ಅವಲೋಕನ
ಡಾ.ಆರ್.ಜಿ.ಹೆಗಡೆ
ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಇತ್ತೀಚೆಗೆ ಆಡಿದ ಕೆಲವು ಮಾತುಗಳು ದೇಶಾದ್ಯಂತ ಭಾರೀ ಗದ್ದಲವೆಬ್ಬಿಸಿದವು.
ಆತ ಆ ಮಾತುಗಳನ್ನು ಬಹುಶಃ ತಣ್ಣನೆ ಸ್ವರದಲ್ಲಿ ವಿಷಾದ ದಿಂದ, ಗೊಣಗಾಟದಂತೆ, ನಿಟ್ಟುಸಿರಿನ ಜತೆ ಆಡಿದ್ದು ಇರಬಹುದು.
ಏನೆಂದರೆ ದೇಶದಲ್ಲಿ ಪ್ರಜಾಪ್ರಭುತ್ವ ಅತಿಯಾಗಿ ಹೋಗಿದೆ. ಹೀಗಾಗಿರುವುದರಿಂದ ಅತ್ಯಗತ್ಯವಾಗಿರುವ, ಮಹತ್ವದ ಮೂಲಭೂತ, ಸಾಮಾಜಿಕ, ರಾಜಕೀಯ, ಆರ್ಥಿಕ ಬದಲಾವಣೆಗಳನ್ನು, ಸುಧಾರಣೆಗಳನ್ನು ತರಲು ಸಾಧ್ಯವಾಗುತ್ತಿಲ್ಲ. ನಮ್ಮ ರಾಷ್ಟ್ರೀಯ ಪ್ರಗತಿಗೆ ಅಡ್ಡಿಯಾಗುತ್ತಿರುವ ವಿಷಯ ಇದು. ಮಾತುಗಳು ಆಡಬಾರದವೇನೂ ಅಲ್ಲ.
ಅಲ್ಲದೆ ಆತ ಹೇಳಿದ್ದು ಒಂದು ಅಭಿಪ್ರಾಯ. ಆದರೆ ಮಾತುಗಳಿಗೆ ಖಾರವಾದ ಪ್ರತಿಕ್ರಿಯೆ ಎದುರಾಯಿತು. ರೈತ ಚಳುವಳಿಯನ್ನು ಸೂಕ್ಷ್ಮವಾಗಿ ವಿರೋಧಿಸಿ ಆತ ಆಡಿದ ಮಾತು ಇದು. ಸರ್ವಾಧಿಕಾರಿ ಪ್ರವೃತ್ತಿಯ ಸರಕಾರದ ಧೋರಣೆಯನ್ನು ಈ ಮಾತುಗಳು ಹೊರಗೆಡವಿವೆ ಎಂಬ ಪ್ರತಿಕ್ರಿಯೆಗಳು ಬಂದವು. ಪತ್ರಿಕೆಗಳು, ವ್ಯಕ್ತಿಗಳು ಕಾದುಕೊಂಡಿದ್ದವರಂತೆ ಕಾಂತ್ ಮೇಲೆ ಮುಗಿಬಿದ್ದರು. ಕೆಲವು ಪತ್ರಿಕೆಗಳು ಎಡಿಟೋರಿಯಲ್‌ಗಳನ್ನು ಬರೆದವು. ದೇಶದ ‘ಬಾಬು’ ಗಳಿಗೆ, ಹಿರಿಯ ಹುದ್ದೆಗಳಲ್ಲಿರುವವರಿಗೆ ಟೀಕೆಗಳನ್ನು,
ಜನಾಭಿಪ್ರಾಯಗಳನ್ನು ಸ್ವೀಕರಿಸುವುದು ಮರೆತು ಹೋಗಿದೆ.
