ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
‘ರಾಜ್ಯಗಳ ಪುನಾರಚನೆ ಕಾಯ್ದೆ ೧೯೫೬’ ಬಂದ ತರುವಾಯ ಮೈಸೂರು ರಾಜ್ಯದ ದೇವಾಲಯಗಳ ಆಡಳಿತದಲ್ಲಿ ಏಕರೂಪ ವ್ಯವಸ್ಥೆಯನ್ನು ತರಲು ೧೯೬೩ ಮತ್ತು ೧೯೭೭ರಲ್ಲಿ ಎರಡು ಬಾರಿ ವಿಫಲ ಪ್ರಯತ್ನವಾಗುತ್ತವೆ. ಕರ್ನಾಟಕವು ರಾಜ್ಯವಾಗಿ ರಚನೆಯಾದ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಸಂಸ್ಥೆಗಳಿಗೆ ಏಕರೂಪ ಕಾಯ್ದೆಯಿರಲಿಲ್ಲ. ಹೈದರಾಬಾದ್ ಕರ್ನಾಟಕದಲ್ಲಿ ಒಂದು ಕಾನೂನು ಇದ್ದರೆ ಮೈಸೂರು ಮತ್ತು ಕೂರ್ಗ್‌ನಲ್ಲಿ ಬೇರೆಯ ಕಾನೂನು ಅನ್ವಯವಾಗುತ್ತಿತ್ತು.
೧೯೮೦ರಲ್ಲಿ ಈ ವ್ಯತ್ಯಾಸಗಳನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯವು ಏಕರೂಪ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ದೇಶಿಸಿತು. ತೀರ್ಪು ಬಂದ ಹದಿನೇಳು ವರ್ಷ ಗಳ ತರುವಾಯ ೧೯೯೭ರಲ್ಲಿ ಹಿಂದೂ ಧಾರ್ಮಿಕ ಸಂಸ್ಥೆ ಗಳು ಮತ್ತು ದತ್ತಿ ಕಾಯ್ದೆ ಜಾರಿಗೆ ಬಂದಿತು. ಸಿಖ್ಖ್, ಬೌದ್ಧ, ಜೈನರ ಪದ್ಧತಿ ಯು ಬೇರೆಯಾಗಿದೆ ಎಂಬ ಕಾರಣ ನೀಡಿ ಅವುಗಳನ್ನು ಕಾಯ್ದೆಯಿಂದ ಹೊರಗಿಡಲಾಯಿತು. ರಾಜ್ಯದ ೩೪,೦೦೦ ಹಿಂದೂ ದೇವಾಲಯಗಳನ್ನು ಮಾತ್ರ ೯೭ರ ಕಾಯ್ದೆಯ ವ್ಯಾಪ್ತಿಗೆ ತರಲಾಯಿತು.
ಕಾಯ್ದೆಯಲ್ಲಿ ಕಾಮನ್ ಪೂಲ್‌ಗೆ ಶೇ.೫ರಷ್ಟು ಹಣವನ್ನು ವರ್ಗಾಯಿಸುವ ಅಽಕಾರ ನೀಡಲಾಯಿತು. ದೇವಸ್ಥಾನಗಳ ನಿರ್ವಹಣೆಯನ್ನು ಮುಜರಾಯಿ ವ್ಯಾಪ್ತಿಗೆ ತಂದು ಪ್ರತ್ಯೇಕ ಸಚಿವಾಲಯವನ್ನು ರಚಿಸಲಾಯಿತು. ಸಚಿವರ ನೇತೃತ್ವಕ್ಕೆ ಕಾನೂನಿನ ಒಪ್ಪಿಗೆಯ ಮುದ್ರೆ ನೀಡಲಾಯಿತು. ಈ ಕಾಯ್ದೆಯ ಉದ್ದೇಶಗಳನ್ನು ಪೂರೈಸಲು ನೇಮಕಗೊಂಡ ಅಧಿಕಾರಿಗಳು ಅಥವಾ ನೌಕರರು ಹಿಂದೂ ಧರ್ಮವನ್ನು ಪ್ರತಿಪಾದಿಸುವ ವ್ಯಕ್ತಿಯಾಗಿರಬೇಕು. ಒಂದು ವೇಳೆ ಅವರಲ್ಲಿ ಯಾರಾದರೂ ತಮ್ಮ ಧರ್ಮ ಬದಲಾಯಿಸಿದರೆ ತಮ್ಮ ಅಧಿಕಾರವನ್ನು ತ್ಯಜಿಸ ಬೇಕಾಗುತ್ತದೆ. ದೇವಸ್ಥಾನಗಳ ಹಣವನ್ನು ಇತರ ಧರ್ಮೀಯರಿಗೆ ಬಳಸುವುದು ನಿಷಿದ್ಧ. ಹಿಂದೂಗಳು ಮಾತ್ರ ಇದರ ಕಾರ್ಯ ನಿರ್ವಹಣೆ ಮಾಡಬೇಕು.
