Wednesday, 11th December 2024

ನಮ್ಮ ಪ್ರಜಾಪ್ರಭುತ್ವ ಸೋತಿಲ್ಲ, ಮತ್ತೆ ಗೆದ್ದಿದೆ

ಸಂಗತ

ಡಾ.ವಿಜಯ್ ದರಡಾ

ಯಾವ ರಾಜಕೀಯ ಪಕ್ಷ ಗೆದ್ದರೂ ಜನರಿಗೆ ಅದರಿಂದೇನೂ ವ್ಯತ್ಯಾಸವಾಗುವುದಿಲ್ಲ. ಗೆದ್ದ ರಾಜಕೀಯ ಪಕ್ಷ ದೇಶಕ್ಕಾಗಿ ಕೆಲಸ ಮಾಡಬೇಕು, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದಷ್ಟೇ ಜನರು ಬಯಸುತ್ತಾರೆ. ಪಕ್ಷ ರಾಜಕಾರಣವನ್ನು ಕಟ್ಟಿಕೊಂಡು ಜನರಿಗೆ ಏನಾಗ ಬೇಕಿದೆ! ಇದನ್ನು ಇವತ್ತು ಗೆಲ್ಲುವ ರಾಜಕೀಯ ಪಕ್ಷಗಳು ನೆನಪಿಟ್ಟುಕೊಳ್ಳಲಿ.

ಇನ್ನು ಕಾಯುವ ಅಗತ್ಯವಿಲ್ಲ! ಇನ್ನೇನು ಕೆಲವೇ ಹೊತ್ತಿನಲ್ಲಿ ಫಲಿತಾಂಶ ನಿಮ್ಮ ಮುಂದಿರಲಿದೆ. ಭಾರತೀಯರು ಯಾವ ರಾಜಕೀಯ ಪಕ್ಷಕ್ಕೆ ದೇಶವನ್ನು
ಆಳಲು ಅಧಿಕಾರ ನೀಡಿದ್ದಾರೆ ಎಂಬುದು ಇನ್ನು ಕೆಲ ಸಮಯದಲ್ಲೇ ಎಲ್ಲರಿಗೂ ತಿಳಿಯಲಿದೆ. ಆದರೆ ಒಂದು ಸಂಗತಿಯಂತೂ ಫಲಿತಾಂಶ ಪ್ರಕಟ ವಾಗುವುದಕ್ಕೂ ಮೊದಲೇ ಸ್ಪಷ್ಟವಾಗಿದೆ.

ಅದೇನೆಂದರೆ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತೊಮ್ಮೆ ಗೆದ್ದಿದೆ. ಭಾರತೀಯ ಪ್ರಜಾಪ್ರಭುತ್ವದ ವಿಶೇಷ ಲಕ್ಷಣ ಏನೆಂದರೆ, ಯಾರೂ ಈ ವ್ಯವಸ್ಥೆ ಯನ್ನು ಒತ್ತೆ ಇರಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಈ ದೇಶದ ಮತದಾರರು ತುಂಬಾ ಶಕ್ತಿಶಾಲಿಗಳು. ಅವರು ಸದಾ ಎಚ್ಚರಿಕೆಯಿಂದ ಇರುತ್ತಾರೆ.
೨೦೨೪ರ ಲೋಕಸಭೆ ಚುನಾವಣೆಯ ಚಟುವಟಿಕೆಗಳು ಬರೋಬ್ಬರಿ ಎರಡೂವರೆ ತಿಂಗಳ ಕಾಲ ನಡೆದಿವೆ. ಈ ಸಮಯದಲ್ಲಿ ಸಾಕಷ್ಟು ಸಂಗತಿಗಳು ಘಟಿಸಿವೆ. ರಾಜಕೀಯ ನಾಯಕರ ನಡುವಿನ ವಾಕ್ಸಮರಗಳಂತೂ ಎಷ್ಟೊಂದು ತೀವ್ರವಾಗಿದ್ದವು ಅಂದರೆ, ಕೊನೆಗೆ ಚುನಾವಣಾ ಆಯೋಗವೇ ಮಧ್ಯ ಪ್ರವೇಶ ಮಾಡಿ ಅವುಗಳಿಗೆ ಕಡಿವಾಣ ಹಾಕಬೇಕಾಯಿತು.

