Friday, 13th December 2024

ಡಯಾಲಿಸಿಸ್‌ನಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ

ಸ್ವಾಸ್ಥ್ಯ ಸಂಪದ

yoganna55@gmail.com

ಪ್ರಪಂಚಾದ್ಯಂತ ಅದರಲ್ಲೂ ಭಾರತದಲ್ಲಿ ಮೂತ್ರಜನಕಾಂಗಗಳ ವೈಫಲ್ಯದ ರೋಗಿಗಳು ಪ್ರತಿನಿತ್ಯ ಹೆಚ್ಚಾಗುತ್ತಿದ್ದು, ಇದಕ್ಕೆ ವ್ಯಾಪಕವಾಗುತ್ತಿರುವ ಸಕ್ಕರೆಕಾಯಿಲೆಯೇ ಪ್ರಮುಖ ಕಾರಣ. ದೇಹದಲ್ಲಿ ಎರಡು ಕಿಡ್ನಿಗಳಿದ್ದು, ಎರಡೂ ವಿಫಲವಾದಾಗ ರಕ್ತದಲ್ಲಿನ ವಿಷಮವಸ್ತುಗಳನ್ನು  ಹೊರತೆಗೆದು ಸಾವಿನಿಂದ ತಾತ್ಕಾಲಿಕವಾಗಿ ಪಾರು ಮಾಡಲು ಇರುವ ಏಕೈಕ ವಿಧಾನ ಡಯಾಲಿಸಿಸ್.

ಡಯಾಲಿಸಿಸ್ ಜೀವರಕ್ಷಕ ತಂತ್ರಜ್ಞಾನವಾದರೂ ಇದೂ ಅನಾಹುತಗಳಿಂದ ಹೊರತಾ ಗಿಲ್ಲ. ಇದು ಶಾಶ್ವತ ಚಿಕಿತ್ಸೆಯೂ ಅಲ್ಲ. ಇದೊಂದು ಸೂಕ್ಷ್ಮ ತಂತ್ರಜ್ಞಾನ. ರೋಗಿ, ತಂತ್ರಜ್ಞರು ಮತ್ತು ವೈದ್ಯರು ಪ್ರತಿ ಡಯಾಲಿಸಿಸ್‌ನಲ್ಲಿ ಅತಿ ಸೂಕ್ಷ್ಮ ಮುಂಜಾಗ್ರತಾ ಕ್ರಮಗಳನ್ನು ವಹಿಸಿದಲ್ಲಿ ಮಾತ್ರ ಇದು ಜೀವರಕ್ಷಕವಾಗುತ್ತದೆ.

ಯಾರಿಗೆ ಡಯಾಲಿಸಿಸ್?: ಕಿಡ್ನಿ ವಿಫಲವಾಗಿದ್ದು, ರಕ್ತದಲ್ಲಿ ಯೂರಿಯಾ, ಕ್ರಿಯಾಟಿ ನಿನ್, ಪೊಟ್ಯಾಷಿಯಂ ಮತ್ತಿತರ ವಿಷಮವಸ್ತುಗಳು ಹೆಚ್ಚಾಗಿದ್ದು, ಕಿಡ್ನಿ ನಾಟಿ (ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್)ಗಾಗಿ ಕಾಯುತ್ತಿರುವವರಲ್ಲಿ ಅಥವಾ ಕಿಡ್ನಿ ನಾಟಿ ಚಿಕಿತ್ಸೆ ಭರಿಸಲಾಗದವರಲ್ಲಿ ಅಥವಾ ಕಿಡ್ನಿ ನಾಟಿ ಚಿಕಿತ್ಸೆಗೆ ಅರ್ಹರಲ್ಲದವರಲ್ಲಿ ಡಯಾಲಿಸಿಸ್ ಕೈಗೊಳ್ಳಲಾಗುತ್ತದೆ.

ಡಯಾಲಿಸಿಸ್‌ನಲ್ಲಿ ರಕ್ತದ ಡಯಾಲಿಸಿಸ್ (ಹೀಮೋ ಡಯಾಲಿಸಿಸ್) ಮತ್ತು ಪೆರಿಟೋ ನಿಯಂ ಡಯಾಲಿಸಿಸ್ ಎಂಬ ಎರಡು ವಿಧಗಳಿವೆ. ಸಾಮಾನ್ಯವಾಗಿ ಬಹುಪಾಲು ಜನರಿಗೆ ಹೀಮೋಡಯಾಲಿಸಿಸ್ ಅನ್ನು ಮತ್ತು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಪೆರಿಟೋನಿಯಂ ಡಯಾಲಿಸಿಸ್ ಅನ್ನು ಸಲಹೆ ಮಾಡಲಾಗುತ್ತದೆ.

