Saturday, 14th December 2024

ಮಹಿಷ ದಸರಾ ಎಂಬುದಕ್ಕಿಂತ ವಿಕೃತಿಯುಂಟೆ !

ಬುಲೆಟ್ ಪ್ರೂಫ್

ವಿನಯ್ ಖಾನ್

ಪುರಾಣಗಳ ಮೇಲೆ ಅವಹೇಳನಕಾರಿ ಹೇಳಿಕೆ ಕೊಡುವುದನ್ನು ಕೆಲ ಬುದ್ಧಿಜೀವಿಗಳು ಇಂದಿಗೂ ಬಿಟ್ಟಿಲ್ಲ. ತಮಿಳುನಾಡು ಎರಡು ಸಿಎಂ ಕಂಡ ಮನೆಯಲ್ಲಿ ಹುಟ್ಟಿ,
ತಾನೂ ಸಿಎಂ ಆಗಲು ಕನವರಿಸುತ್ತಿರುವ ಉದಯನಿಧಿ ಮತ್ತವರ ಗ್ಯಾಂಗ್, ಕೆಲವು ತಥಾಕಥಿತ ಪ್ರಗತಿಪರರು ಕೂಡ ಈ ಗುಂಪಲ್ಲಿ ಸೇರುತ್ತಾರೆ.

ಇಷ್ಟು ವರ್ಷ ಕಾಣೆಯಾಗಿದ್ದ ಕೆಲವು ಬುದ್ಧಿ(ಇಲ್ಲದ)ಜೀವಿಗಳು ಮತ್ತೆ ಪ್ರತ್ಯಕ್ಷವಾಗಿವೆ. ೬೦ ವರ್ಷಕ್ಕೆ ಅರಳು ಮರಳು ಅಂತಾರಲ್ಲ, ಹಾಗೇ ಸರಕಾರಿ ಕಾಲೇಜು ಗಳಲ್ಲಿ ಪ್ರೊಫೆಸರ್ ಆಗಿದ್ದುಕೊಂಡು, ಈಗ ಮನೆಯಲ್ಲಿ ಬೆಚ್ಚಗೆ ಇರಬೇಕಾದ ‘ಬಿಳಿತಲೆ’ ಗಳು (ಇದು ಅವರಲ್ಲ, ಆದರೆ ಮುಂದೆ ಬರಬಹುದು!) ಮತ್ತೆ ರೋಡಿ ಗಿಳಿಯುತ್ತಿವೆ. ಅಲ್ಲ ಅಲ್ಲ! ನೀವಂದುಕೊಂಡಿದ್ದಕ್ಕಲ್ಲ. ಮೈಸೂರಿನಲ್ಲಿ ದಸರಾ ನಡೆಯಲಿದೆಯಲ್ಲ, ಇವರೇನು ಆನೆಗೆ ಸ್ನಾನ ಮಾಡಿಸಿ ಅದರ ಲದ್ದಿ ಬಳಿಯೋಕ್ಕೆ ಬರುತ್ತಿಲ್ಲ. ಬದಲಿಗೆ ಇವರು ಬರುತ್ತಿರುವುದು ನಮ್ಮ ಜನರ ನಂಬಿಕೆಗಳ ಮೇಲೆ ಸವಾರಿ ಮಾಡುವುದಕ್ಕೆ.

ಎಲ್ಲರೂ ದೇವರೆಂದು ಪೂಜಿಸುವ ಚಾಮುಂಡಿಯನ್ನು ಅವಹೇಳನ ಮಾಡುವುದಕ್ಕೆ. ಚಾಮುಂಡಿಯಿಂದ ವಧೆಯಾದ ಮಹಿಷಾಸುರ ನನ್ನು ವಿಜೃಂಭಣೆ ಮಾಡಿಸುವುದಕ್ಕೆ. ಹೊಸ ಸರಕಾರದ ಜತೆಗಿನ ತಮ್ಮ ಹಳೆಯ ಅಸ್ತಿತ್ವವನ್ನು ತೋರಿಸುವುದಕ್ಕೆ. ಜನರ ಮಧ್ಯದಲ್ಲಿ ಮತ್ತೊಮ್ಮೆ ಸಂಘರ್ಷದ ಹೆಸರಲ್ಲಿ ಗೊಂದಲ ಸೃಷ್ಟಿ ಮಾಡುವುದಕ್ಕೆ. ಆಸ್ತಿಕರನ್ನು ಮತ್ತೊಮ್ಮೆ ಬೈಯುವುದಕ್ಕೆ. ಮುಖಕ್ಕೆ ಅಂಟಿದ್ದ ಕರಿಮಸಿಯನ್ನು ತೊಳೆದು ಕೊಂಡು, ಮೊದಲನೇ ಬಾರಿ ಮನೆಯಿಂದ ಹೊರಕ್ಕೆ ಬರುತ್ತಿರುವ ಭಗವಾನ್‌ರ (ಅಂತ ಅಂದುಕೊಂಡಿರುವೆ, ಏಕೆಂದರೆ ಅವರಲ್ಲೇ ಇನ್ನೂ ನಿಗದಿಯಾಗಿಲ್ಲ) ಸಾರಥ್ಯದಲ್ಲಿ.

