Friday, 20th September 2024

ಮೂರು ಸರ್ವಾಧಿಕಾರಿಗಳ ನಡುವಿನ ದಿಢೀರ್‌ ಸ್ನೇಹದ ಸಸ್ಪೆನ್ಸ್

ಸಂಗತ

ಡಾ.ವಿಜಯ್‌ ದರಡಾ

ಟಿಬೆಟ್‌ಗೆ ಕಿರುಕುಳ ನೀಡಲು ಜಗತ್ತಿನಲ್ಲೀಗ ಚೀನಾದ ಜತೆಗೆ ಇನ್ನೂ ಕೆಲ ಸ್ನೇಹಿತರು ಕೈಜೋಡಿಸುತ್ತಿದ್ದಾರೆ. ಭಾರತ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳ ಬಾರದು. ಚೀನಾ, ರಷ್ಯಾ ಮತ್ತು ಉತ್ತರ ಕೊರಿಯಾದ ಈ ಹಠಾತ್ ಸ್ನೇಹ ಕೇವಲ ಟಿಬೆಟ್‌ಗೆ ಸಂಬಂಧಿಸಿದ್ದಲ್ಲ. ಇದು ಸಾಕಷ್ಟು ದೂರಗಾಮಿ ಪರಿಣಾಮಗಳನ್ನು ಹೊಂದಿದೆ.

ಕಳೆದ ಕೆಲವೇ ದಿನಗಳಿಂದ ಈಚೆಗೆ ಜಾಗತಿಕ ರಾಜಕೀಯದಲ್ಲಿ ಅನೇಕ ಮಹತ್ವದ ಬದಲಾವಣೆಗಳು ಘಟಿಸುತ್ತಿವೆ. ಇವು ಎಷ್ಟು ಕ್ಷಿಪ್ರವಾಗಿ ಸಂಭವಿಸು ತ್ತಿವೆ ಎಂದರೆ, ವಿದೇಶಾಂಗ ತಜ್ಞರು ಕೂಡ ಈ ವೇಗ ನೋಡಿ ಚಕಿತರಾಗಿದ್ದಾರೆ. ಇವೆಲ್ಲ ಒಂದಕ್ಕೊಂದು ಸಂಬಂಧ ಹೊಂದಿರುವ ಮಹತ್ವದ ವಿದ್ಯಮಾನಗಳು. ಇವು ಈ ಬೆಳವಣಿಗೆಗಳಲ್ಲಿ ನೇರವಾಗಿ ಭಾಗಿಯಾಗಿರುವ ದೇಶಗಳ ಮೇಲೆ ಪ್ರಭಾವ ಬೀರುವುದರ ಜೊತೆಗೆ ಜಗತ್ತಿನ ನಾನಾ ದೇಶಗಳ ಮೇಲೂ ಪರಿಣಾಮ ಉಂಟುಮಾಡುತ್ತವೆ. ಹೀಗಾಗಿ ಈ ಘಟನೆಗಳನ್ನು ಸಮಗ್ರವಾಗಿಯೇ ನೋಡಬೇಕು. ಅದಕ್ಕಿಂತಲೂ ಹೆಚ್ಚಾಗಿ, ಈ ಬೆಳವಣಿಗೆಗಳು ಭಾರತದ ಮೇಲೆ ನೇರವಾದ ಪರಿಣಾಮ ಬೀರುತ್ತವೆ.

ನಾವು ಬೇಡ ಬೇಡ ಅಂದರೂ ಅವುಗಳ ಪರಿಣಾಮವನ್ನು ಎದುರಿಸಲೇಬೇಕು. ಹೀಗಾಗಿ ಇದು ಯಾವುದೋ ಬೇರೆ ದೇಶದ ತಲೆನೋವು, ನಮಗೆ ಸಂಬಂಧಿಸಿದ್ದಲ್ಲ ಎಂದು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಬನ್ನಿ, ಹಾಗಿದ್ದರೆ ಜಾಗತಿಕ ವೇದಿಕೆಯಲ್ಲಿ ಅಂತಹ ಮಹತ್ವದ ವಿದ್ಯಮಾನಗಳು ಏನು ನಡೆಯುತ್ತಿವೆ ಎಂಬುದನ್ನು ನೋಡೋಣ. ಒಂದೆಡೆ, ಜಗತ್ತಿನ ಮೂರು ಅಪಾಯಕಾರಿ ಸರ್ವಾಧಿಕಾರಿಗಳಾದ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಒಗ್ಗಟ್ಟು ಪ್ರದರ್ಶಿಸಲು ಆರಂಭಿಸಿದ್ದಾರೆ.