ಪೆರಿಟೋನಿಯಂ (ಉದರಗುಡಿ ಪೊರೆ) ಡಯಾಲಿಸಿಸ್: ಮಕ್ಕಳಲ್ಲಿ, ತೀವ್ರ ಹೃದ್ರೋಗಿಗಳಿಗೆ ಈ ಡಯಾಲಿಸಿಸ್ ಶಿಫಾರಸು ಮಾಡಲಾಗುತ್ತದೆ. ಮನೆಯಲ್ಲಿಯೇ ಸ್ವಯಂ ಮಾಡಿಕೊಳ್ಳಬಹುದಾದ ಪೆರಿಟೋನಿಯಂ ಡಯಾಲಿಸಿಸ್‌ನಲ್ಲಿ ಡಯಾಸಲೇಟ್ ದ್ರವವನ್ನು ಉದರ ಪೊರೆಗುಡಿಗೆ (ಪೆರಿಟೋನಿಯಲ್ ಕ್ಯಾವಿಟಿ)ತುಂಬಲಾಗುತ್ತದೆ. ಉದರ ಗುಡಿ ಪೊರೆ(ಪೆರಿಟೋನಿಯಂ) ಹಿಂಭಾಗ ದಲ್ಲಿರುವ ರಕ್ತ ಮತ್ತು ಉದರಪೊರೆಯ ಮುಂಭಾಗದಲ್ಲಿರುವ ಡಯಾಲಿಸಿಸ್ ದ್ರವಗಳ ನಡುವೆ ಪೆರಿಟೋನಿಯಂ (ಉದರ ಗುಡಿ ಪೊರೆ) ಮೂಲಕ ರಕ್ತದಲ್ಲಿರುವ ವಿಷಮ ವಸ್ತುಗಳು ಡಯಾಲಿಸಿಸ್ ದ್ರವಕ್ಕೆ ರವಾನೆಯಾಗುತ್ತವೆ.

ಸುಮಾರು ೧೨-೨೪ಗಂಟೆ ವಿಷಮ ವಸ್ತುಗಳಿರುವ ಡಯಾಲಿಸಿಸ್ ದ್ರವವನ್ನು ರೋಗಿಯ ಉದರ ಗೋಡೆಗೆ ಅಳವಡಿಸಲಾಗಿರುವ ನಳಿಕೆ ಮುಖಾಂತರ ಹೊರ ತೆಗೆದು ಹೊಸ ಡಯಾಲಿಸಿಸ್ ದ್ರವವನ್ನು ಪುನಃ ಉದರ ಪೊರೆ ಗುಡಿಗೆ ತುಂಬಲಾಗುತ್ತದೆ. ಇದನ್ನು
ರೋಗಿ ಮನೆಯಲ್ಲಿಯೇ ಮಾಡಿಕೊಳ್ಳಬೇಕಾದುದರಿಂದ ಇದರ ಬಗ್ಗೆ ರೋಗಿಗೆ ಅರಿವಿದ್ದರೆ ಮಾತ್ರ ಇದು ಫಲಕಾರಿ. ವೈಯಕ್ತಿಕ ಶುಚಿತ್ವ, ಸೋಂಕು ನಿರೋಧಕ ಮುನ್ನೆಚ್ಚರಿಕೆಗಳು ಅತ್ಯವಶ್ಯಕ.

ಹೀಮೋ (ರಕ್ತ) ಡಯಾಲಿಸಿಸ್: ರೋಗಿಯ ದೇಹದಿಂದ ರಕ್ತವನ್ನು ಹೊರತೆಗೆದು ಡಯಾಲಿಸಿಸ್ ಯಂತ್ರಕ್ಕೆ ಹಾಯಿಸಿ ಶುದ್ಧೀಕರಿಸಿ ಪುನಃ ದೇಹ ದೊಳಕ್ಕೆ ನೀಡುವ ಶುದ್ಧೀಕರಣ ವ್ಯವಸ್ಥೆಯಿದು. ಮೂತ್ರಜನಕಾಂಗ ತಜ್ಞ ವೈದ್ಯರ ಮೇಲ್ವಿಚಾರಣೆ
ಅಡಿಯಲ್ಲಿ ನುರಿತ ತಂತ್ರಜ್ಞರು ಆಸ್ಪತ್ರೆಯಲ್ಲಿ ಕೈಗೊಳ್ಳುವ ಚಿಕಿತ್ಸೆಯಿದು. ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹೀಗಿವೆ.

