ಸ್ವಾಸ್ಥ್ಯವೆಂಬ ಸ್ವಾತಂತ್ರ‍್ಯ
ಡಾ.ಸಾಧನಶ್ರೀ
ಮಳೆಗಾಲದಲ್ಲಿ ಜ್ವರದ ಸೋಂಕು ಹಲವರನ್ನು ಕಾಡುತ್ತಿರುವುದನ್ನು ನಾವು ಗಮನಿಸುತ್ತೇವೆ. ಡೆಂಘೀ ಸಹ ಅಂತಹ ಜ್ವರಗಳಲ್ಲಿ ಒಂದು. ಮಳೆಗಾಲ ದಲ್ಲಿಯೇ ಈ ಸೋಂಕು ಹೆಚ್ಚಾಗುವ ಸಂಭವ ಏಕೆ ಎಂದರೆ ಈ ಕಾಲದಲ್ಲಿ ನಮ್ಮ ಜೀರ್ಣಶಕ್ತಿ, ದೈಹಿಕ ಬಲ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ವಾತಾವರಣದ ಪ್ರಭಾವದಿಂದ ನಾವು ಸೇವಿಸುವ ಆಹಾರವು ಹುಳಿಗೊಂಡು ಅದರಿಂದ ದೇಹದಲ್ಲಿ ರಕ್ತ ಮತ್ತು ಪಿತ್ತ-ವಾತಗಳ ಅಸಮತೋಲನ ಕಂಡುಬರುತ್ತದೆ.
ಆಯುರ್ವೇದದಲ್ಲಿ ಜ್ವರವನ್ನು ರೋಗಪತಿ ಎಂದು ಕರೆಯಲಾಗಿದೆ. ಏಕೆಂದರೆ, ರೋಗಗಳಲ್ಲಿ ಜ್ವರಕ್ಕೆ ಅತ್ಯಂತ ಪ್ರಾಧಾನ್ಯತೆಯನ್ನು ನೀಡಿದೆ. ಅಲ್ಲದೆ, ರೋಗದ ತೀವ್ರತೆಯನ್ನೂ ಅದು ಸೂಚಿಸುತ್ತದೆ. ಲೋಕದಲ್ಲಿ ಯಾರನ್ನೂ ಬಿಡದ ಈ ಜ್ವರವು ಮೊಟ್ಟ ಮೊದಲ ಬಾರಿಗೆ ಹೇಗೆ ಉತ್ಪತ್ತಿಯಾಯಿತು ಎಂಬ ಪ್ರಶ್ನೆಗೆ ಒಂದು ಸ್ವಾರಸ್ಯಕರವಾದ ಘಟನೆಯ ಉತ್ತರವಿದೆ.
‘ದಕ್ಷ ಯಜ್ಞ’ ಎಂಬ ಕಥೆಯನ್ನು ಬಹುಶಃ ನಾವೆಲ್ಲ ರೂ ಕೇಳಿರುತ್ತೇವೆ. ಈ ಒಂದು ರೋಮಾಂಚಕ ಪ್ರಸಂಗದಲ್ಲಿಯೇ ಜ್ವರದ ಉತ್ಪತ್ತಿಯ ಕಥೆಯೂ ಅಡಗಿದೆ. ದಕ್ಷ ಪ್ರಜಾಪತಿಯು ಶಿವನನ್ನು ಅವಮಾನಿಸಲೆಂದೇ ದಕ್ಷ ಯಜ್ಞವನ್ನು ಆಯೋಜಿಸುತ್ತಾನೆ. ತನ್ನ ಮಗಳು ಸತಿ ಮತ್ತು ಅಳಿಯ ಶಿವನಿಗೆ ಈ ಯಜ್ಞಕ್ಕೆ ಆಮಂತ್ರಣ ನೀಡುವುದಿಲ್ಲ. ಆದರೂ ತವರು ಮನೆಯ ವ್ಯಾಮೋಹ ಸತಿಯನ್ನು ಯಜ್ಞಕ್ಕೆ ಸೆಳೆದೊಯ್ಯುತ್ತದೆ. ಶಿವನ ಒಪ್ಪಿಗೆ ಇಲ್ಲದಿದ್ದರೂ ಸತಿ ತಾನೊಬ್ಬಳೇ ತಂದೆಯ ಮನೆಗೆ ಹೋಗಲು ನಿರ್ಧರಿಸುತ್ತಾಳೆ. ಕರೆಯದ ಮಗಳು ಯಜ್ಞಕ್ಕೆ ಬಂದಿದ್ದನ್ನು ಕಂಡು ದಕ್ಷಪ್ರಜಾಪತಿಯು ಅವಳಿಗೆ ಹಾಗೂ ಅವಳ ಪತಿಯಾದ ಶಿವನಿಗೆ ಹೀನಾಯವಾಗಿ ಬೈದು ಅವಮಾನಿಸುತ್ತಾನೆ.