ಇನ್ನೊಂದೆಡೆ, ಅಮೆರಿಕವು ಭಾರತದ ಹೆಗಲಿನ ಮೇಲೆ ಬಂದೂಕು ಇರಿಸಿ ಗುಂಡು ಹಾರಿಸಲು ಶುರುಮಾಡಿದೆ. ತೆರೆ ಮರೆಯಲ್ಲಿ ಇನ್ನೂ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಈಗ ಈ ಎಲ್ಲ ಘಟನೆಗಳನ್ನೂ ಒಂದೊಂದಾಗಿ ಗಮನಿಸೋಣ. ಇತ್ತೀಚಿನ ವರ್ಷಗಳಲ್ಲಿ ಚೀನಾ ಸರಕಾರವು ಭಾರತದ ಅರುಣಾಚಲ ಪ್ರದೇಶದಲ್ಲಿ ರುವ ಅನೇಕ ಊರುಗಳ ಹೆಸರನ್ನು ಏಕಪಕ್ಷೀಯವಾಗಿ ತನಗೆ ತೋಚಿದಂತೆ ಬದಲಾವಣೆ ಮಾಡುತ್ತಿತ್ತು. ಅರುಣಾಚಲ ಪ್ರದೇಶ ಭಾರತದ ರಾಜ್ಯ ವಾದರೂ ಚೀನಾ ಇದು ತನ್ನದೇ ರಾಜ್ಯ ಎಂಬಂತೆ ವರ್ತಿಸುತ್ತಿತ್ತು. ಇದಕ್ಕೆ ಪ್ರತಿರೋಧವಾಗಿ ಭಾರತ ಒಂದಷ್ಟು ತೀಕ್ಷ್ಣ ಮಾತು ಗಳನ್ನು ಆಡುತ್ತಿತ್ತೇ ಹೊರತು ಅದಕ್ಕಿಂತ ಮುಂದೆ ಹೋಗಿ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿರಲಿಲ್ಲ.

ಆದರೆ, ಮೂರನೇ ಅವಧಿಗೆ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಟಿಬೆಟ್‌ನಲ್ಲಿರುವ ಮೂವತ್ತು ಊರುಗಳ ಹೆಸರನ್ನು ಬದಲಾವಣೆ
ಮಾಡುವ ಫಟಾಫಟ್ ನಿರ್ಧಾರವನ್ನು ಕೈಗೊಂಡಿದೆ. ಈ ನಿರ್ಧಾರವನ್ನು ಕೈಗೊಂಡ ರೀತಿಯನ್ನು ಗಮನಿ ಸಿದರೆ ಇದು ಸಾಕಷ್ಟು ಯೋಚನೆ ಮಾಡಿ ರೂಪಿಸಿದ ರಣತಂತ್ರವೇ ಆಗಿದೆ. ನೇರವಾಗಿ ಹೇಳು ವುದಾದರೆ, ಇದು ಚೀನಾಕ್ಕೆ ಭಾರತ ಎಸೆದ ಸವಾಲು. ಈ ನಡುವೆ ಅಮೆರಿಕದ ಹೌಸ್ ಆಫ್
ರೆಪ್ರೆಸೆಂಟೇಟಿವ್ಸ್‌ನಲ್ಲಿ ಒಂದು ಕಾಯಿದೆ ಬಹುಮತ ದಿಂದ ಅಂಗೀಕಾರಗೊಂಡಿದೆ. ಅದು ಚೀನಾ ಮತ್ತು ಟಿಬೆಟ್‌ನ ಸಂಘರ್ಷಕ್ಕೆ ಸಂಬಂಧಪಟ್ಟ ಕಾಯಿದೆ.

ಅದರ ಪರವಾಗಿ ೩೯೧ ಮತಗಳೂ, ವಿರುದ್ಧವಾಗಿ ಕೇವಲ ೨೬ ಮತಗಳೂ ಚಲಾವಣೆಯಾಗಿವೆ. ಅಮೆರಿಕದ ಸೆನೆಟ್ ಈ ಹಿಂದೆಯೇ ಈ ಕಾಯಿದೆ ಪಾಸು ಮಾಡಿತ್ತು. ಇಷ್ಟಕ್ಕೂ ಈ ಕಾಯಿದೆಯ ಪರಿಣಾಮ ಏನು? ಚೀನಾ ಸರಕಾರವು ಟಿಬೆಟ್‌ನ ಇತಿಹಾಸ, ಟಿಬೆಟಿಯನ್ನರು ಹಾಗೂ ಟಿಬೆಟ್‌ನ ಸಂಸ್ಥೆಗಳ ಬಗ್ಗೆ ಹರಡುತ್ತಿರುವ ಸುಳ್ಳುಗಳ ವಿರುದ್ಧ ಹೋರಾಡಲು ಅಮೆರಿಕದ ಸರಕಾರ ಹಣಕಾಸು ಒದಗಿಸುವುದಕ್ಕೆ ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಅಂದರೆ, ಇನ್ನುಮುಂದೆ ಟಿಬೆಟ್‌ನ ಸ್ವಾತಂತ್ರ್ಯ ಹೋರಾಟವನ್ನು ಅಮೆರಿಕ ಬೆಂಬಲಿಸುತ್ತದೆ.

ಟಿಬೆಟ್ ದೇಶವನ್ನು ವಶಪಡಿಸಿಕೊಂಡು, ಅದು ತನ್ನದೇ ಅವಿಭಾಜ್ಯ ಅಂಗ ಎಂದು ಹೇಳುತ್ತಿರುವ ಚೀನಾಕ್ಕೆ ಅಮೆರಿಕ ಎಸೆದಿರುವ ನೇರವಾದ ಸವಾಲು ಇದು. ಅಮೆರಿಕ ಅಲ್ಲಿಗೇ ನಿಂತಿಲ್ಲ. ಅದರ ಏಳು ಸದಸ್ಯರ ನಿಯೋಗವೊಂದು ಭಾರತಕ್ಕೆ ಬಂದು ಟಿಬೆಟ್‌ನ ಧರ್ಮಗುರು ದಲೈ ಲಾಮಾ ಅವರನ್ನು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಭೇಟಿ ಮಾಡಿದೆ. ‘ವನವಾಸದಲ್ಲಿರುವ ಟಿಬೆಟ್ ಸರ್ಕಾರ ಧರ್ಮಶಾಲಾದಿಂದ ಕೆಲಸ ಮಾಡುತ್ತದೆ. ೧೯೫೯ರಲ್ಲಿ ಚೀನಾ ಸರಕಾರವು ಟಿಬೆಟ್ ದೇಶವನ್ನು ವಶಪಡಿಸಿಕೊಂಡಾಗ ದಲೈ ಲಾಮಾ ಮತ್ತು ಅವರ ಸಂಗಡಿಗರು ಭಾರತಕ್ಕೆ ಓಡಿಬಂದು, ಇಲ್ಲಿನ ಸರಕಾರದ ಆಶ್ರಯ ಪಡೆದು, ಇಲ್ಲೇ ಟಿಬೆಟ್ ಸರಕಾರವನ್ನು ಸ್ಥಾಪನೆ ಮಾಡಿದ್ದರು.