ಹೊರತೆಗೆವ ದ್ರವದ ಪ್ರಮಾಣ: ಡಯಾಲಿಸಿಸ್ ಮಾಡುವ ಮುನ್ನ ರೋಗಿಯಿಂದ ಅವನ ತೂಕವನ್ನಾಧರಿಸಿ ಎಷ್ಟು ಲೀಟರ್ ದ್ರವವನ್ನು ರಕ್ತದಿಂದ ಹೊರತೆಗೆಯಬೇಕು ಎಂಬುದನ್ನು ತಜ್ಞವೈದ್ಯರು ನಿರ್ಧರಿಸುತ್ತಾರೆ. ಸಾಮಾನ್ಯವಾಗಿ ಒಂದು ಡಯಾ
ಲಿಸಿಸ್‌ನಲ್ಲಿ ಕನಿಷ್ಠ ೨ ಲೀ. ರಕ್ತದ್ರವವನ್ನು ಹೊರ ತೆಗೆಯಲಾಗುತ್ತದೆ. ಹೆಚ್ಚು ತೆಗೆದಲ್ಲಿ ರಕ್ತದ ಒತ್ತಡ ಕುಸಿದು ಹೃದಯಸಂಬಂಧಿ ತೊಂದರೆಗಳುಂಟಾಗುತ್ತವೆ. ಕಡಿಮೆ ತೆಗೆದಲ್ಲಿ ರಕ್ತ ಒತ್ತಡ ಅಧಿಕವಾಗುತ್ತದೆ. ಆದುದರಿಂದ ಸೂಕ್ತ ನಿರ್ಧಾರ ಅತ್ಯವಶ್ಯಕ.

ನಳಿಕೆಗಳನ್ನು ಬದಲಿಸುವಿಕೆ: ಡಯಾಲಿಸಿಸ್‌ನಲ್ಲಿ ಉಪಯೋಗಿಸ ಲಾಗುವ ಟ್ಯೂಬ್‌ಗಳನ್ನು ಪದೇ ಪದೇ ಬದಲಿಸದೇ ಉಪಯೋಗಿಸುವುದರಿಂದ ಸೋಂಕುಂಟಾಗಿ ಅವಘಡಗಳು ಸಂಭವಿಸುತ್ತವೆ. ಡಯಾಲಿಸಿಸ್ ವೆಚ್ಚವನ್ನು ತಗ್ಗಿಸಲು ಕೆಲವರು ಹೀಗೆ ಮಾಡುತ್ತಾರೆ. ಇದು ದೀರ್ಘಾವಧಿಯಲ್ಲಿ ಅವನ ಜೀವಾವಧಿಯನ್ನು ಕುಂಠಿತಗೊಳಿಸುತ್ತದೆ.

ಡಯಾಲಿಸಿಸ್ ದ್ರವ (ಡಯಾಸಲೇಟ್): ಡಯಾಲಿಸಿಸ್ ಯಂತ್ರದಲ್ಲಿ ಶೋಧಕ ಪದರದ ಮುಖಾಂತರ ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಷಮವಸ್ತುಗಳನ್ನು ಈ ದ್ರವ ತನ್ನೆಡೆಗೆ ಸೆಳೆದು ಕೊಳ್ಳುತ್ತದೆ. ಈ ದ್ರವ ಶ್ರೇಷ್ಠ ಗುಣಮಟ್ಟದ್ದಾಗಿರ ಬೇಕು. ಇಲ್ಲದಿದ್ದಲ್ಲಿ ರಕ್ತಶುದ್ಧೀಕರಣ ನಿರೀಕ್ಷಿತ ಪ್ರಮಾಣದಲ್ಲಾಗುವುದಿಲ್ಲ. ಮತ್ತು ಸೋಂಕಿನ ಸಾಧ್ಯತೆಗಳಿವೆ. ಡಯಾಲಿಸಿಸ್ ವೆಚ್ಚವನ್ನು ತಗ್ಗಿಸಲು ಕೆಲವರು ಕಡಿಮೆ ಸಾಮರ್ಥ್ಯದ ದ್ರವವನ್ನು ಉಪಯೋಗಿಸುವ ಸಾಧ್ಯತೆ ಇರುತ್ತದೆ.

