Wednesday, 11th December 2024

ದೇವಕಾರಿನಲ್ಲೊಂದು ದೇವಜಲಪಾತ

ಅಲೆಮಾರಿಯ ಡೈರಿ

mehandale100@gmail.com

ಜಲಪಾತಗಳ ಜಿಲ್ಲೆ ಉತ್ತರ ಕನ್ನಡವನ್ನು ದೂರ ದೂರದಿಂದ ಸಂದರ್ಶಿಸುವವರು ಅದೇ ಮಾಗೋಡು, ಮಡ್ಡಿಜೋಗ, ಉಂಚಳ್ಳಿ,
ಕೆಪ್ಪಜೋಗ, ಗವಿಗುಂಡಿ, ವಿಭೂತಿ, ಅಣಶಿ, ಶಿವಗಂಗೆ ಹೀಗೆ ಸಿದ್ಧ ಮಾದರಿಯ ರಸ್ತೆಯಲ್ಲಿ ಚಲಿಸಿ, ವಾಹನ ನಿಲ್ಲಿಸಿ ಒಂದಿಷ್ಟು ಮೋಜು ಮಸ್ತಿ ನಡೆಸಿ, ಕಾಡುಮೇಡು ಸುತ್ತಿ, ಬೇಕೆಂದೆಡೆಯೆಲ್ಲ ವಾಹನ ನಿಲ್ಲಿಸಿ, ಪ್ರತಿ ನಡೆಗೊಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತ ಮೊಬೈಲ್ ಕ್ಯಾಮೆರಾ ಬಂದಿದ್ದಕ್ಕೆ ಈಗೀಗ ಎಲ್ಲ ಪ್ರವಾಸಿಗರೂ, ಅಲ್ಲದವರೂ ಫೋಟೊಗ್ರಾಫರ್‌ಗಳೇ.. ಅಲ್ಲಲ್ಲಿ ರಸ್ತೆಯನ್ನೂ ತಿಪ್ಪೆ ಯನ್ನೂ ಬಿಡದೆ ನಿಂತು ಕುಂತು ಕ್ಲಿಕ್ಕಿಸಿ ನಡೆದು ಬಿಡುತ್ತಾರೆ.

ಆದರೆ ವಾಹನ, ಕಾಲ್ನಡಿಗೆ, ದೋಣಿಯಾನ ಜತೆಗೆ ಕನಿಷ್ಠ ಎರಡು ಗಂಟೆಯ ಚಾರಣ ದೊಂದಿಗೆ ಇವತ್ತಿಗೂ ದಾರಿಯನ್ನು ಕಲ್ಪಿಸಲು ಸವಾಲಾಗಿಯೇ ಉಳಿದಿರುವ ಅದ್ಭುತ ಸೌಂದರ್ಯದ ಖನಿಯಾಗಿ ನಿಂತಿರುವ ದೇವಕಾರಿಗೆ ಮಾತ್ರ ವರ್ಷದುದ್ದಕ್ಕೂ ತಲುಪು ವವರ ಸಂಖ್ಯೆ ಗಣಿನೀಯವಾಗಿ ಕಡಿಮೆಯೇ. ಒಂದು ಪ್ರಚಾರವಿಲ್ಲ, ಎರಡನೆಯದ್ದು ಈ ಮೊದಲಿನ ಎಲ್ಲ ಸ್ಥಳಗಳಿಗೂ ಎಗ್ಗಿಲ್ಲದೆ ಎಗಾದಿಗಾ ನುಗ್ಗುವಂತೆ, ನಾನೂ ಬಂದೆ ಎಂದು ದೇವಕಾರಿಗೆ ನುಗ್ಗುವ ಅವಕಾಶ ಇಲ್ಲದಿರುವುದು.