ಅನ್ಯ ಕೋಮಿನ ಜಿಲ್ಲಾಧಿಕಾರಿ ಅಥವಾ ಆಯುಕ್ತರಿದ್ದರೆ ಪರ್ಯಾಯವಾಗಿ ದೇವಸ್ಥಾನದ ಹೊಣೆಯನ್ನು ಹಿಂದೂ ಅಧಿಕಾರಿಗಳಿಗೆ ನೀಡಬೇಕು.
ಕಾಮನ್ ಪೂಲ್‌ನ ಹಣದಲ್ಲಿ ಸರಕಾರ ಆರ್ಥಿಕವಾಗಿ ದುರ್ಬಲವಾಗಿರುವ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ನೀಡಬಹುದು. ಧಾರ್ಮಿಕ ತತ್ವಗಳ ಪ್ರಚಾರಕ್ಕೆ ಹಣ ಬಳಕೆ ಮಾಡಬೇಕು. ಅನಾಥ ಹಿಂದೂ ಮಕ್ಕಳ ಪೋಷಣೆಗಾಗಿ ಅನಾಥಾಶ್ರಮ ಪ್ರಾರಂಭಿಸಬೇಕು. ಯಾತ್ರಾರ್ಥಿಗಳಿಗೆ ಆಸ್ಪತ್ರೆ ಮತ್ತು ಔಷಧಾಲಯ ಸ್ಥಾಪನೆ ಮಾಡಬೇಕು. ಸರಕಾರ ಕಾಮನ್ ಪೂಲ್ ಹಣದಿಂದ ಆರಂಭಿಸಿರುವ ಅನಾಥಾಶ್ರಮ ಮತ್ತು ಆಸ್ಪತ್ರೆಗಳ ವಿವರ
ಪ್ರಕಟಿಸಬೇಕು ಎಂಬ ನಿಬಂಧನೆಗಳಿದ್ದವು.
೨೦೦೩ರಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆ ೧೯೯೭ ಅಧಿಕೃತವಾಗಿ ಕಾಯ್ದೆಯಾಗಿ ಆದೇಶ ಹೊರ ಬೀಳುತ್ತದೆ. ಈ ಕಾಯ್ದೆಯನ್ನು ಸಹಸ್ರಲಿಂಗೇಶ್ವರ ದೇವಾಲಯದವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಾರೆ. ‘ಕಾಯ್ದೆಯು ಸಂವಿಧಾನದ ಆರ್ಟಿಕಲ್ ೧೪, ೨೫ ಮತ್ತು ೨೬ನ್ನು ಉಲ್ಲಂಸುತ್ತದೆ. ಸರಕಾರವು ಕೇವಲ ಹಿಂದೂ ಮಂದಿರದ ಮೇಲೆ ನಿಯಂತ್ರಣ ಸಾಧಿಸುತ್ತಿದೆ. ಈ ಕಾಯ್ದೆಯ ವ್ಯಾಪ್ತಿಯಿಂದ ಸಿಖ್ಖ್, ಬೌದ್ಧ, ಜೈನರನ್ನು ಹೊರಗಿಟ್ಟು ಸರಕಾರವು ಸಂವಿಧಾನದ ಪರಿಚ್ಛೇಧ ೧೪ರ ಉಲ್ಲಂಘನೆ ಮಾಡಿದೆ’ ಎಂದು ಅರ್ಜಿ ಸಲ್ಲಿಸುತ್ತಾರೆ.
