ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಕರೋನಾ ಸದ್ಯಕ್ಕಂತೂ ಯುದ್ಧ ವಿರಾಮ ಘೋಷಿಸಿದೆ. ಸ್ವಲ್ಪ ಸುಧಾರಿಸಿಕೊಳ್ಳಿ ಎಂದಿರಬಹುದು. ಇನ್ನು ಕೆಲವರು ಎಲ್ಲದಕ್ಕೂ ಹೆಮ್ಮೆ ಪಡುವವರಿರುತ್ತಾರೆ. ‘ನನಗೆ ಕರೋನಾ ಬರಲೇ ಇಲ್ಲ, ಕರೋನಾದ ಪೀಕ್‌ಟೈಮ್‌ನಲ್ಲೇ ನಾನು ದಿನಾ ಎರಡು ತಾಸು ತಿರುಗಾಡಿ ಬರುತ್ತಿದ್ದೆ, ಏನೂ ಆಗಲಿಲ್ಲ’ ಎನ್ನುತ್ತಿರುತ್ತಾರೆ. ಇನ್ನು ಕೆಲವರು ನನಗೂ ಬಂದಿತ್ತು ನಾನು ಅಂಜಲಿಲ್ಲ, ಕ್ವಾರಂಟೈನ್‌ನಲ್ಲಿದ್ದಾಗ ಅವರು ಕೊಟ್ಟಿದ್ದು ತಿಂದು, ಟಿ.ವಿ ನೋಡಿ, ಇಸ್ಪೀಟು ಆಡಿ, ಝಮ್ ಅಂತ ಇದ್ದೆ ಎಂದು ಹೇಳುತ್ತಿರುತ್ತಾರೆ.
ಇನ್ನು ದಾನಿಗಳ ಬಗ್ಗೆ ಹೇಳಬೇಕೆಂದರೆ, ಕರೋನಾದ ಸಮಯದಲ್ಲಿ ಅನೇಕ ಸಂಘ, ಸಂಸ್ಥೆ, ನಾಯಕರು, ಆಯಾಯ ಜಾತಿಧರ್ಮದವರು ತಮ್ಮ ತಮ್ಮ ಕೈಲಾದ ಮಟ್ಟಿಗೆ ಆಹಾರ, ನೀರು, ಔಷಧಿ, ಚಿಕಿತ್ಸೆಗಳನ್ನು ಕೊಡಿಸಿದರು. ಅವರನ್ನು ಅಂದರೆ ಕರೋನಾ ಪೀಡಿತ ಪೊಸಿಟಿವ್ ವ್ಯಕ್ತಿಗಳನ್ನು ತಮ್ಮ ಮನೆಯಲ್ಲಿ ಇಟ್ಟು ಕೊಳ್ಳುವುದನ್ನು, ಅವರ ಜತೆಗೆ ಇರುವುದೊಂದನ್ನು ಬಿಟ್ಟು, ಉಳಿದೆಲ್ಲ ರೀತಿಯ ಸಹಾಯ ಮಾಡಿದರು. ಸಾಕಷ್ಟು ಸಾವು, ಅತಿ ವಿಚಿತ್ರ ನೋವುಗಳನ್ನು ಇಡೀ ಜಗತ್ತು, ಜಗತ್ತಿನ ಜನ ಅನುಭವಿಸಿಬಿಟ್ಟರು. ಇದಕ್ಕಿಂತ ದೊಡ್ಡ ಸವಾಲು ಬಹುಶಃ ಇನ್ನು ಮುಂದೆ ನೂರು ವರ್ಷಗಳ ಕಾಲ ಬರಲಿಕ್ಕಿಲ್ಲ.
