Tuesday, 10th September 2024

ಸತ್ತವರನ್ನು ಕರೆ ತಂದ ಡೀಪ್ ಫೇಕ್ ತಂತ್ರಜ್ಞಾನ

ತಂತ್ರ-ಮಂತ್ರ

ಸುರೇಂದ್ರ ಪೈ, ಭಟ್ಕಳ

ಚುನಾವಣೆ ಬಂತೆಂದರೆ ಸಾಕು ಎಡೆಯೂ ಪ್ರಚಾರದ ಸದ್ದು-ಗದ್ದಲ. ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು, ಅಭಿವೃದ್ಧಿಯ ಸಾಧನೆಯನ್ನು ಜನರಿಗೆ ತಲುಪಿಸಲು ನಾನಾ ರೀತಿಯಲ್ಲಿ ಕಸರತ್ತು ಮಾಡುತ್ತವೆ. ಎರಡು ದಶಕದ ಹಿಂದಿನ ಚುನಾವಣಾ ಪ್ರಚಾರಕ್ಕೂ ಇಂದಿನ ಚುನಾವಣಾ ಪ್ರಚಾರ ಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹಿಂದೆ ರಿಕ್ಷಾಗಳನ್ನು ಬಳಸಿ ಧ್ವನಿ ವರ್ಧಕಗಳ ಮೂಲಕ ಕರಪತ್ರಗಳನ್ನು ಬೀದಿ ಬೀದಿಗೂ ಹಂಚುತ್ತಿದ್ದರು.

ಚಿಕ್ಕ ಮಕ್ಕಳಾದ ನಾವು ರಿಕ್ಷಾದ ಹಿಂದೆ ಓಡಿ ಹೋಗಿ ಕರಪತ್ರಗಳನ್ನು ಪಡೆಯುತ್ತಿದ್ದ ಒಂದು ಕಾಲವಿತ್ತು. ಆದರೆ ಕಾಲ ಬದಲಾದಂತೆ ಇಂದು ಆಧುನಿಕ ತಂತ್ರeನ ಸಾಕಷ್ಟು ಬೆಳೆದು ನಿಂತಿದೆ. ಕೃತಕ ಬುದ್ಧಿಮತ್ತೆಯ ಆವಿಷ್ಕಾರದಿಂದ ವಿವಿಧ ತಂತ್ರಜ್ಞಾನ ಜನರ ಜೀವನವನ್ನೇ ಬದಲಾಯಿಸಲು ಹೊರಟಿದೆ. ಈ ಮೊದಲು ಸತ್ತ ವ್ಯಕ್ತಿಗಳ ಹೆಸರಿನಲ್ಲಿ ಮತ ಹಾಕಿದ ಘಟನೆಗಳನ್ನು ಮಾತ್ರ ಕೇಳಿದ್ದೇವು. ಆದರೆ ವಿಶೇಷವಾಗಿ ಈ ಬಾರಿಯ ಲೋಕಸಭಾ ಚುನಾವಣೆ ಯಲ್ಲಿ ರಾಜಕೀಯ ಪಕ್ಷಗಳು ಎಐನ ಡೀಪೇಕ್ ತಂತ್ರಜ್ಞಾನ ಬಳಸಿ ಸತ್ತ ರಾಜಕೀಯ ಪಕ್ಷದ ನಾಯಕರು ಸಹ ಎದ್ದು ಬಂದು ಚುನಾವಣಾ ಪ್ರಚಾರದಲ್ಲಿ
ತೊಡಗಿಸಿಕೊಳ್ಳುವಂತೆ ಮಾಡಿದ್ದು ಮತದಾರರಲ್ಲಿ ಕುತೂಹಲದ ಜೊತೆಗೆ ಗೊಂದಲವನ್ನು ಉಂಟುಮಾಡಿದ್ದು ಸುಳ್ಳಲ್ಲ.

ಚುನಾವಣೆಯಲ್ಲಿ ಅಭ್ಯರ್ಥಿಗಳು ತನ್ನ ಕ್ಷೇತ್ರದ ಪ್ರತಿಯೊಬ್ಬ ಮತದಾತನನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಅದಕ್ಕಾಗಿ ಬೂತ್ ಮಟ್ಟದಲ್ಲಿ ಕಾರ್ಯ ಕರ್ತರು ಮನೆ ಮನೆಗೂ ಹೋಗಿ ಪ್ರಚಾರ ಮಾಡುವುದು ಸಾಮಾನ್ಯ ಸಂಗತಿ. ಮೊದಲು ಕರಪತ್ರ ಬಳಸುತ್ತಿದ್ದರೂ, ೧೯೯೦ ರ ದಶಕದಲ್ಲಿ ದೂರವಾಣಿ ಕರೆಗಳ ಮೂಲಕ ಜನರನ್ನು ಸಂಪರ್ಕಿಸಲಾಯಿತು.

