ವಿದೇಶ ವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
dhyapaa@gmail.com
‘ಬಾನಿಗೊಂದು ಎಲ್ಲೆ ಎಲ್ಲಿದೆ…’ ವರನಟ ಡಾ. ರಾಜ್ ಕುಮಾರ್ ಅಭಿನಯಿಸಿದ ಪ್ರೇಮದ ಕಾಣಿಕೆ ಚಿತ್ರದ ಜನಪ್ರಿಯ ಹಾಡು. ಉಪೇಂದ್ರ ಕುಮಾರ್ ಸಂಗೀತ ನೀಡಿದ ಈ ಹಾಡಿನ ಸಾಹಿತ್ಯ ಚಿ. ಉದಯ ಶಂಕರ್ ಅವರದ್ದು. ಈ ಹಾಡು ಮುಂದೆ ಸಾಗುತ್ತಿದ್ದಂತೆ, ಮಧ್ಯದಲ್ಲಿ ಒಂದು ಸಾಲಿದೆ.
‘ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ…’ ನಾನು ಮರುಳುಗಾಡಿನಲ್ಲಿ ಕಾರ್ಯನಿಮಿತ್ತ ಅಲೆಯುವಾಗ ಸಾವಿರಕ್ಕೂ ಹೆಚ್ಚು ಬಾರಿ ಈ ಸಾಲುಗಳು ನೆನಪಾ ಗಿದ್ದಿದೆ. ಅದಕ್ಕೆ ಕಾರಣ, ಆ ಜನ. ಸುಮಾರು ಎರಡು ದಶಕಗಳ ಕಾಲ ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಅಲೆಯುವಾಗ ಸಾಕಷ್ಟು ಸಲ ಆ ಬುಡಕಟ್ಟಿನ ಜನರನ್ನು ಕಂಡಿದ್ದಿದೆ, ಅವರೊಂದಿಗೆ ಮಾತಾಡಿದ್ದಿದೆ, ಒಂದೆರಡು ಬಾರಿ ಅವರ ಆತಿಥ್ಯವನ್ನೂ ಸ್ವೀಕರಿಸಿದ್ದಿದೆ.
ಅವರ ಜೀವನ ಶೈಲಿ ಒಂದು ಕೌತುಕವೇ ಸರಿ. ನನಗೆ ಅವರು ಇಂದಿಗೂ ವಿಶೇಷ, ವಿಸ್ಮಯ. ನಾನೂ ಮರಳುಗಾಡಿನಲ್ಲಿ ಅಲೆಯುತ್ತೇನೆ, ಅವರೂ ಮರುಭೂಮಿ ಯಲ್ಲಿ ಅಲೆಯುತ್ತಾರೆ. ವ್ಯತ್ಯಾಸ ಇಷ್ಟೇ, ನನ್ನ ಅಲೆದಾಟಕ್ಕೆ ಕಾರಣ ನನ್ನ ವೃತ್ತಿ. ಅವರ ಅಲೆದಾಟಕ್ಕೆ ಕಾರಣ ಅವರ ಪ್ರವೃತ್ತಿ. ನನ್ನ ತಿರುಗಾಟ ನಿತ್ಯದ್ದಾದರೆ ಅವರ ತಿರುಗಾಟ ತಿಂಗಳಿಗೆ, ಎರಡು ತಿಂಗಳಿಗೆ ಒಮ್ಮೆ. ನಾನು ನಿತ್ಯ ಹೋಗಿ ಬರುವ ಸ್ಥಳದ ಮಾಹಿತಿ ನನಗೆ ಪ್ರತಿದಿನ ಬೆಳಗ್ಗೆಯೇ ತಿಳಿದಿರುತ್ತದೆ.