ಅದು ಇವತ್ತಿಗೂ ಕೆಲಸ ಮಾಡುತ್ತಿದೆ. ಮೊನ್ನೆ ದಲೈಲಾಮಾ ಅವರನ್ನು ಭೇಟಿಯಾದ ಅಮೆರಿಕದ ನಿಯೋಗದಲ್ಲಿ ಆ ದೇಶದ ಸಂಸತ್ತಿನ ಮಾಜಿ ಸ್ಪೀಕರ್
ನ್ಯಾನ್ಸಿ ಪೆಲೋಸಿ ಅವರೂ ಇದ್ದರು. ನಿಯೋಗವು ದಲೈಲಾಮಾ ಬಳಿ ಟಿಬೆಟ್‌ನ ಸ್ವಾಯತ್ತೆ ಹಾಗೂ ಸಾರ್ವಭೌಮತೆಯ ವಿಷಯವನ್ನು ಪ್ರಸ್ತಾಪಿಸಿ,
ಅದಕ್ಕೆ ತನ್ನ ದೇಶದ ಸಂಪೂರ್ಣ ಬೆಂಬಲವಿದೆ ಎಂದು ಹೇಳಿತು. ಬಹುಶಃ ಭಾರತದ ನೆಲದಲ್ಲಿ ವಿದೇಶದ ಸರಕಾರವೊಂದು ಟಿಬೆಟ್‌ನ ವಿಷಯ
ವನ್ನು ಪ್ರಸ್ತಾಪಿಸಿದ್ದು ಇದೇ ಮೊದಲು.

ಇಲ್ಲಿ ಎರಡು ಸಂಗತಿಗಳನ್ನು ಗಮನಿಸಬೇಕು: ಅಮೆರಿಕದ ಈ ನಿಯೋಗ ಅಲ್ಲಿನ ಸರಕಾರದ ದೂತನಾಗಿ ಬಂದಿತ್ತೇ ಅಥವಾ ಖಾಸಗಿಯಾಗಿ ಭಾರತಕ್ಕೆ ಆಗಮಿಸಿತ್ತೇ? ಎರಡನೆಯದಾಗಿ, ಈ ನಿಯೋಗಕ್ಕೆ ಭಾರತದ ಬೆಂಬಲ ಇತ್ತೇ? ಸದ್ಯಕ್ಕೆ ಈ ಎರಡೂ ವಿಷಯಗಳ ಬಗ್ಗೆ ಅಮೆರಿಕ ಹಾಗೂ ಭಾರತ ಮೌನವಾಗಿವೆ. ಆದರೆ ಈ ಬೆಳವಣಿಗೆಯು ಚೀನಾವನ್ನು ನಖಶಿಖಾಂತ ಕಂಗೆಡಿಸಿರುವುದಂತೂ ನಿಜ. ಏಕೆಂದರೆ ಟಿಬೆಟ್‌ನ ವಿವಾದ ಅಂತಾರಾಷ್ಟ್ರೀಯ
ಮಟ್ಟದಲ್ಲಿ ಮೈಕೊಡವಿ ಎದ್ದು ಕುಳಿತರೆ ಚೀನಾಕ್ಕೆ ಸಾಕಷ್ಟು ಸಮಸ್ಯೆಯಾಗುತ್ತದೆ. ಭಾರತ ಮತ್ತು ಅಮೆರಿಕ್ಕೆ ಬೇಕಾಗಿರುವುದೂ ಅದೇ.

ಹಾಗಂತ ಚೀನಾಕ್ಕೂ ಇದು ಚೆನ್ನಾಗಿ ಗೊತ್ತಿದೆ. ಆದ್ದರಿಂದಲೇ ಅದು ಭಾರತ ಮತ್ತು ಅಮೆರಿಕದ ನಡುವೆ ಗಾಢವಾಗುತ್ತಿರುವ ಸಂಬಂಧಕ್ಕೆ ಸವಾಲು
ಎಸೆಯಲು ಇನ್ನೂ ಇಬ್ಬರು ಸರ್ವಾಧಿಕಾರಿಗಳ ಜೊತೆಗೆ ಕೈಜೋಡಿಸಿದೆ. ರಷ್ಯಾದ ಜೊತೆಗಿನ ಸಹ ಭಾಗಿತ್ವವನ್ನು ಚೀನಾ ನಿರಂತರವಾಗಿ ಹೆಚ್ಚಿಸಿ
ಕೊಳ್ಳುತ್ತಿದೆ. ಚೀನಾ ಮತ್ತು ರಷ್ಯಾ ನಡುವಿನ ಸಂಬಂಧ ಗಟ್ಟಿಯಾಗುತ್ತಿರುವುದು ಮತ್ತು ಆ ಎರಡೂ ದೇಶಗಳು ಪರಸ್ಪರ ಹತ್ತಿರವಾಗುತ್ತಿರುವುದು
ಯಾವುದೇ ದೃಷ್ಟಿಯಿಂದಲೂ ಭಾರತದ ಹಿತಾಸಕ್ತಿಗೆ ಪೂರಕವಾಗಿಲ್ಲ.