೨೦೦೭ ರಲ್ಲಿ ನಡೆದ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯನ್ನು ಮೊದಲ ‘ಸಾರ್ವತ್ರಿಕ ಮೊಬೈಲ್ ಪೋನ್ ಚುನಾವಣೆ’ ಎಂದು ಕರೆಯ ಲಾಗುತ್ತದೆ. ಮೊಬೈಲ್ ಕರೆ, ವೈಸ್ ಮೇಸೆಜ, ವಿಡಿಯೋ ಕರೆಗಳನ್ನು ಮಾಡುವ ಮೂಲಕ ಮತ ಕೇಳಲಾಯಿತು. ೨೦೧೨ ರಲ್ಲಿ ಮೊದಲ ಬಾರಿಗೆ
ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯ ನರೇಂದ್ರ ಮೋದಿಯವರು ೩ಈ ಹೋಲೋಗ್ರಾಮ್ ತಂತ್ರeನದ ಮೂಲಕ ತಮ್ಮ ಭಾಷಣವನ್ನು ಎಡೆ ಪ್ರದರ್ಶನ ಮಾಡಲು ಬಳಕೆ ಮಾಡಿದರು. ಇನ್ನೂ ೨೦೧೪ ರ ಚುನಾವಣೆಯಲ್ಲಿ ವಾಟ್ಸಪ್, ಫೇಸ್ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಮಾಡಲು ಶುರುವಾಯಿತು.

ಸುಮಾರು ೫೦೦ ಕೋಟಿಗಳಿಗೂ ಹೆಚ್ಚಿನ ಹಣವನ್ನು ಸಾಮಾಜಿಕ ಜಾಲತಾಣದ ಪ್ರಚಾರಕ್ಕೆ ಖರ್ಚು ಮಾಡಲಾಯಿತು. ೨೦೧೯ ರ ಲೋಕಸಭಾ ಚುನಾವಣೆಯಲ್ಲೂ ಇವುಗಳ ಬಳಕೆ ಮುಂದುವರಿಯಿತು. ಇದರ ಮೂಲಕ ಪ್ರತಿಯೊಬ್ಬ ಮತದಾತನನ್ನು ತಲುಪುವುದು ಮಾತ್ರವಲ್ಲದೇ, ತಮ್ಮ ವಿಚಾರಧಾರೆಯನ್ನು ಮನಮುಟ್ಟುವಂತೆ ಮಾಡಲು ನಿರಂತರವಾಗಿ ಪ್ರಯತ್ನ ಮಾಡಲಾಯಿತು. ಇವು ಮೇಸೆಜ್ ಮತ್ತು ವೈಸ್ ಕರೆಗಳಿಗಿಂತ ಆಕರ್ಷಕವಾಗಿದ್ದು, ಕಡಿಮೆ ಖರ್ಚಿನಲ್ಲಿ ಪರಿಣಾಮಕಾರಿಯಾಗಿ, ಅತ್ಯಂತ ವೇಗವಾಗಿ ಎಲ್ಲರನ್ನೂ ತಲುಪಿ ಮತದಾರರನ್ನು ಸೆಳೆಯಲು ಬಹು ಮಟ್ಟಿಗೆ ಯಶಸ್ವಿಯಾಗಿತ್ತು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಎಲ್ಲಾ ಪಕ್ಷದವರು ಆರ್ಟಿಫಿಶಿಯಲ್ ಇಂಟೆಲಿಜೆನ ಡೀಪ್ ಫೇಕ್ ತಂತ್ರಜ್ಞಾನ ವನ್ನು ಬಳಸಿ ಮತದಾತನನ್ನು ತಲುಪಲು ಪ್ರಯತ್ನಿಸಿದ್ದು ವಿಶೇಷವಾಗಿತ್ತು. ಡೀಪ್ ಫೇಕ್ ಎಂಬ ತಂತ್ರಜ್ಞಾನ ಚುನಾವಣೆಗೂ ಪೂರ್ವದಲ್ಲಿ ಬಹಳ ಸುದ್ದಿಯಾಗಿತ್ತು. ಯಾವುದೋ ಸಿನಿಮಾ ನಟ, ನಟಿಯರ ಮೂಲ ವಿಡಿಯೋ ತಿರುಚಿ ಅದನ್ನು ಅಶ್ಲೀಲ ರೀತಿಯಲ್ಲಿ ಪರಿವರ್ತಿಸಿದ್ದಾಗಿರಬಹುದು, ಕ್ರಿಕೆಟ್ ತಾರೆಯರ ವಿಡಿಯೋ ಬಳಸಿ ಬೇಟಿಂಗ್ ಆಪ್‌ಗಳ ಪ್ರಮೋಷನ್ ಮಾಡಿದ್ದಾಗಿರಬಹುದು ಇತ್ಯಾದಿ.