ಅವರಿಗೆ ಹಾಗಲ್ಲ, ತಿಂಗಳು ಕಳೆದ ನಂತರ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವ ಒಂದೆರಡು ದಿನ ಮೊದಲು ನಿರ್ಧರಿಸಲ್ಪಡುತ್ತದೆ. ಪಕ್ಕಾ ಅವರಂತೆ ಅಲ್ಲದಿದ್ದರೂ, ದೊಡ್ಡ ಪ್ರಮಾಣದ ಸಾಮ್ಯತೆ ಇರುತ್ತಿದ್ದು ದರಿಂದ ನನ್ನ ಸಹೋದ್ಯೋಗಿಗಳು, ಸ್ನೇಹಿತರು ನನ್ನನ್ನು ತಮಾಷೆಗೆ ಇಂಡಿಯನ್ ‘ಬದು’ ಎಂದು ಕರೆದದ್ದೂ ಇದೆ. ಬದಾವಿನ್ ಅನ್ನಿ, ಬದುಯಿನ್ ಅನ್ನಿ ಅಥವಾ ಬೆಡೋಯಿನ್ ಅನ್ನಿ, ಅರಬ್ಬಿ ಭಾಷೆಯಲ್ಲಿ ಬದು ಎಂದು ಕರೆಯುವುದು ಅಲೆಮಾರಿಗಳನ್ನು. ಅರಬ್ಬಿ
ಭಾಷೆ ಯಲ್ಲಿ ‘ಬದಾವಿ’ ಎಂದರೆ ಮರುಭೂಮಿಯ ನಿವಾಸಿ ಎಂದು ಅರ್ಥ.
ಸೌದಿ ಅರೇಬಿಯಾದಂತಹ ತೈಲ ಸಂಪನ್ಮೂಲ ಭರಿತವಾದ ದೇಶದಲ್ಲಿ ಇಂದಿಗೂ ತೀರಾ ಬಡವರಂತೆ ಜೀವನ ನಡೆಸುತ್ತಿರುವವರು ಇದ್ದಾರೆ ಎಂಬುದು ಕೇಳಿದರೆ ನಿಮಗೆ ಆಘಾತ ಎನಿಸಬಹುದು, ಆದರೆ ಇದು ಸತ್ಯ. ಯಾವ ಕಾಲಕ್ಕೂ ಇವರನ್ನು ಭಾರತದ ಬಡತನಕ್ಕೆ ಹೋಲಿಸಬೇಡಿ, ಸೌದಿಯ ಇತರ ಪ್ರಜೆಗಳಿಗೆ ಹೋಲಿಸಿದರೆ ಇವರು ಬಡವರು ಅಷ್ಟೇ. ಸೌದಿ ಅರೇಬಿಯಾದಲ್ಲಿ ಈಗಲೂ ಇಂತಹ ಅಲೆಮಾರಿ ಬುಡಕಟ್ಟಿನ ಒಂದು ದೊಡ್ಡ ವರ್ಗವೇ ಇದೆ. ಇವರು ಮೂಲತಃ ಅರೇಬಿಯನ್ ಪೆನಿನ್ಸುಲಾ, ಇರಾಕ್ ಮತ್ತು ಆಫ್ರಿಕಾದ ಮರುಭೂಮಿ ಪ್ರದೇಶದಲ್ಲಿ ವಾಸಿಸುತ್ತಿದ್ದವರು.
ಆ ಕಾಲದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸರಕು ಸಾಗಿಸುವುದು ಇವರ ಉದ್ಯೋಗವಾಗಿತ್ತು. ಅದೇ ಅವರ ಆದಾಯವೂ ಆಗಿತ್ತು. ಬದಲಾದ
ಕಾಲಘಟ್ಟದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಈಗಲೂ ಅತಿ ಹೆಚ್ಚು ಅಲೆಮಾರಿ ಬುಡಕಟ್ಟಿನ ಜನ ಇರುವುದು ಸೌದಿ ಅರೇಬಿಯಾದಲ್ಲಿಯೇ. ಒಂದು ಅಂಕಿ ಅಂಶದ ಪ್ರಕಾರ ಸೌದಿ ಅರೇಬಿಯಾ ಮತ್ತು ಅಲ್ಜೇರಿಯಾ ದೇಶದಲ್ಲಿ ತಲಾ ಇಪ್ಪತ್ತು ಲಕ್ಷ ಅಲೆಮಾರಿ ಬುಡಕಟ್ಟಿನ ಜನರಿದ್ದಾರೆ.