ಬರುವುದೂ ಬೇಡ ಎಂದೇ ತಮ್ಮ ತಮ್ಮ ಆ ದೇವರಲ್ಲಿ ಇಡೀ ಜಗತ್ತಿನ ಜನ ಬೇಡಿಕೊಳ್ಳುತ್ತಿದ್ದಾರೆ. ಬೇಡಿಕೊಳ್ಳಬೇಕು ಕೂಡಾ. ಆ ಸಮಯದಲ್ಲಿ ದೇವರೂ
ಕೂಡ ತನ್ನ ದೇವಸ್ಥಾನಗಳೇ ಮುಚ್ಚಿದ್ದರಿಂದ ಎಲ್ಲಿದ್ದನೋ, ಅಥವಾ ಆತನೂ ಹಿಮಾಲಯದಲ್ಲೋ, ಬೆಟ್ಟಗುಡ್ಡಗಳಲ್ಲೋ ಕ್ವಾರಂಟೈನ್‌ನಲ್ಲಿದ್ದನೋ ಏನೋ? ಏಕೆಂದರೆ, ಅತೀ ಬುದ್ಧಿಯ ಪಾಪಿ ಚೀನಾ, ಪಾಕಿಸ್ತಾನಗಳು ದೇವರನ್ನೂ ನಾಶ ಮಾಡುವ ಶಕ್ತಿ ಪಡೆದಿವೆ ಎಂಬುದಕ್ಕೆ ದೇವರೂ ಕೆಲ ಕಾಲ ಅಂದರೆ ಒಂದು ಒಂದೂವರೆ ವರ್ಷ ಕೈಲಾಗದವನಂತೆ ತೆಪ್ಪಗೆ ಸುಮ್ಮನಿದ್ದ, ಒಳ್ಳೆಯದಾದರೆ ದೇವರ ಕೃಪೆ, ಕೆಟ್ಟದಾದರೆ ನಮ್ಮ ಕರ್ಮ ಇದುವೇ ನಾವು ಅನುಸರಿಸಬೇಕಾಗಿರುವ ಸೂತ್ರ ತಾನೇ? ಪಾಪಿಗಳನ್ನು ಶಿಕ್ಷಿಸುವ ಶಕ್ತಿ ಯಾರಿಗೂ ಸ್ವತಃ ದೇವರಿಗೂ ಇಲ್ಲ.
ಏಕೆಂದರೆ ‘ಪಾಪಿ ಪಾಪೇನ ಹನ್ಯತೇ’ ಪಾಪಿಗಳು ತಾವು ಮಾಡಿದ ಪಾಪದಿಂದಲೇ ನಾಶವಾಗುತ್ತಾರೆ ಎಂಬ ಮಾತೇ ಇದೆ. ‘ಧರ್ಮೋ ರಕ್ಷತಿ, ರಕ್ಷಿತಃ’ ಎಂಬಂತೆಯೇ ಪಾಪಿ ಪಾಪೇನ ಹನ್ಯತೇ. ಇಂಥ ಕೆಲವು ಸೆಟ್ಟಿಂಗ್‌ಗಳನ್ನು, ಸರ್ಕ್ಯೂಟ್‌ಗಳನ್ನು, ಸಿಸ್ಟಂಗಳನ್ನು ಆ ದೇವರು ಎಂಬ ಸಾಫ್ಟ್ವೇರ್ ತಜ್ಞ ಪ್ರಕೃತಿಯಲ್ಲಿ ಸೆಟ್ ಮಾಡಿಟ್ಟು ಲಾಂಗ್ ಲೀವ್ ಹೋಗಿದ್ದಾನೆ. ಹೋಗಲಿ ಬಿಡಿ ಪಾಪ, ಆತಗೂ ಚೇಂಜ್ ಬೇಕು. ನಮಗೂ ಬುದ್ಧಿ ಬರಬೇಕು ಅಲ್ಲವೇ? ನಾನೀಗ ಹೇಳಲು ಹೊರಟಿದ್ದು, ಕರೋನಾ ಸಮಯದಲ್ಲಿ ಸಂಘ ಸಂಸ್ಥೆಗಳು, ಸರಕಾರ, ದಾನಿಗಳು ಕೊಟ್ಟ ಫುಡ್‌ಕಿಟ್, ಮೆಡಿಸಿನ್ ಕಿಟ್ ಕಡೆಕಡೆಗೆ ಮಾಸ್ಕ್‌ಗಳಿಗೂ ಕೂಡ ಜನ
ಮುಗಿಬಿದ್ದು, ಕಿತ್ತಾಡಿ, ಒದ್ದಾಡಿ, ಬೇಕಿರಲಿ ಬಿಡಲಿ, ಅವಶ್ಯಕತೆ ಇರಲಿ, ಬಿಡಲಿ, ಸಿಕ್ಕದ್ದೇ ಸೀರುಂಡೆ ಎಂಬಂತೆ ಪುಗಸಟ್ಟೆ ಕೊಟ್ಟರೆ ನಮ್ಮ ಪೂರ್ವಜರಿಗೂ ಬೇಕು ಎಂಬಂತೆ ಕಿತ್ತಾಡಿ ಒಯ್ಯುತ್ತಿರುವುದನ್ನು ನಾವು ಟಿ.ವಿ., ಪತ್ರಿಕೆಗಳಲ್ಲಿ ಪ್ರತ್ಯಕ್ಷವಾಗಿಯೂ ನೋಡಿದೆವು.
