Monday, 11th November 2024

ಸಭ್ಯತೆ, ಸೌಜನ್ಯಗಳು ನಮ್ಮದಾಗಲಿ !

ಪ್ರಸ್ತುತ 

ಡಾ.ಪುತ್ತೂರಾಯ

ಚಿಕ್ಕ ವಯಸ್ಸಿನಿಂದಲೇ ಶಿಸ್ತು-ಸಭ್ಯತೆ ಅಳವಡಿಸಿಕೊಳ್ಳಬೇಕು. ಪ್ರೌಢ ವಯಸ್ಸಿನಲ್ಲಿ ಇವೆಲ್ಲ ಕಲಿಸುವುದು ಕಷ್ಟ. ಆದ್ದರಿಂದ ಪಾಲಕರು, ಮಕ್ಕಳಿಗೆ ರೋಗ ನಿರೋಧಕ ಲಸಿಕೆಗಳನ್ನು ಕೊಟ್ಟಂತೆ ಸ್ವಚ್ಛತೆ, ಸೌಜನ್ಯಗಳೆಂಬ ಸದ್ಗುಣಗಳನ್ನು ತುಂಬಬೇಕು. ಆಗ ಮಾತ್ರ ಸುಸಂಸ್ಕೃತ ಸಭ್ಯ ಪ್ರಜೆಗಳ ನಿರ್ಮಾಣ ಸಾಧ್ಯ.

ಈ ನಡುವೆ ಕಿರಿಯರಿಂದ ಹಿಡಿದು ಹಿರಿಯರವರೆಗೆ, ಅವಿದ್ಯಾವಂತರಿಂದ ಹಿಡಿದು ವಿದ್ಯಾವಂತರವರೆಗೆ ಅಲ್ಲಲ್ಲಿ, ಆಗಾಗ ಅಸಭ್ಯ ವರ್ತನೆಗಳನ್ನು ಕಾಣು ತ್ತಿರುತ್ತೇವೆ. ಈ ಹಿನ್ನೆಲೆಯಲ್ಲಿ ಸಭ್ಯತೆ-ಸೌಜನ್ಯತೆಗಳ ಪಾಠವನ್ನು ಜನರಿಗೆ ಮತ್ತೆ ಮತ್ತೆ ಜ್ಞಾಪಿಸಿಕೊಡುವ ಅನಿವಾರ್ಯ ಉಂಟಾಗಿದೆ.

ಒಮ್ಮೆ ನಮ್ಮ ಮನೆಗೂ ಬನ್ನಿ ಎಂದು ನಾವೇ ಆಹ್ವಾನಿಸಿದ ಅತಿಥಿ ಮನೆಗೆ ಬಂದಾಗ, ‘ಬಂದಿರಲ್ಲ, ಬನ್ನಿ, ಬನ್ನಿ’ ಎಂದು ಸ್ವಾಗತಿಸುವ ಬದಲು ‘ಹೋ ಬಂದೇ ಬಿಟ್ರಾ’ ಎಂದು ಹೇಳೋದು ಸಭ್ಯತೆಯಲ್ಲ, ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಕುಳಿತುಕೊಳ್ಳುವಂತೆ ಹೇಳಿ ಬಾಯಾರಿಕೆಗೆ ಏನಾದರೂ ತರಲೇ ಎಂದು
ವಿಚಾರಿಸಿಕೊಳ್ಳಬೇಕು. ಅದರ ಬದಲು‘ನೀವು ಕಾಫಿ ಕುಡಿದೇ ಬಂದಿರಬೇಕಲ್ಲ’ ಎಂದು ಹೇಳಿಬಿಟ್ಟರೆ, ಬಂದವರಿಗೆ ಬಾಯಾರಿಕೆ ಆಗಿದ್ದರೂ ಕೇಳಲು ಬಾಯಿಯೇ ಬರುವುದಿಲ್ಲ.

