Thursday, 19th September 2024

ದೀಪಾವಳಿ ಸಡಗರ ಹೆಚ್ಚಿಸಲು ಸಿಹಿ-ಕಾರ ತಿಂಡಿಗಳ ಸಹಕಾರ

ತಿಳಿರು ತೋರಣ

srivathsajoshi@yahoo.com

ಅಕ್ಷರಗಳಿಂದಲೇ ಔತಣ ಬಡಿಸಬಹುದೇ? ಯಾಕಾಗದು! ನವರಸಗಳನ್ನು ಉದ್ದೀಪಿಸುವ ಶಕ್ತಿ ಅಕ್ಷರಗಳಿಗೆ ಇದೆಯಾದರೆ ಅವು ಲಾಲಾರಸವನ್ನೂ ಉದ್ದೀಪಿಸಬಲ್ಲವು. ಇದು ಅಂಥದೊಂದು ಪ್ರಯತ್ನ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಶೇಷ ಪ್ರಸ್ತುತಿ. ಒಟ್ಟು ಇಪ್ಪತ್ತನಾಲ್ಕು ಸಿಹಿ-ಕಾರ ತಿಂಡಿ-
ತಿನಸುಗಳ ಬಣ್ಣನೆ ರಸಪ್ರಶ್ನೆಗಳ ರೂಪದಲ್ಲಿ. ಪದಬಂಧದ ಸುಳಿವು ಗಳ ರೀತಿಯಲ್ಲಿ ಅಂತನೂ ಹೇಳಬಹುದು.

ಪ್ರತಿಯೊಂದು ಉತ್ತರವೂ ನಾಲ್ಕಕ್ಷರಗಳ ಹೆಸರಿನ ಒಂದು ಭಕ್ಷ್ಯ. ತಿಳಿರುತೋರಣದಲ್ಲಿ ಪ್ರತಿಯೊಂದು ಲೇಖನ ಅ ಅಕ್ಷರದಿಂದ ಆರಂಭವಾಗುವಂತೆ
ಇಲ್ಲೂ ಮೊತ್ತಮೊದಲ ಭಕ್ಷ್ಯದ ಹೆಸರು ಮಾತ್ರ ಅ ಅಕ್ಷರದಿಂದ ಆರಂಭವಾಗುತ್ತದೆ. ಬರೀ ಸಿಹಿತಿಂಡಿಗಳನ್ನೇ ತಿಂದರೆ ಚೆನ್ನಾಗಿರಲ್ಲ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂಬ ದೃಷ್ಟಿಯಿಂದ ಸಿಹಿ-ಕಾರ- ಸಿಹಿ-ಕಾರ ಹೀಗೆ ಪರ್ಯಾಯ ಆವರ್ತನ ಸಾಗುತ್ತದೆ. ಎಲ್ಲ ಇಪ್ಪತ್ತನಾಲ್ಕನ್ನೂ ಡಿಕೋಡ್ ಮಾಡಿ ಚಪ್ಪರಿಸಬಲ್ಲಿರಾ ನೋಡಿ.

೧ ಬೂಸ್ಟ್ ಈಸ್ ದ ಸೀಕ್ರೆಟ್ ಆಫ್ ಮೈ ಎನರ್ಜಿ ಎಂದು ಜಾಹಿರಾತಿನಲ್ಲಿ ಸಚಿನ್ ತೆಂಡುಲ್ಕರ್ ಹೇಳುತ್ತಿದ್ದನಲ್ಲ, ಹಾಗೇನಾದರೂ ತಿರುಪತಿ ತಿಮ್ಮಪ್ಪನ ಬಳಿ ಕೇಳಿದರೆ ತನ್ನ ಶಕ್ತಿಯ ಗುಟ್ಟು ಇದೇ ಎಂದು ನಿಸ್ಸಂಶಯವಾಗಿ ಹೇಳುತ್ತಾನೆ. ತಿಮ್ಮಪ್ಪನ ಮಾತಿಗೆ ಪುರಂದರ ದಾಸರು ಬರೆದ ಒಂದು ಕೀರ್ತನೆಯಲ್ಲಿ ದಾಖಲೆ ಸಿಗುತ್ತದೆ. ಏನೆಂದರೆ ಈ ಸಿಹಿತಿಂಡಿಯನ್ನು ಮೆದ್ದ ತಿರುಪತಿ ವೆಂಕಟರಮಣ, ಅಸುರರನ್ನು ಕಾಲಲ್ಲಿ ಒದ್ದನಂತೆ! ಅಂದಹಾಗೆ ಕೃಷ್ಣದೇವ ರಾಯನ ಕಾಲದ ಶಾಸನಗಳಲ್ಲಿಯೂ ಈ ತಿನಿಸಿನ ಉಲ್ಲೇಖವಿದೆ ಎನ್ನಲಾಗಿದೆ. ‘ಅಕ್ಕಿ ಹಿಟ್ಟಿಗೆ ಬೆಲ್ಲದ ಪಾಕ ಸೇರಿಸಿ ಚಿಕ್ಕ ಉಂಡೆಗಳಾಗಿ ಮಾಡಿ ಚಪ್ಪಟೆಯಾಗಿ ತಟ್ಟಿ ಕರಿಯುವುದು’ ಎಂದು ಪಾಕವಿಧಾನವನ್ನು ಸರಳವಾಗಿ ಹೇಳಬಹುದಾದರೂ ಪಾರಂಪರಿಕ ವಿಧಾನದಲ್ಲಿ ಮಾಡುವುದಾದರೆ ಇಡೀ ಒಂದು ವಾರ ಬೇಕಾಗುತ್ತದಂತೆ.