ತಡವಾದರೂ ಸರಿ, ಚುನಾವಣಾ ಆಯೋಗ ಅನೇಕ ರಾಜಕೀಯ ನಾಯಕರಿಗೆ ಹಾಗೂ ರಾಜಕೀಯ ಪಕ್ಷಗಳ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿತು. ಅವರಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿತು. ರಾಜಕೀಯ ನಾಯಕರು ಎಂತೆಂಥಾ ಮಾತುಗಳನ್ನು ಆಡಿದ್ದರು ಅಂದರೆ, ಅವುಗಳನ್ನು ನಾನಿಲ್ಲಿ ಬರೆಯಲು ಕೂಡ ಸಾಧ್ಯವಿಲ್ಲ. ಮಹಾರಾಷ್ಟ್ರದಲ್ಲಿ ಹೋಳಿ ಹಬ್ಬದ ಸಮಯದಲ್ಲಿ ಶಿಮ್ಗಾ ಎಂಬ ಇನ್ನೊಂದು ಹಬ್ಬ ನಡೆಯುತ್ತದೆ. ಅದರಲ್ಲಿ ಜನರು ತಮಗೆ ಗೊತ್ತಿರುವ ಬೈಗುಳಗಳನ್ನೆಲ್ಲಾ ಬಳಸಿ ಬೇಕಂತಲೇ ಕೆಟ್ಟ ಕೊಳಕು ಭಾಷೆಯಲ್ಲಿ ಬೇರೆಯವರಿಗೆ ಬೈಯುತ್ತಾರೆ. ಅದರಲ್ಲಿ ದ್ವೇಷವೇನೂ ತುಂಬಿರುವುದಿಲ್ಲ. ಆದರೆ ಬೈಗುಳ ಬಹಳ ಅಶ್ಲೀಲವಾಗಿರುತ್ತದೆ.

ಬಹುಶಃ ಹಬ್ಬ ಮುಗಿದ ಮೇಲೆ ಅವರಿಗೆ ಅದೆಲ್ಲ ನೆನಪಿರುವುದೇ ಇಲ್ಲ. ನನಗೆ ಚುನಾವಣೆಯ ಪ್ರಚಾರ ಕೂಡ ಒಂದು ರೀತಿಯಲ್ಲಿ ಆ ಶಿಮ್ಗಾ ಹಬ್ಬದಂತೆ ಕಾಣಿಸಿತ್ತು. ಆದರೆ ಹಾಗೆ ಬೈದಾಡಿಕೊಂಡ ರಾಜಕಾರಣಿಗಳು ಚುನಾವಣೆ ಮುಗಿದ ಮೇಲೆ ಒಬ್ಬರನ್ನೊಬ್ಬರು ಪರಸ್ಪರ ವಿಶ್ವಾಸದಿಂದ ಮಾತನಾಡಿಸು
ತ್ತಾರೋ ಇಲ್ಲವೋ ಗೊತ್ತಿಲ್ಲ! ಯಾರು ತುಂಬಾ ಸಭ್ಯ ರಾಜಕಾರಣಿ ಎಂದುಕೊಂಡಿದ್ದೆನೋ ಅವರು ಕೂಡ ಈ ಬಾರಿ ಅಸಭ್ಯ ಭಾಷೆ ಬಳಸಿ ತಮ್ಮ ರಾಜಕೀಯ ವಿರೋಧಿಗಳನ್ನು ದೂಷಿಸುವುದನ್ನು ಕೇಳಿ ವಿಚಲಿತಗೊಂಡಿದ್ದೇನೆ.

