ಮೂರ್ತಿಪೂಜೆ
ದೇವರಾಜ ಅರಸರು ೪೫ ವರ್ಷಗಳ ಹಿಂದೆ ಎದುರಿಸಿದ ಸೈನ್ಯಕ್ಕೆ ಈಗ ಸಿಎಂ ಸಿದ್ದರಾಮಯ್ಯ ಮುಖಾಮುಖಿಯಾಗುವ ಲಕ್ಷಣಗಳು ಕಾಣುತ್ತಿವೆ. ಹಿರಿಯ ನಾಯಕ ಜಗದೀಶ್ ಶೆಟ್ಟರ್ ಕೈ ಪಾಳಯ ತೊರೆದು ಬಿಜೆಪಿ ಸೇರಿದ ಬೆಳವಣಿಗೆ ಇದಕ್ಕೆ ಸಾಕ್ಷಿ. ಅಂದ ಹಾಗೆ ೧೯೭೨ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ದೇವರಾಜ ಅರಸರು ೧೯೭೮ರ ವಿಧಾನಸಭೆ ಚುನಾವಣೆ ಎದುರಾಗುವ ಕಾಲಕ್ಕೆ ಒಕ್ಕಲಿಗ- ಲಿಂಗಾಯತ ಸೈನ್ಯಕ್ಕೆ ಪರ್ಯಾಯವಾಗಿ ಶೋಷಿತ ಸಮುದಾಯ ಗಳ ಸೈನ್ಯ ಕಟ್ಟಿದ್ದರು.
೧೯೬೯ರಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾದ ನಂತರ ರಾಜ್ಯದ ನೆಲೆಯಲ್ಲಿ ಪ್ರಬಲ ಲಿಂಗಾಯತ ಸಮುದಾಯ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್‌ನಿಂದ ದೂರವಾಗಿತ್ತು. ಇಂಥ ಸಂದರ್ಭದಲ್ಲಿ ಇಂದಿರಾ ಕಾಂಗ್ರೆಸ್‌ನ ನೇತೃತ್ವದ ವಹಿಸಿದ ಅರಸರು ೧೯೭೨ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ದಡ ಸೇರಿಸಿ
ದ್ದಲ್ಲದೆ ಮುಖ್ಯಮಂತ್ರಿ ಗಾದಿಯ ಮೇಲೆ ವಿರಾಜಮಾನರಾಗಿದ್ದರು.
ಹೀಗೆ ಅಧಿಕಾರಕ್ಕೆ ಬಂದವರು ‘ಉಳುವವನೇ ಹೊಲ ದೊಡೆಯ’ ಎಂಬ ಕ್ರಾಂತಿಕಾರಿ ಕಾರ್ಯಕ್ರಮದ ಮೂಲಕ ಪ್ರಬಲ ವರ್ಗಗಳ ಕೈಲಿದ್ದ ಗಣನೀಯ ಪ್ರಮಾಣದ ಭೂಮಿಯು ಶೋಷಿತ ವರ್ಗಗಳ ಕೈಗೆ ದಕ್ಕುವಂತೆ ಮಾಡಿದ್ದರು. ಅವರ ಈ ಹೆಜ್ಜೆ ಸಹಜವಾಗಿಯೇ ಪ್ರಬಲ ಒಕ್ಕಲಿಗ, ಲಿಂಗಾಯತ ಸಮುದಾಯಗಳ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ ಇಲ್ಲಿ ಜನತಾಪಕ್ಷ ದೊಡ್ಡ ಮಟ್ಟದಲ್ಲಿ ಮೇಲೆದ್ದು ನಿಲ್ಲಲು ಮೂಲವಾಯಿತು. ಹೀಗಾಗಿ ೧೯೭೮ರ ವಿಧಾನಸಭಾ ಚುನಾವಣೆ ಎದುರಾದಾಗ ದೇವರಾಜ ಅರಸರು ಶೋಷಿತ ಸಮುದಾಯಗಳ ಸೈನ್ಯದ ಮುಂದೆ ನಿಂತಿದ್ದರೆ, ಜನತಾಪಕ್ಷದ ಬೆನ್ನಿಗೆ ಒಕ್ಕಲಿಗ, ಲಿಂಗಾಯತ ಸೈನ್ಯ ನಿಂತಿತ್ತು.
