Wednesday, 11th December 2024

ಅಬ್ಬರದಲ್ಲಿ ಸಡಗರ ಮಾಯ

ಛತ್ರಗಳಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ‘ಡಿಜೆ ಸ್ಪೀಕರ್’ನ ಸದ್ದು ಕೇಳಿದಾಗೆಲ್ಲ, ‘ಮದುವೆಯ ಸಡಗರಕ್ಕೆ ಇಂಥ ಅಬ್ಬರ ಅನಿವಾರ್ಯವೇ?’ ಎಂಬ ಪ್ರಶ್ನೆ ನನ್ನಲ್ಲಿ ಹುಟ್ಟುವುದುಂಟು. ರಸ್ತೆಯಲ್ಲಿ ಸಾಗುವ ಯಾವುದೋ ಮೆರವಣಿಗೆಯಲ್ಲಿ ಕೆಲವರು ಹೀಗೆ ಕುಣಿಯುತ್ತ ಸಾಗುವಾಗ, ಗದ್ದಲವನ್ನು ಬಯಸದ ನಾನು ಮತ್ತು ನನ್ನಂಥವರು ‘ಮಾಡಿಕೊಂಡು ಹೋಗಲಿ’ ಎನ್ನುವಂತೆ ಆ ಕಡೆ ಮುಖಹಾಕದೆಯೇ ತಪ್ಪಿಸಿಕೊಳ್ಳಬಹುದು.

ಆದರೆ ಹಿಂದಿನ ರಾತ್ರಿಯ ವರಪೂಜೆ, ಮಾರನೆಯ ದಿನದ ಮದುವೆ ಮುಹೂರ್ತದ ಸಮಾರಂಭಗಳಲ್ಲಿ ನಾವು ಛತ್ರದಲ್ಲಿ ಅನಿವಾರ್ಯವಾಗಿ ಹಾಜರಿರ ಬೇಕಾಗುತ್ತದೆ. ಅಪರೂಪಕ್ಕೆ ಕಾಣಸಿಗುವ ಬಂಧು-ಬಾಂಧವರ ಕ್ಷೇಮ ಸಮಾಚಾರ ವಿಚಾರಿಸೋಣ ಎಂದುಕೊಂಡರೆ, ಒಂದೇ ಒಂದು ಮಾತೂ
ಕೇಳದಂತೆ ಒಂದೆಡೆ ‘ಡಿಜೆ ಸೌಂಡ್’ನ ಅಬ್ಬರ ಆವರಿಸಿರುತ್ತದೆ, ಮತ್ತೊಂದೆಡೆ ಬ್ಯಾಂಡ್‌ಮೇಳದವರು ಇವೆಲ್ಲವನ್ನೂ ಮೀರಿಸುವಂತೆ ಶ್ರಮ ವಹಿಸಿರು ತ್ತಾರೆ! ಹೀಗಾಗಿ, ಹಳೆಯ ಮೂಕಿ ಚಿತ್ರಗಳಂತೆ ಬರೀ ಕೈಸನ್ನೆ ಬಾಯಿಸನ್ನೆ ಮಾಡುತ್ತ ಕುಳಿತಿರುವ ಅನಿವಾರ್ಯ.

