ತನ್ನಿಮಿತ್ತ
ನಂ.ಶ್ರೀಕಂಠ ಕುಮಾರ್
ಸನಾತನ ಧರ್ಮದ ಆಚರಣೆಯಲ್ಲಿ ಭಗವಂತ ಹಾಗೂ ಭಕ್ತನೊಡನೆ ಅವಿನಾಭಾವ ಸಂಬಂಧವನ್ನು ಹಲವಾರು ನಿದರ್ಶನ ಗಳಲ್ಲಿ ಕಾಣಬಹುದು.
ಭಗವಂತನು ತನ್ನ ಭಕ್ತರನ್ನು ಪರೀಕ್ಷಿಸಿ ಅದರಲ್ಲಿ ಭಕ್ತನ ಭಕ್ತಿಯ ಪರಾಕಾಷ್ಠೆಯಿಂದ ಭಗವಂತನು ಪುನೀತಗೊಂಡು ದರ್ಶನ ಭಾಗ್ಯ ಕೊಟ್ಟು ಮೋಕ್ಷ ನೀಡಿದ ಪ್ರಸಂಗಗಳು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಇದರಲ್ಲಿ ಭಕ್ತನ ಧರ್ಮಾನುಚಾರಣೆಯೇ ಪ್ರಮುಖ.
ದೇವತೆಗಳಿಗೆ ಮನುಷ್ಯರ ಉತ್ತರಾಯಣ ಹಗಲು ಮತ್ತು ದಕ್ಷಿಣಾಯಣ ರಾತ್ರಿ ಎನಿಸುತ್ತದೆ. ಈ ರಾತ್ರಿ ಆರಂಭವು ಆಷಾಡ ಶುಕ್ಲ ಏಕಾದಶಿಯಂದು ಆಗುತ್ತದೆ. ಅಂದು ಶ್ರೀಮಹಾವಿಷ್ಣುವು ಯೋಗ ನಿದ್ರೆಯಲ್ಲಿ ವಿರಮಿಸುತ್ತಾನೆ. ಮಾರ್ಗಶಿರ ಶುಕ್ಲ ಏಕಾದಶಿ ದೇವತೆಗಳಿಗೆ ರಾತ್ರಿಯ ಕೊನೆಯ ಭಾಗವಾದ ಅರುಣೋದಯ ಕಾಲ ಆರಂಭ ವಾಗುವುದು. ಶ್ರೀವ್ಯಾಸ ಮಹರ್ಷಿ ಪ್ರಣೀತ ಶ್ರೀಮದ್ ಭಾಗವತದ ದಶಮ ಸ್ಕಂದದ 22ನೇ ಅಧ್ಯಾಯದಲ್ಲಿ ಧನುರ್ಮಾಸದ ಆಚರಣೆಯ ಬಗ್ಗೆ ಉಲ್ಲೇಖವಿದೆ.
ಹೇಮಂತ ಋತುವಿನ ಮೊದಲ ತಿಂಗಳಾದ ಮಾರ್ಗಶಿರ ಮಾಸದಿಂದ ಸೌರಮಾನ ರೀತ್ಯಾ ಧನುರ್ಮಾಸವು ಪ್ರಾರಂಭವಾಗುವುದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಉಪದೇಶದಂತೆ ಮಾಸಾನಾಂ ಮಾರ್ಗ ಶೀರ್ಶೋಹಂ ಎಂಬಂತೆ ಸಾಕ್ಷಾತ್ ಭಗವಂತನೇ ಈ ಮಾರ್ಗ ಶಿರಮಾಸ ವಾಸವಾಗಿದ್ದಾನೆ. ಹಾಗಾಗಿ ಈ ತಿಂಗಳಿಗೆ ಮತ್ತಷ್ಟು ಮಹತ್ವ ಬಂದಿದೆ. ಪುರಾತನ ಹಗೇಶ್ವರ ಸಂತೆಯಲ್ಲಿ ನಾತಿಶೀತಾ ನಘರ್ಮದಾ ಎಂಬ ನುಡಿಯಂತೆ ಮಾರ್ಗಶಿರ ಮಾಸದಲ್ಲಿ ಪ್ರಕೃತಿಯ ವಾತಾವರಣವು ಶೀತ ಮತ್ತು ಉಷ್ಣಾಂಶದ
ಸಮತೋಲನವಾಗಿರುತ್ತದೆ.