ಕೊಡುವವನು ದೊಡ್ಡವನೋ? ಕಿತ್ತಾಡಿ ಕಸಿದುಕೊಳ್ಳುವವನು ದೊಡ್ಡವನೋ? ಎಂಬ ತರ್ಕಕ್ಕೆ ಬಿದ್ದಾಗ, ಕೊಡುತ್ತೇನೆಂದರೂ ತೆಗೆದುಕೊಳ್ಳಲು ಬಾರದವರು ದೊಡ್ಡವರು. ಅದು ಹೇಗೆ? ಉದಾಹರಣೆಗೆ ಇಲ್ಲೊಂದು ಮಹಾಭಾರತದ ಕಥೆಯಿದೆ. ಯುದ್ಧವೆಲ್ಲ ಮುಗಿದು ಧರ್ಮರಾಜನು ರಾಜಸೂಯ ಯಜ್ಞವನ್ನು ಮಾಡಿದ್ದ. ಯುದ್ಧ ಮುಗಿದ ಮೇಲೆ ಧರ್ಮರಾಜನಿಗೆ ಎಲ್ಲ ದಿಕ್ಕುಗಳಿಂದ ಧನಕನಕ, ವಜ್ರ, ವೈಢೂರ್ಯಗಳು ರಾಶಿರಾಶಿಯಾಗಿ ಬಂದು, ಇಡಲು ಉಗ್ರಾಣ, ಪೆಟ್ಟಿಗೆ, ಬ್ಯಾಂಕುಗಳು, ಇನ್‌ವೆಸ್ಟ್ ಮಾಡಲು ಶೇರ್ ಮಾರ್ಕೇಟ್‌ಗಳು ಇಲ್ಲದ ಆ ಸಮಯದಲ್ಲಿ ಹಾದಿ, ಬೀದಿ ಬಯಲು ಪ್ರದೇಶಗಳಲ್ಲೇ ಆ ಸಂಪತ್ತನ್ನು ಸುರುವಿ
ಹೋಗಲಾಗಿತ್ತಂತೆ. ದಾನ ಧರ್ಮಗಳನ್ನು ಮಾಡಿ ಕೈ ಸೋತು ಹೋಗಿತ್ತಂತೆ ಧರ್ಮರಾಜನಿಗೆ. ಹೀಗಾಗಿ ತಾನು ಮಹಾದಾನಿ ಎಂಬ ಒಂದು ಸಣ್ಣ ಸಾತ್ವಿಕ ಅಹಂಕಾರ ಧರ್ಮರಾಯನ ಮನದಲ್ಲಿ ಟಿಸಿಲೊಡೆದಿತ್ತು. ಅದನ್ನು ಕೃಷ್ಣನ ಮುಂದೆಯೂ ಒಮ್ಮೆ ಹೇಳಿದ್ದನಂತೆ.