‘ಮೊದಲು ಅಕ್ಕಿಯನ್ನು ನೀರಿನಲ್ಲಿ ನೆನೆಸಿ ನೆರಳಿನಲ್ಲಿ ಬಟ್ಟೆ ಮೇಲೆ ಒಣಗಿಸಬೇಕು; ನುಣುಪಾದ ಪುಡಿ ಮಾಡಿಕೊಳ್ಳಬೇಕು; ಬೆಲ್ಲದ ಪಾಕವನ್ನು ಏಲಕ್ಕಿ ಪುಡಿಯೊಂದಿಗೆ ಸೇರಿಸಿ ಗಟ್ಟಿಯಾದ ಮಿಶ್ರಣ ಮಾಡಬೇಕು; ಜೇಡಿಮಣ್ಣಿನ ಮಡಕೆಗೆ ವರ್ಗಾಯಿಸಿ ಮಿಶ್ರಣಕ್ಕೆ ಹುದುಗು ಬರಲು ಮೂರ್ನಾಲ್ಕು ದಿನ ಬಿಡಬೇಕು. ಆಮೇಲೆ ಸಣ್ಣ ಉಂಡೆಗಳನ್ನು ತೆಗೆದುಕೊಂಡು ಎಣ್ಣೆ ಸವರಿದ ಬಾಳೆಎಲೆ ಮೇಲೆ ಬೆರಳಿಂದ ಒತ್ತಿ ಚಪ್ಪಟೆ ಮಾಡಿ ಮೇಲೊಂದಿಷ್ಟು ಗಸಗಸೆ ಉದುರಿಸಿ ಬಂಗಾರ ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಬೇಕು. ಹೆಚ್ಚುವರಿ ಜಿಡ್ಡಿನ ಅಂಶ ತೆಗೆಯಲು ಚಪ್ಪಟೆ ತಳದ ಬೋಗುಣಿಯಿಂದ ಒತ್ತಬೇಕು’ – ಹೀಗೆ ಆಳಾಗಿ ದುಡಿದರೇನೇ ಅತಿದೊಡ್ಡ ಅರಸನಾಗಿ ತಿನ್ನಲಿಕ್ಕಾಗುವುದು ಕನ್ನಡದ ಈ ಕಜ್ಜಾಯವನ್ನು. ೨ ಭಾಗ್ಯದ ಬಳೆಗಾರನ ಬಳಿ ಅಚ್ಚಕೆಂಪಿನ ಬಳೆ ಹಸುರು ಗೀರಿನ ಬಳೆ ಮುಂತಾದುವೆಲ್ಲ ಇದ್ದರೂ ಈ ಒಂದು ನಮೂನೆಯ ಬಳೆ ಸಿಗಲಾರದು. ಏಕೆಂದರೆ ಇದು ಕೈಗೆ ತೊಡುವ ಬಳೆ ಅಲ್ಲ, ತಿನ್ನಲಿಕ್ಕೆ ಪ್ರೀತಿಯಿಂದ ಕೈಗೆ ಕೊಡುವ ಬಳೆ.

ಸ್ವತಃ ಮಾಡಿದ್ದಾದರಂತೂ ಹೆಮ್ಮೆಯ ಕೋಡು ಮೂಡಿಸಿಕೊಂಡು ಕೊಡಬಹುದಾದ ಬಳೆ. ಹಾಂ, ಒಂದು ಚಿಕ್ಕ ತಿದ್ದುಪಡಿ… ತೊಡುವ ಬಳೆ ಅಲ್ಲ ಎಂದೆನಾದರೂ, ಕೆಲವು ಸಮುದಾಯಗಳಲ್ಲಿ ಮದುವೆ ಸಮಾರಂಭದಲ್ಲಿ ವರನು ಕಾಶಿಯಾತ್ರೆಗೆ ಹೊರಡುವಾಗ ತಮಾಷೆ ಸಂಭ್ರಮ ಹೆಚ್ಚಿಸಲಿಕ್ಕಾಗಿ ಆತನ ಕಿವಿಗಳಿಗೆ ಇದನ್ನು ತೊಡಿಸುವುದೂ ಇದೆಯಂತೆ!


ಹಾಲುಗಲ್ಲದ ಹಸುಳೆ ಸಹ ಬಾಯಿಯಲ್ಲಿಟ್ಟು ಸುಲಭವಾಗಿ ಗುಳುಂ ಸ್ವಾಹಾ ಮಾಡಬಹುದು. ಅಷ್ಟೂ ಮೃದು, ನಯ, ನುಣು ಪಾದ ಮತ್ತು ಆರೋಗ್ಯಕರವಾದ ಸಿಹಿತಿಂಡಿಯಿದು. ಆರೋಗ್ಯಕರ ಏಕೆಂದರೆ ಸಕ್ಕರೆಗೆ ಬದಲು ಬೆಲ್ಲದ ಬಳಕೆ. ಅಕ್ಕಿಯದೇ ಮಾಡ ಬೇಕೆಂದಿಲ್ಲ, ರಾಗಿ ಅಥವಾ ಗೋಽಯದೂ ಮಾಡಲಿಕ್ಕಾಗು ತ್ತದೆ. ತುಪ್ಪವನ್ನೂ ಜಾಸ್ತಿ ಸುರಿಯಬೇಕಾಗಿಲ್ಲ. ಹಾಗಾಗಿ ಬಡವರ ಪಾಲಿನ ಹಲ್ವಾ ಎನ್ನೋಣ. ಸೋಜಿಗವೆಂದರೆ ಎಲ್ಲ ತಿಂಡಿಯೂ ಬಾಯಿಗೆ ಹಾಕುವುದಕ್ಕೇ ಇರುವುದಾದರೂ ಇದಕ್ಕೆ ಮಾತ್ರ ಹೆಸರಲ್ಲೇ ಬಾಯಿ ಎಂದು ಇರುವುದೇಕೋ!