ಭಾರತದ ಸಂವಿಧಾನದ ೧೪ನೇ ವಿಧಿಯನ್ವಯ ಪ್ರತಿಯೊಬ್ಬ ವ್ಯಕ್ತಿಗೆ ಕಾನೂನಿನ ಎದುರು ಸಮಾನತೆಯನ್ನು, ಸಮಾನ ರಕ್ಷಣೆಯನ್ನು ಕೊಡಬೇಕು. ಹಾಗೆಯೇ ಆರ್ಟಿಕಲ್ ೨೫ ಪ್ರತಿಯೊಬ್ಬ ವ್ಯಕ್ತಿಗೂ ಧಾರ್ಮಿಕ ಸ್ವಾತಂತ್ರ ವನ್ನು ನೀಡುತ್ತದೆ ಮತ್ತು ಆರ್ಟಿಕಲ್ ೨೬ ಆಯಾ ಧರ್ಮ ದವರು ತಮ್ಮ ಧರ್ಮದ ನಿರ್ವಹಣೆಯನ್ನು ತಾವೇ ಕೈಗೊಳ್ಳುವ ಹಕ್ಕನ್ನು ಸಂವಿಧಾನದಲ್ಲಿ ನೀಡಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡದ ಪೀಠವು ೨೦೦೬ರಲ್ಲಿ ಸಂವಿಧಾನದ ಪರಿಚ್ಛೇಧ ೧೪ ಮತ್ತು ೨೬ರ ಉಲ್ಲಂಘನೆಯ ಕಾರಣಕ್ಕೆ ಈ ಸಂಪೂರ್ಣ ಕಾಯ್ದೆಯನ್ನು ಮತ್ತು ಇದರ ಅನುಷ್ಠಾನದ ಆದೇಶವನ್ನು ಅಸಾಂವಿಧಾನಿಕ ಎಂದು ರದ್ದು ಮಾಡುತ್ತದೆ. ಈ ತೀರ್ಪಿನ ವಿರುದ್ದ ರಾಜ್ಯ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ೨೦೦೬ರಲ್ಲಿ ಹೈಕೋರ್ಟಿನ ತೀರ್ಪಿಗೆ ತಡೆ ಪಡೆಯುತ್ತದೆ. ಮುಂದಿನ ತೀರ್ಮಾನವಾಗುವ ತನಕ ಕಾಯ್ದೆಯು ಜಾರಿಯಲ್ಲಿರುತ್ತದೆ ಎಂದು ನ್ಯಾಯಾ
ಲಯವು ಆದೇಶಿಸಿದೆ.
ಈಗಿನ ವಿವಾದವು ದೇವಸ್ಥಾನಗಳ ಹಣವನ್ನು ಕಾಮನ್ ಪೂಲ್‌ಗೆ ವರ್ಗಾಯಿಸುವ ಕುರಿತಾಗಿದೆ. ೧೯೯೭ರ ಧಾರ್ಮಿಕ ದತ್ತಿ ಕಾಯ್ದೆಯಡಿಯಲ್ಲಿ ಕಾಮನ್ ಪೂಲ್‌ನ ಹಣವನ್ನು ಆರಾಧನಾ ಯೋಜನೆಗೆ ವರ್ಗಾಯಿಸುವ ಅಧಿಕಾರವನ್ನು ನೀಡಲಾಗಿದೆ. ೧೯೯೧-೯೨ನೇ ಸಾಲಿನಿಂದ ಆರಾಧನಾ ಯೋಜನೆಯು ಜಾರಿಯಲ್ಲಿದ್ದು, ಅಲ್ಪಸಂಖ್ಯಾತರ ಕೋಮುಗಳಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಆಂಗ್ಲೋ ಇಂಡಿಯನ್ನರ ಆರಾಧನಾ ಸ್ಥಳಗಳಿಗೂ ಈ ಯೋಜನೆ ಯನ್ನು ವಿಸ್ತರಿಸಲಾಗಿದೆ. ಆರಾಧನಾ ಯೋಜನೆಯ ಅನುಷ್ಠಾನವನ್ನು ಸರಕಾರದ ಮಾರ್ಗಸೂಚಿಗಳನ್ವಯ ಜಾರಿಗೊಳಿಸ
ಬೇಕಾಗುತ್ತದೆ ಎನ್ನುತ್ತಾರೆ ಹಿಂದೂ ದೇವಾಲಯ ಸಂರಕ್ಷಣೆ ಯಲ್ಲಿ ಮತ್ತು ಹಿಂದೂ ಧಾರ್ಮಿಕ ಹಿತವನ್ನು ಕಾಪಾಡುವಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುವ ವಿಶ್ವ ಹಿಂದೂ ಪರಿಷದ್‌ನ ಗಿರೀಶ್ ಭಾರದ್ವಾಜ್.