ಕೆಂಪುಬಟ್ಟೆ ಧರಿಸಿರುವ ಒಬ್ಬ ಸನ್ಯಾಸಿ(?!) ಮತ್ತೊಂದೆರಡು ಅವರದ್ದೇ ಬುದ್ಧಿಮಟ್ಟದವರ ಜತೆ ಸಂವಿಧಾನದ ಹೆಸರಿನಲ್ಲಿ ವಿಕೃತಿಯನ್ನು ಬೆಳೆಸುವುದಕ್ಕೆ ಹೊರಟಿ
ದ್ದಾರೆ. ಮೊದಲನೆಯದಾಗಿ ಮಹಿಷನ ಬಗ್ಗೆ ಇವರಲ್ಲೇ ಸ್ಪಷ್ಟತೆಯಿಲ್ಲ. ಒಬ್ಬನ ಪ್ರಕಾರ, ಅಶೋಕನ ಮಗ ಮಹೀಂದ್ರ ಕರ್ನಾಟಕದ ಪ್ರದೇಶಕ್ಕೆ ಬಂದ. ಇಲ್ಲಿ ರಾಜ್ಯ ವಾಳುತ್ತಾ ಮಹಿಷಾಸುರ ನಾದ. ಅವನಿಂದಲೇ ಮೈಸೂರಿಗೆ ಆ ಹೆಸರು ಬಂತು. ಮತ್ತೊಬ್ಬನ ಪ್ರಕಾರ ಅದೇ ಮಹಿಂದ್ರ, ದಕ್ಷಿಣ ಭಾರತಕ್ಕೆ ಬಂದಾಗ ಇಲ್ಲಿ ಮಹಿಷಾಸುರ ಆಳುತ್ತಿದ್ದ. ಅವನ ಆಳ್ವಿಕೆಯಲ್ಲಿ ಕಾಲ ಬಹಳ ಸುಭಿಕ್ಷವಾಗಿತ್ತು. ಆದರೆ, ಬ್ರಾಹ್ಮಣರು ಪುರಾಣದ ಹೆಸರಲ್ಲಿ, ತಮ್ಮದೇ ಆದ ನಿರೂಪಣೆಯಲ್ಲಿ ಇತಿ
ಹಾಸವನ್ನು ಮರೆಮಾಚಿ, ದಲಿತರಿಗೆ ಅಪಮಾನ ಮಾಡಿದ್ದಾರೆ.

ಮಿಕ್ಕಂತೆ, ಆರ್ಯರು ಇಲ್ಲಿನ ರಾಜ, ನಾಯಕನಾಗಿದ್ದ ಮಹಿಷನನ್ನು ಕೊಂದು ತಮ್ಮ ಆಳ್ವಿಕೆಯನ್ನು ಸೃಷ್ಟಿಮಾಡಿದ್ದಾರೆ ಅಂತಲೋ, ಉತ್ತರ ಭಾರತದಿಂದ ಬಂದ ಮಹಿಷ, ಕರ್ನಾಟಕದಲ್ಲಿ ಆಳ್ವಿಕೆ ಮಾಡುತ್ತಾನೆ ಅಂತಾಲೋ ಹೀಗೆ ನಿರೂಪಣೆಗಳು ಇವೆ. ಅದಕ್ಕೆ ನಾನು ಮೊದಲಿಗೇ ಹೇಳಿದ್ದು, ‘೬೦ಕ್ಕೆ ಅರಳು ಮರಳು’ ಅಂತ!
ಕರ್ನಾಟಕದಲ್ಲಿ ಹೆಚ್ಚೂ ಕಮ್ಮಿ, ೨೦೧೮ರ ಸಮಯದಲ್ಲಿ ಇವರೆಲ್ಲರ ‘ಅಬ್ಬರ’ದ ಮಹಿಷ ದಸರದ ದೊಂಬರಾಟ ಶುರುವಾಗುವ ಮುಂಚೆಯೇ, ಇನ್ನೊಂದೆಡೆ ಅದರ ಮಹಾ ನಾಟಕ ಶುರುವಾಗಿತ್ತು.