ಏಕೆಂದರೆ ಭಾರತ ಮತ್ತು ರಷ್ಯಾ ದೇಶಗಳು ಬಹಳ ಹಿಂದಿನಿಂದಲೂ ಬಹುದೊಡ್ಡ ರಕ್ಷಣಾ ಪಾಲುದಾರರು. ರಷ್ಯಾದಿಂದ ಸಾಕಷ್ಟು ಶಸ್ತ್ರಾಸ್ತ್ರಗಳನ್ನು  ಭಾರತ ಹಲವಾರು ದಶಕದಿಂದ ಆಮದು ಮಾಡಿಕೊಳ್ಳುತ್ತಾ ಬಂದಿದೆ. ಸೋವಿಯತ್ ಯೂನಿಯನ್ ಇದ್ದ ಕಾಲದಿಂದಲೂ ರಷ್ಯಾ ಜತೆಗೆ ಭಾರತ ಆಪ್ತವಾದ ಗೆಳೆತನ ಹೊಂದಿದೆ. ಈ ನಡುವೆ, ರಷ್ಯಾದೊಂದಿಗೆ ಕೈಜೋಡಿಸಿದ್ದಲ್ಲದೆ ಚೀನಾದ ಸರ್ವಾಧಿಕಾರಿ ಕ್ಸಿ ಜಿನ್‌ಪಿಂಗ್ ಅವರು ಉತ್ತರ ಕೊರಿಯಾ ಎಂಬ ಇನ್ನೊಂದು ಸರ್ವಾಧಿಕಾರಿ ದೇಶದ ಜತೆಗೂ ಸಂಬಂಧ ಕುದುರಿಸಿಕೊಂಡಿದ್ದಾರೆ.

ಇದು ಭಾರತಕ್ಕಿಂತ ಹೆಚ್ಚಾಗಿ ಅಮೆರಿಕಕ್ಕೆ ಕಳವಳ ಉಂಟುಮಾಡಿದೆ. ಏಕೆಂದರೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಯಾರೂ
ಊಹೆ ಮಾಡಲು ಸಾಧ್ಯವಿಲ್ಲದಂತಹ ತಿಕ್ಕಲು  ಮನುಷ್ಯ. ತಲೆ ಕೆಟ್ಟರೆ ಆತ ಏನು ಬೇಕಾದರೂ ಮಾಡಬಲ್ಲ. ಮೊದಲೇ ಅವನಿಗೆ ಅಮೆರಿಕವನ್ನು
ಕಂಡರೆ ಆಗುವುದಿಲ್ಲ. ಅಮೆರಿಕಕ್ಕೆ ತಕ್ಕ ಪಾಠ ಕಲಿಸು ತ್ತೇನೆಂದು ಬಹಳ ವರ್ಷಗಳಿಂದ ಕಿಮ್ ಗುಡುಗುತ್ತಿದ್ದಾನೆ. ಹಾಗಿರುವಾಗ ರಷ್ಯಾದ ಪುಟಿನ್ ಮತ್ತು
ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ನಡುವೆ ಸ್ನೇಹ ಬೆಳೆದರೆ ಮತ್ತು ಅದಕ್ಕೆ ಚೀನಾದ ಬೆಂಬಲವೂ ಲಭಿಸಿದರೆ ಅದು ಎಂಥಾ ಅಪಾಯಕಾರಿ ಯಾದುದು ಎಂಬುದನ್ನು ಕಲ್ಪನೆ ಮಾಡಿಕೊಳ್ಳಿ! ಯಾವುದೇ ದೇಶ ನಮ್ಮ ಮೇಲೆ ದಾಳಿ ನಡೆಸಿದರೆ ನಾವಿಬ್ಬರೂ ಪರಸ್ಪರರನ್ನು ಬೆಂಬಲಿಸಿ ಯುದ್ಧ ಮಾಡಬೇಕು ಎಂದು ರಷ್ಯಾ ಮತ್ತು ಉತ್ತರ ಕೊರಿಯಾ ಒಪ್ಪಂದ ಮಾಡಿಕೊಂಡಿವೆ. ಈ ಸಿನಿಮಾದ ನಿರ್ದೇಶಕ ಚೀನಾ.