ಮನೆಗೆ ಅತಿಥಿಗಳು ಬಂದಾಗ ಕುಳಿತಲ್ಲಿಂದ ಏಳದಿರುವುದು, ಟಿ.ವಿ ನೋಡುತ್ತಲೋ, ಪೇಪರ್ ಓದುತ್ತಲೋ ಇರುವುದು ಸಭ್ಯತೆಯಲ್ಲ. ಅತಿಥಿಗಳು ಶ್ರೀಮಂತ ರಾಗಲಿ, ಬಡವರಾಗಲಿ, ಎಲ್ಲರನ್ನೂ ಒಂದೇ ತೆರನಾಗಿ, ಉಪಚರಿಸುವುದು, ಪಂಕ್ತಿಭೇದ ಮಾಡದಿರುವುದು, ಅತಿಥಿಗಳ ಎದುರು ಜಗಳ ಮಾಡದಿರುವುದು ಸಭ್ಯ ಅತಿಥೇಯರ ಲಕ್ಷಣ. ಯಾರಿಂದಲಾದರೂ ಆತಿಥ್ಯದ ಆಹ್ವಾನ ಬಂದಾಗ ಬಿಡುವು ಮಾಡಿಕೊಂಡು ಅಲ್ಲಿಗೆ ಹೋಗುವುದು ಶಿಷ್ಟಾಚಾರ.

ಸಾಧ್ಯವಾಗದಿದ್ದಲ್ಲಿ ಅವರಿಗೆ ವಿನಯ ಪೂರ್ವಕವಾಗಿ ಅದನ್ನು ತಿಳಿಸುವುದು ಸಭ್ಯತೆ. ಮಕ್ಕಳಿದ್ದ ಮನೆಗೆ ಹೋಗುವಾಗ ಬರಿಗೈಯಲ್ಲಿ ಹೋಗುವುದು ಸಭ್ಯತೆ
ಯಲ್ಲ. ಊಟಕ್ಕೆ ಉಪ್ಪಿನಕಾಯಿ ಇಲ್ಲವೆಂದು ಗೊಣಗುವು ದಕ್ಕಿಂತ, ಇಷ್ಟೆಲ್ಲ ಇದೆಯಲ್ಲ ಎಂದು ಹೇಳಿ ಅತಿಥೇಯನ ಮುಜುಗರ ದೂರ ಮಾಡುವುದು ಸಭ್ಯತೆ.
ತಮ್ಮ ಮಗನ ಮದುವೆಗೆ ಆಮಂತ್ರಿಸಲು ಮರೆತ ಮಿತ್ರನನ್ನು ಎಲ್ಲರೆದುರು ಆರೋಪಿಸೋದಕ್ಕಿಂತ ಕೆಲಸದೊತ್ತಡದಲ್ಲಿ ಹೀಗಾಗಿರಬಹುದೆಂದು ತಿಳಿದು, ಆತನನ್ನು ಮುಜುಗರಕ್ಕೆ ಈಡು ಮಾಡದಿರೋದು ಸಭ್ಯತೆ.