ಉಪಯೋಗಿಸುವ ನೀರು: ಡಯಾಲಿಸಿಸ್‌ನಲ್ಲಿ ಉಪಯೋಗಿಸಲಾಗುವ ನೀರು ಹಿಮ್ಮುಖ ಆಸ್ಮೋ ಸಿಸ್ (ರಿವರ‍್ಸ್ ಆಸ್ಮೋಸಿಸ್) ಪ್ರಕ್ರಿಯೆಗೀಡಾದ ಶುದ್ಧ ನೀರಾಗಿರಬೇಕು. ಇಲ್ಲದಿದ್ಲಲ್ಲಿ ಅವಘಡಗಳು ಸಂಭವಿಸಿ ಡಯಾಲಿಸಿಸ್ ಸಾಮರ್ಥ್ಯ ಕುಗ್ಗುತ್ತದೆ.
ಸೋಂಕಿನ ಸಾಧ್ಯತೆ ಹೆಚ್ಚಾಗುತ್ತದೆ. ಯಂತ್ರದ ಸಾಮರ್ಥ್ಯವನ್ನು ಮತ್ತು ನೀರಿನ ಗುಣಮಟ್ಟವನ್ನು ಆಗಿಂದಾಗ್ಗೆ ಪರೀಕ್ಷಿಸುತ್ತಿರಬೇಕು.

ಶುಚಿತ್ವ ಬಹುಮುಖ್ಯ: ಡಯಾಲಿಸಿಸ್ ಸಿಬ್ಬಂದಿ ಶ್ರೇಷ್ಠ ಗುಣಮಟ್ಟದ ವೈಯಕ್ತಿಕ ಸೋಂಕುನಿರೋಧಕ ಶುಚಿತ್ವವನ್ನು ಅನು ಸರಿಸಬೇಕು. ಹಲವಾರು  ರೋಗಿಗಳಿರುವುದರಿಂದ ಒಬ್ಬರನ್ನು ಮುಟ್ಟಿದ ಕೈಯಲ್ಲಿಯೇ ಮತ್ತೊಬ್ಬರನ್ನು ಮುಟ್ಟಿದಲ್ಲಿ ಸೋಂಕು ವರ್ಗಾವಣೆಯಾಗುವ ಸಾಧ್ಯತೆ ಇರು ತ್ತದೆ. ಅದರಲ್ಲೂ ರಕ್ತ ಸೋಂಕುಗಳು ಬಹುಬೇಗ ಒಬ್ಬರಿಂದೊಬ್ಬರಿಗೆ ಹರಡು ತ್ತವೆ. ಒಬ್ಬ ರೋಗಿಯ ನಳಿಕೆ ಮತ್ತಿತರ ಸಲಕರಣೆಗಳನ್ನು ತೊಳೆಯುವಾಗ ಮತ್ತೊಬ್ಬರವುಗಳೊಡನೆ ಮಿಶ್ರಣ ಮಾಡಬಾರದು. ಪ್ರತಿ ಯೊಂದು ಪ್ರಕರಣಕ್ಕೂ ಗ್ಲೌಸ್ ಅನ್ನು ಬದಲಾಯಿಸಿಕೊಳ್ಳಬೇಕು. ಅನವಶ್ಯಕವಾಗಿ ಇನ್ನಿತರರನ್ನೂ ಡಯಾಲಿಸಿಸ್ ಕೊಠಡಿಯೊಳಕ್ಕೆ ಬಿಟ್ಟು ದೊಂಬಿ ಮಾಡಬಾರದು.

ಸೋಂಕುಗಳು ಯಾವುವು?: ಡಯಾಲಿಸಿಸ್‌ಗೆ ಒಳಗಾಗುವ ಬಹು ಪಾಲು ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕುಂದಿರುವು ದರಿಂದ ಅವರು ಬಹು ಬೇಗ ಸೋಂಕಿಗೆ ಈಡಾಗುತ್ತಾರೆ. ಡಯಾಲಿಸಿಸ್ ಸಲಕರಣಗಳಿಂದಲೇ ಎಚ್‌ಐವಿ, ಬಿ ಮತ್ತು ಸಿ
ಹೆಪಟೈಟಿಸ್ ಸೋಂಕು, ಮಲೇರಿಯಾ ಇತ್ಯಾದಿ ಕಾಯಿಲೆಗಳು ಒಬ್ಬರಿಂದೊಬ್ಬರಿಗೆ ವರ್ಗಾವಣೆ ಯಾಗುತ್ತವೆ. ವೈದ್ಯ ಸಿಬ್ಬಂದಿ ಎಚ್ಚರಿಕೆ ವಹಿಸದಿದ್ದಲ್ಲಿ ಒಂದು ರೋಗ ವಾಸಿಗಾಗಿ ಬಂದ ರೋಗಿಗೆ ಮತ್ತೊಂದು ರೋಗವನ್ನು ವೈದ್ಯ ಸಿಬ್ಬಂದಿಯೇ
ಉಡುಗೊರೆಯಾಗಿ ಕೊಟ್ಟಂತಾಗುತ್ತದೆ.