ಇಂತಹ ಸ್ಥಿತಿಯಲ್ಲಿ ಒಂದು ಕಡೆ ಪತಿಯ ಮಾತನ್ನು ಕೇಳದೆ ಬಂದಿದ್ದರಿಂದ ಸತಿಯು ಶಿವನ ಬಳಿ ಹಿಂದಿರುಗಿ ಹೋಗುವಂತೆಯೂ ಇರಲಿಲ್ಲ. ಇನ್ನೊಂದು ಕಡೆ ತಂದೆಯ ಕಠೋರವಾದ ಮಾತುಗಳನ್ನು ಹಾಗೂ ಪತಿಗೆ ಆಗುತ್ತಿದ್ದ ಅವಮಾನವನ್ನು ಕೇಳಲು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸತಿಗೆ ತನ್ನ ಮುಂದಿನ ಹೆಜ್ಜೆ ಏನಿರಬೇಕು ಎಂಬುದು ತೋಚುತ್ತಿರಲಿಲ್ಲ. ಯಜ್ಞದ ಸಮಯದಲ್ಲಿ ದಕ್ಷಪ್ರಜಾಪತಿಯು ಎಲ್ಲ ದೇವತೆಗಳಿಗೂ ಹವಿಸ್ಸನ್ನು ಕೊಟ್ಟು ರುದ್ರನಿಗೆ ಮಾತ್ರ ರುದ್ರ ಭಾಗವನ್ನು ಕೊಡುವುದಿಲ್ಲ. ಇದನ್ನು ಗಮನಿಸಿದ ಸತಿಯು ಯೋಚಿಸುತ್ತಾಳೆ, ಯಜ್ಞದಲ್ಲಿ
ರುದ್ರ ಭಾಗವನ್ನು ಕೊಡದೆ ಹೋದರೆ ಯಜ್ಞ ಸಂಪೂ ರ್ಣವಾಗುವುದಿಲ್ಲ.
ಹಾಗೆಯೇ ಯಜ್ಞ ಕತೃವಿಗೂ ದೋಷ ಉಂಟಾಗುತ್ತದೆ. ಯಜ್ಞವು ಸಂಪನ್ನವಾಗಬೇಕು ಹಾಗೆಯೇ ತಂದೆಗೂ ದೋಷ ಬರಬಾರದು ಮತ್ತು ಪತಿಯ ಮಾತನ್ನು ಕೇಳದ ತಪ್ಪಿಗೆ ಪ್ರಾಯಶ್ಚಿತ್ತವೂ ಆಗಬೇಕು ಎಂದು ಸತಿಯು ಯೋಚಿಸಿ ಯಜ್ಞಕುಂಡಕ್ಕೆ ಹಾರಿಬಿಡುತ್ತಾಳೆ. ಇದನ್ನು ಅರಿತ ಶಿವನು ಅತ್ಯಂತ
ಕ್ರೋಧಿತನಾಗಿ ತನ್ನ ಅಂಶದಿಂದ ವೀರಭದ್ರ ಎಂಬುವನನ್ನು ಸೃಷ್ಟಿ ಮಾಡುತ್ತಾನೆ. ಇಡೀ ದಕ್ಷಯಜ್ಞವನ್ನು ಧ್ವಂಸ ಮಾಡಲು ಅವನನ್ನು ಕಳಿಸುತ್ತಾನೆ. ವೀರಭದ್ರನು ದಕ್ಷ ಯಜ್ಞದ ಸ್ಥಳಕ್ಕೆ ಧಾವಿಸಿ, ಅಲ್ಲಿದ್ದವರನ್ನೆ ಧ್ವಂಸ ಮಾಡಿ ಇಡೀ ಯಜ್ಞವನ್ನೇ ಚೆಪಿಲ್ಲಿ ಮಾಡುತ್ತಾನೆ.
ನಂತರ ಶಿವನ ಬಳಿ ಮರಳಿ ಬಂದು ನೀವು ಹೇಳಿದ ಕೆಲಸವನ್ನು ಮುಗಿಸಿದ್ದೇನೆ, ಇನ್ನು ಮುಂದೆ ನನಗೇನು ಕೆಲಸ ಎಂದು ಕೇಳುತ್ತಾನೆ. ಆಗ ಶಿವನು ಇನ್ನು ಮುಂದೆ ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ನೀಡಲು ನೀನು ‘ಜ್ವರ’ ಎಂಬ ರೂಪವನ್ನು ತಾಳು ಎಂದು ಅವನಿಗೆ ಹೇಳುತ್ತಾನೆ. ಈ ರೀತಿಯಾಗಿ ಜ್ವರ ಎಂಬ ಮಹಾರೋಗವು ದಕ್ಷ ಯಜ್ಞದ ಧ್ವಂಸದ ಸಂದರ್ಭದಲ್ಲಿ, ತಪ್ಪು ಮಾಡಿದವರಿಗೆ ಶಿಕ್ಷೆಯ ರೂಪದಲ್ಲಿ ಮೊದಲು ಉಂಟಾಗಿ, ನಂತರ ಎಲ್ಲ ಕಾಲದಲ್ಲಿ ಯೂ ಯಾವುದೇ ಪ್ರಕಾರದ ಜ್ವರ ಬರಬೇಕಾದರೂ ನಮ್ಮ ಆಹಾರ- ವಿಹಾರ-ವಿಚಾರಗಳಲ್ಲಿ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಆಗುವ ತಪ್ಪುಗಳೇ ಕಾರಣವಾಗುತ್ತದೆ.