ಇದನ್ನು ಕೇಳಿ ಮನದಲ್ಲೇ ನಕ್ಕಿದ್ದ ಶ್ರೀಕೃಷ್ಣ, ಧರ್ಮರಾಯನ ಬಳಿ ಇಷ್ಟೂ ಅಹಮಿಕೆ, ಸಾತ್ವಿಕ ಗರ್ವ ಕೂಡಾ ಇರಬಾರದು, ಧರ್ಮರಾಯನೆಂದರೆ ಆತ ಧರ್ಮದ ಪ್ರತಿರೂಪ, ಸಟಿಕದಂತೆ ಇರಬೇಕಾದವನು ಎಂದು ಬಯಸಿದ್ದು, ಸಮಯಕ್ಕಾಗಿ ಕಾದಿದ್ದು, ಸುತಲಾಽಪತಿಯಾಗಿದ್ದ ದಾನವೀರ, ಬಲಿಚಕ್ರವರ್ತಿಯ ಆಸ್ಥಾನಕ್ಕೆ ಕರೆತಂದನಂತೆ. ಬಲಿಚಕ್ರವರ್ತಿ ಕೃಷ್ಣನನ್ನು ಸ್ವಾಗತಿಸುತ್ತಾ ‘ಹೇ ಭಗವಾನ್, ನಿನಗೆ ಸ್ವಾಗತ, ನಿನೊಬ್ಬನೇ ಬರದೇ ಈ ದರಿದ್ರ ರಾಜನನ್ನು ಏಕೆ ಜೊತೆಯಲ್ಲಿ ಕರೆತಂದೆ ಎಂದು ಎದುರಿಗೇ ಅಂದುಬಿಟ್ಟನಂತೆ, ಧರ್ಮರಾಜ ಅಪಮಾನ, ಅರ್ಧಕೋಪದಿಂದ ತಲೆತಗ್ಗಿಸಿ ನಿಂತಾಗ, ಶ್ರೀಕೃಷ್ಣ ‘ಹೇ ಬಲಿಚಕ್ರವರ್ತಿ, ಇವನ ಹೆಸರೇ ಧರ್ಮರಾಜ, ಈತನನ್ನು ದರಿದ್ರನೆಂದು ಕರೆದುದು ಸರಿಯಲ್ಲ, ರಾಜಸೂಯ ಯಾಗ ಮಾಡಿ ಲಕ್ಷ ಲಕ್ಷ ಜನರಿಗೆ ಕೇಳಿದ್ದು, ಬೇಡಿದ್ದು, ಅವರು ನೋಡಿದ್ದನ್ನು ದಾನ ಮಾಡಿದ ಅಸಾಮಾನ್ಯ ದಾನಶೂರ. ಇಂಥವನಿಗೆ ನೀನು ದರಿದ್ರನೆನ್ನುವಿಯಾ? ಅರಮನೆಯ ಮುಂದೆ ಸಾಲು ಸಾಲು ನಿಲ್ಲುವ ಆರ್ತಿಗಳಿಗೆ ಅನ್ನ, ವಸನ, ಭೂಷಣಾದಿಗಳನ್ನು ಕೊಟ್ಟು ಕಳಿಸಿ ಕಳಿಸಿ ಈತನ ಕೈ ಸೋತು ಹೋಗಿವೆ’ ಎಂದನಂತೆ.
