Wednesday, 18th September 2024

ನರ ಮತ್ತು ನರವಾನರಗಳ ರಕ್ತ ವರ್ಗೀಕರಣ

ಹಿಂದಿರುಗಿ ನೋಡಿದಾಗ

ಆಧುನಿಕ ವೈದ್ಯ ವಿಜ್ಞಾನವು, ಮನುಷ್ಯನ ತಲೆಯೊಂದನ್ನು ಬಿಟ್ಟು ಉಳಿದ ಎಲ್ಲ ಅಂಗಗಳ ಬದಲಿಜೋಡಣೆಯನ್ನು ಯಶಸ್ವಿಯಾಗಿ ಮಾಡುತ್ತಿದೆ. ವೈದ್ಯ ವಿಜ್ಞಾನಕ್ಕೇ ತಿರುವು ಕೊಟ್ಟ ಹಲವು ಮೈಲಿಗಲ್ಲುಗಳ ಸಂಶೋಧನೆಗಳಿಂದ ಇದು ಸಾಧ್ಯವಾಗಿದೆ.

ಅಂತಹ ಮಹಾನ್ ಸಂಶೋಧನೆಗಳಲ್ಲಿ ಮುಖ್ಯವಾದದ್ದು ಸುರಕ್ಷಿತ ರಕ್ತ ಪೂರಣ (ಸೇಫ್ ಬ್ಲಡ್ ಟ್ರಾನ್ಸ್ ಸ್ಲೇಶನ್). ಈ ಸಂಶೋಧನೆಯನ್ನು ಮಾಡಿದ ವನು ಆಸ್ಟ್ರಿಯನ್-ಅಮೆರಿಕನ್ ಜೀವಶಾಸ್ತ್ರಜ್ಞ, ವೈದ್ಯ ಹಾಗೂ ರೋಗರಕ್ಷಣಾ ವಿಜ್ಞಾನಿ ಯಾಗಿದ್ದ ಕಾರ್ಲ್ ಲ್ಯಾಂಡ್‌ಸ್ಟೀನರ್ (೧೮೬೮-೧೯೪೩).
ಲ್ಯಾಂಡ್‌ಸ್ಟೀನರನಿಗಿಂತ ಹಿಂದೆ. ಮೊದಲು ಪ್ರಾಣಿಗಳ ರಕ್ತವನ್ನು ಮನುಷ್ಯರಿಗೆ ಕೊಡುವ ಪ್ರಯತ್ನವನ್ನು ವಿಫಲರಾಗಿದ್ದರು. ರಕ್ತದ ಬದಲು ಹಸುವಿನ, ಮೇಕೆಯ ಹಾಗೂ ಮನುಷ್ಯನ ಹಾಲನ್ನು ರಕ್ತನಾಳದೊಳಗೆ ಚುಚ್ಚಿ ನೋಡಿದರು.

ಇದರಿಂದ ಹಲವು ಅನಾಹುತಗಳಾದವು. ಮನುಷ್ಯರ ರಕ್ತವನ್ನು ಮನುಷ್ಯರಿಗೆ ಕೊಟ್ಟು ಜೇಮ್ಸ್ ಬ್ಲಂಡೆಲ್ ಭಾಗಶಃ ಯಶಸ್ವಿಯಾಗಿದ್ದ. ಆದರೆ ಸಾಕಷ್ಟು ಜನರು ಮೂತ್ರಪಿಂಡಗಳು ವಿ-ಲವಾಗಿ ಏಕೆ ಸಾಯುತ್ತಾರೆ ಎನ್ನುವುದಕ್ಕೆ ಉತ್ತರವು ದೊರೆತಿರಲಿಲ್ಲ. ಇದಕ್ಕೆ ಉತ್ತರವನ್ನು ಲ್ಯಾಂಡ್‌ಸ್ಟೀನರ್ ಅತ್ಯಂತ ಸರಳ ಪ್ರಯೋಗವೊಂದರಿಂದ ಕಂಡುಕೊಂಡ. ಅವನು ಮಾಡಿದ ಪ್ರಯೋಗವು ಸರಳವಾಗಿತ್ತು. ಲ್ಯಾಂಡ್‌ಸ್ಟೀನರ್ ಮೊದಲು ತನ್ನ ರಕ್ತದ ಮಾದರಿ ಯನ್ನು ಸಂಗ್ರಹಿಸಿದ. ಆನಂತರ ತನ್ನ ಐವರು ಸಹುದ್ಯೋಗಿಗಳನ್ನು ಕರೆದು ಅವರ ರಕ್ತವನ್ನು ಸಂಗ್ರಹಿಸಿದ. ಯಾವ ರಕ್ತ ಯಾರದ್ದು ಎಂದು ನಿಖರವಾಗಿ ಗುರುತಿಸಿದ.