ಅವರಿಗೆ ಜನತೆ ಎಂದರೆ ಚಿಲ್ಲರೆ. ಅಸಡ್ಡೆ. ತಾವೇ ಎಲ್ಲದರಲ್ಲಿಯೂ ಬುದ್ಧಿವಂತರು ಎಂಬ ಭಾವನೆ ಅವರಿಗೆ. ಮತ್ತೆ ತಾವು ಹೇಳಿದ್ದಕ್ಕೆ, ಮಾಡಿದ್ದಕ್ಕೆ, ಜನ ವಿರೋಧ ವ್ಯಕ್ತಪಡಿಸಲೇಬಾರದು ಎಂಬ ಗರ್ವ ಇದೆ. ಏನು ಮಾಡಿದರೂ ಜನ ಸಹಿಸಿಕೊಂಡು ಸುಮ್ಮನಿರಬೇಕು ಎಂಬ ಸೊಕ್ಕು ಇದೆ. ಹೀಗಾಗಿ ಭಿನ್ನ ಮಾತುಗಳು ಬಂದರೆ ಅವರಿಗೆ ಸಹಿಸಲಾಗುವುದಿಲ್ಲ. ಇಂಥವರಿಗೆ ಪ್ರಜಾ ಪ್ರಭುತ್ವವೇ ಅತಿಪ್ರಜಾಪ್ರಭುತ್ವದಂತೆ ಕಾಣುತ್ತದೆ ಎಂದು ಕೂಗಾಡಿದವು.
ಎಂತಹ ಹರಿತವಾದ ಪ್ರತಿಕ್ರಿಯೆಗಳೆಂದರೆ ತಾನು ಅಂತಹ ಮಾತುಗಳನ್ನು ಆಡಿಯೇ ಇಲ್ಲ ಎಂದು ಹೇಳಿ ಆತ ಪಾರಾಗ ಬೇಕಾಯಿತು. ಕುತೂಹಲದ ವಿಷಯವೆಂದರೆ ಕಾಂತ್ ಆಡಿದ ಮಾತಿಗೆ ಬಂದ ಪ್ರತಿಕ್ರಿಯೆ ನಮ್ಮ ಪ್ರಜಾಪ್ರಭುತ್ವದಲ್ಲಿ ಒಂದು
‘ರಿಪಿಟಿಟಿವ್ ಪ್ಯಾಟ್ಟರ್ನ.’ ಅಂದರೆ ಈ ಹಿಂದೆಯೂ ಸುಧಾರಣೆಯ ಮಾತು ಆಡಿದ ಹಲವರಿಗೆ ಹೀಗೆಯೇ ಆಗಿದೆ. ಒಮ್ಮೆ ಇಂದಿರಾ ಗಾಂಧಿ ದೇಶಕ್ಕೆ ಅಧ್ಯಕ್ಷೀಯ ವ್ವವಸ್ಥೆ ಒಳ್ಳೆಯದೇನೋ ಎಂದು ಹೇಳಿದ್ದಕ್ಕೆ ಆಕೆ ಸರ್ವಾಧಿಕಾರಿ ಎಂಬ ಮಾತು ಬಂದಿತ್ತು.
ಸಂವಿಧಾನ ಬದಲಾಯಿಸುವ ಕುರಿತು ಮಾತಾಡಿದ್ದ ಎಂಪಿಯೊಬ್ಬರಿಗೂ ಹೀಗೆಯೇ ಆಗಿತ್ತು. ಅಂದರೆ ನಮ್ಮಲ್ಲಿ ಸುಧಾರಣೆಯ ಮಾತು ಅಡುವುದು ಸುಲಭವಲ್ಲ. ಇಲ್ಲವಾದರೆ ಸಾಧಾರಣವಾಗಿ ಮುಗ್ದವೆನಿಸುವ ಮಾತುಗಳಿಗೆ ಈ ರೀತಿಯ ಪ್ರತಿಕ್ರಿಯೆ ಏಕೆ
ಬರಬೇಕು? ಸುಧಾರಣೆಯ ಮಾತುಗಳು ನಮ್ಮಲ್ಲಿ ಯಾರನ್ನೋ ಹರ್ಟ್ ಮಾಡುತ್ತವೆಯೇ? ನಿಜಕ್ಕೂ, ಕಾಂತ್ ಹೇಳಿದಂತೆ (ಅಂತವರ) ಅತಿ ಪ್ರಜಾಪ್ರಭುತ್ವ ಜಾರಿಯಲ್ಲಿದೆಯೇ? ಅಂದರೆ ಹಲವು ಜನ ‘ಸರ್ವಾಧಿಕಾರ’ ಎಂದು ಕೂಗಾಡುವುದು ತಮ್ಮ ಅತಿ ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳುವ ತಂತ್ರವೇ? ನಮ್ಮ ಪ್ರಜಾಪ್ರಭುತ್ವ ರೋಗಗ್ರಸ್ಥವಾಗಿದೆಯೇ?