ಈಜಿ, ಸಿರಿಯಾ, ಜಾರ್ಡನ್, ಸುಡಾನ್, ಲಿಬಿಯಾದಂತಹ ದೇಶಗಳಲ್ಲಿ ತಲಾ ಒಂದು ಲಕ್ಷಕ್ಕೂ ಹೆಚ್ಚಿದ್ದಾರೆ. ಬರಿ ಕೊಲ್ಲಿ ರಾಷ್ಟ್ರಗಳ ಇವರ ಸಂಖ್ಯೆ ಮೂವತ್ತೈದು
ಲಕ್ಷಕ್ಕಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ. ವಿಶ್ವಾದ್ಯಂತ ಸುಮಾರು ಎರಡು ಕೋಟಿ ಇದೆ ಎಂದರೆ ಆಶ್ಚರ್ಯಪಡಬೇಡಿ. ಭಾರತದಂತಹ ದೊಡ್ಡ
ರಾಷ್ಟ್ರದಿಂದ ಹಿಡಿದು ಇಸ್ರೇಲ್‌ನಂತಹ ಸಣ್ಣ ದೇಶದಲ್ಲೂ ಅಲೆಮಾರಿಗಳಿzರೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಅವರ ಸಂಸ್ಕೃತಿ, ಆಚರಣೆ, ಭಾಷೆಗಳಲ್ಲಿ ವ್ಯತ್ಯಾಸವಿರಬಹುದು, ಆ ಮಾತು ಬೇರೆ.
ಮೊದಲೇ ಹೇಳಿದಂತೆ ನಾನು ಸೌದಿ ಅರೇಬಿಯಾದ ಅಲೆಮಾರಿಗಳನ್ನು ಹತ್ತಿರದಿಂದ ಕಂಡದ್ದರಿಂದ ಅವರ ಕುರಿತು ಕೆಲವು ಮಾಹಿತಿ ನೀಡುತ್ತಿದ್ದೇನೆ. ಸೌದಿ ಅರೇಬಿಯಾದ ಬದುಗಳು ದೈಹಿಕವಾಗಷ್ಟೇ ಅಲ್ಲ, ಮಾನಸಿಕವಾಗಿಯೂ ಬಲಾಢ್ಯರು. ಎಂತಹ ಕಠಿಣ ಹವಾಮಾನದ ವೈಪರೀತ್ಯವನ್ನೂ ಜಯಿಸಬಲ್ಲವರು. ಮರುಭೂಮಿಯ ಹಮಾನಾದದ ಕುರಿತು ಹೆಚ್ಚೇನೂ ಹೇಳಬೇಕಾಗಿಲ್ಲ. ಬೇಸಿಗೆಯಲ್ಲಿತಾಪಮಾನ ಐವತ್ತು ಡಿಗ್ರಿ ದಾಟಿದರೆ, ಚಳಿಗಾಲದಲ್ಲಿ ಹತ್ತು ಡಿಗ್ರಿಗಿಂತ ಕೆಳಗೆ ಇಳಿಯುತ್ತದೆ.
ವರ್ಷದಲ್ಲಿ ಒಂದೋ ಎರಡೋ ಬಾರಿ ಮಳೆ ತನ್ನ ಇರುವಿಕೆಯನ್ನು ತೋರಿಸುತ್ತದೆ. ಇವನ್ನೆಲ್ಲ ಹೇಗೋ ಸಹಿಸಿಕೊಳ್ಳಬಹುದು. ಆದರೆ, ಯಾವ ಮುನ್ಸೂಚನೆಯೂ ಇಲ್ಲದೆ ಬೀಸುವ ಬಿರುಗಾಳಿ ಧೂಳೆಬ್ಬಿಸಿ (ಮರಳೆಬ್ಬಿಸಿ ಎಂದೂ ಓದಿಕೊಳ್ಳಬಹುದು) ಕಂಗಾಲಾಗಿಸುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಬೀಸುವ ಮರಳು ಬಿರುಗಾಳಿ ಯಷ್ಟು ಹಿಂಸೆ ಮತ್ತೊಂದಿಲ್ಲ. ಒಂದೆಡೆ ಉಷ್ಣ ತಾಪಮಾನದಿಂದ ಮೈಯಿಂದ ಒಸರುವ ಬೆವೆರು, ಇನ್ನೊಂದೆಡೆ ಬಿರುಗಾಳಿಯೊಂದಿಗೆ ಎರಗಿ ಬರುವ ಮರಳು. ಮರುಭೂಮಿಯಲ್ಲಿ ಟೆಂಟಿನ ಮನೆಯಲ್ಲಿರುವವರ ಪರಿಸ್ಥಿತಿ ಹೇಗಿರಬಹುದು ಊಹಿಸಿ. ಆ ಸಂದರ್ಭದಲ್ಲಿ ಶೌಚಕ್ಕೆ ಹೊರಗೆ ಬಂದರೂ ಸಾಕು, ನವ ರಂಧ್ರಗಳಲ್ಲೂ
ಮರಳು ನುಸುಳುತ್ತದೆ. ಅಂದಹಾಗೆ, ಬದುಗಳದ್ದು ಇಂದಿಗೂ ಬಯಲು ಶೌಚವೇ.
