Friday, 13th December 2024

ಸ್ಮಾರ್ಟ್’ಫೋನ್ ಎಂಬ ಸಂಗಾತಿಯ ವಿಚ್ಛೇದನವೇ ಒಳ್ಳೆಯದಂತೆ

ತಿಳಿರು ತೋರಣ

srivathsajoshi@yahoo.com

ಸ್ಮಾರ್ಟ್‌ಫೋನ್ ಬಳಕೆಯನ್ನು ಅಭ್ಯಾಸ ಎನ್ನುತ್ತೀರೋ? ಹವ್ಯಾಸ ಎನ್ನುತ್ತೀರೋ?, ವ್ಯಸನ ಎನ್ನುತ್ತೀರೋ? ‘ಹೇಗೆ ಬಳಸುತ್ತೇವೆ ಎನ್ನುವು ದರ ಮೇಲೆ ಅದು ಅವಲಂಬಿತವಾಗಿದೆ…’ ಎಂದೇ ಇರುತ್ತದೆ ನಿಮ್ಮ ಉತ್ತರ. ಸ್ಮಾರ್ಟ್‌ಫೋನ್ ಅಂತಲ್ಲ ಈ ಮಾತು ಹೆಚ್ಚಿನೆಲ್ಲ ಗ್ಯಾಜೆಟ್‌ಗಳು ಮತ್ತು ಪರಿಕರ ಗಳಿಗೆ ಅನ್ವಯವಾಗುತ್ತದೆ ಎನ್ನುವುದೂ ನಿಜವೇ. ಆದರೂ ವಿಶೇಷತಃ ಸ್ಮಾರ್ಟ್‌ಫೋನ್ ಒಂದು ವ್ಯಸನವಾಗಿ ನಮ್ಮೆಲ್ಲರ ಜೀವನವನ್ನು ಗಣನೀಯವಾಗಿ ಹಾಳುಮಾಡುತ್ತಿದೆ, ಅದರ ಉಪಯೋಗವನ್ನು ಕಡಿಮೆಗೊಳಿಸಿದಷ್ಟೂ ಕ್ಷೇಮಕರ ಎನ್ನುತ್ತಾರೆ ಈಗಾಗಲೇ ಎಚ್ಚೆತ್ತುಕೊಂಡವರು.

ಅಭ್ಯಾಸ, ಹವ್ಯಾಸ, ಮತ್ತು ವ್ಯಸನ- ಈ ಮೂರು ಪದ ಗಳನ್ನು ಕೇಳಿದಾಗ ಥಟ್ಟನೆ ನಿಮ್ಮ ಮನಸ್ಸಿನಲ್ಲಿ ಮೂಡುವ ಭಾವವನ್ನೊಮ್ಮೆ ಗಮನಿಸಿ. ಅಭ್ಯಾಸ ಬಹುಮಟ್ಟಿಗೆ ನಿರ್ಲಿಪ್ತ. ನಡುನೆಲೆಯದು ಅಥವಾ ನ್ಯೂಟ್ರಲ್. ಅವರವರ ದೃಷ್ಟಿ ಕೋನವನ್ನು ಅವಲಂಬಿಸಿ ಅಭ್ಯಾಸವು ನಿರುಪದ್ರವಿ ಆಗಿರಬಹುದು; ನಿರುಪಯುಕ್ತ ಅನಿಸಲೂಬಹುದು. ಆದರೆ ಅಭ್ಯಾಸ ವನ್ನೇ ಒಳ್ಳೆಯದರತ್ತ ತಿರುಗಿಸಿ ಮುಂದುವರಿಸಿದರೆ- ಅಂದರೆ ಧನಾತ್ಮಕ ಅಥವಾ ರಚನಾತ್ಮಕ ಚಟುವಟಿಕೆಯನ್ನಾಗಿಸಿದರೆ- ಅದೊಂದು ಉತ್ತಮ ಹವ್ಯಾಸ ಎಂದು ಕರೆಸಿಕೊಳ್ಳಬಹುದು.

ಅದರಿಂದ ಸ್ವಂತಕ್ಕೂ ಸಮಾಜಕ್ಕೂ ಒಳ್ಳೆಯದಾಗಬಹುದು. ತದ್ವಿರುದ್ಧವಾಗಿ, ಯಾವುದೇ ಅಭ್ಯಾಸವು ಕೆಟ್ಟ ಪರಿಣಾಮಗಳತ್ತ ಹೊರಳಿದರೆ ಮತ್ತು ಅದೇ ದಿಸೆಯಲ್ಲಿ ಮುಂದುವರಿದರೆ ಆಗ ಅದಕ್ಕೆ ವ್ಯಸನ ಎಂದು ಹೆಸರು. ವ್ಯಸನ ಯಾವತ್ತಿಗೂ ಒಳ್ಳೆಯದಲ್ಲ. ವ್ಯಸನಕ್ಕೆ ಶಬ್ದಕೋಶಗಳಲ್ಲೂ ದುಃಖಕರ, ಅಮಂಗಳ, ಕಷ್ಟ-ನಷ್ಟ, ದೌರ್ಬಲ್ಯ, ಮನೋವ್ಯಥೆ, ಭ್ರಂಶ, ಪತನ ಮುಂತಾಗಿ ಎಲ್ಲ ನೇತ್ಯಾತ್ಮಕ ಅರ್ಥಗಳನ್ನೇ ಕೊಟ್ಟಿರುತ್ತಾರೆ. ಈ ಹಿನ್ನೆಲೆಯಲ್ಲಿ ಈಗ ನಿಮಗೊಂದು ಸರಳ ಪ್ರಶ್ನೆ.