ಮಂದಿರದ ಹಣ ಹೇಗೆ ಇತರ ಕೋಮುಗಳಿಗೂ ವೆಚ್ಚವಾಗುತ್ತದೆ ಎಂಬುದನ್ನು ಇವರು ದಾಖಲೆ ಸಮೇತ ಸಾಬೀತುಪಡಿಸುತ್ತಾರೆ. ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಂದ ಸಂಗ್ರಹ ವಾಗುವ ನೂರಾರು ಕೋಟಿ ಹಣವು ಸರಕಾರದ ಬೊಕ್ಕಸಕ್ಕೆ ಜಮೆಯಾಗುತ್ತಿದೆ. ಆದರೆ ಸರಕಾರ ಮಂದಿರಗಳ ಅಭಿ
ವೃದ್ಧಿಗೆ ನೀಡಿರುವ ಅನುದಾನ ಕೇವಲ ನೂರು ಕೋಟಿ ಮಾತ್ರ. ಕೇವಲ ಹಿಂದೂ ದೇವಸ್ಥಾನಗಳಿಂದ ಸರಕಾರಕ್ಕೆ ಆದಾಯ ಬರುವುದಿಲ್ಲ; ಧಾರ್ಮಿಕ ಪ್ರವಾಸೋದ್ಯಮ ದಿಂದ, ಯಾತ್ರಾರ್ಥಿಗಳ ಪ್ರಯಾಣ, ಊಟ, ವಸತಿ ಮತ್ತು ಮಂದಿರವಿರುವ ಸ್ಥಳದಲ್ಲಿ ಮಾಡುವ ಖರೀದಿಯಿಂದ ಕೋಟ್ಯಂತರ ಹಣವು ತೆರಿಗೆ ರೂಪದಲ್ಲಿ ಸಂದಾಯ ವಾಗುತ್ತಿದೆ.
೨೦೧೩ರಿಂದ ೨೦೧೮ರ ತನಕ ಮಸೀದಿ, ಚರ್ಚ್‌ಗಳಿಗೆ ಹಣ ವನ್ನು ನೀಡಲಾಗುತ್ತಿತ್ತು. ಬಿಜೆಪಿ ಸರಕಾರದ ಅವಧಿಯಲ್ಲಿ ಇದನ್ನು ತಡೆಯಲಾಯಿತು. ವಕ್ ಅಥವಾ ಚರ್ಚ್‌ಗಳಿಂದ ಸರಕಾರಕ್ಕೆ ನಯಾಪೈಸೆಯಷ್ಟು ಆದಾಯವಿಲ್ಲದಿದ್ದರೂ ಹತ್ತಾರು ಕೋಟಿ ರು. ಹಣವನ್ನು ಅವುಗಳ ಅಭಿವೃದ್ಧಿಗೆ ಮುಂಗಡ
ಪತ್ರದಲ್ಲಿ ಮೀಸಲಿಡಲಾಗುತ್ತದೆ. ಈ ಬಾರಿಯ ಮುಂಗಡ ಪತ್ರದಲ್ಲಿ ವಕ್ ಆಸ್ತಿಗಳ ಸಂರಕ್ಷಣೆಗೆ ೫೦ ಕೋಟಿ ರು. ಮೀಸಲಿಡಲಾಗಿದೆ. ವಕ್ಫ್ ಆಸ್ತಿಯ ಒಂದು ಇಂಚಿನಷ್ಟು ಭಾಗದ ಮೇಲೂ ಸರಕಾರಕ್ಕೆ ಅಧಿಕಾರವಿಲ್ಲ ಮತ್ತು ಸರಕಾರಕ್ಕೆ ಒಂದು ಪೈಸೆ ಆದಾಯವೂ ಬರುವುದಿಲ್ಲ. ಆದರೂ ತನ್ನದಲ್ಲದ ಆಸ್ತಿಯ ಮೇಲೆ ತೆರಿಗೆದಾರರ ಹಣವನ್ನು ಪೋಲು ಮಾಡುವ ಸಂವಿಧಾನ ವಿರೋಧಿ ೫೦ ಕೋಟಿ ರು. ಯೋಜನೆ ಜಾರಿಗೆ ಮುಂದಾಗಿದ್ದಾರೆ.