ನಾನು ಕೂಡ ರಾಜಕೀಯ ಕುಟುಂಬದಲ್ಲೇ ಜನಿಸಿದವನು. ೧೮ ವರ್ಷಗಳ ಕಾಲ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದನಾಗಿ ಕೆಲಸ ಮಾಡಿದ ಅನುಭವ ನನಗಿದೆ. ೧೯೬೨ರ ನಂತರ ಈ ದೇಶದಲ್ಲಿ ನಡೆದ ಎಲ್ಲಾ ಚುನಾವಣೆಗಳನ್ನೂ ಸಾಕಷ್ಟು ಹತ್ತಿರದಿಂದ ನೋಡಿದ್ದೇನೆ. ಆ ಅನುಭವದ ಆಧಾರದಲ್ಲಿ ಹೇಳುವುದಾದರೆ, ಕಳೆದೆಲ್ಲಾ ಚುನಾವಣೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಈ ವರ್ಷದ ಚುನಾವಣೆಯಲ್ಲಿ ಅಸಂಸದೀಯ ಮಾತುಗಳು
ಹಾಗೂ ಅಸಭ್ಯ ದೂಷಣೆಗಳು ಕೇಳಿಬಂದಿವೆ. ಇದಕ್ಕೆ ಯಾರನ್ನು ಹೊಣೆ ಮಾಡಬೇಕೋ ತಿಳಿಯುತ್ತಿಲ್ಲ. ವ್ಯವಸ್ಥೆ ಇಲ್ಲಿಗೆ ಬಂದು ತಲುಪಲು ಯಾರು ಕಾರಣ? ಅಧಿಕಾರದಲ್ಲಿ ಇರುವ ನಾಯಕರೋ ಅಥವಾ ಅಧಿಕಾರವಿಲ್ಲದೆ ಚಡಪಡಿಸುತ್ತಿರುವ ವಿರೋಧ ಪಕ್ಷಗಳ ನಾಯಕರೋ? ಆದರೆ ನಾನು ಮಾತ್ರ
ಯಾವಾಗಲೂ ಈ ದೇಶದ ಮತದಾರರನ್ನು ನಂಬಿದ್ದೇನೆ.

ಅವರ ಕರ್ತೃತ್ವ ಶಕ್ತಿ ಮತ್ತು ಅವರ ಯುಕ್ತಾಯುಕ್ತ ವಿವೇಚನೆಯ ಸಾಮರ್ಥ್ಯದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ರಾಜಕೀಯ ದೂಷಣೆಗಳು ಹಾಗೂ ಚುನಾವಣಾ ಗಿಮಿಕ್‌ಗಳಿಂದ ನಮ್ಮ ದೇಶದ ಮತದಾರರನ್ನು ಬೇಸ್ತು ಬೀಳಿಸಲು ಯಾರಿಗೂ ಸಾಧ್ಯವಿಲ್ಲ. ಈ ಸಲ ಚುನಾವಣೆಯ ಕಾವಿನ ಜತೆಗೇ ಬೇಸಿಗೆಯ ತಾಪ ಕೂಡ ತುಂಬಾ ಇತ್ತು. ಅದು ಚುನಾವಣೆಯ ಕಾವನ್ನು ಇನ್ನಷ್ಟು ಹೆಚ್ಚಿಸಿತ್ತು. ಬಹುಶಃ ಆ ಕಾರಣಕ್ಕೂ ಇರಬಹುದು, ಪ್ರಚಾರ ಮಾಡುವ ರಾಜಕೀಯ ನಾಯಕರಿಗೆ ಎಂದಿಗಿಂತ ಹೆಚ್ಚು ‘ತಲೆಬಿಸಿ’ ಆಗಿದ್ದಿರಬಹುದು.