ಆದರೆ ಚುನಾವಣಾ ಫಲಿತಾಂಶ ಬಂದಾಗ, ಅರಸು ನೇತೃತ್ವದ ಕಾಂಗ್ರೆಸ್ ೧೪೯ ಸ್ಥಾನಗಳನ್ನು ಪಡೆದರೆ, ಜನತಾಪಕ್ಷ ೫೯ ಕ್ಷೇತ್ರಗಳಲ್ಲಿ ಗೆದ್ದು ಪ್ರಬಲ ಪ್ರತಿಪಕ್ಷವಾಗಿ ಹೊರ ಹೊಮ್ಮಿತ್ತು.
ಮುಂದೆ ಒಕ್ಕಲಿಗ-ಲಿಂಗಾಯತ ಸಮುದಾಯ ಗಳನ್ನು ಮೂಲಶಕ್ತಿಯಾಗಿಸಿಕೊಂಡ ಜನತಾ ಪರಿವಾರ ೧೯೮೩, ೧೯೯೪ರಲ್ಲಿ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಿತು. ಆದರೆ ೧೯೯೯ರಲ್ಲಿ ಜನತಾದಳದ ವಿಭಜನೆಯೊಂದಿಗೆ ಒಕ್ಕಲಿಗ, ಲಿಂಗಾಯತ ಶಕ್ತಿಗಳು ಪರಸ್ಪರ ದೂರ ನಿಲ್ಲುವ ಸ್ಥಿತಿ ನಿರ್ಮಾಣವಾಯಿತು. ಈ ಪೈಕಿ ಒಕ್ಕಲಿಗ ಸಮುದಾಯ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳದ ಜತೆ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರೆ, ಲಿಂಗಾಯತರು ಯಡಿಯೂರಪ್ಪ ನೇತೃತ್ವದ ಬಿಜೆಪಿಯ ಜತೆ ಗುರುತಿಸಿ ಕೊಂಡರು. ಆದರೆ ೨೦೨೩ರಲ್ಲಿ ಕಾಂಗ್ರೆಸ್ ಗೆದ್ದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ, ಪದೇ ಪದೆ ಅವರ ಮೇಲೆ ಮುಗಿಬೀಳತೊಡಗಿದ ಜೆಡಿಎಸ್ ನಾಯಕ ಎಚ್ .ಡಿ.ಕುಮಾರಸ್ವಾಮಿ ಅವರಿಗೆ ಒಂದು ವಿಷಯ ಸ್ಪಷ್ಟವಾಗಿ ಮನವರಿಕೆಯಾಯಿತು.
ಅದೆಂದರೆ, ೧೩೬ ಶಾಸಕರ ಬಲವಿರುವ ಕಾಂಗ್ರೆಸ್ಸನ್ನು ಏಕಾಂಗಿಯಾಗಿ ಎದುರಿಸುವುದು ಕಷ್ಟ. ಹೀಗಾಗಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿಯ
ಜತೆ ಕೈಜೋಡಿಸುವುದು ಅನಿವಾರ್ಯ ಎಂಬುದು. ಈ ಮನಸ್ಥಿತಿಗೆ ಅವರು ತಲುಪುವ ವೇಳೆಗೆ ಕೇಂದ್ರದ ಬಿಜೆಪಿ ನಾಯಕರೂ, ಜೆಡಿಎಸ್ ಜತೆ ಕೈ ಜೋಡಿಸದೆ
ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಲುಗಾಡಿಸುವುದು ಕಷ್ಟ ಎಂಬ ಲೆಕ್ಕಾಚಾರಕ್ಕೆ ಬಂದಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆದಿದ್ದು ನಿಜವಾದರೂ, ಶೇಕಡಾ ವಾರು ಮತಗಳನ್ನು ಪರಿಗಣಿಸಿದರೆ ಬಿಜೆಪಿ ಮತ್ತು ಜೆಡಿಎಸ್ ಪಡೆದ ಒಟ್ಟಾರೆ ಮತಗಳ ಸಂಖ್ಯೆ ಕಾಂಗ್ರೆಸ್‌ನದಕ್ಕಿಂತ ಹೆಚ್ಚಿತ್ತು. ಇದೇ ರೀತಿ ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಬೇಕೆಂದರೆ ಕರ್ನಾಟಕದಿಂದಲೂ ಗಣನೀಯ ಸೀಟುಗಳನ್ನು ಗೆಲ್ಲುವ ಅನಿವಾರ್ಯತೆ ಬಿಜೆಪಿಗೆ ಇದೆಯಲ್ಲ? ಹೀಗಾಗಿ ಜೆಡಿಎಸ್ ಜತೆಗಿನ ಮೈತ್ರಿ ಮಾತುಕತೆ ಯನ್ನು ನರೇಂದ್ರ ಮೋದಿ- ಅಮಿತ್ ಶಾ ಜೋಡಿ ಆಸಕ್ತಿಯಿಂದಲೇ ಪೂರ್ಣಗೊಳಿಸಿತು.