ಸ್ಮಾರ್ಟ್ ಫೋನ್ ಬಳಕೆಯನ್ನು ನೀವು ಅಭ್ಯಾಸ ಎನ್ನುತ್ತೀರೋ? ಹವ್ಯಾಸ ಎನ್ನುತ್ತೀರೋ? ಅಥವಾ, ವ್ಯಸನ ಎನ್ನುತ್ತೀರೋ? ‘ಹೇಗೆ ಬಳಸುತ್ತೇವೆ ಎನ್ನುವುದರ ಮೇಲೆ ಅದು ಅವಲಂಬಿತವಾಗಿದೆ…’ ಎಂದೇ ಇರುತ್ತದೆ ನಿಮ್ಮ ಉತ್ತರ. ಸ್ಮಾರ್ಟ್‌ಫೋನ್ ಅಂತಲ್ಲ ಈ ಮಾತು ಹೆಚ್ಚಿನೆಲ್ಲ ಗ್ಯಾಜೆಟ್‌ಗಳು ಮತ್ತು ಪರಿಕರಗಳಿಗೆ ಅನ್ವಯವಾಗುತ್ತದೆ ಎನ್ನುವುದೂ ನಿಜವೇ. ಆದರೂ ವಿಶೇಷತಃ ಸ್ಮಾರ್ಟ್‌ಫೋನ್ ಒಂದು ವ್ಯಸನವಾಗಿ ನಮ್ಮೆಲ್ಲರ ಜೀವನವನ್ನು ಗಣನೀಯವಾಗಿ ಹಾಳುಮಾಡುತ್ತಿದೆ, ಅದರ ಉಪಯೋಗವನ್ನು ಕಡಿಮೆಗೊಳಿಸಿದಷ್ಟೂ ಕ್ಷೇಮಕರ ಎಂಬುದು ಈಗಾಗಲೇ ಎಚ್ಚೆತ್ತುಕೊಂಡವರ
ಅಭಿಪ್ರಾಯ. ಕ್ಯಾಥರೀನ್ ಪ್ರೈಸ್ ಎಂಬಾಕೆ ಅಂಥವರಲ್ಲೊಬ್ಬಳು.

ಆರೋಗ್ಯ ಮತ್ತು ವಿeನ ಪತ್ರಕರ್ತೆ, ವ್ಯಕ್ತಿತ್ವವಿಕಸನ ಉಪನ್ಯಾಸ ಕಾರ್ತಿ, ಖ್ಚ್ಟಛಿಛ್ಞಿಔಜ್ಛಿಛಿ ಆZZಛಿ ಎಂಬ ಅಭಿಯಾನದ ಸಂಸ್ಥಾಪಕಿ, ಮತ್ತು ಏಟಡಿ ಠಿಟ ಆಛಿZh ಖಿm Uಜಿಠಿe ಟ್ಠ್ಟ Peಟ್ಞಛಿ: Seಛಿ ೩೦ಈZqs PZ ಠಿಟ SZhಛಿ ಆZh ಟ್ಠ್ಟ ಔಜ್ಛಿಛಿ ಎಂಬ ಬೆಸ್ಟ್‌ಸೆಲ್ಲಿಂಗ್ ಪುಸ್ತಕದ ಲೇಖಕಿಯೂ ಆಗಿರುವ
ಕ್ಯಾಥರೀನ್ ಮೊನ್ನೆ ಜನವರಿ ೨ರಂದು ‘ದ ಗಾರ್ಡಿಯನ್’ ಪತ್ರಿಕೆಯ ಅಮೆರಿಕ ಆವೃತ್ತಿಯಲ್ಲಿ ಒಂದು ಲೇಖನ ಬರೆದಿದ್ದಾಳೆ. ಟ್ಠ eZqಛಿ ಟ್ಞಛಿ ಜ್ಛಿಛಿ. ಈಟ qsಟ್ಠ ಛಿZqs ಡಿZಠಿ ಠಿಟ omಛ್ಞಿb ಜಿಠಿ ಟಟhಜ್ಞಿಜ Zಠಿ qsಟ್ಠ್ಟ meಟ್ಞಛಿ? ಎಂದು ಅದರ ಶೀರ್ಷಿಕೆ. ನಾವೆಲ್ಲರೂ ಓದಿ ತಿಳಿಯಬೇಕಾದ, ತಿಳಿದು ಅಳವಡಿಸಿಕೊಳ್ಳಬೇಕಾದ ಅಂಶಗಳು ಅದರಲ್ಲಿವೆ ಎಂಬ ಕಾರಣಕ್ಕೆ ಆ ಲೇಖನದ ಭಾವಾನುವಾದವನ್ನು ಕನ್ನಡದಲ್ಲಿ, ಅವಳದೇ ಮಾತುಗಳೋ ಎಂಬಂತೆ ಉತ್ತಮ ಪುರುಷ ಏಕವಚನ ಧ್ವನಿಯಲ್ಲಿ ಇಲ್ಲಿ ಕೊಡುತ್ತಿದ್ದೇನೆ.

ಹೊಸ ಇಸವಿಗೆ ನೀವು ತಗೊಂಡ ನಿರ್ಧಾರಗಳು ಈಗಾಗಲೇ ಸತ್ತುಹೋದುವು ಅಂತಾದರೆ ಒಂದು ಖಡಕ್ ನಿರ್ಧಾರಕ್ಕೆ ಇದು ಪ್ರೇರಣೆಯಾದೀತೋ ನೋಡಿ. ‘ಬೆಳಗಿನ ೩:೩೦ರ ಸಮಯ. ನನ್ನ ಮಗುವನ್ನು ಕಂಕುಳಲ್ಲಿಟ್ಟು ಕೊಂಡಿದ್ದಾಗಲೇ ಕೈಯಲ್ಲಿ ಸ್ಮಾರ್ಟ್‌ಫೋನ್ ಹಿಡಿದುಕೊಂಡು ಏನನ್ನೋ ಬ್ರೌಸ್ ಮಾಡುತ್ತಿದ್ದೆ. ನಿದ್ದೆಯ ಮಂಪರು, ಮತ್ತು ಅಷ್ಟು ಹೊತ್ತು ಎಚ್ಚರವಿದ್ದುದರಿಂದಾದ ಬಳಲಿಕೆಯೂ ಸೇರಿದ್ದಾಗ, ಒಂದು ವಿಚಿತ್ರ ಅನುಭವಕ್ಕೆ ಒಳಗಾದೆ. ಹೊರಗಿನೊಬ್ಬ ವ್ಯಕ್ತಿ ನೋಡಿದಂತೆ ನನ್ನನ್ನೇ ನಾನೊಮ್ಮೆ ನೋಡಿಕೊಂಡೆ. ಒಂದೆಡೆ ನನ್ನ ಪುಟ್ಟ ಮಗು ಇದೆ, ನನ್ನನ್ನೇ ದಿಟ್ಟಿಸುತ್ತಿದೆ. ಇನ್ನೊಂದೆಡೆ ನಾನು ಮುಖ ತಗ್ಗಿಸಿಕೊಂಡು ಸ್ಮಾರ್ಟ್‌ಫೋನ್ ಸ್ಕ್ರೀನ್‌ನಲ್ಲಿ ಮುಳುಗಿ ಹೋಗಿದ್ದೇನೆ.

