Friday, 13th December 2024

ಡಯಾಬಿಟಿಸ್: ಬಯೋನಿಕ್ ಪ್ಯಾಂಕ್ರಿಯಾಸ್ ವರದಾನವೇ ?

ವೈದ್ಯ ವೈವಿಧ್ಯ

drhsmohan@gmail.com

ತಮಗೆ ಗೊತ್ತಿರುವಂತೆ ಜ್ಯುವಿನೈಲ್ ಡಯಾಬಿಟಿಸ್ ಅಥವಾ ಟೈಪ್ ೧ಡಯಾಬಿಟಿಸ್ ಇರುವವರಿಗೆ ರಕ್ತದಲ್ಲಿ ಗ್ಲುಕೋಸ್ ಮಟ್ಟ ಕಾಯ್ದುಕೊಳ್ಳಲು ಇನ್ಸುಲಿನ್ ಅವಶ್ಯಕವಾಗಿ ಬೇಕೇ ಬೇಕು. ಇತ್ತೀಚೆಗೆ ಬಯೋನಿಕ್ ಪ್ಯಾಂಕ್ರಿಯಾಸ್ ಎಂಬ ಹೊಸ
ರೀತಿಯ ಚಿಕಿತ್ಸೆ ಕಂಡು ಹಿಡಿಯಲಾಗಿದೆ. ರಕ್ತಕ್ಕೆ ಅಗತ್ಯ ಇನ್ಸುಲಿನ್ ಅನ್ನು ಆಟೋಮ್ಯಾಟಿಕ್ ಆಗಿ ಪೂರೈಸುವ ಆಧುನಿಕ ತಾಂತ್ರಿಕತೆಯಿದು.

ನಿರಂತರ ಮಾನಿಟರ್ ಮಾಡುವ ವ್ಯವಸ್ಥೆಯನ್ನು ಹೊಂದಿದ್ದು, ಇನ್ಸುಲಿನ್ ಡೋಸ್ ಅನ್ನು ರೋಗಿಗೆ ಅಗತ್ಯವಿದ್ದಷ್ಟು ಮಾತ್ರ ನಿಯಂತ್ರಿಸಿ ಅಷ್ಟನ್ನೇ ಪೂರೈಸುವ ಸೌಲಭ್ಯ ಹೊಂದಿದೆ. ಇತ್ತೀಚೆಗೆ ಅಮೆರಿಕದಲ್ಲಿ ೧೬ ಸ್ಥಳಗಳಲ್ಲಿ ಇದರ ಕ್ಲಿನಿಕಲ್ ಟ್ರಯಲ್ ಮಾಡಲಾಯಿತು. ಈಗ ಇರುವ ಸ್ಟ್ಯಾಂಡರ್ಡ್ ವ್ಯವಸ್ಥೆ ಮತ್ತು ಬಯೋನಿಕ್ ಪ್ಯಾಂಕ್ರಿಯಾಸ್‌ನ ಸತತ ಗ್ಲೂಕೋಸ್ ಮಾನಿಟರ್ ಅನ್ನು ಈ ಟ್ರಯಲ್ ನಲ್ಲಿ ತುಲನೆ ಮಾಡಲಾಯಿತು. ಈ ಅಧ್ಯಯನ ಇತ್ತೀಚಿನ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿದೆ. ಈ ಅಧ್ಯಯನದಲ್ಲಿ ೬ ರಿಂದ ೭೯ ವರ್ಷದವರೆಗಿನ ಟೈಪ್ ೧ ಡಯಾಬಿಟಿಸ್ ಇರುವ ಕನಿಷ್ಠ ಒಂದು ವರ್ಷವಾ
ದರೂ ಇನ್ಸುಲಿನ್ ಉಪಯೋಗಿಸುತ್ತಿರುವ ೩೨೬ ಜನರನ್ನು ನೊಂದಾವಣಿ ಮಾಡಿಕೊಳ್ಳಲಾಯಿತು.

