Saturday, 14th December 2024

ರಾಷ್ಟ್ರ ರಾಜಧಾನಿ ಮತ್ತೆ ಉಸಿರುಗಟ್ಟಿಸುತ್ತಿದೆ

ಸುಪ್ತ ಸಾಗರ

rkbhadti@gmail.com

ಇಲ್ಲಿ ಭತ್ತ-ಗೋಧಿ- ಭತ್ತ-ಗೋಧಿ ಈ ವಿಧಾನ ಅನುಸರಿಸುವುದರಿಂದ, ಒಂದು ಬೆಳೆಯ ನಂತರ ಇನ್ನೊಂದು ಬೆಳೆಯ ತಯಾರಿಗೆ ಹೆಚ್ಚು ಸಮಯ ಸಿಗದು, ಯಂತ್ರೋಪಕರಣಗಳನ್ನು ಖರೀದಿಸಲಾಗದ ರೈತರು, ಬಾಡಿಗೆ ವ್ಯವಸ್ಥೆ ಹಾಗೂ ಕೆಲಸಗಾರರ ಸಂಬಳ ಎರಡೂ ಸಮಯದ ವ್ಯರ್ಥ ಮತ್ತು ಖರ್ಚು ಅಧಿಕ. ಆದ್ದರಿಂದ ರೈತರು ಕಂಡುಕೊಂಡ ಸುಲಭ ಹಾಗೂ ಪರ್ಯಾಯ ಮಾರ್ಗ ಹುಲ್ಲನ್ನು ಸುಡುವುದು.

ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ಬಂತೆಂದರೆ ರಾಜಧಾನಿ ದಿಲ್ಲಿಯ ಸುತ್ತಮುತ್ತ ಅಕ್ಷರಶಃ ಉಸಿರು ಕಟ್ಟುವ ವಾತಾವರಣ ಸೃಷ್ಟಿಯಾಗುತ್ತದೆ. ಚಳಿಯ ಆರಂಭದಲ್ಲಿ ಭಯಗಿಲೇಳುವ ಮಾಲಿನ್ಯದ ಸಂದರ್ಭದಲ್ಲಿ ರಾಷ್ಟ್ರೀಯ ಮಾದ್ಯಮಗಳಲ್ಲಿ ಅತಿ ಹೆಚ್ಚು ಚರ್ಚಿತವಾಗುವ ಇನ್ನೊಂದು ಅಂಶ ಭತ್ತದ ಹುಲ್ಲು ಸುಡುವುದರ ಬಗ್ಗೆ. ಹೌದು, ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯದ ಮಟ್ಟ ಹೆಚ್ಚುವ ಸಂದರ್ಭದಲ್ಲೇ ದೆಹಲಿ ಹೊರವಲಯ, ಪಂಜಾಬ್, ಹರಿಯಾಣದ ರೈತಾಪಿ ವರ್ಗ ತಂಥಮ್ಮ ಹೊಲಗಳಲ್ಲಿ ತ್ಯಾಜ್ಯವಿಲೇವಾರಿಗೆ ಮುಂದಾಗಿ ಮಾಲಿನ್ಯಕ್ಕೆ ತಮ್ಮದೇ ಕೊಡುಗೆ ನೀಡುತ್ತಾರೆ. ಇದೊಂದು ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ. ರೈತರು ಬೆಳೆದ ಭತ್ತದ ಹುಲ್ಲನ್ನು ಸುಡದೇ ವಿಲೇವಾರಿ ಮಾಡುವುದು ರಾಜ್ಯ ಸರಕಾರ ಗಳಿಗೆ ಸವಾಲಿನ ಕೆಲಸವಾಗಿದೆ.