ಇಷ್ಟಾದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್‌ನ ವಿರುದ್ಧ ಬಲಿಷ್ಠ ವಾಗಿ ತಲೆಯೆತ್ತಲು ಹವಣಿಸುತ್ತಿರುವ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟ, ತನ್ನ ಮೂಲಶಕ್ತಿ ಯನ್ನು ಒಗ್ಗೂಡಿಸಿ ಕೊಳ್ಳಲು ಎಲ್ಲ ಪ್ರಯತ್ನ ಆರಂಭಿಸಿದೆ. ಕಳೆದ ಚುನಾವಣೆಯ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ವಲಸೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿಗೆ ಬಂದಿರುವುದು ಈ ಪ್ರಯತ್ನಕ್ಕೆ ಸಾಕ್ಷಿ.
ಶೆಟ್ಟರ್ ಮರಳಿದ್ದು ಏಕೆ?
ಅಂದ ಹಾಗೆ, ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋದ ಶೆಟ್ಟರ್, ‘ಯಾವ ಕಾರಣಕ್ಕೂ ಬಿಜೆಪಿಗೆ ಮರಳುವುದಿಲ್ಲ’ ಎಂದಿದ್ದರು. ಅಂಥವರು ಈಗ ಆಫರ್ ಬಂದ ಕೂಡಲೇ ಬಿಜೆಪಿಗೆ ಸೇರಿದ್ದಕ್ಕೆ ಅಲ್ಲಿ ಸಂತೋಷ್ ಬಣ ದುರ್ಬಲವಾಗಿರುವುದೇ ಕಾರಣ. ಕಳೆದ ಚುನಾವಣೆಯಲ್ಲಿ ತಮಗೆ ಟಿಕೆಟ್ ತಪ್ಪಲು ಸಂತೋಷ್ ಕಾರಣ ಎಂಬ ಸಿಟ್ಟಿನಲ್ಲಿದ್ದ ಶೆಟ್ಟರ್ ಇದೇ ಕಾರಣಕ್ಕಾಗಿ ಕಾಂಗ್ರೆಸ್‌ನ ಶಕ್ತಿಯನ್ನು ಹೆಚ್ಚಿಸಲು ಯತ್ನಿಸಿದ್ದರು. ಆದರೆ ಕಾಂಗ್ರೆಸ್ ನಾಯಕರು ಅವರನ್ನು ಸಮರ್ಥವಾಗಿ ಬಳಸಿ
ಕೊಳ್ಳಲು ತಯಾರಿರಲಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ಯಾರು ಸ್ಪರ್ಧಿಸ ಬೇಕು? ಮುಂಬಯಿ-ಕರ್ನಾಟಕ ಭಾಗದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಏನು ಮಾಡಬೇಕು? ಎಂಬ ಬಗ್ಗೆ ಸಲಹೆ ನೀಡಲು ಶೆಟ್ಟರ್ ಕಾತರರಾಗಿದ್ದರೂ ರಾಜ್ಯದ ಕಾಂಗ್ರೆಸ್ ನಾಯಕರು ಉತ್ಸುಕತೆ ತೋರ ಲಿಲ್ಲ.