ಆದರೆ ಚುನಾವಣೆಯಲ್ಲಿ ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಸತ್ತ ರಾಜಕೀಯ ನಾಯಕರನ್ನು ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆಂದು ಯಾರೂ ಸಹ ಉಹಿಸಿರಲಿಕ್ಕಿಲ್ಲ ಬಿಡಿ. ಭಾರತದಲ್ಲಿ ಮೊದಲ ಬಾರಿಗೆ ಡೀಪ್ ಫೇಕ್ ತಂತ್ರಜ್ಞಾನವನ್ನು ೨೦೨೦ರ ದೆಹಲಿ ಚುನಾವಣೆಗೆ ಒಂದು ದಿನ ಮೊದಲು, ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಅವರು ಬಿಜೆಪಿಗೆ ಮತ ಹಾಕುವಂತೆ ನಾಗರಿಕರನ್ನು ಒತ್ತಾಯಿಸುವ ಎರಡು ವೀಡಿಯೊಗಳನ್ನು ಇಂಗ್ಲಿಷ್ ಮತ್ತು ಹರ್ಯಾಣಯಲ್ಲಿ ೫೮೦೦ ವಾಟ್ಸಾಪ್ ಗುಂಪುಗಳ ಮೂಲಕ ೧೫ ಮಿಲಿಯನ್ ಮತದಾರರಿಗೆ ಕಳುಹಿಸಲಾಗಿತ್ತು.

ನಂತರ ಈ ವಿಡಿಯೋಗಳು ಡೀಪ್ ಫೇಕ್ ಎಂದು ಡಿಜಿಟಲ್ ಮೀಡಿಯಾ ಸಂಸ್ಥೆ ವೈಸ್ ವರದಿ ಮಾಡಿತ್ತು. ಡೀಪೇಕ್ ಇಂಗ್ಲಿಷ್ ವೀಡಿಯೊದಲ್ಲಿ, ತಿವಾರಿ ಅವರು ತಮ್ಮ ರಾಜಕೀಯ ಎದುರಾಳಿ ಅರವಿಂದ್ ಕೇಜ್ರಿವಾಲ್ ಅವರನ್ನು ಟೀಕಿಸುತ್ತಾ ಮೋದಿ ನೇತೃತ್ವದ ಸರಕಾರವನ್ನು ರಚಿಸಲು ಫೆಬ್ರವರಿ ೮ ರಂದು ಕಮಲದ ಗುಂಡಿಯನ್ನು ಒತ್ತಿರಿ ಎಂದು ಮತದಾರರನ್ನು ಕೇಳುತ್ತಿದ್ದರು. ೨೦೨೩ರಲ್ಲಿ ಜನವರಿಯಲ್ಲಿ ಡಿಎಂಕೆ ಪಕ್ಷದ ನಾಯಕರಾದ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಮುತ್ತುವೇಲ್ ಕರುಣಾನಿಧಿ ಅವರು ತಮ್ಮ ಪಕ್ಷದ ಯುವ ಘಟಕದ ಸಮಾವೇಶದಲ್ಲಿ ಪಕ್ಷದ ಪದಾಧಿಕಾರಿಗಳಿಗೆ ಪ್ರೇರಣೆ ನೀಡುತ್ತಿರುವ ವಿಡೀಯೊ ಮೂಲಕ ಕಾಣಿಸಿಕೊಂಡರು.