ದೇಹಕ್ಕಾದ ತಾಪದ ಚಡಪಡಿಕೆ ಯಿಂದ ಅವರು ನಾಲಿಗೆಯ ಮೇಲೆ ನಿಯಂತ್ರಣ ಕಳೆದು ಕೊಂಡು ವೇದಿಕೆಯ ಮೇಲಿನಿಂದ ಬಿಸಿಬಿಸಿಯಾದ ಮಾತು ಗಳನ್ನು ಆಡಿರಬಹುದು. ರಾಜಕೀಯ ನಾಯಕರ ಕೆಲಸವೇನೂ ಸುಲಭವಲ್ಲ ಕಣ್ರೀ! ಚುನಾವಣೆ ಬಂದಾಗ ಅವರೂ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ! ಪ್ರಧಾನಿ ನರೇಂದ್ರ ಮೋದಿ ನಡೆಸಿದ ಪ್ರಚಾರ ರ‍್ಯಾಲಿಗಳನ್ನೂ, ರೋಡ್‌ಶೋಗಳನ್ನೂ ನೀವು ನೋಡಿದ್ದೀರಲ್ಲವೇ? ಪ್ರತಿ ಸಮಾವೇಶ ಹಾಗೂ ರೋಡ್‌ಶೋನಲ್ಲೂ ಅವರೇ ಮುಂದೆ ಇರುತ್ತಿದ್ದರು. ಆರಂಭದಿಂದ ಕೊನೆಯವರೆಗೂ ಸ್ವಲ್ಪವೂ ದಣಿಯದೆ ಉತ್ಸಾಹದಿಂದ ಪಾಲ್ಗೊಳ್ಳು ತ್ತಿದ್ದರು.

ಚುನಾವಣಾ ಪ್ರಚಾರದ ವಿಷಯದಲ್ಲಿ ಅವರಿಗಿರುವಷ್ಟು ಶಕ್ತಿ ಇನ್ನಾರಿಗೂ ಇಲ್ಲ ಬಿಡಿ. ಈ ವಯಸ್ಸಿನಲ್ಲಿ ಅವರಷ್ಟು ಉತ್ಸಾಹವನ್ನು ಬೇರಾರೂ ಪ್ರದರ್ಶಿಸಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಗೆ ಅವರು ಬಿಜೆಪಿ ಪರ ೨೦೦ಕ್ಕೂ ಹೆಚ್ಚು ರ‍್ಯಾಲಿ ಹಾಗೂ ರೋಡ್‌ಶೋಗಳನ್ನು ನಡೆಸಿದರು. ೮೦ಕ್ಕೂ ಹೆಚ್ಚು ಸಂದರ್ಶನಗಳನ್ನು ನೀಡಿದರು. ಆದರೂ ಒಂದೇ ಒಂದು ಕಡೆ ದಣಿದವರಂತೆ ತೋರಿಸಿಕೊಳ್ಳಲಿಲ್ಲ. ಅವರ ಶಕ್ತಿಯನ್ನು ಖಂಡಿತ ಮೆಚ್ಚಬೇಕು. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕೂಡ ರ‍್ಯಾಲಿ ಹಾಗೂ ರೋಡ್‌ಶೋಗಳ ಲೆಕ್ಕದಲ್ಲಿ ಸೆಂಚುರಿ ಬಾರಿಸಿದರು. ಮಜಾ ಏನು ಅಂದರೆ, ಈ ಸಲ ರಾಜಕೀಯ ನಾಯಕರು ತಮ್ಮ ಬಗ್ಗೆ ಅಥವಾ ತಮ್ಮ ಪಕ್ಷದ ಅಜೆಂಡಾಗಳ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷದವರ ಬಗ್ಗೆಯೇ ಮಾತನಾಡಿದರು.