ಶರೀರ-ಇಂದ್ರಿಯ-ಮನಸ್ಸುಗಳು ಒಟ್ಟೊಟ್ಟಿಗೆ ತಾಪ ಹಾಗೂ ಚಡಪಡಿಕೆಗೆ ಒಳಗಾಗುವುದನ್ನು ‘ಜ್ವರ’ ಎನ್ನಲಾಗುತ್ತದೆ. ಆಯುರ್ವೇದದಲ್ಲಿ ಜ್ವರ ರೋಗವನ್ನು ಅತ್ಯಂತ ದೀರ್ಘವಾಗಿ ಹಾಗೂ ಸವಿವರವಾಗಿ ಉಲ್ಲೇಖಿಸಿದ್ದಾರೆ. ಹಲವಾರು ರೀತಿಯ ಜ್ವರಗಳ ಬಗ್ಗೆ ಹೇಳಿ ಅದರ ಸೂಕ್ತವಾದ ಚಿಕಿತ್ಸೆ ಗಳನ್ನು ಸಹ ತಿಳಿಸಿಕೊಟ್ಟಿದ್ದಾರೆ. ಈ ಅನೇಕ ವಿಧವಾದ ಜ್ವರಗಳಲ್ಲಿ ಈಗ ಅತ್ಯಂತ ಚರ್ಚೆಯಲ್ಲಿರುವುದು ಹಾಗೂ ತುಂಬಾ ಜನರನ್ನು
ಕಾಡುತ್ತಿರುವುದು ಡೆಂಘೀ ಜ್ವರ. ಇದು ಹೊಸದೇನಲ್ಲ. ಆಯುರ್ವೇದ ಗ್ರಂಥಗಳು ಈ ರೀತಿಯ ಸಾಂಕ್ರಾಮಿಕ ಜ್ವರದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿವೆ. ಆಯು ರ್ವೇದದ ಚೌಕಟ್ಟಿನಲ್ಲಿ ಈ ಒಂದು ರೋಗದ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಮಳೆಗಾಲದಲ್ಲಿ ಜ್ವರದ ಸೋಂಕು ಹಲವರನ್ನು ಕಾಡುತ್ತಿರುವುದನ್ನು ನಾವು ಗಮನಿಸುತ್ತೇವೆ. ಡೆಂ ಸಹ ಅಂತಹ ಜ್ವರಗಳಲ್ಲಿ ಒಂದು. ಮಳೆಗಾಲ ದಲ್ಲಿಯೇ ಈ ಸೋಂಕು ಹೆಚ್ಚಾಗುವ ಸಂಭವ ಏಕೆ ಎಂದರೆ ಈ ಕಾಲದಲ್ಲಿ ನಮ್ಮ ಜೀರ್ಣಶಕ್ತಿ, ದೈಹಿಕ ಬಲ ಹಾಗೂ ರೋಗನಿರೋಧಕ ಶಕ್ತಿ ಅತ್ಯಂತ ಕಡಿಮೆ ಇರುತ್ತದೆ. ವಾತಾವರಣದ ಪ್ರಭಾವದಿಂದ ನಾವು ಸೇವಿಸುವ ಆಹಾರವು ಹುಳಿಗೊಂಡು ಅದರಿಂದ ದೇಹದಲ್ಲಿ ರಕ್ತ ಮತ್ತು ಪಿತ್ತ-ವಾತಗಳ ಅಸಮತೋಲನ ಸಹ ಕಂಡುಬರುತ್ತದೆ. ಈ ಆಂತರಿಕ ಬದಲಾವಣೆಯಿಂದ ಮಳೆಗಾಲದಲ್ಲಿ ಡೆಂಘೀ ಜ್ವರ ಹೆಚ್ಚುತ್ತದೆ. ಉಷ್ಣವಲಯ ಮತ್ತು
ಅರೆ ಉಷ್ಣವಲಯದ ಪ್ರದೇಶಗಳಲ್ಲಿ ಈ ಡೆಂಘೀ ಜ್ವರ ಜಾಸ್ತಿ. ಏಡಿಸ್ ಈಜಿಪ್ಟಿ ಎಂಬ ಸೊಳ್ಳೆಯ ಜಾತಿಯು ಈ ಡೆಂಘೀ ವೈರಸ್ಸುಗಳ ವಾಹಕಗಳು. ಒಬ್ಬ ಸೋಂಕಿತ ವ್ಯಕ್ತಿಯನ್ನು ಈ ಸೊಳ್ಳೆ ಕಚ್ಚಿ ನಂತರ ಒಬ್ಬ ಆರೋಗ್ಯ ವಂತನನ್ನು ಪುನಃ ಕಚ್ಚಿದಾಗ ಈ ಸೋಂಕು ಹರಡುತ್ತದೆ.
