಾಕಿದ್ದರು. ಇದಕ್ಕೆ ಕಾರಣವೂ ಇತ್ತು. ಅದೆಂದರೆ, ರಾಷ್ಟ್ರದ ಎಲ್ಲ ಲೋಕಸಭೆ ಕ್ಷೇತ್ರಗಳಲ್ಲೂ ದಲಿತ ಮತ್ತು ಮುಸ್ಲಿಂ ಮತ ಬ್ಯಾಂಕುಗಳು ಬಲಿಷ್ಠ ವಾಗಿವೆ. ಇಂಥ ದಲಿತ ಮತ್ತು ಮುಸ್ಲಿಮರ ಬೆಂಬಲವನ್ನು ದಕ್ಕಿಸಿಕೊಂಡರೆ ತಮಗೆ ರಾಷ್ಟ್ರ ರಾಜಕಾರಣದಲ್ಲಿ ಭವಿಷ್ಯ ಎಂದು ಹೆಗಡೆ ನಂಬಿದ್ದರು. ಇದೇ ಕಾರಣಕ್ಕಾಗಿ ಅವರು ದಲಿತ ನಾಯಕ ಬಿ.ರಾಚಯ್ಯ ಮತ್ತು ಮುಸ್ಲಿಂ ನಾಯಕ ನಜೀರ್ ಸಾಬ್ ಅವರನ್ನು ಕಣ್ಣ ಮುಂದಿರಿಸಿಕೊಂಡಿದ್ದರು. ಆದರೆ ರಾಷ್ಟ್ರ ರಾಜಕಾರಣದ ಹೊಸ್ತಿಲು ತುಳಿಯುವ ಮುನ್ನವೇ ಅವರು ಟೆಲಿಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಿಲುಕಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಸನ್ನಿವೇಶ
ಸೃಷ್ಟಿಯಾಯಿತು.

ಹೀಗಾಗಿ ತಾವು ತೆರವು ಮಾಡುವ ಜಾಗಕ್ಕೆ ದಲಿತ ನಾಯಕ ರಾಚಯ್ಯ ಬರಲಿ ಅಂತ ಬಯಸಿದರು. ಅವತ್ತು ಹೆಗಡೆ ಅವರ ಬಯಕೆಯಂತೆ ರಾಚಯ್ಯ ಕೂಡಾ ಶಾಸಕಾಂಗ ಪಕ್ಷದ ಚುನಾವಣೆಗೆ ಸಜ್ಜಾದರು. ಆ ಸಂದರ್ಭದಲ್ಲಿ ರಾಚಯ್ಯ ಅವರಿಗೆ ಲಿಂಗಾಯತ ಸಮುದಾಯದ ಎಸ್.ಆರ್. ಬೊಮ್ಮಾಯಿ ಮತ್ತು ಒಕ್ಕಲಿಗ
ಸಮುದಾಯದ ದೇವೇಗೌಡ ಪ್ರತಿಸ್ಪರ್ಧಿಯಾದರು. ಹೆಗಡೆ ಬೆಂಬಲಿಗರು ಈ ಸಂದರ್ಭದಲ್ಲಿ ನಿಜಕ್ಕೂ ರಾಚಯ್ಯ ಅವರ ಪರವಾಗಿ ನಿಂತಿದ್ದರೆ ಕರ್ನಾಟಕ ಮೊಟ್ಟ ಮೊದಲ ದಲಿತ ಮುಖ್ಯಮಂತ್ರಿಯನ್ನು ನೋಡಿರುತ್ತಿತ್ತು. ಆದರೆ ಹೆಗಡೆ ಅವರ ಬೆಂಬಲಿಗರು ಪಟ್ಟು ಹಿಡಿದು, ರಾಚಯ್ಯ ಅವರು ಸ್ಪರ್ಧೆಯ ಕಣದಿಂದ ಹಿಂದೆ
ಸರಿಯುವಂತೆ ಮಾಡಿದರು. ಮತ್ತು ಬೊಮ್ಮಾಯಿ ಅವರು ನಿರಾಯಾಸವಾಗಿ ಗೆಲುವು ಗಳಿಸುವಂತೆ ನೋಡಿಕೊಂಡರು.