ಇದೊಂದು ಲೆಕ್ಕದಲ್ಲಿ ಒಳ್ಳೆಯದೇ ಎಂದು ನಾನು ಹಲವು ಬಾರಿ ಅಂದುಕೊಂಡಿದ್ದೇನೆ. ಕಾರಣ ಕಂಡಲ್ಲ ಕುಲಗೆಡಿಸುವ ಟ್ರೆಕ್ಕಿಂಗ್ ಹೆಸರಿನ ಮೋಜು ಮಸ್ತಿಗಳಿಂದ ಮುಲಾಜೆ ಇಲ್ಲದೆ ದೂರ ಇರಿಸಲಾಗಿರುವ ಈ ಸ್ಥಳಕ್ಕೆ ಅಷ್ಟರ ಮಟ್ಟಿಗೆ ಪ್ಲಾಸ್ಟಿಕ್ಕು, ಬೀಯರ್ ಬಾಟಲ್‌ಗಳು, ತಿಂದುಡು ಎಸೆಯುವ ಗಾರ್ಬೇಜುಗಳ ಕಿರಿಕಿರಿ ಇಲ್ಲ. ದಾರಿಯಂತೂ ಮೊದಲೇ ಇಲ್ಲ. ಆ ಮಟ್ಟಿಗೆ ಧನ್ಯ ದೇವಕಾರು ಜಲಪಾತ.

ಹೌದು, ದೇವಕಾರು ಮೊದಲಿಗೆ ಅಷ್ಟಾಗಿ ಹೆಸರು ಮಾಡದಿದ್ದರೂ, ಜನ ಸಂಪರ್ಕಕ್ಕೆ ಬಾರದೇ ಉಳಿದು ಹೋಗಿದ್ದರೂ ಸ್ಥಳೀಯ ವಾಗಿ ವಜ್ರ ಜಲಪಾತ ಎಂದು ಸದ್ದಿಲ್ಲದೇ ಹರಿಯುತ್ತಲೇ ಇದೆ ಕಾಡ ಬೆಳದಿಂಗಳಿನಂತೆ. ಆದರೆ ಕದ್ರಾ ಜಲ ವಿದ್ಯುತ್ ಯೋಜನೆ ಯಡಿಯಲ್ಲಿ ಹೀನ್ನಿರ ವಿಸ್ತಾರ ನೂರಾರು ಎಕರೆ ಕಾಳಿ ನದಿಯ ಹಿಂಭಾಗ ವಿಸ್ತಾರಗೊಂಡಾಗ ದೇವಕಾರಿನ ನೇರ ಸಂಪರ್ಕ ಸಂಪೂರ್ಣ ಮುಚ್ಚಿಹೋಯಿತು. ಈಗ ಏನಿದ್ದರೂ ಜಿಯ ಪ್ರಮುಖ ಸ್ಥಳ ಕಾರವಾರದಿಂದ ದಿನಕ್ಕೊಮ್ಮೆ ಹೊರಡುವ ಬಸ್ಸಿನಲ್ಲಿ
ಕದ್ರಾದ ಮೂಲಕ ಚಲಿಸಿ, ಕೊಡಸಳ್ಳಿಯ ಮಾರ್ಗವಾಗಿ ನಟ್ಟ ನಡುವಿನ ದೇವಕಾರ ಕ್ರಾಸಿನಲ್ಲಿ ಉಬ್ಬರ ಇಳಿತಗಳಿಗನುಗುಣ
ವಾಗಿ ಬದಲಾಗುವ ದೋಣಿ ಸಂಚಾರದ ಜಾಗಗಳನ್ನು ತಲುಪಿ ಮುಕ್ಕಾಲು ಗಂಟೆಯಷ್ಟು ಕಾಳಿನದಿಯ ಹಿನ್ನೀರಲ್ಲಿ ಸ್ವಯಂ ಹುಟ್ಟಿನ ಅನುಭವ ಪಡೆದು ಆ ದಡ ತಲುಪಿದರೆ ಒಂದು ಹಂತಕ್ಕೆ ದೇವಕಾರಿನ ತೆಕ್ಕೆಗೆ ಬಿದ್ದಂತಾಗುತ್ತದೆ.