ಪ್ರತಿಯೊಬ್ಬರ ರಕ್ತವನ್ನು ಸ್ವಲ್ಪಹೊತ್ತು ಒಂದು ಕಡೆ ಇಟ್ಟ. ಕೆಂಪುರಕ್ತಕಣಗಳೆಲ್ಲ ಪ್ರಣಾಳದ ಕೆಳಗೆ ಸಂಗ್ರಹವಾಯಿತು. ಕೆಂಪು ರಕ್ತಕಣಗಳ ಮೇಲೆ ರಕ್ತರಸವು (ಸೀರಮ್) ಪ್ರತ್ಯೇಕಗೊಂಡಿತು. ನಂತರ ಅವೆರಡನ್ನೂ ಬಹಳ ಎಚ್ಚರಿಕೆಯಿಂದ ಪ್ರತ್ಯೇಕಿಸಿದ. ಐದು ಜನರ ರಕ್ತರಸವನ್ನು ಐದು ಗಾಜಿನ ತಟ್ಟೆಯಲ್ಲಿಟ್ಟ. ಒಬ್ಬ ವ್ಯಕ್ತಿಯ ಕೆಂಪುರಕ್ತಗಳನ್ನು ತೆಗೆದುಕೊಂಡ. ಈ ಕೆಂಪು ರಕ್ತಕಣಗಳನ್ನು ಸ್ವಲ್ಪ ಸ್ವಲ್ಪವೇ ಐದೂ ಜನರ ರಕ್ತರಸದೊಡನೆ ಬೆರೆಸಿದ. ಹೀಗೆಯೇ ಪ್ರತಿಯೊಬ್ಬರ ಕೆಂಪು ರಕ್ತ ಕಣಗಳನ್ನು ಉಳಿದವರ ಐದೈದು ತಟ್ಟೆಗಳಲ್ಲಿದ್ದ ರಕ್ತರಸದಲ್ಲಿ ಬೆರೆಸಿದ. ೬೫=೩೦ ಮಾದರಿಗಳು ಸಿದ್ಧವಾದವು. ಸ್ವಲ್ಪ ಹೊತ್ತು ಬಿಟ್ಟ. ನಂತರ ಗಮನಿಸಿದ.

ಕೆಲವು ತಟ್ಟೆಗಳಲ್ಲಿದ್ದ ಕೆಂಪುರಕ್ತಕಣಗಳು ಉಂಡೆಗಟ್ಟಿದ್ದವು. ಕೆಂಪು ರಕ್ತ ಕಣಗಳು ಉಂಡೆಗಟ್ಟಿ ರಕ್ತರಸದಿಂದ ಬೇರ್ಪಟ್ಟು ಮೂಲೆಯನ್ನು ಸೇರಿದ್ದವು. ಹಲವು ತಟ್ಟೆಗಳಲ್ಲಿದ್ದ ಕೆಂಪುರಕ್ತ ಕಣಗಳು ಉಂಡೆಗಟ್ಟದೆ ರಕ್ತರಸದೊಡನೆ ಸರಿ ಸಮನಾಗಿ ಬೆರೆತು, ರಕ್ತದ ಹಾಗೆಯೇ ಕಾಣುತ್ತಿದ್ದವು. ಲ್ಯಾಂಡ್‌ಸ್ಟೀನರ್ ಇದನ್ನು ಸೂಕ್ಷ್ಮವಾಗಿ ಗಮನಿಸಿದ. ಯಾವ ತಟ್ಟೆಯಲ್ಲಿ ರಕ್ತವು ಉಂಡೆಗಟ್ಟಿದೆಯೋ, ಅವರ ರಕ್ತಗಳು ವಿಷಮ ಪರಿಣಾಮಗಳನ್ನು ಉಂಟು ಮಾಡುತ್ತವೆ.
ಯಾವ ತಟ್ಟೆಯಲ್ಲಿ ರಕ್ತವು ಉಂಡೆಗಟ್ಟಿಲ್ಲವೋ, ಅವು ಪರಸ್ಪರ ಪೂರಕವಾಗಬಲ್ಲವು ಎಂಬ ತೀರ್ಮಾನಕ್ಕೆ ಬಂದ.

