Wednesday, 18th September 2024

ಮೋದಿಯ ಬೈದ ಮಾತ್ರಕ್ಕೆ ಮತ ಸಿಗದು

ವರ್ತಮಾನ

maapala@gmail.com

ಬಿಜೆಪಿಯನ್ನು ವಿರೋಧಿಸುವ ಪಕ್ಷಗಳನ್ನೆಲ್ಲಾ ಒಟ್ಟು ಸೇರಿಸಿಕೊಂಡು ಇಂಡಿಯ ಮೈತ್ರಿಕೂಟ ರಚಿಸಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರುತ್ತಾ ಕುಳಿತರೆ ಜನರು ಮತ ಹಾಕುವುದಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಂದ ಕಲಿಯುವುದು ಬಹಳಷ್ಟಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಮುಂದಿನ ವರ್ಷ
ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಈ ಚುನಾವಣೆಗಳನ್ನು ಸೆಮಿಫೈನಲ್ ಎಂದೇ ಪರಿಗಣಿಸಲಾಗಿತ್ತು. ಕನಿಷ್ಠ ೩ ರಾಜ್ಯಗಳಲ್ಲಿ ಗೆಲ್ಲುವ ನಿರೀಕ್ಷೆ
ಯಲ್ಲಿದ್ದ ಕಾಂಗ್ರೆಸ್ ಕೇವಲ ಒಂದು ರಾಜ್ಯದಲ್ಲಿ ಮಾತ್ರ, ಅದೂ ಕಷ್ಟಪಟ್ಟು ಗೆಲುವಿನ ರುಚಿ ಕಂಡಿತು.

ಸಹಜವಾಗಿಯೇ ಇದರಿಂದ ಇಂಡಿಯ ಮೈತ್ರಿಕೂಟ ದಲ್ಲಿ ಬಿರುಕು ಮೂಡುವ ಲಕ್ಷಣಗಳು ಕಾಣಿಸಿಕೊಂಡಿದೆ. ಮೈತ್ರಿಕೂಟದ ನಾಯಕತ್ವವನ್ನು ಕಾಂಗ್ರೆಸ್ ವಹಿಸಿಕೊಳ್ಳುವುದಕ್ಕೆ ವಿರೋದ ವ್ಯಕ್ತ ವಾಗಿದೆ. ಈ ಚುನಾವಣೆಗಳನ್ನು ಕಾಂಗ್ರೆಸ್ ಇಂಡಿಯ ಮೈತ್ರಿಕೂಟದಡಿ ಎದುರಿಸದಿದ್ದರೂ ಒಂದು ಪಕ್ಷವಾಗಿ ಹೀನಾಯ ಸೋಲು ಕಂಡಿರುವುದರಿಂದ ಅದು ಮೈತ್ರಿಕೂಟವನ್ನು ಮುಂದುವರಿಸಲು ಶಕ್ತವಲ್ಲ ಎಂಬ ಭಾವನೆ ಅಂಗಪಕ್ಷಗಳಲ್ಲೇ ಮೂಡಿದೆ. ಕೇಂದ್ರದಲ್ಲಿ ಅಽಕಾರ ಹಿಡಿಯಬೇಕಾದರೆ ಉತ್ತರ ಭಾರತದಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬುದು ಮೊದಲಿನಿಂದಲೂ ಸಾಬೀತಾಗಿದೆ. ಮೇಲಾಗಿ ಇಂಡಿಯ ಮೈತ್ರಿಕೂಟದ ಬಹುತೇಕ ಪಕ್ಷಗಳು ಉತ್ತರ ಭಾರತ ಮೂಲದವುಗಳಾಗಿದ್ದು, ಆ ಭಾಗದಲ್ಲಿ ಗಟ್ಟಿ ನೆಲೆ ಇಲ್ಲದ ಪಕ್ಷವನ್ನು ತನ್ನ ನೇತಾರ ಎಂದುಕೊಳ್ಳಲು ಸಾಧ್ಯವೇ ಇಲ್ಲ.

ಹೀಗಾಗಿಯೇ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಕರೆಯಲಾಗಿದ್ದ ಇಂಡಿಯ ಮೈತ್ರಿಕೂಟದ ಮೊದಲ ಸಭೆ ರದ್ದಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಽ ಮತ್ತೆ ವಿದೇಶ ಪ್ರಯಾಣಕ್ಕೆ ತೆರಳಿದ್ದು, ಸದ್ಯಕ್ಕೆ ಕಾಂಗ್ರೆಸ್ ವಿಶ್ರಾಂತಿ ಮೂಡ್‌ನಲ್ಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ದಶಕಗಳ ಕಾಲ
ಗೆದ್ದು ಮಾತ್ರ ಗೊತ್ತಿದ್ದ ಕಾಂಗ್ರೆಸ್‌ಗೆ ಕಳೆದೊಂದು ದಶಕದಿಂದ ಸೋತೇ ಹೆಚ್ಚು ಗೊತ್ತು ಎನ್ನುವಂತಾಗಿದೆ. ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ.
ಆದರೆ, ಗೆಲ್ಲುವ ಅವಕಾಶವನ್ನು ಕೈಚೆಲ್ಲಿ ಸೋಲು ವುದಿದೆಯಲ್ಲಾ, ಅದಕ್ಕಿಂತ ದೊಡ್ಡ ವೈಫಲ್ಯ ಬೇರೆ ಇಲ್ಲ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಮಾಡಿಕೊಂಡಿದ್ದೂ ಅದನ್ನೇ. ಬಿಜೆಪಿ ಅಧಿಕಾರದಲ್ಲಿದ್ದ ಈ ಎರಡೂ ರಾಜ್ಯಗಳಲ್ಲಿ ಆಡಳಿತ ವಿರೋಧ ಅಲೆ ಇತ್ತು. ಈ ಪೈಕಿ ಮಧ್ಯಪ್ರದೇಶದಲ್ಲಿ ತೀವ್ರ ಹಣಾಹಣಿ ಯೊಂದಿಗೆ ಕಾಂಗ್ರೆಸ್ ಗೆಲ್ಲುತ್ತದೆ.

ಛತ್ತೀಸ್‌ಗಡದಲ್ಲಿ ಸುಲಭ ಜಯ ಸಾಧಿಸುತ್ತದೆ ಎಂದು ಬಹುತೇಕ ಎಲ್ಲಾ ಸಮೀಕ್ಷೆಗಳು ಹೇಳಿದ್ದವು. ಆದರೆ, ಫಲಿತಾಂಶ ಬಂದಾಗ ಎಲ್ಲಾ ಸಮೀಕ್ಷೆಗಳನ್ನು
ಸುಳ್ಳು ಮಾಡಿದ ಕಾಂಗ್ರೆಸ್ ಹೀನಾಯವಾಗಿ ಸೋತಿತು. ಇಲ್ಲಿ ಬಿಜೆಪಿ ಗೆದ್ದಿದೆ ಎನ್ನುವುದಕ್ಕಿಂತ ಕಾಂಗ್ರೆಸ್ ಸೋತಿದೆ ಎಂಬುದೇ ಹೆಚ್ಚು ಮುಖ್ಯವಾಗುತ್ತದೆ. ಏಕೆಂದರೆ, ಸಿಕ್ಕಿದ್ದ ಅವಕಾಶವನ್ನು ಕಳೆದು ಕೊಂಡು ಅದು ಎರಡೂ ರಾಜ್ಯಗಳನ್ನು ಬಿಜೆಪಿಗೆ ಉಡುಗೊರೆಯಾಗಿ ಕೊಟ್ಟಿದೆ. ನಿರೀಕ್ಷೆಯಂತೆ ರಾಜಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟು ಅಧಿಕಾರದಿಂದ ದೂರ ಉಳಿದಿದೆ. ಇದೆಲ್ಲಕ್ಕೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೇ ಸಂಪೂರ್ಣ ಹೊಣೆ ಮಾಡುವುದು ಸರಿಯಲ್ಲವಾದರೂ ಮಲ್ಲಿರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿ ಅವರ ಹಿಂದೆ ನಿಂತು ಪಕ್ಷವನ್ನು ಪಾಲಿಸುತ್ತಿರುವ ಕಾರಣ ಸೋಲಿನಲ್ಲಿ ರಾಹುಲ್ ಪಾತ್ರ ಪ್ರಮುಖವಾಗಿದೆ.