ವಾಸ್ತವದಲ್ಲಿ ಕರುಣಾನಿಧಿ ೨೦೧೮ ರಲ್ಲಿ ನಿಧನರಾಗಿದ್ದರು. ನಂತರ ೨೦೨೪ ರ ಫೆಬ್ರವರಿಯಲ್ಲಿ ಆಲ್ -ಇಂಡಿಯಾ ಅಣ್ಣಾ ದ್ರಾವಿಡಿಯನ್ ಪ್ರೋಗ್ರೆಸ್ಸಿವ್
-ಡರೇಶನ್ ಪಕ್ಷದ ಅಧಿಕೃತ ಎಕ್ಸ್ ಖಾತೆಯು ತಮಿಳು ರಾಜಕೀಯದ ಅಪ್ರತಿಮ ಸೂಪರ್‌ಸ್ಟಾರ್ ಜಯರಾಮ್ ಜಯಲಲಿತಾ ಮಕ್ಕಳಾಲ್ ನಾನ್,
ಮಕ್ಕಳುಕ್ಕಾಗವೇ ನಾನ್ ಎಂದು ಕರೆದ ಆಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿತು. ಆದರೆ ೨೦೧೬ರಲ್ಲಿ ಜಯಲಲಿತಾ ನಿಧನರಾಗಿದ್ದರು.

ಈ ಎರಡೂ ಪಕ್ಷಗಳು ತಮ್ಮ ಪಕ್ಷದ ನಾಯಕರನ್ನು ಬಳಸಿ ಚುನಾವಣಾ ಪ್ರಚಾರ ಮಾಡಿದ್ದು ಯಾವುದೇ ದ್ವೇಷ ಅಥವಾ ಹಿಂಸೆಯ ರಾಜಕಾರಣ
ಸೃಷ್ಟಿಸುವ ಉದ್ದೇಶದಿಂದಲ್ಲ ಬದಲಾಗಿ ಕೇವಲ ತನ್ನ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರನ್ನು ಸೆಳೆಯುವ ಸಲುವಾಗಿತ್ತು. ಆದರೆ ಇದರ ದುರ್ಬಳಕೆಯ ಬಗ್ಗೆ ಅರಿವಾಗಿದ್ದು ೨೦೨೩ ರ ಮೇನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳ ಪ್ರಮುಖ ನಾಯಕರಾದ ವಿನೇಶ್ ಫೋಗಟ್ ಮತ್ತು ಅವರ
ಸಹೋದರಿ ಸಂಗೀತಾ -ಗಟ್ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದ ನಂತರ ನಗುತ್ತಿರುವ ಸೆಲ್ಫಿ ಪೋಟೊ ಬಿಡುಗಡೆಯಾಗಿತ್ತು. ಇದರ ಬಗ್ಗೆ
ದೇಶದಾದ್ಯಂತ ವ್ಯಾಪಕ ಚರ್ಚೆಯಾಗಿ ಕೊನೆಗೆ ಅದು ‘ಮಾಫ್’ ಮಾಡಿರುವ ಪೋಟೋ ಎಂದು ಪೋಲಿಸ್ ತನಿಖೆಯಲ್ಲಿ ಬಹಿರಂಗವಾಯಿತು.

೨೦೨೩ ರ ಮಧ್ಯ ಪ್ರದೇಶದ ಚುನಾವಣೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಸ್ಲಿಮರಿಗೆ
ಮಸೀದಿ ಮತ್ತು ೩೭೦ ನೇ ವಿಧಿಯನ್ನು ಮರುಸ್ಥಾಪಿಸುವ ಭರವಸೆ ನೀಡಿದ್ದೇನೆ ಎಂಬ ವಿಡಿಯೋ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರನ್ನು ಘೋಷಣಾ ಮಂತ್ರಿ ಎಂದು ಉಲ್ಲೇಖಿಸಿ ಪ್ರಶ್ನೆ ಕೇಳಿರುವ ‘ಕೌನ್ ಬನೇಗಾ ಕರೋಡ್ಪತಿ’ಯ ವೈರಲ್ ವೀಡಿಯೊ ಬಗ್ಗೆ
ಗೊಂದಲ ಸೃಷ್ಟಿಯಾಗಿ, ತನಿಖೆಯ ಬಳಿಕ ಇದು ಸಹ ನಕಲಿ ವಿಡಿಯೋ ಎಂದು ತಿಳಿದು ಪೋಲಿಸರು ನಾಲ್ಕು ಎಫ್ ಐಆರ್ ದಾಖಲಿಸಿದ್ದರು.