ಈ ಫಲಿತಾಂಶವನ್ನು ಬಹಳ ಎಚ್ಚರಿಕೆಯಿಂದ ಪಟ್ಟಿ ಮಾಡಿದ. ಅವುಗಳಲ್ಲಿ ಮೂರು ಗುಂಪುಗಳಿರುವುದನ್ನು ಗಮನಿಸಿದ. ಅವುಗಳಿಗೆ ಎ ಬಿ ಮತ್ತು ಸಿ ಎಂದು ವರ್ಗೀಕರಣ ಮಾಡಿದ. ನಂತರ ಸಿ ಗುಂಪನ್ನು ಒ ಎಂದು ಮರು ನಾಮಕರಣವನ್ನು ಮಾಡಿದ. ಏಕೆಂದರೆ ಒ ಎನ್ನುವುದು ಶೂನ್ಯವನ್ನು ಸೂಚಿಸುತ್ತದೆ ಹಾಗೂ ಎ ಅಲ್ಲದ ಬಿ ಅಲ್ಲದ ಎಂಬ ಅರ್ಥವನ್ನೂ ಹೊಮ್ಮಿಸುತ್ತದೆ. ಈ ಪ್ರಯೋಗವು ೧೯೦೧ರಲ್ಲಿ ನಡೆಯಿತು.

೧೯೦೨. ಆಲ್ರೆಡ್ ವಾನ್ ಡೆಕಾಸ್ಟೆಲ್ಲೊ ಮತ್ತು ಅಡ್ರಿಯಾನೋ ಸ್ಟುರ್ಲಿ ಎಂಬ ಇಬ್ಬರು ಲ್ಯಾಂಡ್‌ಸ್ಟೀನರ್ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿ ಗಳು. ಇವರು ಕೆಲವು ಕೆಂಪುರಕ್ತಕಣಗಳ ಮೇಲೆ ಎ ಮತ್ತು ಬಿ ಉಂಡೆಜನಕಗಳಿರುವುದನ್ನು ಗಮನಿಸಿದರು. ಎಬಿ ಎಂಬ ನಾಲ್ಕನೆಯ ಗುಂಪು ಇರುವು ದನ್ನು ಪತ್ತೆ ಹಚ್ಚಿದರು. ಕೊನೆಗೆ ಮನುಷ್ಯರ ರಕ್ತದ ಎಬಿಒ ರಕ್ತವರ್ಗೀಕರಣವನ್ನು ಪ್ರಕಟಿಸಿದರು. ರಕ್ತವನ್ನು ಟೈಪ್-ಎ, ಟೈಪ್-ಬಿ, ಟೈಪ್-ಎಬಿ ಮತ್ತು ಟೈಪ್-ಒ ಎಂದು ವರ್ಗೀಕರಿಸಿದರು. ಕೆಂಪುರಕ್ತಕಣಗಳ ಒಡಲಿನ ಮೇಲೆ ಒಂದು ವಿಶೇಷ ರಾಸಾಯನಿಕವಿರುತ್ತದೆ. ಅದನ್ನು ಅಂಟುಜನಕ (ಆಂಟಿಜೆನ್) ಎನ್ನುತ್ತಾರೆ. ಹಾಗೆಯೇ ರಕ್ತರಸದಲ್ಲಿ ಒಂದು ವಿಶೇಷ ರಾಸಾಯನಿಕವಿರುತ್ತದೆ. ಅದನ್ನು ಅಂಟುಕಾಯ (ಆಂಟಿಬಾಡಿ) ಎನ್ನುತ್ತಾರೆ.

