Tuesday, 10th September 2024

ಸಂಪತ್ತಿನ ಸಮಾನ ಹಂಚಿಕೆಯಲ್ಲಿ ಕಾಂಗ್ರೆಸ್ ವಿಲವಿಲ

ವರ್ತಮಾನ

maapala@gmail.com

ರಾಜಕೀಯವಾಗಿ ಯಾವುದೇ ಒಂದು ವಿಚಾರದ ಬಗ್ಗೆ ವ್ಯಾಖ್ಯಾನಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಲ್ಲದೇ ಇದ್ದರೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ‘ಸಂಪತ್ತಿನ ಸಮಾನ ಹಂಚಿಕೆ’ ಎಂಬ ಮಾತಿನಂತೆ ವಿವಾದಕ್ಕೆ ಕಾರಣವಾಗಿ ಅದು ರಾಜಕೀಯ ಹೇಳಿಕೆಗಳಾಗಿ ಮಾತ್ರವೇ ಉಳಿದುಕೊಳ್ಳುತ್ತದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ತನ್ನ ಗ್ಯಾರಂಟಿ ಘೋಷಣೆಗಳಿಂದ ಎಂಬ ಭ್ರಮೆಯಿಂದ ರಾಷ್ಟ್ರೀಯ ಕಾಂಗ್ರೆಸ್ ಹೊರಬಂದೇ ಇಲ್ಲ. ಏಕೆಂದರೆ, ಎಲ್ಲಿ ತಮ್ಮ ನಾಯಕತ್ವ ಪ್ರಶ್ನಾರ್ಹವಾಗುತ್ತದೋ ಎಂಬ ಕಾರಣಕ್ಕೆ ಕರ್ನಾಟಕದ ಗೆಲುವಿಗೆ ಇಲ್ಲಿನ ನಾಯಕರು ಮತ್ತು ಸಂಘಟನೆ ಕಾರಣ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಇದರ ಪರಿಣಾಮವೇ ಲೋಕಸಭೆ ಚುನಾವಣೆ ವೇಳೆ ಪಂಚ
ನ್ಯಾಯ್ ಹೆಸರಿನಲ್ಲಿ ಕಾಂಗ್ರೆಸ್ ಘೋಷಿಸಿದ ೨೫ ಗ್ಯಾರಂಟಿಗಳು.

ತೆರಿಗೆ ಸಂಗ್ರಹ, ಆರ್ಥಿಕ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಘೋಷಿಸಿದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿರುವ ಕಾಂಗ್ರೆಸ್ ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಹೆಣಗಾಡುತ್ತಿದೆ. ಗ್ಯಾರಂಟಿಗಳು ಬಹುತೇಕ ಯಶಸ್ವಿಯಾಗಿದ್ದರೂ ಇತರೆ ಅಭಿವೃದ್ಧಿ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂಬುದನ್ನು ಆ ಪಕ್ಷದ ನಾಯಕರೇ ಒಪ್ಪಿಕೊಳ್ಳುತ್ತಾರೆ. ಹೀಗಿರುವಾಗ ದೇಶದಲ್ಲಿ ೨೫ ಗ್ಯಾರಂಟಿಗಳನ್ನು ಏಕಕಾಲ ದಲ್ಲಿ ಜಾರಿಗೊಳಿಸಲು ಸಾಧ್ಯವೇ ಎಂಬುದನ್ನೂ ಯೋಚಿಸದೆ ಅವುಗಳನ್ನು ಕಾಂಗ್ರೆಸ್ ಘೋಷಿಸಿದೆ. ಕರ್ನಾಟಕದಂತೆ ಸಂಘಟನೆಯ ಬೆಂಬಲವಿಲ್ಲ ಎಂಬುದನ್ನು ಅದು ಮರೆತಿದೆ. ಅಧಿಕಾರಕ್ಕೆ ಬರುವುದಿಲ್ಲ ಎಂಬ ಗ್ಯಾರಂಟಿ ಇರುವಾಗ ಎಷ್ಟು ಗ್ಯಾರಂಟಿಗಳನ್ನು ಬೇಕಾದರೂ ಘೋಷಿಸಬಹುದು ಎಂದೇ ಭಾವಿಸೋಣ. ಆದರೆ, ಆ ಗ್ಯಾರಂಟಿಗಳ ಜಾರಿ ಬಗ್ಗೆ ಮಾತನಾಡುವ ಭರವದಲ್ಲಿ ಇರುವ ಅಂಶವನ್ನು ಉತ್ಪ್ರೇಕ್ಷೆ ಮಾಡಿ ಹೇಳುವುದಿದೆಯಲ್ಲಾ, ಅದು ಅತ್ಯಂತ ಅಪಾಯಕಾರಿಯಾಗುತ್ತದೆ.