ರಾಚಯ್ಯ ಅವರ ಘಟನೆ ನಡೆದ ನಂತರ ಕರ್ನಾಟಕದಲ್ಲಿ ದಶಕಗಳ ಕಾಲ ದಲಿತ ಸಿಎಂ ಕೂಗು ಮೇಲೇಳಲಿಲ್ಲ. ಕೆ.ಎಚ್.ರಂಗನಾಥ್, ಬಿ.ಬಸವಲಿಂಗಪ್ಪ ಸೇರಿದಂತೆ ಹಲವು ಪ್ರಮುಖ ದಲಿತ ನಾಯಕರಿದ್ದರೂ, ಅವರ ಹೆಸರನ್ನು ಸಿಎಂ ಗದ್ದುಗೆಯವರೆಗೆ ತೆಗೆದುಕೊಂಡು ಹೋಗುವ ಸನ್ನಿವೇಶ ಸೃಷ್ಟಿಯಾಗಲಿಲ್ಲ. ಆದರೆ 2008ರಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿಕೂಟ ಸರಕಾರ ಪತನವಾದ ನಂತರ ಕಾಂಗ್ರೆಸ್ ಪಕ್ಷದ ಮುಂಚೂಣಿಯಲ್ಲಿದ್ದ ದಲಿತ ನಾಯಕ ಮಲ್ಲಿಕಾರ್ಜುನ
ಖರ್ಗೆ ಅವರ ಹೆಸರು ಸಿಎಂ ಖುರ್ಚಿಯ ಪಕ್ಕ ಕಾಣಿಸಿಕೊಂಡಿತು.

ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಪ್ರಾಮಾಣಿಕವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಾಥ್ ನೀಡಿದ್ದರೆ ನಿಶ್ಚಿತವಾಗಿ ಅವರು ಸಿಎಂ ಆಗುತ್ತಿದ್ದರು. ಅದರೆ
ಅವತ್ತು ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಇದ್ದಕ್ಕಿದ್ದಂತೆ ಚುರುಕಾದರು. ಹಳೆ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಅವರು ಪ್ರಚಾರ ಕಾರ್ಯಕ್ಕೆ ತಿರುಗಿದ ರೀತಿ ದಲಿತ ಸಮುದಾಯದ ಅನುಮಾನಕ್ಕೆ ಕಾರಣವಾಯಿತು. ಮೊದಲೇ ಸಿಎಂ ಆಗಿದ್ದ ವರು. ಈಗ ಮತ್ತೊಮ್ಮೆ ಸಿಎಂ ಆಗಲು ಬಯಸಿದ್ದಾರೆ. ಇದೇ ಕಾರಣಕ್ಕಾಗಿ ಇಷ್ಟು ಸಕ್ರಿಯವಾಗಿ ಪ್ರಚಾರ ಕಾರ್ಯಕ್ಕಿಳಿದಿದ್ದಾರೆ ಎಂಬ ಸಂದೇಶ ದಲಿತ
ಸಮುದಾಯಕ್ಕೆ ಹೋಯಿತು.

ವಸ್ತುಸ್ಥಿತಿ ಎಂದರೆ ದಲಿತ ವರ್ಗದ ಎಡಗೈ ಸಮುದಾಯ ಕರ್ನಾಟಕದಲ್ಲಿ ಬಿಜೆಪಿಯ ಬೆನ್ನ ಹಿಂದಿದೆ. ಇದಕ್ಕಿರುವ ಪ್ರಮುಖ ಕಾರಣವೆಂದರೆ, ದಲಿತರಿಗೆ ಒಳಮೀಸಲಾತಿ ನೀಡಲು ಕಾಂಗ್ರೆಸ್ ಒಪ್ಪುವುದಿಲ್ಲ. ಹೀಗಾಗಿ ಅದು ತಮಗೆ ಬೇಡ ಎಂಬುದು. ಅದರ ನಿಲುವು. ಇಷ್ಟಾದರೂ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುತ್ತಾರೆ ಎಂದಾದರೆ ಒಗ್ಗೂಡಬೇಕು ಎಂಬ ಯೋಚನೆ ಅದರಲ್ಲೂ ಇತ್ತು. ಆದರೆ ಯಾವಾಗ ಎಸ್.ಎಂ. ಕೃಷ್ಣ ಚುನಾವಣೆಯ ವೇಳೆಗೆ ಅತಿ ಚುರುಕುತನ ತೋರಿಸಿದರೋ? ಆಗ ಎಡಗೈ ಸಮುದಾಯ. ಕಾಂಗ್ರೆಸ್ ಗೆದ್ದರೂ ಖರ್ಗೆ ಸಿಎಂ ಆಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದು ಬಿಜೆಪಿಯ ಜತೆ ಗಟ್ಟಿಯಾಗಿ
ನಿಂತುಕೊಂಡಿತು.