ಅದೆಲ್ಲಿ? ಭಾರತದಲ್ಲಿ ನಡೆಯುವ ತಲೆಬುಡ ಇಲ್ಲದ ಕಾರ್ಯಕ್ರಮ, ಸೆಮಿನಾರುಗಳಿಗೆ ಬೇರು ಯಾವುದು ಹೇಳಿ? ಜೆಎನ್‌ಯು ಅಲ್ಲವೇ? ಕೆಲವರು ಇಲ್ಲಿಗಲ್ಲದೆ
ಮತ್ತೆಲ್ಲಿಗೂ ಹೋಗುವುದಿಲ್ಲ. ಇವರು ೨೦೧೩ ರಲ್ಲಿ ಮಹಿಷನ ಹುತಾತ್ಮ ದಿನವನ್ನು ಶುರುಹಚ್ಚಿ ಕೊಂಡಿದ್ದರು. ಅವರ ಪ್ರಕಾರ ‘ಎಮ್ಮೆಯು ಅಸುರ. ಅಸುರನು ದೇವರಿಗಿಂತ (ಸುರನಿಗಿಂತ) ತುಂಬಾ ವಿಭಿನ್ನ. ದೇವರು ಅಂದರೆ, ಬ್ರಾಹ್ಮಣ ಅಥವಾ ಸ್ವರ್ಣ. ದೇವರು ಕೆಲಸ ಮಾಡುವುದಿಲ್ಲ. ಅಸುರ ಎಂದರೆ, ಕೆಲಸಮಾಡು ವವರು ಎಂದರ್ಥ. ಮಹಿಷಾಸುರ ಎಂದರೆ, ಯಾವ ಜನ ಎಮ್ಮೆಗಳ ಹಿಂದೆ ಇರುತ್ತಾರೋ ಅಥವಾ ಯಾರು ಹಾಲನ್ನು ಮಾರುತ್ತಾರೋ ಅವರು ಎಂದರ್ಥ.

ಅದು ಇವತ್ತಿನ ಪರಿಭಾಷೆಯಲ್ಲಿ ಹಾಲು ಮಾರುವವ. ಅಸುರ ಬದಲಾಗಿ ‘ಅಹುರ್’ ಆಗಿ ಮತ್ತೆ ಮುಂದೆ ‘ಅಹಿರ್’ ಆಗಿದೆ (ಇವತ್ತಿನ ದಿನಗಳ ಹಾಲು ಮಾರುವವರ ಜಾತಿ). ಮಹಿಷಾಸುರ ಅಥವಾ ಎಮ್ಮೆಯ ಹಿಂದೆ ನಿಂತು ಕೆಲಸಮಾಡುವವರು ಬಂಗಾ ಪ್ರದೇಶದಲ್ಲಿ ಪ್ರಾಬಲ್ಯ ಸಾಽಸಿದ್ದಿರಬಹುದು. ಜನಾಂಗೀಯವಾಗಿ ಅವರೆಲ್ಲರೂ ದ್ರಾವಿಡರಾಗಿರಬೇಕು. ಹಾಗೆಯೇ ಅವರೆಲ್ಲರೂ ಆರ್ಯ ಸಂಸ್ಕೃತಿಯ ವಿರೋಧ ಮಾಡಿರಬೇಕು. ಬಂಗಾ ಪ್ರದೇಶದಲ್ಲಿ (ಇವತ್ತಿನ ಬಂಗಾಳ) ವೇಶ್ಯೆಯರು, ದುರ್ಗಾ ಳನ್ನು ತಮ್ಮ ಕುಲದವಳು ಎಂದು ಉಲ್ಲೇಖಿಸಿ ಕೊಳ್ಳುತ್ತಾರೆ. ಈಗಲೂ ದುರ್ಗಾ ಮೂರ್ತಿ ಯನ್ನು ಮಾಡಬೇಕಾದರೆ, ಅದರ ಮಣ್ಣನ್ನು
ವೇಶ್ಯಾಗೃಹದಿಂದಲೇ ತರಬೇಕಾಗುತ್ತದೆ.