ಬದುಗಳು ಸ್ವಾಭಿಮಾನಿಗಳು. ಯಾರ ಮುಂದೆಯೂ ಕೈ ಒಡ್ಡುವವರಲ್ಲ, ಭಿಕ್ಷೆ ಬೇಡುವವರಲ್ಲ. ಯಾರ ಮುಂದೆಯೂ ಹೋಗಿ ಕೈ ಕಟ್ಟಿ ನಿಲ್ಲುವವರಲ್ಲ. ಆಗೊಮ್ಮೆ, ಈಗೊಮ್ಮೆ ಸರಕಾರಿ ಕಚೇರಿಗೆ ಬರುವ ಇವರ ಮಾತು ನೇರ, ದಿಟ್ಟ, ನಿರಂತರ. ತಮ್ಮ ಈ ವರ್ತನೆಯನ್ನು ಕೆಲವರು ಅಹಂಕಾರ ಎಂದು ತಿಳಿದರೆ ಅದು ತಮ್ಮ ತಪ್ಪಲ್ಲ ಎಂದು ಭಾವಿಸುವವರು ಅವರು. ಅದೆಷ್ಟೋ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳದ ಬದುಗಳು ಇನ್ನೂ ಇzರೆ. ಕೆಲವರು ಸರಕಾರ ಒದಗಿಸಿದ ಮನೆ ಪಡೆದು, ಅದನ್ನು ಬಾಡಿಗೆಗೆ ಕೊಟ್ಟು ತಾವು ಮರುಭೂಮಿಯಲ್ಲಿ ಬಂದು ಉಳಿದವರೂ ಇದ್ದಾರೆ.
ಸದಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತ ಇರುವುದರಿಂದ ಶಿಕ್ಷಣದಿಂದ ದೂರ ಉಳಿದಿರುವುದರಿಂದ ಅವರಲ್ಲಿ ಸೌಮ್ಯ ಭಾವ, ವಿನಯದ ಕೊರತೆ ಇರಬಹುದಾದರೂ ಅವರನ್ನು ಕೆಟ್ಟವರು ಎಂದು ಖಂಡಿತ ಪರಿಗಣಿಸಲಾಗದು. ಒಂದು ಟೆಂಟ್ ಅಥವಾ ಡೇರೆ, ಮರಳುಗಾಡಿನಲ್ಲಿ ಚಲಿಸಬಲ್ಲ ಒಂದೆರಡು ಜೀಪ್‌ನಂತಹ ವಾಹನಗಳು, ಒಂದು ಅಥವಾ ಎರಡು ಸಣ್ಣ ಲಾರಿ, ಒಂದು ನೀರಿನ ಟ್ಯಾಂಕರ್, ಒಂದಷ್ಟು ಒಂಟೆ, ಹಲವು ಕುರಿ, ಕೆಲವು ಕೋಳಿ ಇವರ ಆಸ್ತಿ. ಕೆಲವರು ಒಂದೊ ಎರಡೊ ಕುದುರೆ, ಕತ್ತೆ, ನಾಯಿ ಕೂಡ ಸಾಕುವುದಿದೆ. ಒಂದು ಪರಿವಾರದವರು ಉಳಿದುಕೊಳ್ಳಲು ಬೇಕಾದಷ್ಟು ದೊಡ್ಡ ಡೇರೆ, ಅದರ ಒಳಗೇ ನಿರ್ಮಿಸಿಕೊಂಡ ಕೆಲವು ಕೋಣೆಗಳು. ಒಂಟೆ, ಕುರಿ ಸಾಕಲು ವಿದೇಶಿ ಆಳುಗಳಿದ್ದರೆ ಅವರಿಗೆ ಪ್ರತ್ಯೇಕ ಡೇರೆ.