ತಮ್ಮ ಪ್ರತಿಸ್ಪರ್ಧಿಗಳು ಎಷ್ಟು ನಿಷ್ಪ್ರಯೋಜಕರು ಎಂಬುದನ್ನು ಸಾಬೀತುಪಡಿಸುವುದರಲ್ಲೇ ಎಲ್ಲರೂ ವ್ಯಸ್ತರಾಗಿದ್ದರು. ಅದನ್ನೆಲ್ಲ ನೋಡಿದಾಗ ನನಗೆ
ಈ ದೇಶದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಪಂಡಿತ್ ಜವಾಹರಲಾಲ್ ನೆಹರು ಹೇಳಿದ ಒಂದು ಮಾತು ನೆನಪಾಯಿತು. ‘ತಪ್ಪು ಮಾರ್ಗದಲ್ಲಿ ಗೆಲ್ಲುವುದಕ್ಕಿಂತ ಒಳ್ಳೆಯ ಮಾರ್ಗ ದಲ್ಲಿ ಸೋಲುವುದು ಮೇಲು’ ಎಂದು ನೆಹರು ಹೇಳಿದ್ದರು. ಅಷ್ಟೇ ಅಲ್ಲ, ಇನ್ನೊಮ್ಮೆ ೧೯೬೨ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಖಬ್‌ಚಂದ್ ಶರ್ಮಾ ಪರ ಪ್ರಚಾರ ಮಾಡಲು ಅವರು ನಾಗ್ಪುರಕ್ಕೆ ಬಂದಿದ್ದರು. ಅಲ್ಲಿ ಅವರು ರಿಖಬ್‌ಚಂದ್ ಶರ್ಮಾ ಬಗ್ಗೆ ಹೆಚ್ಚು ಮಾತನಾಡಲೇ ಇಲ್ಲ. ಅದರ ಬದಲಿಗೆ ಆ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಲೋಕನಾಯಕ ಬಾಪೂಜಿ ಅಲಿಯಾಸ್ ಮಾಧವ ಶ್ರೀಹರಿ ಆನೆಯವರು ತುಂಬಾ ಒಳ್ಳೆಯ ಮನುಷ್ಯ ಎಂದು ಭಾಷಣ ಮಾಡಿ ಹೋಗಿದ್ದರು! ಕೊನೆಗೆ ಆ ಚುನಾವಣೆಯಲ್ಲಿ ಲೋಕನಾಯಕ ಬಾಪೂಜಿಯೇ ಗೆದ್ದಿದ್ದರು. ಅದೆಲ್ಲ ಈಗ ಇತಿಹಾಸ.

ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲೂ ಒಂದೆರಡು ತಾಸು ಸಮಯ ಖರ್ಚು ಮಾಡಿ ಮನೆಯಿಂದ ಹೊರಗೆ ಬಂದು ಮತದಾನ ಮಾಡದೆ ಇರುವ ಜನರ ಬಗ್ಗೆ ನನಗೆ ಬಹಳ ಬೇಸರವಿದೆ. ಈ ಸಲದ ಲೋಕಸಭೆ ಚುನಾವಣೆಯ ಏಳು ಹಂತಗಳ ಪೈಕಿ ಆರು ಹಂತಗಳಲ್ಲಿ ೨೯ ಕೋಟಿ ಮತದಾರರು
ಮತದಾನ ಮಾಡಿಲ್ಲ. ಹಾಗೆಂದು ಚುನಾವಣಾ ಆಯೋಗವೇ ಅಂಕಿ-ಅಂಶ ನೀಡಿದೆ. ಇದು ಹೆಚ್ಚುಕಮ್ಮಿ ಅಮೆರಿಕದಲ್ಲಿರುವ ಒಟ್ಟು ಮತದಾರರಿಗಿಂತ ೫ ಕೋಟಿಯಷ್ಟು ಹೆಚ್ಚು. ಅಮೆರಿಕ ದಲ್ಲಿ ಸುಮಾರು ೨೪ ಕೋಟಿ ನೋಂದಾಯಿತ ಮತದಾರರಿದ್ದಾರೆ. ನಮ್ಮ ದೇಶದ ಪ್ರಜಾಪ್ರಭುತ್ವದ ಅಗಾಧತೆ ಎಷ್ಟು
ಎಂಬುದು ನಿಮಗೆ ಸುಲಭವಾಗಿ ಅರ್ಥವಾಗಲಿ ಎಂಬ ಕಾರಣಕ್ಕೆ ನಾನು ಈ ಹೋಲಿಕೆ ಮಾಡುತ್ತಿದ್ದೇನೆ.