ನಮ್ಮ ಹುಟ್ಟುಹಬ್ಬಕ್ಕೆ, ಹೊಸ ವರುಷಕ್ಕೆ ಶುಭಾಶಯ ಕೋರಿದವರಿಗೆ ಪ್ರತಿಯಾಗಿ ಶುಭಾಶಯ ತಿಳಿಸಬೇಕು. ಜಯಶೀಲರಾದವರಿಗೆ, ಸಾಧಕರಿಗೆ ದೂರವಾಣಿ ಇಲ್ಲವೇ ಪತ್ರ ಮುಖೇನ ಅಭಿನಂದಿಸಬೇಕು. ಯಾವುದೇ ವ್ಯಕ್ತಿಯ ಪರಿಚಯ ಹೇಳುವಾಗ ಕುಳ್ಳಗೆ ಇಲ್ಲವೇ ಕಪ್ಪಗೆ ಇದ್ದಾನಲ್ಲ ಅವನು ಎಂದೋ, ಕಣ್ಣು ಕಾಣ ದವನನ್ನು ಕುರುಡನೆಂದೂ, ಕಿವಿ ಕೇಳದವನನ್ನು ಕೆಪ್ಪನೆಂದು, ಕಾಲು ಸರಿ ಇಲ್ಲದವರನ್ನು ಕುಂಟನೆಂದು ಸಂಬೋಧಿಸೋದು ತರವಲ್ಲ. ಅವರೆಲ್ಲ ಅಂಗಾಂಗ
ವಿಕಲರು ಅಷ್ಟೇ. ವ್ಯಕ್ತಿಯಲ್ಲಿರುವ ವಿಶೇಷವಾದ ಗುಣ ಸ್ವಭಾವದ ಮೂಲಕ ಅವರನ್ನು ಗುರುತಿಸುವುದು ಸುಸಂಸ್ಕೃತವಾದ ನಡವಳಿಕೆ. ಗೆಲವು ಸಾಧಿಸಿರುವ
ವ್ಯಕ್ತಿಗಿಂತ ಸೋಲುಂಡ ವ್ಯಕ್ತಿಗೆ, ನಮ್ಮ ಸ್ನೇಹ-ಸಾಂತ್ವನದ ಅವಶ್ಯಕತೆ ಹೆಚ್ಚಿಗೆ ಇರುತ್ತದೆ. ಅಂಥವರಿಗೆ ಸಾಂತ್ವನ ಹೇಳುವುದು ಸಭ್ಯತೆ.

ಯಾವುದಾದರೂ ಆಫೀಸಿಗೆ ಅಥವಾ ಕೊಠಡಿಗೆ ದಿಢೀರ್ ನುಗ್ಗಿ ಕುರ್ಚಿ ಎಳೆದು ಕುಳಿತುಕೊಳ್ಳುವುದು ಸಭ್ಯತೆಯಲ್ಲ. ಒಳಗೇ ಬರಲೇ ಎಂದು ವಿಚಾರಿಸಿಯೇ
ಒಳಗೆ ಹೋಗಬೇಕು ಹಾಗೂ ಅವರು ಇಚ್ಛಿಸಿದರೆ ಮಾತ್ರ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು. ತಮ್ಮನ್ನು ಭೇಟಿ ಮಾಡಲು ಬಂದವರನ್ನೆಲ್ಲ ಕುಳಿತುಕೊಳ್ಳಿ ಎಂದು ಹೇಳುವುದು ಒಳಗೆ ಕುಳಿತುಕೊಂಡವರ ಸಭ್ಯತೆಯೂ ಹೌದು. ಇನ್ನು ಯಾರನ್ನಾದರೂ ಮಾತನಾಡಿಸುವಾಗ ಅವರ ಜಾತಿ, ಮತ, ವೇತನ ಮುಂತಾದ ವೈಯುಕ್ತಿಕ ವಿಚಾರಗಳನ್ನು ಕೇಳುವುದು ಸಭ್ಯತೆ ಎನಿಸಲಾರದು.

ಮಾತುಕತೆಯ ವೇಳೆ ಇತರರಿಗೂ ಮಾತನಾಡಲು ಅವಕಾಶ ನೀಡುತ್ತಾ ಅವರು ಹೇಳಿದ್ದನ್ನು ಕೇಳಿಸಿಕೊಳ್ಳುವುದು ನಾಗರಿಕತೆ. ಅಂತೆಯೇ ಇಬ್ಬರೂ ಮಾತ ನಾಡುತ್ತಿರುವಾಗ ದಿಢೀರನೆ ಮಧ್ಯ ಪ್ರವೇಶಿಸಿ ಒಬ್ಬರನ್ನು ಕಡೆಗಣಿಸಿ ಇನ್ನೊಬ್ಬರನ್ನು ಮಾತನಾಡಿಸುವುದು ಸರಿಯಲ್ಲ. ‘ತುಂಬಾ ಅರ್ಜೆಂಟ್ ಇದ್ದರೆ ಕ್ಷಮಿಸಿ’ ಎಂದು ಹೇಳುತ್ತ ಅವರ ಅನುಮತಿ ಪಡೆದೇ ಮಾತನಾಡಬೇಕು. ನಮಗೆ ದೂರವಾಣಿ ಕರೆಗಳು ಬಂದಾಗ ವಿನಾಕಾರಣ ಅದನ್ನು  recieve ಮಾಡುವುದು ಇಲ್ಲವೇ ಸಾರ್ವಜನಿಕ ಸ್ಥಳಗಳಲ್ಲಿ ಇತರರಿಗೆ ತೊಂದರೆಯಾಗುವ ರೀತಿಯಲ್ಲಿ ಏರುದನಿಯಲ್ಲಿ ಗಟ್ಟಿಯಾಗಿ ಮಾತನಾಡಬಾರದು.