ವಸ್ತುಸ್ಥಿತಿ ಎಂದರೆ ಕಾಂಗ್ರೆಸ್‌ಗೆ ಹೋದ ಶೆಟ್ಟರ್ ಅವರಿಗೆ, ‘ಪಕ್ಷ ಅಽಕಾರಕ್ಕೆ ಬಂದರೆ ನಿಮ್ಮನ್ನು ಮಂತ್ರಿ ಮಾಡಲಾಗುವುದು’ ಎಂಬ ಭರವಸೆ ನೀಡಲಾಗಿತ್ತು. ಆದರೆ ಮಂತ್ರಿ ಮಾಡುವುದಿರಲಿ, ಪಕ್ಷದ ಶಕ್ತಿ ಹೆಚ್ಚಿಸಲು ಏನು ಮಾಡಬೇಕು ಅಂತ ಸಲಹೆ ನೀಡಲು ಶೆಟ್ಟರ್ ತಯಾರಿದ್ದರೂ ಅದನ್ನು ಕೇಳುವ ವ್ಯವಧಾನ ರಾಜ್ಯದ ನಾಯಕರಿಗಿರಲಿಲ್ಲ. ಹೀಗೆ ಕಾಂಗ್ರೆಸ್ ಸೇರಿ ವಿಧಾನಪರಿಷತ್ ಸದಸ್ಯರಾದರೂ ಏಕಾಂಗಿ ಭಾವನೆ ಶೆಟ್ಟರ್‌ರನ್ನು ಕಾಡುತ್ತಲೇ ಇತ್ತು. ಯಾವಾಗ
ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ, ಪಕ್ಷದಲ್ಲಿ ಸಂತೋಷ್ ಅವರ ಪ್ರಾಮಿನೆನ್ಸು ಕಡಿಮೆಯಾಯಿತೋ, ಆಗ ಶೆಟ್ಟರ್ ಅವರಿಗೆ ಬಿಜೆಪಿಯಲ್ಲಿ ಭರವಸೆಯ ವಾತಾವರಣ ಕಾಣಿಸತೊಡಗಿತು.
ಇದೇ ವೇಳೆಗೆ ಸರಿಯಾಗಿ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಬೇಕು ಎಂದರೆ ಶೆಟ್ಟರ್ ಅವರನ್ನು ವಾಪಸ್ ಕರೆ ತರಬೇಕು ಎಂಬ ಸಂದೇಶ ಅಮಿತ್ ಶಾ ಅವರನ್ನು ತಲುಪತೊಡಗಿತು. ಜನವರಿ ೧೭ರಂದು ದಿಲ್ಲಿಗೆ ಹೋಗಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರೂ, ಶೆಟ್ಟರ್‌ರನ್ನು ಬಿಜೆಪಿಗೆ ಕರೆ ತಂದರೆ ಪ್ಲಸ್ ಆಗುತ್ತದೆ ಎಂದು ಹೇಳಿ ಬಂದಿದ್ದರು. ಯಾವಾಗ ಕರ್ನಾಟಕದ ಬಿಜೆಪಿ
ನಾಯಕರು ಮಾತ್ರವಲ್ಲದೆ, ಜೆಡಿಎಸ್ ನಾಯಕ ಕುಮಾರ ಸ್ವಾಮಿ ಅವರೂ ಇದನ್ನು ಹೇಳಿದರೋ, ಆಗ ತರಾತುರಿ ತೋರಿಸಿದ ಅಮಿತ್ ಶಾ ಅವರು, ಜನವರಿ ೨೨ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯ ಮುಗಿದ ತಕ್ಷಣ ಶೆಟ್ಟರ್‌ರನ್ನು ದಿಲ್ಲಿಗೆ ಕರೆದುಕೊಂಡು ಬರುವಂತೆ ರಾಜ್ಯದ ನಾಯಕರಿಗೆ ಸೂಚಿಸಿದರು.