ಇಷ್ಟೇ ಅಲ್ಲದೇ ೨೦೨೩, ನವೆಂಬರ್ ೩೦ ರಂದು ತೆಲಂಗಾಣ ರಾಜ್ಯ ವಿಧಾನಸಭೆಗೆ ಮತದಾನದ ದಿನದಂದು, ಬಿಆರ್‌ಎಸ್ ಪಕ್ಷದ ನಾಯಕ
ಕೆಟಿ ರಾಮರಾವ್ ‘ಪ್ರತಿಸ್ಪರ್ಧಿ ಕಾಂಗ್ರೆಸ್‌ಗೆ ಮತ ನೀಡುವಂತೆ ಜನರನ್ನು ಕೇಳುವ ಏಳು ಸೆಕೆಂಡುಗಳ ವೀಡಿಯೊ’ ವೈರಲ್ ಆಗಿದ್ದು ಮತದಾತನಲ್ಲಿ ಭಾರಿ ಗೊಂದಲ ಸೃಷ್ಟಿಸಿತು.

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ತೆಲಂಗಾಣ ಪ್ರದೇಶ ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಅಮಿತ್ ಶಾ ಅವರು
ಚುನಾವಣಾ ಯಾಲಿ ಉದ್ದೇಶಿಸಿ ಬಿಜೆಪಿ ಸರಕಾರ ಮತ್ತೆ ರಚನೆಯಾದರೆ, ಒಬಿಸಿ ಮತ್ತು ಎಸ್ಸಿ / ಎಸ್ಟಿ ಮೀಸಲಾತಿಯನ್ನು ರದ್ದುಪಡಿಸಲಾಗುವುದು
ಎಂದು ಹೇಳಿರುವ ‘ಡಾಕ್ಟರೇಟ್’ ವಿಡಿಯೋ  ಪ್ರಕರಣಕವು ದೇಶವ್ಯಾಪಿ ಸಂಚಲನ ಮೂಡಿಸಿತ್ತು.

ಅತ್ತ ಕಾಂಗ್ರೆಸ್ ಬಾಲಿವುಡ್ ತಾರೆಗಳಾದ ರಣವೀರ್ ಸಿಂಗ್ ಮತ್ತು ಅಮೀರ್ ಖಾನ್ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವಂತೆ ವಿಡಿಯೋ ಮಾಡಿಸಿದರೆ, ಇತ್ತ ಬಿಜೆಪಿ ೨೦೦೮ ರಲ್ಲಿ ಮೃತಪಟ್ಟ ಹಿಂದಿ ಸಂಗೀತಗಾರ ಮಹೇಂದ್ರ ಕಪೂರ್ ಅವರ ಧ್ವನಿ ಬಳಸಿ ಬಿಜೆಪಿಯ ಪ್ರಮೋಶನಲ್ ಗೀತೆಯನ್ನು ಸಂಯೋಜಿಸಿತು. ದಿ ಇಂಡಿಯನ್ ಡೀಪ್ ಫೇಕರ್ ಎಂದೇ ಪ್ರಸಿದ್ಧರಾಗಿರುವ ಜಾಡೌನ್ ಈ ಹಿಂದೆ ಡೀಪ್ ಫೇಕ್ ವಿಡಿಯೋ ರಚಿಸಲು ಏಳು ಅಥವಾ ಎಂಟು ದಿನಗಳನ್ನು ತೆಗೆದುಕೊಳ್ಳುತ್ತಿತ್ತು, ಅದರೆ ಇಂದು ಮೂರು ನಿಮಿಷಗಳಲ್ಲಿ ಮಾಡಬಹುದು ಎನ್ನುತ್ತಾರೆ.