ಟೈಪ್-ಎ ಗುಂಪಿನ ಕೆಂಪು ರಕ್ತ ಕಣಗಳ ಮೇಲೆ ಎ-ಅಂಟುಜನಕ ಇರುತ್ತದೆ. ರಕ್ತರಸದಲ್ಲಿ ಬಿ-ಅಂಟುಕಾಯವಿರುತ್ತದೆ. ಟೈಪ್-ಬಿ ಗುಂಪಿನ ಕೆಂಪು ರಕ್ತ ಕಣಗಳ ಮೇಲೆ ಬಿ-ಅಂಟುಜನಕವಿರುತ್ತದೆ. ರಕ್ತದಲ್ಲಿ ಎ-ಅಂಟುಕಾಯವಿರುತ್ತದೆ. ಟೈಪ್-ಎಬಿ ಗುಂಪಿನ ಕೆಂಪು ರಕ್ತ ಕಣಗಳ ಮೇಲೆ ಎ-ಅಂಟುಜನಕ ಮತ್ತು ಬಿ-ಅಂಟುಜನಕವಿರುತ್ತದೆ. ಆದರೆ ರಕ್ತರಸದಲ್ಲಿ ಎ-ಅಂಟುಕಾಯ ಹಾಗೂ ಬಿ-ಅಂಟುಕಾಯಗಳು ಇರುವುದಿಲ್ಲ. ಈ ಗುಂಪಿನವರು ಯಾರಿಗೂ ರಕ್ತದಾನವನ್ನು ಮಾಡಲಾರರು. ಆದರೆ ಎಲ್ಲರ ರಕ್ತವನ್ನು ಸ್ವೀಕರಿಸಬಲ್ಲರು.

ಟೈಪ್-ಒ ಗುಂಪಿನ ಮೇಲೆ ಎ-ಅಂಟುಜನಕ ಹಾಗೂ ಬಿ-ಅಂಟುಜನಕಗಳು ಇರುವುದಿಲ್ಲ. ಆದರೆ ರಕ್ತರಸದಲ್ಲಿ ಎ-ಅಂಟುಕಾಯ ಮತ್ತು ಬಿ-ಅಂಟು ಕಾಯಗಳಿರುತ್ತವೆ. ಹಾಗಾಗಿ ಈ ಗುಂಪಿನವರು ಯಾರಿಗೆ ಬೇಕಾದರೂ ರಕ್ತವನ್ನು ದಾನ ಮಾಡಬಹುದು. ೧೯೨೭ರಲ್ಲಿ ಲ್ಯಾಂಡ್ ಸ್ಟೀನರ್ ಅಮೆರಿಕದ ಅಲೆಗ್ಸಾಂಡರ್ ವೀನರ್ (೧೯೦೭-೧೯೭೬) ಅವರ ಜೊತೆಗೂಡಿ, ಆರ್ ಎಚ್ -ವರ್ಗೀಕರಣವನ್ನು ಪತ್ತೆ ಹಚ್ಚಿದರು. ಇದಾದ ನಂತರ ಸುಮಾರು ೨೦ಕ್ಕೂ ಹೆಚ್ಚು ವರ್ಗೀಕರಣಗಳು ರೂಪುಗೊಂಡವು. ಆದರೆ ಸುರಕ್ಷಿತ ರಕ್ತಪೂರಣವನ್ನು ನಡೆಸಲು ಎಬಿಒ ಮತ್ತು ಆರ್ ಎಚ್ ವರ್ಗೀಕರಣಗಳು ಸಾಕಾದವು.

ಕಾರ್ಲ್ ಲ್ಯಾಂಡ್ ಸ್ಟೀನರ್ ಮಾಡಿದ ಈ ಅಧ್ಯಯನದ ಕಾರಣ, ರಕ್ತಪೂರಣವು ಸುರಕ್ಷಿತವಾಯಿತು. ೧೯೩೦ರ ವೈದ್ಯಕೀಯ ನೊಬೆಲ್ ಪಾರಿತೋಷಕವು ಕಾರ್ಲ್ ಲ್ಯಾಂಡ್ ಸ್ಟೀನರ್ ಅವರಿಗೆ ದೊರೆಯಿತು. ಮಂಗನಿಂದ ಮಾನವನೆಡೆಗೆ: ನಮ್ಮ ಮಾನವ ಜನಾಂಗದ ಇತಿಹಾಸವು ಎಷ್ಟು ಪ್ರಾಚೀನವಾದದ್ದೋ,
ಅದಕ್ಕಿಂತಲೂ ಪ್ರಾಚೀನವಾದದ್ದು ನಮ್ಮ ರಕ್ತದ, ರಕ್ತ ವರ್ಗೀಕರಣದ ಇತಿಹಾಸ. ಮಾನವ ವಿಕಾಸ ಪಥದಲ್ಲಿ ಮನುಷ್ಯನಿಗೆ ಅತ್ಯಂತ ಹತ್ತಿರದ ಸಂಬಂಧಿಗಳು ಎಂದರೆ ನರವಾನರಗಳು (ದಿ ಗ್ರೇಟ್ ಏಪ್ಸ್). ಅವುಗಳ ಒಡಲಿನಲ್ಲಿರುವ ರಕ್ತದಗುಂಪುಗಳೇ ನಮ್ಮ ಒಡಲಿಗೂ ಹರಿದುಬಂದಿವೆ!