ಸಹಜವಾಗಿಯೇ ಅದು ಎರಡೂ ದೇಶಗಳನ್ನು ತನ್ನ ದಾಳಗಳನ್ನಾಗಿ ಬಳಸಿಕೊಳ್ಳುತ್ತದೆ. ಸದ್ಯಕ್ಕೆ ರಷ್ಯಾ ದೇಶ ಜಾಗತಿಕ ಮಟ್ಟದಲ್ಲಿ ಮೂಲೆಗುಂಪಾಗಿದೆ.
ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ವನ್ನು ಬಹುತೇಕ ದೇಶಗಳು ವಿರೋಧಿಸುತ್ತಿವೆ. ಇಂತಹ ಸಂದರ್ಭದಲ್ಲಿ ರಷ್ಯಾಕ್ಕೆ ಚೀನಾ ಹತ್ತಿರ
ವಾಗುತ್ತಿರುವುದು ಭಾರತಕ್ಕೆ ಎಷ್ಟು ಕಳವಳಕಾರಿ ಸಂಗತಿಯೋ ಅಷ್ಟೇ ಕಳವಳಕಾರಿ ಸಂಗತಿ ಅಮೆರಿಕಕ್ಕೂ ಕೂಡ. ಆದರೆ ಸದ್ಯಕ್ಕಂತೂ ಭಾರತವು
ರಷ್ಯಾವನ್ನೇ ನಂಬಬೇಕು. ಏಕೆಂದರೆ ಭಾರತದ ಜೊತೆಗೆ ರಷ್ಯಾ ಪ್ರತಿಯೊಂದು ಕ್ಷೇತ್ರದಲ್ಲೂ ಸ್ನೇಹವನ್ನು ಪ್ರದರ್ಶಿಸುತ್ತಾ ಬಂದಿದೆ.

ರಷ್ಯಾದೊಂದಿಗೆ ಚೀನಾ ಸ್ನೇಹ ಸಂಪಾದನೆ ಮಾಡಿಕೊಂಡ ತಕ್ಷಣ ಭಾರತ ಮತ್ತು ರಷ್ಯಾದ ಸ್ನೇಹ ಮುರಿದುಬೀಳಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಭಾರತವೀಗ ಯಾವುದೇ ದೇಶದ ಹಿಂಬಾಲಕನಲ್ಲ. ಇದು ತನ್ನದೇ ಆದ ದೂರ ದೃಷ್ಟಿಯನ್ನು ಇರಿಸಿಕೊಂಡು ಜಾಗತಿಕ ವೇದಿಕೆಯಲ್ಲಿ ಮುನ್ನಡೆಯುತ್ತಿದೆ. ಭಾರತದ ಮಾತನ್ನು ಈಗ ಜಗತ್ತಿನ ಎಲ್ಲಾ ದೇಶಗಳೂ ಕಿವಿಗೊಟ್ಟು ಕೇಳುತ್ತವೆ. ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ನಿರ್ಧಾರ ಗಳನ್ನು ಕೈಗೊಳ್ಳು ವಾಗ ಭಾರತದ ಅಭಿಪ್ರಾಯಕ್ಕೆ ಸಾಕಷ್ಟು ಮಹತ್ವ ಸಿಗುತ್ತಿದೆ. ನಾವೀಗ ಬಹಳ ದೊಡ್ಡ ಆರ್ಥಿಕ ಶಕ್ತಿ. ಅಷ್ಟೇಕೆ, ಜಾಗತಿಕ ಮಟ್ಟದಲ್ಲಿ ನಾವು ಬಹಳ ದೊಡ್ಡ ಗ್ರಾಹಕರೂ ಹೌದು. ಹೀಗಾಗಿ ಭಾರತವನ್ನು ನೇರವಾಗಿ ಎದುರುಹಾಕಿಕೊಳ್ಳಲು ಯಾವ ದೇಶವೂ ಬಯಸುವುದಿಲ್ಲ. ಚೀನಾ ಎಷ್ಟು  ದೇಶಗಳ ಜತೆಗೆ ಕೈಜೋಡಿಸಿದರೂ ಟಿಬೆಟ್‌ನ ವಿಷಯ ಈಗಾಗಲೇ ಜಾಗತಿಕ ವಿವಾದವಾಗುವ ಸ್ವರೂಪದಲ್ಲಿ ಎದ್ದು ಕುಳಿತಿದ್ದಂತೂ ಆಗಿದೆ. ಇದು ಇನ್ನೂ ಕೆಲ ಕಾಲ ಪ್ರತಿಧ್ವನಿಸುತ್ತಲೇ ಇರುತ್ತದೆ, ಚೀನಾಕ್ಕೆ ನಿದ್ದೆಯಿಲ್ಲದ ರಾತ್ರಿಗಳನ್ನು ಕರುಣಿಸುತ್ತಲೇ ಇರುತ್ತದೆ.