ಲೋಕಸಭೆಗೆ ದೇಶಾದ್ಯಂತ ಮೊದಲ ಹಂತದ ಚುನಾವಣೆ ಮುಗಿದು ಎರಡನೇ ಹಂತದ ಚುನಾವಣೆ ನಡೆಯಲು ೨-೩ ದಿನ ಮೊದಲು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ ಸಂಪತ್ತಿನ ಸಮಾನ ಹಂಚಿಕೆಯ ವಿಚಾರವೇ ಇದಕ್ಕೆ ಉದಾಹರಣೆ. ದೇಶದ ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸುವ ಕುರಿತಂತೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಸಂಪತ್ತಿನ ಸಮಾನ ಹಂಚಿಕೆ ವಿಚಾರ ಇದೀಗ ಆ ಪಕ್ಷಕ್ಕೆ ಭಾರೀ ಮುಜುಗರ ತಂದೊಡ್ಡುವುದರೊಂದಿಗೆ ಮುಂದಿನ ಹಂತದ ಚುನಾವಣೆಯಲ್ಲಿ ಹಿನ್ನಡೆಯ ಆತಂಕವನ್ನೂ ತಂದೊಡ್ಡಿದೆ. ಇದನ್ನು ಕಾಂಗ್ರೆಸ್ ಎಷ್ಟೇ ಅಲ್ಲಗಳೆ
ದರೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಮಾಡಿರುವ ವ್ಯಾಖ್ಯಾನ ಕಾಂಗ್ರೆಸ್ ಮುಟ್ಟಿ ನೋಡುಕೊಳ್ಳುವಂತೆ ಪೆಟ್ಟು ನೀಡಿದೆ.

ಪ್ರಧಾನಿಯವರ ಹೇಳಿಕೆ ಬೆನ್ನಲ್ಲೇ ಸಾಗರೋತ್ತರ ಭಾರತೀಯ ಕಾಂಗ್ರೆಸ್ ಅಧ್ಯಕ್ಷ ಸ್ಯಾಮಿ ಪಿತ್ರೋಡಾ ಪ್ರಸ್ತಾಪಿಸಿರುವ ‘ಅಮೆರಿಕದಲ್ಲಿರುವ ಉತ್ತರಾಧಿ
ಕಾರಿ ಕಾಯಿದೆ ಭಾರತದಲ್ಲೂ ಜಾರಿಯಾಗಬೇಕು’ ಎಂಬ ವಾದ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಇದು ಎಷ್ಟರ ಮಟ್ಟಿಗೆ ಜಾರಿ ಸಾಧ್ಯ ಎನ್ನುವ ಬಗ್ಗೆ
ಚರ್ಚೆಗಿಂತಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾರಿ ಮಾಡುತ್ತದೆ ಎಂಬ ಪ್ರಧಾನಿ ಹೇಳಿಕೆ ವಿವಾದವನ್ನು ಇನ್ನಷ್ಟು ಹೆಚ್ಚು ಮಾಡಿದೆ. ಚುನಾವಣೆ ಸಂದರ್ಭದಲ್ಲಿ ಹೇಳಿಕೆಗಳನ್ನು ನೀಡುವಾಗ ರಾಜಕೀಯ ನಾಯಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಇಲ್ಲದೇ ಇದ್ದರೆ ಅದನ್ನು ಪ್ರತಿಪಕ್ಷದವರು ಅದನ್ನು ತಮ್ಮದೇ ರೀತಿ ವ್ಯಾಖ್ಯಾನ ಮಾಡಿ ರಾಜಕೀಯ ಲಾಭ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್ ವಿಚಾರದಲ್ಲಿ ಆಗಿದ್ದೂ ಇದೇ.

ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಕುರಿತು ಪ್ರಸ್ತಾಪಿಸುವ ಬದಲು ಕಾಂಗ್ರೆಸ್ ನಾಯಕರು, ಅದರಲ್ಲೂ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ಮಾಡಲಾಗುವುದು ಎಂದಿದ್ದರು. ಅಲ್ಲದೆ, ಜಾತಿ ಗಣತಿಗೆ ಸಂಬಂಧಿಸಿದಂತೆ ಪ್ರಸ್ತಾಪಿಸುತ್ತಾ, ವಿವಿಧ ಜಾತಿ, ಗುಂಪುಗಳ ಜನಸಂಖ್ಯೆಯನ್ನು ಕಂಡುಹಿಡಿಯಲು ಮತ್ತು ಆವರ ಆರ್ಥಿಕ ಪರಿಸ್ಥಿತಿಯನ್ನು ಪತ್ತೆ ಮಾಡಲು ನಾವು ಎಕ್ಸ್-ರೇ ಮಾಡುತ್ತೇವೆ. ಜಾತಿ ಮತ್ತು ಆರ್ಥಿಕ ಗಣತಿ ನಂತರ ದೇಶ ಬದಲಾಗಲಿದೆ ಎಂದಿದ್ದರು. ಈ ಬಾರಿ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಿತ ಹೇಳಿಕೆಗಳನ್ನು ಹೆಚ್ಚು ನೀಡದ ಕಾರಣ ಬಿಜೆಪಿಗೂ ಕಾಂಗ್ರೆಸ್ ವಿರುದ್ಧ ಬಳಸಲು ಉತ್ತಮ ಅಸ್ತ್ರ ಇರಲಿಲ್ಲ.