ರಾಮಾಯಣದಲ್ಲಿ ನಡೆಯಿತೆನ್ನಲಾದ ಒಂದು ಕಪೋಲ ಕಲ್ಪಿತ ಪ್ರಸಂಗ, ಆಧುನಿಕ ಕಾಲಕ್ಕೆ ಸರಿಹೊಂದುವಂತೆ ನಿರೂಪಣೆ. ಏನೆಂದರೆ, ರಾಮನ ಬರ್ತ್‌ಡೇ ಸೆಲೆಬ್ರೇಷನ್‌ಗೆ ಪಾನಕ ಮತ್ತೇನು ಮಾಡಲಿ ಎಂದು ಸೀತೆಯು ಶ್ರೀರಾಮನ ಬಳಿ ಕೇಳಿದಳಂತೆ. ಬೇರೆ ಏನು ಬೇಕಿದ್ದರೂ ಮಾಡು ಬಿಡು. ಆದರೆ  ನನ್ನ ಫೇವರಿಟ್ ಸಲಾಡ್ ಮಾತ್ರ ಮರೆಯಬೇಡ. ಸಾಮಗ್ರಿಗಳು ಏನೇನು ಬೇಕೆಂದು ಲಿಸ್ಟ್ ‘ಬರಿ’. ಗ್ರೋಸರಿ ಸ್ಟೋರ್‌ಗೆ ಹೋಗಿ ತರುತ್ತೇನೆ, ಅನ್ನಿ ಪನುಲು ಚೇಸ್ತಾನು ನೀ ‘ಕೋಸಂ’ ಎಂದನಾ ಕನ್ನಡ-ತೆಲುಗು ಮಾತಾಡಬಲ್ಲ ಅನಿವಾಸಿ ರಘುರಾಮ. ಅವನ ಉತ್ತರದಲ್ಲೇ ಉತ್ತರವಿರುವುದು ಸೀತೆಗೆ ಗೊತ್ತಾಗದಿರುತ್ತದೆಯೇ? ಹೆಸರುಬೇಳೆ, ಕ್ಯಾರೆಟ್, ಮುಳ್ಳು ಸೌತೆ, ಹಸಿಮೆಣಸು, ತೆಂಗಿನ ಕಾಯಿ, ಕೊತ್ತಂಬರಿ ಸೊಪ್ಪು… ಅಂತ ಪಟ್ಟಿ ಮಾಡತೊಡಗಿದಳು.
ಯಾವುದದು ಶ್ರೀರಾಮ ಮೆಚ್ಚುವ ಸಲಾಡ್? ೫‘ರವೀಂದ್ರರ ರಾಷ್ಟ್ರಗೀತೆಯಲ್ಲಿ ದ್ರಾವಿಡ ಉತ್ಕಲ ವಂಗ; ….ಯ ರಸಸ್ವಾದದಲ್ಲಿ ದ್ರಾಕ್ಷಿ ಏಲಕ್ಕಿ ಲವಂಗ!’ – ಇದೊಂದೇ ಚುಟುಕ ರಚಿಸಲಿಕ್ಕೆ ಗೊತ್ತಿರೋದು ನನಗೆ.

ಹಾಗಾಗಿ ಇದನ್ನೇ ಆಗಾಗ ಮೆಲುಕು ಹಾಕುತ್ತಿರುತ್ತೇನೆ. ಈ ಚುಟುಕದ ಎರಡೂ ಸಾಲುಗಳು ಒಂದೇ ಅಕ್ಷರದಿಂದ ಆರಂಭವಾಗುತ್ತವೆ ಎಂದು ಹೇಳಿದರೆ ನಿಮಗೆ ಉತ್ತರದ ಒಂದಕ್ಷರವನ್ನು, ಅಂದರೆ ೨೫% ಉತ್ತರವನ್ನು ಹೇಳಿಕೊಟ್ಟಂತಾಗುತ್ತದೆ; ಬಿಟ್ಟ ಸ್ಥಳ ತುಂಬಲಿಕ್ಕೆ ಸಹಾಯ ಮಾಡಿದಂತೆಯೂ ಆಗುತ್ತದೆ.

೬ನಿತ್ಯದ ಊಟಕ್ಕೆ ಅನ್ನ ಅಥವಾ ಚಪಾತಿ ತಿನ್ನುವವರಿಗಾದರೆ ಇದೊಂದು ಅಪರೂಪದ ವಿಶೇಷ ಭಕ್ಷ್ಯ! ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶದವರಿಗೆ ಇದು ಸ್ಟೇಪಲ್ ಫುಡ್. ಇದರ ಗ್ರಾಸಕ್ಕೆ, ಅಲ್ಲ ಪ್ರಾಸಕ್ಕೆ, ಮಾಜಿ ಪ್ರಧಾನಿ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರಿಗಿಂತ ಉತ್ತಮರಾದ ಬೇರೆ ಯಾರೂ ನನಗೆ ನೆನಪಾಗುತ್ತಿಲ್ಲ. ಪ್ರಧಾನಿ ಪದವಿಯಲ್ಲಿದ್ದಾಗ ನಿದ್ದೆ, ಬಿದ್ದೆ, ಎದ್ದೆ, ಹೊರಬಿದ್ದೆ. ಅಷ್ಟಾದರೂ ವರ್ಲ್ಡ್ ಫೇಮಸ್ ಆಯ್ತು ಕರ್ನಾಟಕದ ಮಣ್ಣಿನ ಮಕ್ಕಳನ್ನು ಗಟ್ಟಿಗರನ್ನಾಗಿಸುವ …….! ಬಸ್ಸಾರಿನ ಜೊತೆ ತಿಂದರೆ ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ಇರುತ್ತೀರಿ.
೭ ವಿಷ್ಣುವಿನ ಅವತಾರಗಳು ಎಷ್ಟು ಎಂಬ ಪ್ರಶ್ನೆಗೆ ಥಟ್ಟಂತ ಹೇಳುವ ಉತ್ತರ ಹತ್ತು ಎಂಬುದೇ ಆಗಿರುತ್ತದೆ.