ನನಗೆ ಒಮ್ಮಿಂದೊಮ್ಮೆಲೇ ಹೆದರಿಕೆಯಾಯ್ತು. ಮನುಷ್ಯ ಸಂಬಂಧವೆಂದರೆ ಹೀಗೆ ಎಂದು ಈ ದೃಶ್ಯವನ್ನು ನನ್ನ ಮಗು ಮಾದರಿಯಾಗಿಟ್ಟು ಕೊಳ್ಳುವು ದನ್ನು ನಾನು ಖಂಡಿತ ಬಯಸ ಲಾರೆ. ನನ್ನ ಜೀವನವೆಲ್ಲ ಇದೇರೀತಿ ಇರುವುದನ್ನೂ ನಾನು ಖಂಡಿತ ಸ್ವೀಕರಿಸಲಾರೆ. ಹಾಗೆ ಹೆದರಿಕೊಂಡ ಆ ಒಂದು ಕ್ಷಣದಲ್ಲಿ ನಾನು ನಿರ್ಧರಿಸಿದೆ- ನನ್ನ ಸ್ಮಾರ್ಟ್‌ಫೋನ್ ಸಂಗವನ್ನು ಬಿಡದಿದ್ದರೆ ಇನ್ನು ಉಳಿಗಾಲವಿಲ್ಲ ಎಂದು. ಸ್ಮಾರ್ಟ್‌ಫೋನ್‌ನ ಹೊರಗಿನ ಸುಂದರ ಪ್ರಪಂಚವನ್ನು ನಾನು ಅಪ್ಪಿಕೊಳ್ಳಬೇಕು, ಮತ್ತು ನನ್ನ ಬದುಕಿಗೊಂದು ಹೊಸ ವ್ಯಾಖ್ಯೆ ಬರೆದುಕೊಳ್ಳಬೇಕು ಎಂದು.

ಇದು ನಡೆದದ್ದು ೨೦೧೬ರಲ್ಲಿ. ಆಗ ನನಗೆ ಸ್ಮಾರ್ಟ್‌ಫೋನ್‌ಗಳೇಕೆ ಈ ಪರಿಯಲ್ಲಿ ನಮ್ಮನ್ನು ಆಕ್ರಮಿಸುತ್ತವೆ, ಅದರಿಂದಾಗುವ ದುಷ್ಪರಿಣಾಮಗಳೇನು, ಅವುಗಳಿಂದ ಹೊರಬರುವ ಬಗೆಯೆಂತು ಎಂದು ತಿಳಿಸುವ ಪುಸ್ತಕಗಳಾವುವೂ ಸಿಗಲಿಲ್ಲ. ಅದಕ್ಕೋಸ್ಕರ ನಾನೇ ಒಂದು ಪುಸ್ತಕ ಬರೆದೆ. ನಾನು ಕಲಿತ ಪಾಠಗಳು ನನ್ನ ಬದುಕನ್ನು ಬದಲಿಸಿದವು. ನಿಮಗೂ ಇದು ಉಪಯುಕ್ತವಾಗಬಹುದು ಎಂದು ನನ್ನ ಆಶಯ. ನಾವು ಸ್ಮಾರ್ಟ್‌ಫೋನ್‌ಗೆ ಅಂಟಿ ಕೊಳ್ಳುವುದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಆಕ್ರೋಶ ತರಿಸುವುದು ಯಾವುದೆಂದು ಕೇಳಿದಿರಾದರೆ- ನಮ್ಮ ಕಾಲಹರಣ ಮಾಡುವ ಅಪ್ಲಿಕೇ ಷನ್ನುಗಳನ್ನು ಉದ್ದೇಶಪೂರ್ವಕವಾಗಿ ಹಾಗೆ ವಿನ್ಯಾಸಗೊಳಿಸಿದ್ದಾರೆ, ಮತ್ತು  ಅದರಿಂದಲೇ ಅವರೆಲ್ಲ ದುಡ್ಡು ಮಾಡುತ್ತಿದ್ದಾರೆ ಎಂಬುದು.

ಇದನ್ನು ನಾನು ‘ಅಟೆನ್ಷನ್ ಎಕಾನಮಿ’ ಅಥವಾ ಲಕ್ಷ್ಯಹರಣ ಉದ್ಯಮ ಎನ್ನುತ್ತೇನೆ. ಇಲ್ಲಿ ನಮ್ಮ ಲಕ್ಷ್ಯ ಮತ್ತು ನಾವು ಯಾವುದರತ್ತ ಲಕ್ಷ್ಯ ಕೊಡು ತ್ತಿದ್ದೇವೆ ಎಂಬುದಕ್ಕೆ ಸಂಬಂಧಿಸಿದ ಮಾಹಿತಿಯೇ ವಾಣಿಜ್ಯದ ಮುಖ್ಯ ಸರಕು ಆಗಿರುತ್ತದೆಯೇ ಹೊರತು ಬೇರಾವ ಉತ್ಪನ್ನಗಳಾಗಲೀ ಅಥವಾ ಸೇವೆಗಳಾಗಲೀ ಅಲ್ಲ. ನಾವು ಈ ಅಪ್ಲಿಕೇಷನ್ನುಗಳ ಗ್ರಾಹಕರು ಎಂಬುದು ನಮ್ಮ ಭ್ರಮೆ ಅಷ್ಟೇ. ನಿಜವಾದ ಗ್ರಾಹಕರು ಜಾಹೀರಾತುದಾರರು. ನಾವು
(ಅಂದರೆ ನಮ್ಮ ಲಕ್ಷ್ಯ ಎಂಬ ಅತ್ಯಂತ ಬೆಲೆಬಾಳುವ ವಸ್ತು) ಮಾರಾಟದ ಸರಕು. ಹಾಗೆ ನೋಡಿದರೆ ಮಾರಾಟವೂ ಅಲ್ಲ, ಮುಫತ್ತಾಗಿ ನಮ್ಮಿಂದ ಸೆಳೆದುಕೊಳ್ಳಲಾಗುವ ಸರಕು. ಎಂಥ ಅವಸ್ಥೆ!

ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕು ಏಕೆಂದರೆ, ಕೊನೆಗೂ ನಾವು ಯಾವುದಕ್ಕೆಲ್ಲ ಲಕ್ಷ್ಯ ಕೊಡುತ್ತೇವೋ ಅದೇ ತಾನೆ ನಮ್ಮ ಬದುಕನ್ನು ರೂಪಿಸುವುದು? ಯಾವುದಕ್ಕೆ ಲಕ್ಷ್ಯ ಕೊಡುತ್ತೇವೋ ಅದೇ ನಮ್ಮ ಅನುಭವವಾಗುತ್ತದೆ. ಯಾವುದಕ್ಕೆ ಲಕ್ಷ್ಯ ಕೊಡುತ್ತೇವೋ ಅದೇ ನಮ್ಮ ನೆನಪುಗಳ ತಿಜೋರಿ ಆಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲೂ ನಾವು ಲಕ್ಷ್ಯ ಕೊಡಲೇಬೇಕಾದ ಒಂದಿಷ್ಟು ಅಂಶಗಳಿರುತ್ತವೆ ಎಂದು ಒಪ್ಪಿಕೊಳ್ಳೋಣ; ಆದರೆ ಅಗತ್ಯಕ್ಕಿಂತ
ಹೆಚ್ಚಿನ ಲಕ್ಷ್ಯ ಕೊಟ್ಟೆವೆಂದರೆ ಅದು ಜೀವನದ ಅಮೂಲ್ಯ ಕ್ಷಣಗಳ ಪೋಲು ಎಂಬುದನ್ನೂ ನಾವು ಅರಿಯಬೇಕು. ಸ್ಮಾರ್ಟ್‌ಫೋನ್ ನಲ್ಲಿ ಸ್ಕ್ರೀನ್ ಸ್ಕ್ರೋಲ್ ಮಾಡುತ್ತ ನಾವು ಕಳೆಯುವ ಒಂದೊಂದು ನಿಮಿಷವೂ, ಜೀವನದಲ್ಲಿ ಬೇರಾವುದೋ ಒಳ್ಳೆಯ ಚಟುವಟಿಕೆಗೆ ನಾವು ವ್ಯಯಿಸಬಹುದಾದ್ದನ್ನು ಅಲ್ಲಿ ವ್ಯಯಿಸದೆ ಇಲ್ಲಿ ವ್ಯಯಿಸು ತ್ತಿರುವುದು ತಾನೆ? ಇದು ನಗಣ್ಯ ಅಂತಂದುಕೊಳ್ಳಬೇಡಿ!

ಆ ನಿಮಿಷಗಳು ಪದೇ ಪದೆ ವ್ಯಯವಾದರೆ ಒಟ್ಟು ಮೊತ್ತವಾಗಿ ದಿನ- ವಾರ-ತಿಂಗಳು-ವರ್ಷಗಳೇ ವ್ಯಯವಾದಂತೆ ಅಲ್ಲವೇ? ಬೇಕಿದ್ದರೆ ನೀವೇ ನಿಮ್ಮ ದೈನಂದಿನ ‘ಸ್ಕ್ರೀನ್ ಟೈಮ್’ ಗಮನಿಸಿ. ಒಂದು ವರ್ಷಕ್ಕೆ ಎಷ್ಟು ಗಂಟೆ ಅಥವಾ ದಿನ ಆಯ್ತೆಂದು ಲೆಕ್ಕ ಹಾಕಿ. ದಿನಕ್ಕೆ ಸರಾಸರಿ ನಾಲ್ಕು ಗಂಟೆ ಸ್ಕ್ರೀನ್ ಟೈಮ್ ಅಂತಂದುಕೊಂಡರೆ ಒಂದು ವರ್ಷದಲ್ಲಿ ಭರ್ತಿ ಎರಡು ತಿಂಗಳ ಕಾಲ ಸ್ಮಾರ್ಟ್‌ಫೋನ್ ಸ್ಕ್ರೀನ್ ದಿಟ್ಟಿಸಿದ್ದೀರಿ ಅಂತಾಯ್ತು! ನಿಮ್ಮ ಆಯುಷ್ಯ ದಲ್ಲಿ ಎಷ್ಟು ವರ್ಷಗಳು? ಸ್ಮಾರ್ಟ್‌ಫೋನ್ ಅಪ್ಲಿಕೇಷನ್ನುಗಳ ತಯಾರಕರು ನಮ್ಮ ಲಕ್ಷ್ಯ ಹರಣಕ್ಕೆ, ಜೂಜುಕಟ್ಟೆಗಳಲ್ಲಿರುವ ಸ್ಲಾಟ್ ಮಷಿನ್‌ಗಳ ತತ್ತ್ವವನ್ನೇ ಬಳಸುತ್ತಾರೆ.

ನಮ್ಮನ್ನು ವ್ಯಸನಿಗಳಾಗಿಸುವುದರಲ್ಲಿ ಸ್ಲಾಟ್ ಮಷಿನು ಗಳದು ಎತ್ತಿದ ಕೈ. ಅವುಗಳ ಕಾರ್ಯತಂತ್ರವು ನಮ್ಮ ಮಿದುಳಿನಲ್ಲಿ ಡೋಪಮಿನ್ ಬಿಡುಗಡೆಗೆ ಪ್ರೇರಕವಾಗಿಯೇ ಇರುತ್ತದೆ. ಡೋಪಮಿನ್‌ನ ಮುಖ್ಯ ಕೆಲಸವೇ ಯಾವೆಲ್ಲ ಚಟುವಟಿಕೆಗಳನ್ನು ಪುನರಾವರ್ತಿಸುವುದು ಒಳ್ಳೆಯದೆಂದು ನಮ್ಮ ಮಿದುಳಿಗೆ ನಿರ್ದೇಶಿಸುವುದು, ಮತ್ತು ಅವುಗಳನ್ನು ಪುನರಾವರ್ತಿಸುವಂತೆ ಉತ್ತೇಜಿಸುವುದು. ಸೀಮಿತ ಪ್ರಮಾಣದಲ್ಲಿ ಡೋಪಮಿನ್ ಬಿಡುಗಡೆ ಅಗತ್ಯವಾದದ್ದೇ. ಇಲ್ಲದಿದ್ದರೆ ‘ಊ-ಮ-ಹೇ’ ರೀತಿಯ ಪುನರಾವರ್ತಿತ ಚಟುವಟಿಕೆಗಳನ್ನು ನಾವು ಮಾಡುವುದಾದರೂ ಹೇಗೆ? ಆದರೆ ಈ ಡೋಪಮಿನ್ ವ್ಯವಸ್ಥೆಯ ಇತಿಮಿತಿ ಯೇನೆಂದರೆ ಅದಕ್ಕೆ ವಿವೇಚನೆ ಇಲ್ಲ. ಒಳಿತು-ಕೆಡುಕಿನ ವ್ಯತ್ಯಾಸ ಗೊತ್ತಿಲ್ಲ.