ದೂರವಾಣಿಯ ಮೂಲಕ ಮಾತನಾಡಲು ಆರಂಭಿಸುವ ಮೊದಲು ಒಂದು ನಿಮಿಷ ಮಾತನಾಡಬಹುದೇ ಎಂದು ಅವರ ಒಪ್ಪಿಗೆಯನ್ನು ಪಡೆದು ಮಾತನ್ನು ಆರಂಭಿಸಬೇಕು ಹಾಗೂ ಅವಶ್ಯಕತೆಗಿಂತ ಹೆಚ್ಚಾಗಿ ಮಾತನಾಡಬಾರದು. ಜನರು ನಿಂತಲ್ಲಿ ಸರತಿ ಸಾಲನ್ನು ಮುರಿದು ಮುನ್ನುಗ್ಗುವುದು, ಜೋರಾಗಿ ಮಾತ ನಾಡೋದು ಇಲ್ಲವೇ ಗಂಟು ಮೋರೆ ಹಾಕಿಕೊಳ್ಳುವುದು ಸಭ್ಯತೆಯಲ್ಲ. ಪರಿಚಿತರಿರಲಿ, ಅಪರಿಚಿತರಿರಲಿ, ಯಾರಾದರೂ ಎದುರಾದ ಕೂಡಲೇ, ಒಂದು ಮುಗುಳ್ನಗೆಯನ್ನು ಬೀರೋದು ಸಭ್ಯತೆ. ಸಹಾಯ ಕೇಳಲು ಬಂದವರನ್ನು ಉಪೇಕ್ಷಿಸಬಾರದು; ಗೌರವದಿಂದ ಮಾತನಾಡಿಸಬೇಕು.

ಮನೆಯಿಂದ ಹೊರಗೆ ಹೋಗುವಾಗ ಮನೆಯಲ್ಲಿದ್ದವರಿಗೆ ಹೇಳಿ ಹೋಗಬೇಕು. ಸಾರ್ವಜನಿಕ ಉದ್ಯಾನಗಳಿಂದ ಹೂವು ಕೀಳುವುದು, ಗ್ರಂಥಾಲಯಗಳಲ್ಲಿ ಪುಸ್ತಕಗಳ ಹಾಳೆ ಮೇಲೆ ಗೀಚು ವುದು, ಹಾಳೆಗಳನ್ನು ಕದಿಯುವುದು ಅಸಭ್ಯರ ಲಕ್ಷಣ. Toilet ಬಳಸಿದ ಬಳಿಕ Flush ಮಾಡದಿರೋದು ಸಭ್ಯತೆಯಲ್ಲ. ಸಿಕ್ಕ ಸಿಕ್ಕಲ್ಲಿ ಉಗುಳುವುದು, ಕಸ ಎಸೆಯುವುದು ಸುಸಂಸ್ಕೃತ ವ್ಯಕ್ತಿಗಳ ಲಕ್ಷಣವಲ್ಲ. ಅತ್ಯಂತ ಆತ್ಮೀಯರ ಇಲ್ಲವೇ ಹತ್ತಿರದ ಬಂಧು ಹಾಗೂ ಸಲುಗೆಯುಳ್ಳ ಮಿತ್ರರ ಹೊರತಾಗಿ ಎಲ್ಲರನ್ನೂ ಬಹುವಚನದಲ್ಲಿ ಸಂಭೋಧಿಸಬೇಕಾದುದು ಸಭ್ಯತೆ.