2008ರ ಚುನಾವಣೆಯಲ್ಲಿ ಲಿಂಗಾಯತ ಪ್ಲಸ್ ದಲಿತ ಕಾಂಬಿನೇಷನ್ ಯಶಸ್ವಿಯಾಗಿದ್ದು ಹೀಗೆ. ಅದರೂ ಚುನಾವಣೆಯ ನಂತರ ಬಿಜೆಪಿ ವಿರೋಧಿ ಶಕ್ತಿಗಳಿಗೆ ಅಧಿಕಾರ ಹಿಡಿಯುವ ಒಂದು ಅವಕಾಶವಿತ್ತು.ಯಾಕೆಂದರೆ 224 ಸದಸ್ಯ ಬಲದ ವಿಧಾನಸಭೆಯ ನೂರಾ ಹತ್ತು ಸ್ಥಾನಗಳನ್ನು ಅವತ್ತು ಬಿಜೆಪಿ ಗೆದ್ದುಕೊಂಡಿದ್ದರೆ, ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ಸೇರಿ 114 ಕ್ಷೇತ್ರಗಳಲ್ಲಿ ಗೆಲುವು ಗಳಿಸಿದ್ದರು. ಹೀಗಾಗಿ ಸರಕಾರ ರಚಿಸಲು ಅಗತ್ಯವಾದ ಸರಳ ಬಹುಮತ ಬಿಜೆಪಿ ವಿರೋಧಿ ಶಕ್ತಿಗಳಿಗಿತ್ತು. ಇದೇ ಕಾರಣಕ್ಕಾಗಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್ ಪ್ರಮುಖರೊಂದಿಗೆ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿ ಸರಕಾರ ರಚಿಸಿ, ನಾವು ಬೇಷರತ್ತಾಗಿ ಬೆಂಬಲ ಕೊಡುತ್ತೇವೆ ಅಂತ ಪ್ರಪೋಸಲ್ಲು ಕೊಟ್ಟರು.

ಆದರೆ 2006 ರಲ್ಲಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟ ಸರಕಾರ ಉರುಳಲು ದೇವೇಗೌಡರ ಪಿತೂರಿ ಕಾರಣ ಅಂತ ಸ್ಥಳೀಯ
ನಾಯಕರು ಹೇಳಿದ್ದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ತಲೆಯಲ್ಲಿ ಫಿಕ್ಸ್ ಆಗಿತ್ತು. ಹೀಗಾಗಿ ಅವರು ಬಿಜೆಪಿ ವಿರೋಽ ಸರಕಾರ ರಚಿಸುವ ಪ್ರಪೋ ಸಲ್ಲಿಗೆ ಒಪ್ಪಿಗೆ ನೀಡಲಿಲ್ಲ.