ಈ ಹಿನ್ನೆಲೆಯಾಗಿ ಪ್ರಜಾಪ್ರಭುತ್ವ, ಸರ್ವಾಧಿಕಾರ ಮತ್ತು ಅತಿ -ಪ್ರಜಾಪ್ರಭುತ್ವ ಎಂದರೇನೆಂಬುದನ್ನು ಸರಳವಾಗಿ ಅರ್ಥಮಾಡಿ ಕೊಳ್ಳಬೇಕು. ಪ್ರಜಾಪ್ರಭುತ್ವವೆಂದರೆ, ಜನರೇ (ಅಂದರೆ ಜನಪ್ರತಿನಿಽಗಳೇ) ಜನರ (ಅಂದರೆ ತಮ್ಮನ್ನು ಆಯ್ಕೆಮಾಡಿದವರ) ಆಶೋತ್ತರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವರಿಗೆ ಒಳ್ಳೆಯದಾಗುವ ರೀತಿಯಲ್ಲಿ ಕಾನೂನು ರಚಿಸಿ ಆಡಳಿತ ನಡೆಸುವ ರಾಜಕೀಯ ವ್ಯವಸ್ಥೆ. ಅಲ್ಲಿ ‘ಪ್ರಭುತ್ವ’ ಮತ್ತು ಆಳಲ್ಪಡುವವರು ಅವರ ನಡುವಿನ ಸಂಬಂಧ ಸೂಕ್ಷ್ಮವಾದದ್ದು.
ಸಂಕೀರ್ಣವಾದದ್ದು. ಏಕೆಂದರೆ ಅಲ್ಲಿ ‘ನಿಜ ಮಾಲಿಕ’ (ಜನತೆ) ಮತ್ತು ಗುತ್ತಿಗೆ ಮಾಲಿಕ (ಸರಕಾರ) ನಡುವೆ ಒಂದು ನಿರಂತರ ತಿಕ್ಕಾಟ ಮತ್ತು ಚೆಕ್ ಎಂಡ್ ಬ್ಯಾಲೆನ್ಸ್ ಇರುತ್ತದೆ. ಅಲ್ಲಿ ಯಾರಿಗೂ ‘ಸಂಪೂರ್ಣ ಅಧಿಕಾರ’ ಇರುವುದಿಲ್ಲ. ಅಷ್ಟೇ ಅಲ್ಲ. ಒಬ್ಬರೊಬ್ಬರ ಮೇಲೆ ಅಂದರೆ ಸರಕಾರದ ಮೇಲೆ ಜನರ ಹಿಡಿತ ಹಾಗೂ ಜನರ ಮೇಲೆ ಸರಕಾರದ ಹಿಡಿತ ಇರುತ್ತದೆ. ಮತ್ತೆ ಅದು
ಇರಲೇಬೇಕು. ಹೀಗೆ ಎರಡೂ ಕಡೆ ಜಗ್ಗಿದಾಗ ಕೇಂದ್ರ ಸ್ಥಾನದಲ್ಲಿ ಗಟ್ಟಿಯಾಗಿ ನಿಲ್ಲುವ ಪೆಂಡಾಲಿನ ಕಂಭದಂಥ ಸರಕಾರ ಪ್ರಜಾಪ್ರಭುತ್ವ. ಮತ್ತೆ ಒಂದು ಕಡೆ ತುಸು ಜಾಸ್ತಿ ಜಗ್ಗಿಬಿಟ್ಟರೆ ಸರಕಾರ ವಾಲಿಬಿಡುತ್ತದೆ.
