Wednesday, 11th December 2024

ಯಕ್ಷಗಾನದ ಬಗ್ಗೆ ಆಧಾರ ರಹಿತ ಟೀಕೆ ಸಲ್ಲ

ಅಭಿಮತ

ದಿವ್ಯಾ ಹೆಗಡೆ ಕಬ್ಬಿನಗದ್ದೆ

ಭಾರತೀಯ ಇತಿಹಾಸದಿಂದ ಉಳಿದುಬಂದಿರುವ ಅನೇಕ ರಂಗಪರಂಪರೆಗಳಲ್ಲಿ ಯಕ್ಷಗಾನಕ್ಕೆ ಅತಿ ಉನ್ನತವಾದ ಸ್ಥಾನವಿದೆ. ಹಾಡು, ಕುಣಿತ, ವೇಷ, ಬಣ್ಣ, ವಾದ್ಯಗಳ ಸ್ಮುಲನದಿಂದ ಕಲಾತ್ಮಕವಾಗಿ ಜನಮಾನಸವನ್ನು ಸೂರೆಗೊಳಿಸುವ ಯಕ್ಷಗಾನಕ್ಕೆ ಸುಮಾರು ಐದು ಶತಮಾನಗಳ ಸುದೀರ್ಘ ಇತಿಹಾಸವೂ ಇದೆ. ಸಮಾಜದ ವಿದ್ಯಮಾನಗಳಿಗೆ ಸ್ಪಂದಿಸುತ್ತ, ಸಮಕಾಲೀನ ಪ್ರಯೋಗಗಳಿಗೆ ಒಳಪಡುತ್ತ ಆರ್ಥಿಕ, ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಾವಣೆ ಹೊಂದುತ್ತಾ ಬಂದಿರುವ ಯಕ್ಷಗಾನ ಇಂದಿಗೂ ತನ್ನ ಗುಣಾತ್ಮಕತೆ ಮತ್ತು ಸೃಜನಶೀಲತೆಗಳನ್ನು ಉಳಿಸಿಕೊಂಡಿದೆ.

ಆದರೆ, ಯಕ್ಷಗಾನದ ಪೂರ್ಣ ಇತಿಹಾಸವನ್ನು ಶೋಧಿಸದೆ, ಅದರ ಸಮಕಾಲೀನ ಸಂಗತಿಗಳಿಗೆ ಸಮರ್ಪಕವಾದ ಕಾರಣಗಳನ್ನು ಅರಿಯದೇ, ಯಕ್ಷಗಾನವನ್ನು ಟೀಕಿಸಿ ಅದರ ಕಲಾವಿದರನ್ನು ದೂಷಿಸುವ ಪ್ರವೃತ್ತಿ ಅಲ್ಲಲ್ಲಿ  ಕಂಡುಬರುತ್ತಿದೆ. ಇತ್ತೀಚೆಗೆ ಯುಜಿಸಿಯ Dogo rangsang research journal ನಲ್ಲಿ ಮಹಿಳಾ
ಲೇಖಕಿಯೊಬ್ಬರು, ‘ಯಕ್ಷಗಾನದಲ್ಲಿ ಲಿಂಗತಾರತಮ್ಯ, ಪುರುಷ ಪ್ರಧಾನತೆ ಮತ್ತು ಲೈಂಗಿಕತೆ’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಪ್ರಬಂಧ ಅದಕ್ಕೆ ಒಂದು
ತಾಜಾ ಉದಾಹರಣೆ. ಮೇಲು ನೋಟಕ್ಕೆ ಅದು ಶುದ್ಧ ಅವಿವೇಕತನದಿಂದ, ಯಕ್ಷಗಾನವನ್ನು ದೂಷಿಸಲೆಂದೇ ಬರೆದದ್ದು ಎಂಬುದು ಸುಲಭಕ್ಕೆ ಅರ್ಥವಾಗು ವಂತಿದೆ.