ಆದರೆ ವಿಷ್ಣು ಬೇರೆ ಸಂದರ್ಭಗಳಲ್ಲೂ ಅವತಾರವೆತ್ತಿದ್ದಿದೆ. ಸಮುದ್ರಮಥನದ ವೇಳೆ ಅಮೃತದ ಬಟವಾಡೆಗೋಸ್ಕರ ಮೋಹಿನಿ ಅವತಾರ
ಅಂಥದ್ದೊಂದು. ಅಂತೆಯೇ ವಿಷ್ಣುವಿನ ಇನ್ನೊಂದು ಫೇಮಸ್ ಮಿನಿ ಅವತಾರ, ಕನ್ನಡದಲ್ಲಿ ‘ಕುದುರೆಯ ಕುತ್ತಿಗೆ’ ಎಂಬರ್ಥ ಬರುವಂಥದ್ದು ಇದೆ. ಮಾಧ್ವ ಸಂಪ್ರದಾಯದವರಿಗೆ ಹಬ್ಬ- ಹರಿದಿನಗಳಲ್ಲಿ ನೈವೇದ್ಯಕ್ಕೆ ಈ ಹೆಸರುಳ್ಳ ಭಕ್ಷ್ಯ ಇರಲೇಬೇಕು. ನೋಡಲಿಕ್ಕೆ ಕೆಸರಿನಂತೆ ಕಾಣುವುದರಿಂದಲೋ ಏನೋ, ಮಡ್ಡಿ ಎಂದು ಕೂಡ ಕರೆಯಲಾಗುತ್ತದೆ. ಬೇಯಿಸಿದ ಕಡಲೆಬೇಳೆ, ಬೆಲ್ಲ, ಕೊಬ್ಬರಿಚೂರು, ಪರಿಮಳದ್ರವ್ಯಗಳೊಡನೆ ಡ್ರೈಫ್ರೂಟ್ಸೂ ಸೇರಿ
ಮಿಶ್ರಣಗೊಂಡಾಗಿನ ರುಚಿಯೋ ಪರಮದಿವ್ಯ!

ತಾಳಿ, ನಿಮಗೆ ಪೆಟ್ಟು ಕೊಡುತ್ತೇನೆ ಎಂದು ಅಮ್ಮ ಗದರಿದರೆ? ಮಕ್ಕಳು ಇನ್ನೂ ಹೆಚ್ಚು ರಂಪ ಮಾಡುತ್ತವೆ. ಆದರೆ- ತಾಳಿ, ನಿಮಗೆ ಪೆಟ್ಟು ಕೊಡುವುದಿಲ್ಲ, ತಿನ್ನಲು ಬಿಸಿಬಿಸಿಯಾದ ಗರಿಗರಿ ಯಾದ ಅಕ್ಕಿರೊಟ್ಟಿ ಕೊಡುತ್ತೇನೆ ಎಂದು ಹೇಳಿದರೆ, ಹಠ ಮಾಡುವ ಮಕ್ಕಳು ಗಪ್‌ಚುಪ್ ಆಗಿ ಈ ತಿಂಡಿಯನ್ನು ತಿನ್ನಲು ಮುಂದಾಗುವರು. ಸಂಸ್ಕೃತದಲ್ಲೂ ಇದರ ಹೆಸರು ‘ಸ್ಥಾಲೀಪಿಷ್ಟ’ ಎಂದು ನಾಲ್ಕಕ್ಷರಗಳದೇ. ಸ್ಥಾಲೀ ಎಂದರೆ ಬಟ್ಟಲು, ಅದರಲ್ಲಿ ವಿವಿಧ
ಧಾನ್ಯಗಳ ಹಿಟ್ಟನ್ನು ಬೆರೆಸಿ ನಾದಿಕೊಂಡು ಎಣ್ಣೆಯಲ್ಲಿ ಬೇಯಿಸಿದ ಹಿಟ್ಟಿನ ಪದಾರ್ಥ. ನೀವಿಲ್ಲಿ ತಿಳಿಸಬೇಕಾದ್ದು ಕನ್ನಡ ಹೆಸರನ್ನು.

ಹಣ್ಣಿನೊಳಗೆ ಬೀಜ ಇರುವುದು ಸಾಮಾನ್ಯ ಸಂಗತಿ. ಹಣ್ಣಿನ ಹೊರಗೆ ಬೀಜ ಇರುವ ಹಣ್ಣು ಯಾವುದೆಂದು ಒಗಟಿನ ರೀತಿಯಲ್ಲಿ ಕೇಳಿದರೆ ಟಾಪ್-ಗೇರಿನ ಸ್ಪೀಡಿನಲ್ಲೇ ನೀವು ಉತ್ತರ ಹೇಳಬಲ್ಲಿರಿ. ಆದರೆ ಪ್ರಶ್ನೆ ಅದಲ್ಲ. ಗೇರುಹಣ್ಣಿನ ಬೀಜ ಈ ಸಿಹಿ ತಿಂಡಿಯ ಮೂಲ ಸಾಮಗ್ರಿ. ಸಿಂಗಾರ ಹೆಚ್ಚಿಸಲಿಕ್ಕೆ ಮೇಲೆ ಸಿಲ್ವರ್ ಎರಕವನ್ನೂ ಲೇಪಿಸುತ್ತಾರೆ (ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರಾ ದರೂ). ಹೈದರಾಬಾದ್‌ನ ‘ಜಿ. ಪುಲ್ಲಾರೆಡ್ಡಿ ನೇತಿ ಮಿಠಾಯಿಲು’ ಅಂಗಡಿಯಲ್ಲಿ ಇದು ತುಂಬ ಪ್ರಸಿದ್ಧಿ. ನಾನಲ್ಲಿದ್ದ ದಿನಗಳಲ್ಲಿ ಊರಿಗೆ ಹೋಗುವಾಗ ದೊಡ್ಡ ಬಾಕ್ಸ್ ಕೊಂಡು ಕೊಳ್ಳುತ್ತಿದ್ದೆ.