ವಿಕಾರವಾಗಿ ಬಿಡುತ್ತದೆ. ಪೆಂಡಾಲಿನ ಹಾಗೆ. ಒಂದು ಕಡೆಯ ಜಗ್ಗಾಟ ಜನತೆ ಸರಕಾರದ ಮೇಲೆ ಹಾಕುವ ಮಿತಿ. ತನ್ನ ಕೆಲವು ಅಽಕಾರಗಳನ್ನು ಅದು ಸರಕಾರಕ್ಕೆ ಬಿಟ್ಟುಕೊಟ್ಟಿರುತ್ತದೆ ನಿಜ. ಏಕೆಂದರೆ ಹಾಗೆ ಕೆಲವು ಅಧಿಕಾರಗಳನ್ನು ಬಿಟ್ಟುಕೊಡದಿದ್ದರೆ ಸಾಂಕ ಜೀವನ ವ್ಯವಸ್ಥೆ ಸಾಧ್ಯವಾಗುವುದೇ ಇಲ್ಲ. ಆದರೆ ಅದು ಸರಕಾರಕ್ಕೆ ಬಿಟ್ಟುಕೊಟ್ಟಿರುವ ಅಧಿಕಾರ ಅಖಂಡವಲ್ಲ. ಅದಕ್ಕೆ ಕಂಡಿಶನ್ ಗಳು, ಮಿತಿಗಳು ಇರುತ್ತವೆ.
ಸರಕಾರವನ್ನು ಹೇಗೆ ಸಂಘಟಿಸಿಕೊಂಡು, ಯಾವ ರೀತಿ ಆಡಳಿತ ನಡೆಸಬೇಕೆಂಬ ಗಡಿ ಹಾಕಿ ಜನತೆ ಅಧಿಕಾರಗಳನ್ನು ಬಿಟ್ಟು ಕೊಟ್ಟಿರುತ್ತದೆ. ಅಂತಹ ಮಾರ್ಗದರ್ಶಿ ಸೂತ್ರಗಳ ಕೈಪಿಡಿಯೇ ಸಂವಿಧಾನ. ಸಂವಿಧಾನ ಮೂಲತಃ ಜನ ತಮ್ಮನ್ನು ಆಳುವವರಿಗೆ ಹಾಕುವ ಮೂಗುದಾರ. ಅದರ ಪ್ರಕಾರವೇ ಜನಪ್ರತಿನಿಧಿಗಳು ನಡೆಯಬೇಕು. ಆ ಚೌಕಟ್ಟಿನಲ್ಲಿಯೇ, ಆಶಯಗಳಂತೆಯೇ,
ಕಾಯಿದೆ ಕಾನೂನು ರಚನೆಯಾಗಿ ಆಡಳಿತ ನಡೆಯಬೇಕು.
ಅಧಿಕಾರವನ್ನು ಸರಕಾರ ದುರುಪಯೋಗ ಪಡಿಸಿಕೊಂಡರೆ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡರೆ
ಅಥವಾ ಜನತೆಯ ಪೂರ್ವಾನುಮತಿಯನ್ನು ಚುನಾವಣಾ ಪ್ರನಾಳಿಕೆಯ ಮೂಲಕ ಪಡೆಯದೆ ಸಂವಿಧಾನವನ್ನೇ ತಿದ್ದಲು ಪ್ರಯತ್ನಿಸಿದರೆ ಅದು ಸರ್ವಾಧಿಕಾರ. ಪ್ರಜಾಪ್ರಭುತ್ವದ ಇನ್ನೊಂದು ತುದಿ ಸರಕಾರ ಜನತೆಯ ಮೇಲೆ ಹಾಕುವ ಮಿತಿ. ತನ್ನ ಅಽಕಾರವನ್ನು ಸಾಂವಿಧಾನಿಕವಾಗಿ ಸರಕಾರಕ್ಕೆ ಬಿಟ್ಟುಕೊಟ್ಟ ಜನತೆ ಈಗ ಅದು ರಚಿಸುವ ಕಾಯಿದೆ ಕಾನೂನುಗಳನ್ನು ಕೇಳಲೇಬೇಕು. ತನ್ನ ಸ್ವಾತಂತ್ರ್ಯವನ್ನು ಅದು ಸ್ವೇಚ್ಛೆಯಾಗಿ ಬಳಸುವಂತಿಲ್ಲ.