ಪ್ರತ್ಯೇಕ ಡಯಾಲಿಸಿಸ್: ಎಚ್‌ಐವಿ ಮತ್ತು ಹೆಪಟೈಟಿಸ್ ಬಿ ಅಥವಾ ಸಿ ಸೋಂಕು ರೋಗಗಳಿರುವ ರೋಗಿಗಳಿಗೆ ಪ್ರತ್ಯೇಕ ಡಯಾಲಿಸಿಸ್ ಯಂತ್ರವನ್ನು ನಿಗದಿಪಡಿಸಬೇಕು. ಈ ಸೋಂಕಿರುವ ರೋಗಿಗಳನ್ನು ಪ್ರತ್ಯೇಕ ಕೊಠಡಿಗಳಿಗೆ ಬೇರ್ಪಡಿಸಿ
ಇವರುಗಳ ಸಲಕರಣೆಗಳನ್ನೂ ಕೂಡ ಪ್ರತ್ಯೇಕವಾಗಿ ಶುಚಿತ್ವಗೊಳಿಸುವ ವ್ಯವಸ್ಥೆ ಅತ್ಯವಶ್ಯಕ. ಈ ಕಾಯಿಲೆಗಳ ಸೋಂಕಿಲ್ಲ ದವರೂ ಕಟ್ಟುನಿಟ್ಟಾದ ಶುಚಿತ್ವ ಪಾಲಿಸದಿದ್ದಲ್ಲಿ ಕಾಲಕ್ರಮೇಣ ಈ ರೋಗಗಳ ಸೋಂಕಿಗೆ ಗುರಿಯಾಗುತ್ತಾರೆ.

ಆಹಾರಕ್ರಮ ಹೇಗೆ?: ಡಯಾಲಿಸಿಸ್ ರೋಗಿಗಳು ಆಹಾರದಲ್ಲಿ ಕಟ್ಟುನಿಟ್ಟಾದ ನಿಯಮ ಪಾಲಿಸುವುದು ಅತ್ಯವಶ್ಯಕ. ನೀರು, ಉಪ್ಪು, ಪೊಟ್ಯಾಷಿಯಂ, ಫಾಸ್ಪರಸ್, ಪ್ರೋಟಿನ್ ಮತ್ತು ಕೊಬ್ಬುಗಳನ್ನುಳ್ಳ ಆಹಾರ ಪದಾರ್ಥಗಳನ್ನು ಮಿತಿಗೊಳಿಸಬೇಕು. ೨೪ಗಂಟೆಗಳಲ್ಲಿ ವಿಸರ್ಜಿಸಲಾಗುವ ಮೂತ್ರದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ನೀರನ್ನು ಸೇವಿಸಬೇಕು. ಬೇಸಿಗೆ ಕಾಲದಲ್ಲಿ
ವಿಸರ್ಜಿಸಲಾಗುವ ಮೂತ್ರ ಪ್ರಮಾಣಕ್ಕಿಂತ ಅರ್ಧ ಲೀಟರ್ ನೀರನ್ನು ಹೆಚ್ಚಾಗಿ ಸೇವಿಸಬೇಕು. ಕೈಕಾಲುಗಳು ಊತವಿರುವವರು ಕಡಿಮೆ ನೀರನ್ನು ಅಳತೆಮಾಡಿಕೊಂಡು ಸೇವಿಸಬೇಕು.