(ನೆನಪಿಡೋಣ: ನಮ್ಮ ಮತ್ತು ಚಿಂಪಾಂಜ಼ಿಯ ನಡುವೆ ೯೮.೨ರಷ್ಟು ವಂಶವಾಶಿಗಳು (ಜೀನ್ಸ್) ಏಕರೂಪವಾಗಿವೆ ಎನ್ನುವ ವಿಚಾರ) ಈಗ ನಾಲ್ಕು
ನರವಾನರಗಳು ಬದುಕಿವೆ. ಅವೇ ಚಿಂಪಾಂಜಿ, ಗೊರಿಲ್ಲ, ಒರಾಂಗುಟಾನ್ ಮತ್ತು ಗಿಬ್ಬನ್. ಈ ನಾಲ್ಕು ನರವಾನಗಳ ರಕ್ತದ ಗುಂಪುಗಳ ವರ್ಗೀಕರಣ ವನ್ನು ಈ ಕೆಳಕಂಡಂತೆ ಮಾಡಬಹುದು. ಮನುಷ್ಯರ ರಕ್ತದ ಗುಂಪನ್ನು ವಂಶವಾಹಿಗಳು ನಿರ್ಧರಿಸುತ್ತವೆ. ಎಬಿಒ ವರ್ಗೀಕರಣಕ್ಕೆ ಅಗತ್ಯವಾದ ವಂಶ ವಾಹಿಗಳು ೯ನೆಯ ವರ್ಣತಂತುವಿನ ಮೇಲೆ ಇವೆ (೯q೩೪.೧). ಇವನ್ನು ಎಬಿಒ ಗ್ಲೈಕೋಸಿಲ್ ಟ್ರಾನ್ಸ್-ರೇಸ್ ಎನ್ನುವರು. ವಿಜ್ಞಾನವು ಮುಂದು ವರೆದ ಹಾಗೆ ರಕ್ತಗುಂಪುಗಳ ವರ್ಗೀಕರಣ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆಗಳು ನಡೆದವು.

ಈ ಪಟ್ಟಿಯನ್ನು ಗಮನಿಸಿದರೆ, ಚಿಂಪಾಂಜ಼ಿಯಲ್ಲಿ ಎ ಮತ್ತು ಒ ಗುಂಪುಗಳು ಅಽಕವಾಗಿ ಕಂಡುಬರುತ್ತವೆ. ಗೊರಿಲ್ಲಾಗಳಲ್ಲಿ ಬಿ ಗುಂಪು ಅಧಿಕವಾಗಿ ಕಂಡುಬರುತ್ತದೆ. ಒರಾಂಗುಟನ್ ಮತ್ತು ಗಿಬ್ಬನ್‌ಗಳಲ್ಲಿ ಎ ಮತ್ತು ಬಿ ಗುಂಪುಗಳೆರಡೂ ಕಂಡುಬರುತ್ತವೆ. ನರವಾನಗಳ ಈ ಎಬಿಒ ವರ್ಗೀಕರಣವು ಜೀವವಿಕಾಸದಲ್ಲಿ ಮನುಷ್ಯರಿಗೂ ಹರಿದು ಬಂದಿರುವ ಕಾರಣ, ಇಂದು ಜಗತ್ತಿನಾದ್ಯಂತ ಹರಡಿರುವ ಎಲ್ಲ ಮನುಷ್ಯರ ರಕ್ತವನ್ನು ಎಬಿಒ ವಿಧಾನದಲ್ಲಿ
ವರ್ಗೀಕರಿಸಬಹುದು.