ಭಿನ್ನ ಭಿನ್ನ ಅಭಿಪ್ರಾಯ ಹೊಂದಿರುವರೂ ಕೂಡ ಸರಕಾರ ಶಾಸನಬದ್ಧವಾಗಿ ಜಾರಿಗೆ ತಂದಿರುವ ಕಾನೂನುಗಳನ್ನು
ಪಾಲಿಸಲೇಬೇಕು. ಇಲ್ಲವೇ ಸರಕಾರದ ವಿರುದ್ಧ ಕೋರ್ಟಿಗೆ ಹೋಗಿ ನ್ಯಾಯಪಡೆಯಬೇಕು. ಮತ್ತೆ ಅವಶ್ಯವಿದ್ದಲ್ಲಿ ಜನತೆ
ಹಮ್ಮಿಕೊಳ್ಳಬಹುದಾದ, ಸರಕಾರದ ಕ್ರಮವನ್ನು ವಿರೋಧಿಸುವ ವಿಧಾನಗಳು ಕೂಡ ಒಂದು ಮಿತಿಯನ್ನು ದಾಟಬಾರದು. ಇಂತಹ ತಿಳಿವಳಿಕೆಗಳಿಗೆ ಜನತೆ ಲಕ್ಷ್ಯಕೊಡದೆ ಮನಸ್ಸಿಗೆ ಬಂದ ಹಾಗೆ ವರ್ತಿಸಲಾರಂಭಿಸಿದರೆ, ಮತ್ತೆ ಇಂತಹ ಸಂದರ್ಭದಲ್ಲಿ ಸರಕಾರಿ ವ್ಯವಸ್ಥೆ (ಪ್ರಜಾಪ್ರಭುತ್ವದ ಹೆಸರಿನಲಿ) ತಲೆಬಗ್ಗಿಸಿ ನಿಂತು ಜನರಿಗೆ ಮನಸ್ಸಿಗೆ ಬಂದಂತೆ ವ್ಯವಹರಿಸಲು ಬಿಟ್ಟುಬಿಟ್ಟರೆ, ಅದು ‘ಅತಿ- ಪ್ರಜಾಪ್ರಭುತ್ವ.’
ಇದೂ ಕೂಡ ಪ್ರಜಾಪ್ರಭುತ್ವದ ಕೃತಿಯೇ. ಏಕೆಂದರೆ ಇಲ್ಲಿ ರಾಷ್ಟ್ರೀಯ ಅಶಿಸ್ತು ಹುಟ್ಟಿಕೊಳ್ಳುತ್ತದೆ. ಪ್ರಜಾಪ್ರಭುತ್ವ ವಿಫಲ ವಾಗುತ್ತದೆ. ಈಗ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಏನು ಎಂದು ಗಮನಿಸೋಣ. ಹಬ್ಬದ ಸಂದರ್ಭ. ಮೆರವಣಿಗೆಯಲ್ಲಿ ಹತ್ತಾರು ಸಾವಿರ ಜನ ಕುಡಿದು ಅಪ್ಪಳಿಸಿ ಕುಣಿಯುತ್ತಾರೆ. ಸಾರ್ವಜನಿಕ ರಸ್ತೆಗಳೆಲ್ಲವೂ ಬಂದ್. ಹಾಗೆಂದು ಈ ಮೆರವಣಿಗೆಯನ್ನು
ರದ್ದು ಮಾಡಿ ಸರಕಾರದ ಆದೇಶಗಳಿವೆ. ಕಾನೂನುಗಳಿವೆ. ಆದರೆ ಸಾಯಂಕಾಲದಿಂದಲೇ ಆರಂಭವಾಗುವ, ಎದೆ ಬಿರಿಯುವ ರೀತಿಯಲ್ಲಿ ಧ್ವನಿವರ್ಧಕಗಳನ್ನು ಹಾಕಿದ ಮೆರವಣಿಗೆ ಸೂರ್ಯೋದಯದವರೆಗೂ ಮುಂದುವರಿಯುತ್ತದೆ.