ಹಿರಿಯರನ್ನು ಮಹಿಳೆಯರನ್ನು ಅಂಗವಿಕಲರನ್ನುಗೌರವದಿಂದ ಕಾಣಬೇಕು. ನಮಗೆ ಉಪಕರಿಸುವವರಿಗೆ ‘ಧನ್ಯವಾದಗಳು ಉಪಕಾರವಾಯಿತು’ ಎನ್ನಬೇಕು. ಹಾಗೂ ನಮ್ಮಿಂದ ತೊಂದರೆ ಆಗಿದ್ದರೆ, ‘ಕ್ಷಮಿಸಿ’ ಎನ್ನಬೇಕು. ಕೆಲಸ ಆಗಬೇಕಾದಾಗ ದಮ್ಮಯ್ಯ ಎಂದು ಹೇಳಿ ನಂತರ ತಿರುಗಿಯೂ ನೋಡದೇ ಇರೋದು ಸಭ್ಯತೆಯಲ್ಲ. ಎಲ್ಲೇ ಆಗಲಿ ಅನಗತ್ಯವಾಗಿ ಉರಿಯುತ್ತಿರುವ ಲೈಟ್, ಫ್ಯಾನ್ ಹಾಗೂ ಸೋರುತ್ತಿರುವ ನಲ್ಲಿಗಳನ್ನು ಆಫ್ ಮಾಡಬೇಕು.

Walking ಗೆಂದು ಕರಕೊಂಡು ಹೋದ ತಮ್ಮ ಮನೆಯ ನಾಯಿಯಿಂದ, ಇತರರ ಮನೆಯ ಎದುರಿಗೆ ಮಲಮೂತ್ರ ವಿಸರ್ಜನೆ ಮಾಡಿಸೋದು ಸಭ್ಯತೆಯಲ್ಲ.
ಈಗಾಗಲೇ ಸಂಕಷ್ಟದಲ್ಲಿರುವವರ ಎದುರು ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಾರದು. ಉದಾಹರಣೆಗೆ ಧೃತರಾಷ್ಟ್ರರ ಎದುರು ಜಗತ್ತಿನ ಸೌಂದರ್ಯವನ್ನು ಬಣ್ಣಿಸಬಾರದು. ನತದೃಷ್ಟರ ಎದುರು ನಮ್ಮ ಅದೃಷ್ಟವನ್ನು ಕೊಚ್ಚಿಕೊಳ್ಳಬಾರದು. ಬಡವರ ಮುಂದೆ ನಮ್ಮ ಸಂಪತ್ತನ್ನು ಪ್ರದರ್ಶಿಸಬಾರದು.

ಹಿರಿಯರ ಎದುರು ಕಾಲಮೇಲೆ ಕಾಲು ಹಾಕಿ ಕುಳಿತು ಕೊಳ್ಳೋದು, ಇಲ್ಲವೇ ಕಾಲುಗಳನ್ನು ಅಲ್ಲಾಡಿಸುತ್ತಿರೋದು ಸಭ್ಯತೆಯಲ್ಲ. ನೋಟುಗಳನ್ನು ಎಣಿಸುವಾಗ, ಪುಟತೆರೆಯುವಾಗ, ಟಿಕೆಟ್ ಹರಿಯುವಾಗ ಎಂಜಲು ತಗಲಿಸೋದು ಹಾಗೂ ಊಟ ಮಾಡುವಾಗ ಸದ್ದು ಮಾಡೋದು ಸಭ್ಯತೆಯಲ್ಲ. ಸಭೆ ಸಮಾರಂಭದ ಮಧ್ಯೆ ಆಗಾಗ ಎದ್ದು ಹೋಗೋದು, ಆಕಳಿಸೋದು, ತೂಕಡಿಸೋದು, ಮಾತನಾಡೋದು ಇಲ್ಲವೇ ಪದೇ ಪದೇ ಮೂಗಿಗೆ ಬೆರಳು ತೂರಿಸೋದು, ಉಗುರು ಕಚ್ಚುತ್ತಿ ರೋದು ಸಭ್ಯತೆಯಲ್ಲ. ಆಸ್ಪತ್ರೆಯಲ್ಲಿ ಪರಿಚಯದ ರೋಗಿ ಗಳನ್ನು ನೋಡಲು ಹೋದಾಗ, ಪಕ್ಕದ ರೋಗಿಗಳ ಯೋಗಕ್ಷೇಮ ವನ್ನು ವಿಚಾರಿಸೋದು
ಸಭ್ಯತೆ.