ರಾಜಸ್ಥಾನದ ಅಜ್ಮೀರ್‌ನಲ್ಲಿ ಸ್ಥಳೀಯ ರಾಜಕಾರಣಿ ಶಕ್ತಿ ಸಿಂಗ್ ರಾಥೋಡ್ ಅವರ ಸಣ್ಣ ವೀಡಿಯೊವನ್ನು ಚಿತ್ರೀಕರಿಸಲು ಹಸಿರು ಪರದೆಯ ಮುಂದೆ ಕುಳಿತ ವಿಡಿಯೋ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಇದನ್ನು ಸಹ ಅಲ್ಗಾರಿದಮ್‌ಗಳ ಮೂಲಕ ದಿವ್ಯೇಂದ್ರ ಸಿಂಗ್ ಜಾಡೌನ್ ರಚಿಸಿದರು. ಇದು ಅಜ್ಮೀರ್‌ನ ೧೨ ಲಕ್ಷ ಮತದಾರರನ್ನು ತಲುಪಿತು. ಇಷ್ಟೇ ಅಲ್ಲದೇ ಅವರು ಸಿಕ್ಕಿಂನ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್‌ಗೆ ಡೀಪ್ ಫೇಕ್‌ಗಳನ್ನು ಮಾಡಿದ್ದಾರೆ. ಮತ್ತು ೨೦೦೯ ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ಅಪ್ರತಿಮ ರಾಜಕಾರಣಿ ವೈಎಸ್ ರಾಜಶೇಖರ ರೆಡ್ಡಿ ಅವರು, ಪ್ರಸ್ತುತ ಆಂಧ್ರಪ್ರದೇಶ ರಾಜ್ಯದ ಮಾಜಿಮುಖ್ಯಮಂತ್ರಿಯಾಗಿರುವ ಅವರ ಪುತ್ರ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಬೆಂಬಲಿಸುವಂತೆ ಕರೆ ನೀಡಿದ ಹಾಗೇ, ಹಲವಾರು ರಾಜ್ಯದ ರಾಜಕಾರಣಿಗಳಿಗೆ ಪ್ರಚಾರ ಗೀತೆಯನ್ನು ಎಐ ಬಳಿಸಿ ಹಿಂದಿಯಲ್ಲಿ ರಚಿಸಿದ್ದಾರೆ.

ಇದಕ್ಕಾಗಿ ಡಿಜಿಟಲ್ ಕ್ಲೀಪ್ ರಚಿಸಲು ೧,೨೫,೦೦೦ ರು. ಮತ್ತು ಆಡಿಯೊ ಕ್ಲೋನ್‌ಗಾಗಿ ೬೦,೦೦೦ ರು. ಪಡೆಯುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಎಐನಲ್ಲಿನ ಇತ್ತೀಚಿನ ಬೆಳವಣಿಗೆಗಳ ಲಾಭವನ್ನು ಪಡೆಯುವಲ್ಲಿ ಭಾರತದ ರಾಜಕೀಯ ಪಕ್ಷಗಳು ಪ್ರಪಂಚದಲ್ಲಿ ಮೊದಲಿಗರಲ್ಲ. ಹಾಗೂ ಇದರ
ಅಪಾಯಗಳ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ಹಲವು ದೇಶಗಳಿಗೂ ಬಿಸಿ ತಟ್ಟಿದೆ. ಉದಾಹರಣೆಗೆ, ಅಐ- ರಚಿತವಾದ ರೋಬೋಕಾಲ್‌ಗಳು ಅಧ್ಯಕ್ಷ ಬಿಡೆನ್‌ರ ಧ್ವನಿಯನ್ನು ಅನುಕರಿಸಿ, ನ್ಯೂ ಹ್ಯಾಂಪ್‌ಶೆರ್ ಮತದಾರರನ್ನು ಗುರಿಯಾಗಿಸಿಕೊಂಡು ಪ್ರಾಥಮಿಕ ಮತದಾನದಿಂದ ಅವರನ್ನು ನಿರುತ್ಸಾಹಗೊಳಿಸಿದವು.

ಸತ್ತ ವ್ಯಕ್ತಿಗಳ ಜೊತೆ, ಜೈಲಿನಲ್ಲಿರುವ ಅಭ್ಯರ್ಥಿಗಳು ಸಹ ಇದರ ಪ್ರಯೋಜನ ಪಡೆದಿದ್ದಾರೆ. ಉದಾಹರಣೆಗೆ ಪಾಕಿಸ್ತಾನದ ಜೈಲಿನಲ್ಲಿರುವ ರಾಜಕಾರಣಿ ಇಮ್ರಾನ್ ಖಾನ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದು ನೆನಪಿಸಿಕೊಳ್ಳಬಹುದು. ಹೀಗೆ ಇಂಡೋನೇಷ್ಯಾ, ಬಾಂಗ್ಲಾದೇಶ, ಬೆಲಾರಸ್, ಚೀನಾ, ತೈವಾನ್, ಸ್ಲೋವಾಕಿಯಾ, ರಷ್ಯಾ ಹೀಗೆ ೫೦ ಕ್ಕೂ ಹೆಚ್ಚು ರಾಷ್ಟ್ರದ ಚುನಾವಣೆಯಲ್ಲಿ ಎಐನ ಡೀಪ್ ಫೇಕ್ ತನ್ನ ಕೈ ಚಳಕವನ್ನು ತೋರಿಸಿದೆ.

