Friday, 13th December 2024

ಡಿಕೆಶಿ ಸಾಹೇಬ್ರೆ, ಭಗವದ್ಗೀತೆ ಯಾಕೆ ಬೇಕು ಅಂತೀರಾ ?

#DK and Bhaga

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

ಧರ್ಮಕಾರಣದ ರಾಜಕೀಯದ ಮಾತನ್ನು ಬದಿಗಿಟ್ಟು ಮಾನ್ಯ ಡಿಕೆಶಿಯವರಲ್ಲಿ ತೆರೆದ ಮನಸಿನಿಂದ ಭಗವದ್ಗೀತೆ ಯಾಕೆ ಬೇಕು ಅಂತ ಒಂದಿಷ್ಟು ವಿಚಾರಗಳಿಂದ ಹೇಳಬೇಕೆನಿಸಿ ಬರೆಯುತ್ತಿದ್ದೇನೆ.

ಯಾರು ಏನೇ ಹೇಳಲಿ, ಏನೇ ರಾಜಕೀಯ ಮಾಡಿಕೊಳ್ಳಲಿ, ಸದೃಢ ರಾಷ್ಟ್ರನಿರ್ಮಾಣ ಎಂಬುದು ನಿರಂತರವಾದ ಪ್ರಕ್ರಿಯೆ.
ಅನುಮಾನವೇಕೆ? ಒಡಕು ದನಿ ಸಲ್ಲದು. ಭಿನ್ನದನಿ ಒಪ್ಪಲಾಗದು. ಯಾವ ಮಾರ್ಗವೇ ಆದರೂ ರಾಷ್ಟ್ರವಿದ್ರೋಹಕ್ಕೆ ಅವಕಾಶವನ್ನು ಕೊಡುವಂಥ ಅಭಿವ್ಯಕ್ತಿಯನ್ನು ಖಂಡಿಸಿ ರೋಧವನ್ನೊಡ್ದಬೇಕು. ತಡೆಯಲೇಬೇಕು. ಅಂತೆಯೇ, ಇದಕ್ಕೆ ಪೂರಕವಾಗಿ ರಾಷ್ಟ್ರವನ್ನು ಕಟ್ಟುವ ಕೆಲಸವಾಗಬೇಕಾದರೆ ರಾಷ್ಟ್ರೀಯ, ಮೂಲಾಧಾರಗಳ ಗ್ರಹಿಕೆಗಳು ಪಠ್ಯದಲ್ಲಿ ಅಳವಡಿಕೆಯಾಗಿ ಬೋಧನೆಯಾಗಬೇಕಾದದ್ದು ಅತ್ಯವಶ್ಯ.

ಈ ರಾಷ್ಟ್ರದ ಮಹಾಗ್ರಂಥವೂ ಮಹಾಕಾವ್ಯವೂ ಎನಿಸಿದ ಮಹಾಭಾರತದ ಒಂದು ಭಾಗವಾದ ಪಂಚಮವೇದವೆನಿಸಿದ ಭಗವದ್ಗೀತೆ ಸಾರ್ವಕಾಲಿಕ ಸಾರ್ವತ್ರಿಕ ನಿತ್ಯ ಸಂದೇಶವನ್ನು ಬೋಧಿಸುತ್ತದೆ. ಭಾರತೀಯ ಸಂಸ್ಕೃತಿಯ ಉಸಿರು, ಭಾರತೀಯತೆಯ ವಿಶ್ವಕೋಶ ವಾದ ಭಗವದ್ಗೀತೆಯಂಥ ಮಹಾನ್ ಗ್ರಂಥವೇ ವಿಶ್ವದಲ್ಲಿ ಇಲ್ಲ ಎಂದು ಜಗತ್ತು ಒಪ್ಪಿದೆ.

ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗವನ್ನು ವಿಶದವಾಗಿ ವ್ಯಾಖ್ಯಾನಿಸುವ ಗೀತೆ ಹೇಳುವ ಮಾತಿದು: ಈ ಬದುಕೇ ಒಂದು ಸಂಗ್ರಾಮ. ಒಳಿತು ಕೆಡುಕುಗಳ ಹೋರಾಟ. ಸತ್ಯಕ್ಕೇ ಜಯ. ಮನುಷ್ಯ ತನ್ನ ಕರ್ತವ್ಯವನ್ನು ಮಾಡಬೇಕು. ನಿಷ್ಕಾಮಕರ್ಮವನ್ನು ಗೀತೆ ಬೋಧಿಸುತ್ತದೆ. ಕರ್ಮಯೋಗ ಎಂದರೆ ವೃತ್ತಿಧರ್ಮನಿಷ್ಠೆ. ಅದರ ತೃಪ್ತಿ. ಸ್ವಾರ್ಥ ಇರಬಾರದು.

ಇದೇ ಅಲ್ಲವೆ ತ್ಯಾಗ! ಕೃಷ್ಣ ಬೋಧಿಸಿದ್ದು Constructive way of life. ಯೋಗವು ವಿಶ್ವಮಾನ್ಯ. ಜಾತಿ, ಮತ, ಪಂಥ, ಧರ್ಮಗಳ ಹಂಗಿಲ್ಲದೆ ಯಾರೂ ದೇಹ, ಮನಸ್ಸು, ಚಿತ್ತ ಸ್ವಾಸ್ಥ್ಯಕ್ಕಾಗಿ ಯೋಗವನ್ನು ಮಾಡಬೇಕು. ಮಾಡುತ್ತಿದ್ದಾರೆ. ಅದು ಯಾರದ್ದೇ ಸ್ವತ್ತಲ್ಲ. ಬಿಜೆಪಿಯದ್ದಂತೂ ಅಲ್ಲವೇ ಅಲ್ಲ. ಮೋದಿಯದ್ದೂ ಅಲ್ಲ. ಅದು ವಿಶ್ವಮಾನ್ಯ ಸ್ವತ್ತು. ಯೋಗವು ದೇಹಶಿಕ್ಷಣ, ಮಾನಸಿಕ ಶಿಕ್ಷಣ, ಚಿಂತನ ಶಿಕ್ಷಣ, ಆತ್ಮಶೋಧ,ಅಪರಾಧ ಪ್ರವೃತ್ತಿಯ ಪಾಶವೀಶಕ್ತಿಗಳ ನಿರೋಧ, ಉನ್ಮೂಲನಗಳ ಮಹಾನ್ ಚೈತನ್ಯವಾಗಿ ಆವಶ್ಯವಿದೆ.

ಮಾನಸಿಕ ಸಂಯಮ, ಪ್ರಾಣದ ನಿಯಮಬದ್ಧ ಉಸಿರಾಟ ಯಾರಿಗೆ ಹಿತವಲ್ಲ ಹೇಳಿ? ಶ್ರೀಕೃಷ್ಣ ಒಂದು ಮತದ ದೇವರಲ್ಲ. ಅವನು
ಈ ನೆಲದ ರಾಷ್ಟ್ರೀಯ ಮಹಾಪುರುಷ. ಅವನ ಕಾಲದಲ್ಲಿ ಬೇರೆ ಯಾವ ಮತವೂ ಇರಲಿಲ್ಲ. ಹಾಗಂತ ಶ್ರೇಷ್ಠವಾದ ಯಾವುದನ್ನೂ ಶ್ರೀಕೃಷ್ಣ ಖಂಡಿಸಲಿಲ್ಲ. ವಿರೋಧಿಸಲಿಲ್ಲ. ಕೊಲೆ, ಸುಲಿಗೆ, ಅತ್ಯಾಚಾರ, ಅತೀಯೆನಿಸುವ ವಿಲಾಸೀ ಜೀವನ, ದರೋಡೆ, ಭೋಗದ ಕೆಟ್ಟ ಪರಿಣಾಮಗಳ ಆಕರ್ಷಣೆ ಹಳ್ಳಿಯಿಂದ ದಿಲ್ಲಿಯವರೆಗೂ ವ್ಯಾಪಿಸಿದೆ. ಊರುಕೇರಿ, ರಸ್ತೆ ಬೀದಿ, ಶಾಲೆ-ಕಾಲೇಜು-ವಿವಿಗಳಲ್ಲೂ ಹರಡಿ ತನ್ನ ಬಾಹುಬಲವನ್ನು ವಿಸ್ತರಿಸಿಕೊಂಡಿದೆ. ಇಂಥ ವಿಚ್ಛಿದ್ರಕಾರಿ ಬೆಳವಣಿಗೆಗಳನ್ನು ಎಲ್ಲರೂ ಸೇರಿ ತಡೆಯಬೇಕಿದೆ. ಗೀತೆಯ ಬೋಧೆ
ಅಳವಡಿಸಿಕೊಂಡವನು ಜೈಲಿಗೆ ಹೋಗಲಾರ!