ಅದಕ್ಕೆ ಬಲಿ ಚಕ್ರವರ್ತಿ ಕೊಟ್ಟ ಉತ್ತರ ‘ಹಾ..ಹಾ.. ಕೃಷ್ಣ ಅದಕ್ಕೆ ನಾನಿವನನ್ನು ದರಿದ್ರ ರಾಜಾ ಎಂದದ್ದು. ಏಕೆಂದರೆ, ನನ್ನ ರಾಜ್ಯದಲ್ಲಿ ನಾನು ವರ್ಷಕ್ಕೊಮ್ಮೆ ಮಾಡುವ ದಾನಕ್ಕಾಗಿ ಬಡವರು, ಬ್ರಾಹ್ಮಣರು, ವೇದವಿದರು ಮುಂತಾದವರನ್ನು ಮನೆ ಮನೆಗೆ ಹೋಗಿ ಕೈಕಾಲು ಬಿದ್ದು ಕರೆದು ನನ್ನ ಅರಮನೆಗೆ ಬಂದು ದಾನ ಸ್ವೀಕರಿಸಿ ಎಂದು ಬೇಡಿಕೊಂಡರೂ ಒಬ್ಬನೇ ಒಬ್ಬನೂ ಬರುವುದಿಲ್ಲ ಗೊತ್ತೆ ನಿನಗೆ?’ ಎಂದಾಗ ಕೃಷ್ಣ, ಧರ್ಮರಾಯರಿಬ್ಬರೂ ಹೌದೆ? ಏಕೆ? ಎಂದಾಗ ಬಲಿ
ಹೇಳುತ್ತಾನೆ. ‘ಏಕೆಂದರೆ, ನನ್ನ ರಾಜ್ಯದಲ್ಲಿ ಒಬ್ಬರೂ, ಇನ್ನೊಬ್ಬರು ನೀಡುವ ಮಾನಕ್ಕಾಗಲಿ, ಸನ್ಮಾನಕ್ಕಾಗಲಿ ಓಡಿ ಬರುವುದಿಲ್ಲ.
ಪರಾನ್ನ, ಪರವಸ್ತು, ಪರ ಸನ್ಮಾನಗಳನ್ನು ಅವರೆಲ್ಲ ಕಳ್ಳತನವೆಂದೇ ಭಾವಿಸುತ್ತಾರೆ. ಇನ್ನೊಬ್ಬರಿಂದ ಏನನ್ನಾದರೂ ಪಡೆದೆವೆಂದರೆ ನಾವು ಪುಣ್ಯಕ್ಷೀಣ ರಾಗುತ್ತೇವೆಂದೇ ಗಾಬರಿಯಾಗುತ್ತಾರೆ. ತಾವೇ ಇನ್ನೊಬ್ಬರಿಗೆ ಕೊಡಲು ಕಾತುರರಾಗಿರುವ ಈ ನಾಡಿನಲ್ಲಿ ಯಾರೂ ಏನನ್ನೂ ಪಡೆಯುವುದಿಲ್ಲ. ಹೇ ಧರ್ಮರಾಜ, ನಿನ್ನ ರಾಜ್ಯದಲ್ಲಿ ಕರೆದಾಕ್ಷಣ ಲಕ್ಷಾಂತರ ಜನ ಓಡಿ ಓಡಿ ಬಂದು ಬಂದು ಸಾಲಾಗಿ ನಿಲ್ಲುತ್ತಾರೆಂದರೆ ಅವರಿಗೆ ಹೊಟ್ಟೆಗೂ, ಬಟ್ಟೆಗೂ ಇಲ್ಲದೇ ತತ್ತರಿಸುವ ಸ್ಥಿತಿಯಿದೆ ಎಂದೇ ಅಲ್ಲವೇ ಲೆಕ್ಕ? ಯಾವಾತನ ರಾಜ್ಯದಲ್ಲಿ ಜನ, ಜ್ಞಾನಿಗಳು, ಪಂಡಿತರು, ಕಲಾವಿದರು, ಸಂಗೀತ ತಜ್ಞರು, ದಾರಿದ್ರ್ಯರ
ದುರವಸ್ಥೆಯಲ್ಲಿರುವರೋ ಅವರನ್ನು ಆಳುವ ರಾಜನನ್ನು ಕಡುದರಿದ್ರನೆಂದೇ ಕರೆಯಬೇಕಾಗುತ್ತದೆ ಅಲ್ಲವೇ? ಎಂದನಂತೆ.