ಯಾವುದೇ ಒಂದು ಚಟುವಟಿಕೆಯು ಡೋಪಮಿನ್ ಬಿಡುಗಡೆಗೆ ಪ್ರೇರಕವಾದರೆ ನಾವು ಆ ಚಟುವಟಿಕೆಯನ್ನು ಪುನರಾವರ್ತಿಸಲು ಬಯಸುತ್ತೇವೆ. ಅದು ವ್ಯಾಯಾಮದಂಥ ಒಳ್ಳೆಯ ಚಟುವಟಿಕೆಯಾದರೂ ಇರಬಹುದು, ಮಾದಕ ವಸ್ತು ಸೇವನೆಯಂಥ ಕೆಟ್ಟದ್ದಾದರೂ ಇರಬಹುದು. ಟಿಕ್‌ಟಾಕ್/ರೀಲ್ಸ್ ವೀಡಿಯೊ ವೀಕ್ಷಣೆ ಯಂಥದ್ದೂ ಇರಬಹುದು. ಅಂಥ ಚಟುವಟಿಕೆಯಿಂದಾಗಿ ಡೋಪಮಿನ್ ಬಿಡುಗಡೆಯ ಆವರ್ತನ ಹೆಚ್ಚಿದಷ್ಟೂ ಆ ಚಟುವಟಿಕೆ ಮೊದ ಮೊದಲು ಒಂದು ‘ಅಭ್ಯಾಸ’ ಆಗುತ್ತದೆ. ವಿಪರೀತವಾದರೆ ಕೊನೆಗೆ ‘ವ್ಯಸನ’ ಎನಿಸಿ ಕೊಳ್ಳುತ್ತದೆ.

ಅಂದರೆ, ಜನರನ್ನು ವ್ಯಸನಿ ಗಳಾಗಿಸುವ ಉತ್ಪನ್ನ ತಯಾರಿಸುವುದು ಸುಲಭವಿದೆ: ಎಷ್ಟು ಸಾಧ್ಯವೋ ಅಷ್ಟು ಡೋಪಮಿನ್ ಪ್ರೇರಕಗಳನ್ನು ಅದರಲ್ಲಿ ತುಂಬುವುದು. ಸ್ಮಾರ್ಟ್‌ಫೋನ್ ಅಪ್ಲಿಕೇಷನ್ನುಗಳ ತಯಾರಕರು ಮಾಡುವುದು ಎಕ್ಸಾಕ್ಟ್‌ಲೀ ಅದನ್ನೇ! ನಮ್ಮ ಸ್ಮಾರ್ಟ್ ಫೋನ್ಗಳು ಮತ್ತು ಅಪ್ಲಿಕೇಷ ನ್ನುಗಳು ಅದೆಷ್ಟು ಡೋಪಮಿನ್ ಪ್ರೇರಕಗಳ ಮೂಟೆಗಳಾಗಿವೆ ಯೆಂದರೆ ಅವುಗಳನ್ನು ನಮ್ಮ ಜೇಬಿನಲ್ಲಿರುವ ಸ್ಲಾಟ್ ಮಷಿನ್‌ಗಳು ಎನ್ನಲಿ ಕ್ಕಡ್ಡಿಯಿಲ್ಲ. ನೀವು ನಂಬಲಿಕ್ಕಿಲ್ಲ, ಆದರೂ ಇದು ನಿಜ. ಪರದೆಯ ಮೇಲಿನ ಉಜ್ಜ್ವಲ ಬಣ್ಣಗಳು ಡೋಪಮಿನ್ ಪ್ರೇರಕಗಳು. ಪ್ರತಿ ಬಾರಿಯೂ ಹೊಸತನ, ಕಲ್ಪನೆಗೆ ಮೀರಿರುವುದು, ಮತ್ತು ಏನಿರಬಹುದೆಂಬ ಕುತೂಹಲ- ಇವೆಲ್ಲವನ್ನೂ ನಾವು ಪ್ರತಿಸಲ ಸ್ಮಾರ್ಟ್‌ಫೋನ್ ನೋಡುವಾಗಲೂ ಅನುಭವಿಸುತ್ತೇವಲ್ಲ, ಇವೆ ಲ್ಲವೂ ಡೋಪಮಿನ್ ಪ್ರೇರಕಗಳು.