ಅವನು ಧೈರ್ಯವಂತನಾಗುತ್ತಾನೆ. ಸತ್ಯದ ಮಾರ್ಗಿಯಾಗುತ್ತಾನೆ. ಭಯೋತ್ಪಾದಕನಾಗಲಾರ. ಎಳೆಯ ಪ್ರಾಯದ ಮಕ್ಕಳಿಗೆ,
ಭವ್ಯ ಭಾರತದ ಯುವಕರಿಗೆ ಗೀತೆಯ ಬೋಧೆಯನ್ನು ನಾವೊಂದು ರಾಷ್ಟ್ರವಾಗಿ ಮಾಡಬೇಕಿದೆ. ಇದರಲ್ಲಿ ಭಿನ್ನದನಿಯೇಕೆ? ಭಿನ್ನಾಭಿ ಪ್ರಾಯವೇಕೆ? ಈ ದೇಶ ಬಿಜೆಪಿಯದ್ದೇ, ಆರೆಸ್ಸೆಸ್ಸೆದ್ದೋ ಅಲ್ಲ. ಆಫ್ ಕೋರ್ಸ್ ವೈದಿಕಧರ್ಮದ್ದೂ ಅಲ್ಲ. ಯಾವ ನಿರ್ದಿಷ್ಟ ಮತ, ಜಾತಿ, ಪಂಥ, ಧರ್ಮಕ್ಕೂ ಸೇರಿದ್ದಲ್ಲ.

ಗೀತೆ ಭಾರತೀಯರೆಲ್ಲರ ಸಂಪತ್ತು. ಭಾರತೀಯರೆಲ್ಲರೂ ಅದರ ಸಾರ ತಿಳಿಯಬೇಕು. ಯುವ ಜನಾಂಗವನ್ನು ದುಷ್ಟಪ್ರವೃತ್ತಿಗಳಿಂದ ಪಾರು ಮಾಡಬೇಕಾದ ಜವಾಬ್ದಾರಿ ಹಿರಿಯರಾದ ನಮ್ಮ ನಿಮ್ಮೆಲ್ಲರದ್ದೂ ಆಗಿರುವುದರಿಂದ ಗೀತೆ ಪಠ್ಯವಾಗಬೇಕು. ಏನಂತೀರಿ ಬಂಡೆ ಸಾಹೇಬ್ರೆ? ಆರ್ಥಿಕ ಅಸಮಾನತೆಯಿಂದ ಮಾವೋ, ನಕ್ಸಲ, ಭಯೋತ್ಪಾದನೆ ಉಂಟಾಗುತ್ತಿದೆಯೆಂಬುದು ತಪ್ಪು ಕಲ್ಪನೆ. ಅಜ್ಞಾನದ
ಫಲಶ್ರುತಿಯಿದು. ಇದಕ್ಕೆಲ್ಲ ಪರಿಹಾರ ಗೀತೆಯ ಬೋಧನೆಯಲ್ಲಿದೆ. ಬೈಬಲ್ಲಿನ ಸರ್ಮನ್ ಆನ್ ದ ಮೌಂಟನಲ್ಲೂ ಗೀತೆಯ ತತ್ವಗಳಿವೆ.

Of course ಗೀತೆಯಲ್ಲಿರುವುದೇ ಅಲ್ಲೂ ಅಳವಡಿಕೆಯಾಗಿದೆ. ಗೀತೆಯನ್ನು ಓದಿದರೆ ಭಯೋತಾದನೆ ತಪ್ಪುತ್ತದೆ. ಇದಾಗಬಾರದು ಎನ್ನುವವರು ರಾಷ್ಟ್ರ ಹಿತಚಿಂತಕರಲ್ಲ. ಅಂಥವರು ಭಯೋತ್ಪಾದಕರು. ಗಾಂಧಿಯವರ ಪ್ರಾರ್ಥನಾ ಸಭೆಗಳಲ್ಲಿ ಅವರು ಬದುಕಿದ್ದಾಗ ನಿತ್ಯವೂ ಗೀತೆಯ ಪಠಣವಾಗುತ್ತಿತ್ತು. ಯಾರೂ ತಕರಾರು ಎತ್ತಲಿಲ್ಲ. ಕಾರಣ ಗಾಂಧಿಯವರ ವ್ಯಕ್ತಿತ್ವದ ಪ್ರಭಾವ. ಗೀತೆಯನ್ನು ರಾಷ್ಟ್ರ ಮಾತೆಯೆಂದವರು ಗಾಂಽಯೇ! ಆಯಾಧ್ ಹಿಂದ್ ಫೌಜ್ ಕಟ್ಟಿದ ಮೇಲೂ ಬೋಸರು ದಿನರಾತ್ರೆ ಮಲಗುವ ಮೊದಲು ಪ್ರತಿನಿತ್ಯ
ಭಗವದ್ಗೀತೆಯ ಎರಡು ಶ್ಲೋಕಗಳನ್ನಾದರೂ ಓದುತ್ತಿದ್ದರು.

ತಿಲಕರೂ, ಬಂಕಿಮರೂ, ಅರವಿಂದರೂ, ವಿವೇಕಾನಂದರೂ, ಆನಿಬೆಸೆಂಟರೂ, ನಿವೇದಿತಾರೂ, ಎಡ್ವಿನ್ ಆರ್ನಾಲ್ಡರೂ ಇತ್ಯಾದಿ ನಿರ್ಮತ್ಸರ ಜ್ಞಾನಪ್ರೇಮಿಗಳೂ, ಭಾರತೀಯ ಸಂಸ್ಕೃತಿ ಅಭಿಮಾನಿಗಳೂ ಈ ಗ್ರಂಥ ಸ್ಫೂರ್ತಿಯಿಂದಲೇ ನಮಗೆ ಸ್ವಾತಂತ್ರ್ಯ ತಂದು ಕೊಟ್ಟರು. ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಎಂದು ತಿಲಕರು ಕೋರ್ಟಿನಲ್ಲಿ ಹೇಳಿದಾಗ, ಬ್ರಿಟಿಷ್ ನ್ಯಾಯಾಧೀಶರು ಅದು ಎಲ್ಲಿ ಹೇಳಿದೆ? ಎಂದು ಪ್ರಶ್ನಿಸಿದಾಗ, ತಿಲಕರು ಜೇಬಿನಿಂದ ಗೀತೆಯ ಪ್ರತಿ ತೆಗೆದು ತೋರಿಸಿದರು. ಅದನ್ನು ನಿರ್ಬಂಧಿಸಲು, ನಿಷೇಧಿಸಲು ಬ್ರಿಟಿಷರಿಗೇ ಆಗಲಿಲ್ಲ. ಅಂದಮೇಲೆ ರಾಜಕೀಯ ಉದ್ದೇಶ್ಯದ ಹಿನ್ನೆಲೆಯಿಂದ ಗೀತೆಯನ್ನು ಪಠ್ಯವಾಗಿಸಲು ವಿರೋಧಿಸುವುದು ಪಾಷಂಡೀತನವಲ್ಲವೆ?

ಇನ್ನೊಂದು ಪ್ರಶ್ನೆ: ಎಲ್ಲ ಮತಗ್ರಂಥಗಳೂ ಶ್ರೇಷ್ಠವೂ ಸಮಾನ ಗೌರವಕ್ಕೆ ಅರ್ಹವೂ ಆಗಿದ್ದಾಗ ಗೀತೆಗೇಕೆ ವಿಶಿಷ್ಟ ಪ್ರಾಧಾನ್ಯ
ನೀಡಬೇಕು? ನಿಜ. ಆದರೆ, ಗೀತೆ ನಮ್ಮ ಭಾರತದ ನೆಲದಲ್ಲಿ ಹುಟ್ಟಿ ಬೆಳೆದ ಗ್ರಂಥ. ಅದು ಮಾತೃಸ್ವರೂಪಿ. ಬೇರೆ ಗ್ರಂಥಗಳಲ್ಲಿ ಒಳ್ಳೆಯ ಅಂಶಗಳಿದ್ದರೆ ಗೌರವಿಸೋಣ. ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ- ಎಂಬ ಉದಾತ್ತ ಪರಂಪರೆ ನಮ್ಮದು. ಆದರೆ ಯಾವ ಗ್ರಂಥವೂ ನನ್ನ ತಾಯಿಯ ಸ್ಥಾನವನ್ನು ಅಲಂಕರಿಸಲಾರದು. ಬೇರೆಯವರ ತಾಯಿ ಎಷ್ಟೇ ಸುಂದರಿಯಾದರೂ, ಗುಣವಂತೆಯಾದರೂ, ನನ್ನ ತಾಯಿಯೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ.

ಯಾಕೆಂದರೆ, ನಾವಿರುವುದು ಭಾರತದಲ್ಲಿ. ಉಳಿದ ಭಾರತೀಯ ಗ್ರಂಥಗಳೂ ಪೂಜ್ಯಯೋಗ್ಯವಾದುದೇ ಆಗಿದ್ದರೂ ಗೀತೆಯ ಬೋಧೆ
ಬದುಕಿಗೆ ತೀರಾ ಹತ್ತಿರವಾದದ್ದು. ಗೀತೆಯನ್ನು ಡಿವಿಜಿಯವರು ಜೀವನಧರ್ಮಯೋಗ ಎಂದರು. ದುಡಿಮೆಯೇ ಕರ್ಮಯೋಗವೆಂದಿತು ಗೀತೆ. ಕರ್ಮವನ್ನು ನಿಷ್ಕಾಮದಿಂದ ಮಾಡು. ಫಲವನ್ನು ಅಪೇಕ್ಷಿಸಬೇಡ. ಕರ್ಮವನ್ನು ಮಾಡುವುದಕ್ಕೆ ಮಾತ್ರ ಹಕ್ಕಿದೆ. -ಲ ನಿರೀಕ್ಷೆಗಲ್ಲ ಎಂಬ ಮಾತನ್ನು ಕೆಲಸ ಮಾಡು, ಸಂಬಳವನ್ನು ಕೇಳಬೇಡ ಎಂದು ವ್ಯಾಖ್ಯಾನಿಸಿದವನ ಬುದ್ಧಿಗೆ ಎಂಥದ್ದು ಹಿಡಿದಿರಬೇಕು? ಬುದ್ಧಿವಂತಿಕೆ ಅತಿಯಾಗಿ ಮಿತಿಮೀರಿದರೆ ಇಂಥ ಅಪದ್ಧಗಳು ಹುಟ್ಟೀತೆ ವಿನಾ ಇರಬೇಕಾದಷ್ಟು ಮಟ್ಟದ ಬುದ್ಧಿವಂತಿಕೆಯಿದ್ದರೆ ಹುಟ್ಟಲಾರದು! ಅಷ್ಟಕ್ಕೂ ಭಗವದ್ಗೀತೆ ಬಿಜೆಪಿಯವರದ್ದಲ್ಲ, ಸಂಘ ಪರಿವಾರದವರದ್ದಲ್ಲ. ಮೋದಿಯದ್ದಂಥೂ ಅಲ್ಲವೇ ಅಲ್ಲ.