ನಾನು ಇತ್ತೀಚೆಗೆ ಅಮೆರಿಕ ಮತ್ತು ಮೆಕ್ಸಿಕೋ ದೇಶಕ್ಕೆ ಭೇಟಿ ನೀಡಿದಾಗ ಅಲ್ಲಿ ಅನೇಕರು ‘ನೀವು ಭಾರತದಲ್ಲಿ ಅಷ್ಟೊಂದು ದೊಡ್ಡ ಚುನಾವಣೆಯನ್ನು ಶಾಂತಿಯುತವಾಗಿ ಹೇಗೆ ನಡೆಸುತ್ತೀರಿ?’ ಎಂದು ಕೇಳಿ ಆಶ್ಚರ್ಯ ವ್ಯಕ್ತಪಡಿಸಿದ್ದರು. ಭಾರತದ ಪ್ರಜಾ ಪ್ರಭುತ್ವದ ಅಗಾಧತೆ ಇಡೀ ಜಗತ್ತಿಗೆ ಒಂದು ಅಚ್ಚರಿ. ಈ ಅಗಾಧತೆಯನ್ನು ಹಾಗೂ ಅದ್ಭುತ ವ್ಯವಸ್ಥೆಯನ್ನು ಹೀಗೇ ಉಳಿಸಿಕೊಂಡು ಹೋಗಬೇಕು ಅಂದರೆ ಚುನಾವಣೆಗಳು ನಡೆದಾಗ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಮತದಾನ ಮಾಡಬೇಕು. ಮತದಾನ ಮಾಡುವುದು ಏಕೆ ಮುಖ್ಯ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು.

ಇಷ್ಟಾಗಿಯೂ ಮತದಾನ ಮಾಡದೆ ಇರುವವರಿಗೆ ಸರಕಾರ ನೀಡುವ ಕೆಲ ಸೌಕರ್ಯಗಳನ್ನು ಕಡಿತಗೊಳಿಸಬೇಕು. ಅದರಲ್ಲಿ ಏನೂ ತಪ್ಪಿಲ್ಲ. ನಾನಂತೂ ಮತದಾನ ಮಾಡುವುದು ದೇವರ ಪೂಜೆಗೆ ಸಮನಾದ ಕಾರ್ಯ ಎಂದು ಪರಿಗಣಿಸುತ್ತೇನೆ. ನನಗೆ ಅದೊಂದು ಪ್ರಾರ್ಥನೆ. ಮತದಾನದಲ್ಲಿ ನನಗೆ ಅದೇನೋ ಒಂದು ರೀತಿಯ ಭಕ್ತಿ. ಎಲ್ಲಿಯವರೆಗೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇರುತ್ತದೆಯೋ ಅಲ್ಲಿಯವರೆಗೆ ಸ್ವಾತಂತ್ರ್ಯ ನಮ್ಮ ಹಣೆಯಲ್ಲಿ ಬರೆದಿರುತ್ತದೆ. ಇಂದಿಗೂ ಜಗತ್ತಿನ ೫೦ಕ್ಕೂ ಹೆಚ್ಚು ದೇಶಗಳಲ್ಲಿ ಜನರಿಗೆ ಮತದಾನ ಮಾಡುವ ಹಕ್ಕೇ ಇಲ್ಲ.