ಸಾಮಾನ್ಯವಾಗಿ ಈ ಜ್ವರ ನಮ್ಮನ್ನು ಆವರಿಸಲು ನಾವು ಮಾಡುವ ತಪ್ಪುಗಳಾವುವು? ಜೀರ್ಣಕ್ಕೆ ಜಡವಾದ ಆಹಾರ ಸೇವನೆಯ ಅಭ್ಯಾಸ, ಅಜೀರ್ಣ ವನ್ನು ನಿರ್ಲಕ್ಷಿಸಿ ತಿನ್ನುವುದು, ಹಸಿವೆ ಇಲ್ಲದಿದ್ದಾಗಲೂ ಮನಬಂದಂತೆ ಆಹಾರ ಸೇವಿಸುವುದು, ಹುಳಿತೇಗು-ಎದೆ ಉರಿ-ಹೊಟ್ಟೆ ಉಬ್ಬರದಂತಹ
ಅಜೀರ್ಣ ಲಕ್ಷಣಗಳು ಇದ್ದಾಗಲೂ ಎಂದಿನಂತೆ ಆಹಾರ ಸೇವನೆ ಮುಂದುವರಿಸುವುದು, ತಡರಾತ್ರಿ ನಿದ್ರೆ ಅಥವಾ ರಾತ್ರಿ ಜಾಗರಣೆ ಮಾಡುವುದು, ಹಗಲು
ನಿದ್ರಿಸುವುದು, ತಂಗಳು ಮತ್ತು ತಂಪಾದ ಆಹಾರ ಸೇವನೆ, ಶಾರೀರಿಕ ಶಕ್ತಿಯ ಅರಿವಿಲ್ಲದೆ ವ್ಯಾಯಾಮ, ಕೆಲಸ ಮಾಡುವುದು, ಗಾಳಿ, ಮಳೆ, ಶೀತಕ್ಕೆ ಮೈಯೊಡ್ಡಿ ಪ್ರಯಾಣ ಮಾಡುವುದು, ಅತಿಯಾದ ಉಪ್ಪು-ಖಾರ-ಹುಳಿ ಇರುವ ಪದಾರ್ಥಗಳನ್ನು ಸದಾ ಸೇವಿಸುವುದು, ಅತಿಯಾದ ಚಿಂತೆ, ಕೋಪ ಮತ್ತು ಅಸೂಯೆಯಲ್ಲಿ ತೊಡಗಿರುವುದು.
ಡೆಂಗೀ ಜ್ವರದ ಸಾಮಾನ್ಯ ಲಕ್ಷಣಗಳೇನು? ಅತಿಯಾದ ತೀವ್ರ ತಾಪದ ಜ್ವರ, ಬೆನ್ನುಹುರಿ ನೋವು, ತಲೆ ನೋವು, ಸೊಂಟ ಮೊದಲಾದ ಸಂಧಿಗಳ
ನೋವು, ಕಣ್ಣು ಗುಡ್ಡೆಯ ಹಿಂದೆ ನೋವು, ಮಾಂಸಖಂಡ ಮತ್ತು ಸ್ನಾಯುಗಳ ಸೆಳೆತ, ಹಸಿವೆ ಇಲ್ಲದಿರುವುದು, ಹೊಟ್ಟೆ ನೋವು, ವಾಂತಿ ಬೇಧಿ,
ಮೈಯಲ್ಲಿ ತುರಿಕೆ ಮತ್ತು ಸುಸ್ತಾಗುವುದು. ಜ್ವರವು ತೀವ್ರವಾದಂತೆ ವಸಡು-ಮೂಗುಗಳಿಂದ ರಕ್ತಸ್ರಾವ, ಮೈ ಮೇಲೆ ದದ್ದು, ಗುಳ್ಳೆಗಳು ಏಳುವುದು, ಅತಿಯಾದ ತುರಿಕೆ, ರಕ್ತಸ್ರಾವದ ನಿಯಂತ್ರಣ ಕಷ್ಟವಾಗುವುದು.
ಈ ರೋಗಕ್ಕೆ ಚಿಕಿತ್ಸೆ ಏನು?