ಇದಾದ ನಂತರ 2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪುನಃ ದಲಿತ ಸಿಎಂ ಕೂಗು ದಟ್ಟವಾಯಿತು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಜಿ. ಪರಮೇಶ್ವರ್ ಅವರಿದ್ದುದು ಇದಕ್ಕೆ ಕಾರಣ. ಪರಮೇಶ್ವರ್ ಕೂಡಾ ತುಂಬ ದಕ್ಷತೆಯಿಂದ ಪಕ್ಷವನ್ನು ಸಂಘಟಿಸಿ, ಚುನಾವಣಾ ಸಮರಕ್ಕೆ ಸಜ್ಜಾಗಿದ್ದರು. ವಸ್ತುಸ್ಥಿತಿ ಎಂದರೆ ಅವತ್ತು ಪರಮೇಶ್ವರ್ ಅವರು ಸಿಎಂ ಹುದ್ದೆಗೆ ಬಂದು ಕೂರುವುದು ನಿಶ್ಚಿತ ಎಂಬ ಭಾವನೆ ದಲಿತ ಸಮುದಾಯದಲ್ಲಿತ್ತು. ಇದೇ ಕಾರಣಕ್ಕಾಗಿ ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನ ಒಲಿದು ಬಂದರೂ ದಲಿತ ನಾಯಕ ಗೋವಿಂದ ಕಾರಜೋಳ್ ಅದನ್ನು ತಿರಸ್ಕರಿಸಿದ್ದರು.

ನಾನು ಬಿಜೆಪಿಯ ಅಧ್ಯಕ್ಷನಾದರೆ ದಲಿತ ಮತಗಳು ಒಡೆದು ಹೋಗುತ್ತವೆ. ಸನ್ನಿವೇಶ ಪರಮೇಶ್ವರ್ ಅವರಿಗೆ ಅನುಕೂಲವಾಗಿರುವಾಗ ನಾನು ಬಿಜೆಪಿಯ ಅಧ್ಯಕ್ಷ
ಸ್ಥಾನದಲ್ಲಿ ಕೂರುವುದು ಸಮುದಾಯಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂಬುದು ಗೋವಿಂದ ಕಾರಜೋಳ ಅವರ ಅನಿಸಿಕೆಯಾಗಿತ್ತು. ಅಂದ ಹಾಗೆ ಆ ಕಾಲಕ್ಕಾಗಲೇ ಬಿಜೆಪಿ ಒಡೆದು, ಯಡಿಯೂರಪ್ಪ ಅವರು ಕೆಜೆಪಿ ಕಾಂಪೌಂಡಿನೊಳಗೆ ನಿಂತಿದ್ದರು. ವಾಲ್ಮೀಕಿ ಸಮುದಾಯದ ನಾಯಕ ಬಿ.ಶ್ರೀರಾಮುಲು ಕೂಡಾ ಬಿಜೆಪಿ ತೊರೆದು ರಾಜ್ಯಾದ್ಯಂತ ಗಣ – ಗಣ ಅಲೆದಾಡುತ್ತಿದ್ದರು. ಹೀಗಾಗಿ ಲಿಂಗಾಯತ ಪ್ಲಸ್ ದಲಿತ ವೋಟ್ ಬ್ಯಾಂಕುಗಳು ಕೈ ಜೋಡಿಸುವ ಸಾಧ್ಯತೆ ಕ್ಷೀಣವಾಯಿತು. ಮತ್ತು ದಲಿತ ನಾಯಕ ಪರಮೇಶ್ವರ್ ಸಿಎಂ ಆಗುತ್ತಾರೆ ಎಂಬ ಸಂದೇಶ ವ್ಯಾಪಕವಾಗಿ ದಲಿತ ಸಮುದಾಯದಲ್ಲಿ ಹರಡಿತು. ಇದರ ಪರಿಣಾಮ ವಾಗಿ ಕಾಂಗ್ರೆಸ್ ಪಕ್ಷ ಲಾಭ ಪಡೆಯಿತು.