ಜಗತ್ತಿನ ಏಳು ಖಂಡಗಳಲ್ಲಿ ಹರಡಿರುವ, ಮನುಷ್ಯರ ರಕ್ತದ ಗುಂಪುಗಳ ವಿತರಣೆಯು ಹೇಗೆ ಇಂದಿನ ಸ್ವರೂಪವನ್ನು ಪಡೆಯಿತು ಎನ್ನುವುದರ ಬಗ್ಗೆ ವಿಜ್ಞಾನಿಗಳಿಗೆ ಕುತೂಹಲವಿದೆ. ಈ ವರ್ಗೀಕರಣದ ವಿಕಾಸವು ಸಾವಿರ ಅಥವಾ ಲಕ್ಷ ವರ್ಷಗಳಲ್ಲಿ ಘಟಿಸಲಿಲ್ಲ. ಬದಲಿಗೆ ಮಿಲಿಯಗಟ್ಟಲೆ ವರ್ಷ ಗಳನ್ನು ತೆಗೆದುಕೊಂಡಿದೆ. ಅದನ್ನು ವಿವರಿಸಲು ವಿಜ್ಞಾನಿಗಳು ಮೂರು ಸಿದ್ಧಾಂತಗಳನ್ನು (ಹೈಪಾಥೆಸಿಸ್) ಮಂಡಿಸಿರುವರು.

ಮೊದಲನೆಯ ಸಿದ್ಧಾಂತವು ಜನಾಂಗಗಳ ಪ್ರಾಥಮಿಕ ಸಿದ್ಧಾಂತವನ್ನು (ಪ್ರೈಮರಿ ರೇಸಸ್ ಹೈಪಾಥೆಸಿಸ್) ಆಧರಿಸಿದೆ. ಈ ಸಿದ್ಧಾಂತದ ಅನ್ವಯ ಯೂರೋಪಿನಲ್ಲಿದ್ದ ಜನಾಂಗಗಳಲ್ಲಿ ಎ ರಕ್ತದ ಗುಂಪು ಪ್ರಧಾನವಾಗಿ ಇತ್ತು. ಏಷ್ಯಾದಲ್ಲಿದ್ದ ಜನಾಂಗಗಳಲ್ಲಿ ಬಿ ರಕ್ತದ ಗುಂಪು ಪ್ರಧಾನವಾಗಿ ಇತ್ತು
ಹಾಗೂ ದಕ್ಷಿಣ ಅಮೆರಿಕದ ವಾಸಿಗಳಲ್ಲಿ ಒ ಗುಂಪು ಪ್ರಧಾನವಾಗಿ ಇತ್ತು ಎನ್ನುವುದು ಈ ಕಲ್ಪನೆಯ ಸಾರಾಂಶ. ಭೂಖಂಡದ ಈ ಮೂರೂ ಭಾಗಗಳ ಲ್ಲಿದ್ದ ಜನಾಂಗಗಳು ಕಾಲಕ್ರಮೇಣ ಒಂದರೊಡನೆ ಮತ್ತೊಂದು ಬೆರೆತು ಇಂದಿನ ಎಬಿಒ ಸ್ವರೂಪವನ್ನು ಪಡೆಯಿತು ಎನ್ನುತ್ತದೆ ಈ ಕಲ್ಪನೆ. ಈಗ ಇದು ಕೇವಲ ಕಲ್ಪನೆ, ಇದರಲ್ಲಿ ವಾಸ್ತವಿಕತೆಯಿಲ್ಲ ಎನ್ನುವ ಸತ್ಯ ಈಗ ತಿಳಿದುಬಂದಿದೆ.