ಹೀಗಾಗಿ ರಾಹುಲ್ ಗಾಂಧಿಯವರ ಸಂಪತ್ತಿನ ಸಮಾನ ಹಂಚಿಕೆ ಹೇಳಿಕೆಯನ್ನೇ ತಮಗೆ ಬೇಕಾದಂತೆ ವ್ಯಾಖ್ಯಾನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಈ ಅವಕಾಶವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅದಕ್ಕೆ ಈ ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪ್ರಸ್ತಾಪಿಸಿದ್ದ ‘ದೇಶದ ಸಂಪತ್ತಿನ ಮೊದಲ ಹಕ್ಕುದಾರರು ಮುಸ್ಲಿಮರು’ ಎಂಬ ಮಾತನ್ನೂ ಸೇರಿಸಿಕೊಂಡು ಕಾಂಗ್ರೆಸ್ ವಿರುದ್ಧ
ಹರಿಹಾಯ್ದರು. ಶ್ರಮದಿಂದ ಸಂಪಾದಿಸಿದ ಸಂಪತ್ತನ್ನು ಕಿತ್ತಿಕೊಳ್ಳುವ ಅಧಿಕಾರ ಯಾರಿಗಾದರೂ ಇದೆಯೇ? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ
ತಾಯಂದಿರು ಶ್ರಮದಿಂದ ಗಳಿಸಿ ಮಾಡಿಕೊಂಡಿರುವ ಚಿನ್ನದ ತಾಳಿ ಕಿತ್ತುಕೊಳ್ಳಲಾಗುತ್ತದೆ. ಮತ್ತು ಅದನ್ನು ದೇಶದ ಸಂಪತ್ತಿನ ಮೊದಲ ಹಕ್ಕುದಾರರು
ಮುಸ್ಲಿಮರು ಎಂದು ಹೇಳಿದ್ದ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ನೀತಿಯಂತೆ ಮುಸಲ್ಮಾನರು, ಒಳನುಸುಳುಕೋರರು ಮತ್ತು ಹೆಚ್ಚು
ಮಕ್ಕಳಿದ್ದವರಿಗೆ ಹಂಚುತ್ತಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರ ಆಸ್ತಿ ಸಮೀಕ್ಷೆ ಮಾಡುತ್ತಾರೆ. ಅಂದರೆ ನಿಮ್ಮ ಚಿನ್ನ ಮತ್ತು ಇತರ ಆಸ್ತಿಪಾಸ್ತಿಗಳ ಮೌಲ್ಯಮಾಪನವಾಗುತ್ತದೆ. ಅದನ್ನು ಕಿತ್ತುಕೊಂಡು ಬೇರೆಯವರಿಗೆ ಹಂಚುತ್ತಾರೆ ಎಂದುಬಿಟ್ಟರು. ಅಷ್ಟರಲ್ಲಿ ಸ್ಯಾಮ್ ಪಿತ್ರೋಡಾ ಮತ್ತೆ ಗಾಯವನ್ನು ಮತ್ತೆ ಕೆರೆದು ಆಳ ಮಾಡಿಕೊಂಡಂತೆ ಅಮೆರಿಕದ ಉತ್ತರಾಽಕಾರಿ ಕಾಯಿದೆ ಪ್ರಸ್ತಾಪಿಸಿದರು. ಅಮೆರಿಕದಲ್ಲಿ ಉತ್ತರಾಧಿಕಾರ ಕಾಯಿದೆ ಇದೆ. ಅದರನ್ವಯ ವ್ಯಕ್ತಿಯೊಬ್ಬ ೧೦ ಕೋಟಿ ಡಾಲರ್ ಆಸ್ತಿ ಹೊಂದಿದ್ದರೆ ಆತನ ಸಾವಿನ ಬಳಿಕ ಆತನ ಆಸ್ತಿಯಲ್ಲಿ ಶೇ. ೪೫ರಷ್ಟು ಮಾತ್ರವೇ ಮಕ್ಕಳಿಗೆ ವರ್ಗಾವಣೆಯಾಗುತ್ತದೆ. ಉಳಿದ ಶೇ.
೫೫ರಷ್ಟು ಆಸ್ತಿ ಸರಕಾರದ ವಶಕ್ಕೆ ಹೋಗುತ್ತದೆ. ಇದು ಕುತೂಹಲಕಾರಿ ಕಾನೂನು.

ಅದು ಹೇಳುವುದೇನೆಂದರೆ ನಿಮ್ಮ ನಿಧನದ ನಂತರ ಆ ಪೈಕಿ ಒಂದಷ್ಟು ಹಣವನ್ನು ಸಮಾಜಕ್ಕೆ ನೀಡಬೇಕು. ಎಲ್ಲವನ್ನೂ ನಿಮಗೆ ಇಟ್ಟುಕೊಳ್ಳುವುದಲ್ಲ. ಇಂತಹ ಕಾಯಿದೆ ಭಾರತದಲ್ಲೂ ತರಲು ಚಿಂತನೆ ನಡೆಯಬೇಕು ಎಂದುಬಿಟ್ಟರು. ಇದನ್ನು ಪ್ರಸ್ತಾಪಿಸಿದ ಪ್ರಧಾನಿ, ಕಾಂಗ್ರೆಸ್‌ನ ಈ ಹೊಸ ಸಲಹೆ
ಜನರ ಆಸ್ತಿ ಮತ್ತು ಹಕ್ಕು ಕಸಿದುಕೊಳ್ಳುವ ಆ ಪಕ್ಷದ ಅಪಾಯಕಾರಿ ಉದ್ದೇಶವನ್ನು ಮುನ್ನಲೆಗೆ ತಂದಿದೆ. ಸ್ಯಾಮ್ ಪಿತ್ರೋಡಾ ಮಧ್ಯಮ ವರ್ಗದವರ
ಮೇಲೆ, ಬೆವರು ಸುರಿಸಿ ದುಡಿಯುವವರ ಮೇಲೆ ಇನ್ನಷ್ಟು ತೆರಿಗೆ ಹಾಕಬೇಕು ಎಂದು ಸಲಹೆ ಮಾಡಿದ್ದರು. ತಮ್ಮ ಪೋಷಕರಿಂದ ಪಡೆದ ಪಿತ್ರಾರ್ಜಿತ ಆಸ್ತಿಯ ಮೇಲೂ ತೆರಿಗೆ ಹಾಕುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತದೆ ಎಂದು ಹೇಳಿ ಕಾಂಗ್ರೆಸ್ ವಿರುದ್ಧ ಹೊಸ ಅಸಗಳನ್ನು ಬಿಟ್ಟರು.