2013ರಲ್ಲಿ ಕಾಂಗ್ರೆಸ್ ಪಕ್ಷ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವಾಗಿದ್ದು ಇದೇ ಕಾರಣಕ್ಕಾಗಿ. ಆದರೆ ಘಡ್ ಆಲಾ ಪಣ್ ಸಿಂಹ ಗೇಲಾ (ಕೋಟೆ ಬಂತು, ಆದರೆ ಸಿಂಹ ಹೋಯಿತು ಎಂಬ ಮಾತಿನಂತೆ ಕಾಂಗ್ರೆಸ್‌ಗೆ ಅಧಿಕಾರ ಬಂತು, ಆದರೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರೇ ಚುನಾವಣೆಯಲ್ಲಿ ಸೋತು ಹೋಗಿದ್ದರು. ಅವರ ಸೋಲಿಗೆ ಏನು ಕಾರಣ? ಎಂಬುದು ರಹಸ್ಯವೇನಲ್ಲ. ಪಕ್ಷದ ನಾಯಕರೇ ತಂತ್ರ ಹೂಡಿ ಪರಮೇಶ್ವರ್ ಅವರು ತಮ್ಮ ಕ್ಷೇತ್ರದಲ್ಲಿ ಸೋಲುವಂತೆ ಮಾಡಿದ್ದರು. ಇದು ಬರೀ ಪರಮೇಶ್ವರ್ ಅವರ ಸೋಲಾಗಿರಲಿಲ್ಲ, ಬದಲಿಗೆ ಮೊಟ್ಟ ಮೊದಲ ದಲಿತ ಸಿಎಂ ಉದ್ಭವಿಸಲಿದ್ದಾರೆ ಎಂಬ ಆಕಾಂಕ್ಷೆಯ
ಸೋಲಾಗಿತ್ತು.

ಇದಾದ ನಂತರ ದಲಿತ ಸಿಎಂ ಕೂಗು ಮೇಲೆದ್ದಿರಲಿಲ್ಲ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪಕ್ಷ 2019ರ ಜುಲೈನಲ್ಲಿ ಅಧಿಕಾರ ಹಿಡಿಯಿತಲ್ಲ? ಇದಾದ ಕೆಲವೇ ಕಾಲದಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಹುzಯಿಂದ ಕೆಳಗಿಳಿಸಲು ಬಿಜೆಪಿ ಹೈಕಮಾಂಡ್ ಬಯಸಿದೆ ಎಂಬ ಮಾತುಗಳು ತೇಲಿ ಬರತೊಡಗಿದವು. ಇಂಥ ಸಂದರ್ಭದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಒಮ್ಮೆ ದೆಹಲಿಗೆ ಹೋದರು. ಹೀಗೆ ಹೋದಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದರು. ಈ ಭೇಟಿಯ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ವಿದ್ಯಮಾನಗಳ ಕುರಿತು ಮಾತನಾಡುತ್ತಾ ನಡ್ಡಾ ಅವರು ಬಿಜೆಪಿ ವರಿಷ್ಠರಾದ ನರೇಂದ್ರಮೋದಿ ಮತ್ತು ಅಮಿತ್ ಷಾ ಅವರಿಗಿರುವ ಒಂದು ಲೆಕ್ಕಾಚಾರದ ಬಗ್ಗೆ ಕಾರಜೋಳ ಅವರಿಗೆ ವಿವರಿಸಿದರು.