ವಾಸ್ತವ ಬೇರೆಯೇ ಇದೆ: ಅಸಹನೆಯೋ ವಿರೋಧವೋ ದ್ವೇಷವೋ ಇರುವುದು ಭಗವದ್ಗೀತೆಯ ಮೇಲಲ್ಲ. ಪಠ್ಯಕ್ಕೆ ಅಳವಡಿಸುವು ದಕ್ಕೂ ಅಲ್ಲ. ಶ್ರೀಕೃಷ್ಣನ ಮೇಲೂ ಅಲ್ಲ. ಹಿಂದುತ್ವದ ಮೇಲೂ ಅಲ್ಲ. ಮೋದಿಯನ್ನು, ಮೋದಿಯ ಬಿಜೆಪಿಯನ್ನು, ಸಂಘ ಪರಿವಾರವನ್ನು ವಿರೋಧಿ ಸಲೇಬೇಕು. ಕಾರಣ ರಾಜಕೀಯವಾದ ಸೇಡು. ಬಿಜೆಪಿ ಸರ್ಕಾರ ಏನೇ ಮಾಡಿದರೂ ರಾಜಕೀಯ ಸೇಡಿನಿಂದ ಪ್ರತಿಭಟಿಸುವುದು ಬಹುಮುಖ್ಯ ಮತ್ತು ಪ್ರಧಾನ ಅಂಶವೇ ಇದರ ಹಿನ್ನೆಲೆಯ ಅಜೆಂಡಾ ಇದ್ದಂತಿದೆ.

ಇದು ಸುಳ್ಳು ಎಂದಾದರೆ ಪಠ್ಯಕ್ಕೆ ಗೀತೆಯನ್ನು ಅಳವಡಿಸುವುದನ್ನು ವಿರೋಧಿಸಿದರೆ ಬಹುಸಂಖ್ಯಾತರ ಕಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬರಿವು ಕಾಂಗ್ರೆಸ್ಸಿಗಿಲ್ಲವೆ? ಆದರೂ ವಿರೋಧಿಸುತ್ತದೆ ಎಂದರೆ ಏನರ್ಥ? ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|
ಮಾ ಕರ್ಮಫಲಹೇತುರ್ಭೂರ್ಮಾ ತೇ
ಸಂಗೋಸ್ತ್ವಕರ್ಮಣಿ||1
ಧ್ಯಾಯತೋ ವಿಶಯಾನ್ಪುಂಸಃ ಸಂಗಸ್ತೇಷೂಪಜಾಯತೇ|
ಸಂಗಸ್ತಾಂಜಾಯತೇ ಕಾಮಃ
ಕಾಮಾತ್ಕ್ರೋಧೋಭಿಜಾಯತೇ||2
ಕ್ರೋಧಾದ್ಭವತಿ ಸಂಮೋಹಃ
ಸಂಮೋಹಾತ್ಸ್ಮೃತಿವಿಭ್ರಮಃ|
ಸ್ಮೃತಿಭೃಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ಪ್ರಾಣಶ್ಯತಿ||3
ಅeಶ್ಚಾಶ್ರದ್ಧಾನಶ್ಚ ಸಂಶಯಾತ್ಮಾ ವಿನಶ್ಯತಿ|
ನಾಯಂ ಲೋಕೋಸ್ತಿ ನ ಪರೋ ನ ಸುಖಂ
ಸಂಶಯಾತ್ಮನಃ||4
ಹತೋ ವಾ ಪ್ರಾಪ್ಯಸಿ ಸ್ವರ್ಗಂ, ಜಿತ್ವಾ ವಾ ಭೋಕ್ಷ್ಯಸೇ
ಮಹಿಮ|
ತಸ್ಮಾತ್ ಉತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ||5
ಈ ಐದು ಶ್ಲೋಕಗಳು ಸಮಗ್ರ ಜೀವನಮೌಲ್ಯಗಳಾಗಿ ಗೀತೆಯಲ್ಲಿ ಯಾವುದೇ ಜಾತಿ ಮತ ಪಂಥ ಧರ್ಮಗಳ ಹಂಗಿಲ್ಲದೆ ಸಾರ್ವಕಾಲಿಕ ವಾದ ಸತ್ಯವನ್ನು ಹೇಳುತ್ತವೆ. ಮಕ್ಕಳು ಬಾಲ್ಯದ ಗೀತೆಯನ್ನು ಓದುವಂತಾಗಬೇಕು ಎನ್ನುವುದರಲ್ಲಿ ಸಮಷ್ಟಿಯ ಹಿತಚಿಂತನೆ ಯಿದೆ. ಗೀತಾಬೋಧನೆಯ ಶ್ರೀಕೃಷ್ಣಾರ್ಜುನರ ಚಿತ್ತಾರದ ಅರ್ಥವೇನು? ಆತ್ಮಾನಂ ರಥಿನಂ ವಿದ್ಧಿ, ಶರೀರಂ ರಥಮೇವ ಚ- ಶರೀರವೇ ರಥ, ಆತ್ಮನೇ ರಥಿ, ಬುದ್ಧಿಯೇ ಸಾರಥಿ, ಇಂದ್ರಿಯಗಳೇ ಎಳೆಯುವ ಕುದುರೆಗಳು. ಮನಸ್ಸು ಹಗ್ಗ.