೧೦

ನಾನು ಹುಟ್ಟಿ ಬೆಳೆದ ಮಾಳ ಎಂಬ ಹಳ್ಳಿಯಿಂದ ಕಾರ್ಕಳ ತಾಲೂಕು ಕೇಂದ್ರಕ್ಕೆ ಹೋಗ ಬೇಕಿದ್ದರೆ ಬಜೆಗೋಳಿ ಎಂಬ ಹೆಸರಿನ ಚಿಕ್ಕದೊಂದು ಪೇಟೆ ಸಿಗುತ್ತದೆ (ಈಗ ಬೆಳೆದು ದೊಡ್ಡದಾ ಗಿದೆ ಯೆನ್ನಿ). ತುಸು ವಿಚಿತ್ರವೆನಿಸುವ ಅದರ ಹೆಸರನ್ನು ಕೇಳಿದವರು, ಆ ಹೆಸರಿನ ಅಕ್ಷರಗಳನ್ನೇ ಆಚೀಚೆ ಮಾಡಿದಾಗ ಸಿಗುವ ತಿಂಡಿಯ ಹೆಸರನ್ನೂ ನೆನಪಿಸಿ ಕೊಳ್ಳುತ್ತಾರೆ, ಆ ತಿಂಡಿಯೂ ನಮ್ಮ ಕರಾವಳಿ ಯದೇ ಒಂದು ಸ್ಪೆಷಲ್ ಐಟಂ ಆದ್ದರಿಂದ. ‘ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ …….’ ಎಂದು ಶಂಕಾರಾ ಚಾರ್ಯರೇ ಹೇಳಿದ್ದಾರೇನೋ ಎನ್ನುವಂತೆ ತಮಾಷೆ ಮಾಡು ವುದೂ ಇದೆ. ಮೈದಾದಿಂದ ತಯಾರಿಸಿದ್ದು, ಎಣ್ಣೆಯಲ್ಲಿ ಕರಿದದ್ದು ವರ್ಜ್ಯ ಎನ್ನುವವರು ತಿನ್ನಬೇಕಾಗಿಲ್ಲ. ಹೆಸರನ್ನಷ್ಟೇ ಹೇಳಿ.

೧೧

ಬಾಳೆಹಣ್ಣು, ಬೆಲ್ಲ, ಕಾಯಿಹಾಲು, ಎಲಕ್ಕಿ ಮುಂತಾದುವು  ಗಳ ಹದವಾದ ಮಿಶ್ರಣಕ್ಕೆ ಕೆಲವರು ರಸಾಯನ ಎನ್ನುತ್ತಾರೆ. ಅದು ಒಳ್ಳೆಯ ಪದವೇ. ಆದರೆ ಕನ್ನಡದ್ದೇ ಒಂದು ಪದ, ನಾಲ್ಕಕ್ಷರ ಗಳದು ಇದೆ ಯಾವುದೆಂದು ಬಲ್ಲಿರಾ? ಕರಾವಳಿ ಮತ್ತು ಮಲೆನಾಡಿ ಗರು ನೀರುದೋಸೆ, ಒತ್ತುಶ್ಯಾವಿಗೆ ಇತ್ಯಾದಿಗೆಲ್ಲ ಬೆಸ್ಟ್ ಕಾಂಬಿನೇಷನ್ ಆಗಿ ತಯಾರಿಸುತ್ತಾರೆ. ಟಿ.ಪಿ.ಕೈಲಾಸಂ ಅವರದೊಂದು ಏಕಾಂಕ ಏಕರಂಗ ಏಕಪಾತ್ರ ರೂಪಕದಲ್ಲಿ ಸಾವಿತ್ರಿಗೆ ಅನುಪ್ರಾಸ
ವಾಗಿ ಈ ಹೆಸರು ಸೇರಿಕೊಂಡಿದೆ. ಅವರೇನೋ ಅಲ್ಲಿ ಮೂರಕ್ಷರ ಗಳಿಗೆ ಕುಗ್ಗಿಸಿ ದ್ದಾರೆ, ನೀವು ಇಲ್ಲಿ ನಾಲ್ಕಕ್ಷರಗಳಿಗೆ ಹರಡುವಂತೆಯೇ ಬರೆಯಿರಿ.

೧೨

ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವ… ಸೀಪಾಯಿ ರಾಮು ಚಿತ್ರದ ಗೀತೆಯ ಬಾಜಿ (ಪಂಥಾಹ್ವಾನ) ನೆನಪಿಸಿ ಕೊಳ್ಳಿ. ಬಾಜಿಗೊಂದು ಬಾಲ ಬಂದರೆ ಹಿಂದೀ/ಮರಾಠಿಯ ಪಲ್ಯ ಆಗುತ್ತದೆ. ಅದಕ್ಕೆ ಮೊದಲಲ್ಲಿ ಬ್ರೆಡ್‌ನ ಕಾಲಂಶ ಸೇರಿಕೊಂಡರೆ? ಆ ಕಾಲಂಶಕ್ಕೂ ಮರಾಠಿ ಪದವನ್ನು ನಾನೇ ಹೇಳಿಕೊಡ ಬೇಕೇ? ಸೇರು ಅಳತೆಯ ನಾಲ್ಕನೆಯ ಒಂದು ಭಾಗಕ್ಕೆ ಏನಂತಾರೆ ಗೊತ್ತಲ್ಲ? ಈಗ ಇದಿಷ್ಟನ್ನೂ ಜೋಡಿಸಿ, ಪಕ್ಕದಲ್ಲಿ ಈರುಳ್ಳಿ ಮತ್ತು ನಿಂಬೆ ಹೋಳನ್ನೂ ಇಡಲಾಗಿದೆಯೆಂದು ಕಲ್ಪಿಸಿಕೊಂಡು ಸವಿಯಿರಿ.