ಧರ್ಮರಾಜನು ತಲೆ ಕೆಳಗೆ ಹಾಕಿ ನಿಂತದ್ದುಕಂಡು ಶ್ರೀಕೃಷ್ಣನು ನಸುನಕ್ಕು ಬಲಿಯನ್ನು ಕಣ್ಣಿನಲ್ಲೇ ಶ್ಲಾಘಿಸಿದನಂತೆ. ಈ ಭರತ ಭೂಮಿ ಹೇಗಿತ್ತು ಎಂಬುದನ್ನು
ಇಂಥ ಕಥೆಗಳ ಮುಖಾಂತರ ನಮ್ಮ ಪೀಳಿಗೆಯ ಯುವಕರಿಗೆ, ಮಕ್ಕಳಿಗೆ ಹೇಳುವವರಾರು? ಯಾರೂ ಯಾರೊಬ್ಬನೂ ಸಲಹೆ ಹೇಳುತ್ತಿರಲಿಲ್ಲ, ಏಕೆಂದರೆ ಎಲ್ಲರೂ ಜ್ಞಾನಿಗಳೇ. ಜಗಳ, ಕಚ್ಚಾಟ, ನ್ಯಾಯ ನಿರ್ಣಯ, ಸಾಕ್ಷಿ, ಊಹ್ಞೂ ಏನೂ ಇರಲಿಲ್ಲ. ಕಾರಣ ಆಳುವ ರಾಜ ತಪೋನಿಷ್ಠ, ದೈವಭಕ್ತ, ಸ್ವತಃ ಜ್ಞಾನಿ ಯಾಗಿದ್ದ, ಇನ್ನೊಬ್ಬರ ಕಷ್ಟಗಳನ್ನು ಕ್ಷಣಮಾತ್ರದಲ್ಲಿ ಅರಿಯುತ್ತಿದ್ದ.
ಆದರೆ, ಇಂದು ನಮ್ಮನ್ನಾಳುವವರೂ ಪಶುಗಳೇ, ನಾವೂ ಪಶುಗಳೇ, ಸಿಕ್ಕದ್ದೆ ಸೀರುಂಡೆ ಎಂದು ಬಾಚಿಕೊಳ್ಳಲು ಕಾದಿರುವ ನಾವೆಲ್ಲಿ, ಅಂಥ ಯುಗವೆಲ್ಲಿ? ಇಂದು
ಜ್ಞಾನಿಗಳು, ವಿಜ್ಞಾನಿಗಳು, ಪಂಡಿತರು, ಪಾಮರರು, ಕಲಾವಿದರು, ತಪಸ್ವಿಗಳು ಆಳುವ ರಾಜನ ಮುಂದೆ ಧನಸಹಾಯ, ಪ್ರಶಸ್ತಿ, ಸ್ಥಾನಮಾನಗಳಿಗಾಗಿ ಸರಕಾರದ ಮುಂದೆ ಕಾದು ನಿಂತಿರುತ್ತಾರೆ. ದಾನ ಧರ್ಮಗಳಿಗಾಗಿ ಜನ ಬೇಡಲು ನಿಂತ ಸಾಲಿನಷ್ಟೇ ಉದ್ದದ ಜೀವನವನ್ನು ಆಳುವ ಅರಸರು ನರಕದಲ್ಲಿ ಕಳೆಯ ಬೇಕಾಗುತ್ತದೆ.
ಬೇಡುವವರಿಲ್ಲದೇ ಬಡವನಾದೆನಯ್ಯಾ ಎನ್ನಬೇಕಾಗಲಿ, ಆಳುವ ರಾಜ ಎಷ್ಟೆಂದು ಕೊಡಲಿ, ಕೊಟ್ಟು ಕೊಟ್ಟು ಬಡವನಾದೆ, ಎನ್ನುವ ಸ್ಥಿತಿ ಬಂದರೆ ಆ ರಾಜನನ್ನು, ಆ ರಾಜ್ಯವನ್ನು ಪ್ರಕೃತಿಯ ವಿಕೋಪಗಳೇ ನೆಲಸಮ ಮಾಡುತ್ತವೆ.