ಸಾಮಾನ್ಯವಾಗಿ ಡೇರೆಯ ಮುಂಭಾಗದಲ್ಲಿ ಒಂದು ಹಜಾರ ಅಥವಾ ಹಾಲ್ ಇರುತ್ತದೆ. ಅತಿಥಿಗಳು ಬಂದರೆ ಅವರನ್ನು ಕುಳ್ಳಿರಿಸಿ, ಸತ್ಕರಿಸಲು ಇರುವ ಈ
ಜಾಗಕ್ಕೆ ’ಮಜಲೀಸ್’ ಎನ್ನುತ್ತಾರೆ. ಮಜಲೀಸ್‌ನಲ್ಲಿ ನಮ್ಮ ಹಾಲ್‌ನಲ್ಲಿರುವಂತೆ ಸೋಫಾ, ಕುರ್ಚಿಯ ಬದಲಾಗಿ, ನೆಲದ ಮೇಲೆ ಜಮಖಾನಾ, ಮೆತ್ತನೆಯ
ಹಾಸು, ಕೈ ಊರಲು, ಮೈ ಒರಗಲು ದಿಂಬುಗಳಿರುತ್ತವೆ. ಅರಬರು ಅತಿಥಿ ಸತ್ಕಾರಕ್ಕೂ ಹೆಸರಾದವರು. ಸಾಮಾನ್ಯವಾಗಿ ಅವರು ಅತಿಥಿಗಳನ್ನು ಬರಮಾಡಿ ಕೊಳ್ಳುವುದು ಖರ್ಜೂರ, ಚಹಾ ಅಥವಾ ‘ಗಾಹ್ವಾ’ದಿಂದ. ಗಾಹ್ವಾ ಎಂದರೆ ಟರ್ಕಿಶ್ ಕಾಫಿ.
ಅದರಲ್ಲಿ ಕಾಫಿಗಿಂತ ಏಲಕ್ಕಿ ಪ್ರಮಾಣ ಹೆಚ್ಚು ಇರುವುದರಿಂದ, ಏಲಕ್ಕಿಯ ಘಮಲು ಮೊದಲು ಮೂಗಿಗೆ ರಾಚುತ್ತದೆ. ಇದಕ್ಕೆ ನಮ್ಮ ಕಾಫಿಯಂತೆ ಹಾಲು ಬಳಸುವುದಿಲ್ಲ. ಕಾಫಿಗಷ್ಟೇ ಅಲ್ಲ, ಚಹಾಕ್ಕೂ ಹಾಲು ಬೆರೆಸುವುದಿಲ್ಲ. ಅದಕ್ಕೆ ‘ಸುಲೆಮಾನಿ’ (ಬ್ಲ್ಯಾಕ್ ಟೀ) ಎನ್ನುತ್ತಾರೆ. ಹಾಗಂತ ಅವರು ಹಾಲನ್ನು ಬಳಸುವುದೇ ಇಲ್ಲ ಎಂದಲ್ಲ. ನಗರ ಪ್ರದೇಶಗಳಲ್ಲಿ ಪ್ಯಾಕೆಟ್‌ನಲ್ಲಿ ಬರುವ ಹಸುವಿನ ಹಾಲು ಬಳಸುತ್ತಾರೆ. ಬದುಗಳು ಅವರೇ ಸಾಕಿದ ಒಂಟೆ ಮತ್ತು ಕುರಿಯ ಹಾಲು ಬಳಸು ತ್ತಾರೆ. ಇನ್ನು, ಅರಬ್ಬೀ ಜನರ ಮನೆಯಲ್ಲಿ ಒಂದು ವೇಳೆ ನಿಮಗೆ ಅಕ್ಕಿ ಸಿಗದೇ ಇರಬಹುದು, ಆದರೆ ಖರ್ಜೂರದ ಕೊರತೆ ಕಾಣಲಿಕ್ಕಿಲ್ಲ. ಖರ್ಜೂರ ಅವರ ನಿತ್ಯದ ಬದುಕಿನ ಅವಿಭಾಜ್ಯ ವಸ್ತು.