ಪ್ರತಿಫಲ ಅಥವಾ ಪುರಸ್ಕಾರ ಪ್ರಲೋಭನೆಗಳೂ ಪ್ರೇರಕಗಳೇ. ಸ್ಲಾಟ್ ಮಷಿನ್ನುಗಳಲ್ಲಾದರೆ ದುಡ್ಡೇ ಪುರಸ್ಕಾರ. ಸ್ಮಾರ್ಟ್‌ಫೋನ್ ಗಳಲ್ಲಾದರೆ ಸಾಮಾಜಿಕ ಮಾನ್ಯತೆ (ಎಂಬ ಭ್ರಮೆ)ಯೇ ಪುರಸ್ಕಾರ. ಅದು ನಮ್ಮ ಪೋಸ್ಟ್‌ಗೆ ಸಿಕ್ಕ ಒಂದು ಲೈಕ್ ಇರಬಹುದು, ಒಂದು ಕಾಮೆಂಟ್ ಇರ ಬಹುದು, ಎಷ್ಟು ಜನ ವೀಕ್ಷಿಸಿದರೆಂಬ ವ್ಯೂ ಕೌಂಟ್ ಸಹ ಇರ ಬಹುದು. ಆದ್ದರಿಂದಲೇ ಸೋಷಿಯಲ್ ಮೀಡಿಯಾವನ್ನು ನಮ್ಮೆ ದುರು ತೆರೆದು ತೋರಿಸುವ (ಅಸಲಿಗೆ ನಮ್ಮನ್ನು ಬೆತ್ತಲೆಗೊಳಿಸುವ) ಅಪ್ಲಿಕೇಷನ್ನು ಗಳೆಲ್ಲ ಲಕ್ಷ್ಯ-ಭಕ್ಷಕರು. ಡೋಪಮಿನ್‌ನ ಝರಿ ಅಲ್ಲ ಹೊಳೆಯೇ ಹರಿಯುವಂತೆ ಮಾಡುವ ಆಸುರೀ ಶಕ್ತಿಗಳು.

ಇದನ್ನು ನಾವು ಗಂಭೀರವಾಗಿ ಪರಿಗಣಿಸದಿದ್ದರೆ, ಪ್ರಯತ್ನ ಪೂರ್ವಕವಾಗಿ ನಿಯಂತ್ರಿಸದಿದ್ದರೆ, ನಮ್ಮ ಸ್ಮಾರ್ಟ್‌ಫೋನ್ ಗಳಿಂದ ಡೋಪಮಿನ್ ಪೂರೈಕೆಯ ದಾಸರಾಗಿಬಿಡುತ್ತೇವೆ. ಪ್ರಯೋಗಾಲಯದಲ್ಲಿ ಇಲಿಗಳು ಹೇಗೆ ಒಂದು ಲಿವರ್ ಅನ್ನು ಒತ್ತಿದರೆ ಆಹಾರ ಸಿಗುತ್ತದೆಂಬ ಕಲಿಕೆ ಮಾಡಿಕೊಂಡಿ ರುತ್ತವೋ ಹಾಗೆ ನಾವು ಸ್ಮಾರ್ಟ್‌ಫೋನ್ ಸ್ಕ್ರೀನ್ ಅನ್ನು ಸ್ಕ್ರೋಲ್ ಮಾಡುತ್ತ ಟ್ಯಾಪ್ ಮಾಡುತ್ತ ಕ್ಲಿಕ್ ಮಾಡುತ್ತ ಡೋಪಮಿನ್ ಅನ್ವೇಷಣೆಗೆ ತೊಡಗುತ್ತೇವೆ- ಅದು ನಮಗೆ ಮಹತ್ತ್ವದ್ದೇ, ಪ್ರಾಮುಖ್ಯವಾದದ್ದೇ ಅಂತೆಲ್ಲ ಚಿಂತಿಸದೆ. ಜಾಗತಿಕ ಮಟ್ಟದಲ್ಲಿ ನೋಡಿದರೆ ಇದರ ಪರಿಣಾಮಗಳು ಭೀಕರವೇ ಆಗಿವೆ. ಕೆಲವೇ ಸಂಖ್ಯೆಯ ಅಪ್ಲಿಕೇಷನ್‌ಗಳು ಕೋಟಿಕೋಟಿ ಜನರನ್ನು ಮಾಯಾಜಾಲದಲ್ಲಿ ಸಿಲುಕಿಸಿ ನಿಯಂತ್ರಿಸಬಲ್ಲ ಪರಿಸ್ಥಿತಿ ಬಂದಿರು ವುದು ನಂಬಲೇಬೇಕಾದ ಕಹಿಸತ್ಯದ ವಿದ್ಯಮಾನ.

ಅಷ್ಟೇ ಅಲ್ಲ, ಈ ಡೋಪಮಿನ್ ದಾಳಿಗೆ ನಾವು ಎಷ್ಟು ದಾಸರಾಗಿದ್ದೇವೆಂದರೆ ಆಗಾಗ ಸ್ಮಾರ್ಟ್ ಫೋನ್ ತೆರೆದು ನೋಡದಿದ್ದರೆ ಒಂಥರದ ಆತಂಕ, ಮಿಕ್ಕವರಿಗಿಂತ ಹಿಂದುಳಿದೆನೋ ಎಂಬ ಭಯ, ಅಸಹನೀಯ ಕೀಳರಿಮೆ ತುಂಬಿ ಕೊಳ್ಳುತ್ತೇವೆ. ಅದನ್ನು ಬಗೆಹರಿಸಲಿಕ್ಕೆ ಏನು ಮಾಡುತ್ತೇವೆ? ಪುನಃ ಸ್ಮಾರ್ಟ್‌ಫೋನ್ ನೋಡುತ್ತೇವೆ. ಪುನಃ ಡೋಪಮಿನ್ ಉಕ್ಕುತ್ತದೆ. ವಿಷವೃತ್ತದಲ್ಲಿ ಸಿಲುಕಿಕೊಳ್ಳುತ್ತೇವೆ. ಇದರಿಂದ ಬಿಡುಗಡೆ ಸಾಧ್ಯವಿಲ್ಲವೇ? ಏಕಿಲ್ಲ, ಪ್ರಯತ್ನ ಪಡಬೇಕು ಅಷ್ಟೇ. ನಾನು ಕೈಗೊಂಡ ಕೆಲ ಕ್ರಮಗಳು ಏನು ಗೊತ್ತೇ? ಸ್ಮಾರ್ಟ್‌ಫೋನ್‌ನಿಂದಾಗಿ ಡೋಪಮಿನ್ ಬಿಡುಗಡೆ ಆಗುವುದನ್ನು ತಗ್ಗಿಸಲು ನೋಟಿಫಿಕೇಷನ್‌ಗಳನ್ನೆಲ್ಲ ಡಿಸೇಬಲ್ ಮಾಡಿದೆ.

