Wednesday, 11th December 2024

ಸಿರಿಂಜ್ ಹಿಡಿಯುವ ಕೈ ಪೆನ್ನು ಹಿಡಿದಾಗ…

ವೈದ್ಯ ವೈವಿಧ್ಯ

drhsmohan@gmail.com

ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಬಿಲ್ ಕಟ್ಟಲು ಪರದಾಡುವ ಬಡವರಿಗೆ ಸದ್ದಿಲ್ಲದೆ, ಸುದ್ದಿ ಮಾಡದೆ ತಮ್ಮಿಂದ ಆದಷ್ಟು ಹಣದ ನೆರವು ಕೊಟ್ಟು ಮುಗುಳ್ನಕ್ಕು ಮುಂದಕ್ಕೆ ಸಾಗುವ ನೂರಾರು ವೈದ್ಯರುಗಳಿದ್ದಾರೆ. ಅಂಥವರು ಸುದ್ದಿಯಾಗುವುದೇ ಇಲ್ಲ. ಇಂಥವರ ಕಥನಗಳ ಆಗರವೇ ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ ಎಂಬ ಪುಸ್ತಕ.

ಕರ್ನಾಟಕ ರಾಜ್ಯದ ೭೦ ವೈದ್ಯರು ತಮ್ಮ ವೃತ್ತಿ ಜೀವನದ ಅನುಭವಗಳನ್ನು ಒಂದೊಂದು ಲೇಖನವಾಗಿ ಬರೆದು ಒಟ್ಟುಗೂಡಿಸಿ ಒಂದು ಪುಸ್ತಕವಾಗಿಸಿ ಪ್ರಕಟಿಸಿದರೆ ಹೇಗಿರುತ್ತದೆ? ಅದೊಂದು ಅಪರೂಪದ ಅಪೂರ್ವ ಪುಸ್ತಕ ವಾಗುತ್ತದೆ. ಅಂತಹ ಒಂದು ಸಾಹಸವನ್ನು ನಮ್ಮ ರಾಜ್ಯದ ಭಾರತೀಯ ವೈದ್ಯಕೀಯ ಸಂಘದ ಬರಹಗಾರರ ಸಮಿತಿ ಇತ್ತೀಚಿಗೆ ಮಾಡಿ, ಮೇಲಿನ ಶೀರ್ಷಿಕೆಯ ಪುಸ್ತಕವನ್ನು ಹೊರತಂದಿದೆ. ಈ ಪುಸ್ತಕದ ವಿಶೇಷತೆ-ರಾಜ್ಯದ ಉದ್ದಗಲಕ್ಕೂ ಹಬ್ಬಿರುವ ವೈದ್ಯ ಸಮೂಹವು ತಮ್ಮ ಅತ್ಯಮೂಲ್ಯ ಅನುಭವದ ೭೦ ಘಟನೆಗಳನ್ನು ಅಕ್ಷರ ರೂಪದಲ್ಲಿ ಹಂಚಿಕೊಂಡಿದ್ದಾರೆ.

ಇದರ ಪ್ರಧಾನ ಸಂಪಾದಕರು ಈ ಪುಸ್ತಕ ಹೀಗೆ ಹೊರಬರಲು ಮೂಲ ಕಾರಣೀಕರ್ತರು ಆದ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಪುಸ್ತಕದ ಹಿಂದಿನ ವಾಸ್ತವವನ್ನು ತಮ್ಮ ಪ್ರಧಾನ ಸಂಪಾದಕರ ಮಾತುಗಳಲ್ಲಿ ವಿವರಿಸಿದ್ದಾರೆ. ಡಾ. ಅಣ್ಣಯ್ಯರ ಮಾತುಗಳು – ಕಳೆದ ೧೨ ವರ್ಷಗಳಿಂದ ಐಎಂಎಯ ವಿವಿಧ ಫಾರಂಗಳಲ್ಲಿ ಪ್ರಯತ್ನಿಸಿ ಈ ರೀತಿ ಒಂದು ಕಾಕ ಚೆನ್ನುವ ನನ್ನ ಕನಸು ಈಗ ಕೈಗೂಡಿದೆ.

ಬರಹಗಾರರ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಪಟೇಲ್‌ರು ಈ ವೃತ್ತಿ ಕ್ಷೇತ್ರದ ಮರೆಯಲಾಗದ ಘಟನೆಗಳ ಕುರಿತಾದ ಕಥಾನಕಗಳ ಸಂಗ್ರಹವನ್ನು ಹೊರ ತರಲು ಒಂದು ಸಂಪಾದಕ ಮಂಡಳಿ ರಚಿಸಿ ಅದರ ಜವಾಬ್ದಾರಿಯನ್ನು ನನಗೆ ವಹಿಸಿ ದರು. ಅಲ್ಲದೆ ಲೇಖನ ಕೊಡುವಂತೆ ನಾವು ಪದೇ ಪದೇ ಸಾಮಾಜಿಕ ಜಾಲತಾಣ, ವಾಟ್ಸಾಪ್ ಗ್ರೂಪ್‌ಗಳಲ್ಲಿ ವೈದ್ಯ
ಸಾಹಿತಿಗಳ ಬೆನ್ನ ಹಿಂದೆ ಬಿದ್ದೆವು. ಈ ಮೂಲಕ ೧೨ ವರ್ಷಗಳ ಬಳಿಕ ನಮ್ಮ ತಪಸ್ಸಿಗೆ ಫಲ ದೊರೆಯಲಾರಂಭಿಸಿತು. ಸುಮಾರು ೭೦ ಲೇಖನಗಳನ್ನು ನಾಡಿನ ಹಿರಿಯ ಕಿರಿಯ ವೈದ್ಯರು ಕನ್ನಡದಲ್ಲಿ ಬರೆದು ಕೊಟ್ಟರು.

ಅಲ್ಲದೆ ಪುಸ್ತಕಕ್ಕೆ ಸುಮಾರು ಒಂದು ನೂರರಷ್ಟು ಹೆಸರು ಸೂಚಿಸಿ ದೊಡ್ಡ ಮಟ್ಟದಲ್ಲಿ ನಮ್ಮ ಬೆನ್ನ ಹಿಂದೆ ನಿಂತರು. ಅಲ್ಲಿಂದ
ಆರಂಭ ಆಯಿತು ನಮ್ಮ ಸಾಹಿತ್ಯ ಯಜ್ಞ. ಈ ಪುಸ್ತಕದ ಸಂಪಾದಕ ಮಂಡಳಿಯಲ್ಲಿ ಡಾ. ಎಚ್. ಎಸ್. ಮೋಹನ್, ಡಾ. ಶಿವಾನಂದ ಕುಬಸದ, ಡಾ ಶಾಂತಲಾ ಮತ್ತು ಡಾ ಸಲೀಂ ನಡಾಫ್ ಅವರು ಇದ್ದರು. ಈ ಪುಸ್ತಕವನ್ನು ಬೆಂಗಳೂರಿನ ಹರಿವು
ಬುಕ್ಸ್ ಪ್ರಕಟಿಸಿದ್ದಾರೆ. 290 ಪುಟಗಳ ಪುಸ್ತಕಕ್ಕೆ 390 ರು.ಗಳ ಬೆಲೆ ಇರಿಸಲಾಗಿದೆ.

ಡಾ. ಅಣ್ಣಯ್ಯ ಕುಲಾಲ್ ಅವರು ಮುಂದುವರಿದು ಈ ಸಾಲುಗಳನ್ನು ಬರೆಯುತ್ತಾರೆ. ಬಿಳಿ ಕೋಟು, ಸ್ಟೆತೋಸ್ಕೋಪ್, ಕನ್ನಡಕ, ದಪ್ಪ ಮೀಸೆಯ ಗಾಂಭೀರ್ಯದ ಮುಗುಳ್ನಗುವಿನ ಡಾಕ್ಟರ್‌ಗಳು ಹೊರಗೆ ಹಾಗೇ ದರ್ಪ ಹಮ್ಮು ಬಿಮ್ಮು ಕಟುವಾಗಿ ತೋರಿದರೂ ಸಹ ಅವರ ಬದುಕಿನ ಇನ್ನೊಂದು ಭಾಗ ದಿನಗೂಲಿ ನೌಕರರಿಗಿಂತ ಏನೂ ಕಡಿಮೆ ಇಲ್ಲ. ದೂರದ ಊರಿಗೆ ಹೋಗುವ ಬಸ್‌ಗಳಲ್ಲಿ ಬದಲಿ ಡ್ರೈವರ್, ಡ್ರೈವರ್‌ನ ಸೀಟಿನ ಮೇಲೋ ಕೆಳಗೋ ಒಂದು ಕಡೆ ವಿಶ್ರಾಂತಿ ಪಡೆಯುವಂತೆ, ಆಪರೇಷನ್ ಕೋಣೆಗಳ ಅಕ್ಕ ಆಸ್ಪತ್ರೆಯ ಡ್ರೆಸ್‌ನಲ್ಲಿ ಹಾಗೂ ಹೀಗೋ ಒಂದಷ್ಟು ವಿಶ್ರಾಂತಿ ಪಡೆಯುತ್ತಾ, ಹೊತ್ತಲ್ಲದ ಹೊತ್ತಿನಲ್ಲಿ ಜೀವನ್ಮರಣದ ಸ್ಥಿತಿಯಲ್ಲಿ ಬರುವ ರೋಗಿಗಳ ಜೀವ ಉಳಿಸಲು ಹೆಣಗುವ, ಆಪರೇಷನ್‌ನಲ್ಲಿ ತುರ್ತು ರಕ್ತದ ಅಗತ್ಯ ಬಿದ್ದಾಗ ತಾವೇ ರಕ್ತದಾನ ಮಾಡಿ ಬಡ ರೋಗಿಗಳಿಗೆ ಸಂಬಂಧಿಕರಿಗೆ ತಮ್ಮ ಕಿಸೆಯಿಂದ ಹಣ ಕೊಟ್ಟು ಊಟ ತಿಂಡಿ ಕೊಡಿಸುವ, ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಬಿಲ್ ಕಟ್ಟಲು ಪರದಾಡುವ ಬಡವರಿಗೆ ಸದ್ದಿಲ್ಲದೆ, ಸುದ್ದಿ ಮಾಡದೆ ತಮ್ಮಿಂದ
ಆದಷ್ಟು ಹಣದ ನೆರವು ಕೊಟ್ಟು ಮುಗುಳ್ನಕ್ಕು ಮುಂದಕ್ಕೆ ಸಾಗುವ ನೂರಾರು ವೈದ್ಯರುಗಳಿದ್ದಾರೆ.

ಅಂಥವರು ಸುದ್ದಿಯಾಗುವುದೇ ಇಲ್ಲ. ವೈದ್ಯರ ಇನ್ನೊಂದು ಮುಖ ನಾವು ಕಾಣಬೇಕಾದರೆ ಅವರಿಗೆ ಒಂದಷ್ಟು ಹತ್ತಿರ ಆಗಬೇಕು. ಅವರ ಬದುಕಿನ ಇನ್ನೊಂದು ಮುಖವನ್ನು ನೋಡುವ ಪ್ರಯತ್ನ ಮಾಡಬೇಕು. ಈ ರೀತಿಯ ಒಂದು ಪ್ರಯತ್ನವೇ ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ ಎಂಬ ಪುಸ್ತಕ. ನಾಡಿನ ಹಿರಿ ಕಿರಿ ವೈದ್ಯರ ವೃತ್ತಿ ಬದುಕಿನ ಮರೆಯಲಾಗದ ಘಟನೆಗಳ
ಒಂದು ಅನುಭವ ಕಥನ.

ವೈದ್ಯಕೀಯ ಬರಹಗಾರರ ಹಿರಿಮೆ – ಈ ಶೀರ್ಷಿಕೆಯಡಿ ಮುನ್ನುಡಿ ಬರೆದುಕೊಟ್ಟ ನಾಡಿನ ಹಿರಿಯ ಸಾಹಿತಿ ಡಾ. ನಾ. ಡಿಸೋಜ ಈ ಪುಸ್ತಕ ನಮ್ಮ ವೈದ್ಯರ ಸಾಹಸ ಗಾಥೆಯ ಇನ್ನೊಂದು ಮುಖ. ತಮ್ಮ ಸೇವಾ ಅವಧಿಯಲ್ಲಿ ಅವರು ಎದುರಿಸಿದ ಕಠಿಣತಮವಾದ ಕೇಸ್ ಹಿಸ್ಟರಿಗಳನ್ನು ಓದುಗರ ಮುಂದೆ ಇಡುವುದರ ಮೂಲಕ ಇತರ ವೈದ್ಯರಿಗೆ, ವೈದ್ಯರಲ್ಲದ ಸಾಮಾನ್ಯ ಜನರಿಗೆ ವೈದ್ಯ ಲೋಕದ ಅಚ್ಚರಿಗಳನ್ನು ತಿಳಿಸಿ ಕೊಡುವುದೇ ಈ ಪ್ರಯತ್ನದ ಹಿಂದಿನ ಉದ್ದೇಶ ಎಂದು ನುಡಿಯುತ್ತಾರೆ.

ಸಾರಸ್ವತ ಲೋಕದ ದೊಡ್ಡ ಮೈಲಿಗಲ್ಲು – ಈ ಶೀರ್ಷಿಕೆಯಡಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಅವರು – ಈ ಅನುಭವಗಳು ಒಟ್ಟು ಸೇರಿದರೆ ಒಂದು ಚಾರಿತ್ರಿಕ ಆಕರ ಗ್ರಂಥವಾಗಲಿದೆ. ಒಂದು ಪಠ್ಯ ಪುಸ್ತಕಕ್ಕೆ ಅಗತ್ಯವಿರುವ ಎಲ್ಲಾ ವಿಷಯಗಳು ಈ ಪುಸ್ತಕದಲ್ಲಿ ದೊರಕಬಹುದು ಎಂದು ನುಡಿಯುತ್ತಾರೆ. ರಾಜೀವ ಗಾಂಽ
ಆರೋಗ್ಯ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಂ.ಕೆ. ರಮೇಶ್ ಅವರು ನೆನಪಿನಂಗಳದಿಂದ ಹರಿದು ಬಂದಿರುವ
ಅನುಭವಗಳು ಎಂದು ಈ ಪುಸ್ತಕದ ಹಿರಿಮೆಯನ್ನು ಕೊಂಡಾಡುತ್ತಾರೆ.

ನಾಡಿನ ಹಿರಿಯ ವೈದ್ಯ ಸಾಹಿತಿ ಡಾ. ಸಿ.ಆರ್. ಚಂದ್ರಶೇಖರ್ ತಮ್ಮ ಮುನ್ನುಡಿಯಲ್ಲಿ ವೈದ್ಯರದ್ದು ೨೪/೭ ಕೆಲಸ. ಯಾವ
ಹೊತ್ತಿನಲ್ಲಿ ಯಾವ ಕ್ಷಣದಲ್ಲಿ ಕರೆ ಬಂದ ಕೂಡಲೆ ಕರ್ತವ್ಯಕ್ಕೆ ಹಾಜರಾಗಬೇಕು. ಆಹಾರ, ನಿದ್ರೆ, ವಿಶ್ರಾಂತಿ, ಮನರಂಜನೆ ಇಲ್ಲದೆ ಅತಿಯಾದ ನಿರೀಕ್ಷೆ, ಮತ್ಸರವನ್ನು ಕೂಡ ನಿಭಾಯಿಸಬೇಕು. ವೈದ್ಯರದ್ದು ಸದಾ ಒತ್ತಡದ ಬದುಕು.

ಗಡಿಯಾರದ ಜೊತೆ ಓಟ ಎಂದು ಬಣ್ಣಿಸುತ್ತಾರೆ. ಪುಸ್ತಕದಲ್ಲಿನ ಕೆಲವು ಅನುಭವಗಳ ಕಡೆಗೆ ಕಣ್ಣು ಹಾಯಿಸೋಣ. ಮಂಗಳೂರಿನ ಹಿರಿಯ ವೈದ್ಯ ಡಾ. ಎಂ. ಶಾಂತಾರಾಮ ಶೆಟ್ಟಿ ಅವರು ತಮ್ಮ ವೃತ್ತಿ ಜೀವನದ ಹಲವು ಘಟನೆಗಳನ್ನು  ನೆನಪಿಸಿದ್ದಾರೆ. ವಯಸ್ಸಾದ ಪಾರ್ಸಿ ಮಹಿಳೆಯೊಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರವೂ ತಾನು ಸಾಯುವವರೆಗೆ ಪ್ರತಿವರ್ಷ ಶುಭ ಹಾರೈಕೆಯ ಕಾರ್ಡ್‌ಗಳನ್ನು ಕಳುಹಿಸುತ್ತಿದ್ದರ ಬಗ್ಗೆ ಬರೆದಿದ್ದಾರೆ.

ಇಎನ್‌ಟಿ ತಜ್ಞರಾದ ಡಾ. ಸತೀಶ್ ಕುಮಾರ ಭಂಡಾರಿಯವರು ಹಾವು ಕಡಿತದ ರೋಗಿಗೆ ಎಮರ್ಜೆನ್ಸಿ ವೈದ್ಯರು ಇಲ್ಲದಿದ್ದಾಗ ಚಿಕಿತ್ಸೆ ನೀಡಿ ರೋಗಿಯನ್ನು ಬದುಕಿಸಿದ ಘಟನೆಯನ್ನು ಮನಮೋಹಕವಾಗಿ ವಿವರಿಸಿದ್ದಾರೆ. ವೈಧವ್ಯವು ವರವೋ ಶಾಪವೋ ಎಂಬ ಲೇಖನದಲ್ಲಿ ಡಾ. ಸುನಂದ ಕುಲಕರ್ಣಿಯವರು ಒಬ್ಬ ಮಹಿಳೆಯ ಪತಿ ಸಂಭೋಗಕ್ಕೆ ಚಿತ್ರ ಹಿಂಸೆ ಕೊಡುವ ಪರಿಬಣ್ಣಿಸಿ ಪತಿಯ ಮರಣದ ನಂತರ ಆಕೆ ಸಂತೋಷದಿಂದ ಇರುವ ಅನುಭವವನ್ನು ವರ್ಣಿಸಿದ್ದಾರೆ.

ಹುಚ್ಚು ಬದುಕಿನ ಹತ್ತು ಮುಖಗಳು ಲೇಖನದಲ್ಲಿ ಡಾ. ನಾ. ಸೋಮೇಶ್ವರ ಅವರು ಔದ್ಯೋಗಿಕ ವೈದ್ಯಕೀಯ ಕ್ಷೇತ್ರದ ಕರಾಳ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಗ್ರೂಪ್ ಡಿ ಗಂಗಮ್ಮ ಎಂಬ ತಮ್ಮ ಕಥನದಲ್ಲಿ ಡಾ. ಅಶ್ವಿನಿ ರಾಮಸ್ವಾಮಿಯವರು ಮಕ್ಕಳ
ವಾರ್ಡಿನ ಗಂಗಮ್ಮ ಎಂಬ ಗ್ರೂಪ್ ಡಿ ನೌಕರಳ ಅದ್ಭುತ ಚಿತ್ರಣ ಮಾಡಿದ್ದಾರೆ. ತಾನು ರಿಟೈರ್ ಆಗುವಾಗ ಆಸ್ಪತ್ರೆಯಿಂದ ಅನಾಥವಾಗಬಹು ದಾದ ಹಲವು ಅನಾಥ ಮಕ್ಕಳ ಜವಾಬ್ದಾರಿಯನ್ನು ತಾನೇ ಹೊತ್ತು ಬಹಳ ದೊಡ್ಡ ಆದರ್ಶವನ್ನು
ತೋರಿಸುವ ಆಕೆಯ ವ್ಯಕ್ತಿತ್ವವನ್ನು ಎತ್ತಿ ಹಿಡಿದಿದ್ದಾರೆ.

ಅವರು ಬರೆದ ಈ ಸಾಲುಗಳು ಬಹಳ ಮನ ಕರಗುವಂಥವು. ನಮ್ಮ ವಿದ್ಯೆಗೆ, ದುಡ್ಡಿಗೆ, ಅಧಿಕಾರಕ್ಕೆ ಸವಾಲ್ ಎಸೆದು ಮಾನವೀಯತೆ ಯನ್ನು ಗೆಲ್ಲಿಸಿದಳು. ಯಾವತ್ತೋ ಒಂದು ದಿನ ಅನಾಥಾಶ್ರಮಕ್ಕೆ ಬಂದು ಹಣ್ಣು ಹಂಪಲು ಹಾಗೂ ವಸ್ತುಗಳನ್ನು ವಿತರಿಸಿ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಬಿಡುವವರು ಒಂದು ಕಡೆಯಾದರೆ, ಜೀವನ ಪರ್ಯಂತ ತನ್ನದಲ್ಲದ ಜೀವಗಳ ಜೀವನಕ್ಕಾಗಿ ತನ್ನ ಜೀವವನ್ನೇ ಧಾರೆ ಎರೆದಿರುವ ಗಂಗಮ್ಮನಂಥವರು ಇವರೆಲ್ಲರಿಗಿಂತ ಮೇಲು.