ಸೊಳ್ಳೆ ಕಚ್ಚಿದವರಿಗೆಲ್ಲ ಈ ಜ್ವರ ಬರಬೇಕೆಂದಿಲ್ಲ, ಶರೀರದ ಆಂತರಿಕ ವ್ಯವಸ್ಥೆ ಸರಿ ಇದ್ದು, ಜೀರ್ಣಕ್ರಿಯೆ, ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದು, ಬಲ ಚೆನ್ನಾಗಿದ್ದಲ್ಲಿ ಈ ಸೋಂಕು ಬಂದರೂ ಹೆಚ್ಚು ತೊಂದರೆ ಕೊಡದೆ ನಿವಾರಣೆ ಆಗುತ್ತದೆ. ನಿಮ್ಮ ಒಳಗೆ ದೋಷಗಳ ವಿಷಮತೆ ಎಷ್ಟಿದೆ ಅನ್ನುವುದರ ಲೆ ನಿಮಗೆ ಕಾಣಿಸಿ ಕೊಳ್ಳುವ ಲಕ್ಷಣಗಳ ತೀವ್ರತೆ ನಿರ್ಧಾರವಾಗುತ್ತದೆ. ಸಕ್ರಮ-ಸಕಾಲ ಆಹಾರ-ವಿಹಾರ-ಔಷಧಗಳಿಂದ ಈ ಜ್ವರದಿಂದ ಅತ್ಯಂತ ಶೀಘ್ರವಾಗಿ ಮುಕ್ತಿ ಪಡೆಯಬಹುದು. ಜ್ವರ ಬಂದ ಕೂಡಲೇ ಆರೋಗ್ಯವನ್ನು ಆದ್ಯತೆಯನ್ನಾಗಿಸಿಕೊಂಡು ಸಂಪೂರ್ಣ ವಿಶ್ರಾಂತಿ ಪಡೆಯಬೇಕು. ದೇಹಕ್ಕಷ್ಟೇ ಅಲ್ಲದೆ ಇಂದ್ರಿಯ ಮತ್ತು ಮನಸ್ಸುಗಳಿಗೂ ವಿಶ್ರಾಂತಿ ಕೊಡಬೇಕು.
ಮೊಬೈಲ್ ಫೋನ್, ಲ್ಯಾಪ್‌ಟಾಪ್, ಟಿವಿಗಳನ್ನು ತ್ಯಜಿಸಿ ಮನಸ್ಸಿಗೆ ಮುದ ನೀಡುವಂತಹ ಸಂಗೀತದ ಶ್ರವಣ ಅಥವಾ ಜ್ವರನಿವಾರಕ ಶಕ್ತಿ ಇರುವ ವಿಷ್ಣು ಸಹಸ್ರನಾಮವನ್ನು ಆಲಿಸುವುದು ಒಳ್ಳೆಯದು. ಜ್ವರವಿದ್ದಾಗ ಸ್ನಾನ ಬೇಡ, ಬೆಚ್ಚಗಿನ ನೀರಿನಿಂದ ಅದ್ದಿದ ಮೃದು ಬಟ್ಟೆಯಿಂದ ಮೈಯನ್ನು ಒರೆಸಬಹುದು. ತಲೆಗೆ ತುಪ್ಪ ಅದ್ದಿದ ಹತ್ತಿಯನ್ನು (ಪಿಚು) ಸದಾ ಕಟ್ಟಬೇಕು ಅಥವಾ ನೆಲ್ಲಿಕಾಯಿ ಪುಡಿಯನ್ನು ಮಜ್ಜಿಗೆಯೊಂದಿಗೆ ಕಲಸಿ ತಲೆಗೆ ಲೇಪನ ಮಾಡಿದಾಗ, ಇದು ತಾಪವನ್ನು ಇಳಿಸುವುದರ ಜತೆಗೆ ಜ್ವರಕಾರಕ ದೋಷಗಳನ್ನು ಜೀರ್ಣಾಂಗಕ್ಕೆ ತಂದು ಮಲಮೂತ್ರದ ಮೂಲಕ ದೇಹದಿಂದ ಹೊರ ಹಾಕುತ್ತದೆ. ಹಣೆಗೆ ಸದಾ ತಣ್ಣೀರಿನ ಬಟ್ಟೆ ಅಥವಾ ಶ್ರೀಗಂಧದ ಶೀತ ಲೇಪವನ್ನು ಹಾಕುವುದು ಒಳ್ಳೆಯದು.
ವೈದ್ಯರ ಸಲಹೆ ಪಡೆದು ಜ್ವರಹರ, ವಿಷಹರ ಔಷಧಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ಸಾಮಾನ್ಯ ವಾಗಿ ಒಂದೆರಡು ದಿನಗಳಲ್ಲಿ ಜ್ವರ ಇಳಿಯುತ್ತದೆ, ಜತೆಗೆ ರಕ್ತಸ್ರಾವ ಸೋರಿಕೆ, ಪ್ಲೇಟ್ಲೆಟ್‌ಗಳ ಇಳಿಕೆ, ಸುಸ್ತು ಇವುಗಳು ಸಹ ಬೇಗ ಚೇತರಿಕೆ ಆಗುತ್ತದೆ. ವಿವಿಧ ಪಂಚಕರ್ಮ ಚಿಕಿತ್ಸೆ ಹಾಗೂ ರಸಾಯನ ಚಿಕಿತ್ಸೆಗಳನ್ನು ಸಹ ಕೊಟ್ಟು ದೇಹವನ್ನು ಸಹಜ ಸ್ಥಿತಿಗೆ ತಂದು ಪುಷ್ಟಿಯನ್ನು ಹಾಗೂ ರೋಗನಿರೋಧಕ ಶಕ್ತಿಯನ್ನು
ಹೆಚ್ಚಿಸಲಾಗುತ್ತದೆ.