ಮಹಿಷಾಸುರನನ್ನು ಕೊಲ್ಲಲು ದುರ್ಗಾಳಿಗೆ ೯ ದಿನಗಳು ಬೇಕಾಗುತ್ತವೆ. ಅವಳನ್ನು ಕಳುಹಿಸಿದ ಬ್ರಾಹ್ಮಣರು, ಉಸಿರನ್ನು ಬಿಗಿಹಿಡಿದು ೯ ದಿನಗಳವರೆಗೆ ಕಾದರು. ಅದು ಅವರಿಗೆ ಅತ್ಯಂತ ಕಷ್ಟದಾಯಕ ಕೆಲಸವಾಗಿತ್ತು. ಬಲದಿಂದಾಗಲಿಲ್ಲ ವೆಂದರೆ, ವಂಚನೆ. ಅಂದರೆ ವಂಚನೆಯ ಬಲ. ೯ನೇ ದಿನ ದುರ್ಗಾಳಿಗೆ ಯಶಸ್ಸು ದಕ್ಕುತ್ತದೆ, ಅಂದರೆ ಅವಳು ಮಹಿಷಾಸುರನ್ನು ಕೊಲ್ಲುತ್ತಾಳೆ. ಆ ಸುದ್ದಿ ಕೇಳಿದ ತಕ್ಷಣ ಆರ್ಯನ್ನರು (ಬ್ರಾಹ್ಮಣರು) ಆತುರದಿಂದ, ಅಲ್ಲಿದ್ದ ಮಹಿಷಾಸುರನ ಎಲ್ಲ ಜನರ ಶಿರಚ್ಛೇದನ ಮಾಡಿದರು.

ಅದೇ ಶಿರಗಳಿಂದ ಹಾರವನ್ನು ಮಾಡಿ, ಆ ಹಾರವನ್ನು ದುರ್ಗಾಳ ಕುತ್ತಿಗೆಗೆ ಹಾಕಿದರು. ಇಂದ್ರನಿಗೂ ದುರ್ಗಾ ಮಾಡಿದ್ದನ್ನು ಮಾಡಲಾಗಿರಲಿಲ್ಲ. ಹಾಗೆಯೇ, ನರ ಮೇಧದಿಂದ ವಿಚಲಿತ ಳಾದ ದುರ್ಗಾ ನದಿಗೆ ಹಾರಿ ಪ್ರಾಣವನ್ನು ಬಿಡುತ್ತಾಳೆ. ಅದಕ್ಕಾಗೇ, ದುರ್ಗಾ ಮೂರ್ತಿ ಯನ್ನು ನದಿಯಲ್ಲಿ ವಿಸರ್ಜನೆ ಮಾಡುವ ಸಂಸ್ಕೃತಿ ಹುಟ್ಟಿದ್ದು. ಈ ಹಬ್ಬದಲ್ಲಿ ಸ್ಥಳೀಯರ ನರಮೇಧವನ್ನು ಆಚರಿಸಲಾಗುತ್ತದೆ. ಇದು ಬೇರೆ ಯಾವ ಧರ್ಮದಲ್ಲೂ ಇಲ್ಲದಂಥ ಆಚರಣೆ. ಇದು ಜಾತಿಗಳ ಮೇಲೆ ನಡೆದ ಹಿಂಸೆ ಮತ್ತು ದ್ವೇಷವನ್ನು ಸಮರ್ಥಿಸಿಕೊಳ್ಳುತ್ತದೆ. ಈ ಹಬ್ಬವನ್ನು ನಮ್ಮ ದೇಶದಲ್ಲಿ ನಿಷೇಧ ಮಾಡಬೇಕು’. ಈ ಮಾತುಗಳನ್ನು ಪ್ರೇಮ್ ಕುಮಾರ್ ಮಣಿ ಬರೆದಿದ್ದು. ಇವರು ಮೊದಲು ಕಮ್ಮುನಿಸ್ಟರ ಜತೆಗಿದ್ದು ಮತ್ತೆ ಲಾಲೂ ಪ್ರಸಾದ್ ಯಾದವ್ ಜತೆ ಸೇರಿದವರು. ಈಗೆಲ್ಲಿದ್ದಾರೋ ಗೊತ್ತಿಲ್ಲ.