ಗದ್ದಲವೋ ಗದ್ದಲ. ಅಸ್ತವ್ಯಸ್ತವಾದ ಸಾರ್ವಜನಿಕ ಜೀವನ. ಆದರೂ ಕೂಡ ‘ಆಡಳಿತ’ ಹಲವು ಸಲ ಇದು ನಡೆಯುತ್ತಿರುವಾಗಿ ಕಣ್ಣುಮುಚ್ಚಿ, ತಲೆತಗ್ಗಿಸಿ ನಿಂತು ಕೊಳ್ಳುತ್ತದೆ. ಯಾಕೋ ಇದನ್ನೆಲ್ಲ ನಿಲ್ಲಿಸಿ ಸಾರ್ವಜನಿಕ ಜೀವನವನ್ನು ಒಂದು ಶಿಸ್ತಿನಲ್ಲಿ ತರಲು ಸಾಧ್ಯವಾಗುವುದೇ ಇಲ್ಲ. ಇನ್ನೂ ಹಲವು ರೀತಿಯ ಚಿತ್ರಗಳನ್ನು ನೋಡಿ. ಜಿಲ್ಲಾಧಿಕಾರಿಯಂಥ ಅಧಿಕಾರಿಗೆ, ಕರ್ತವ್ಯ ನಿರತ ಅಧಿಕಾರಿಗಳಿಗೆ ಜನತೆ ಬಾಯಿಗೆ ಬಂದಂತೆ ಮಾತನಾಡಿದ ಉದಾಹರಣೆಗಳಿವೆ, ಮಾತನಾಡುತ್ತಾರೆ. ಚಿಕ್ಕ ಕಾರಣಕ್ಕೆ
ರಾಷ್ಟ್ರೀಯ ಹೆದ್ದಾರಿಗಳಲ್ಲಿ, ನಗರಗಳಲ್ಲಿ, ಬಂದ್ ಆಚರಣೆಯಾಗಿ ಬಿಡುತ್ತವೆ. ಆ ಸಂದರ್ಭದಲ್ಲಿ ಪೆಟ್ರೋಲ್ ಬಂಕುಗಳು, ಬಸ್ಸುಗಳು ಬೆಂಕಿಗೆ ಈಡಾಗುತ್ತವೆ. (ಹಲವು ಬಾರಿ) ಕೇಳುವವರೇ ಇಲ್ಲ. ಅದೆಲ್ಲ ಹೋಗಲಿ.
ಚಿಕ್ಕ ವಿಷಯಗಳನ್ನು ನೋಡಿ. ಮಾಸ್ಕ್ ಹಾಕಬೇಕೆಂದು, ಹೆಲ್ಮೆಟ್ ಹಾಕಬೇಕೆಂದು ಕಾನೂನುಗಳಿವೆ. ಆದರೆ ಅಧಿಕಾರಿಗಳಿಗೆ
ವಿಷಯ ಗೊತ್ತಿದೆ. ಅದನ್ನೆಲ್ಲ ಅವರು ಸಾಧಾರಣವಾಗಿ ವಾಸ್ತವದಲ್ಲಿ ಕಡ್ಡಾಯ ಮಾಡುವಂತಿಲ್ಲ. ನೋಡಿ ನೋಡಿ ಕಡ್ಡಾಯ ಮಾಡಬೇಕು. ಇಲ್ಲವಾದರೆ ಅವರ ಪರಿಸ್ಥಿತಿ ಕಷ್ಟವಾಗುತ್ತದೆ. ನಗರದ ಮಧ್ಯಭಾಗದಲ್ಲಿ ಪ್ರತಿಷ್ಠಿತ ವ್ಯಕ್ತಿಯೊಬ್ಬ ಅನಧಿಕೃತವಾಗಿ ಬೇಲಿ ಹಾಕಿಕೊಂಡ ಜಮೀನನ್ನು ವಶಪಡಿಸಿಕೊಳ್ಳಲಾಗುವುದಿಲ್ಲ. ಆತ ಜನ ಸೇರಿಸಿ ಗದ್ದಲಮಾಡುತ್ತಾನೆ. ವಿದ್ಯುತ್ತನ್ನು ನೀರನ್ನು ಜನ ಸರಕಾರದ ಆದೇಶಗಳ ವಿರುದ್ಧ ಬಳಸಿದರೂ ಏನೂ ಮಾಡುವಂತಿಲ್ಲ. ಗದ್ದಲವಾಗುತ್ತದೆ.