ಹರಕು ಬಟ್ಟೆಯ ಹುಡುಗಿ ಲೇಖನದಲ್ಲಿ ಡಾ. ಸಲೀಂ ನಡಾಫ್ ಅವರು ಪತ್ರಯಲ್ಲಿ ತನ್ನ ಕಣ್ಣ ಮುಂದೆ ತಾಯಿ ಮರಣ ಹೊಂದುವ ಸಂದರ್ಭದಲ್ಲಿ ಚಿಕ್ಕವಯಸ್ಸಿನ ಹುಡುಗಿಯ ಮನಸ್ಥಿತಿಯನ್ನು ಅದ್ಭುತವಾಗಿ ಚಿತ್ರಣ ಮಾಡಿದ್ದಾರೆ. ರಕ್ತದಾನದ ಬಗೆಗಿನ ತಪ್ಪು ತಿಳುವಳಿಕೆ ಬಗ್ಗೆ ಡಾ. ರಜನಿಯವರು ಮನಮೋಹಕವಾಗಿ ವಿವರಿಸಿದ್ದಾರೆ. ಸಾಂದರ್ಭಿಕವಾಗಿ ಇಲ್ಲಿ ವೈದ್ಯರೇ ರೋಗಿಗೆ ರಕ್ತ ಕೊಡುವ ಅನಿವಾರ್ಯತೆ ಒದಗಿತು.

ಕಷ್ಟಪಟ್ಟು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಮ್ಮದೇ ರಕ್ತ ಕೊಟ್ಟು ಬೇರೆ ವೈದ್ಯರಿಂದ ಆಪರೇಷನ್ ಮಾಡಿಸಿ ರೋಗಿಯನ್ನು ಉಳಿಸಿದರು. ಕೆಲವು ದಿವಸಗಳ ನಂತರ ಬಂದ ಆಕೆಯ ಗಂಡ ಡಾಕ್ಟ್ರೇ ನಿಮ್ಮ ರಕ್ತ ಕೊಟ್ಟರೂ ನನ್ನ ಹೆಂಡತಿ ಬೆಳ್ಳಗಾಗಲಿಲ್ಲ (ಆಕೆ ಬಹಳ ಕಪ್ಪು ಇದ್ದಳು) ಎಂದು ತನ್ನ ಮುಗ್ಧತೆ ಯನ್ನು ಮೆರೆದದ್ದು ಚಂದವಾಗಿ ವಿವರಿಸಿದ್ದಾರೆ.

ವರ್ಣ(ನಾ)ತೀತ ಎಂಬ ತಮ್ಮ ಲೇಖನದಲ್ಲಿ ಸುಮಾ ಗುಡಿ ಅವರು ಸಾಮಾನ್ಯ ಜನರ ಮುಗ್ಧತೆಯ ಇನ್ನೊಂದು ಮುಖವನ್ನು ಅನಾವರಣ ಗೊಳಿಸಿದ್ದಾರೆ. ೬ ತಿಂಗಳ ಹಸು ಕೂಸನ್ನು ತಂದು ಕೊಟ್ಟು ತಗೊಳ್ಳೋ ಆಯಮ್ಮನ ಬೆಳ್ಳಗೆ ಆಗೋ ಹಾಗೆ ಮಾಡು ಮೇಡಂ ಎಂದು ಚರ್ಮದ ವೈದ್ಯರಲ್ಲಿ ಅಲವತ್ತುಗೊಳ್ಳುವ ವಿಚಿತ್ರ ಪ್ರಸಂಗವನ್ನು ಸ್ವಾರಸ್ಯವಾಗಿ ವಿವರಿಸಿದ್ದಾರೆ. ಶೀನನ ಕಥೆ ಲೇಖನದಲ್ಲಿ ಡಾ. ವೈ. ಸುದರ್ಶನ ರಾವ್ ರೋಗಿಯೊಬ್ಬ ತಮಗೆ ಮಿತ್ರನಾದ ಪರಿ, ಆ ರೋಗಿಗೆ ತಾವು ಮಾಡಿದ ಹಲವು ಶಸ್ತ್ರಕ್ರಿಯೆಗಳ ವಿಫಲತೆ, ನಂತರ ಸಫಲರಾದದ್ದು, ನಂತರ ೨೦ ವರ್ಷಗಳ ಕಾಲ ಆತ ಬದುಕಿದ ಕಥೆಯನ್ನು
ಸ್ವಾರಸ್ಯ ವಾಗಿ ವರ್ಣಿಸಿದ್ದಾರೆ.

