Sunday, 6th October 2024

ಆಪರೇಷನ್ ಹಸ್ತದ ಹಿಂದೆ ಡಿಕೆಶಿ ದೂರಾಲೋಚನೆ

ರಾಜ್ಯ ರಾಜಕೀಯದಲ್ಲಿ ಬಹುವಾಗಿ ಕೇಳಿಬರುತ್ತಿರುವುದು ಆಪರೇಷನ್ ಹಸ್ತದ ಮಾತು. ಇದರಿಂದ ದೊಡ್ಡ ಪೆಟ್ಟು ತಿನ್ನುತ್ತಿರುವುದು ರಾಜಕೀಯದಲ್ಲಿ ‘ಆಪರೇಷನ್’ ಎಂಬ ಪರಿಕಲ್ಪನೆ ಹುಟ್ಟುಹಾಕಿದ ಬಿಜೆಪಿ ಎನ್ನುವುದು ವಿಪರ್ಯಾಸ. ಇದೀಗ ಮೊದಲ ಬಾರಿ ಕರ್ನಾಟಕದಲ್ಲಿ ತಾನೇ ಆಪರೇಷನ್‌ಗೆ ಒಳಗಾಗುವ ಮೂಲಕ ಅದು ಹೂಡಿದ ಬಾಣವೇ ತಿರುಗು ಬಾಣವಾಗಿದೆ.

ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರದಲ್ಲಿ ಒಪ್ಪಂದದಂತೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದೆ ೨೦೦೮ರಲ್ಲಿ ಪಕ್ಷೇತರರ ನೆರವಿನೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿಗೆ ಅವರನ್ನು ಕಟ್ಟಿಕೊಂಡು ಸರಕಾರ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ೧೧೦ ಸ್ಥಾನ ಗಳಿಸಿದ್ದ ಬಿಜೆಪಿ ಆರು ಪಕ್ಷೇತರ ಶಾಸಕರೊಂದಿಗೆ ಸೇರಿ ಸರಕಾರ ರಚನೆ ಮಾಡಿತು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಆದರೆ, ಪಕ್ಷೇತರರನ್ನು ಸೆಳೆದು ಸರಕಾರ ಉರುಳಿಸಲು ಪ್ರತಿಪಕ್ಷಗಳು ಸಜ್ಜಾಗಿದ್ದವು. ಅನ್ಯ ಪಕ್ಷಗಳಿಂದ ಶಾಸಕರನ್ನು ಸೆಳೆದು ಸರಕಾರ ಭದ್ರಗೊಳಿಸಿಕೊಳ್ಳಲು ಪಕ್ಷಾಂತರ ನಿಷೇಧ ಕಾಯಿದೆ ಅಡ್ಡಿಯಾಗಿತ್ತು. ಆಗ ಈ ಸಮಸ್ಯೆಗೆ ಬಿಜೆಪಿ ಕಂಡುಕೊಂಡ ಪರಿಹಾರ, ಅನ್ಯ ಪಕ್ಷಗಳ ಶಾಸಕರಿಂದ ರಾಜೀನಾಮೆ ಕೊಡಿಸಿ, ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಉಪಚುನಾವಣೆಯಲ್ಲಿ ಗೆಲ್ಲಿಸಿ ಸರಕಾರಕ್ಕೆ ಬಹುಮತ ಸಿಗುವಂತೆ ನೋಡಿಕೊಳ್ಳುವುದು. ಹಾಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ೧೪ ಶಾಸಕರಿಂದ ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದು ಬಹುಮತಕ್ಕೆ ಬೇಕಾದ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು. ಆಗಲೇ ಹುಟ್ಟಿಕೊಂಡದ್ದು ‘ಆಪರೇಷನ್ ಕಮಲ’ ಎಂಬ ಪದ. ಬಳಿಕ ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಆಪರೇಷನ್ ಕಮಲ ನಡೆದು ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಿತು.