೨೦೨೪ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವನ್ನು ಸೋಲಿಸಿ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಅಧಿಕಾರಕ್ಕೆ ತರುವ
ಉದ್ದೇಶದಿಂದ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಈ ಯಾತ್ರೆಯನ್ನು ಯಶಸ್ವಿಯಾಗಿಯೇ ಪೂರೈಸಿದ್ದರು. ಈ ಯಾತ್ರೆ ಉತ್ತಮ ಪರಿಣಾಮ ಬೀರಿದೆ ಎಂಬ ನಿರೀಕ್ಷೆ ಕಾಂಗ್ರೆಸ್‌ನವರಿಗಿತ್ತು. ಏಕೆಂದರೆ, ರಾಹುಲ್ ಗಾಂಧಿ ಹೋದೆಡೆಯಲ್ಲೇಲ್ಲಾ ಕಾಂಗ್ರೆಸ್ ಸೋಲುತ್ತದೆ ಎಂಬುದನ್ನು ಕರ್ನಾಟಕದಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ಸುಳ್ಳು ಮಾಡಿತ್ತು.

ಭಾರತ್ ಜೋಡೋ ಯಾತ್ರೆ ಮೂಲಕ ರಾಹುಲ್ ಹೋದಕಡೆ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಅಲ್ಲದೆ ರಾಜ್ಯದಲ್ಲಿ ಅಧಿಕಾರಕ್ಕೂ ಬಂತು. ಹೀಗಾಗಿ
ರಾಹುಲ್ ಗಾಂಧಿಯವರ ಅದೃಷ್ಟ ಖುಲಾಯಿಸಿದೆ ಎಂದೇ ಕಾಂಗ್ರೆಸ್ ಭಾವಿಸಿತ್ತು. ಕರ್ನಾಟಕದಂತೆ ಇತರೆ ರಾಜ್ಯಗಳಲ್ಲೂ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಕಮಾಲ್ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಏಕೆಂದರೆ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರು ನೀಡಿದ ಮುನ್ಸೂಚನೆ ಆ ರೀತಿ ಇತ್ತು. ಆದರೆ, ಅದೆಲ್ಲವೂ ಸುಳ್ಳು ಎಂಬುದನ್ನು ಪಂಚರಾಜ್ಯಗಳ ಚುನಾವಣೆ ಹೇಳಿದೆ. ಐದು ರಾಜ್ಯಗಳ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆಯಾದರೂ ಅದಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗಿಂತ ಕರ್ನಾಟಕದ ಕಾಂಗ್ರೆಸ್ ನಾಯಕರೇ ಕಾರಣಕರ್ತ ರಾಗಿದ್ದರು.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತಿತರರು ತನು, ಮನ, ಧನ ಗಳಿಂದ ಈ ಗೆಲುವಿಗೆ ಶ್ರಮಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಸಚಿವರು, ಶಾಸಕರು ಅಲ್ಲಿ ಕಾಂಗ್ರೆಸ್ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದರು. ರೇವಂತ್ ರೆಡ್ಡಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ತೆಲಂಗಾಣ ಕಾಂಗ್ರೆಸ್ ಕರ್ನಾಟಕದ ನಾಯಕರ ಮಾತನ್ನು ಚಾಚುತಪ್ಪದೆ ಪಾಲಿಸಿತ್ತು. ಹೀಗಾಗಿ ಚುನಾವಣೆ ಗೆದ್ದಿತ್ತು.