ಸನಾತನ ಧರ್ಮದಲ್ಲಿ ಪ್ರತಿಯೊಂದು ತಿಂಗಳೂ ಕೂಡ ಅತ್ಯಂತ ಮಹತ್ವವನ್ನು ಪಡೆದಿದೆ. ಆಯಾ ತಿಂಗಳುಗಳಿಗೆ ಅನುಸಾರ ವಾಗಿ ಆಚರಣೆಗಳು, ಸಂಪ್ರದಾಯಗಳು, ದೇವರ ಪೂಜಾ ವಿಧಾನಗಳ ಮೂಲಕ ಜೀವನವನ್ನು ಹೇಗೆ ನಡೆಸಬೇಕೆಂಬುದರ ಜೀವನ
ಸಾರವನ್ನು ತಿಳಿಸಿಕೊಡುತ್ತದೆ. ಮಾಸಗಳು ಬದಲಾದಂತೆ ಪ್ರಕೃತಿಯ ವಾತಾವರಣವೂ ಸಹ ಬದಲಾಗುತ್ತದೆ. ಇದಕ್ಕೆ ಅನುಗುಣ ವಾಗಿ ಮನುಷ್ಯನ ದೇಹವೂ ಕೂಡ ಒಗ್ಗಿಕೊಳ್ಳಬೇಕೆನ್ನುವ ವೈಜ್ಞಾನಿಕ ಹಿನ್ನೆಲೆಯು ಈ ಮಾಸಗಳ ಆಚರಣೆಯ ಹಿಂದಿದೆ. ಮಾರ್ಗಶಿರ ಪ್ರಾರಂಭದಿಂದ ಸೂರ್ಯನು ಧನುರ್ ರಾಶಿಯನ್ನು ಪ್ರವೇಶಿಸಲಿದ್ದು, ನಂತರ ಮಕರ ರಾಶಿಯನ್ನು ಪ್ರವೇಶಿಸಲು ಒಂದು ತಿಂಗಳ ಕಾಲಾವಕಾಶವನ್ನು ಪಡೆಯತ್ತಾನೆ.
ಈ ಮಾಸವನ್ನು ಭೋಗಶೂನ್ಯ ಮಾಸವೆಂದು ಭಾವಿಸಿ, ಯಾವುದೇ ಶುಭಕಾರ್ಯವನ್ನು ನೆರವೇರಿಸುವುದಿಲ್ಲ. ಮಹಾಭಾರತ ಕಾಲದ ರೀತ್ಯ ಧನುರ್ಮಾಸವು ವರ್ಷಾರಂಭವಾಗಿರುತ್ತದೆ. ಒಟ್ಟಾರೆ ವರ್ಷಾಚರಣೆಯಲ್ಲಿ ಹನ್ನೆರಡು ದ್ವಾದಶ ನಾಮಗಳು ಆಚರಣೆಯಲ್ಲಿದ್ದವು. ಅದರಲ್ಲಿ ಪ್ರಥಮ ಮಾಸವಾದ ಕೇಶವ ಮಾಸವೆಂದು ಧನುರ್ಮಾಸವು ಕರೆಯಲ್ಪಡುತ್ತಿತ್ತು. ದ್ವಾದಶ ಮಾಸಗಳಲ್ಲಿ ಪ್ರಥಮವಾಗಿ ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು, ಮಧುಸೂಧನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷೀಕೇಶ, ಪದ್ಮನಾಭ, ದಾಮೋದರ ಎಂಬ ಮಾಸಗಳು ಆಚರಣೆಯಲ್ಲಿದ್ದವು.
ಶ್ರೀಮಹಾವಿಷ್ಣುವಿನ ದ್ವಾಪರಯುಗದ ಕೃಷ್ಣಾವತಾರದ ಸಮಯದಲ್ಲಿ ಧನುರ್ಮಾಸದ ಆಚರಣೆಯನ್ನು ಅನುಷ್ಠಾನಗೊಳಿಸ ಲಾಯಿತು ಎಂಬುದು ಪ್ರತೀತಿ. ಹಿಂದೆ ದೇವರಾಜನಾದ ಇಂದ್ರನು ರಾಜ್ಯವನ್ನು ಕಳೆದುಕೊಂಡಾಗ ಶಚೀ ದೇವಿಯು ಹುಗ್ಗಿಯ
ನೈವೇದ್ಯವನ್ನು ಮಾಡಿ ಮಹಾಷ್ಣುವಿಗೆ ಸಮರ್ಪಿಸಿ, ಶ್ರೀ ಹರಿಯೊಂದಿಗೆ ಮಹಾಲಕ್ಷ್ಮಿಯನ್ನೂ ದ್ವಾದಶ ನಾಮಗಳಿಂದ ಸ್ತುತಿಸಿದ ಳಂತೆ. ಇದರ ಫಲವಾಗಿ ಇಂದ್ರನು ರಾಜ್ಯವನ್ನು ಮರಳಿ ಪಡೆದನು ಎನ್ನುವ ಪುರಾಣ ಕಥೆಯಿದೆ.