೨೦೦೮ರ ಆಪರೇಷನ್ ಕಮಲ ಬಿಜೆಪಿ ಸರಕಾರವನ್ನು ಬಹುಮತಕ್ಕೆ ತಂದಿದ್ದು ಮಾತ್ರವಲ್ಲ, ಪಕ್ಷವನ್ನೂ ಗಟ್ಟಿಗೊಳಿಸಿತು. ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಿಂದಾಗಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ವಿರುದ್ಧ ಸಿಡಿದೆದ್ದು ಕೆಜೆಪಿ ಕಟ್ಟದಿದ್ದರೆ, ಸಚಿವರಾಗಿದ್ದ ಬಿ.ಶ್ರೀರಾಮುಲು ಬಿಎಸ್‌ಆರ್ ಕಾಂಗ್ರೆಸ್ ಸ್ಥಾಪಿಸಿ ಬಿಜೆಪಿ ವಿರುದ್ಧ ತಿರುಗಿ ಬೀಳದೇ ಇದ್ದಿದ್ದರೆ ೨೦೧೩ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದು ಕಷ್ಟವಿತ್ತು. ನಂತರದಲ್ಲಿ ಅವರಿಬ್ಬರು ಮತ್ತೆ ಬಿಜೆಪಿಗೆ ಬಂದಿದ್ದು ಇತಿಹಾಸ. ೨೦೧೩-೧೮ರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಹಲವು ಭಾಗ್ಯಗಳ ಜಾರಿ ಯೊಂದಿಗೆ ಉತ್ತಮ ಆಡಳಿತ ನೀಡಿದ್ದರೂ ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ೧೦೦ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಎಂದರೆ ೨೦೦೮ರಲ್ಲಿ ನಡೆದ ಆಪರೇಷನ್ ಕಮಲ ಎಷ್ಟರ ಮಟ್ಟಿಗೆ ಬಿಜೆಪಿಯನ್ನು ಬಲಗೊಳಿಸಿತ್ತು ಎಂಬುದು ಗೊತ್ತಾಗುತ್ತದೆ. ಆದರೂ ಬಹುಮತ ಬಾರದ ಕಾರಣ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟಕ್ಕೆ ಅಧಿಕಾರ ಬಿಟ್ಟುಕೊಡ ಬೇಕಾಗಿ ಬಂದಿತ್ತು. ಆದರೂ ಸುಮ್ಮನಾಗದ ಬಿಜೆಪಿ ಫ್ರತಿಪಕ್ಷದಲ್ಲಿದ್ದುಕೊಂಡೇ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ರಾಜೀನಾಮೆ ಕೊಡಿಸಿ ಮತ್ತೆ ಸರಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು.

ದೇಶದ ಇತಿಹಾಸದಲ್ಲೇ ಮೊದಲ ಬಾರಿ ಎಲ್ಲಿ ಬಿಜೆಪಿ ಎರಡು ಬಾರಿ ಆಪರೇಷನ್ ಕಮಲದ ಮೂಲಕ ಅಧಿಕಾರ ಗಟ್ಟಿಗೊಳಿಸಿಕೊಂಡಿತೋ ಅದೇ ಕರ್ನಾಟಕದಲ್ಲೀಗ ‘ರಿವರ್ಸ್ ಆಪರೇಷನ್’ ಶುರುವಾಗಿದೆ. ಬಿಜೆಪಿಯ ಆಪರೇಷನ್ ಕಮಲದಲ್ಲಿ ಎರಡು ಬಾರಿ ಪೆಟ್ಟು ತಿಂದು ತನ್ನ ಶಾಸಕರನ್ನುಕಳೆದುಕೊಂಡಿದ್ದ ಕಾಂಗ್ರೆಸ್ ಇದೀಗ ಅದೇ ಆಪರೇಷನ್‌ಅನ್ನು ಬಿಜೆಪಿ ವಿರುದ್ಧ ತಿರುಮಂತ್ರವಾಗಿ ಹೂಡುತ್ತಿದೆ. ಆಪರೇಷನ್ ಹಸ್ತದ ಮೂಲಕ ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದೆ. ಜತೆಗೆ ಜೆಡಿಎಸ್ ಶಾಸಕರಿಗೂ ಗಾಳ ಹಾಕಲಾರಂಭಿಸಿದೆ. ಎರಡು ಬಾರಿ ಕಾಂಗ್ರೆಸ್‌ಗೆ ಆಪರೇಷನ್ ಮಾಡಲು ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ತಂತ್ರ ರೂಪಿಸಿತ್ತೋ ಅದನ್ನೇ ಪ್ರತಿತಂತ್ರವಾಗಿ ಕಾಂಗ್ರೆಸ್ ಬಳಸುತ್ತಿದೆ. ಆದರೆ, ಇಲ್ಲಿ ಮಂತ್ರಕ್ಕಿಂತ ಉಗುಳೇ ಜಾಸ್ತಿ ಎಂಬಂತೆ ಯಾವ ಮಟ್ಟದಲ್ಲಿಆಪರೇಷನ್ ಹಸ್ತ ನಡೆಯುತ್ತಿದೆಯೋ ಅದಕ್ಕಿಂತ ಹೆಚ್ಚಾಗಿ ಮಾತುಗಳೇ ಪ್ರಮುಖವಾಗಿದೆ. ಬಿಜೆಪಿ ರಹಸ್ಯವಾಗಿ ಆಪರೇಷನ್ ಕಮಲ ನಡೆಸಿದರೆ, ಕಾಂಗ್ರೆಸ್ ಬಹಿರಂಗವಾಗಿ ಈ ಕೆಲಸಕ್ಕೆ ಇಳಿದಿದೆ. ಇದರ ಪರಿಣಾಮ ಆಪರೇಷನ್ ಹಸ್ತ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗುತ್ತಿಲ್ಲ. ತನ್ನ ಶಾಸಕರು ಆಪರೇಷನ್ ಹಸ್ತಕ್ಕೆ ಒಳಗಾಗದಂತೆ ನೋಡಿಕೊಳ್ಳಲು ಬಿಜೆಪಿ ಹರಸಾಹಸ ಮಾಡುತ್ತಿದೆ. ಆಪರೇಷನ್ ಕಮಲ ನಡೆಸಿ ಯಶಸ್ವಿಯಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಆಪರೇಷನ್ ಹಸ್ತಕ್ಕೆ ತಡೆಯೊಡ್ಡಲು ಹರಸಾಹಸ ಮಾಡುತ್ತಿದ್ದಾರೆ.

ಆಪರೇಷನ್ ಹಸ್ತ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ನಂತರದ ಮಾತು. ಆದರೆ, ಬಿಜೆಪಿಯ ತಂತ್ರವನ್ನೇ ಪ್ರತಿತಂತ್ರವಾಗಿ ಬಳಸಿ ಕೊಂಡು ಆ ಪಕ್ಷಕ್ಕೇ ಆಪರೇಷನ್ ನಡೆಸಲು ಹೊರಟಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ಧೈರ್ಯ, ಚಾಣಾಕ್ಷತನ ಇಲ್ಲಿ ಮುಖ್ಯವಾಗಿದೆ. ಲೋಕಸಭೆ ಚುನಾವಣೆಗಾಗಿ ಪಕ್ಷವನ್ನು ಬಲಗೊಳಿಸಲು, ಲೋಕಸಭೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಬಿಜೆಪಿಯ ಅಧಿಪತ್ಯಕ್ಕೆ ತಡೆಯೊಡ್ಡಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವಂತೆ ನೋಡಿಕೊಳ್ಳಲು ಆಪರೇಷನ್ ಹಸ್ತ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಇದರ ಹಿಂದಿನ ಮತ್ತೊಂದು ಪ್ರಬಲ ಕಾರಣ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್ ಅವರ ಶಕ್ತಿ ಹೆಚ್ಚಿಸಿಕೊಳ್ಳುವುದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸನ್ನು ಅಧಿಕಾರಕ್ಕೆ ತರುವಲ್ಲಿ ಸಿದ್ದರಾಮಯ್ಯ ಅವರ ‘ಮಾಸ್ ಲೀಡರ್ ಶಿಪ್’, ಗ್ಯಾರಂಟಿ ಘೋಷಣೆಗಳು ಎಷ್ಟು ಕಾರಣವಾಗಿತ್ತೋ ಅದಕ್ಕಿಂತ ಹೆಚ್ಚು ಕಾರಣವಾಗಿದ್ದು ಡಿ.ಕೆ.ಶಿವಕುಮಾರ್ ಅವರ ಪಕ್ಷ ಸಂಘಟನೆ. ಅದು ಎಷ್ಟರ ಮಟ್ಟಿಗೆ ಭದ್ರವಾಗಿತ್ತು ಎಂದರೆ ಸ್ವತಃ ಕಾಂಗ್ರೆಸ್
ಕೂಡ ಅಷ್ಟೊಂದು ಪ್ರಮಾಣದಲ್ಲಿ ಬಹುಮತ ಗಳಿಸುತ್ತೇವೆ ಎಂಬ ನಿರೀಕ್ಷೆಯಲ್ಲಿರಲಿಲ್ಲ. ಹೀಗಾಗಿ ಸಹಜವಾಗಿಯೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು.