ಇವರನ್ನು ೨ ಗುಂಪುಗಳಾಗಿ ವಿಂಗಡಿಸಲಾಯಿತು. ಒಂದು ಗುಂಪಿನಲ್ಲಿ ಬಯೋನಿಕ್ ಪ್ಯಾಂಕ್ರಿಯಾಸ್ ಅಳವಡಿಸಲಾಯಿತು. ಮತ್ತೊಂದರಲ್ಲಿ ಗ್ಲೂಕೋಸ್ ಮಾನಿಟರ್ ಮಾಡಿ ಇನ್ಸುಲಿನ್ ಕೊಡುವ ಎಂದಿನ ಪದ್ಧತಿ ಮುಂದುವರಿಸಲಾಯಿತು. ಬಯೋನಿಕ್ ಪ್ಯಾಂಕ್ರಿಯಾಸ್ ಅಳವಡಿಸಿದ ಗುಂಪಿನ ರೋಗಿಗಳಲ್ಲಿ ರಕ್ತದ ಸಕ್ಕರೆ ಅಂಶವನ್ನು ಕಂಡುಹಿಡಿಯುವ ಅವಶ್ಯಕತೆ ಬೀಳಲಿಲ್ಲ.

ಹಾಗೆಯೇ ಪುನಃ ಇನ್ಸುಲಿನ್ ಚುಚ್ಚುವ ಅವಶ್ಯಕತೆಯೂ ಬೀಳಲಿಲ್ಲ. ಏಕೆಂದರೆ ಈ ಉಪಕರಣ ರಕ್ತದಲ್ಲಿನ ಗ್ಲೂಕೋಸ್ ಅಂಶವನ್ನು ಸರಿಯಾಗಿ ಲೆಕ್ಕ ಹಾಕಿ ಅಗತ್ಯ ಇರುವ ಇನ್ಸುಲಿನ್ ಅನ್ನು ರಕ್ತಕ್ಕೆ ಸೇರಿಸುವ ವ್ಯವಸ್ಥೆ ತನ್ನಿಂದ ತಾನೇ ಮಾಡುತ್ತದೆ. ಬಯೋನಿಕ್ ಪ್ಯಾಂಕ್ರಿಯಾಸ್ ಉಪಯೋಗಿಸಿದವರಲ್ಲಿ ಗ್ಲೈಕೇಟೆಡ್ ಹಿಮೋಗ್ಲೋಬಿನ್ ಮಟ್ಟ ಶೇ.೭.೯ ರಿಂದ ೭.೩ಕ್ಕೆ ಉತ್ತಮಗೊಂಡಿತು. ಇನ್ನೊಂದು ಗುಂಪಿನಲ್ಲಿ ಈ ಮಟ್ಟದಲ್ಲಿ ಏನೂ ಬದಲಾವಣೆ ಕಂಡುಬರಲಿಲ್ಲ.

ಏಚಿಅ೧ಇ ಎಂದು ಕರೆಯುವ ಈ ಗ್ಲೈಕೇಟೆಡ್ ಹಿಮೋಗ್ಲೋಬಿನ್ ಮಟ್ಟ ರಕ್ತದಲ್ಲಿನ ದೀರ್ಘಕಾಲದ ಗ್ಲೂಕೋಸ್ ನಿಯಂತ್ರಣ ವನ್ನು (ಸಾಮಾನ್ಯವಾಗಿ ೩ ತಿಂಗಳು) ಸೂಚಿಸುತ್ತದೆ.