ಮನೀಶಾಳ ಮನೋಕ್ಲೇಶ ಲೇಖನದಲ್ಲಿ ಡಾ. ಕೆ.ಎಸ್. ಶುಭ್ರತಾ ಮನೋ ವೈದ್ಯರಲ್ಲಿ ಬರುವ ವಿಚಿತ್ರ ರೀತಿಯ ಸಂದಿಗ್ಧ ಸಮಸ್ಯೆ, ಅದು ತನ್ನಿಂದ ತಾನೆ ಪರಿಹಾರವಾದ ಚಿತ್ರಣ ಬಹಳ ಚೆನ್ನಾಗಿ ಮಾಡಿದ್ದಾರೆ. ಇನ್ನೊಬ್ಬ ಮನೋವೈದ್ಯೆ ಡಾ.
ಕೆ.ಎಸ್. ಪವಿತ್ರ ಸಾವಿನ ಪಾಠಗಳು ಲೇಖನದಲ್ಲಿ ತಮ್ಮ ರೋಗಿ ಆತ್ಮಹತ್ಯೆಗೆ ಒಳಗಾದದ್ದು ವಿವರಿಸಿ, ರೋಗಿ ಆತ್ಮಹತ್ಯೆ
ಮಾಡಿಕೊಂಡಾಗ ವೈದ್ಯ, ಸಮಾಜ, ಕುಟುಂಬಗಳು ತಮ್ಮ ಪಾಲಿನ ತಪ್ಪೆಷ್ಟು ಎಂಬುದರ ಬಗ್ಗೆ ಚರ್ಚೆಯಾಗಬೇಕೆಂಬ
ಗಂಭೀರ ವಿಚಾರ ಪ್ರಸ್ತಾಪಿಸುತ್ತಾರೆ.

ಕುಂದಾಪುರದ ಮೊಂಡುಕೈ ಹುಡುಗಿ ಅಮೆರಿಕದಲ್ಲಿ ಚಿತ್ರಕಾರಳಾದ ರೋಚಕ ಕಥೆ ಎಂಬ ಅಪರೂಪದ ಅನುಭವವನ್ನು ಡಾ.
ಎಚ್.ಎಸ್. ಮೋಹನ್ ವಿವರಿಸಿದ್ದಾರೆ. ಕೈ ಕಾಲುಗಳ ಊನತೆಯಿಂದ ಹುಟ್ಟಿದ ಹೆಣ್ಣು ಮಗುವನ್ನು ತಮಗೆ ಸಾಕಲು ಸಾಧ್ಯ ವಾಗುವುದಿಲ್ಲ ಎಂದು ಆಸ್ಪತ್ರೆಯಲ್ಲಿ ಬಿಟ್ಟುಹೋದ ಹೆತ್ತವರು, ಲೇಖಕರ ಪತ್ರಿಕಾ ಲೇಖನದಿಂದ ಪ್ರಭಾವಿತರಾಗಿ ಬೆಂಗಳೂರಿನ ಸಂಸ್ಥೆ ಮಣಿಪಾಲದಿಂದ ಕೊಂಡು ಹೋಗಿ ಸಾಕುವುದು, ನಂತರ ಅಮೆರಿಕದ ಮಹಿಳೆ ದತ್ತು ತೆಗೆದುಕೊಂಡು
ಹೋಗಿ ಅಲ್ಲಿ ಮಗು ಬೆಳೆದು ಕೈ ಇಲ್ಲದಿದ್ದರೂ ವಿಶಿಷ್ಟ ರೀತಿಯಿಂದ ಚಿತ್ರಕಾರಳಾಗಿ ಅಪರೂಪದ ಸಾಧನೆ ಮಾಡಿದ ರೋಚಕ ಕಥನವಿದೆ. ಒಂದು ಪತ್ರಿಕಾ ಲೇಖನ ಏನೆಲ್ಲಾ ಬದಲಾವಣೆ ತರಬಹುದು ಎಂಬ ಅಪರೂಪದ ಚಿತ್ರಣ ಇಲ್ಲಿದೆ.

ಹೀಗೆ ಅಪರೂಪದ ವೈದ್ಯಕೀಯ ಲೇಖನಗಳ ಈ ಪುಸ್ತಕ ಆಸಕ್ತರಿಗೆ ವಿಪುಲ ವಿಷಯವನ್ನು ಒಳಗೊಂಡಿದೆ.