೨೦೧೫ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಪೀಠ ಪಂಜಾಬ್, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಭತ್ತದ ಹುಲ್ಲನ್ನು ಸುಡುವುದನ್ನು ನಿಷೇಽಸಿ ಆದೇಶಿಸಿತ್ತು. ಇದರಿಂದ ಹೊರಹೊಮ್ಮುವ ದಟ್ಟ ಹೊಗೆಯಿಂದ ಉಸಿರಾಟದಂತಹ ಗಂಭೀರ ಸಮಸ್ಯೆಗಳು ಎದುರಾಗುತ್ತಿದೆ ಎಂದು ಆಭಿಪ್ರಾಯಪಟ್ಟ ನ್ಯಾಯ ಪೀಠ, ನಿಷೇಧದ ಜತೆಗೆ ಹುಲ್ಲು ಸುಡುವ ರೈತರಿಗೆ ದಂಡವನ್ನೂ ವಿಧಿಸಿತು. ಹಾಗೆಯೇ ನ್ಯಾಯಮಂಡಳಿ, ಈ ನಾಲ್ಕು ರಾಜ್ಯಗಳು ಹಾಗೂ ದೆಹಲಿ ಸರಕಾರಗಳಿಗೆ, ಸಂಬಂಧಪಟ್ಟ ಜಮೀನು ಮಾಲೀಕರು ಹುಲ್ಲನ್ನು ಸುಡದಂತೆ ಮಾಡಲು ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಹೇಳಿ, ಅದಕ್ಕೆ ಬೇಕಾದ ಯಂತ್ರೋಪಕರಣಗಳು ಹಾಗೂ ೫,೦೦೦ ರಿಂದ ೧೫,೦೦೦ದ ವರೆಗೆ ಸಹಾಯ ಧನ ನೀಡುವಂತೆಯೂ ಆದೇಶಿಸಿತು.

ಏಕೆ ಸುಡುತ್ತಾರೆ?
ಭತ್ತದ ಹುಲ್ಲನ್ನು ಸುಡುವ ಸಮಸ್ಯೆ ಅತೀ ಹೆಚ್ಚಾಗಿರುವುದು ಪಂಜಬ್‌ನಲ್ಲಿ. ಆದರೆ ಅಲ್ಲಿನ ರೈತರು ಹೇಳುವ ಪ್ರಕಾರ, ಹುಲ್ಲನ್ನು ಸುಡದೆ ಬೇರೆ ವ್ಯವಸ್ಥೆ ಮಾಡಲು ಏನಿಲ್ಲವೆಂದರೂ ಒಂದು ಎಕರೆಗೆ ಯಂತ್ರೋಪಕರಣಗಳ ಖರ್ಚು ಹಾಗೂ ಕೆಲಸಗಾರರ ಸಂಬಳವೇ ೫,೦೦೦ ಆಗುತ್ತದೆ. ಜತೆಗೆ ಸರಕಾರ
ಹೇಳುವ ರೀತಿ ಸರಿಯಾಗಿ ಸಹಾಯಧನವನ್ನೂ ವಿತರಿಸುತ್ತಿಲ್ಲ, ಇಂತಹ ಸಂದರ್ಭದಲ್ಲಿ ಹಾಕಿದ ಬಂಡವಾಳವೂ ಸಿಗುವುದು ಕಷ್ಟ.

ಆ ರಾಜ್ಯದಲ್ಲಿ ಹೆಚ್ಚಾಗಿ ಭತ್ತ ಹಾಗೂ ಗೋಧಿಯನ್ನು ಬೆಳೆಯಲಾಗುತ್ತದೆ. ವರ್ಷಕ್ಕೆ ಎರಡು ಬೆಳೆಯಂತೆ ಒಂದಾದ ನಂತರ ಇನ್ನೊಂದರಂತೆ ಬೆಳೆಸುತ್ತಾರೆ. ರಾಜ್ಯದಲ್ಲಿ ಸರಿ ಸುಮಾರು ಶೇ.೭೫ ರಷ್ಟು ಜನ ನೇರವಾಗಿ ವ್ಯವಸಾಯದ ಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿ ಭತ್ತ-ಗೋಧಿ- ಭತ್ತ-ಗೋಧಿ ಈ ವಿಧಾನ ಅನುಸರಿಸುವುದರಿಂದ, ಒಂದು ಬೆಳೆಯ ನಂತರ ಇನ್ನೊಂದು ಬೆಳೆಯ ತಯಾರಿಗೆ ಹೆಚ್ಚು ಸಮಯ ಸಿಗದು, ಯಂತ್ರೋಪಕರಣಗಳನ್ನು ಖರೀದಿಸಲಾಗದ ರೈತರು, ಬಾಡಿಗೆ ವ್ಯವಸ್ಥೆ ಹಾಗೂ ಕೆಲಸಗಾರರ ಸಂಬಳ ಎರಡೂ ಸಮಯದ ವ್ಯರ್ಥ ಮತ್ತು ಖರ್ಚು ಅಧಿಕ.

ಆದ್ದರಿಂದ ರೈತರು ಕಂಡುಕೊಂಡ ಸುಲಭ ಹಾಗೂ ಪರ್ಯಾಯ ಮಾರ್ಗ ಹುಲ್ಲನ್ನು ಸುಡುವುದು. ಪಂಜಬ್‌ನಲ್ಲಿ ಸರಾಸರಿ ೩೦ಲಕ್ಷ ಹೆಕ್ಟೇರ್‌ನಲ್ಲಿ ಭತ್ತ
ಬೆಳೆಯಲಾಗುವುದು, ಗೋಧಿಯ ನಂತರ ಅತೀ ಹೆಚ್ಚು ಬೆಳೆಯುವ ಬೆಳೆ ಭತ್ತ. ಮುಂಗಾರು ಆರಂಭವಾದ ನಂತರ ಅಕ್ಟೋಬರ್ ಮೊದಲ ವಾರದಲ್ಲಿ ಭತ್ತದ ವ್ಯವಸಾಯ ಪ್ರಾರಂಭಿಸುತ್ತಾರೆ, ಕಟಾವಿನ ಸಂದರ್ಭದಲ್ಲಿ ಸುಮಾರು ೧೯.೭ ಮಿಲಿಯನ್ ಟನ್ ಹುಲ್ಲು ಗದ್ದೆಯಲ್ಲಿ ಉಳಿಯುತ್ತದೆ, ಇದರಲ್ಲಿ ಶೇ.೭೦-೭೫ರಷ್ಟು ಸುಡುವುದರೊಂದಿಗೆ ವಿಲೇವಾರಿಯಾಗುತ್ತದೆ. ಇಲ್ಲಿ ಸರಕಾರದ ನಿಷೇಧದ ನಡುವೆಯೂ ಹಲವು ಸಂಘ-ಸಂಸ್ಥೆಗಳು ಹಾಗೂ ಒಕ್ಕೂಟ
ಗಳ ಸಹಕಾರದಿಂದ ರೈತರು ಹುಲ್ಲನ್ನು ಸುಡುತ್ತಾರೆ. ಜತೆಗೆ ರೈತರ ಮೇಲೆ ಯಾವುದೇ ರೀತಿ ಪೋಲಿಸ್ ಮೊಕದ್ದಮೆ ಆದರೂ ಕೂಡ ಅದರ ಪರಿಣಾಮ ವನ್ನು ಸರಕಾರ ಎದುರಿಸಬೇಕಾಗುತ್ತದೆ ಎಂಬುದು ಈ ಸಂಘ-ಸಂಸ್ಥೆಗಳ ಎಚ್ಚರಿಕೆ.

ತ್ಯಾಜ್ಯ ಸುಡುವುದನ್ನು ನಿಷೇಧಿಸುವ ಮೊದಲು ರಾಷ್ಟೀಯ ಹಸುರು ನ್ಯಾಯಮಂಡಳಿಯ ಆದೇಶದಂತೆ ಸರಿಯಾದ ರೀತಿಯಲ್ಲಿ ಸರಕಾರ ಯಂತ್ರೋ ಪಕರಣ ಹಾಗೂ ಸಹಾಯಧನ ನೀಡಲಿ. ನಂತರ ಕ್ರಮ ಕೈಗೊಳ್ಳಲಿ ಎಂಬುದು ಇವರ ಆಗ್ರಹ. ಹುಲ್ಲನ್ನು ವಿಲೇವಾರಿ ಮಾಡುವುದರ ಕುರಿತು ರೈತರಲ್ಲಿ
ಅರಿವು ಮೂಡಿಸಲು ಹಾಗೂ ನ್ಯಾಯಮಂಡಳಿಯ ಆದೇಶ ಅನುಷ್ಠಾನಗೊಳಿಸಲು ಪಂಜಾಬ್ ರಾಜ್ಯಸರಕಾರ ಮೊದಲು ಪಾಟಿಯಾಲ ಜಿಲ್ಲೆಯ ಕಲರ್ ಮಜ್ರಿ ಎಂಬ ಗ್ರಾಮವನ್ನುಆಯ್ದುಕೊಂಡಿತು. ಸರಕಾರ ಹೇಳುವ ಪ್ರಕಾರ ಈಗಾಗಲೇ ಈ ಗ್ರಾಮದ ರೈತರಿಗೆ ಅವಶ್ಯ ಯಂತ್ರೋಪಕರಣಗಳನ್ನು
ನೀಡಲಾಗಿದ್ದು, ೬೭ ಎಕರೆ ಕೃಷಿ ಭೂಮಿಯಲ್ಲಿ ಇವು ಕಾರ್ಯಾಚರಣೆ ನಡೆಸುತ್ತಿವೆ. ಜತೆಗೆ ಇದೇ ವಿಧಾನವನ್ನು ಪಾಟಿಯಾಲ ಜಿಲ್ಲೆಯ ಇನ್ನೂ ೬ ಗ್ರಾಮಗಳಲ್ಲಿ ಆರಂಭಿಸಲಾಗಿದೆ.

ಇನ್ನು ರಾಜ್ಯಸರಕಾರ ಸಬ್ಸಿಡಿ ಹಣದ ವಿಚಾರವಾಗಿ ಕೇಂದ್ರ ಸರಕಾರದ ಮುಂದೆ ಬೇಡಿಕೆ ಇಟ್ಟಿದ್ದು, ರೈತರಿಗೆ ಒಂದು ಕ್ವಿಂಟಾಲ್ ಹುಲ್ಲಿಗೆ ೧೦೦ರೂ. ನೀಡಬೇಕೆಂದು ಒತ್ತಾಯಿಸಿದೆ. ಈ ಸಹಾಯಧನವನ್ನು ಸರ್ಕಾರದ ಆದೇಶ ಪಾಲಿಸುವ ರೈತರಿಗೆ ಮಾತ್ರ ನೀಡಲಾಗುವುದು ಎಂಬುದು ರಾಜ್ಯ ಸರಕಾರ ನಿಲುವು. ಇಷ್ಟೇ ಅಲ್ಲದೆ ಪಂಜಾಬ್ ಸರ್ಕಾರವು ಕೃಷಿ ಸಚಿವಾಲಯ ಒಕ್ಕೂಟದಿಂದ ೨ ಸಾವಿರ ಕೋಟಿಯ ನಿರೀಕ್ಷೆಯಲ್ಲಿದೆ.

ಖುಷಿಯ ಯಂತ್ರ
ಪಂಜಾಬ್ ಕೃಷಿ ಇಲಾಖೆ ಹೇಳುವಂತೆ, ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿ ಪಡಿಸಿರುವ ‘ಹ್ಯಾಪಿ ಸೀಡರ್’ ಎಂಬ ಯಂತ್ರವನ್ನು ರೈತರಿಗೆ ಪೂರೈಸಲಾಗುತ್ತಿದೆ. ಇದರ ವಿಶೇಷತೆಯೆಂದರೆ ಭತ್ತ ಬೆಳೆದ ಜಾಗದಲ್ಲೇ ಕಟಾವಿನ ನಂತರ ಹುಲ್ಲನ್ನು ತೆಗೆಯದೇ ಗೋಽಯನ್ನು ನೆಡಬಹುದು. ಇದು ಸಮಯ ಉಳಿಸುವುದರ ಜತೆಗೆ, ಹುಲ್ಲು ನೆಲದಲ್ಲಿನ ತೇವಾಂಶ ಹಿಡಿದಿಟ್ಟುಕೊಳ್ಳುವುದರಿಂದ ನೀರಾವರಿಯ ಅವಶ್ಯಕತೆ ಕಡಿಮೆಯಾಗುತ್ತದೆ. ಹಾಗೆಯೇ ನಿರುಪಯುಕ್ತ ಕಳೆಗಳು ಹೆಚ್ಚು ಬೆಳೆಯಲಾರವು. ಇದರಿಂದ ಗೋಧಿಯ ಬೆಳೆ ರೋಗಕ್ಕೆ ತುತ್ತಾಗುವ ಸಾಧ್ಯತೆಯೂ ಕಡಿಮೆ. ಒಟ್ಟಾರೆ ಇದು ಸಾಂಪ್ರದಾಯಿಕ ಕೃಷಿಗಿಂತ ಹೆಚ್ಚು ಲಾಭದಾಯಕ.

ಈ ವಿಧಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಹಣಕಾಸಿನ ಅವಶ್ಯಕತೆಯಿದ್ದು, ಅದಕ್ಕಾಗಿ ಪಂಜಾಬ್ ಕೃಷಿ ಇಲಾಖೆಯು ಕೇಂದ್ರ ಸರಕಾರವನ್ನು ಎದುರು ನೋಡುತ್ತಿದೆ. ಆದರೆ ಪಂಜಾಬ್ ರೈತ ಸಂಘಗಳು ಹೇಳುವ ಪ್ರಕಾರ, ರಾಜ್ಯದಲ್ಲಿರುವ ಸಣ್ಣ-ಪುಟ್ಟ ರೈತರು ಈಗಾಗಲೇ ಹಲವು ರೀತಿಯ ನಷ್ಟಗಳನ್ನು ಎದುರಿಸುತ್ತಿದ್ದಾರೆ, ಈ ರೀತಿಯ ಯಂತ್ರಗಳನ್ನು ಸಬ್ಸಿಡಿ ಮೂಲಕ ಖರೀದಿಸಿದರೂ ಏನಿಲ್ಲ ವೆಂದರೂ ಎಕರೆಗೆ ೩ಸಾವಿರದಷ್ಟು ಹೆಚ್ಚುವರಿ ಹೊರೆ ಬೀಳಲಿದೆ ಎಂಬುದು ಇವರ ಅಳಲು ಭಾರತೀಯ ಕಿಸಾನ್ ಮಂಚ್ ವರದಿಯ ಪ್ರಕಾರ ಈ ಸಮಸ್ಯೆಗೆ ನಿಷೇಧ ಹಾಗೂ ದಂಡ ವಿಧಿಸುವುದು ಮಾತ್ರ
ಪರಿಹಾರವಲ್ಲ.

ರಾಜ್ಯದ ರೈತರು ಹೆಚ್ಚಾಗಿ ಭತ್ತ ಹಾಗೂ ಗೋಧಿ ಮಾತ್ರ ಬೆಳೆಯುತ್ತಿದ್ದಾರೆ. ಸರಕಾರವು ಬೆಳೆಗಳ ವೈವಿಧ್ಯೀಕರಣದ ನಿಟ್ಟಿನಲ್ಲಿ ರೈತರನ್ನು ಪ್ರೋತ್ಸಾಹಿಸ ಬೇಕು. ಭತ್ತ ಹಾಗೂ ಗೋಧಿಯ ಹೊರತಾಗಿ ಕಬ್ಬು ಅಥವಾ ರಾಜ್ಯದ ಹವಾಮಾನಕ್ಕೆ ಹೊಂದುವ ತರಕಾರಿ, ಬೇಳೆ-ಕಾಳುಗಳನ್ನು ಬೆಳೆಯುವಂತೆ ಸರಕಾರವು ಪ್ರಚಾರದೊಂದಿಗೆ ರೈತರನ್ನು ಉತ್ತೇಜಿಸಬೇಕು.

ಜೈವಿಕ ಪರಿಹಾರ
ಈ ಸಮಸ್ಯೆಗೆ ಕಂಡುಕೊಳ್ಳಬಹುದಾದ ಮೊದಲ ಪರಿಹಾರ ವೆಂದರೆ, ಜೈವಿಕ ಇಂಧನ ಸ್ಥಾವರದ ಮೂಲಕ ಶಕ್ತಿಯ ಉತ್ಪಾದನೆ. ಪಂಜಾಬ್‌ನ ಒಟ್ಟು  ಭತ್ತದ ಹುಲ್ಲಿನ ಪ್ರಮಾಣದಲ್ಲಿ ಸುಮಾರು ೪.೩ ಮಿಲಿಯನ್ ಟನ್‌ನಷ್ಟು ಪೇಪರ್, ಕಾರ್ಡ್‌ಬೋರ್ಡ್ ಹಾಗೂ ಪಶು ಆಹಾರ ತಯಾರಿಕೆಗೆ ಬಳಕೆಯಾದರೆ ಉಳಿದ ೧೫.೪ ಮಿಲಿಯನ್ ಟನ್ ಭತ್ತದ ಹುಲ್ಲನ್ನು ಸುಡಲಾಗುತ್ತದೆ. ಪಂಜಾಬ್ ರಾಜ್ಯದಲ್ಲಿ ದೊರಕುವ ಒಟ್ಟು ಕೃಷಿ ತ್ಯಾಜ್ಯವು ೧ಸಾವಿರ ಮೆಗಾವ್ಯಾಟ್
ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆದರೆ ಸರ್ಕಾರವು ಈ ನಿಟ್ಟಿನಲ್ಲಿ ಸರಿಯಾದ ರೀತಿಯ ಪ್ರಯತ್ನ ನಡೆಸುತ್ತಿಲ್ಲ.

ಪಾಟಿಯಾಲ ಜಿಲ್ಲೆಯ ಘಾನೌರ್ ನಗರದಲ್ಲಿರುವ ಪಂಜಾಬ್ ಬಯೋಮಾಸ್ ಪವರ್ ಲಿಮಿಟೆಡ್‌ನ ವರದಿಯಂತೆ, ಸ್ಥಾವರದ ೪೫ ಕಿಲೋ ಮೀಟರ್ ಸುತ್ತಮುತ್ತಲಿನ ರೈತರಿಂದ ಒಂದು ಟನ್‌ಗೆ ೧,೩೦೦ ರೂ ನೀಡಿ ಭತ್ತದ ಹುಲ್ಲನ್ನು ಖರೀದಿಸಿ ಜೈವಿಕ ಇಂಧನ ಉತ್ಪಾದಿಸಲಾಗುತ್ತದೆ, ಇನ್ನೂ ದೂರದಿಂದ ಖರೀದಿಸಲು ಅಽಕ ಸಾಗಣೆ ವೆಚ್ಚ ದೊಂದಿಗೆ ಆರ್ಥಿಕವಾಗಿ ಸರಿದೂಗಿಸಲು ಸಾಧ್ಯವಾಗಲಾರದು. ಈಗಾಗಲೇ ಪಂಜಾನಲ್ಲಿ ಒಟ್ಟು ೭ ಜೈವಿಕ ಇಂಧನ
ಸ್ಥಾವರಗಳಿದ್ದು ಸುಮಾರು ೬೨.೫ ಮೆಗಾವ್ಯಾಟ್ ವಿದ್ಯುತ್ ಶಕ್ತಿ ಉತ್ಪಾದಿಸುತ್ತಿವೆ. ಸರಕಾರ ಇನ್ನಷ್ಟು ಜೈವಿಕ ಇಂಧನ ಸ್ಥಾವರಗಳನ್ನು ಸ್ಥಾಪಿಸಿದಲ್ಲಿ, ಹುಲ್ಲನ್ನು ಸುಡುವ ಸಮಸ್ಯೆಯು ಪರಿಹಾರವಾಗುವುದರೊಂದಿಗೆ ರೈತರಿಗೂ ಒಂದಷ್ಟು ಆದಾಯ ಸಿಗುತ್ತದೆ. ಜತೆಗೆ ವಿದ್ಯುತ್ ಉತ್ಪಾದನೆಯೂ ಹೆಚ್ಚಾಗುತ್ತದೆ.

ನಮಗೆ ಸಮಸ್ಯೆ ಇಲ್ಲ
ಈ ಬಗೆಯ ಸಮಸ್ಯೆ ನಮ್ಮ ರಾಜ್ಯದಲ್ಲಿ ಇಲ್ಲ. ಕರ್ನಾಟಕದ ದೊಡ್ಡ ನಗರವಾದ ಬೆಂಗಳೂರು ದೆಹಲಿಯಷ್ಟು ಬೆಳೆದಿಲ್ಲ. ಜತೆಗೆ ಅಷ್ಟು ಮಾಲಿನ್ಯದ ಸಮಸ್ಯೆ ಸದ್ಯಕ್ಕಂತೂ ಇಲ್ಲ. ಇನ್ನು ಪಂಜಬ್‌ನ ರೈತರಂತೆ ಇಲ್ಲಿನ ರೈತರು ಹುಲ್ಲನ್ನು ಸುಡುವ ಪ್ರಶ್ನೆಯೇ ಇಲ್ಲ. ಏಕೆಂದರೆ ಕರ್ನಾಟಕದಲ್ಲಿ ಭತ್ತವನ್ನು
ಹೆಚ್ಚಾಗಿ ಬೆಳೆಯುವುದು ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಮಾತ್ರ. ಅದನ್ನು ಬಿಟ್ಟರೆ ಹೆಚ್ಚಾಗಿ ರಾಯಚೂರು ಜಿಲ್ಲೆಯಲ್ಲಿ. ಪಂಜಾಬ್‌ಗೆ ಹೋಲಿಸಿದರೆ ಕರ್ನಾಟಕದಲ್ಲಿ ಭತ್ತವನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದಿಲ್ಲ. ಹಾಗಾಗಿ ಹುಲ್ಲಿನ ಉತ್ಪತ್ತಿಯೂ ಕಡಿಮೆ.

ಇಲ್ಲಿ ಭತ್ತದ ಹುಲ್ಲನ್ನು ಜಾನುವಾರುಗಳಿಗೆ ಪ್ರಧಾನ ಆಹಾರವಾಗಿ ನೀಡುತ್ತಾರೆ. ಇಲ್ಲವೇ ಈ ಪ್ರದೇಶದ ವಾಣಿಜ್ಯ ಬೆಳೆಗಳಾದ ಅಡಕೆ, ತೆಂಗು ಮುಂತಾದ ಬೆಳೆಗಳಿಗೆ ಗೊಬ್ಬರವಾಗಿ ಉಪಯೋಗಿಸಲಾಗುತ್ತದೆ. ಪಂಜಾಬ್ ಸುತ್ತಮುತ್ತಲಿನ ರಾಜ್ಯಗಳಲ್ಲಿ ಇದೇ ರೀತಿ ಹುಲ್ಲನ್ನು ಜಾನುವಾರುಗಳಿಗೆ ಪ್ರಧಾನ ಆಹಾರ
ವಾಗಿ ನೀಡುವುದಿಲ್ಲ. ಕಾರಣ ಈ ಪ್ರದೇಶಗಳಲ್ಲಿ ವಾತಾವರಣವು ದಕ್ಷಿಣ ಭಾರತಕ್ಕೆ ಹೋಲಿಸಿದರೆ ಹೆಚ್ಚು ಶುಷ್ಕದಿಂದ ಕೂಡಿರುವುದರಿಂದ ಒಣ ಹುಲ್ಲು ಜನುವಾರುಗಳಿಗೆ ಆರೋಗ್ಯಕರವಲ್ಲ. ಇಲ್ಲಿ ಹೆಚ್ಚಾಗಿ ಹಸಿ ಹುಲ್ಲು ಮತ್ತು ಹೆಚ್ಚು ನೀರಿನಂಶ ಹೊಂದಿರುವ ಆಹಾರವನ್ನು ನೀಡುತ್ತಾರೆ. ಇದರಿಂದಲೇ ಹಾಲಿನ ಇಳುವರಿಯಲ್ಲಿ ದಕ್ಷಿಣ ಭಾರತದ ಹಸುಗಳಿಗೆ ಹೋಲಿಸಿದರೆ ಉತ್ತರ ಭಾರತದ ಹಸುಗಳು ಮುಂಚೂಣಿಯಲ್ಲಿವೆ. ಇವೆಲ್ಲದರ ನಡುವೆ ಭತ್ತದ ಹುಲ್ಲನ್ನು ಮೇವಾಗಿ ಬಳಸುವ ರಾಜ್ಯಗಳಿಗೆ ಸರಕಾರಗಳು ಪರಸ್ಪರ ಒಡಂಬಡಿಕೆಯ ಮೂಲಕ ಸಾಗಣೆ ಮಾಡುವ ಬಗ್ಗೆಯೋಚಿಸಬೇಕಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಸಮಸ್ಯೆಯಿಂದ ಹೊರತಾಗಿಲ್ಲ. ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದಾಗ ಪಂಜಾಬ್‌ನ ರೈತರನ್ನು ದೂಷಿ ಸಲಾಗುತ್ತದೆ. ಜತೆಗೆ ಇದು ರಾಜಕೀಯ ಕೆಸೆರೆರೆಚಾಟಕ್ಕೂ ಕಾರಣವಾಗುತ್ತಿದೆ. ಇದು ಕೇವಲ ಪಂಜಾಬ್ ರೈತರ ಸಮಸ್ಯೆಯಲ್ಲ. ಇಂತಹ ಹಲವು ರೀತಿಯ ಸಮಸ್ಯೆಗಳು ಹಲವು ರಾಜ್ಯದ ರೈತರನ್ನು ಕಾಡುತ್ತಿವೆ. ಭತ್ತದ ಹುಲ್ಲಿನಲ್ಲಿ ಧಗಧಗಿಸುವ ಬೆಂಕಿ, ರೈತನ ಒಡಲಿನ ನೋವಿನ ಜಲೆಯೆದುರು ಚಿಕ್ಕದೇ.