ಹಾಗಂತ ಟಿಬೆಟ್‌ಗೆ ಸದ್ಯೋಭವಿಷ್ಯದಲ್ಲಿ ಸ್ವಾಯತ್ತೆ ಅಥವಾ ಸ್ವಾತಂತ್ರ್ಯ ಲಭಿಸಿಬಿಡುತ್ತದೆ ಎಂದೇನೂ ಅಲ್ಲ. ಅದು ಚೀನಾದ ಭಾಗವಾಗಿಯೇ
ಮುಂದುವರೆಯುತ್ತದೆ, ಆದರೆ ಚೀನಾದ ಕುತ್ತಿಗೆಯಲ್ಲಿನ ನೋವಾಗಿ ಉಳಿಯುತ್ತದೆ. ಈ ವಿವಾದದ ಲಾಭ ಪಡೆದು ನಮ್ಮ ದೇಶದ ಗಡಿಯಲ್ಲಿ ಚೀನಾ
ನಿರಂತರವಾಗಿ ಉಂಟುಮಾಡುತ್ತಿರುವ ಉಪದ್ವ್ಯಾಪಗಳನ್ನು ಮಟ್ಟಹಾಕಲು ಭಾರತಕ್ಕೆ ಸಾಧ್ಯವಾಗುತ್ತದೆಯೇ? ಇದು ಕುತೂಹಲದ ವಿಷಯ.

ಭಾರತವು ಟಿಬೆಟ್ ವಿಷಯದಲ್ಲಿ ದೃಢವಾದ ನಿಲುವಿನೊಂದಿಗೆ ನಿಲ್ಲುವುದು ಭಾರತದ ಹಿತಾಸಕ್ತಿಗೂ ಒಳ್ಳೆಯದು, ಹಾಗೆಯೇ ಟಿಬೆಟಿಯನ್ನರ
ಹಿತಾಸಕ್ತಿಗೂ ಒಳ್ಳೆಯದು. ಸರ್ವಾಧಿಕಾರಿ ಎಷ್ಟೇ ಬಲಿಷ್ಠನಾಗಿದ್ದರೂ ಒಂದಲ್ಲಾ ಒಂದು ದಿನ ಅವನ ಅವಸಾನ ನಿಶ್ಚಿತ ಎಂಬುದು ಜಗತ್ತಿಗೆ ಗೊತ್ತಿದೆ.
ಸಾಕಷ್ಟು ದೇಶಗಳಲ್ಲಿ ಇದು ಈಗಾಗಲೇ ಸಾಬೀತಾ ಗಿದೆ. ನಿಜ, ಅದಕ್ಕೆ ಒಂದಷ್ಟು ಸಮಯ ಹಿಡಿಯುತ್ತದೆ. ಆ ಸಮಯಕ್ಕಾಗಿ ಕಾಯೋಣ!

(ಲೇಖಕರು : ಹಿರಿಯ ಪತ್ರಿಕೋದ್ಯಮಿ
ಹಾಗೂ ಮಾಜಿ ರಾಜ್ಯಸಭಾ ಸದಸ್ಯ)