ಜ್ವರ ಬಂದಾಗ ನಾವು ನಿತ್ಯ ಸೇವಿಸುವ ಆಹಾರವನ್ನೇ ಸೇವಿಸಿದರೆ ಜೀರ್ಣ ಆಗದು. ಆದ್ದರಿಂದ ಇಂತಹ ಸಮಯದಲ್ಲಿ ನಮ್ಮ ಹಸಿವೆಯನ್ನು ಗಮನಿಸಿ ಹಗುರವಾಗಿ ಜೀರ್ಣವಾಗುವ, ಬೇಗ ಬಲವನ್ನು ನೀಡುವ ಆಹಾರ ಸೇವಿಸಬೇಕು. ‘ಲಂಘನಂ ಪರಮೌಷಧಮ’ ಎಂದು ಹೇಳುವ ಹಾಗೆ, ಹಸಿವೆಯು ಅತ್ಯಂತ ಕಡಿಮೆ ಇದ್ದಾಗ, ಜ್ವರದಲ್ಲಿ ಉಪವಾಸ ಮಾಡುವುದೇ ಮುಖ್ಯ ಚಿಕಿತ್ಸೆಯಾಗುತ್ತದೆ. ಸ್ವಲ್ಪ ಹಸಿವು ಕಾಣಿಸಿಕೊಂಡಾಗ ಭತ್ತದ ಅರಳಿನ ಪುಡಿ, ಜೋಳದ ಪುಡಿ, ರವೆಯನ್ನು ಗಂಜಿಯಂತೆ ಮಾಡಿ ಸೇವಿಸಬೇಕು. ಅಕ್ಕಿ ಮತ್ತು ಹೆಸರುಬೇಳೆಯ ಹುರಿದ ಗಂಜಿಯನ್ನು ಸಹ ನೀಡಬಹುದು. ಅರಳನ್ನು ಪುಡಿ ಮಾಡಿ ಅದಕ್ಕೆ ದಾಳಿಂಬೆ ರಸವನ್ನು (ಬೀಜ ತೆಗೆದ) ಹಾಕಿ ಕುಡಿಯಬಹುದು. ಹೆಸರುಬೇಳೆ ಬೇಯಿಸಿದ ನೀರಿಗೆ ಚಿಟಿಕೆ ಸೈಂಧವ ಲವಣ ಸೇರಿಸಿ ಕುಡಿಯಲು ಕೊಡಬಹುದು. ನಂತರ, ಹಸಿವೆ ಹೆಚ್ಚಾದಂತೆ ಹುರಿದ ಅಕ್ಕಿಯ ಮೆತ್ತಗಿನ ಅನ್ನಕ್ಕೆ, ಕಟ್ಟು ಸಾರುಗಳನ್ನು ಬೆರೆಸಿ ಕೊಡಬಹುದು. ಅನ್ನದ ಜತೆ
ನೆಲ್ಲಿಕಾಯಿ ಸಾರು, ದಾಳಿಂಬೆ ಸಾರು, ಹೆಸರುಬೇಳೆ ಕಟ್ಟು ಸಾರು ಒಳ್ಳೆಯದು. ಮತ್ತಷ್ಟು ಜೀರ್ಣಶಕ್ತಿ ಹೆಚ್ಚಾದಾಗ ಆಹಾರದೊಂದಿಗೆ ಸ್ವಲ್ಪ ಬೆಣ್ಣೆಯನ್ನು
ಬಳಸುವುದರಿಂದ ರಕ್ತ ಪಿತ್ತಗಳು ಶಮನವಾಗಿ ಜೀರ್ಣಶಕ್ತಿ ವೃದ್ಧಿಯಾಗುತ್ತದೆ ಹಾಗೂ ದೇಹ ಬಲವೂ ಹೆಚ್ಚುತ್ತದೆ.
ಜ್ವರ ಬಂದಾಗ ಕುಡಿಯಲು ಜೀರ್ಣಕ್ರಿಯೆ ಹೆಚ್ಚಿಸುವ ಹಾಗೂ ಬಾಯಾರಿಕೆಯನ್ನು ಶಮನ ಮಾಡುವ, ರಕ್ತವನ್ನು ಸಹ ತಂಪು ಮಾಡುವ ಧನಿಯಾ,
ಶ್ರೀಗಂಧ, ನಾಗರ ರಹಿತ ಷಡಂಗ ಚೂರ್ಣ, ಲಾವಂಚ, ಒಣದ್ರಾಕ್ಷಿ, ಮುಸ್ತ ಇತ್ಯಾದಿಗಳನ್ನು ಹಾಕಿ ಕುದಿಸಿ ಆರಿಸಿದ ನೀರನ್ನು ಸೇವಿಸಬಹುದು.