ಕಾನೂನಿಗೆ ವಿರುದ್ಧವಾಗಿ ೨೦೨೦ರ ತನಕ ೩೧೭ ಮೌಲ್ವಿ ಗಳಿಗೆ ಕಾಮನ್ ಪೂಲ್ ಹಣದಿಂದ ವೇತನ ನೀಡಲಾಗುತ್ತಿತ್ತು. ಭಾವೈಕ್ಯತೆಯ ಹೆಸರಲ್ಲಿ ಸರಕಾರವು ೩೦೦೦ ಮೌಲ್ವಿ ಗಳಿಗೆ ಇಂದಿಗೂ ವೇತನ ನೀಡುತ್ತಿದೆ. ನಾಳೆ ೯೭ರ ಕಾಯ್ದೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದರೆ ಕಾಮನ್
ಪೂಲ್‌ನಿಂದ ಬಳಸಿರುವ ಹಣವನ್ನು ಸರಕಾರ ಹಿಂದಕ್ಕೆ ಹೇಗೆ ಕೊಡಲು ಸಾಧ್ಯ? ಎಂದು ಗಿರೀಶ್ ಭಾರದ್ವಾಜ್ ಪ್ರಶ್ನಿಸುತ್ತಾರೆ.
೧೯೯೭ರ ಧಾರ್ಮಿಕ ದತ್ತಿ ಕಾಯ್ದೆಗೆ ಬಿಜೆಪಿ ಸರಕಾರ ಯಾಕೆ ತಿದ್ದುಪಡಿ ತರಲಿಲ್ಲ ಎಂಬ ಪ್ರಶ್ನೆ ಕೇಳಿಬರುತ್ತದೆ. ಇಡೀ ಕಾಯ್ದೆಯನ್ನೇ ಹೈಕೋರ್ಟ್ ಅಸಿಂಧುಗೊಳಿಸಿ ಸರ್ವೋಚ್ಚ ನ್ಯಾಯಾಲಯವು ಅದರ ಬಗ್ಗೆ ವಿಚಾರಣೆ ನಡೆಸುತ್ತಿದೆ. ಕಾಯ್ದೆಗೆ ತಿದ್ದುಪಡಿ ತರುವುದು ನ್ಯಾಯಾಲಯದ ನಿಂದನೆ ಯಾಗುವ ಕಾರಣದಿಂದ ತಿದ್ದುಪಡಿ ಮಾಡಲಾಗಲಿಲ್ಲ. ಹೆಚ್ಚು ಆದಾಯವಿರುವ ದೇವಸ್ಥಾನಗಳ ಹಣದಿಂದ ಕಡಿಮೆ ಆದಾಯವಿರುವ ದೇವಸ್ಥಾನಗಳ ಅಭಿವೃದ್ಧಿಗೆ ಉಪಯೋಗಿಸಲಾಗುವುದು; ಇದು ದೇವಸ್ಥಾನಗಳಲ್ಲಿ ಮೂಲಭೂತ ಸೌಕರ್ಯ ಯೋಜನೆಗಳಿಗೆ ಉಪಯುಕ್ತವಾಗುವುದು ಎಂಬುದು ರಾಜ್ಯ ಸರಕಾರದ ವಾದ. ಪ್ರತಿಪಕ್ಷ ಗಳು, ‘ಕಾಮನ್ ಪೂಲ್ ಹಣವನ್ನು ಆರಾಧನಾ ಯೋಜನೆಗೆ ಉಪಯೋಗಿಸುವುದರಿಂದ ಇತರ ಕೋಮುಗಳಿಗೂ ಇದರಿಂದ ವೆಚ್ಚವಾಗುತ್ತಿದೆ ಮತ್ತು ಕಾಯ್ದೆಯ ಸಿಂಧುತ್ವ ಪ್ರಶ್ನೆಯಲ್ಲಿರುವುದನ್ನು ಮುಚ್ಚಿಟ್ಟು ಈ ತಿದ್ದುಪಡಿ ತರಲಾಗಿದೆ’ ಎಂದು ವಾದಿಸುತ್ತಿವೆ.