ಅಂತೆಯೇ ಕಳೆದ ವಾರ ದಿಲ್ಲಿಗೆ ಹೋದ ಶೆಟ್ಟರ್ ಅವರಿಗೆ, ‘ನೀವು ಮುಖ್ಯಮಂತ್ರಿಯಾಗಿದ್ದವರು. ನಿಮ್ಮಂಥ ನಾಯಕರು ರಾಜ್ಯ ರಾಜಕಾರಣದಲ್ಲಿರುವುದಕ್ಕಿಂತ ದಿಲ್ಲಿಗೆ ಬಂದು ಮೋದೀಜಿ ಸಂಪುಟದಲ್ಲಿರಬೇಕು’ ಅಂತ ಅಮಿತ್ ಶಾ ಹೇಳಿದರಂತೆ. ಇದಾದ ನಂತರ ಶೆಟ್ಟರ್ ವಿಧ್ಯುಕ್ತವಾಗಿ ಬಿಜೆಪಿಗೆ ಮರಳಿದ್ದಾರೆ. ಆ ಮೂಲಕ ಕಮಲ ಪಾಳಯದಲ್ಲಿ ಲಿಂಗಾಯತ ಶಕ್ತಿ ಹಿಗ್ಗುವ ಎಲ್ಲ ಲಕ್ಷಣಗಳು ಕಾಣಿಸಿಕೊಂಡಿವೆ.
ಖರ್ಗೆ ಬೇಸರ ಮಾಡಿಕೊಂಡಿದ್ದಾರೆ
ಇನ್ನು, ಶೆಟ್ಟರ್ ಎಪಿಸೋಡಿನಿಂದ ಕಾಂಗ್ರೆಸ್‌ಗೆ ನಷ್ಟವಿಲ್ಲ ಅಂತ ರಾಜ್ಯದ ಕಾಂಗ್ರೆಸಿಗರೇನೋ ಹೇಳುತ್ತಿದ್ದಾರೆ. ಆದರೆ ಶೆಟ್ಟರ್‌ರಿಂದಾಗಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭವಾಗಿದ್ದು ಸುಳ್ಳಲ್ಲ. ಹಾಗೊಂದು ವೇಳೆ ಲಾಭವಾಗಿರಲಿಲ್ಲ ಎಂದಿದ್ದರೆ ಅವರನ್ನು ವಿಧಾನಪರಿಷತ್ತಿಗೆ ಕಳಿಸುವ ಕೆಲಸ ಕಾಂಗೆಸ್‌ನಿಂದ ಆಗುತ್ತಲೇ ಇರಲಿಲ್ಲ. ವಸ್ತುಸ್ಥಿತಿಯೆಂದರೆ, ಶೆಟ್ಟರ್ ಅವರು ಕಾಂಗ್ರೆಸ್ಸನ್ನು ತೊರೆದ ಬೆಳವಣಿಗೆಯಿಂದ ತುಂಬ ಬೇಸರಗೊಂಡಿರುವವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, ಕೊಟ್ಟ ಮಾತಿನಂತೆ ಶೆಟ್ಟರ್‌ರನ್ನು ಮಂತ್ರಿ ಮಾಡಲಾಗಲಿಲ್ಲವಲ್ಲ? ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಕೈ ಪಾಳಯ ತೊರೆಯಬಹುದು ಎಂಬ ಅನುಮಾನ ಖರ್ಗೆ ಅವರಲ್ಲಿತ್ತು.