ಇಂಥ ಹಿಂದೂ ದ್ವೇಷವನ್ನು, ಪುರಾಣಗಳ ಮೇಲೆ ಅವಹೇಳನಕಾರಿ ಹೇಳಿಕೆ ಕೊಡುವುದನ್ನು ಈ ಬುದ್ಧಿಜೀವಿಗಳು(?!) ಇಂದಿಗೂ ಬಿಟ್ಟಿಲ್ಲ. ಇಂಥವರದ್ದೇ ಭಾಗವಾಗಿ, ಮೊನ್ನೆ ತಮಿಳುನಾಡಿನ ಎರಡು ಸಿಎಂ ಕಂಡ ಮನೆಯಲ್ಲಿ ಹುಟ್ಟಿ, ಮುಂದೆ ತಾನೂ ಮುಖ್ಯಮಂತ್ರಿ ಆಗಬೇಕೆಂದು ಕನಸು ಕಾಣುತ್ತಿರುವ
ಉದಯನಿಧಿ ಸ್ಟಾಲಿನ್ ಮತ್ತವನ ಗ್ಯಾಂಗ್, ‘ಪ್ರಗತಿ’ ಎನ್ನುವ ಪದದ ಅರ್ಥವೇ ಗೊತ್ತಿರದ ಪ್ರಗತಿಪರರು, ಸ್ಮಶಾನದಲ್ಲಿ ಊಟ ಮಾಡುವವರು. ಕೆಂಪುಬಟ್ಟೆ ಹಾಕಿರುವ ಸನ್ಯಾಸಿಗಳು, ಇನ್ನೂ ಹಲವಾರು ಪ್ರಭೃತಿಗಳು, ಸಾದಾ ಮನುಷ್ಯನಿಂದ ಯೋಚಿಸುವುದಕ್ಕೂ ಆಗದ ವಿಚಾರಗಳನ್ನು ತಂದು ಜನರ ಮುಂದೆ
ಇಡುವ, ಇಡೀ ಪ್ರಪಂಚದಲ್ಲಿ ತಮ್ಮದೇ ಆದ ಎಡಬಿಡಂಗಿ ಪರಂಪರೆಯನ್ನು ಬಿತ್ತರಿಸುತ್ತಾ ಬಂದಿದ್ದಾರೆ.

ವೆಂಡಿ ಡೊನಿಗರ್‌ಳ ‘ಮಕ್ಕಳು’, ಬೌದ್ಧರ ಹೆಸರಿನಲ್ಲಿ ಹಾರಾಡುತ್ತಿರುವ ಕೆಲ ವ್ಯಕ್ತಿಗಳೆಲ್ಲ ಸೇರಿ, ತಮ್ಮದೇ ಒಂದು ಬ್ರ್ಯಾಂಡ್ ಮಾಡಿ, ಕೆಲದಿನಗಳವರೆಗೂ ಸುಖಾಸುಮ್ಮನೆ ಏನೇನನ್ನೋ ಹಬ್ಬಿಸಿ, ವಾತಾವರಣವನ್ನು ಬಿಗಿಯಾಗಿಸುವುದು, ತಮ್ಮ ಹಿಂದೂ ಫೋಬಿಯಾವನ್ನು ಬಿತ್ತರಿಸುವುದು, ನಮ್ಮ ಸಂಸ್ಕೃತಿಯನ್ನು
ತಮ್ಮದೇ ಆದ ಹೊಲಸು ನಿರೂಪಣೆಗಳಲ್ಲಿ ಪುಸ್ತಕಗಳನ್ನೂ ಬರೆಯುವುದು, ತಮ್ಮನ್ನೇ ತಾವು ಸಂಶೋಧಕ, ಬುದ್ಧಿಜೀವಿ, ಪ್ರಗತಿಪರ, ಮೌಢ್ಯ ವಿರೋಧಿಯೆಂಬ ಬಿರುದುಗಳನ್ನು ಕಟ್ಟಿಕೊಂಡು ಯಾರ ಜತೆಗೂ ಚರ್ಚೆ ಮಾಡದೇ, ತಮ್ಮದೇ ವಿಷಯವನ್ನು ಬಿತ್ತರಿಸುವ ಪತ್ರಿಕೆಗಳಲ್ಲಿ, ಯಾರೂ ಓದದ ಪುಸ್ತಕಗಳಲ್ಲಿ ಉದ್ದುದ್ದ
ಲೇಖನಗಳನ್ನು ಬರೆಯುತ್ತಾರೆ. ಅವರನ್ನು ಒಪ್ಪದವರ ಜತೆಗೆ ಯಾವತ್ತೂ ಈ ಚರ್ಚೆಗೂ ಹೋಗುವುದಿಲ್ಲ, ಹೋದರೂ ತಲೆಬುಡವಿಲ್ಲದ ಸಬೂಬುಗಳು. ಅವರೆಲ್ಲರೂ ಮಾಡುವ ಈ ಅಂಡೆಪಿರ್ಕಿ ವಾದಕ್ಕೆ ಸಾಕ್ಷಿಗಳನ್ನು ಕೇಳಿದರೆ, ಊಹೂಂ ಏನೂ ಇಲ್ಲ.