ಉಪ್ಪಿನ ಪ್ರಮಾಣವನ್ನು ಪ್ರತಿನಿತ್ಯ ಕನಿಷ್ಠ ೩ ಗ್ರಾಂಗೆ ಮಿತಿಗೊಳಿಸಿಕೊಳ್ಳಬೇಕು. (ಹಪ್ಪಳ, ಉಪ್ಪಿನಕಾಯಿ, ಮಾಂಸಾಹಾರ, ತರಕಾರಿಗಳು, ಚಾಟ್ ಮಸಾಲಾ, ಚಟ್ನಿ, ಬ್ರೆಡ್, ಬೇಕರಿ ಆಹಾರ ಉತ್ಪನ್ನಗಳಲ್ಲಿ ಉಪ್ಪಿನ ಅಂಶ ಅಧಿಕವಾಗಿರುತ್ತದೆ).
ಪೊಟ್ಯಾಷಿಯಂ ಅಧಿಕವಾಗಿರುವ ಹಣ್ಣು ಮತ್ತು ತರಕಾರಿಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

ಸೋಡಿಯಂ ಮತ್ತು ಪೊಟ್ಯಾಷಿಯಂಗಳ ಪ್ರಮಾಣ ರಕ್ತದಲ್ಲಿ ಅಧಿಕವಾದಲ್ಲಿ ಹೃದಯದ ಕಾರ್ಯ ಅಸ್ತವ್ಯಸ್ತಗೊಂಡು ಮಾರಣಾಂತಿಕವಾಗ ಬಹುದು. ಪ್ರೋಟಿನಿನ ಪ್ರಮಾಣವನ್ನೂ ಸಹ ಮಿತಿಗೊಳಿಸಿಕೊಳ್ಳಬೇಕು.(ಹಾಲು, ಮೊಟ್ಟೆ, ಕಾಳುಗಳು, ಮಾಂಸಾಹಾರ ಇತ್ಯಾದಿಗಳಲ್ಲಿ ಪ್ರೋಟಿನ್ ಅಂಶ ಹೆಚ್ಚಾಗಿರುತ್ತದೆ). ಆಹಾರತಜ್ಞರ ಸಲಹೆಯ ಮೇರೆಗೆ ಅವರವರಿಗೆ ಹೊಂದುವ ಆಹಾರದ ಪಟ್ಟಿ ಯನ್ನು ಪಡೆದು ಚಾಚೂತಪ್ಪದೆ ಪಾಲಿಸಬೇಕು.

ಜೀವನಶೈಲಿ: ಜೀವನಶೈಲಿಯಲ್ಲಿ ಮಹತ್ತರ ಬದಲಾವಣೆ ಮಾಡಿಕೊಳ್ಳಬೇಕು. ನಿಯಮಿತವಾದ ಆಹಾರಸೇವನೆ, ನಿದ್ರೆ, ದೈನಂದಿನ ವ್ಯಾಯಾಮ, ಯೋಗ ಮತ್ತು ಅತಿಯಾದ ದೈಹಿಕ ಮತ್ತು ಮಾನಸಿಕ ಒತ್ತಡವಿಲ್ಲದ ಸಂತೃಪ್ತ ಬದುಕಿನ ಜೀವನ
ಶೈಲಿಯನ್ನು ರೂಢಿಸಿಕೊಳ್ಳಬೇಕು. ಧೂಮಪಾನ, ಮದ್ಯಪಾನಗಳಿಂದ ದೂರವಿರ ಬೇಕು. ಸ್ಪರ್ಧಾತ್ಮಕ ಮತ್ತು ಮಾನಸಿಕ ಒತ್ತಡಗಳ ವೃತ್ತಿಯಿಂದ ನಿವೃತ್ತಿಯಾಗಬೇಕು.

ಆರ್ಟಿರ‍್ಯೋ ವೀನಸ್ ಫಿಸ್ಚ್ಯುಲ (ಶುದ್ಧ ಅಶುಧ್ಧ ರಕ್ತನಾಳಗಳ ಹುಸಿ ಹೆಣಿಕೆ): ಮುಂದೋಳಿನ ಕೆಳಗೆ ಶಸ್ತ್ರಕ್ರಿಯೆಯಿಂದ ನಿರ್ಮಿಸಲಾಗುವ ಶುದ್ಧ- ಅಶುದ್ಧ ರಕ್ತನಾಳಗಳ ಹೆಣಿಕೆ ಮೂಲಕ ರಕ್ತವನ್ನು ಹೊರತೆಗೆದು ಶುದ್ಧೀಕರಣವಾದ ನಂತರ ಪುನಃ
ದೇಹದೊಳಕ್ಕೆ ರವಾನಿಸಲಾಗುತ್ತದೆ. ಇದು ಡಯಾಲಿಸಿಸ್ ರೋಗಿಗಳಿಗೆ ಜೀವಸ್ಥಾನವಿದ್ದಂತೆ. ಇದನ್ನು ಹಾಳಾಗದಂತೆ ಅತಿಜಾಗರೂಕತೆಯಿಂದ ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಇದಕ್ಕೆ ಸೋಂಕು ತಗಲುವ, ಇದರೊಳಗೆ ರಕ್ತ ಹೆಪ್ಪು ಗಟ್ಟುವ, ಒಡೆದು ರಕ್ತಸ್ರಾವವಾಗಿ ಮಾರಣಾಂತಿಕವಾಗುವ ಸಾಧ್ಯತೆ ಗಳು ಇವೆ.