ದೇಶದ ಮೂರು ಅಥವಾ ನಾಲ್ಕು ರಾಜ್ಯಗಳಲ್ಲಿ ದಲಿತ ಸಮುದಾಯಕ್ಕೆ ಸೇರಿದವರನ್ನು ಸಿಎಂ ಮಾಡಬೇಕು. ಆ ಮೂಲಕ ಕಾಂಗ್ರೆಸ್ ಪಕ್ಷ ಯಾವ ಕಾರ್ಯವನ್ನು
ಸಾಧಿಸಲಾಗಿಲ್ಲವೋ? ಅದನ್ನು ಬಿಜೆಪಿ ಸಾಧಿಸಿದಂತಾಗಬೇಕು ಎಂಬುದು ಮೋದಿ, ಅಮಿತ್ ಷಾ ಅವರ ಲೆಕ್ಕಾಚಾರ. ಹೀಗಾಗಿ ಮುಂದಿನ ದಿನಗಳಲ್ಲಿ ಕರ್ನಾಟಕ ದಲ್ಲಿ ನಿಮ್ಮನ್ನು ಸಿಎಂ ಹುದ್ದೆಯ ಮೇಲೆ ತಂದು ಕೂರಿಸುವ ಲೆಕ್ಕಾಚಾರವಿದೆ. ಹೀಗಾಗಿ ಅದಕ್ಕೆ ಸಜ್ಜಾಗಿ ಎಂದು ನಡ್ಡಾ ಹೇಳಿದಾಗ ಗೋವಿಂದ ಕಾರಜೋಳ ಅದನ್ನು ನಯವಾಗಿ ತಿರಸ್ಕರಿಸಿದರು. ಯಾವ ಕಾರಣಕ್ಕೂ ಕರ್ನಾಟಕದಲ್ಲಿ ಇಂಥ ಸಾಹಸ ಬೇಡ ಸಾರ್, ಇಂಥ ಮಾತುಗಳು ಚುನಾವಣೆಯ ಸಂದರ್ಭದಲ್ಲಿಯೇ ಸ್ಪಷ್ಟವಾಗಬೇಕು. ಹಾಗಾಗದೆ ಇದ್ದರೆ ಸಮುದಾಯಗಳ ಮಧ್ಯೆ ಒಡಕು ಸೃಷ್ಟಿಯಾಗಿ ಬಿಜೆಪಿ ಬಹುಕಾಲ ಅಧಿಕಾರದಿಂದ ದೂರವಾಗುವ ಸ್ಥಿತಿ ಬರುತ್ತದೆ. ಹೀಗಾಗಿ ಯಡಿಯೂರಪ್ಪ ಅವರೇ ಸಿಎಂ ಹುದ್ದೆಯಲ್ಲಿ ಮುಂದುವರಿಯುವುದು ಸೂಕ್ತ ಅಂತ ಕಾರಜೋಳ ಹೇಳಿದಾಗ ನಡ್ಡಾ ಮಾತನಾಡಲಿಲ್ಲ.

ಈಗಲೂ ಯಡಿಯೂರಪ್ಪ ಅವರು ಬದಲಾದರೆ ಯಾರು ಮುಂದಿನ ಸಿಎಂ ಎಂಬ ಪ್ರಶ್ನೆ ಇದ್ದೇ ಇದೆ. ಮತ್ತು ಪರ್ಯಾಯ ನಾಯಕನ ಹುದ್ದೆಗೆ ಗೋವಿಂದ ಕಾರಜೋಳ ಅವರ ಹೆಸರೂ ರೇಸಿಗೆ ಬರುತ್ತಲೇ ಇದೆ. ಅಂದ ಹಾಗೆ ದಲಿತ ಸಿಎಂ ಎಂಬ ಕೂಗು ಬಂದಾಗಲೆಲ್ಲ ಅದನ್ನು ವ್ಯವಸ್ಥಿತವಾಗಿ ಸೈಡ್ ಲೈನಿಗೆ ಸರಿಸುವ ಕೆಲಸ ಕರ್ನಾಟಕದಲ್ಲಿ ನಡೆಯುತ್ತಲೇ ಬಂದಿದೆ. ಮತ್ತು ಮುಂದೆಯೂ ನಡೆಯುತ್ತದೆ. ಈಗ ಎದ್ದಿರುವ ಕೂಗೂ ಅಷ್ಟೇ. ಸಿದ್ದರಾಮಯ್ಯ ವರ್ಸಸ್ ಡಿ.ಕೆ.
ಶಿವಕುಮಾರ್ ಕದನದಿಂದಾಗಿ, ದಲಿತರು ಮುಂದಿನ ಸಿಎಂ ಯಾಕಾಗಬಾರದು? ಎಂಬ ಪ್ರಶ್ನೆಯನ್ನು ಮೇಲೆದ್ದು ನಿಲ್ಲುವಂತೆ ಮಾಡಿದೆ. ಆದರೆ ಈ ಪ್ರಶ್ನೆಗೆ ಉತ್ತರ ಇದುವರೆಗೆ ಸಿಕ್ಕಿಲ್ಲ. ಯಾಕೆಂದರೆ. ಉತ್ತರ ಕಂಡುಕೊಳ್ಳುವ ಕಾಲಕ್ಕೆ ಸರಿಯಾಗಿ ಅಂಥ ಸಾಧ್ಯತೆಗೆ ಅಡ್ಡೇಟು ಬೀಳುತ್ತಿರುವುದು ಮಾತ್ರ ನಿಜ ಮತ್ತು ವಿಪರ್ಯಾಸ.