ಅಲ್ಲಿ ಜನಸಾಮಾನ್ಯರ ಬದುಕು ಗುಲಾಮರಿಗಿಂತ ಕಡೆ. ಹೀಗಾಗಿ ನಾನಂತೂ ಯಾವಾಗಲೂ ನ್ಯಾಯಯುತ ಹಾಗೂ ಶಾಂತಿಯುತವಾದ ಚುನಾವಣೆಯು ಭಾರತೀಯ ಪ್ರಜಾಪ್ರಭುತ್ವದ ಗೆಲುವು ಅಂತಲೇ ಭಾವಿಸುತ್ತೇನೆ. ನಾನಿಲ್ಲಿ ಇನ್ನೊಂದು ಸಂಗತಿ ಹೇಳಬೇಕು. ಮತ ಎಣಿಕೆಯ ಬಳಿಕ ೨೦೨೪ನೇ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟ ವಾಗುತ್ತದೆ. ಯಾವ ರಾಜಕೀಯ ಪಕ್ಷ ಇನ್ನು ಐದು ವರ್ಷಗಳ ಕಾಲ ದೇಶವನ್ನು ಆಳುತ್ತದೆ ಎಂಬುದು ನಿರ್ಧಾರವಾಗುತ್ತದೆ. ಗೆದ್ದವರಿಗೆ ಈಗಲೇ ಅಡ್ವಾನ್ಸ್ ಆಗಿ ಅಭಿನಂದನೆಗಳು. ಆದರೆ ಗೆದ್ದವರು ಮತ್ತು ಸೋತವರಿಬ್ಬರೂ ತಮ್ಮ ಜವಾಬ್ದಾರಿಯನ್ನು
ಅರ್ಥ ಮಾಡಿಕೊಳ್ಳಬೇಕು. ಗೆದ್ದವರು ತಮಗೆ ಮತ ಹಾಕಿದವರ ಆಶೋತ್ತರಗಳನ್ನು ಹೊತ್ತು ಸಂಸತ್ತಿಗೆ ಪ್ರವೇಶಿಸುತ್ತಾರೆ.

ಸೋತವರು ವಿರೋಧ ಪಕ್ಷದಲ್ಲಿರುತ್ತಾರೆ. ದೇಶದ ಬಗ್ಗೆ ಆಡಳಿತಾರೂಢ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇರುತ್ತದೆಯೋ ಅಷ್ಟೇ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇರುತ್ತದೆ. ಸದ್ಯಕ್ಕೆ ಎಲ್ಲರೂ ಪ್ರಜಾಪ್ರಭುತ್ವದ ದೀಪಾವಳಿ ಹಬ್ಬವೆಂದು ಕರೆಸಿಕೊಳ್ಳುವ ಚುನಾವಣೆಯ ಫಲಿತಾಂಶವನ್ನು ಸಂಭ್ರಮಿಸೋಣ.
ಎಲ್ಲರೂ ಒಟ್ಟಾಗಿ ಪ್ರಜಾಪ್ರಭುತ್ವವನ್ನು ಅಭಿನಂದಿಸೋಣ. ಎಲ್ಲರೂ ಒಗ್ಗಟ್ಟಿನಿಂದ ಭಾರತವನ್ನು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ರೂಪಿಸಲು ಪ್ರಯತ್ನಿಸೋಣ. ಅಭಿವೃದ್ಧಿಯ ತೇರನ್ನು ಒಟ್ಟಾಗಿ ಕೈಜೋಡಿಸಿ ಎಳೆಯೋಣ. ದೇಶ ಅಭಿವೃದ್ಧಿ ಹೊಂದಿದಂತೆ ಅದರ ಫಲ  ಜನ ಸಾಮಾನ್ಯ ರಿಗೆ ಹಾಗೂ ಕಡುಬಡವರಿಗೂ ಸಿಗುವಂತೆ ಶ್ರಮಿಸೋಣ. ದೇಶದ ೮೦ ಕೋಟಿ ಜನರಿಗೆ ಸರಕಾರ ಉಚಿತವಾಗಿ ಆಹಾರ ಒದಗಿಸುವ ಅಗತ್ಯ ಇರಬಾರದು. ಎಲ್ಲರಿಗೂ ಅವರವರ ಆಹಾರವನ್ನು ಅವರೇ ಗಳಿಸಿಕೊಳ್ಳುವ ಶಕ್ತಿ ಲಭಿಸಬೇಕು. ಈ ಗುರಿಯನ್ನು ಸಾಧಿಸುವ ಮೂಲಕ ಸಶಕ್ತ ಹಾಗೂ ಸಮರ್ಥ ಭಾರತವನ್ನು ಕಟ್ಟಲು ಎಲ್ಲರೂ ಕಷ್ಟಪಟ್ಟು ಕೆಲಸ ಮಾಡೋಣ!

(ಲೇಖಕರು ಹಿರಿಯ ಪತ್ರಕರ್ತರು)