Friday, 13th December 2024

ಡೆಂಘೀ ಹೆಚ್ಚಳ, ಮುನ್ನೆಚ್ಚರಿಕೆ ಅಗತ್ಯ

ರಾಜ್ಯದಲ್ಲಿ ಡೇಂಘೀ ಕಾಯಿಲೆ ಅಬ್ಬರ ಜೋರಾಗಿದ್ದು, ಜನವರಿ ೧ ರಿಂದ ಸೆಪ್ಟೆಂಬರ್ ೨ವರೆಗೆ ೬೭೦೬ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಡೆಂಘೀ ಕಾಯಿಲೆಗೆ ಒಳಗಾಗುತ್ತಿರುವವರ ಸಂಖ್ಯೆ ಅನಿರೀಕ್ಷಿತ ಮಟ್ಟದಲ್ಲಿ ಏರಿಕೆ ಆಗಿರುವುದು ಜನರಲ್ಲಿ ಆತಂಕ ಉಂಟುಮಾಡಿದೆ. ಬೆಂಗಳೂರಿನಲ್ಲೇ ೪೪೨೭ ಪ್ರಕರಣಗಳು ಕಂಡುಬಂದಿವೆ. ಆಗಸ್ಟ್ ನಲ್ಲಿಯೇ ೨೩೭೪ ಪ್ರಕರಣಗಳು ಕಂಡುಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಬಿಬಿಎಂಪಿ ಹೈ ಅಲರ್ಟ್ ಆಗಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಡೆಂಘೀ ನಿಯಂತ್ರಣದಲ್ಲಿ ಸರಕಾರದ ಜವಾಬ್ದಾರಿ ಎಷ್ಟು ಮುಖ್ಯವೋ ಅಷ್ಟೇ ಜನರ ಜಬಾಬ್ದಾರಿಯೂ ಮುಖ್ಯ ವಾಗುತ್ತದೆ. ರೋಗ ಬಂದಮೇಲೆ ಜಾಗೃತರಾಗುವದಕ್ಕಿಂತ ಪೂರ್ವದಲ್ಲಿ ಅದು ಅಂಟಿಕೊಳ್ಳದಂತೆ ಎಚ್ಚರಿಕೆ ವಹಿಸುವದು ಅತ್ಯಂತ ಮುಖ್ಯ. ಡೆಂಘೀ ಸಾಂಕ್ರಾಮಿಕವಲ್ಲ. ಆದರೆ ನೀವು ಡೆಂಗ್ಯೂ ಪೀಡಿತ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಜತೆಗಿರುವ ಆರೋಗ್ಯವಂತ ವ್ಯಕ್ತಿಗೆ ಬರುವ ಅಪಾಯವಿದೆ.
ಮಳೆಗಾಲದಲ್ಲಿ ಈ ಸೋಂಕು ಹೆಚ್ಚು. ಸೊಳ್ಳೆ ನಿವಾರಕ ಪ್ಯಾಚ್‌ಗಳನ್ನು ಬಳಸಿ, ಪೂರ್ಣ ತೋಳಿನ ಬಟ್ಟೆ ಧರಿಸಿ ಮತ್ತು ನಿಮ್ಮ ಸುತ್ತಲಿನ ಪ್ರದೇಶವನ್ನು ಆಗಾಗ್ಗೆ ಹೊಗೆಯಿಂದ ಸೊಳ್ಳೆ ರಹಿತವಾಗಿಸಿಕೊಳ್ಳಬೇಕು. ಸೊಳ್ಳೆಗಳು ಹೆಚ್ಚಾಗದಂತೆ ಮನೆಯ ಸುತ್ತಲೂ ಎಚ್ಚರಿಕೆ ವಹಿಸಬೇಕು. ಸಿಮೆಂಟ್ ತೊಟ್ಟಿ, ಹಲವಾರು ದಿನಗಳಿಂದ ನೀರಿನಿಂದ ತುಂಬಿರುವ ಹೂಕುಂಡಗಳಲ್ಲಿನ, ಪ್ಲಾಸ್ಟಿಕ್ ಸೇರಿದಂತೆ ನೀರು ನಿಲ್ಲುವ ವಸ್ತುಗಳನ್ನು ಸಂಪೂರ್ಣ ಖಾಲಿ ಮಾಡಬೇಕು. ಇದರಿಂದ ಸೊಳ್ಳೆಯ ಸಂತಾನೋತ್ಪತ್ತಿ ನಿಂತಂತಾಗುತ್ತದೆ. ಅಲ್ಲದೇ ರೋಗ ನಿಯಂತ್ರಣಕ್ಕೆ ತುಂಬಾ ಸಹಕಾರಿಯಾಗುತ್ತದೆ. ಸೊಳ್ಳೆಗಳನ್ನು ಎಷ್ಟು ಪರಿಣಾಮಕಾರಿಯಾಗಿ ದೂರ ಇರಿಸುತ್ತೀರೊ ಅಷ್ಟು ನಿಶ್ಚಿತವಾಗಿ ಸೋಂಕಿ ನಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರಕಾರ ಕೂಡ ಡೆಂ ಕುರಿತಂತೆ ಕೇವಲ ಜಾಗೃತಿ ಜಾಥಾ ಮಾಡಿದರೆ ಪ್ರಯೋಜನವಿಲ್ಲ. ಸ್ಥಳೀಯ ಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತರನ್ನು ಪರಿಣಾಮಕಾರಿಯಾಗಿ ಬಳಸಿ ಕೊಂಡು ಜನರನ್ನು ಎಚ್ವರಿಸಬೇಕು. ಟೆಸ್ಟಿಂಗ್ ಸ್ಯಾಂಪಲ್ಸ ಹೆಚ್ಚಿಸಬೇಕು.