ಅದರಲ್ಲೂ ಮರಳಿನ ಗಾಳಿ ಬೀಸುವ ಸಮಯದಲ್ಲಿ ಖರ್ಜೂರ ಜೀರ್ಣಾಂಗದ ಶುಚಿತ್ವ ಕಾಪಾಡುತ್ತದೆ ಎಂಬ ನಂಬಿಕೆ ಅವರದ್ದು. ಬದುಗಳು ಸುಮಾರು ಎರಡು ಮೂರು ದಶಕಗಳ ಹಿಂದಿನವರೆಗೂ ವಿದ್ಯುತ್ ದೀಪದಿಂದ ದೂರ ಉಳಿದು, ದೀಪಕ್ಕಾಗಿ ಉರುವಲು, ಕೆರೋಸಿನ್ ಅಥವಾ ಗ್ಯಾಸ್ಲೈಟ್ ಬಳಸುತ್ತಿದ್ದರು. ಇತ್ತೀಚೆಗೆ ಕೆಲವರು ಸಣ್ಣ ಜನರೇಟರ್ ಮತ್ತು ಬಲ್ಬ ಬಳಸುತ್ತಿದ್ದಾರೆ. ಮೊದಲು ಆಹಾರಕ್ಕಾಗಿ ಕುರಿ ಮತ್ತು ಒಂಟೆಯ ಮಾಂಸವನ್ನು ಅವಲಂಬಿಸಿಕೊಂಡಿದ್ದರು. ಈಗಲೂ ಅವರ ಪ್ರಮುಖ ಆಹಾರ ಅದೇ ಆಗಿದ್ದರೂ, ಒಂಟೆ, ಕುರಿಗಳನ್ನು ಮಾರಿ ಬಂದ ಆದಾಯದಿಂದ ಹಣ್ಣು, ತರಕಾರಿಗಳನ್ನೂ, ಇತರ ಧಾನ್ಯಗಳನ್ನೂ ಖರೀದಿಸುತ್ತಿದ್ದಾರೆ. ಈ ಪ್ರಾಣಿಗಳನ್ನು ಮಾರುವುದರಿಂದ ಇತ್ತೀಚಿನ ದಿನಗಳಲ್ಲಿ ಅವರಿಗೆ ಸಾಕಷ್ಟು ಆದಾಯವೂ ಬರುತ್ತಿದೆ.
ಬದುಗಳು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗುವಾಗ ಯಾವುದಾದರೂ ನಿಯಮ ಪಾಲಿಸುತ್ತಾರಾ ಎಂದರೆ ಹಾಗೇನೂ ಇಲ್ಲ. ಸಾಮಾನ್ಯವಾಗಿ ಬೇಸಿಗೆ ಮತ್ತು ಚಳಿಗಾಲದಲ್ಲಿ ಗಾಳಿ ಬೀಸುವ ದಿಕ್ಕು ಬೇರೆ ಇರುವುದರಿಂದ ಗಾಳಿಯ ದಿಕ್ಕನ್ನು ಪರಿಗಣಿಸಿ ಬೀಡುಬಿಡುತ್ತಾರೆ. ಇವರ ಪರಿವಾರದ ಮುಖ್ಯಸ್ಥ ಒಂದು ಸ್ಥಳ ವೀಕ್ಷಿಸಿ, ತಮ್ಮ ವಾಸ್ತವ್ಯಕ್ಕೆ ಒಳಿತು ಎಂದು ನಿರ್ಧರಿಸಿದ ಮೇಲೆ ಅಲ್ಲಿ ಡೇರೆ ಹಾಕುತ್ತಾರೆ. ಆ ಪರಿಸರ ಅವರಿಗೆ ಬೇಸರ ಬರುವವರೆಗೆ, ಅಥವಾ ಆ ಪರಿಸರ ಇನ್ನು ವಾಸಿಸಲು ಯೋಗ್ಯವಲ್ಲ (ಶುಚಿತ್ವದ ದೃಷ್ಟಿಯಿಂದ) ಎಂದೆನಿಸಿದಾಗ ಮುಂದಿನ ತಾಣಕ್ಕೆ ಹೊರಡುತ್ತಾರೆ.