ಅವರ ಜತೆಗೆ ವಾದ ಮಾಡುತ್ತಿರುವವರು ಸ್ವಲ್ಪ ಸರಿಯಾದ ಪ್ರಶ್ನೆಗಳನ್ನು ಕೇಳಿದರೆ, ಚರ್ಚೆಯನ್ನು ಅರ್ಧಕ್ಕೆ ಬಿಟ್ಟು ಹೋಗುವುದು. ವಾದ ಮಾಡುತ್ತಿದ್ದವನನ್ನು
ಕೋಮುವಾದಿ, ಮೂಢ ಅಂತ ಹೀಗಳೆಯುವುದು. ಹಾಗೇ ಈ ಎಲ್ಲ ‘ಪ್ರೊಫೆಸರ್, ಡಾಕ್ಟರ್ ಮುಂತಾದ ಹೆಸರಿನಿಂದ ಕರೆದುಕೊಳ್ಳುವ ಇವರುಗಳು’ ತಮ್ಮ ತಲೆಬುಡ ಇಲ್ಲದ ಸಿದ್ಧಾಂತ-ಇತಿಹಾಸವನ್ನು ಎಲ್ಲಿಯೂ ಸಾಬೀತು ಮಾಡಲಿಕ್ಕೆ ಹೋಗಿಲ್ಲ. ಅದು ಯಾವ ಅಂತಾರಾಷ್ಟ್ರೀಯ ಬಿಡಿ, ಕಾಲೇಜು ಜರ್ನಲ್ ಗಳಲ್ಲೂ ಅಚ್ಚಾಗಿಲ್ಲ. ಅಲ್ಲಿಗೆ ಕಳುಹಿಸಿದ್ದರೂ ಅವರು ಉಗಿದು ಕಸದಬುಟ್ಟಿಗೆ ಹಾಕಿರಬಹುದು!