ಈ ತಂತ್ರಜ್ಞಾನ ಬಳಸಿ ಏನೆಲ್ಲ ಸುಳ್ಳು ಮಾಹಿಗಳನ್ನು ರಚಿಸಿ ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದ ಮೇಲೆ ನಾವು ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ. ಇವು ಚುನಾವಣೆಗೆ ಅಷ್ಟೇ ಸೀಮಿತವಾಗಿಲ್ಲ, ಇಂದು ಸೈಬರ್ ಕ್ರೈಮ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇನ್ನೂ ಡೀಪ್ ಫೇಕ್ ಬಳಸಿ ಅಮಾಯಕ ಜನರನ್ನು ಹೇಗೆಲ್ಲ ಯಾಮಾರಿಸಬಹುದು ಒಮ್ಮೆ ಯೋಚಿಸಿ. ಚುನಾವಣೆಯ ಸಮಯದಲ್ಲಿ ಎಐ ಮೂಲಕ ಮತದಾರರಿಗೆ ಕರೆ ಮಾಡಲು ಮತದಾರನ ವೈಯಕ್ತಿಕ ಗೌಪ್ಯ ಮಾಹಿತಿಗಳನ್ನು ಬಳಸಲಾಗಿದೆ.

ಸರಕಾರದ ಬಳಿ ಇರಬೇಕಾದ ಗೌಪ್ಯ ಮಾಹಿತಿಗಳು ಡೀಪ್ ಫೇಕ್ ಕಂಪನಿಗಳ ಬಳಿ ಹೇಗೆ ತಲುಪಿದವು ಎಂದು ಗಂಭೀರವಾಗಿ ಯೋಚಿಸಬೇಕಿದೆ. ಇಂದು ಯಾವ ಡೆಟಾ ಕೂಡ ಸುರಕ್ಷಿತವಾಗಿಲ್ಲ ಎಂದು ಇದರಿಂದಲೇ ತಿಳಿಯುತ್ತದೆ. ಇದಕ್ಕೆ ಯಾರು ಹೊಣೆಗಾರರು? ಈ ಮಾಹಿತಿಯನ್ನು ಚುನಾವಣೆಯ ನಂತರವು ಬಳಸಿ, ಜೀವ ಬೆದರಿಕೆ, ವಂಚನೆ, ಕೊಲೆಯಂತಹ ಕೃತ್ಯಗಳನ್ನು ಮಾಡುವುದಿಲ್ಲ ಎಂಬುದಕ್ಕೆ ಏನಿದೆ ಭರವಸೆ.

ಕೊನೆಯದಾಗಿ ಡೀಪ್ ಫೇಕ್ ತಂತ್ರಜ್ಷಾನ ಬೇರೆ ವಿಷಯದಲ್ಲಿ ಯಶಸ್ಸು ಕಂಡಿರಬಹುದು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ
ಪ್ರeವಂತ ಜನರನ್ನು ಮೋಡಿ ಮಾಡಲು ಹೊರಟ ಎಐ, ಕೊನೆಗೂ ಸೋಲೊಪ್ಪಿತು. ಸಾವಿರಾರು ಕೋಟಿ ಖರ್ಚು ಮಾಡಿದರೂ ಸಹ ಮತದಾರ ತನ್ನ
ಸ್ವವಿವೇಚನೆಯಿಂದ ಮತ ಚಲಾಯಿಸಿ ಎಲ್ಲ ಪಕ್ಷದ ನಿರೀಕ್ಷೆಯನ್ನು ಬುಡಮೇಲಾಗುವಂತೆ ಮಾಡಿ, ವಿಶ್ವಕ್ಕೆ ಒಂದು ಸಂದೇಶವನ್ನು ಕಳುಹಿಸಿದ
ಎಂಬುದೇ ವಾಸ್ತವ.

(ಲೇಖಕರು: ಶಿಕ್ಷಕರು, ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *