Friday, 13th December 2024

ಪ್ರಜಾಪ್ರಭುತ್ವವೋ ರಾಜಪ್ರಭುತ್ವವೋ?

ಇದೆಂಥಾ ವಿಚಿತ್ರ! ಒಮ್ಮೆ ಚುನಾವಣೆ ಗೆದ್ದು ಶಾಸಕನೋ, ಮಂತ್ರಿಯೋ ಆದ ತಕ್ಷಣ ಜನಪ್ರತಿನಿಧಿಗಳು ಅಂತ ಅನ್ನಿಸಿಕೊಂಡವರಿಗೆ ಒಂದು ರೀತಿಯ ದರ್ಪ, ಅಹಂಕಾರ ಎಲ್ಲವೂ ಆಭರಣಗಳಾಗಿ ಬಿಡುತ್ತವೆ. ಅವು ಇಲ್ಲದೆ ಅವರು ಕಂಗೊಳಿಸುವುದೇ ಇಲ್ಲವೇಕೆ? ಜನರಿಂದ ಆರಿಸಿಬಂದ ಈ ಮಹಾನು ಭಾವರು ಯಜಮಾನರ ಹಾಗೆ ಪೋಸು ಕೊಡುವುದೇನು… ಅನವಶ್ಯಕ ಟೀಕೆ- ಟಿಪ್ಪಣಿಗಳಿಂದ ಜನರ ಗಮನ ಸೆಳೆಯುವುದೇನು…!

ಅಬ್ಬಬ್ಬಾ, ನೋಡುವುದಕ್ಕೆ ಒಂಥರಾ ನಾಟಕ ಮಹಾಮಂಡಳಿಯ ಸದಸ್ಯರಂತೆ ಇರುತ್ತವೆ ಇವರ ವರ್ತನೆಗಳು. ಒಬ್ಬ ಸಂಸದರು ಹೇಳ್ತಾರೆ, ‘ನಮ್ಮ
ರಾಜ್ಯದ ತೆರಿಗೆ ಪಾವತಿಯ ಲಾಭ ನಮಗೆ ಕೊಡದೆ ಹೋದರೆ ಪ್ರತ್ಯೇಕ ರಾಷ್ಟ್ರದ ಕೂಗು ಎಬ್ಬಿಸಬೇಕಾಗ್ತದೆ’ ಅಂತ. ಅದಕ್ಕೆ ತಕ್ಕಂತೆ ಅವರ ಹಿಂಬಾಲಕರ ಪಡೆಯು ಎಕ್ಸ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಸಮರ್ಥನೆಗಳಂತೂ ಶುದ್ಧ ಅರ್ಥಹೀನ. ಇದನ್ನೆಲ್ಲಾ ನೋಡುತ್ತಾ ಹೋದರೆ ‘ಇದೇನಾ ಪ್ರಜಾಪ್ರಭುತ್ವ?’ ಎಂಬ ಪ್ರಶ್ನೆ ಹುಟ್ಟಿಕೊಳ್ಳೋದು ಸುಳ್ಳಲ್ಲ.

ಇಂಥ ಹಿಂಬಾಲಕರಿಗೆ ತಮ್ಮ ನಾಯಕ ಶಿರೋಮಣಿಗಳು ಏನು ಮಾಡಿದರೂ, ಮಾಡದಿದ್ದರೂ ಮಹಾನಾಯಕರಾಗಿ ಕಾಣುತ್ತಾರಲ್ಲ, ಇದೆಂಥ
ವಿಪರ್ಯಾಸ! ಈ ವ್ಯವಸ್ಥೆಗೂ, ರಾಜಪ್ರಭುತ್ವಕ್ಕೂ ಇನ್ನೆಂಥ ವ್ಯತ್ಯಾಸವಿದೆ? ನೀವೇ ಯೋಚಿಸಿ. ಹಿಂದೆ ರಾಜಪ್ರಭುತ್ವದಲ್ಲಿ ಹೊಗಳುಭಟರಿದ್ದರು, ಈಗ ಪ್ರಜಾಪ್ರಭುತ್ವದಲ್ಲಿ ಇಂಥ ಹಿಂಬಾಲಕರಿದ್ದಾರೆ. ನಾವೇನು? ನಮ್ಮ ಸಂಸ್ಕೃತಿ ಏನು? ಎಂಬ ಅರಿವು ಸಹ ಇವರಿಗೆ ಇದ್ದಂತಿಲ್ಲ. ಭಾರತವು ಒಮ್ಮೆ
ವಿಭಜನೆಯಾಗಿ ಅನುಭವಿಸಿದ ಸಂಕಷ್ಟಗಳೇ ಬಹಳಷ್ಟು ಇರುವಾಗ ಮತ್ತೊಮ್ಮೆ ಅಂಥ ಸಾಹಸಕ್ಕೆ ಕೈ ಹಾಕುವುದೇಕೆ? ಕೇವಲ ಅಧಿಕಾರಕ್ಕೆ ಬರಲು ಇಂಥ ಹುನ್ನಾರವೇಕೆ? ಸಾಧ್ಯವಾದರೆ ಸರಿಯಾದ ಮಾರ್ಗದಲ್ಲಿ ದೇಶವನ್ನು ಒಗ್ಗೂಡಿಸಿ ಮುನ್ನಡೆಯುವ ಪ್ರಯತ್ನಗಳಾಗಲಿ.

ಅಖಂಡ ಭಾರತವನ್ನು ತುಂಡು ಮಾಡುವ ಯೋಚನೆಗಳು ನಿಲ್ಲಲಿ. ಎಲ್ಲಾ ಸಮಯದಲ್ಲೂ ಹೀಗೆ ಸಮರ್ಥಿಸಿಕೊಳ್ಳುತ್ತ ಹೋದರೆ, ನಾಯಕರು ದಾರಿ ತಪ್ಪಿಬಿಟ್ಟಾರು ಜೋಕೆ! ಇದು ಒಂದು ಕಡೆಯಾದರೆ, ತಥಾಕಥಿತ ರಾಜಕಾರಣಿಗಳ ಸತತ ಜಿಗಿತದ್ದು ಇನ್ನೊಂದು ದುರಂತ. ಇಲ್ಲಿ ಅಧಿಕಾರ ಸಿಗಲಿಲ್ಲ, ಸರಿ
ಯಾಗಿ ಗೌರವಿಸಲಿಲ್ಲ ಅಂತ ಸಿದ್ಧಾಂತವನ್ನು ಮರೆತು ತಾವೇ ಬೈದು ಪ್ರತಿಪಕ್ಷಕ್ಕೆ ಜಿಗಿಯುವ ಆಟವಂತೂ ಬಹಳ ವಿಷಾದನೀಯ. ಈ ಕರ್ಮಕ್ಕೆ ಯಾಕೆ ಸಿದ್ಧಾಂತದ ಮುಖವಾಡ? ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಹೊಸದಲ್ಲ. ಆದರೆ, ಈಗಂತೂ ಅದೊಂದು ಮಕ್ಕಳಾಟವೇ ಆಗಿಬಿಟ್ಟಿದೆ, ಅದರಿಂದೇ ನೂ ಬಾಧಕವಿಲ್ಲ ಎಂಬಂತೆ ಆಗಿಬಿಟ್ಟಿದೆ.

ಪಕ್ಷದ ವರಿಷ್ಠರಿಂದ ಯಾವುದೇ ಅವಮಾನಗಳು ಆಗಿರದಿದ್ದರೂ ಕೇವಲ ಅಧಿಕಾರದ ಹಪಹಪಿಗೆ ಬಿದ್ದು ಪಕ್ಷ ಜಿಗಿತ ಮಾಡುವವರೇ ಇಲ್ಲಿ ಹೆಚ್ಚು. ಕೇಳಬೇಕಾದ್ದನ್ನು ಸರಿಯಾದ ರೀತಿ ಯಲ್ಲಿ ಕೇಳದ, ಕೇಂದ್ರದಲ್ಲಿ ಅನ್ಯಪಕ್ಷ ಅಧಿಕಾರದಲ್ಲಿದ್ದರೂ ರಾಜ್ಯದ ಅಭಿವೃದ್ಧಿಗೆ ಮಾಡಬೇಕಾದ ಕೆಲಸ ಮಾಡದೆ ಬರಿ ಟೀಕಿಸುವುದನ್ನೆ ರೂಢಿಯಾಗಿಸಿಕೊಂಡ ಇವರಿಂದ ಇನ್ನೇನು ತಾನೆ ನಿರೀಕ್ಷಿಸಬಹುದು? ಒಂದು ಕಡೆ ಓಲೈಕೆಯ ರಾಜಕಾರಣ, ಮತ್ತೊಂದು ಕಡೆ ಕುಟುಂಬ ರಾಜಕಾರಣ, ಮಗದೊಂದು ಕಡೆ ಸ್ವಾರ್ಥ ರಾಜಕಾರಣ. ಇವೆಲ್ಲದರ ಮಧ್ಯದಲ್ಲಿ ಅಭಿವೃದ್ಧಿಪರ ರಾಜಕಾರಣ ನೇಪಥ್ಯಕ್ಕೆ ಸರಿಯಲಾ ರಂಭಿಸಿದೆ.

ಪರಿಸ್ಥಿತಿ ಹೀಗೇ ಸಾಗಿದರೆ, ಮುಂದೊಂದು ದಿನ ‘ರಾಜಕೀಯ ಮುತ್ಸದ್ದಿ’ ಎಂಬ ಪರಿಕಲ್ಪನೆಗೆ ಅರ್ಥವೇ ಇಲ್ಲದಂತೆ ಆಗಬಹುದು.

(ಲೇಖಕರು ಹವ್ಯಾಸಿ ಬರಹಗಾರರು)