ಆದರೆ, ಇಲ್ಲಿ ಯೋಚಿಸಬೇಕಾದ ವಿಚಾರವೆಂದರೆ, ಸಂಪತ್ತಿನ ಸಮಾನ ಹಂಚಿಕೆ ಎಂಬ ನೀತಿ, ಉತ್ತರಾಧಿಕಾರಿ ಕಾಯಿದೆ ಮೂಲಕ ಪಿತ್ರಾರ್ಜಿತ ಆಸ್ತಿಗೆ ತೆರಿಗೆ ಹಾಕಲು ಸಾಧ್ಯವೇ ಎಂಬುದು. ಸ್ಯಾಮ್ ಪಿತ್ರೋಡಾ ಪ್ರಸ್ತಾಪಿಸಿದ ಉತ್ತರಾಧಿಕಾರ ಕಾಯಿದೆ ಅತ್ಯಂತ ಉತ್ತಮ ಎಂದಾಗಿದ್ದರೆ ಆರ್ಥಿಕ ಹಿಂಜರಿತ ಮತ್ತು ಕರೋನಾ ಸಂದರ್ಭದಲ್ಲಿ ಅಮೆರಿಕ ಏಕೆ ಆರ್ಥಿಕ ಸಮಸ್ಯೆಗೆ ಸಿಲುಕಿತ್ತು? ಸಂಪತ್ತಿನ ಸಮಾನ ಹಂಚಿಕೆ ನೀತಿಯನ್ನು ಯಾವ ರಾಷ್ಟ್ರಗಳು ಪಾಲಿಸುತ್ತವೆ ಮತ್ತು ಅವುಗಳ ಪರಿಸ್ಥಿತಿ ಏನಾಗಿದೆ ಎಂಬುದನ್ನು ಯಾರಾದರೂ ಯೋಚಿಸಿದ್ದಾರೆಯೇ? ಇನ್ನೂ ಮುಖ್ಯವಾದ ಅಂಶವೆಂದರೆ,
ಭಾರತದಲ್ಲಿ ಸ್ವಾತಂತ್ರ್ಯಾನಂತರವೂ ಇದ್ದ ಉತ್ತರಾಧಿಕಾರಿ ಕಾಯಿದೆ (ಎಸ್ಟೇಟ್ ಡ್ಯೂಟಿ ಟ್ಯಾಕ್ಸ್) ರದ್ದುಗೊಳಿಸಿದ್ದೇ ಕಾಂಗ್ರೆಸ್‌ನ ಪ್ರಧಾನಿ ರಾಜೀವ್ ಗಾಂಧಿ.

೧೯೫೩ರಲ್ಲಿ ಜಾರಿಯಾಗಿದ್ದ ಈ ಕಾಯಿದೆಯನ್ವಯ ೨೦ ಲಕ್ಷ ರು. ಮೇಲ್ಪಟ್ಟ ಆಸ್ತಿಯ ವಾರಸುದಾರ ಮೃತಪಟ್ಟಾಗ ಆತನ ಆಸ್ತಿಯನ್ನು ವಾರಸುದಾರರಿಗೆ ವರ್ಗಾಯಿಸುವ ವೇಳೆ ಆ ಆಸ್ತಿಗೆ ಶೇ. ೮೫ರವರೆಗೂ ತೆರಿಗೆ ಪಾವತಿಸಬೇಕಿತ್ತು. ಹೀಗಾಗಿ ೧೯೮೫ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಇದನ್ನು ರದ್ದುಗೊಳಿಸಿದ್ದರು. ಕಾಂಗ್ರೆಸ್ ಕಾರ್ಯದರ್ಶಿ ಜೈರಾಮ್ ರಮೇಶ್ ಬಳಿಕ ಈ ವಿಷಯ ಪ್ರಸ್ತಾಪಿಸಿದ್ದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಅಽಕಾರಕ್ಕೆ ಬಂದರೆ ಡೆತ್ ಟ್ಯಾಕ್ಸೂ ಹಾಕಲ್ಲ, ಬರ್ತ್ ಟ್ಯಾಕ್ಸೂ ಹಾಕಲ್ಲ. ಈ ದೇಶದ ಪರಂಪರೆ, ಪದ್ಧತಿ ಮುಂದುವರಿಯಲಿದೆ ಎಂದಿದ್ದಾರೆ. ಆದರೆ, ಅಷ್ಟರೊಳಗೆ ಈ ವಿಷಯ ಎಷ್ಟರ ಮಟ್ಟಿಗೆ ಕಾಂಗ್ರೆಸ್‌ಗೆ ಹಾನಿ ಮಾಡಲು ಸಾಧ್ಯವೋ, ಅಷ್ಟು ಹಾನಿ ಮಾಡಿ ಆಗಿದೆ. ಇಷ್ಟೆಲ್ಲಾ ವಿವಾದಗಳಿಗೆ ಕಾರಣ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಘೋಷಿಸಿರುವ ೨೫ ಗ್ಯಾರಂಟಿಗಳಲ್ಲಿ ಒಂದಾದ, ‘ಪ್ರತಿಯೊಂದು
ವರ್ಗ, ಪ್ರತಿಯೊಬ್ಬ ವ್ಯಕ್ತಿಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಿಗುವಂತೆ ಮಾಡಲಾಗುವುದು’ ಎಂಬ ಘೋಷಣೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಅಗತ್ಯವೂ ಹೌದು. ಆದರೆ, ಸಂಪತ್ತಿನ ಸಮಾನ ಹಂಚಿಕೆಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೂ ಸಾಕಷ್ಟು ವ್ಯತ್ಯಾಸವಿದೆ. ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳನ್ನು ಗುರುತಿಸಿ ಅವರಿಗೆ ಸರಕಾರದ ಕಡೆಯಿಂದ ಸೌಲಭ್ಯ, ನೆರವು ಕಲ್ಪಿಸುವ ಮೂಲಕ ಆರ್ಥಿಕವಾಗಿ ಅವರು ಸ್ವಾಲಂಬಿಗಳಾಗುವಂತೆ ಮಾಡುವುದೇ ಆರ್ಥಿಕ ಸಮಾನತೆ. ಆದರೆ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ತರುವುದು ಭಾರತದಂತಹ ರಾಷ್ಟ್ರದಲ್ಲಿ ಅಷ್ಟು ಸುಲಭದ ಮಾತಲ್ಲ.

ಸಂವಿಧಾನದಲ್ಲಿ ವಿವಿಧ ಸಮುದಾಯಗಳಿಗೆ ಮೀಸಲು ಕಲ್ಪಿಸಿರುವುದು ಈ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಕಲ್ಪಿಸುವ ಉದ್ದೇಶದಿಂದ. ಆದರೆ,
ಈವರೆಗೆ ಮೀಸಲಿನ ಲಾಭ ಪಡೆದುಕೊಂಡು ಆರ್ಥಿಕ ಮತ್ತು ಸಾಮಾಜಿಕವಾಗಿ ಸುಧಾರಣೆಯಾದವರೇ ಈಗಲೂ ಆ ಮೀಸಲಿನ ಲಾಭ ಪಡೆಯು ತ್ತಾರೆಯೇ ವಿನಃ ತಮ್ಮದೇ ಸಮುದಾಯದಲ್ಲಿ ಇನ್ನೂ ಹಿಂದುಳಿದಿರುವವರಿಗೆ ಆ ಆವಕಾಶ ಮಾಡಿಕೊಡುವುದೇ ಇಲ್ಲ. ಈ ಕಾರಣದಿಂದಾಗಿ ಸೀಮಿತ ಅವಧಿಗೆ ಎಂದು ಸಂವಿಧಾನದಲ್ಲಿ ನಿಗದಿಪಡಿಸಿದ ಮೀಸಲು ಇನ್ನೂ ಮುಂದುವರಿದಿದೆ. ಅಲ್ಲದೆ, ಅದನ್ನು ಖಾಸಗಿ ವಲಯಕ್ಕೂ ವಿಸ್ತರಿಸಬೇಕು ಎಂಬ ಕೂಗು ಹೆಚ್ಚಾಗುತ್ತಿದೆ.