ಹಾಗಾಗಿ ಆಡಳಿತ ವ್ಯವಸ್ಥೆಗಳು ಹಲವು ಸಲ ‘ಜನತೆಯ ಆಶಯಗಳ’ ಮುಂದೆ ಶಿರಬಾಗಿ ನಿಲ್ಲುತ್ತವೆ. ಇನ್ನೂ ಹಲವು ವಿಷಯ ಗಳಿವೆ. ಅಂತಹ ವಿಷಯಗಳ ಕುರಿತು ನಮ್ಮಲ್ಲಿ ಯಾರೂ ಮಾತಾಡಕೂಡದು. ಸುಧಾರಣೆ ತರಲು ಹೇಳಬಾರದು. ಪ್ರಯತ್ನಿಸ ಬಾರದು. ಈಗಿರುವ ವ್ಯವಸ್ಥೆಗಳನ್ನು, ಕಾನೂನುಗಳನ್ನು ಬದಲಿಸಲೇಬಾರದು. ಯೋಚಿಸಬಾರದು ಕೂಡ. ಮೀಸಲಾತಿ, ಧರ್ಮ, ಜಾತಿ, ಮಹಿಳಾ ಸ್ವಾತಂತ್ರ, ಸಂವಿಧಾನ, ಖಾಸಗೀಕರಣ, ಪರಿಸರ ಇವು ಬಹುಶಃ ಅಂತಹ ಕೆಲವು ವಿಷಯಗಳು. ಸುಮಾರಾಗಿ
ಈ ವಿಷಯಗಳಲ್ಲಿ ಸುಧಾರಣೆ ತರುವ ಮಾತು ಕೂಡ ಯಾರೂ ಆಡುವಂತಿಲ್ಲ.
ಆಡಿದರೆ ಹಳೆಯ ರೀತಿಯಲ್ಲಿಯೇ ಮಾತನಾಡಬೇಕು. ಇರುವ ವ್ಯವಸ್ಥೆಯನ್ನು ಪ್ರಶ್ನಿಸುವಂತಿಲ್ಲ. ಬೇರೆ ರೀತಿ ಮಾತನಾಡಿದರೆ ‘ಜನಪರ ಚಳುವಳಿ’ಗಳೇ ಹುಟ್ಟಿಕೊಂಡುಬಿಡುತ್ತವೆ. ಆಡಿದವರು ಪರಿಣಾಮಗಳನ್ನು ಎದುರಿಸಲು ಸಿದ್ಧರಿರಬೇಕು. ಕ್ಷಮೆ ಕೇಳಬೇಕು.ಇಲ್ಲವಾದರೆ ಹಾಗೆ ಹೇಳಿಲ್ಲ ಎಂದು ಪಾರಾಗಬೇಕು. ಇನ್ನು ರೈತರು, ಶ್ರಮಿಕರು, ಕಾರ್ಮಿಕರು, ಬಡವರು, ಕೂಲಿ ಕಾರರು, ಮಹಿಳೆಯರು, ಬುಡಕಟ್ಟು ಜನಾಂಗದವರು, ಯುವ ಜನರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಾಧ್ಯಮ
ದವರು, ಅಲ್ಪಸಂಖ್ಯಾತರು, ಬಹುಸಂಖ್ಯಾತರು (ಉಳಿದವರು ಯಾರು?) ಮತ್ತಿತರರು ಕಾನೂನುಗಳನ್ನು ಪಾಲನೆ ಮಾಡದಿದ್ದಲ್ಲಿ ಸಾಧಾರಣವಾಗಿ ಅಧಿಕಾರಿಗಳು ಸುಮ್ಮನಿರಬೇಕು.
ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತಿಲ್ಲ. ತಪ್ಪಿತಸ್ಥರು ಜನಪ್ರತಿನಿಧಿಗಳೇ ಇದ್ದರಂತೂ ಮುಗಿದೇ ಹೋಯಿತು. ಅವರು ಎಂತಹ ಸಾರ್ವಜನಿಕ ಅಶಿಸ್ತನ್ನು, ಅರಾಜಕತೆಯನ್ನು ಸೃಷ್ಟಿಸಿದರೂ ಹೆಚ್ಚು ಕಡಿಮೆ ‘ಆಡಳಿತ’ ಕಮಕ್ ಕಿಮಕ್ ಅನ್ನುವಂತಿಲ್ಲ. ಕಣ್ಣುಮುಚ್ಚಿ ಕುಳಿತಿರಲೇಬೇಕು. ಹಾಸ್ಯದ, ದುರಂತದ ವಿಷಯ. ಸಾವಕಾಶವಾಗಿ ನಮ್ಮ ಸಾರ್ವಜನಿಕ ಕಚೇರಿಗಳಲ್ಲಿ , ಸ್ಕೂಲ್‌ಗಳಲ್ಲಿ ‘ಪ್ರಜಾಪ್ರಭುತ್ವ’ ಆರಂಭವಾಗಿದೆ. ಅಧಿಕಾರಿ ತನ್ನ ಕೆಳಗಿನವರನ್ನು ಸಮಯಕ್ಕೆ ಬರದಿದ್ದರೆ, ಕೆಲಸ ಮಾಡದಿದ್ದರೆ, ದಕ್ಷತೆಯಿಂದ, ಮನಸ್ಸುಕೊಟ್ಟು ಕೆಲಸ ಮಾಡದಿದ್ದರೆ, ಅಶಿಸ್ತಿನಿಂದ ನಡೆದುಕೊಂಡರೆ ಇತ್ಯಾದಿ ಇದ್ದರೂ ಪ್ರಶ್ನಿಸುವಂತಿಲ್ಲ.