ಜಾಸ್ತಿ ಕಾಲಹರಣ ಮಾಡುತ್ತೇನೆಂದು ಅನಿಸಿದ ಅಪ್ಲಿಕೇಷನ್‌ಗಳನ್ನು ಒಂದೋ ಡಿಲೀಟ್ ಮಾಡಿದೆ, ಇಲ್ಲವೇ ಅವು ಸ್ಕ್ರೀನ್‌ನಲ್ಲಿ ಕಾಣದಂತೆ ಅಡಗಿಸಿಟ್ಟೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸ್ಕ್ರೀನ್ ರಂಗುರಂಗಾಗಿ ಕಾಣಿಸುವ ಬದಲು ಕಪ್ಪು-ಬಿಳುಪು ಕಾಣುವಂತೆ ಮಾಡಿದೆ. ಮನೆಯೊಳಗೆ ಕೆಲವು ಪ್ರದೇಶಗಳನ್ನು ಸ್ಮಾರ್ಟ್ಫೋನ್‌ಗೆ ಕಟ್ಟುನಿಟ್ಟಾಗಿ ನಿಷೇಧಿತ ಎಂದು ಘೋಷಿಸಿದೆ. ಬೆಡ್ ರೂಮ್‌ನಲ್ಲಿ ಮತ್ತು ಡೈನಿಂಗ್ ಟೇಬಲ್ ಹತ್ತಿರ ಇತ್ಯಾದಿ ಅದಕ್ಕೆ ಪ್ರವೇಶವಿಲ್ಲ. ಚಾರ್ಜಿಂಗ್‌ಗೆ ಇಡುವುದನ್ನೂ ಎಲ್ಲಾದರೂ ಪ್ಲಗ್ ಹತ್ತಿರ ಕಪಾಟಿನಲ್ಲಿ ಅಥವಾ ಹಾಗೆ ಕಣ್ಣಿಗೆ ಕಾಣದಂತೆ ಇಡಲಿಕ್ಕೆ ಸಾಧ್ಯವಾಗುವಲ್ಲಿ ಮಾಡುವೆ. ಬೆಡ್‌ರೂಮ್‌ನಲ್ಲಿ ಈ ಮೊದಲು ನನ್ನ ಸ್ಮಾರ್ಟ್‌ಫೋನ್ ಇರುತ್ತಿದ್ದ ಜಾಗದಲ್ಲಿ ಒಳ್ಳೆಯದೊಂದು ಪುಸ್ತಕ ಅಥವಾ ಜರ್ನಲ್ ಇಟ್ಟುಕೊಳ್ಳುವ ಅಭ್ಯಾಸ ಬೆಳೆಸಿದೆ.

ಹಾಗೆಯೇ, ನನ್ನ ಬಿಡುವಿನ ವೇಳೆಯನ್ನು ನಾನು ಹೇಗೆ ಕಳೆಯ ಬೇಕು ಎಂದು ನನ್ನನ್ನು ನಾನೇ ಕೇಳಿಕೊಂಡೆ. ಸುಲಭಸಾಧ್ಯವಾದ ಒಂದಿಷ್ಟು ಚಟುವಟಿಕೆಗಳನ್ನು ಪಟ್ಟಿ ಮಾಡಿದೆ. ಸ್ಮಾರ್ಟ್‌ಫೋನ್ ನತ್ತ ಕೈ ಹೋದಾಗೆಲ್ಲ ತಪ್ಪಿಸಿ ಆ ಇತರ ಚಟುವಟಿಕೆಗಳ ಪೈಕಿ ಒಂದನ್ನು ಆಯ್ದು ಅದರಲ್ಲಿ ತೊಡಗಿಸಿಕೊಂಡೆ. ಗಿಟಾರ್ ನುಡಿಸು ವುದನ್ನು ಕಲಿಯಬೇಕೆಂದು ನನ್ನ ಬಹಳ ದಿನಗಳ ಆಸೆ ಇತ್ತು. ಗಿಟಾರ್ ಕಲಿಕೆಯ ಒಂದು ತರಗತಿಗೆ ಸೇರಿಕೊಂಡೆ. ಸ್ಮಾರ್ಟ್ ಫೋನ್ ನೋಡುತ್ತ ವ್ಯಯಿಸುತ್ತಿದ್ದ ಸಮಯದಲ್ಲಿ ಒಂದಿಷ್ಟನ್ನು ಗಿಟಾರ್ ಕಲಿಕೆಗೆ ವಿನಿಯೋಗಿಸಿದೆ. ಅಷ್ಟೇಅಲ್ಲ, ಮನೆಯಲ್ಲಿ ನನ್ನ ಗಿಟಾರ್ ಯಾವಾಗಲೂ ಅದರ ಪೆಟ್ಟಿಗೆಯಿಂದ ಹೊರತೆಗೆದದ್ದೇ ಇರುವಂತೆ ನೋಡಿಕೊಂಡೆ. ಈ ಚಿಕ್ಕದೊಂದು ಬದಲಾವಣೆ ಅದ್ಭುತ ಪರಿಣಾಮ ಬೀರಿತು.

ಸಂಜೆಯ ಹೊತ್ತು ಉಲ್ಲಾಸ ತುಂಬಿಕೊಳ್ಳಲು ಗಿಟಾರ್ ಎತ್ತಿಕೊಂಡು ಪ್ರಾಕ್ಟೀಸ್ ಮಾಡುವುದು ಹೆಚ್ಚಿತು. ಮೊದಲೆಲ್ಲ ಆ ಸಮಯವನ್ನು ಸ್ಮಾರ್ಟ್‌ಫೋನ್ ಸ್ಕ್ರೋಲ್ ಮಾಡುವುದರಲ್ಲೇ ಕಳೆಯುತ್ತಿದ್ದೆ. ನನ್ನ ಗಿಟಾರ್ ತರಗತಿಯು ಇನ್ -ಪರ್ಸನ್ ಆದ್ದರಿಂದ ಮನೆಯಿಂದ ಹೊರಹೋಗಿ ಜನರೊಡನೆ ಬೆರೆಯು ವುದು ಸಾಧ್ಯವಾಯಿತು. ಒಂದಿಷ್ಟು ಸಮಾನಮನಸ್ಕ ಜನರ ಪರಿಚಯ ಆಯಿತು. ಅವರಲ್ಲಿ ಕೆಲವರು ಒಳ್ಳೆಯ ಸ್ನೇಹಿತರೂ ಆದರು. ಇಲ್ಲ, ವಾಟ್ಸ್ಯಾಪ್ ಮೂಲಕ ಭೇಟಿ ಯಾಗುವ ಮತ್ತು ಇಮೋಜಿಗಳಿಂದ ಭಾವನೆಗಳನ್ನು ಹಂಚಿ ಕೊಳ್ಳುವ ಸ್ನೇಹಿತರಲ್ಲ. ಮುಖತಃ ಭೇಟಿಯಾಗಿ ಕಷ್ಟ-ಸುಖ ಹರಟಬಲ್ಲ ಸ್ನೇಹಿತರು!