ಪುನಃ ಅದೇ ಯಜಮಾನ ಮುಂದಿನ ಸ್ಥಳ ನಿರ್ಣಯಿಸುತ್ತಾನೆ. ಅಲೆಮಾರಿಗಳ ಮೆರವಣಿಗೆ ಮುಂದಿನ ಸ್ಥಳಕ್ಕೆ ಸಾಗುತ್ತದೆ. ಅವರು ವಲಸೆ ಹೋಗುವುದನ್ನು ನೋಡುವುದೂ ಒಂದು ಚೆಂದವೇ. ಒಂದು ದೊಡ್ಡ ಪರಿವಾರದಲ್ಲಿ ಅಜ್ಜ ಅಜ್ಜಿ, ಮಕ್ಕಳು, ಮೊಮ್ಮಕ್ಕಳೂ ಸೇರಿದಂತೆ ಏನಿಲ್ಲವೆಂದರೂ ಹದಿನೈದು ಇಪ್ಪತ್ತು ಜನ ಇರುತ್ತಾರೆ. ಒಂದೊ ಎರಡೋ ಲಾರಿಯಲ್ಲಿ ತಮ್ಮ ಡೇರೆ, ಮನೆ ಬಳಕೆಯ ವಸ್ತುಗಳನ್ನು ಹೇರಿಕೊಂಡು, ಉಳಿದವನ್ನು ಕತ್ತೆಯ ಹೆಗಲಿಗೆ ಏರಿಸಿ, ಸಾಧ್ಯವಾದಷ್ಟು ಜನ ವಾಹನದಲ್ಲಿ, ಉಳಿದವರು ಒಂಟೆ, ಕುದುರೆಯ ಬೆನ್ನೇರಿ ಹೊರಟರೆ ಕೇಳಬೇಕೆ? ಸುಮಾರು ನಲವತ್ತರಿಂದ ಐವತ್ತು ಕುರಿಗಳು, ಇಪ್ಪತ್ತು ಇಪ್ಪತ್ತೈದು ಒಂಟೆ ಗಳು ಇವನ್ನೆಲ್ಲ ಕೂಡಿ ಹೋಗುವಾಗ ವಾದ್ಯ, ಘೋಷಗಳಿಲ್ಲದಿದ್ದರೂ ಒಂದು ಸೊಬಗೇ ಸೈ.
ಈ ಸಂದರ್ಭದಲ್ಲಿ ಒಂದು ಪ್ರಶ್ನೆ ಸ್ವಾಭಾವಿಕ. ಶುಚಿತ್ವದ ದೃಷ್ಟಿಯಿಂದ ಅವರು ಸ್ಥಳ ಬಿಟ್ಟರೆ ಆ ಸ್ಥಳದ ಪರಿಸ್ಥಿತಿ ಏನು? ಒಂದು ಕಡೆ ಮನುಷ್ಯನ ಬಯಲು ಶೌಚ,
ಇನ್ನೊಂದು ಕಡೆ ಪ್ರಾಣಿಗಳ ಮಲ ಮೂತ್ರ ವಿಸರ್ಜನೆ, ಜತೆಗೆ ನಿತ್ಯ ಬಳಸಿ ಉಳಿದ, ಹಾಳಾದ ಆಹಾರ ಪದಾರ್ಥಗಳ ತ್ಯಾಜ್ಯ. ಇವುಗಳಿಂದ ನೊಣ ಮತ್ತು
ಇತರ ಕ್ರಿಮಿ ಕೀಟಗಳು ಹುಟ್ಟುವುದು ಸಹಜ. ವಿಪರೀತ ಹವಾಮಾನದ ಪರಿಸ್ಥಿತಿಯಲ್ಲಿ ಇದು ಸ್ವಲ್ಪ ವಿಳಂಬವಾಗಬಹುದೇ ವಿನಃ ಹುಟ್ಟದೇ ಇರಲು ಸಾಧ್ಯವಿಲ್ಲ. ಇವೆಲ್ಲದಕ್ಕೂ ಉತ್ತರ ಮತ್ತು ವರವಾಗಿ ಬರುವುದು ಈ ಮೊದಲು ಹೇಳಿದ ಅದೇ ಮರಳಿನ ಬಿರುಗಾಳಿ. ಈ ಬಿರುಗಾಳಿ ಎರಡು ಗಂಟೆ ಬೀಸಿದರೂ ಅರ್ಧ ಮೀಟರ್ ಎತ್ತರದಷ್ಟು ಮರಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುತ್ತಿರುತ್ತದೆ.