ಮುಜರಾಯಿ ಸಚಿವರು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಕೇವಲ ಹತ್ತು ‘ಎ’ ಶ್ರೇಣಿಯ ದೇವಸ್ಥಾನಗಳು ೨೨-೨೩ರಲ್ಲಿ ೩೮೦ ಕೋಟಿ ರು. ಆದಾಯ ಗಳಿಸಿವೆ. ರಾಜ್ಯದ ಒಟ್ಟು ‘ಎ’ ಮತ್ತು ‘ಬಿ’ ಶ್ರೇಣಿಯ ದೇವಾಲಯಗಳಿಂದ ಸರಕಾರಕ್ಕೆ ೫೦೦ ಕೋಟಿ ರು.ಗೂ ಹೆಚ್ಚು ಆದಾಯ ಬರುತ್ತಿದೆ. ಸಚಿವರ ಮತ್ತೊಂದು ಟ್ವೀಟ್ ಪ್ರಕಾರ, ೫೮೫ ಕೋಟಿ ರು. ಹಣವನ್ನು ದೇವಸ್ಥಾನಗಳ ಅಭಿವೃದ್ಧಿ ಯೋಜನೆಗಳಿಗೆ ನೀಡಲಾಗಿದೆ; ಆದರೆ ಒಂದೇ ಒಂದು ಪೈಸೆ ಸಹಾ ಕಾಮನ್ ಪೂಲ್ ಅಡಿ ಯಲ್ಲಿ ವೆಚ್ಚ ಮಾಡಬೇಕಾದ ಮಾರ್ಗದರ್ಶಿ ಸೂತ್ರದಂತೆ ವೆಚ್ಚವಾಗುತ್ತಿಲ್ಲ.
ರಸ್ತೆ ಮತ್ತು ದೇವಸ್ಥಾನದ ಸುತ್ತಮುತ್ತಲ ಪ್ರದೇಶದ ಮೂಲಭೂತ ಸೌಕರ್ಯದ ಅಭಿವೃದ್ಧಿಯಿಂದ ಸರಕಾರಕ್ಕೆ ಬರುವ ತೆರಿಗೆ ಲಾಭವು ಹಲವು ಕೋಟಿ ದಾಟು ತ್ತದೆ. ಹೀಗಾಗಿ ಮುಂಗಡ ಪತ್ರದ ಅನುದಾನ ದೇವಸ್ಥಾನಕ್ಕಾಗಿ ಬಳಕೆ ಯಾಗುತ್ತಿದೆ ಎನ್ನುವುದು ದಾರಿ ತಪ್ಪಿಸುವ ಹೇಳಿಯಾಗಿದೆ. ಕಾನೂನು ಸಚಿವರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಕಾನೂನು ಇಲಾಖೆಯ ಕಾರ್ಯದರ್ಶಿಗಳು, ಮುಖ್ಯ ಮಂತ್ರಿಗಳಿಗೆ ದಾರಿ ತಪ್ಪಿಸಿದ್ದಾರಾ? ಎಂಬ ಅನುಮಾನ ಉದ್ಭವಿಸುತ್ತದೆ.
ಹಿಂದು ಧಾರ್ಮಿಕ ಸಂಸ್ಥೆ ಮತ್ತು ದತ್ತಿ ಕಾಯ್ದೆ ೧೯೯೭ರ ತಿದ್ದುಪಡಿ ಮಸೂದೆಯು ಕೆಳಮನೆಯಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆಯೂ ಬಹುಮತ ದ ಆಧಾರದ ಮೇಲೆ ಅಂಗೀಕರಿಸಲ್ಪಟ್ಟಿತು. ಆದರೆ ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತದ ಕೊರತೆ ಇರುವ ಕಾರಣ ಅಲ್ಲಿ ಮಸೂದೆಯು ತಿರಸ್ಕೃತಗೊಂಡಿತು. ಸರಕಾರ ಮಸೂದೆ ಯನ್ನು ಮತ್ತೆ ಮಂಡಿಸಿ ಅಂಗೀಕಾರ ಪಡೆದು ತನ್ನ ಹಠ ಸಾಧಿಸಿದೆ. ರಾಜ್ಯ ಸರಕಾರಕ್ಕೆ ಹಿಂದೂ ದೇವಾಲ ಯಗಳ ಅಭಿವೃದ್ಧಿಯು ಮುಖ್ಯವಾದರೆ, ಮಂದಿರಗಳ ಮೇಲಿನ ನಿಯಂತ್ರಣವನ್ನು ಕೈಬಿಡಲಿ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರುವ ಅರ್ಜಿಯನ್ನು ಹಿಂಪಡೆದು ಹಿಂದೂಗಳ ಮಂದಿರ ವನ್ನು ಹಿಂದೂಗಳಿಗೆ ಹಿಂದಿರುಗಿಸುವ ಕೆಲಸಕ್ಕೆ ಮುಂದಾಗಲಿ ಎಂಬುದು ಎಲ್ಲರ ಆಶಯ.
(ಲೇಖಕರು ಬಿಜೆಪಿಯ ಮಾಜಿ ಮಾಧ್ಯಮ ಸಂಚಾಲಕರು)