೧೩

ಬಾಬರ್, ಹುಮಾಯೂನ್, ಅಕ್ಬರ್, ಷಹಜಹಾನ್, ಔರಂಗಜೇಬ್ – ಆರು ಮಂದಿ ಮೊಘಲ್ ಸುಲ್ತಾನರ  ಲೈನ್‌ಅಪ್‌ನಲ್ಲಿ ಇನ್ನೂ ಒಬ್ಬ ಇರಬೇಕಿತ್ತಲ್ಲ? ಹೌದು, ಅಕ್ಬರನ ಬಳಿಕ ಆಳ್ವಿಕೆ ನಡೆಸಿದ ಅವನ ಮಗ. ರಜಪೂತ ತಾಯಿಗೆ ಜನಿಸಿದವನು. ಚಕ್ರವರ್ತಿಯಾಗುವ ಮುನ್ನ ಸಲೀಮ್ ಎಂದು ಇವನ
ಹೆಸರು. ನಮಗಿಲ್ಲಿ ಮುಖ್ಯವಾಗುವುದು ಆಮೇಲಿನ ಹೆಸರು. ಇವನ ಹೆಂಡತಿ ನೂರ್‌ಜಹಾನಳನ್ನು ಜಿಲೇಬಿ ಎಂದು ಕರೆದರೆ ಜಿಲೇಬಿಯ ಗಂಡ ಯಾರು ಎಂದಾದರೂ ನಿಮಗೆ ನೆನಪಾಗ ಬಹುದು!

೧೪

ಗಣಗಳನ್ನು ಕುರಿತು ನೀವು ಗಣಿತದಲ್ಲಿ ಓದಿರುತ್ತೀರಿ. ಛೇದನ ಗಣ, ಸಂಯೋಗ ಗಣ, ಉಪಗಣ ಇತ್ಯಾದೀತ್ಯಾದಿ. ಪುಷ್ಪಾವರಣದೊಳಗೆ ಅಕ್ಷರ, ಅಂಕೆ, ಸಂಕೇತ ರೂಪದಲ್ಲಿ ಗಣಾಂಶಗಳು. ಗಣಗಳ ವಿಚಾರ ತಿಳಿದು ಗಣಪತಿಯಾಗಿರುವ ನೀವು, ಮೂರು ದೋಸೆಗಳ ಗಣಕ್ಕೆ ಇಂಗ್ಲಿಷ್ಪದ ಬಳಸಿದರೆ ಅಪ್‌ಸೆಟ್ ಆಗುವುದೇಕೆ? ಎಷ್ಟೆಂದರೂ ಬೆಂಗಳೂರಿ ನಲ್ಲಿ ಅದು ಫೇಮಸ್ಸು. ಅಂದಮೇಲೆ ಬೆಂಗ್ಳೂರ್ ಕನ್ನಡಾ ಸ್ಟೈಲ್ ನಲ್ಲಿಯೇ ಹೇಳಬೇಕಲ್ಲ?

೧೫

ಪದ್ಯದ ಪ್ರತಿಯೊಂದು ಸಾಲಿನ ಎರಡನೆಯ ಅಕ್ಷರವು ಒಂದೇ ವ್ಯಂಜನದ್ದಿರುವುದಕ್ಕೆ ದ್ವಿತೀಯಾಕ್ಷರ ಪ್ರಾಸ ಅಥವಾ ಆದಿಪ್ರಾಸ ಎನ್ನುತ್ತಾರೆ. ಹಳಗನ್ನಡ ಮತ್ತು ನಡುಗನ್ನಡದ ಪದ್ಯ ಗಳಲ್ಲಿ ಆದಿಪ್ರಾಸ ಇದ್ದೇ ಇರುತ್ತಿತ್ತು. ಆದ್ದರಿಂದಲೇ ಒಮ್ಮೆ ಓದಿ ಕಂಠಪಾಠ ಮಾಡಿದ್ದು ನೆನಪಲ್ಲುಳಿಯುತ್ತಿತ್ತು.

ಅಂಥದೊಂದು ಕವಿತೆ, ಭೋಗ ಷಟ್ಪದಿ ಛಂದಸ್ಸಿನಲ್ಲಿರುವುದು ಇಲ್ಲಿದೆ ನೋಡಿ: ‘ಅಕ್ಕ ನಿನ್ನ ಮನೆಯಲಿರುವ| ಚೊಕ್ಕವಾದ ಅಡುಗೆಮನೆಗೆ| ಬೆಕ್ಕಿ ನಂತೆ
ಹೆಜ್ಜೆಯಿಟ್ಟು ಒಳಗೆ ಬಂದೆನು| ಅಕ್ಕಪಕ್ಕ ನೋಡಿಕೊಂಡು| ಮುಕ್ಕುವಾಗ ಕಾಣ ದೆಂದು| ಸೊಕ್ಕಿನಿಂದ ಬೀಗಿಕೊಂಡು ಉಂಡೆ ತಿಂದೆನು||’ ಅಕ್ಕನ ಮನೆಯಲ್ಲಿ ಮುದ್ದಿನ ತಮ್ಮ ಸೊಕ್ಕಿನಿಂದ ತಿಂದ ಆ ಉಂಡೆ ಯಾವುದಿರಬಹುದು?

೧೬

ಹೈದರಾಬಾದ್‌ನಲ್ಲಿ (ಅವಳಿ ನಗರ ಸಿಕಂದರಾಬಾದ್‌ನಲ್ಲಿ) ನನ್ನ ವಾಸ್ತವ್ಯದ ವೇಳೆ ಅಲ್ಲಿನ ಎರಡು ಬಡಾವಣೆಗಳ ಹೆಸರುಗಳು ನನ್ನನ್ನು ವಿಶೇಷವಾಗಿ ಆಕರ್ಷಿಸಿದ್ದುವು. ಒಂದು, ‘ಸೈನಿಕ್‌ಪುರಿ’. ಅದು ಭೂಸೇನೆಯಿಂದ ನಿವೃತ್ತರಾದವರು ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡು ಬೆಳೆಸಿದ ವಠಾರ. ಅದರ ಪಕ್ಕದಲ್ಲೇ ‘ವಾಯು ಪುರಿ’. ಏರ್‌ಫೋರ್ಸ್‌ನಿಂದ ರಿಟೈರ್ ಆದವರ ಸೈಟುಗಳೂ ಮನೆಗಳೂ ಇರುವ ವಠಾರ. ಹಾಗಿದ್ದರೆ ನೇವಿಯಿಂದ ನಿವೃತ್ತರಾದ
ವರೇಕೆ ಸೈಟು ಖರೀದಿಯಲ್ಲಿ ಆಸಕ್ತಿ ತೋರಿಸಿಲ್ಲ? ಅವರು ಗಳೂ ಇಲ್ಲೊಂದು ಬಡಾವಣೆ ಆರಂಭಿಸಿದರೆ ಅದಕ್ಕೆ ಯೋಗ್ಯ ವಾದ ಹೆಸರನ್ನು ನಾನು ಸೂಚಿಸಬಲ್ಲೆ ಎನ್ನುತ್ತಿದ್ದೆ. ನೀವು ಸೂಚಿಸಬಲ್ಲಿರಾ?