ಒಮ್ಮೆ ಆಚೆಯ ದಡ ಸೇರಿದರೆ ನಂತರದಲ್ಲಿ ನದಿಯ ಹರಿವಿನ ತಿರುವುಗಳ, ಅಂಚಿನ ಕಾಲು ದಾರಿ ಉಂಟು ಎಂದರೆ ಉಂಟು ಇಲ್ಲ ಎಂದರೆ ಇಲ್ಲಗಳ ನಡುವಿನ ಅಗಾಧ ಕಾಡು ಬೆಳೆಗಳ ನಡುವೆ ಸೊಪ್ಪು ಸದೆ ಸವರುತ್ತಾ ಚಾರಣಕ್ಕಿಳಿದರೆ ಬರೋಬ್ಬರಿ ಎರಡು ಗಂಟೆ ಕಾಡು ದಾರಿ, ದಟ್ಟ ಹಸಿರಿನ ಗzಯ ಅಂಚು, ತೀವ್ರ ಕಡಿದಾದ ಪರ್ವತದ ಮೈ, ನೀರಿನ ಬಂಡೆಗಳ ಒಳಾವರಣದ ಅಗಾಧತೆ,
ಮಧ್ಯದಮ್ಮೆ ಎದ್ದು ನಿಂತ ಅರ್ಧ ಕೊರಕಲು ಶಿಲಾಬಂಡೆಯ ವೈವಿಧ್ಯಮಯ ಅನುಭವಗಳಿಗೆ ಈಡಾಗುತ್ತ ಕಾಳಿನದಿಯ ಪಾತ್ರದಲ್ಲಿ ಎಡ ತಿರುವನ್ನು ತೆಗೆದುಕೊಳ್ಳುತ್ತಿದ್ದಂತೆ ಕೀ.ಮೀ. ಮೊದಲೇ ಗೋಚರವಾಗುತ್ತದೆ ಅಷ್ಟು ಎತ್ತರದಿಂದ ಧರೆಗುರುಳು ತ್ತಿರುವ ದೇವಕಾರು ಜಲಪಾತ.

ಅದು ಅಕ್ಷರಶಏ ಬೆಳ್ಳಿ ಹಾಲ್ನೊರೆಗಳ ಮೊರೆತ, ಜಲಲಜಲಲ ಜಲಧಾರೆ. ಅಗಾಧ ಎತ್ತರ ಮತ್ತು ರಭಸಕ್ಕೆ ಕಿವಿಗಡಚಿಕ್ಕುವಂತೆ
ಶಬ್ದಿಸುತ್ತ ಬೀಳುವ ಜಲಪಾತ ಇವತ್ತಿಗೂ ಜಿಲ್ಲೆ ವಿಸ್ಮಯ. ಮಳೆಗಾಲದ ಆರಂಭದಿಂದ ಡಿಸೆಂಬರ್‌ವರೆಗೆ ತುಂಬು ಅಗಲದಲ್ಲಿ ಸುರಿಯುವ ದೇವಕಾರು ಜಲಪಾತ ಮೇ ತಿಂಗಳಲ್ಲೂ ಕೂಡ ಖುಷಿ ಕೊಡುವಷ್ಟು ನೀರನ್ನು ಉಳಿಸಿಕೊಂಡು ಹರಿಯುತ್ತಿರುತ್ತದೆ. ಆದರೆ ಸುಲಭಕ್ಕೆ ಈಡಾಗದ ದಾರಿಯ ಸೌಲಭ್ಯದಿಂದಾಗಿ ಮತ್ತು ಸ್ಥಳೀಯವಾಗಿ ಸೌಲಭ್ಯಗಳ ಕೊರತೆಯಿಂದಾಗಿ ಆಸಕ್ತಿ
ಇದ್ದರೂ ಇದನ್ನು ತಲುಪುವುದು ಸುಲಭವಾಗುವುದಿಲ್ಲ.

ಆದಷ್ಟೂ ಹೊರಗಿನ ವಿಹಾರಿಗಳು ಇದನ್ನು ಅರಸಿ ಬಾರದಿರುವುದೂ ಪ್ರಕೃತಿಯ ದೃಷ್ಟಿಯಿಂದ ಒಳ್ಳೆಯದೇ ಅನ್ನಿಸಿದ್ದಿದೆ ನನಗೆ.
ಸಾಕಷ್ಟು ಹರಿಯುವ ನೀರಿನ ಸೌಲಭ್ಯವನ್ನು ಹೊರತು ಪಡಿಸಿದರೆ ಏನೆಂದರೆ ಏನೂ ಲಭ್ಯವಾಗದ ದೇವಕಾರಿಗೆ ಹೋಗುವಾಗ ಸಾಕಷ್ಟು ಆಹಾರ ಪದಾರ್ಥಗಳ ಸಂಗ್ರಹ ಒಯ್ಯುವುದು ಅವಶ್ಯ. ಜತೆಗೆ ಕೇವಲ ದೇವಕಾರಲ್ಲ ಅದರ ನದಿ ಪಾತ್ರ ಹೊರತು ಪಡಿಸಿ ಈಚೆಯ ದಂಡೆಗೆ ಬಂದ ನಂತರವೂ ರಸ್ತೆಯ ವಿನಃ ಏನೂ ಸಿಕ್ಕುವುದಿಲ್ಲ.

ಹಾಗಂತ ಹತ್ತಿರದ ಕದ್ರಾ ಮೂವತ್ತು ಕಿ.ಮೀ. ದೂರದಲ್ಲಿದ್ದು ಅಲ್ಲಿಗೆ ಹೋಗಿ ತಿಂಡಿ ಕಾಫಿ ಬಯಸಿದರೆ ಅದೂ ಕಷ್ಟವೇ. ಕಾರಣ  ಕನಿಷ್ಠ ಲಭ್ಯತೆಯ ಕದ್ರಾ ಚಿಕ್ಕ ಊರು. ಅಲ್ಲಿ ಒಂದಿಷ್ಟು ಊಟದ ವ್ಯವಸ್ಥೆ ಆಗಬಹುದಾದರೂ ಹೆಚ್ಚಿನದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಆದರೆ ಯಾವಾಗಲೂ ಗೊತ್ತಿರುವ ಅಲ್ಲಲ್ಲಿನ ಜಲಪಾತ, ಝರಿ, ತೊರೆ ಸುತ್ತುವುದಕ್ಕಿಂತಲೂ ವಿಭಿನ್ನ ಅನುಭವ ಮತ್ತು ಅದ್ಭುತ ಯಾನ ಮಾಡಿಸುವ ದೇವಕಾರು ಒಮ್ಮೆಯಾದರೂ ನೋಡಲೇ ಬೇಕಾದ ನೈಜ ದೃಶ್ಯ ವೈವಿಧ್ಯ. ಆದರೆ ದೋಣಿ
ದಾಟುವ, ಅಗಾಧ ಆಳದ ಹಿನ್ನೀರ ನದಿಯ ಪಾತ್ರದಲ್ಲಿ ಚಲಿಸುವಾಗ ನೀರಿಕ್ಷಿಸುವ ಸುರಕ್ಷತೆಯ ಸವಾಲುಗಳು ವಕಾರನ್ನು ಈಗಲೂ ಜನ ಮಾನಸದಿಂದ ದೂರವೇ ಉಳಿಸಿವೆ.

ದೇವಕಾರನ್ನು ಯಪುರದ ಬಾರೆ ರಸ್ತೆಯ ಮೂಲಕವೂ ಚಲಿಸಿ ತಲುಪಬಹುದಾಗಿದ್ದರೂ ಖಂಡಿತವಾಗಿಯೂ ಸುರಕ್ಷಿತ ಕಾಡಿನ ಮಾಹಿತಿಯ ಸ್ನೇಹಿತರ ಸಂಪರ್ಕ ಇಲ್ಲದೆ ಸಾಧ್ಯವೇ ಇಲ್ಲ. ಕಾರಣ ಹಿನ್ನೀರನ್ನು ತಪ್ಪಿಸಿ, ಇತ್ತ ಕಾಡಿನ ದುರ್ಗಮ ಕಣಿವೆಯನ್ನು ಲಂಬಕೋನದಲ್ಲಿ ಇಳಿಯುತ್ತ, ಅ ವಾಸಸ್ಥಾನವಾಗಿ ಗುರುತಿಸಿಕೊಂಡಿರುವ ಹಾವು-ಹುಪ್ಪಟೆಗಳಿಂದ ರಕ್ಷಿಸಿಕೊಂಡು ದೇವಕಾರು
ತಲುಪುವದು ಸುಲಭವಲ್ಲ. ಆದರೆ ಆ ದಾರಿಯೂ ಲಭ್ಯವಿದ್ದು ಸಾಹಸ ಚಾರಣ ಇಷ್ಟ ಪಡುವವರು ಅಡಿಗಡಿಗೂ ರಿಸ್ಕ್ ತೆಗೆದುಕೊಳ್ಳುವವರು ಪ್ರಯತ್ನಿಸಬಹುದು. ಆದರೆ ಇದು ಅಡ್ಜೆಸ್ಟೆಬಲ್ ಅಲ್ಲ.

ಹಿಂದೊಮ್ಮೆ ಸ್ನೇಹಿತರೊಂದಿಗೆ ಹೀಗೆ ಚಲಿಸಿ, ಸರ್ಪದ ಬಾಯಿಗೆ ಸಿಕ್ಕು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯವಷ್ಟೆ ಅಲ್ಲ ಹಾವು ಕಡಿದ ಕೈಯ್ಯನ್ನು ಉಳಿಸಿಕೊಂಡಕ್ಕೆ ಜೀವಂತ ಉದಾಹರಣೆ ನಾನೇ. ಇವತ್ತೇನಾದರೂ ಒಂದು ಕೈ ಉಳಿದಿದೆ ಎಂದರೆ ಅದಕ್ಕೆ ಆಗಿನ ವೈದ್ಯರು ನೀಡಿದ ಸಹಾಯ ಮತ್ತು ಬೆಂಬಲ. ಅಲ್ಲದೆ ಬೇರೆ ಮಾರ್ಗಗಳೆಲ್ಲ, ಅಣಶಿ ಹುಲಿ ಅಭಯಾರಣ್ಯವಾಗಿ ಈಗೀಗ ಸಂಪೂರ್ಣ ರಕ್ಷಿತಾರಣ್ಯವಾಗಿ ಬದಲಾದ ಮೇಲೆ ಹೆಚ್ಚಿರುವ ಹುಲಿ ಮತ್ತು ಚಿರತೆಗಳ ಕಾರಣದಿಂದ ಸುರಕ್ಷಿತ ಎನ್ನುವ ಯಾವ ಅಂಶವೂ ಗೋಚರವಾಗುವುದಿಲ್ಲ. ಅಽಕೃತವಾಗಿ ಇದಕ್ಕೆಲ್ಲ ಅರಣ್ಯ ಇಲಾಖೆ ಅನುಮತಿ ಸಹಿತ ಕೊಡುವುದೂ ಇಲ್ಲ. ಹಾಗಾಗಿ ಈ ರಸ್ತೆಯ ಸಲಹೆ ಸುಲಭದ್ದಲ್ಲ. ನಾನೂ ಮತ್ತೊಮ್ಮೆ ಈ ದಾರಿಗಳನ್ನು ಪ್ರಯತ್ನಿಸಿಯೂ ಇಲ್ಲ.

ಇತ್ತ ಕದ್ರ ಮಾರ್ಗವಾಗಿ ಈ ಮೊದಲು ಸಾರ್ವಜನಿಕ ಸಾರಿಗೆ ಸಹಾಯವಾದರೂ ಇತ್ತು. ಈಗ ಅರಣ್ಯ ಇಲಾಖೆ ಆರಂಭದ ಅಲ್ಲಿ ಗೇಟು ಅಳವಡಿಸಿ ಸಂಪೂರ್ಣ ನಿಷೇಧ ಹೇರಿದ್ದು, ಅತ್ತಲಿನ ಇಪ್ಪತ್ತು ಕಿ.ಮೀ. ಮೊದಲೇ ನಮ್ಮ ರಸ್ತೆ ಪಯಣ ನಿಂತುಬಿಡುತ್ತದೆ. ಜತೆಗೆ ದೇವಕಾರಿಗೆ ಈ ಮೊದಲಿದ್ದ ಒಂದೆರಡು ಕುಟುಂಬಗಳ ಸಹಕಾರದ ಲಭ್ಯತೆಯೂ ಈಗ ಸಿಗುವುದಿಲ್ಲ. ಎಲ್ಲ ಬೇರೆ ಕಡೆಗೆ
ಶಿ-ಗಿದ್ದು ಅಲ್ಲಿದ್ದ ಕಾರ್ಯವಾಸಿ ಮಾತ್ರ ಸಂಚರಿಸುವುದರಿಂದ ದೇವಕಾರಿಗೆ ಮುಂಗಡ ಯೋಜನೆ ಮತ್ತು ವಾಹನ ಅನುಮತಿ ಗೈಡು, ಕರೆದೊಯ್ಯುವ ಸ್ಥಳೀಯರ ಬೆಂಬಲ ಇಲ್ಲದೆ ಧಡಾರನೆ ವಾಹನದಲ್ಲಿ ಬಂದಿಳಿದು ಒಂದು ರೌಂಡ್ ಟ್ರೆಕ್ ಮಾಡೇ ಬಿಡೊಣ ಎನ್ನುವವರಿಗೆ ಇದು ಅಲ್ಲವೇ ಅಲ್ಲ.