ಆದರೆ, ಅವರ ಸಂಘಟನಾತ್ಮಕ ಕೆಲಸಗಳಿಂದಾಗಿ ಆಯ್ಕೆಯಾಗಿ ಬಂದ ಶಾಸಕರೇ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಸಿದ್ದರಾಮಯ್ಯ ಕಡೆ ಶಾಸಕರ ಸಂಖ್ಯೆ ಹೆಚ್ಚಾಗಿದ್ದರಿಂದ ಮುಖ್ಯಮಂತ್ರಿ ಸ್ಥಾನ ಅವರ ಕಡೆ ವಾಲಿತು. ಆದರೆ, ಅಷ್ಟು ಸುಲಭದಲ್ಲಿ ಬಿಟ್ಟು ಕೊಡಲು ಸಿದ್ಧರಿಲ್ಲದ ಡಿ.ಕೆ.ಶಿವಕುಮಾರ್, ಮುಖ್ಯ ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದು ಕುಳಿತರು. ಆದ್ದರಿಂದ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದೇ ಇದ್ದರೆ ಭವಿಷ್ಯದಲ್ಲಿ ಪಕ್ಷ ಸಂಘಟನೆಗೆ ತೊಂದರೆಯಾಗುತ್ತದೆ ಎಂಬುದನ್ನು ಅರಿತಿದ್ದ ಹೈಕಮಾಂಡ್ ನಾಯಕರು, ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ. ಬಳಿಕ ಅವರು ಡಿ.ಕೆ.ಶಿವಕುಮಾರ್‌ಗೆ ಅಧಿಕಾರ ಬಿಟ್ಟುಕೊಡಬೇಕು ಎಂಬ ಒಪ್ಪಂದದ ಮೇಲೆ ಸಮಸ್ಯೆ ಬಗೆಹರಿಸಿದ್ದರು. ಇನ್ನೇನು ಸಮಸ್ಯೆ ಬಗೆಹರಿಯಿತು ಎಂದು ಡಿ. ಕೆ.ಶಿವಕುಮಾರ್ ಕೂಡ ಭಾವಿಸಿದ್ದರಾದರೂ ಅದು ಸುಳ್ಳಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರ ಬೆಂಬಲಿಗ ಸಚಿವರು, ಶಾಸಕರು, ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಹೇಳಲಾರಂಭಿಸಿದರು.