ಆಮೇಲೆ ಕೇಳಿದರೆ, ಅಲ್ಲಿ ಕುಳಿತಿದ್ದ ಯಾರಿಗೂ ಅದು ಬೇಕಿಲ್ಲ ಎಂಬುದು ಗೊತ್ತಾಗುತ್ತದೆ. ‘ಛೇ! ಇದೆಂಥಾ ಗದ್ದಲವಪ್ಪಾ’ ಅನ್ನುತ್ತಾ ಅವರೆಲ್ಲ ಸಹಿಸಿಕೊಳ್ಳುತ್ತಾ ಇರುತ್ತಾರೆಯೇ ವಿನಾ ಮತ್ತೇನೂ ಮಾಡಲಾರರು. ಇತ್ತೀಚೆಗೆ ಇದೊಂದು ಫ್ಯಾಷನ್ ಆಗಿ ಬಿಟ್ಟಿದೆ. ಅದರ ಬದಲು, ಒಳ್ಳೆಯ ಶಹನಾಯಿ ಯವರನ್ನೋ, ಪಂಚವಾದ್ಯದವರನ್ನೋ, ಉತ್ತಮ ಸಾಂದರ್ಭಿಕ ಹಾಡುಗಾರರನ್ನೋ ಕರೆಸಿ ಹಿತಮಿತವಾದ ಮೇಳ ನಡೆಸಿದರೆ ಸಂಭ್ರಮಕ್ಕೆ
ಅದೊಂದು ಆಪ್ಯಾಯಮಾನವಾದ ಹಿನ್ನೆಲೆದನಿಯಾಗದೇ? ಮಾಲೆ ಬದಲಿಸಿಕೊಳ್ಳುವ, ಪಾಣಿಗ್ರಹಣ ಮಾಡುವ, ಧಾರೆ ಎರೆವ ವಿಶಿಷ್ಟ ಸಂದರ್ಭಗಳಲ್ಲಿ ಇವರೇ ಗಟ್ಟಿಮೇಳ ನುಡಿಸಿ ಮಂಟಪದ ಮೇಲಿನ ವಿಶೇಷತೆಯೆಡೆಗೆ ಗಮನ ಹರಿಯುವಂತೆ ಮಾಡಲು ಬಾರದೇ? ಯಾರಾದರೊಬ್ಬರು ಹೀಗೆ ಮಾಡಿ ನೋಡಲಿ, ಆಗ ಆ ಮದುವೆಗೆ ಮತ್ತಷ್ಟು ಕಳೆ ಕಟ್ಟುವುದರಲ್ಲಿ ಸಂದೇಹವಿಲ್ಲ.

ತಿಂಗಳಾನುಗಟ್ಟಲೆ ಪ್ರಯಾಸ ಪಟ್ಟು, ಆಮಂತ್ರಣ ಪತ್ರಿಕೆ ಹಿಡಿದು ಮನೆಮನೆಗೆ ತಿರುಗಿ ಮದುವೆಗೆ ತಪ್ಪದೇ ಬರಬೇಕೆಂದು ಪ್ರೀತಿಯಿಂದ ಕರೆದಿರುತ್ತಾರೆ ಬಂಧುಗಳು. ನಾವೂ ಬಸ್ಸೋ ಕಾರೋ ಹಿಡಿದು ದೂರದೂರಿನಿಂದ ಬಂದು ಮದುಮಕ್ಕಳನ್ನು ಹಾರೈಸುವ ತವಕದಲ್ಲಿರುತ್ತೇವೆ. ಆದರೆ ಮದುವೆ ಮಂಟಪದ ಮೇಲೆ ನಡೆಯುವ ಯಾವ ಕಾರ್ಯಕ್ರಮವನ್ನೂ ಕಾಣಲು ಬಿಡದ ಫೋಟೋ ಮತ್ತು ವಿಡಿಯೋಗ್ರಾಫರ್‌ಗಳ ಬೆನ್ನು ನೋಡಿ ನಾವು ಮರಳ ಬೇಕಾಗುತ್ತದೆ.