ಸ್ಮಾರ್ಟ್‌ಫೋನ್ ಜತೆಗಿನ ನನ್ನ ಈಗಿನ ಸಂಬಂಧ ಅತ್ಯಂತ ಆದರ್ಶದ್ದು ಎನ್ನಲಾರೆ. ಯಾವುದೇ ಸಂಬಂಧ ಗಳಾದರೂ ಹಾಗೆಯೇ ಅಲ್ಲವೇ? ಆದರೆ ಏಳು
ವರ್ಷಗಳ ಹಿಂದೆ ನಡುರಾತ್ರಿ ಯಲ್ಲಿ ಆ ರೀತಿ ಜ್ಞಾನೋದಯವಾದಾಗ ಏನು ಅಂದುಕೊಂಡಿದ್ದೆನೋ ಅದಕ್ಕಿಂತ ಹೆಚ್ಚಿನ ಪ್ರಯೋಜನಗಳನ್ನು ನಾನೀಗ ಪಡೆಯುತ್ತಿದ್ದೇನೆ. ಪ್ರಪಂಚದ ಆಗು ಹೋಗುಗಳನ್ನು ಪ್ರತ್ಯಕ್ಷವಾಗಿ ಹೆಚ್ಚು ಗಮನಿಸುವುದು ನನಗೆ ಸಾಧ್ಯವಾಗುತ್ತಿದೆ. ಭೂತಕಾಲದಲ್ಲಿ ಅಥವಾ ಕಲ್ಪನಾಲೋಕದಲ್ಲಿ ವಿಹರಿಸುವುದಕ್ಕಿಂತ ನಾನು ಹೆಚ್ಚು ಹೆಚ್ಚಾಗಿ ವರ್ತಮಾನದಲ್ಲಿ ಇದ್ದೇನೆ ಎಂದು ನನಗೇ ಅನಿಸುತ್ತಿದೆ. ಮನಸ್ಸು ಶಾಂತವಾಗಿ ಇರುತ್ತದೆ. ನನ್ನ ಕುಟುಂಬಸ್ಥರೊಡನೆ, ಮಿತ್ರವರ್ಗದವರೊಡನೆ, ಮತ್ತು ನನ್ನೊಡನೆಯೇ ಹೆಚ್ಚು ಕನೆಕ್ಟ್ ಆಗಿದ್ದೇನೆಂದು ಭಾಸವಾಗುತ್ತಿದೆ. ಬದುಕು ನಿಜವಾಗಿಯೂ ವರ್ಣಮಯವಾಗಿ ಸುಂದರವಾಗಿದೆ ಅಂತನಿಸುತ್ತಿದೆ.

ನಾನು ನನ್ನ ಸ್ಮಾರ್ಟ್‌ಫೋನ್ ಅನ್ನು ಬಿಸಾಡಿಲ್ಲ; ಅದು ಇದೆ ನನ್ನ ಬಳಿ, ನನ್ನದೇ ನಿಯಂತ್ರಣದಲ್ಲಿ. ನಾನು ಅದರ ನಿಯಂತ್ರಣದಲ್ಲಿ ಇಲ್ಲ ಅಷ್ಟೇ ವ್ಯತ್ಯಾಸ. ನನ್ನ ಪ್ರಕಾರ ಅದೇ ದೊಡ್ಡ ವ್ಯತ್ಯಾಸ. ಈಗ ಸ್ಮಾರ್ಟ್ ಫೋನನ್ನು ಕಾಲಹರಣಕ್ಕೆ ಬಳಸುವುದಕ್ಕಿಂತ, ಅದನ್ನು ನೋಡಿದಾ ಗೆಲ್ಲ ಈ ಒಂದು
ಪ್ರಶ್ನೆಯನ್ನು ನನಗೇ ಕೇಳಿಕೊಳ್ಳುತ್ತೇನೆ: ‘ಇದು ನಿನ್ನ ಜೀವನ. ಇದರಲ್ಲಿ ಯಾವುದರತ್ತ ಲಕ್ಷ್ಯ ಹರಿಸುವೆ?’ ಬಹುಶಃ ಇದೇ ಪ್ರಶ್ನೆಯನ್ನು ನೀವೂ ಕೇಳಿಕೊಂಡರೆ ಚೆನ್ನಾಗಿರುತ್ತದೆ. ಖ್ಚ್ಟಟ್ಝ್ಝ ಛಿoo Zb ಜಿqಛಿ ಞಟ್ಟಛಿ ಎಂಬ ನನ್ನ ಧ್ಯೇಯವಾಕ್ಯ ವನ್ನು ನೀವೂ ಅಳವಡಿಸಿಕೊಂಡರೆ ಮತ್ತೂ ಚೆನ್ನ!’
ಕ್ಯಾಥರೀನ್ ಪ್ರೈಸ್ ಬರೆದ ಈ ಜೀವನಪಾಠ ನಿಜಕ್ಕೂ ಪ್ರೈಸ್ ಲೆಸ್ ಅಂತನಿಸುವುದಿಲ್ಲವೇ? ‘ಮಾನವ ಜನ್ಮ ದೊಡ್ಡದು, ಸ್ಮಾರ್ಟ್ಫೋನ್ ಸ್ಕ್ರೋಲ್ ಮಾಡುತ್ತ ಇದ ಹಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ…’ ಎನ್ನುತ್ತ ಪುರಂದರದಾಸರ ಅವತಾರವಾಗಿಯೇ ಈಕೆ ಬಂದಳೇನೋ ಎಂದು ನನಗಂತೂ ಅನಿಸಿತು. ನಿಮಗೆ ಹೇಗೋ!