ಇವುಗಳಾಗದಂತೆ ಎಚ್ಚರಿಗೆ ವಹಿಸುವುದು ಅತಿ ಮುಖ್ಯ. ಈ ಜಾಗ ದಲ್ಲಿ ಕೆಂಪಾದಲ್ಲಿ, ಗಾಯಗಳಾದಲ್ಲಿ, ಊತವುಂಟಾದಲ್ಲಿ ತಕ್ಷಣ
ವೈದ್ಯರನ್ನು ಕಾಣಬೇಕು. ಇದಿರುವ ಕೈಯನ್ನು ತಲೆ ಕೆಳಗೆ ಹಾಕಿ ಮಲಗಬಾರದು. ಇದರ ಮೇಲೆ ಯಾವುದೇ ಒತ್ತಡ ಬೀಳದಂತೆ ಎಚ್ಚರಿಕೆ ವಹಿಸ ಬೇಕು. ಇದರ ಮೇಲೆ ಬೆರಳಿಟ್ಟು ಕಂಪನಗಳ ಸ್ಪರ್ಶ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಿ
ಕೊಳ್ಳುತ್ತಿರಬೇಕು. ಕಂಪನ ಸ್ಪರ್ಶ ಇಲ್ಲದಿರುವುದು ರಕ್ತಹೆಪ್ಪುಗಟ್ಟಿಕೆಯನ್ನು ಸೂಚಿಸುವುದರಿಂದ ತಕ್ಷಣ ವೈದ್ಯರನ್ನು ಕಾಣಬೇಕು. ಕೈಯಿನ ವ್ಯಾಯಾಮ ಮಾಡುವುದರಿಂದ ಈ ಹುಸಿನಾಳ ವ್ಯವಸ್ಥೆ ವೃದ್ಧಿಗೊಂಡು ಡಯಾಲಿಸಿಸ್ ಮತ್ತಷ್ಟು
ಸುಗಮವಾಗುತ್ತದೆ.

ಸಕ್ಕರೆಕಾಯಿಲೆ ಮತ್ತು ಹೃದ್ರೋಗ: ಬಹುಪಾಲು ರೋಗಿಗಳಲ್ಲಿ ಸಕ್ಕರೆಕಾಯಿಲೆ ಮತ್ತು ಹೃದ್ರೋಗ ಗಳು ಜತೆಗೂಡಿ ರುವುದರಿಂದ ಅವುಗಳ ನಿಯಂತ್ರ ಣವೂ ಅತಿಮುಖ್ಯ. ಕೆಲವು ಸಕ್ಕರೆಕಾಯಿಲೆ ನಿಯಂತ್ರಕ ಮಾತ್ರೆಗಳನ್ನು ಇವರಿಗೆ ನೀಡಬಾ
ರದು. ಅಲ್ವಾವಧಿ ಕ್ರಿಯಾತ್ಮಕ ಇನ್ಸುಲಿನ್ ಇವರಿಗೆ ಹೆಚ್ಚು ಸಮಂಜಸ. ಬಹುಪಾಲು ಡಯಾಲಿಸಿಸ್ ರೋಗಿಗಳು ಅಂತಿಮವಾಗಿ ಹೃದ್ರೋಗದಿಂದ ಸಾವನ್ನಪ್ಪುವುದರಿಂದ ಹೃದಯ ರಕ್ಷಣೆ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಹೃದ್ರೋಗ ಮತ್ತು ಸಕ್ಕರೆ ಕಾಯಿಲೆ ತಜ್ಞರ ನಿರಂತರ ಸಲಹೆ ಅತಿಮುಖ್ಯ.