ಆದರೆ, ಇತರೆಡೆ ಕಾಂಗ್ರೆಸ್ ಮಾಡಿದ್ದೇನು? ರಾಹುಲ್ ಗಾಂಽ ಮಾಡಿದ್ದೇನು ಎಂದು ಕೇಳಿದರೆ ಸುಲಭವಾಗಿ ಸಿಗುವ ಉತ್ತರ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈದಿದ್ದು, ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವನ್ನು ನಿಂದಿಸಿದ್ದು ಅಷ್ಟೆ. ರಾಹುಲ್ ಗಾಂಧಿ ಅವರಂತೂ ಭಾರತದ ನೆಲದಲ್ಲಿ ಪ್ರಧಾನಿ ಮತ್ತು ಕೇಂದ್ರ ಸರಕಾರವನ್ನು ನಿಂದಿಸಿದ್ದು ಸಾಲದು ಎಂಬಂತೆ ವಿದೇಶಿ ನೆಲದಲ್ಲೂ ನಿಂದಿಸುತ್ತಿದ್ದರು. ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತದ ಪ್ರಜಾಪ್ರಭುತ್ವ ಹಾಳೆದ್ದು ಹೋಗಿದೆ ಎಂದಿದ್ದರು. ಭಾರತ ವಿಶ್ವಕಪ್ ಕ್ರಿಕೆಟ್ ಫೈನಲ್ ಸೋತಾಗ ಪ್ರಧಾನಿ ಮೋದಿ ಅವರನ್ನು ಕುರಿತು ಅಪಶಕುನ ಎಂದು ಹೀಗಳೆದಿದ್ದರು.

ಪಿಎಂ ಎಂದರೆ ಪನೌತಿ (ಅಪಶಕುನ) ಮೋದಿ ಎಂದು ವ್ಯಂಗ್ಯವಾಡಿದ್ದರು. ರಾಹುಲ್ ಗಾಂಧಿ ಅವರ ಇಂತಹ ಚಾಳಿ ಕಾಂಗ್ರೆಸ್‌ನ ಬಹುತೇಕ ನಾಯಕರಿಗಿದೆ. ಪ್ರಧಾನಿ, ಕೇಂದ್ರ ಸರಕಾರವನ್ನು ಟೀಕಿಸಿದರೆ ಜನ ನಮ್ಮನ್ನು ಬೆಂಬಲಿಸುತ್ತಾರೆ ಎಂಬ ತಪ್ಪು ಕಲ್ಪನೆ ಇದೆ. ೨೦೧೪ರ ಲೋಕಸಭೆ ಚುನಾವಣೆಯಲ್ಲಿ ಇದು ತಪ್ಪು ಕಲ್ಪನೆ ಎಂದು ಸಾಬೀತಾಗಿದ್ದರೂ ಈವರೆಗೂ ಕಾಂಗ್ರೆಸ್ ನಾಯಕರು ಅದನ್ನು ಬಿಟ್ಟಿಲ್ಲ, ಬಿಡುವ ಲಕ್ಷಣಗಳೂ ಇಲ್ಲ. ರಾಜಕೀಯವಾಗಿ ಟೀಕೆಗಳು ಸಹಜ ಮತ್ತು ಕೆಲವೊಮ್ಮೆ ಟೀಕಿಸಲೇ ಬೇಕು. ಆದರೆ, ಚುನಾವಣೆಗಳಲ್ಲಿ ಗೆಲ್ಲಲು ಈ ಟೀಕೆಗಳು ಮಾತ್ರ ಕೈಹಿಡಿಯುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು.