ಆಗ ಡಿ.ಕೆ.ಶಿವಕಮಾರ್‌ಗೆ ಒಂದು ವಿಷಯ ಸ್ಪಷ್ಟವಾಯಿತು. ಪಕ್ಷದಲ್ಲಿ ತನ್ನ ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ಳದಿದ್ದರೆ ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಸ್ಥಾನ ಸಿಗುವುದು ಕಷ್ಟ ಎಂಬುದನ್ನು ಅರಿತುಕೊಂಡರು. ಆಗಲೇ ಅವರಿಗೆ ನೆನಪಾಗಿದ್ದು ಆಪರೇಷನ್ ಹಸ್ತ. ಹಿಂದೆ ಬಿಜೆಪಿ ಯಾವ ರೀತಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಂಡಿತ್ತೋ ಅದೇ ಆಪರೇಷನ್ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಗೆ ಗಾಳಹಾಕಲು ನಿರ್ಧರಿಸಿದರು. ಅದರ ಪ್ರಕಾರ ಆಪೇಷನ್ ಹಸ್ತಕ್ಕೆ ಕೈಹಾಕಿದರು. ಆದರೆ, ಬಿಜೆಪಿಯಂತೆ ಗೌಪ್ಯತೆ ಕಾಪಾಡಿಕೊಳ್ಳಲು ಸಾಧ್ಯವಾಗದೆ ಇದೀಗ ಅಂದುಕೊಂಡಷ್ಟರ ಮಟ್ಟಿಗೆ ಅದನ್ನು ಯಶಸ್ವಿಗೊಳಿಸುವುದು ಕಷ್ಟಸಾಧ್ಯವಾಗಿದೆ. ಕಾಂಗ್ರೆಸ್ ಸೇರಲು ಮುಂದಾಗಿದ್ದ ಶಾಸಕರು ನಿರ್ಧಾರ ಕೈಗೊಳ್ಳಲು ಇನ್ನೂ ಯೋಚಿಸುತ್ತಿದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್ ತಮ್ಮ ಪ್ರಯತ್ನದಲ್ಲಿ ಸಂಪೂರ್ಣ ಯಶಸ್ಸು ಸಾಧಿಸದೇ ಇದ್ದರೂ ಅವರ ಉದ್ದೇಶ ಮಾತ್ರ ಈಡೇರುವ ಲಕ್ಷಣಗಳು ಕಾಣಿಸಿಕೊಳ್ಳತೊಡಗಿವೆ. ಬಹುಮತ ಹೊಂದಿರುವ ಕಾಂಗ್ರೆಸ್‌ಗೆ ಆಪರೇಷನ್ ಹಸ್ತದ ಅಗತ್ಯವಿಲ್ಲ ಎಂಬುದು ಡಿ.ಕೆ.ಶಿವಕುಮಾರ್ ಅವರಿಗೂ ಗೊತ್ತಿತ್ತು. ಅದೇ ರೀತಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ, ಈಗಾಗಲೇ ಐಟಿ, ಇಡಿ, ಸಿಬಿಐ ಮೂಲಕ ಕಾಂಗ್ರೆಸ್‌ನ ಶಾಸಕರು, ನಾಯಕರನ್ನು ಕಟ್ಟಿ ಹಾಕುತ್ತಿರುವುದರಿಂದ ಅದು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗುತ್ತದೆ ಎಂಬ ನಿರೀಕ್ಷೆಯೂ ಅವರಿಗೆ ಇರಲಿಲ್ಲ. ಆದರೆ, ಆಪರೇಷನ್ ಹಸ್ತದ ಮೂಲಕ ಪ್ರತಿಪಕ್ಷಗಳಿಗೆ ಮಾತ್ರವಲ್ಲ, ತಮ್ಮ ಪಕ್ಷಕ್ಕೂ ಅವರು ದೊಡ್ಡ ಸಂದೇಶವೊಂದನ್ನು ನೀಡಿದ್ದಾರೆ. ತನ್ನ ಗುರಿ ಸಾಧಿಸಲು ಪಕ್ಷ ಸಂಘಟನೆ ವಿಚಾರದಲ್ಲಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತೇನೆ ಎಂಬುದನ್ನು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಮಾಡಿಕೊಂಡಿರುವ ಒಪ್ಪಂದದಂತೆ ಎರಡೂವರೆ ವರ್ಷದ ಬಳಿಕ ತನಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡದೇ ಇದ್ದರೆ ಪಕ್ಷ ಮಾತ್ರವಲ್ಲ, ಪ್ರತಿಪಕ್ಷಗಳ ಶಾಸಕರನ್ನೂ ಸೆಳೆದುಕೊಂಡು ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ನನ್ನಲ್ಲಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಕೇಂದ್ರದ ಬಿಜೆಪಿ ಸರಕಾರ ತನ್ನ ವಿರುದ್ಧ ಐಟಿ, ಇಡಿ, ಸಿಬಿಐ ಅಸಗಳನ್ನು ಹೂಡಿದರೂ ಎದೆಲ್ಲವನ್ನೂ ಎದುರಿಸುವುದರ ಜತೆಗೆ ಪಕ್ಷದಲ್ಲೂ ಪ್ರಾಬಲ್ಯ ಸಾಧಿಸುತ್ತೇನೆ. ಮುಖ್ಯಮಂತ್ರಿಯಾಗಬೇಕು ಎಂಬ ತನ್ನ ಗುರಿ ಸಾಧಿಸುತ್ತೇನೆ ಎಂಬ ಪರೋಕ್ಷ ಸಂದೇಶವನ್ನು ಪಕ್ಷದ ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಬೆಂಬಲಿಗರಿಗೆ ತಲುಪಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಈ ತಂತ್ರಗಾರಿಕೆಗೆ ಪ್ರತಿ ತಂತ್ರ ಹೆಣೆಯಲು ಬಿಜೆಪಿ ಪರದಾಡುತ್ತಿರುವುದೂ ಇದೇ ಕಾರಣಕ್ಕೆ. ಮೊದಲೇ ರಾಜ್ಯಾಧ್ಯಕ್ಷರ ಬದಲಾವಣೆ ಗೊಂದಲ, ಶಾಸಕಾಂಗ ಪಕ್ಷದ ನಾಯಕ ಇಲ್ಲದೇ ಇರುವುದರಿಂದ ಕಂಗೆಟ್ಟಿರುವ ಬಿಜೆಪಿ ಆಪರೇಷನ್ ಹಸ್ತದ ಸುಳಿವು ಸಿಗುತ್ತಿದ್ದಂತೆ
ಗಲಿಬಿಲಿಗೊಳಗಾಯಿತು. ಇದೀಗ ತನ್ನ ಶಾಸಕರನ್ನು ಆಪರೇಷನ್ ಹಸ್ತದಿಂದ ಉಳಿಸಿಕೊಳ್ಳಲು ಹೋರಾಡುತ್ತಿದೆ. ಈ ಕೆಲಸದಲ್ಲಿ ಬಿಜೆಪಿ ಸದ್ಯಕ್ಕೆ ಯಶಸ್ಸು ಸಾಧಿಸಬಹುದಾದರೂ ಇನ್ನೂ ಎರಡು ವರ್ಷ ಕಾಲ ಡಿ.ಕೆ.ಶಿವಕುಮಾರ್ ಕಡೆಯಿಂದ ಆಪರೇಷನ್ ಹಸ್ತದ ಭೀತಿ ಇದ್ದೇ ಇರುತ್ತದೆ. ತಮ್ಮ ಗುರಿ ಮುಟ್ಟಲು ಏನೆಲ್ಲಾ ಮಾಡಬೇಕೋ, ಅದೆಲ್ಲವನ್ನೂ ಡಿ.ಕೆ.ಶಿವಕುಮಾರ್ ಮಾಡುತ್ತಾರೆ ಎಂಬುದು ಬಿಜೆಪಿ ನಾಯಕರಿಗೂ ಗೊತ್ತಿದೆ. ಅಧಿಕಾರದಲ್ಲಿದ್ದಾಗ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಬಿಜೆಪಿಗೆ ಈಗ ತಾನು ಅಽಕಾರ ಹಿಡಿಯಲು ಅವರೇ ತಿರುಮಂತ್ರ ಹೆಣೆಯುತ್ತಿರುವುದು ನುಂಗಲಾರದ ಬಿಸಿತುಪ್ಪವಾಗಿದೆ. ಇದರಿಂದಾಗಿ ಇಂದಲ್ಲಾ ನಾಳೆ ತಾನು ಆರಂಭಿಸಿದ್ದ ಆಪರೇಷನ್ ತನಗೇ ಮುಳುವಾಗಬಹುದು ಎಂಬ ಆತಂಕದೊಂದಿಗೇ ಪಕ್ಷವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಬಿಜೆಪಿಗೆ ಎದುರಾಗಿದೆ.

ಲಾಸ್ಟ್ ಸಿಪ್: ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬುದು ಎಷ್ಟು ಸತ್ಯವೋ, ಸೊಸೆಯಾಗಿದ್ದವಳು ನಾಳೆ ಅತ್ತೆಯಾಗುತ್ತಾಳೆ ಎನ್ನುವುದೂ ಅಷ್ಟೇ ಸತ್ಯ.