ಧನುರ್ಮಾಸದ ಒಂದು ದಿನ ವಿಷ್ಣುವಿಗೆ ಪೂಜೆ ಮಾಡಿದರೆ ಸಾವಿರ ವರ್ಷ ಪೂಜೆ ಮಾಡಿದ ಫಲ ದೊರೆಯುವುದು ಎಂಬುದು
ಆಸ್ತಿಕರ ನಂಬಿಕೆ. ಧನುರ್ಮಾಸದಲ್ಲಿ ಪ್ರತಿನಿತ್ಯ ಉಷಃಕಾಲದಲ್ಲಿ ಶ್ರೀಹರಿಗೆ ಹುಗ್ಗಿಯನ್ನು ಸಮರ್ಪಿಸಿ ಪೂಜಿಸಿದರೆ ಯುದ್ಧದಲ್ಲಿ ಜಯಶೀಲರಾಗುರೆಂದು ನಾರದರು ಯುದಿಷ್ಠಿರನಿಗೆ ತಿಳಿಸುತ್ತಾರೆ. ಈ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ದ್ರೌಪದಿಯು ಪ್ರತಿನಿತ್ಯ ಬೆಳಗ್ಗೆ ಬೇಗ ಹುಗ್ಗಿಯನ್ನು ಮಾಡಿ ಕೊಡುತ್ತಿದ್ದಳು.
ಅದನ್ನು ಶ್ರೀ ಕೃಷ್ಣನು ಸ್ವೀಕರಿಸಿ ಸಂತೃಪ್ತನಾದನು. ಹಾಗಾಗಿ ಪಾಂಡವರು ಶ್ರೀ ಕೃಷ್ಣನಿಗೆ ಧನುರ್ಮಾಸದ ಪೂಜೆಯನ್ನು ಮಾಡಿ ಅನುಗ್ರಹವನ್ನು ಪಡೆದು ಮಹಾಭಾರತ ಯುದ್ಧವನ್ನು ಜಯಿಸಿದರೆಂದು ಹೇಳಲಾಗುತ್ತದೆ. ಧನುರ್ಮಾಸದ ಆಚರಣೆಯ ಮಹತ್ವವನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ವಿಷ್ಣು ಪುರಾಣದಲ್ಲಿಯೂ ಸಹ ಭಗವಂತನಾದ ಶ್ರೀ ಮಹಾವಿಷ್ಣುವಿಗೆ ನಿದ್ರೆ ಯೆನ್ನುವುದು ಯೋಗ ಸಮಾಧಿ. ಈ ಸಂದರ್ಭದಲ್ಲಿ ಭಗವಂತನು ತನ್ನ ಸ್ವರೂಪವನ್ನು ಮನನ ಮಾಡುವ ಸಮಯ. ಅಂತಹ
ಯೋಗ ನಿದ್ರಾವಸ್ಥೆಯಲ್ಲಿನ ಭಗವಂತನು ಭಕ್ತರ ಅಭಿಮುಖವಾಗಿ ಭಗವಂತನನ್ನು ಪ್ರಾರ್ಥಿಸುವ ಸಮಯ.