ಇಷ್ಟೆಲ್ಲ ಮಾಡಿದ ಮೇಲೆ ಇವರು ಸಾಧಿಸುವುದಾದರೂ ಏನು? ಇಡೀ ದೇಶವೇ ಒಂದುಗೂಡಿ ಹಬ್ಬವನ್ನು ಆಚರಿಸುವಾಗ, ಇವರೇಕೆ ಇಲ್ಲದಿರೋ ರಗಳೆಗಳನ್ನು ಶುರುಮಾಡುವುದು? ಏನನ್ನಾದರೂ ಕೇಳಿದರೆ, ಬ್ರಾಹ್ಮಣರ ಅಟ್ಟಹಾಸ, ಆರ್ಯನ್ -ದ್ರಾವೆಡಿಯನ್ ಸಿದ್ಧಾಂತ ಅಂತ ಹೇಳುತ್ತಾರೆ. ಆದರೆ, ಅದೇ ಆರ್ಯನ್ ಸಿದ್ಧಾಂತದ ಪ್ರಕಾರ, ‘ಅಸುರರನ್ನು ಭಾರತದ ಹೊರಗಡೆ ಪೂಜಿಸುತ್ತಿದ್ದರು. ಅದನ್ನು ಭಾರತಕ್ಕೆ ತಂದದ್ದು ಇಂಡೋ ಆರ್ಯನ್ನರು’ ಎನ್ನುವ ವಿಷಯವಾದರೂ
ಇವರಿಗೆ ಗೊತ್ತೇ? ಮಾತೆತ್ತಿದರೆ, ಅಂಬೇಡ್ಕರ್ ಹೆಸರೇಳುವ ಇವರಿಗೆ, ಅದೇ ಅಂಬೇಡ್ಕರ್ ಆರ್ಯರ ಆಕ್ರಮಣದ ಸಿದ್ಧಾಂತವನ್ನು ಒಪ್ಪಿದ್ದಿಲ್ಲ ಎನ್ನುವ ಸಣ್ಣ ವಿಷಯವಾದರೂ ಗೊತ್ತಿದೆಯೇ? ಎಲ್ಲದಕ್ಕಿಂತ ಹೆಚ್ಚಾಗಿ ಇವರಲ್ಲಿ ಹೆಚ್ಚಿನವರು ಕಾಲೇಜುಗಳಲ್ಲಿ ಪ್ರೊಫೆಸರ್‌ಗಳಾಗಿದ್ದವರು. ಅವರು ಪಾಠ ಮಾಡಿದ್ದನ್ನು ಕೇಳಿಸಿಕೊಂಡ, ಅವರ ವಿದ್ಯಾರ್ಥಿಗಳ ಮೇಲೆ ಕನಿಕರ ಬರುತ್ತಿದೆ. ಏಕೆಂದರೆ, ಅಂಥವರ ಪಾಠವನ್ನೂ ಕೇಳಿಸಿಕೊಂಡಿದ್ದರಲ್ಲ!

ಅಷ್ಟಕ್ಕೂ, ವಿಜಯದಶಮಿ ಎಂದರೆ ಎಲ್ಲರಿಗೂ ಗೊತ್ತು- ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ, ಅಧರ್ಮದ ಮೇಲೆ ಧರ್ಮದ ವಿಜಯವಾದ ದಿನ ಅಂತ. ಹಣೆತುಂಬ ಕುಂಕುಮ ಹಚ್ಚಿ, ಪ್ರತಿದಿನ ದೇವಸ್ಥಾನಕ್ಕೆ ಹೋಗಿ ಪೂಜೆಸಲ್ಲಿಸುವ ಅವರ ಮಡದಿಯೇ ಅದನ್ನು ಹೇಳುತ್ತಾರೆ. ಬೇಕಾದರೆ, ಭಗವಾನ್ ಹೋಗಿ ಕೇಳಲಿ. ಆದರೆ, ಇಷ್ಟೊಂದು ಮಹತ್ವವಾದ, ಎಲ್ಲರೂ ಅಪ್ಪಿಕೊಂಡು ಸಾಮರಸ್ಯದಿಂದ ಆಚರಿಸುವ ಹಬ್ಬದ ದಿನ ರಾಕ್ಷಸತ್ವವನ್ನು ಪೂಜೆ ಮಾಡುವ ಇಂಥ ಎಡಬಿಡಂಗಿತನವನ್ನು ವಿಕೃತಿ ಎನ್ನದೆ ಮತ್ತೇನು ಹೇಳಿಯಾರು? ಪ್ರಗತಿಯ ಹೆಸರಲ್ಲಿ ದೇಶವನ್ನು ಹಿಂದಕ್ಕೆ, ಸುಳ್ಳಿನೆಡೆಗೆ ತೆಗೆದುಕೊಂಡು ಹೋಗುವ
ಮೂಢತನವನ್ನು ಜನರ ಮೇಲೆ ಹೇರುವುದು ಏಕೆ? ಚಂದ್ರಯಾನ, ಮಂಗಳಯಾನದ ನಡುವಿನ ವ್ಯತ್ಯಾಸ ಗೊತ್ತಿರದ ಇಂಥವರಿಂದ ಯಾರು ತಾನೇ
ಪ್ರಗತಿ ಹೊಂದುತ್ತಾರೆ? ಅಷ್ಟಕ್ಕೂ ಪ್ರಗತಿಯ ಹೆಸರಿನಲ್ಲಿ ನಡೆಯುತ್ತಿರುವ ಇಂಥ ದೊಂಬರಾಟಗಳಿಗೆ ಕೊನೆ ಯಾವಾಗ?

(ಲೇಖಕರು ಪತ್ರಕರ್ತರು)