ಹೀಗಾಗಿ ಮಂತ್ರಿ ಮಾಡಲಾಗದಿದ್ದರೂ ಮುಂಬರುವ ಲೋಕಸಭಾ ಚುನಾವಣೆಯ ವೇಳೆ ಅವರನ್ನೇ ಕರ್ನಾಟಕ ದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಬೇಕು ಅಂತ ಖರ್ಗೆ ಬಯಸಿದ್ದರು. ಅಷ್ಟೇ ಅಲ್ಲ, ಶೆಟ್ಟರ್‌ರಿಗೂ ಈ ಬಗ್ಗೆ ವಿವರಿಸಿದ್ದರು. ಹೀಗೊಂದು ಸ್ಥಾನ ನೀಡಿದರೆ ಅವರು ಕಾಂಗ್ರೆಸ್ ತೊರೆಯಲು ಮನಸ್ಸು ಮಾಡಲಾರರು ಎಂಬುದು ಖರ್ಗೆಯವರ ಲೆಕ್ಕಾಚಾರವಾಗಿತ್ತು. ಆದರೆ ಅದು ಈಡೇರುವ ಮುನ್ನವೇ ಶೆಟ್ಟರ್ ಪಕ್ಷ ಬಿಟ್ಟಿದ್ದು ಖರ್ಗೆಯವ ರಿಗೆ ಬೇಸರ ತಂದಿದೆ. ಹಾಗಂತಲೇ ರಾಜ್ಯದ ನಾಯಕರ ಬಳಿ ಅವರು ಮಾತನಾಡಿ, ‘ಶೆಟ್ಟರ್‌ರನ್ನು ಹ್ಯಾಂಡಲ್ ಮಾಡುವ ವಿಷಯದಲ್ಲಿ ತಪ್ಪಾಗಿದೆ’ ಅಂದಿದ್ದಾರೆ ಎನ್ನುವುದು ಲೇಟೆಸ್ಟು ಸುದ್ದಿ.
ಕುಮಾರಸ್ವಾಮಿ ಪವರು ಹೆಚ್ಚಾಗಿದೆ
ಈ ಮಧ್ಯೆ ಎಚ್.ಡಿ.ಕುಮಾರಸ್ವಾಮಿ ಅವರ ವಿಷಯದಲ್ಲಿ ಪ್ರಧಾನಿ ಮೋದಿ-ಅಮಿತ್ ಶಾ ಫುಲ್ಲು ಖುಷಿಯಾಗಿದ್ದಾರೆ. ಕಾರಣ? ಕರ್ನಾಟಕದಲ್ಲಿ ಬಿಜೆಪಿಯ ಶಕ್ತಿ ಮರಳಿ ಹಿಗ್ಗುತ್ತಿರುವುದಕ್ಕೆ ಕುಮಾರಸ್ವಾಮಿ ನೀಡುತ್ತಿರುವ ಕೊಡುಗೆ. ಮೊದಲನೆಯದಾಗಿ, ಯಡಿಯೂರಪ್ಪ ಮತ್ತು ವಿಜಯೇಂದ್ರರ ವಿಷಯದಲ್ಲಿ ಕುದಿಯುತ್ತಿದ್ದ ಮಾಜಿ ಸಚಿವ ವಿ.ಸೋಮಣ್ಣ ಎಪಿಸೋಡು ತಣ್ಣಗಾಗುವುದರ ಹಿಂದೆ ಕುಮಾರಸ್ವಾಮಿ ಅವರ ಪಾತ್ರವಿದೆ.
ಸೋಮಣ್ಣ ಅವರು ದಿಲ್ಲಿಗೆ ಹೋಗಿ ಅಮಿತ್ ಶಾ ಅವರನ್ನು ಭೇಟಿ ಮಾಡುವ ಮುನ್ನ ದೇವೇಗೌಡರ ಮನೆಗೆ ಹೋಗಿದ್ದರಲ್ಲ? ಆಗ, ‘ಹಳೆಯದನ್ನೆಲ್ಲ ಮರೆತುಬಿಡಿ. ವಾಸ್ತವವಾಗಿ ತುಮಕೂರು ಲೋಕಸಭಾ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಿ ಅಂತ ಬಿಜೆಪಿಯ ಕೇಂದ್ರ ನಾಯಕರಿಗೆ ಹೇಳಿದ್ದೇವೆ. ಆದರೆ ನೀವು ತುಮಕೂರಿನಿಂದ ಸ್ಪಽಸಲು ರೆಡಿ ಇದ್ದರೆ ಆ ಕ್ಷೇತ್ರವನ್ನು ಬಿಟ್ಟುಕೊಡಲು ನಾವು ರೆಡಿ. ಒಂದೊಮ್ಮೆ ನೀವು ಜೆಡಿಎಸ್‌ಗೆ ಬಂದರೆ ನಮ್ಮ ಪಕ್ಷದ ವತಿಯಿಂದಲೇ ಮೈತ್ರಿಕೂಟದ
ಕ್ಯಾಂಡಿಡೇಟ್ ಆಗಿ’ ಅಂತ ಕುಮಾರಸ್ವಾಮಿ ಮತ್ತು ದೇವೇಗೌಡರು ಹೇಳಿದ್ದಾರೆ. ಈ ಮಾತು ಸೋಮಣ್ಣರನ್ನು ಸಮಾಧಾನಿಸಿದೆಯಷ್ಟೇ ಅಲ್ಲ, ದಿಲ್ಲಿಗೆ ಹೋಗಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದ ನಂತರ ಕೂಲ್ ಆಗುವಂತೆ ಮಾಡಿದೆ.