ಆದರೆ, ಸಂಪತ್ತಿನ ಸಮಾನ ಹಂಚಿಕೆ ಎಂದರೆ ಅದು ಬೇರೆಯದ್ದೇ ಅರ್ಥ ಕೊಡುತ್ತದೆ. ಸಂಪತ್ತು ಸಂಪಾದಿಸಿದವರಿಂದ ಕಿತ್ತುಕೊಂಡು ಇಲ್ಲದವರಿಗೆ
ಹಂಚಿಕೆ ಮಾಡುವುದು ಎಂಬ ಅರ್ಥ ಬರುತ್ತದೆ. ಒಂದೊಮ್ಮೆ ಉಳ್ಳವರಿಂದ ಪಡೆದ ಸಂಪತ್ತನ್ನು ಇಲ್ಲದವರಿಗೆ ಹಂಚಿದರೆ ಅದು ಸದ್ಬಳಕೆ ಯಾಗುತ್ತದೆಯೇ? ಆ ಸಂಪತ್ತು ಬಳಸಿಕೊಂಡು ತಾವೂ ಆರ್ಥಿಕವಾಗಿ ಶಕ್ತಿಯುತವಾಗುತ್ತಾರೆಯೇ ಎಂಬ ಪ್ರಶ್ನೆಯೂ ಬರುತ್ತದೆ. ಏಕೆಂದರೆ, ಸರಕಾರಗಳು
ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಕೆಲವರು ಇನ್ನೂ ಹಿಂದುಳಿದವ ರಾಗಿಯೇ ಉಳಿದಿದ್ದಾರೆ ಎಂದರೆ ಕೊಡುವವರ ಜತೆ ಬಳಸಿಕೊಳ್ಳುವವರ ಜವಾಬ್ದಾರಿಯೂ ಇರುತ್ತದೆ.

ಮೊದಲು ಆ ಜವಾಬ್ದಾರಿ ನಿಗದಿಪಡಿಸದೆ ಸಂಪತ್ತಿನ ಸಮಾನ ಹಂಚಿಕೆ ಮಾಡಿದರೆ ದೇಶ ಆರ್ಥಿಕವಾಗಿ ದಿವಾಳಿಯಾಗುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ. ಮೇಲಾಗಿ ಅದಕ್ಕೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಅದನ್ನು ಬಿಟ್ಟು ಏಕಾಏಕಿ ಘೋಷಣೆ ಮಾಡಿದರೆ ಅದು ರಾಜಕೀಯ ವಾಗಿ ಲಾಭ-ನಷ್ಟಕ್ಕೆ ಕಾರಣವಾಗುತ್ತದೆಯೇ ಹೊರತು ಜನರಿಗಲ್ಲ.

ಲಾಸ್ಟ್ ಸಿಪ್: ರಾಜಕಾರಣದಲ್ಲಿ ಮಾತುಗಾರ ಅಲ್ಲ, ಮಾತು ಹೇಗೆ ಆಡಬೇಕು ಎಂದು ತಿಳಿದು ಆಡುವವನೇ ನಾಯಕನಾಗಿ ಯಶಸ್ವಿಯಾಗುತ್ತಾನೆ.

Leave a Reply

Your email address will not be published. Required fields are marked *