ಬಂಧು ಮಿತ್ರರ ಜನ್ಮದಿನ, Wedding Anniversary ದಿನಗಳನ್ನು ಜ್ಞಾಪಕದಲ್ಲಿಟ್ಟು ಕೊಂಡು, ಅವರಿಗೆ ಶುಭ ಹಾರೈಸು ವುದು ಒಂದು ಸಭ್ಯತೆ. ನಾವು ಇತರರ ಅಭಿಪ್ರಾಯ ಗಳನ್ನು ಒಪ್ಪಲೇ ಬೇಕೆಂದಿಲ್ಲ; ಆದರೆ, ಗೌರವಿಸಬೇಕು; ಇದು ಸಭ್ಯತೆ. ಹಸಿದವರಿಗೆ ನಮ್ಮಿಂದ ಊಟ ಹಾಕಲು ಸಾಧ್ಯವಾಗದಾಗ, ಊಟ ಕೊಡುವವರ ಮನೆಯನ್ನಾದರೂ ತೋರಿಸೋದು ಒಂದು ಸಭ್ಯತೆ.

ಇತರರ ಒಳ್ಳೆಯ ಗುಣಗಳನ್ನು ಬರೇ ಮೆಚ್ಚಿಕೊಂಡರೆ ಸಾಲದು ಅವರೇನಾದರೂ ಸಾಧನೆ ಮಾಡಿದಾಗ ಎಲ್ಲರ ಮುಂದೆ ಅವರ ಗುಣಗಾನ ಮಾಡಿ ಬಾಯಿ ತುಂಬ ಹೊಗಳೋದು ಒಂದು ಸಭ್ಯತೆ, ಸಭ್ಯತೆ-ಸೌಜನ್ಯತೆಗಳು ನಮ್ಮೊಳಗೆ ಅಂತರ್ಗತವಾಗಿರುವ ಸಂಸ್ಕೃತಿ-ಸಂಸ್ಕಾರಗಳ ಪ್ರತೀಕಗಳು, ಇವು ಮಾನವೀಯತೆ ಯನ್ನು ಮೆರೆಯುವ ಸದ್ಗುಣವೂ ಹೌದು. ಇಂಥ ವ್ಯಕ್ತಿ ಎಲ್ಲರ ಪ್ರೀತಿ ವಿಶ್ವಾಸ ಗೌರವಗಳಿಗೆ ಪಾತ್ರನಾಗುತ್ತಾನೆ. ಆಶ್ಚರ್ಯ ಎಂದರೆ ವಿದೇಶಕ್ಕೆ ಹೋದಾಗ ಅಲ್ಲಿಯ ವರಂತೆಯೇ ಶಿಸ್ತು ಸಭ್ಯತೆಯಿಂದ ಇರುವ ಭಾರತೀಯರು ಭಾರತಕ್ಕೆ ಬಂದರೆ, ಮತ್ತೆ ಅದೇ ಅಶಿಸ್ತು, ಅಸಭ್ಯ ವ್ಯಕ್ತಿಗಳಾಗುತ್ತಾರೆ!