ಸಕ್ಕರೆ ಅಂಶ ಏರು ಪೇರು: ಜ್ಯುವಿನೈಲ್ ಡಯಾಬಿಟಿಸ್ ಅಥವಾ ಟೈಪ್೧ ಡಯಾಬಿಟಿಸ್ ನಲ್ಲಿ ಆರೋಗ್ಯಕ್ಕೆ ಸರಿಹೊಂದುವ ರೀತಿಯ ಆಹಾರ, ಸೂಕ್ತ ದೈಹಿಕ ಶ್ರಮ- ಇವುಗಳ ಜತೆಗೆ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸೂಕ್ತವಾಗಿ ಮಾನಿಟರ್ ಮಾಡುವುದು, ಅಗತ್ಯ ಬಿದ್ದಾಗ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವುದು – ಇವು ಮುಖ್ಯ ವಿಚಾರಗಳು. ರಕ್ತದಲ್ಲಿನ
ಗ್ಲುಕೋಸ್‌ನ ಮಟ್ಟವನ್ನು ಅಪೇಕ್ಷಿತ ಪರಿಧಿಯಲ್ಲಿ ಯಾವಾಗಲೂ ಇರುವಂತೆ ನೋಡಿಕೊಳ್ಳುವುದು ಬಹು ದೊಡ್ಡ ಸವಾಲು.
ಇದನ್ನು ಸಮರ್ಥವಾಗಿ ನಿಭಾಯಿಸಲು ಈಗಿರುವ ವ್ಯವಸ್ಥೆಯ ಪ್ರಕಾರ ಆಗಾಗ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಅಳೆಯಬೇಕು.

ಅದರಂತೆ ಮತ್ತೆ ಮತ್ತೆ ಇನ್ಸುಲಿನ್ ಇಂಜಕ್ಷನ್ ಚುಚ್ಚಿಕೊಳ್ಳುತ್ತಿರಬೇಕಾಗುತ್ತದೆ. ಇದು ಯಾವುದೇ ವ್ಯಕ್ತಿಗೆ ತನ್ನ ದೈನಂದಿನ ಜೀವನ, ಕೆಲಸದ ಜತೆ ಸಹ್ಯವಾಗುವ ವಿಚಾರ ಅಲ್ಲ. ಅದನ್ನು ನೀಗಿಸಲು ಈ ಬಯೋನಿಕ್ ಪ್ಯಾಂಕ್ರಿಯಾಸ್ ಬಹಳ ಸೂಕ್ತ ವ್ಯವಸ್ಥೆ ಎಂದು ನಾನಾ ತಜ್ಞರು ಅಭಿಪ್ರಾಯಪಡುತ್ತಾರೆ.

ಅವರುಗಳಲ್ಲಿ ಮುಖ್ಯವಾದವರು: ಯು ಕೆ ಯ ನ್ಯಾಷನಲ್ ಹೆಲ್ತ್ ಸರ್ವಿಸಸ್‌ನ ಎಂಡೋಕ್ರೈನಾಲಜಿಸ್ಟ್ ಪ್ರೊ.ಫ್ರಾಂಕ್ ಜೋಸೆಫ್ ಮತ್ತು ಅಮೆರಿಕದ ಮತ್ತೊಬ್ಬ ತಜ್ಞ ಡಾ. ನೋರಾ ಲಾನ್ಸೆನ್. ಆಗಾಗ ಗ್ಲುಕೋಸ್ ಮಟ್ಟ ಲೆಕ್ಕ ಹಾಕುವುದನ್ನು ತಪ್ಪಿಸಿ ಆಟೋಮೇಟೆಡ್ ವ್ಯವಸ್ಥೆ ತರುವುದರಿಂದ ರಕ್ತದ ಗ್ಲುಕೋಸ್ ಮಟ್ಟವನ್ನು ತುಂಬಾ ನಿಖರತೆಯಿಂದ ದೇಹದಲ್ಲಿ ಇಟ್ಟುಕೊಳ್ಳಬಹುದು. ಹಾಗೆಯೇ ಹೈಪರ್ ಗ್ಲೈಸೀಮಿಯ (ರಕ್ತದಲ್ಲಿ ಸಕ್ಕರೆಯ ಅಂಶ ಜಾಸ್ತಿಯಾಗುವುದು) ಮತ್ತು ಹೈಪೋಗೈಸಿಮಿಯಾ (ಸಕ್ಕರೆಯ ಅಂಶ ಕಡಿಮೆಯಾಗುವುದು) – ಈ ಎರಡೂ ವಿರುದ್ಧ ರೀತಿಯ ವ್ಯವಸ್ಥೆ ದೇಹದಲ್ಲಿ
ಆಗುವುದನ್ನು ತಪ್ಪಿಸಬಹುದು. ಡಯಾಬಿಟಿಸ್ ಅನ್ನು ಸರಿಯಾಗಿ ನಿಯಂತ್ರಣದಲ್ಲಿ ಇಡದಿದ್ದರೆ ಹಲವು ರೀತಿಯ ತೊಡಕುಗಳು ಉದಾ: ಡಯಾಬಿಟಿಕ್ ಕೀಟೋ ಅಸಿಡೋಸಿಸ್ ಕಾಣಿಸಿಕೊಳ್ಳಬಹುದು.