ಉಪ್ಪು-ಖಾರ-ಹುಳಿ ಹೆಚ್ಚಿರುವ ಪದಾರ್ಥಗಳು, ಎಣ್ಣೆಯ ಖಾದ್ಯಗಳು, ಮೊಸರು, ಉದ್ದಿನ ಪದಾರ್ಥಗಳು, ಹಸಿ ತರಕಾರಿ, ಫ್ರೂಟ್ ಜ್ಯೂಸ್, ಬ್ರೆಡ್, ಮೊಳಕೆ ಕಾಳುಗಳು ಖಂಡಿತ ಬೇಡ. ಗೂಗಲ್ ಅನ್ನು ನೋಡಿ ಬ್ರೊಕೋಲಿ, ಪಪ್ಪಾಯ, ಪಪ್ಪಾಯ ಎಲೆ, ಅತಿಯಾದ ನೀರು ಸೇವನೆ, ಹುಳಿ ಹಣ್ಣುಗಳ ರಸಗಳನ್ನು ಸೇವಿಸುವುದು-ಇವೆ ಮತ್ತಷ್ಟು ರಕ್ತವನ್ನು ಕೆಡಿಸಿ ಜ್ವರವನ್ನು ಉಲ್ಬಣಗೊಳಿಸುತ್ತದೆ.
ಆಯುರ್ವೇದ ಗ್ರಂಥಗಳು ಈ ರೀತಿಯ ಹಸಿಯಾದ ಪದಾರ್ಥಗಳನ್ನು ಜ್ವರದಲ್ಲಿ ಆಹಾರವಾಗಿ ಹೇಳಿಲ್ಲ. ನೆನಪಿರಲಿ, ಜ್ವರವಿದ್ದಾಗ ದಾಳಿಂಬೆ ಹಣ್ಣು ಮತ್ತು ಒಣದ್ರಾಕ್ಷಿ ಸೇವಿಸಬಹುದೇ ಹೊರತು ಮತ್ತಾವ ಹಣ್ಣುಗಳನ್ನು ಸಹ ಸೇವಿಸುವ ಹಾಗೆ ಇಲ್ಲ. ಬಳ್ಳಿ ತರಕಾರಿಗಳಾದ ಪಡವಲಕಾಯಿ, ಸೋರೆ ಕಾಯಿ, ಹೀರೆಕಾಯಿ, ನೆಲ್ಲಿಕಾಯಿ, ಬೂದುಗುಂಬಳಕಾಯಿಗಳನ್ನು ಜೀರ್ಣಶಕ್ತಿಗೆ ಅನುಗುಣವಾಗಿ ಬಳಸಬಹುದು. ಗೆಡ್ಡೆ ತರಕಾರಿಗಳು, ಸೊಪ್ಪುಗಳು ಸುತರಾಂ ವರ್ಜ್ಯ.
ಇದರ ಜತೆಗೆ ಸೊಳ್ಳೆಗಳಿಂದಲೂ ರಕ್ಷಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮನೆಯ ಸುತ್ತಲಿನ ಪರಿಸರ ವನ್ನು ಸ್ವಚ್ಛವಾಗಿರಿಸಿಕೊಂಡು, ಸೊಳ್ಳೆ ಪರದೆಗಳನ್ನು ಬಳಸುವುದು ಒಳ್ಳೆಯದು. ಹಾಗೆಯೇ ನಿತ್ಯವೂ ಬೆಳಗ್ಗೆ ಹಾಗೂ ಸಂಜೆ ವೇಳೆ ಮನೆಗಳಿಗೆ ಔಷಧಿಯ ಧೂಪನವನ್ನು ಮಾಡುವುದು ಲಾಭಕಾರಿ. ಈ ಜ್ವರವೇ ಬಾರದ ಹಾಗೆ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಮೂರು ಆಹಾರ ಕಾಲವನ್ನು ನಿಯಮಿತಗೊಳಿಸಿಕೊಂಡು ಆ ಸಮಯದಲ್ಲಷ್ಟೇ ಹಿತ ಆಹಾರವನ್ನು, ತಾಜಾ ಆಹಾರವನ್ನು, ಬಿಸಿ ಇzಗ ತುಪ್ಪವನ್ನು ಹಾಕಿಕೊಂಡು, ಜತೆಗೆ ಕುದಿಸಿದ ನೀರನ್ನು ಆಹಾರದೊಟ್ಟಿಗೆ
ಗುಟುಕು ಗುಟುಕಾಗಿ ಸೇವಿಸಬೇಕು. ರಾತ್ರಿ ಬೇಗ ಮಲಗಿ, ಸೂರ್ಯೋದಯದ ಮುಂಚೆ ಏಳುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಖಾಲಿ ಹೊಟ್ಟೆಯಲ್ಲಿ
ಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಬೆಚ್ಚಗಿನ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಸೊಳ್ಳೆಯಂತಹ ವಾಹಕಗಳು ಚರ್ಮದ ಮೂಲಕ ವೈರಾಣುಗಳನ್ನು ದೇಹದ ಒಳಗೆ ತಲುಪಿಸುವುದನ್ನು ತಡೆಯುತ್ತದೆ. ಮಾನಸಿಕ ನೆಮ್ಮದಿಯ ಕಡೆ ಗಮನ ಹರಿಸಿ ನಿತ್ಯ ಸಂತೋಷವಾಗಿ ಇರುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಸಹ ರೋಗ ನಿವಾರಕವಾಗಿ ಪರಿಣಮಿಸಲ್ಪಡುತ್ತದೆ.