ಇವರು ಐದಾರು ಜನ ನಮ್ಮೆಲ್ಲರಿಗೂ ಅಡ್ಡ ನಿಂತೋ, ಕುಳಿತೋ, ಕೆಲವೊಮ್ಮೆ ಮಲಗಿಯೋ ದೃಶ್ಯವನ್ನು ಸೆರೆಹಿಡಿಯುವುರದಲ್ಲಿ ವ್ಯಸ್ತರಾಗಿರುತ್ತಾರೆ. ಮದುವೆ ಮುಗಿದು ಕೆಲ ವಾರಗಳು ಕಳೆದ ಮೇಲೆ, ಕೆಜಿಗಟ್ಟಲೆ ತೂಕದ ೩-೪ ಆಲ್ಬಂಗಳನ್ನು ಮತ್ತು ವಿಡಿಯೋದ ಪೆನ್‌ಡ್ರೈವ್ ಅನ್ನು ನೀಡಿ, ಹಣ ಪಡೆದು ಹೋಗುತ್ತಾರೆ. ಮದುವೆಯ ವಿಧಿ-ವಿಧಾನಗಳು ಹೇಗೆ ನಡೆದವು? ಮದುವೆಗೆ ಯಾರೆಲ್ಲಾ ಬಂಧು-ಮಿತ್ರರು ಬಂದಿದ್ದರು? ಎಂಬುದನ್ನು ಮನೆಯವರು
ಆರಾಮವಾಗಿ ನೋಡಲು ಸಾಧ್ಯವಾಗುವುದೇ ಆಗ! ಆಮೇಲೆ ಯಾವಾಗಲಾದರೊಮ್ಮೆ ನಾವು ಅವರ ಮನೆಗೆ ತೆರಳಿದಾಗ, ಅಷ್ಟೂ ಅಲ್ಬಂ ಅನ್ನು ತಂದು ನಮ್ಮ ಮುಂದಿಡುತ್ತಾರೆ, ಇಲ್ಲವಾದರೆ ವಿಡಿಯೋ ಹಾಕಿ ಮದುವೆಯ ಕ್ಷಣಗಳನ್ನು ತೋರಿಸುತ್ತಾರೆ.

ನಾವೇ ಮದುವೆಗೆ ಹೋದಾಗ ನೋಡಲಾಗದ ದೃಶ್ಯಗಳನ್ನು ಹೀಗೆ ಅವರ ಮನೆಗೆ ಕ್ವಚಿತ್ತಾಗಿ ಹೋದಾಗ ನೋಡಬೇಕಾಯಿತೆಂದರೆ, ನಾವೇಕೆ ಹಾಗೆ ಸುಮ್ಮನೆ ಒದ್ದಾಡಿಕೊಂಡು ಅಷ್ಟೊಂದು ದೂರದಿಂದ ಮದುವೆ ಮಂಟಪಕ್ಕೆ ಬರಬೇಕು? ಆ ಡಿಜೆಗಳ ಕಿವಿಗಡಚಿಕ್ಕುವ ಅಬ್ಬರದಲ್ಲಿ ಫೋಟೋಗ್ರಾ-ರುಗಳ ಬೆನ್ನು ನೋಡಿ ಮನೆಗೆ ಮರಳಬೇಕು? ಅದರ ಬದಲಿಗೆ ತಿಂಗಳು ಕಳೆದ ನಂತರ ಆಯಾ ಬಂಧುಗಳ ಮನೆಗೆ ತೆರಳಿ ಫೋಟೋ ಆಲ್ಬಂ/ವಿಡಿಯೋ ನೋಡಿ ಆಶೀರ್ವದಿಸಿದರೆ ಸಾಲದೇ? ಈ ಸಮಸ್ಯೆಗೊಂದು ಪರಿಹಾರವಿದೆ.

ಮದುವೆ ಮಂಟಪದಲ್ಲಿ ಇಂಚಿಂಚೂ ಬಿಡದಂತೆ ದೃಶ್ಯಗಳ ಚಿತ್ರಣ ಮಾಡುವ ರೀತಿಯಲ್ಲಿ ಹತ್ತಾರು ಸಿಸಿ ಕ್ಯಾಮರಾ ಅಳವಡಿಸಿ, ನಂತರದಲ್ಲಿ ಆ ದೃಶ್ಯಗಳ ತುಣುಕುಗಳನ್ನು ಕ್ರೋಡೀಕರಿಸಿ ಒಂದು ವಿಡಿಯೋ/ಫೋಟೋ ಆಲ್ಬಂ ಮಾಡಿಸಬಹುದು. ಹೀಗೆ ಮಾಡುವುದರಿಂದ ಮದುವೆಗೆ ಬಂದವರು ನೇರವಾಗಿಯೇ ಕಾರ್ಯಕ್ರಮವನ್ನು ನೋಡಿ ಆನಂದಿಸಿ ಹರಸಲೂ ಸಾಧ್ಯವಾಗುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)