ಅವರೆಲ್ಲ ಸೇರಿ ಅಧಿಕಾರಿಯ ‘ಸರ್ವಾಧಿಕಾರಿ’ ಧೋರಣೆಯನ್ನು ಪ್ರಶ್ನಿಸಲಾರಂಭಿಸುತ್ತಾರೆ. ಈಗ ಆ ಅಧಿಕಾರಿ ಕ್ರಮ ಎದುರಿಸ
ಬೇಕಾಗುತ್ತದೆ. ಹೆಚ್ಚು ಕಡಿಮೆ ವಿಷಯ ಈಗ ಎಲ್ಲಾ ಅಧಿಕಾರಿಗಳಿಗೂ ಗೊತ್ತಾಗಿ ಹೋಗಿದೆ. ಏನೆಂದರೆ ಖಂಡತುಂಡ ಕೆಲಸ
ಮಾಡುವಂತಿಲ್ಲ.‘ಎಡ್‌ಜಸ್ಟ್’ ಆಗುವುದು ಮುಖ್ಯ. ಹೀಗಾಗಿ ಈಗ ಸುಮಾರಾಗಿ ಸಾರ್ವಜನಿಕ ಕಚೇರಿಗಳಲ್ಲಿ ಸ್ಟ್ರಾಂಗ್ ಆಗಿ ಕೆಲಸ ಮಾಡುವಂತಿಲ್ಲ. ನಿರ್ಣಯ ತೆಗೆದುಕೊಳ್ಳುವಂತಿಲ್ಲ. ಸುಧಾರಣೆಗಳನ್ನು ಹಮ್ಮಿಕೊಳ್ಳುವಂತಿಲ್ಲ.
ಜನರ ಮೇಲೆ ಕಣ್ಣಿಟ್ಟೇ ಕೆಲಸ ಮಾಡಬೇಕು. ಅಲ್ಲದೆ ಬಹುತೇಕವಾಗಿ ತಾನೂ ಒಂದು ಜನರ ಗುಂಪನ್ನು – ಜಾತಿ, ಮತ, ಧರ್ಮ ಇಟ್ಟುಕೊಂಡು ಮೆನ್ಟೇನ್ ಮಾಡಲೇಬೇಕು. ಧಿಕ್ಕಾರ ಕೂಗಲು, ಜೈಕಾರ ಹಾಕಲು ಜನ ಬೇಕೇ ಬೇಕು. ಕಾನೂನಿಗನುಸಾರವಾಗಿ ಕೆಲಸಮಾಡುವುದು ಇತ್ಯಾದಿ ನಂತರದ ವಿಷಯ. ಇಲ್ಲವಾದರೆ ಆತ/ಆಕೆ ‘ಸರ್ವಾಧಿಕಾರಿ. ಸರ್ವಾಧಿಕಾರವನ್ನು ತೀವ್ರವಾಗಿ ಖಂಡಿಸುವ ಹೆಸರಿನಲ್ಲಿ ನಾವು ಬಹುಶಃ ಯಾವ ಕಡೆ ವಾಲಿಕೊಂಡಿದ್ದೇವೆ ಎಂಬುದನ್ನು ಹೇಳಲು ಮೇಲಿನ ಮಾತು.
ಬಹುಶಃ ಕಾಂತ್ ಹೇಳಲು ಪ್ರಯತ್ನಿಸಿದು ಇದು. ಮತ್ತೆ ಪ್ರತಿಭಟನೆ ಬಂದ ಕಾರಣ ತಿಳಿಯಿತಲ್ಲ?