ಟೀಕೆ, ಆರೋಪಗಳ ಜತೆ ಪಕ್ಷ ಸಂಘಟನೆಯನ್ನೂ ಮಾಡಬೇಕು. ಜನರನ್ನು ಪಕ್ಷದತ್ತ ಸೆಳೆಯುವ ಕೆಲಸ ಮಾಡಬೇಕು. ಕೇವಲ ಒಂದೆರಡು ದಿನವಲ್ಲ, ನಿರಂತರ
ವಾಗಿ ಆ ಕೆಲಸ ಮಾಡುತ್ತಲೇ ಬರಬೇಕು. ಸರಕಾರ, ಅಧಿಕಾರದಲ್ಲಿರುವವರನ್ನು ತಾವು ಟೀಕಿಸಲು ಕಾರಣವೇನು? ಅವರಿಂದ ಏನು ಸಮಸ್ಯೆಯಾಗುತ್ತಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕು. ಅದನ್ನು ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಮಾಡಿದ್ದರಿಂದಲೇ ಕಳೆದ
ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವಂತಾಯಿತು. ಡಿ.ಕೆ.ಶಿವಕುಮಾರ್ ೨೦೨೦ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ವಹಿಸಿಕೊಳ್ಳುತ್ತಿದ್ದಂತೆ ೨೦೨೩
ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಅನ್ನು ಅಧಿಕಾರಕ್ಕೆ ತರಬೇಕೆಂಬ ಗುರಿಯೊಂದಿಗೆ ಸಂಘಟನೆ ಕೆಲಸ ಆರಂಭಿಸಿದರು. ಮತ್ತೊಂಡೆದೆ ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲಿ ಆಡಳಿತ ವಿರೋಧಿ ಅಲೆ ಎಬ್ಬಿಸುವ ಕೆಲಸ ಶುರುವಾಯಿತು. ಅದು ಎಷ್ಟರ ಮಟ್ಟಿಗೆ ಪರಿಮಾಮ ಬೀರಿತು ಎಂದರೆ, ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ನಿಂದಿಸಿದರೆ ಆ ಪಕ್ಷಕ್ಕೆ ಸೋಲು ಖಚಿತ ಎಂಬ ವಾತಾವರಣದ ನಡುವೆಯೂ ನಿಂದನೆ
ಮುಂದುವರಿಸಿ ಎಲ್ಲಾ ನಿರೀಕ್ಷೆಗಳನ್ನು ಬುಡಮೇಲು ಮಾಡಿ ಬಹುಮತದೊಂದಿಗೆ ಕಾಂಗ್ರೆಸ್‌ಗೆ ಅಧಿಕಾರ ತಂದುಕೊಟ್ಟಿತು.

ಹಾಗೆಂದು ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬರುವುದು ಕಾಂಗ್ರೆಸ್‌ಗೆ ಸುಲಭದ ತುತ್ತೇನೂ ಆಗಿರಲಿಲ್ಲ. ಪಕ್ಷದಲ್ಲಿ ಎಲ್ಲವೂ ಸರಿಯಾಗಿಯೂ ಇರಲಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಭಿನ್ನಮತ ಗುಪ್ತಗಾಮಿನಿಯಾಗಿ ಮುಂದುವರಿದಿತ್ತು. ಅವರಿಬ್ಬರು ಸುಮ್ಮನಿದ್ದರೂ ಬೆಂಬಲಿಗರು ಆಗಾಗ್ಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದರು. ಇವರಿಬ್ಬರ ನಡುವಿನ ಅಸಾಮಾಧಾನವೇ ಕಾಂಗ್ರೆಸ್ಸನ್ನು ಸೋಲಿಸಬಹುದು ಎಂಬ ಆತಂಕವಿತ್ತು. ಆದರೆ, ಪಕ್ಷದ ರಾಜ್ಯ ಉಸ್ತುವಾರಿ ಯಾಗಿದ್ದ ರಣದೀಪ್‌ಸಿಂಗ್ ಸುರ್ಜೇವಾಲ ಚುನಾವಣೆಗೆ ಇನ್ನು ಏಳೆಂಟು ತಿಂಗಳಿದೆ ಎನ್ನುವಾಗ ಇವರಿಬ್ಬರ ಮಧ್ಯೆ ಒಗ್ಗಟ್ಟು ಮೂಡಿಸಲು ಪ್ರಯತ್ನ ಆರಂಭಿಸಿದರು. ಸತತ ಐದಾರು ತಿಂಗಳು ಅವರಿಬ್ಬರ ಜತೆ ಇದ್ದು ತೇಪೆ ಹಚ್ಚಿದರು. ಚುನಾವಣೆ ಸಮೀಪಿಸಿದಾಗ ಇಬ್ಬರೂ ಆತ್ಮೀಯತೆಯಿಂದ ಇರುವಂತೆ ನೋಡಿಕೊಂಡರು.