ಇದನ್ನು moving sand dunes ಎನ್ನುತ್ತಾರೆ. ಅದರಲ್ಲಿ ತ್ಯಾಜ್ಯಗಳು ಮುಚ್ಚಿಹೋಗುತ್ತವೆ. ಕೆಲವೊಮ್ಮೆ ಹತ್ತು ಹದಿನೈದು ದಿನ ಬಿರುಗಾಳಿ ಬೀಸುವುದಿಲ್ಲ.
ಆಗಲೇ ಕಷ್ಟವಾಗುವುದು! ಇದರ ಜತೆಗೆ ಒಂದು ವಿಷಯ ಹೇಳಬೇಕು. ಇವರು ತಮ್ಮ ನೆಲವನ್ನು ಪ್ರೀತಿಸುವವರು. ರಾಷ್ಟ್ರದ ಮೇಲೆ ಮತ್ತು ದೇಶದ ಸ್ವತ್ತಿನ ಮೇಲೆ ಅವರಿಗಿರುವ ಪ್ರೀತಿ ಮತ್ತು ಕಾಳಜಿ ಅನನ್ಯ, ಅನೂಹ್ಯ. ಅದನ್ನು ಸವಿಸ್ತಾರವಾಗೇ ಹೇಳಬೇಕು. ಒಂದೆರಡು ಸಾಲಿನಲ್ಲಿ ಹೇಳಿದರೆ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ.
ನಗರದ ವೈಭವ, ಪಾರ್ಕ್, ಮಾಲ, ಪಿಜ್ಜಾ, ಬರ್ಗರ್‌ಗಳಿಂದ ದೂರ ಉಳಿದು, ಸರಕಾರ ಸೌಲಭ್ಯ ಒದಗಿಸಿಕೊಡುತ್ತಿದ್ದರೂ, ಇನ್ನೂ ಮರಳುಗಾಡಿನಲ್ಲಿ ಇವರು ಅಲೆಯುವುದನ್ನು ಕಂಡಾಗ ಈಗಲೂ ನನಗೆ ಸೋಜಿಗ ಅನಿಸುತ್ತದೆ. ಆದರೆ ಕೆಲವು ವರ್ಷಗಳ ಹಿಂದೆ ಒಬ್ಬ ಬದು ಹೇಳಿದ ಮಾತು ನೆನಪಿಗೆ ಬರುತ್ತದೆ. ‘ಬೇಸಿಗೆ ಯಾಗಲಿ, ಚಳಿಯಾಗಲಿ, ನಮ್ಮ ಬದುಕು ಮರುಭೂಮಿಯಲ್ಲಿ. ನಮಗೆ ಕುಡಿಯಲು ನೀರಿಲ್ಲ, ನಗರ ಪ್ರದೇಶದಲ್ಲಿ ಇರುವಂತೆ ಕಟ್ಟಡಗಳಿಲ್ಲ, ಎಸಿ, ಟಿವಿ ಇಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ. ಪರಂಪರಾಗತವಾಗಿ ನಡೆದು ಬಂದ ನಮ್ಮ ಶೈಲಿಯೇ ನಮಗೆ ಪ್ರೀತಿ. ನಗರ ಪ್ರದೇಶದಲ್ಲಿ ನೆಲೆಸಿದವರು ಎಷ್ಟು ವರ್ಷ ಬದುಕು ತ್ತಾರೋ, ನಾವು ಅವರಿಗಿಂತ ಹೆಚ್ಚು ವರ್ಷ ಬದುಕುತ್ತೇವೆ.
ಮರುಭೂಮಿಯಲ್ಲಿ ಅಲೆದಾಡುವವರು ಸಂತೋಷವಾಗಿರುವುದಿಲ್ಲ ಎಂದು ತಿಳಿದರೆ ಅದು ಅವರ ತಪ್ಪು. ನಾವು ಸುಖವಾಗೇ ಇದ್ದೇವಲ್ಲ. ಅವರ ದೃಷ್ಟಿಯಲ್ಲಿ, ಅವರು ಸುಖಿಗಳು, ನಮ್ಮ ದೃಷ್ಟಿಯಲ್ಲಿ ನಾವು ಸುಖಿಗಳು.’