ಸ್ನೇಹಿತರೆ, ಒಂದು ದೀಪವು ನಿರಂತರವಾಗಿ ಉರಿಯಬೇಕಾದರೆ ಎರಡು ವಿಚಾರಗಳು ಅತ್ಯವಶ್ಯಕ. ಒಂದು-ಹುಳಹುಪ್ಪಟೆಗಳಿಂದ, ಜೋರಾಗಿ ಬೀಸುವ
ಗಾಳಿ ಮಳೆಗಳಿಂದ ಅದನ್ನು ರಕ್ಷಿಸಬೇಕು. ಹಾಗೆಯೇ, ಎರಡನೆಯದಾಗಿ ದೀಪದಲ್ಲಿ ಯಾವಾಗಲೂ ಎಣ್ಣೆ ಬತ್ತಿಗಳು ಸಾಕಷ್ಟು ಇರುವಂತೆ ನೋಡಿ ಕೊಳ್ಳಬೇಕು. ದೀಪದಂತೆಯೇ ನಮ್ಮ ದೇಹವು ಸಹ. ಅನೇಕ ಪ್ರಕಾರದ ಬ್ಯಾಕ್ಟೀರಿಯಾಗಳು, ವೈರಸ್‌ಗಳು ಸಾಂಕ್ರಾಮಿಕ ಜ್ವರಗಳಿಗೆ ಕಾರಣ ಅಂತ ಹೇಳುತ್ತೇವೆ. ದೀಪದ ಉರಿಯನ್ನು ಹಾಳು ಮಾಡುವ ಒಂದು ಹುಳವನ್ನು ಓಡಿಸಿದರೆ, ಸ್ವಲ್ಪ ಹೊತ್ತಿಗೆ ಇನ್ನೂಂದು ಯಾವುದೋ ಹುಳ ಬರಬಹುದು. ಹೀಗೆ, ಎಷ್ಟು ಹೊತ್ತು, ಎಷ್ಟು ಬಾರಿ ಈ ಕ್ರಿಮಿಕೀಟಗಳನ್ನು ದೀಪದಿಂದ ಓಡಿಸಲು ಸಾಧ್ಯ? ಅದರ ಬದಲಿಗೆ, ಯಾವ ಕ್ರಿಮಿ-ಕೀಟವು ಸಹ ದೀಪದ ಬಳಿ ಬರದಂತೆ ಗಾಜಿನಂತಹ ಒಂದು ರಕ್ಷಾಕವಚ ಇದ್ದರೆ ಅದು ದೀಪವನ್ನು ಸದಾ ರಕ್ಷಿಸುತ್ತದೆ.
ಇದೇ ರೀತಿ, ನಮ್ಮ ಸುತ್ತಲೂ ಅನೇಕ ಸೂಕ್ಷ್ಮಜೀವಿಗಳು ಇರುವುದರಲ್ಲಿ ಯಾವ ಸಂಶಯವೂ ಇಲ್ಲ. ಒಂದೊಂದನ್ನೇ ಓಡಿಸುತ್ತಾ ಕೂರುವುದು ಅಸಾಧ್ಯದ
ಕೆಲಸ. ಅದರ ಬದಲಿಗೆ ಅವುಗಳು ಶರೀರದ ಒಳಗೆ ಬರದಂತೆ ನೋಡಿಕೊಳ್ಳುವುದು ಜಾಣತನ. ಹಾಗೆಯೇ, ದೀಪದಲ್ಲಿ ಎಣ್ಣೆಯೂ ಖಾಲಿಯಾಗದಂತೆ
ನೋಡಿಕೊಳ್ಳಬೇಕು. ನಮ್ಮ ಆರೋಗ್ಯದ ವಿಷಯದಲ್ಲಿಯೂ ಉತ್ತಮವಾದ ಜೀವನ ಶೈಲಿಯಿಂದ ದೇಹವನ್ನು ಸದೃಢವಾಗಿ ಸದಾ ಇರುವಂತೆ
ಕಾಪಾಡಿಕೊಂಡು, ಉತ್ತಮವಾದ ಆಂತರಿಕ ಪೋಷಣೆಯನ್ನು ಆಹಾರದ ಮೂಲಕ, ವಿಚಾರದ ಮೂಲಕ ನೀಡುತ್ತಾ ಹೋದರೆ ಯಾವ ಸೂಕ್ಷ್ಮಜೀವಿಗಳು
ಒಳಕ್ಕೆ ಬಂದರೂ ಏನೂ ಮಾಡಲಾರವು. ಈ ಎರಡನ್ನು ಸರಿಯಾದ ರೀತಿಯಲ್ಲಿ ನಾವು ಮಾಡಿದರೆ ಡೆಂಘೀ ಅಲ್ಲದೆ ಮುಂದೆ ಬರಬಹುದಾದ ಎಂತಹ ಭಯಾನಕ ಜ್ವರಗಳನ್ನು ಸಹ ತಡೆಗಟ್ಟಬಹುದು. This is the best Health insurance!