ಇವು ಕೊನೆಯಲ್ಲಿ ರೋಗಿಯ ಮರಣದಲ್ಲಿ ಪರ್ಯವಸಾನ ಹೊಂದಬಹುದು. ಮೇಲಿನ ಟ್ರಯಲ್ ಅಥವಾ ಅಧ್ಯಯನದಲ್ಲಿ
ಬಯೋನಿಕ್ ಪ್ಯಾಂಕ್ರಿಯಾಸ್ ಉಪಕರಣ ರಕ್ತ ದಲ್ಲಿನ ಸಕ್ಕರೆಯ ಅಂಶವನ್ನು ಟಾರ್ಗೆಟ್ ರೇಂಜ್ ನಲ್ಲಿ ಬಹಳ ಹೊತ್ತು ಹಿಡಿದಿಟ್ಟಿತ್ತು ಎಂಬುದು ಬಹಳ ಗಮನಾರ್ಹ ಅಂಶ ಎಂದು ವಿವಿಧ ತಜ್ಞರ ಅಭಿಪ್ರಾಯ. ರಕ್ತದಲ್ಲಿ ಸಕ್ಕರೆಯು ಇರಬೇಕಾದ
ಸರಿಯಾದ ಮಟ್ಟವೇ ಟಾರ್ಗೆಟ್ ರೇಂಜ್. ಅಂದರೆ ಗ್ಲೂಕೋಸ್ ದೇಹಕ್ಕೆ ಬೇಕಾದ ಮಟ್ಟಕ್ಕಿಂತ ಜಾಸ್ತಿಯೂ, ಕಡಿಮೆಯೂ ಆಗಬಾರದು. ಈ ತಾಂತ್ರಿಕತೆ ಇನ್ನೂ ಆರಂಭದ ಹಂತದಲ್ಲಿದೆ. ಇದರಲ್ಲಿ ಇನ್ನೂ ಹಲವಾರು ಉತ್ತಮ ಬೆಳವಣಿಗೆಗಳು ಆಗಿ ಈ ರೀತಿಯ ಡಯಾಬಿಟಿಸ್ ರೋಗಿಗಳಿಗೆ ಇದು ವರದಾನವಾಗಬಲ್ಲದು. ಹಾಗೂ ಭವಿಷ್ಯದಲ್ಲಿ ಈಗಿರುವ ವ್ಯವಸ್ಥೆಯನ್ನೇ ಬದಲಿಸಿ ಬಯೋನಿಕ್ ಪ್ಯಾಂಕ್ರಿಯಾಸ್ ವ್ಯವಸ್ಥೆಯೇ ಉಪಯೋಗ ದಲ್ಲಿ ಬರಬಹುದು ಎಂದು ತಜ್ಞರ ಆಶಯ, ನಿರೀಕ್ಷೆ.