ಇನ್ನಿತರ ಔಷಧಗಳು: ಬಹುಪಾಲು ರೋಗಿಗಳು ರಕ್ತಕೊರತೆಯಿಂದ ನರಳುತ್ತಾರೆ. ಇದಕ್ಕಾಗಿ ಆಗಿಂದಾಗ್ಗೆ ಎರಿಥ್ರೋಪಾ ಯಿಟಿನ್ ಚುಚ್ಚು ಮದ್ದನ್ನು ನಿರಂತರವಾಗಿ ನೀಡಬೇಕು. ವಿಟಮಿನ್ ಡಿ೩ಯನ್ನು ಆಗಿಂದಾಗ್ಗೆ ನೀಡುತ್ತಿರಬೇಕು. ಇನ್ನಿತರ
ಔಷಧಗಳು ದೇಹದ ಮೇಲೆ ಪರಿಣಾಮ ಬೀರುವುದರಿಂದ ಅವುಗಳನ್ನು ನೀಡುವಾಗ ಅವುಗಳಿಂದುಂಟಾಗಬಹುದಾದ ಅಡ್ಡ ಪರಿಣಾಮಗಳನ್ನು ವೈದ್ಯರುಗಳು ಪರಿಗಣಿಸಬೇಕು. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಗಳನ್ನು ಸೇವಿಸಬಾರದು.

ಡಯಾಲಿಸಿಸ್‌ನಲ್ಲಿ ಮೇಲ್ಕಂಡ ಎಲ್ಲ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯವಶ್ಯಕ. ಹಾಗಾದಲ್ಲಿ ಮಾತ್ರ ರೋಗಿಗಳು ೫ರಿಂದ ೧೦ವರ್ಷಗಳ ಕಾಲ ಬದುಕುವ ಸಾಧ್ಯತೆ ಇರುತ್ತದೆ. ಇಲ್ಲದಿದ್ದಲ್ಲಿ ಜೀವಾವಧಿ ಕುಂಠಿತಗೊಳ್ಳುತ್ತದೆ.

ನುರಿತ ವೈದ್ಯರು ಮತ್ತು ತಾಂತ್ರಿಕ ತಜ್ಞರಿಲ್ಲದ ಹಲವಾರು ಡಯಾಲಿಸಿಸ್ ಕೇಂದ್ರಗಳು ಉಚಿತ ಸೇವೆಯ ಹೆಸರಿನಲ್ಲಿ ಪ್ರಾರಂಭ ವಾಗಿವೆ. ಸರಕಾರ ಪ್ರಾರಂಭ ಮಾಡಿರುವ ಕೇಂದ್ರಗಳಲ್ಲೂ ಇದೇ ಸಮಸ್ಯೆ ವ್ಯಾಪಕವಾಗಿದೆ. ಡಯಾಲಿಸಿಸ್ ಅವಶ್ಯಕ ವಿರುವ ರೋಗಿಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದ್ದು ತಗಲುವ ವೆಚ್ಚವೂ ಪ್ರತಿಮಾಹೆ ೧೨-೨೦ ಸಾವಿರ ರೂಗಳಾಗುತ್ತಿವೆ. ಪ್ರತಿಯೊಬ್ಬ ಶಾಶ್ವತ ರೋಗಿಗೆ ವಾರಕ್ಕೆ ಮೂರು ಬಾರಿಯಾದರೂ ಡಯಾಲಿಸಿಸ್ ಅವಶ್ಯಕ. ಇದರ ವೆಚ್ಚವನ್ನು ಸಾಮಾನ್ಯರು ಭರಿಸಲಾಗದೆ ಸರಕಾರಿ ಕೇಂದ್ರಗಳ ಮೊರೆಹೋಗುವುದು ಅನಿವಾರ್ಯವಾಗಿದ್ದು ಇದರಿಂದ ರೋಗಿಗಳ ಜೀವಾವಧಿ ಕುಂಠಿತ  ವಾಗುತ್ತಿದೆ.

ಡಯಾಲಿಸಿಸ್ ಅತ್ಯಂತ ಸೂಕ್ಷ್ಮ ಚಿಕಿತ್ಸಾ ವಿಧಾನವಾದುದರಿಂದ ಕೇವಲ ಯಂತ್ರಗಳನ್ನು ಒದಗಿಸಿ ನುರಿತ ತಜ್ಞ ವೈದ್ಯ ಸಿಬ್ಬಂದಿ ಯನ್ನು ಒದಗಿಸದಿದ್ದಲ್ಲಿ ಆಶಯ ಈಡೇರುವುದಿಲ್ಲ. ಈ ಬಗ್ಗೆ ಸರಕಾರ ತೀವ್ರಗಮನ ಹರಿಸಿ ಡಯಾಲಿಸಿಸ್ ಕೇಂದ್ರ ಗಳನ್ನು ನುರಿತ ವೈದ್ಯ ಸಿಬ್ಬಂದಿಯಿಂದ ಸುಸಜ್ಜಿತಗೊಳಿಸಲಿ ಎಂದು ಆಶಿಸೋಣ.