೧೭

ತೇರ ಏರಿ ಅಂಬರದಾಗೆ ನೇಸರ ನಗುತಾನೆ… ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ ಮೇದಿತ್ತು… ಏರಿ ಮೇಲೆ ಏರಿ ಆಹಾ ಮೇಲೆಕೆಳಗೆ ಹಾರಿ ಹಕ್ಕಿ ಬಂದು ಕುಂತೈ ತಲ್ಲೋ… ಹೀಗೆ ‘ಏರಿ’ ಬರುವ ಹಳೆಯ ಹಾಡುಗಳನ್ನೇ ಗುನುಗು ನಿಸುತ್ತಿದ್ದ ಅಪ್ಪ ನೊಬ್ಬನನ್ನು ನಿನ್ನ ಇಷ್ಟದ ತಿಂಡಿ ಯಾವುದಪ್ಪ ಎಂದು ಕೇಳಿದಾಗ ಏನೆಂದ ಗೊತ್ತೇ? ನವರಾತ್ರಿಯಲ್ಲಿ ಸರಸ್ವತೀ ಪೂಜೆಯಂದು ಮಾಡುವ ಸಿಹಿ ತಿಂಡಿಯೇ ಅವನ ಫೇವರಿಟ್ ಎಂದು ಸುಳಿವು ಕೊಟ್ಟನು.

೧೮

ಕೃಷ್ಣನಿಗೆ ಕುರುಕಲು ತಿಂಡಿಯೂ ಇಷ್ಟ. ಜನ್ಮಾಷ್ಟಮಿ ಯಂದು ಮಾಡುವ ಬಗೆಬಗೆ ತಿನಿಸುಗಳಲ್ಲಿ ಕೃಷ್ಣನ ಮಧುರವಾದ ಕೊಳಲು ಎಂಬರ್ಥದ ಹೆಸರಿನ ಒಂದು ತಿಂಡಿಯೂ ಇರಬೇಕು. ಅಕ್ಕಿಹಿಟ್ಟು ಉದ್ದಿನಹಿಟ್ಟುಗಳ ಮಿಶ್ರಣವನ್ನು ಚಕ್ಕುಲಿ ಅಥವಾ ಖಾರದಕಡ್ಡಿಗಳಂತೆ ಅಚ್ಚಿನಲ್ಲಿ ಒತ್ತಿ ಎಣ್ಣೆಯಲ್ಲಿ ಕರಿದು ತಯಾರಿಸುವುದು. ತಿಂಡಿಪೋತ ಡಿ. ವಿ. ಗುಂಡಪ್ಪನವರಿಗೂ ಇದು ನೆಚ್ಚಿನದಂತೆ!

೧೯

ಪಶ್ಚಿಮ ಬಂಗಾಳದ ನೊಬಿನ್ ಚಂದ್ರ ದಾಸ್ ಎಂಬಾತನು ೧೮ನೆಯ ಶತಮಾನದಲ್ಲಿ ಕಂಡುಹಿಡಿದ ಈ ಸಿಹಿತಿಂಡಿ ಬಂಗಾಳದಲ್ಲಿ ಮಾತ್ರವಲ್ಲ, ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಎಲ್ಲೆಡೆಗಳಲ್ಲೂ ಜನಪ್ರಿಯವಾಯಿತು. ಒಂದು ಸ್ವಾರಸ್ಯಕರ ಸಂಗತಿಯೆಂದರೆ ಪುರಿ ಜಗನ್ನಾಥ ದೇವಾಲಯದ ರಥಯಾತ್ರೆ ವೇಳೆ ಲಕ್ಷ್ಮಿ ಮುನಿಸಿ ಕೊಂಡಿರುತ್ತಾಳಂತೆ, ಆಕೆಯ ಮುನಿಸನ್ನು ಶಮನಗೊಳಿಸಲಿಕ್ಕೆ ರಥ ಯಾತ್ರೆಯ ಒಂಬತ್ತನೆಯ ದಿನ ಇದನ್ನೇ ಅರ್ಪಿಸುತ್ತಾರಂತೆ. ಈಗ ನಿಮಗಿದರ ಸುಳಿವು ಸಿಕ್ಕಿರಬಹುದು. ಸಕ್ಕರೆಯ ರಸದಲ್ಲಿ ಮುಳು ಗಿಸಿದ ಕಾಟೇಜ್ ಚೀಜ್ ಗೋಲಗಳ ಹೆಸರನ್ನು ಗುಲ್ಲೆಬ್ಬಿಸದೆ ಹೇಳಿ.