ಈ ಸಿದ್ಧಾಂತದ ಅನ್ವಯ, ಯೂರೋಪಿನಲ್ಲಿ ಇದ್ದವರೆಲ್ಲ ಮೂಲತಃ ಎ ಗುಂಪಿನವರಾಗಬೇಕಾಗಿತ್ತು. ಆದರೆ ಸೈಬೀರಿಯದ ಪ್ರದೇಶದದಲ್ಲಿ ಹಾಗೂ
ಸ್ವಿಜ಼ರ್‌ಲ್ಯಾಂಡಿನ ಪ್ರದೇಶದಲ್ಲಿ ವಾಸಿಸುವ ಜನರ ರಕ್ತದ ಗುಂಪು ಒ ಆಗಿದೆ. ಇವರಲ್ಲಿ ವರ್ಣಸಂಕರ ನಡೆದಿಲ್ಲ. ಈ ಜನಾಂಗಗಳು ಸ್ವತಂತ್ರವಾಗಿಯೇ ಬದುಕಿವೆ. ಎರಡನೆಯ ಸಿದ್ಧಾಂತದ ಅನ್ವಯ, ಮಾನವ ಜನಾಂಗವು ರೂಪುಗೊಂಡಾಗ, ಎಲ್ಲರ ರಕ್ತದ ಗುಂಪು ಒ ಆಗಿತ್ತು. ಮಿಲಿಯಗಟ್ಟಲೆ ವರ್ಷಗಳ ಅವಽಯಲ್ಲಿ ಉತ್ಪರಿವರ್ತನೆ (ಮ್ಯುಟೇಶನ್) ಉಂಟಾಗಿ ಎ ಬಿ ಎಬಿ ಗುಂಪುಗಳು ಹುಟ್ಟಿಕೊಂಡವು. ಒ ಗುಂಪು ಹಾಗೆಯೇ ಮುಂದುವರೆದುಕೊಂಡು ಬಂದಿದೆ. ಜೊತೆಗೆ ಈ ಎಬಿಒ ಗುಂಪುಗಳಲ್ಲೂ ಸಣ್ಣಪುಟ್ಟ ಉತ್ಪರಿವರ್ತನೆಯು ಉಂಟಾಗುತ್ತಲೇ ಇರುವುದರಿಂದ ಉಪವರ್ಗಗಳು ರೂಪುಗೊಂಡಿವೆ ಎನ್ನುತ್ತದೆ ಈ ಸಿದ್ಧಾಂತ.

ಜಗತ್ತಿನ ಪ್ರಾಚೀನ ಜನಾಂಗಗಳಲ್ಲಿ ಇಂದಿಗೂ ಒ ಗುಂಪು ಪ್ರಧಾನವಾಗಿದೆ. ಉದಾ: ದಕ್ಷಿಣ ಅಮೆರಿಕದ ರೆಡ್ ಇಂಡಿಯನ್ನರು, ಉತ್ತರ ಧ್ರುವದಲ್ಲಿ ವಾಸಿಸುವ ಎಸ್ಕಿಮೊ ಜನಾಂಗದವರು ಹಾಗೂ ಇಂಕಾ ಸಾಮ್ರಾಜ್ಯದ ಜನರು. ಇವರಲ್ಲಿ ೭೫%-೧೦೦% ಜನರ ರಕ್ತದಗುಂಪು ಒ ಆಗಿದೆ. ಈ ರೀತಿಯ ಏಕರೂಪದ ರಕ್ತಗುಂಪಿನ ವಿತರಣೆಯು ಆಧುನಿಕ ಜನಾಂಗಗಳಲ್ಲಿ ಕಾಣುವುದಿಲ್ಲ.

ಮೂರನೆಯ ಸಿದ್ಧಾಂತದ ಅನ್ವಯ, ಮಾನವ ಜನಾಂಗವು ಉದಯವಾದಾಗ, ಎಲ್ಲರ ರಕ್ತಗುಂಪುಗಳು ಎಬಿ ಆಗಿದ್ದವು. ಮಿಲಿಯಗಟ್ಟಲೆಯ ವಿಕಾಸಾ ವಧಿಯಲ್ಲಿ ಉತ್ಪರಿವರ್ತನೆಯು ತಲೆದೋರಿ ಎಬಿ ಗುಂಪು ಒಡೆದು ಎ ಮತ್ತು ಬಿ ಗುಂಪುಗಳು ರೂಪುಗೊಂಡವು. ಕೊನೆಗೆ ಅವರೆಡೂ ಮತ್ತಷ್ಟು ವಿಕಾಸಕ್ಕೆ ಒಳಗಾಗಿ ಒ ಗುಂಪು ರೂಪುಗೊಂಡಿತು ಎನ್ನುತ್ತಾರೆ. ಆದರೆ ಸತ್ಯ ಎನ್ನುವುದು ಎಲ್ಲೋ ಈ ಮೂರೂ ಸಿದ್ಧಾಂತಗಳ ನಡುವೆ ಅಡಗಿದೆ ಎಂದು ಭಾವಿಸ ಬಹುದು.