ಇದೇ ರೀತಿ, ಕಳೆದ ಚುನಾವಣೆಯಲ್ಲಿ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಿಜೆಪಿ ಕ್ಯಾಂಡಿಡೇಟುಗಳ ಸೋಲಿಗೆ ಪ್ರಮುಖ ಕಾರಣರಾಗಿದ್ದ ಜನಾರ್ದನರೆಡ್ಡಿ ಅವರ ಜತೆ ಬಿಡದಿಯ ತಮ್ಮ ತೋಟದ ಮನೆಯಲ್ಲಿ ಚರ್ಚಿಸಿದ ಕುಮಾರಸ್ವಾಮಿ, ‘ನಿಮ್ಮ ಜತೆ ನಾವಿದ್ದೇವೆ. ನಿಮಗಾಗುತ್ತಿರುವ ತೊಂದರೆಗಳ ಬಗ್ಗೆ ಅಮಿತ್ ಶಾ ಅವರಿಗೂ ಹೇಳುತ್ತೇವೆ. ಹೀಗಾಗಿ ನೀವು ಬಿಜೆಪಿಗೆ ವಾಪಸಾಗಿಬಿಡಿ’ ಎಂದಿದ್ದರು. ಈ ಮಾತಿಗೆ ಜನಾರ್ದನರೆಡ್ಡಿ ಎಷ್ಟು ಖುಷಿಯಾಗಿದ್ದರು ಎಂದರೆ, ‘ಸರ್, ನನ್ನಿಂದ ಉಪಕಾರ ಪಡೆದವರೆಲ್ಲ ನನಗೆ ಕೈ ಕೊಟ್ಟರು. ಆದರೆ ನನ್ನಿಂದ ನಿಮಗಾದ ಉಪಕಾರ ಅಷ್ಟರಲ್ಲೇ ಇದೆ. ಆದರೆ ಯಾವುದನ್ನೂ ಮನಸ್ಸಿನಲ್ಲಿಟ್ಟು ಕೊಳ್ಳದೆ ನೀವು ಪ್ರೀತಿ ತೋರಿಸುತ್ತಿದ್ದೀರಿ. ಹೀಗಾಗಿ ನಾನು ಬಿಜೆಪಿಗೆ ವಾಪಸಾಗಲು ಸಿದ್ಧ’ ಎಂದಿದ್ದಾರೆ. ಅಲ್ಲಿಗೆ ಜನಾರ್ದನರೆಡ್ಡಿ ಎಪಿಸೋಡು ಒಂದು ಹಂತಕ್ಕೆ ಬಂದಿದೆ.
ಮೊನ್ನೆ ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳುವುದರ ಹಿಂದೆಯೂ ಕುಮಾರಸ್ವಾಮಿ ಅವರ ಪ್ರಯತ್ನ ಇದೆ. ಹೀಗೆ ರಾಜ್ಯ ಬಿಜೆಪಿಗೆ ತೊಡಕಾಗಿದ್ದ ಒಂದೊಂದೇ ಸಮಸ್ಯೆಗಳನ್ನು ಪರಿಹರಿಸಲು ಅವರು ನೀಡುತ್ತಿರುವ ಕೊಡುಗೆ ಸಹಜವಾಗಿಯೇ ಮೋದಿ-ಶಾ ಜೋಡಿಗೆ ಖುಷಿ ತಂದಿದೆ.