೨೦

ಉತ್ತರ ಕರ್ನಾಟಕವನ್ನು ಮರ್ತೇ ಬಿಟ್ರೇನ್ರೀ ಎಂದು ಯಾರಾದರೂ ಕೆಂಗಣ್ಣು ತೋರಿಸುವ ಮೊದಲೇ ಸೇರಿಸಿ ಕೊಳ್ಳು ತ್ತೇನೆ- ದಾವಣಗೆರೆಯ ನರ್ಗಿಸ್ ಮಂಡಕ್ಕಿಗಾಗಲಿ  ಧಾರವಾಡದ ವರ್ಲ್ಡ್ ಫೇಮಸ್ ಗಿರ್ಮಿಟ್‌ಗಾಗಲಿ, ರುಚಿ ಏರಬೇಕಾದರೆ (ಅಭ್ಯಾಸವಿಲ್ಲದವರಿಗೆ ನವರಂಧ್ರಗಳಲ್ಲೂ ಉರಿ
ಏರಬೇಕಾದರೆ, ಕಣ್ಣುಗಳಿಂದ ಘಟಪ್ರಭಾ ಮಲಪ್ರಭಾ ಶಾಲ್ಮಲಾ ಹರಿಯ ಬೇಕಾದರೆ) ತಪ್ಪದೇ ಇರಬೇಕಾದ ಗರಮಾಗರಂ ಜೊತೆಗಾತಿ!

೨೧

ಈಗ ಹೇಗೂ ಕನ್ನಡ ಮಾಸದಲ್ಲಿ ಇದ್ದೇವಾದ್ದರಿಂದ ಒಮ್ಮೆ ಗೋಕಾಕ್ ಚಳವಳಿಯನ್ನೂ, ಹಾಗೆಯೇ ಗೋಕಾಕದ ಅತಿ ಪ್ರಖ್ಯಾತ ಸಿಹಿತಿಂಡಿಯನ್ನೂ ನೆನಪಿಸಿಕೊಳ್ಳೋಣ. ೨೨ಯಾರಾದರೂ ಸಂತಸದಿಂದ ಉಬ್ಬಿದರೆ ಯಾವುದರಂತೆ ಉಬ್ಬಿದ್ದೆಂದು ಹೇಳುತ್ತೀರಿ? ಆದರೆ ಉಬ್ಬುವಿಕೆ ಹೆಚ್ಚಾಗಿ ಜಂಬಕ್ಕೆ ಪರಿವರ್ತನೆಯಾದರೆ ಅದೊಂದು ಉಪಟಳ ಎಂದು ಅನಿಸತೊಡಗ ಬಹುದು; ಅಂಥವರಿಗೆ ಇಲ್ಲಿಂದ ಜಾಗ ಖಾಲಿ ಮಾಡು ಎಂದು ಹೇಳಿ ಹೊರದಬ್ಬಬೇಕಾಗಬಹುದು. ಅದನ್ನು ಸಾಹಿತ್ಯಿಕವಾಗಿ ಎರಡೇ ಎರಡಕ್ಷರಗಳಲ್ಲಿ ಹೇಗೆ ಹೇಳುತ್ತೀರಿ? ಒಟ್ಟು ಸೇರಿಸಿದಾಗ ನಿಮಗೊಂದು ಒಳ್ಳೆಯ ರುಚಿಕರ ಕಾಂಬಿನೇಷನ್ ಸಿಗುತ್ತದೆ!

೨೩

ಇದುವರೆಗಿನ ಸಿಹಿ-ಕಾರ-ಸಿಹಿ-ಕಾರ ಉತ್ತರಗಳ ರೀತಿ ಒಂದಾದರೆ ಈ ಉತ್ತರದಲ್ಲಿ ಒಂದರಲ್ಲೇ ಸಿಹಿಯೂ ಇದೆ ಕಾರವೂ ಇದೆ. ಒಂದು ಬಟ್ಟಲು ಖಾರಾಭಾತ್ ಮತ್ತೊಂದು ಬಟ್ಟಲು ಕೇಸರಿಭಾತ್‌ಗಳನ್ನು ಲೈಲಾ-ಮಜ್ನೂ ಜೋಡಿಯಂತೆ, ಹೀರ್-ರಾಂಝಾ ಜೋಡಿಯಂತೆ, ಶಿವ-ಶಕ್ತಿಯರ ಜೋಡಿ
ಯಂತೆ, ಪ್ರಕೃತಿ-ಪುರುಷರ ಜೋಡಿಯಂತೆ ಒಂದೇ ತಟ್ಟೆಯಲ್ಲಿ ತಂದಿಟ್ಟರೆ ಅದಕ್ಕೆ ಕರ್ನಾಟಕ ರಾಜಧಾನಿಯಲ್ಲಿ ನಾಷ್ಟಾ ಸಮಯದ ದಿವ್ಯನಾಮ ಏನು?

೨೪

ಸಿಹಿ-ಕಾರ ಭಕ್ಷ್ಯಗಳು ಯಾವುವೇ ಇದ್ದರೂ ಎಷ್ಟೇ ಇದ್ದರೂ, ಭೋಜನದ ಕೊನೆಯಲ್ಲಿ ಜನಗಣಮನ ಆಗಬೇಕಿದ್ದರೆ, ನಿಜವಾಗಿಯೂ ತೃಪ್ತಿಯ ತಂಪು ಸಿಗಬೇಕಿದ್ದರೆ ಒಂದೆರಡು ತುತ್ತುಗಳಷ್ಟಾದರೂ ಬೇಕೆನಿಸುವ ಕನ್ನಡದ ಕರ್ಡ್ ರೈಸ್! ಅಕ್ಷರಗಳಲ್ಲೇ ಔತಣ ಬಡಿಸಿದ ಈ ಅಂಕಣ ನಿಮಗೆ ಇಷ್ಟ ವಾಯಿತು ಎಂದುಕೊಂಡಿದ್ದೇನೆ. ಇದನ್ನು ಓದಿದ ನಿಮಗೆಲ್ಲರಿಗೂ ಮತ್ತು ನಿಮ್ಮ ಮನೆಮಂದಿಗೂ ಬಂಧುಮಿತ್ರರಿಗೂ ದೀಪಾವಳಿ ಹಬ್ಬದ ಶುಭಸಂದರ್ಭದಲ್ಲಿ ಹಾರ್ದಿಕ ಶುಭಾಶಯಗಳು.

Leave a Reply

Your email address will not be published. Required fields are marked *