ನಾನು ನೋಡಿದ ನೂರಾರು ಜಲಪಾತಗಳ ಪೈಕಿ ಇವತ್ತಿಗೂ ದೇವಲೋಕದ ಜಲಪಾತದಂತೆ ಇರುವ ದೇವಕಾರಿಗೆ ನೆತ್ತಿಯ ಮೇಲ್ಗಡೆ ಹೋಗಿ ನಿಲ್ಲುವ ಮತ್ತೊಂದು ದಾರಿ ಕಾನೂರು ಕಡೆಯಿಂದ ಇದ್ದೇ ಇದೆ. ಆದರೆ ಬೀಳುವ ನೀರ ದಭದಭೆಯ ನೆತ್ತಿಗೆ ನಿಂತು ನೋಡುವ ಜಲಪಾತದ ನೋಟವೂ ಒಂದು ದೃಶ್ಯ ವೈಭವವಾ..? ಅದಕಿಂತಲೂ ಆ ಚಿಮ್ಮುವ ಒಂದಷ್ಟು ನೀರ ನೋಟದ
ಬದಲಿಗೆ ಅಲ್ಲಿಗೆಲ್ಲ ಹೋಗದಿರುವುದೇ ಕ್ಷೇಮ. ಹೊರತಾಗಿ ನೇರ ದೃಶ್ಯ ಮತ್ತು ಸ್ಥಳ ಭೇಟಿಗೆ ಸೂಕ್ತ ತಯಾರಿಗೂ ಸಮಯ ವ್ಯಯಿಸಿದರೂ ಜೀವಮಾನದಲ್ಲಿ ಭೇಟಿ ಕೊಡಲೇ ಬೇಕಾದ ದೇವ ಜಲಪಾತ ಇದು.

ಕಳೆದ ಎರಡ್ಮೂರು ವರ್ಷಗಳ ಮಳೆಗಾಲದ ವಿಪರೀತ ಭೂ ಕುಸಿತ, ಬೆಟ್ಟಗಳ ಪಾರ್ಶ್ವಗಳು ಜರಿದು ಹೋದ, ಅಂಚುಗಳು ಕುಸಿದ
ವಿದ್ಯಮಾನದ ನಡುವೆಯೂ ಎರಡೂ ಪಾರ್ಶ್ವಗಳೂ ಸೇರಿದಂತೆ ಯಾವ ಕಡೆಯಿಂದಲೂ ಮತ್ತು ನೀರು ಹರಿದು ಬರುವ ಎರ್ಡ್ಮೂರು ಕಿ.ಮೀ. ದೂರದ ಇಕ್ಕೆಲಗಳೂ ಸುರಕ್ಷಿತವಾಗೇ ಉಳಿದಿದ್ದು ಹೊಸ ಭೇಟಿ ಸಮಯದಲ್ಲಿ ನೆಮ್ಮದಿ ತಂದಿದ್ದೂ ಹೌದು.
ಸಹಜ ಸೌಂದರ್ಯದ ದೇವಕಾರು.. ಈಗಲೂ ನನ್ನ ಹಾಟ್ ಫೇವರಿಟ್ ಸ್ಥಳಗಳಲ್ಲಿ ಒಂದು. ಆದ್ದರಿಂದಲೇ ನಿಮ್ಮದೂ ಒಂದು ನೆನಪಿನ ತಾಣವಾಗಿ ಉಳಿಯಲಿ ದೇವಕಾರು ಒಮ್ಮೆ ಪ್ರಯತ್ನಿಸಿ ನೋಡಿ. ಆದರೆ ಅಗತ್ಯದ ಮತ್ತು ಮುಂಚಿತ ತಯಾರಿ ಹಾಗು ಅನುಮತಿ, ಪ್ರಾಥಮಿಕ ಮೂಲ ಭೂತ ಸೌಲಭ್ಯ ಇವಲ್ಲವನ್ನೂ ನೀವೇ ಹೊರಲು ಸಿದ್ಧರಿದ್ದರೆ ಮಾತ್ರ. ಅದನ್ನೂ ಮಾಡದಿದ್ದರೆ ಅಲೆಮಾರಿಗಳ್ಯಾಕೆ ಆಗಬೇಕು ಅಲ್ಲವೇ..?