ಅದು ಅರುಣೋದಯ ಸಮಯ. ಹೇಮಂತ ಋತುವಿನ ಈ ಧನುರ್ಮಾಸ ಕಾಲದಲ್ಲಿ ಗೋಪಿಕಾ ಸ್ತ್ರೀಯರು ಕಾತ್ಯಾಯಿನಿ ವ್ರತದ ಆಚರಣೆಯನ್ನು ವಿಶೇಷವಾಗಿ ಮರಳಿನಲ್ಲಿ ಶ್ರೀ ಗೌರಿಯ ಆಕೃತಿಯನ್ನು ಮಾಡಿ ಪ್ರಾರ್ಥಿಸಿ, ಪೂಜೆಯನ್ನು ಮಾಡಿ ಶ್ರೀ ಕೃಷ್ಣನ
ಸಾನ್ನಿಧ್ಯವನ್ನು ಪಡೆದರು ಎನ್ನಲಾಗಿದೆ. ಶ್ರೀ ಮಹಾವಿಷ್ಣುವಿಗೆ ಶ್ರೀದೇವಿ ಹಾಗೂ ಭೂದೇವಿ ಎಂಬ ಇಬ್ಬರು ಪತ್ನಿಯರಿದ್ದು, ಕಲಿಯುಗದಲ್ಲಿ ಮಹಾವಿಷ್ಣುವಿನ ಭಕ್ತನಾದ ಪೆರಿಯಾಳ್ವಾರ್ ಎಂದು ಕರೆಯಲ್ಪಟ್ಟ ವಿಷ್ಣುಚಿತ್ತರಿಗೆ ತುಳಸೀ ನಂದನವನದ ಭೂಗರ್ಭದಲ್ಲಿ ಭೂದೇವಿ ಅಂಶವಾಗಿ ಹೆಣ್ಣು ಮಗುವೊಂದು ದೊರೆತು ಆಂಡಾಳ್ ಅಥವಾ ಗೋದಾ ಎಂದು ಹೆಸರಿಟ್ಟು ಸಾಕು ತಂದೆಯ ಆಶ್ರಯದಲ್ಲಿ ಬೆಳೆಯತೊಡಗಿದಳು.
ಮುಂದೆ ಶ್ರೀಕೃಷ್ಣನ ಭಕ್ತಳಾಗಿ ತನ್ನನ್ನು ಸಂಪೂರ್ಣವಾಗಿ ಕೃಷ್ಣ ಸೇವೆಯಲ್ಲಿ ತೊಡಗಿಸಿಕೊಂಡು ಭಾಗವತದ ಶ್ರೀ ಕೃಷ್ಣ ಚರಿತ್ರೆ ಯನ್ನು ಪಾಲಿಸುತ್ತಾ ಭಕ್ತೆ ಗೋದಾ ತಿರುಪ್ಪಾವೈ ಎಂಬ ಮೂವತ್ತು ಪದ್ಯಗಳ ಗ್ರಂಥವನ್ನು ರಚಿಸುತ್ತಾಳೆ. ಹಾಗೂ ತಿರುಪ್ಪಾವೈ ಯಲ್ಲಿ ಉಲ್ಲೇಖಿಸಿರುವಂತೆ ಭಗವಂತನಾದ ಶ್ರೀ ಕೃಷ್ಣನನ್ನೇ ಉಪಾಯವಾಗಿಯೂ ಹಾಗೂ ಉಪೇಯವಾಗಿಯೂ ಅನು ಸಂಧಿಸು ತ್ತಾಳೆ. ಇಂದಿಗೂ ಧನುರ್ಮಾಸ ಆಚರಣೆಯಲ್ಲಿ ತಿರುಪ್ಪಾವೈ ಪಠಣವು ಪ್ರಮುಖವಾಗಿದೆ.
ಎಲ್ಲಾ ದೇವಾಲಯಗಳಲ್ಲಿ ಅರುಣೋದಯ ಕಾಲದಲ್ಲಿ ವಿಶೇಷ ಪೂಜಾವಿಧಿಗಳು ಹಿಂದಿನಿಂದಲೂ ಪಾಲಿಸಿಕೊಂಡು
ಬಂದಿರುವುದು ಧನುರ್ಮಾಸದ ವಿಶೇಷ ಸಂಪ್ರದಾಯ. ಅರುಣೋದಯ ಕಾಲದಲ್ಲಿ ಭಕ್ತರು ಚಳಿಯಲ್ಲೇ ಎದ್ದು ಸ್ನಾನಾದಿ ಗಳನ್ನು ಮುಗಿಸಿ, ಇನ್ನೂ ನಕ್ಷತ್ರಗಳು ಹೊಳೆಯುತ್ತಿರುವಾಗಲೇ, ದೇವಾಲಯಗಳಿಗೆ ತೆರಳಿ ದರ್ಶನ, ಪೂಜಾದಿಗಳನ್ನು ಮಾಡು ವುದು ವಿಶೇಷ ಆಚರಣೆ. ಈ ಮುಹೂರ್ತದಲ್ಲಿ ಭಗವಂತನನ್ನು ಪೂಜಿಸಿ, ನೈವೇದ್ಯವನ್ನು ಅರ್ಪಿಸಿದರೆ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ನಂಬಿಕೆ.