ಆದರೆ, ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು, ಪ್ರಧಾನಿ ಮತ್ತು ಕೇಂದ್ರದ ವಿರುದ್ಧದ ತಮ್ಮ ನಿರಂತರ ಟೀಕೆ, ಆರೋಪಗಳಿಂದ ದೇಶದಲ್ಲಿ ಬಿಜೆಪಿ ವಿರೋಧಿ ಅಲೆ ಶುರುವಾಗಿದೆ ಎಂದುಕೊಂಡರು. ಪಕ್ಷ ಸಂಘಟನೆ ಬದಿಗಿಟ್ಟು ಟೀಕೆಯನ್ನೇ ಮುಂದುವರಿಸಿದರು. ಪಕ್ಷದ ಆಂತರಿಕ ಕಲಹವನ್ನು ಸರಿಪಡಿಸುವ ನಿಟ್ಟಿನಲ್ಲೂ ಪ್ರಯತ್ನಿಸಲಿಲ್ಲ. ಜನರ ಮನಸ್ಸನ್ನು ಒಲಿಸಿ ಕೊಳ್ಳಲು ಕರ್ನಾಟಕದಲ್ಲಿ ಘೋಷಿಸಿದಂತೆ ಉಚಿತ ಗ್ಯಾರಂಟಿಗಳನ್ನು ಘೋಷಿಸಿದರೆ ಸಾಕು ಎಂದು ಕೊಂಡರು. ಉಚಿತ ಗ್ಯಾರಂಟಿಗಳು ಜನರ ಮನಗೆದ್ದು ಅದನ್ನು ಮತಗಳಾಗಿ ಪರಿವರ್ತಿಸಿಕೊಳ್ಳಲು ಸಾಕು ಎಂದಾಗಿದ್ದರೆ ಪಂಚ ರಾಜ್ಯಗಳ ಚುನಾವಣೆ
ಯಲ್ಲಿ ನಾಲ್ಕು ರಾಜ್ಯಗಳಲ್ಲೂ ಕಾಂಗ್ರೆಸ್ ಗೆಲ್ಲಬೇಕಿತ್ತು. ತೆಲಂಗಾಣದಲ್ಲಿ ಗೆಲ್ಲಲು ಗ್ಯಾರಂಟಿಗಳಿಗಿಂತ ಕರ್ನಾಟಕದಂತೆ ಪಕ್ಷ ಸಂಘಟನೆ ಸಹಾಯಕವಾಗಿತ್ತು.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಬಳಿಕ ಕರ್ನಾಟಕದಂತೆ ಅಲ್ಲೂ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗಿತ್ತು. ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ರೇವಂತ್ ರೆಡ್ಡಿ ತಮ್ಮ ಆತ್ಮೀಯರಾದ ಡಿ.ಕೆ.ಶಿವಕುಮಾರ್ ಅವರ ಸಲಹೆಯಂತೆ ಸಂಘಟನೆ ಕೆಲಸ ಮಾಡಿದ್ದರು. ಆದರೆ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಅಂತಹ ಕೆಲಸ ಮಾಡಲೇ ಇಲ್ಲ. ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವೈಯಕ್ತಿಕ ಟೀಕೆ, ಕೇಂದ್ರ ಸರಕಾರದ ವಿರುದ್ಧ ಆರೋಪ, ಬಿಜೆಪಿ ಬಗ್ಗೆ ಇಲ್ಲ ಸಲ್ಲದ ಮತುಗಳಲ್ಲೇ ಗೆಲ್ಲುವ ಹುಂಬತನದೊಂದಿಗೆ ಮುಂದುವರಿಯಿತು. ಫಲಿತಾಂಶ ನಮ್ಮ ಕಣ್ಣ ಮುಂದಿದೆ.

ಲಾಸ್ಟ್ ಸಿಪ್: ಆತ ಸರಿಯಿಲ್ಲ ಎಂದು ಹೇಳುವುದೇನೋ ಸುಲಭ. ಆದರೆ, ಆತ ಏಕೆ ಸರಿಯಿಲ್ಲ, ತಾನು ಹೇಗೆ ಸರಿ ಇದ್ದೇನೆ ಎಂದು ತೋರಿಸಿ ಕೊಡುವುದು ಕಷ್ಟಸಾಧ್ಯ.

Leave a Reply

Your email address will not be published. Required fields are marked *