ಈಗ ವಿಜ್ಞಾನವು ರಕ್ತಗುಂಪುಗಳ ವರ್ಗೀಕರಣ ಕ್ಷೇತ್ರದಲ್ಲಿ ಅಸಂಖ್ಯ ಸಂಶೋಧನೆಗಳನ್ನು ನಡೆಸಿದೆ. ಅದರ ಫಲವಾಗಿ ಈಗ ಕೆಂಪುರಕ್ತ ಕಣಗಳ ಮೇಲೆ ಇರುವ ಅಂಟು ಜನಕಗಳಲ್ಲಿ ೨೦ ನಮೂನೆಗಳನ್ನು ಪತ್ತೆಹಚ್ಚಲಾಗಿದೆ. ಇವನ್ನು ಸಾರ್ವಜನಿಕ ಅಂಟುಜನಕಗಳು (ಪಬ್ಲಿಕ್ ಆಂಟಿಜೆನ್ಸ್) ಎಂದು
ಕರೆಯುತ್ತಾರೆ. ಹಾಗೆಯೇ ಸುಮಾರು ೬೦ ವಾಂಶಿಕ ಅಂಟುಜನಕಗಳನ್ನು (ಫ್ಯಾಮಿಲಿ ಆಂಟಿಜೆನ್ಸ್) ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಎಬಿಒ ಗುಂಪು ಗಳಲ್ಲಿಯೇ ಹಲವು ಉಪ ಗುಂಪುಗಳು ರೂಪುಗೊಂಡಿವೆ. ಇವು ಕೆಲವೇ ಕೆಲವು ಗುಂಪುಗಳಿಗೆ ಮಾತ್ರ ಸೀಮಿತವಾಗಿರಬಹುದು.

ಟೈಪ್-ಎ: ಎ೧, ಎ೨, ಎ೩. ಈ ಪ್ರಧಾನ ಉಪಗುಂಪುಗಳ ಜೊತೆಯಲ್ಲಿ ಅಪರೂಪವಾದ ಎ೪, ಎ೫, ಎ೬, ಜ಼ಡ್, ಎಕ್ಸ್, ಎಂಡ್, ಬೌಟು, ಜಿ, ಐ ಮುಂತಾದ ಗುಂಪುಗಳೂ ಇವೆ. ಟೈಪ್-ಬಿ: ಬಿ೧, ಬಿ೨, ಬಿ೩ ಮುಖ್ಯವಾದ ಉಪಗುಂಪುಗಳು. ಅಪರೂಪದ ಉಪ ಗುಂಪುಗಳಲ್ಲಿ ಡಬ್ಲ್ಯು, ಎಕ್ಸ್, ವಿ ಮತ್ತು ಎಂ ಮುಖ್ಯ ವಾದವು. ಟೈಪ್-ಒ: ಒ೧, ಒ೨, ಒ೩. ಅಪರೂಪದ ಉಪಗುಂಪುಗಳಲ್ಲಿ qs, ಏe, ಗ್ಡಿಮತ್ತು ಬಾಂಬೆ ಗುಂಪುಗಳು ಮುಖ್ಯವಾದವು. ಬಾಂಬೆ ಗುಂಪಿನ ರಕ್ತಕ್ಕೆ ವಿಪರೀತ ಬೇಡಿಕೆ ಇದೆ. ಈ ರಕ್ತದ ಅಗತ್ಯದ ಬಗ್ಗೆ ಪತ್ರಿಕೆಗಳಲ್ಲಿ ಆಗಾಗ್ಗೆ ಸುದ್ದಿ ಪ್ರಕಟವಾಗುವುದನ್ನು ನೋಡಿದ್ದೇವೆ.

ಭಾರತೀಯರ ರಕ್ತವರ್ಗೀಕರಣದ ಶೇಕಡಾವಾರು ಪ್ರಮಾಣ ಹೀಗಿದೆ: ಒ+ ೩೫%, ಎ+ ೩೦%, ಒ- ೧೩%, ಎ- ೮%, ಬಿ+ ೮%, ಬಿ- ೨%, ಎಬಿ+ ೨%, ಎಬಿ- ೧%.

Leave a Reply

Your email address will not be published. Required fields are marked *