ಸರಿಯಾದ ಮನಸ್ಸಿನಲ್ಲಿ ರಥ ಓಡಿಸಿದರೆ, ಪರಮಗುರಿಯಾದ ವಿಷ್ಣುಸ್ಥಾನದ ಪ್ರಾಪ್ತಿ. ಸುಖ, ಶಾಂತಿ, ನೆಮ್ಮದಿ, ಆನಂದ. ಇಂದ್ರಿಯಗಳು ಎಳೆಯುವ ಚಾಪಲ್ಯದ ದಾರಿಗೇ ಕುದುರೆ ಓಡಿದರೆ, ಹಳ್ಳ, ಕಮರಿ, ಕೊರಕಲಿನಲ್ಲಿ ಬಿದ್ದು ಬದುಕು ಸರ್ವನಾಶವಾಗುತ್ತದೆ. ಕುರುಕ್ಷೇತ್ರದಲ್ಲಿ ಸೆಣೆಸಿದ 18 ಅಕ್ಷೋಹಿಣೀ ಸೈನ್ಯಗಳನ್ನು ಅವಲೋಕಿಸಿ. ಶ್ರೀ ಕೃಷ್ಣ ಪೋಷಿತ 5 ಪಾಂಡವರು.

ಒಬ್ಬಳು ದ್ರೌಪದೀ, ಒಬ್ಬ ಶ್ರೀ ಕೃಷ್ಣ. ಒಟ್ಟಿಗೆ 7 ಅಕ್ಷೋಹಿಣೀ ಪಾಂಡವರದ್ದು. 5 ಜ್ಞಾನೇಂದ್ರಿಯಗಳು, 5 ಕರ್ಮೇಂದ್ರಿಯಗಳು, ಒಂದು ಮನಸ್ಸು ಅಥವಾ ಬುದ್ಧಿ. ಒಟ್ಟೂ 11 ಅಕ್ಷೋಹಿಣೀ ಕೌರವರದ್ದು ಹನ್ನೊಂದೂ ಜಡ ತತ್ತ್ವದ ಇದೆ. ಇದಕ್ಕೆ ಬೆಂಬಲವಾಗಿದ್ದವ ಹುಟ್ಟು
ಕುರುಡ ಧೃತರಾಷ್ಟ್ರ. ಪ್ರತಿಫಲವೇನು ಬಂತು? ಧರ್ಮರಾಜ್ಯದ ಉದಯ! ಪಠ್ಯಕ್ಕೆ ಸೇರಿಸಲಿ ಬಿಡಲಿ ಗೀತೆಯ ಪ್ರಸಿದ್ಧಿಯಂತೂ ಜಗತ್ತನ್ನಾವರಿಸಿದೆ.