ಪ್ರಬಂಧದಲ್ಲಿ ಯಕ್ಷಗಾನವು ಪುರುಷ ಪ್ರಧಾನ ಕಲೆಯಾಗಿದ್ದು, ಸಿಯರನ್ನು ಅವಕಾಶದಿಂದ ವಂಚಿಸಲಾಗುತ್ತದೆ, ಪುರುಷರು ಸ್ತ್ರೀಯರನ್ನು ಸಾಮಾಜಿಕ ಮತ್ತು
ಕಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ಬಿಡದೇ, ಬರಿ ಮನೆಯ ಕೆಲಸಗಳಿಗೆ, ಕೃಷಿ ಚಟುವಟಿಕೆಗಳಿಗೆ ಸೀಮಿತಗೊಳಿಸಿದ್ದರು ಮತ್ತು ಮಹಿಳೆಯರು ಕಲಾರಂಗಕ್ಕೆ
ಬಂದರೂ ಅವರನ್ನು ತುಳಿದು ಪುರುಷರು ತಾವೇ ಪ್ರಾಧಾನ್ಯತೆಯನ್ನು ಪಡೆಯುತ್ತಿದ್ದರು ಎಂದು ಬರೆಯಲಾಗಿದೆ. ಲೇಖಕಿ ಯಕ್ಷಗಾನವನ್ನು ಫೆಮಿನಿಸ್ಮುನ
ಕಣ್ಣಿನಿಂದಲೇ ನೋಡಿದ್ದಾರೆ. ಆದರೆ, ಯಕ್ಷಗಾನದ ಇತಿಹಾಸವನ್ನು ಶೋಧಿಸಿದರೆ ಅಂದಿನ ಸಾಮಾಜಿಕ ಸ್ಥಿತಿಗತಿಗಳು ಸತ್ಯವನ್ನು ಬಿಚ್ಚಿಡುತ್ತವೆ. ಸುಮಾರು
ಹದಿನೈದನೇ ಶತಮಾನದ ಹಿಂದಿನಿಂದಲೇ ಕರ್ನಾಟಕದ ಹಲವು ಭಾಗಗಳಲ್ಲಿ ಯಕ್ಷಗಾನ ರಂಗಭೂಮಿಯು ರೂಢಿಯಲ್ಲಿದ್ದಿರಬಹುದೆಂದು ಇತಿಹಾಸಕಾರರು ಅಭಿ
ಪ್ರಾಯ ಪಡುತ್ತಾರೆ. ಹದಿನಾರನೇ ಶತಮಾನದ ಅವಧಿಯಲ್ಲಿ ಕರ್ನಾಟಕದ ಬಹುಭಾಗವನ್ನು ಜಯನಗರದ ಅರಸರು ಆಳಿಕೊಂಡಿದ್ದರು. ಅವರ ರಾಜಧಾನಿ ಬಳ್ಳಾರಿ ಜಿಲ್ಲೆಯ ಸೋಮಸಮುದ್ರ ಎಂಬಲ್ಲಿನ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಕ್ರಿ.ಶ 1556ರ ಸಮಯದ ದಾನ ಶಾಸನ ಪತ್ತೆಯಾಗಿದೆ.

ತಾಳಮದ್ದಳೆಯನ್ನು ನಡೆಸಿದ ಇಬ್ಬರು ಬ್ರಾಹ್ಮಣರಿಗೆ ಉಂಬಳಿ ಕೊಟ್ಟ ದಾಖಲೆ ಹೊಂದಿದ ಆ ಶಾಸನವು ಯಕ್ಷಗಾನವು ಸುಮಾರು ಹದಿನೈದು- ಹದಿನಾರನೇ ಶತಮಾನದಲ್ಲಿಯೇ ಕರ್ನಾಟಕದಲ್ಲಿ ರೂಢಿಗೆ ಬಂದಿದೆ ಎಂಬುದಕ್ಕೆ ಪುಷ್ಟಿ ನೀಡುತ್ತದೆ. ಹದಿನೈದನೇ ಶತಮಾನದ ಕಾಲದಲ್ಲಿ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಮುಸಲ್ಮಾನ ದೊರೆಗಳ ಆಳ್ವಿಕೆಯಿತ್ತು. ಅವರ ಕಾಲದಲ್ಲಿ ಸೀಯರಿಗೆ ರಕ್ಷಣೆ ಇರಲಿಲ್ಲವೆಂಬುದೂ, ಅತ್ಯಾಚಾರಗಳಂತಹ ದುಷ್ಕೃತ್ಯಗಳಿಗೆ ಸ್ತ್ರೀಯರು ಬಲಿಯಾಗು ತ್ತಿದ್ದರೆಂಬುದೂ ಇತಿಹಾಸ ದಿಂದಲೇ ಅರ್ಥವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ವಿಶೇಷ ರಕ್ಷಣೆಯ ಅಗತ್ಯವಿತ್ತು.

ಪುರುಷರು ಮಹಿಳೆಯರನ್ನು ಮನೆಯಿಂದ ಹೊರಗೆ ಕಳಿಸದೇ ರಕ್ಷಣೆ ನೀಡುತ್ತಿದ್ದರು. ಯಕ್ಷಗಾನವು ರಾತ್ರಿಯಿಂದ ಬೆಳಗಿನ ತನಕವೂ ಪ್ರದರ್ಶನಗೊಳ್ಳುವ ಕಲೆ ಯಾದ್ದರಿಂದ ಮಹಿಳೆಯರಿಗೆ ಅದರಲ್ಲಿ ಪಾತ್ರ ಮಾಡಲು ಅಂದಿನ ಸಾಮಾಜಿಕ ಪರಿಸ್ಥಿತಿ ಅನುಕೂಲಕರವಾಗಿರಲಿಲ್ಲ. ಇಂದಿನಂತೆ ವಾಹನ ಸೌಲಭ್ಯ, ಸಂಪರ್ಕ ಸಾಧನಗಳು ಇಲ್ಲದಿದ್ದ ಕಾಲದಲ್ಲಿ, ಪ್ರತಿದಿನ ಬೇರೆ ಬೇರೆ ಊರುಗಳಿಗೆ ಪ್ರಯಾಣ ಮಾಡಿ, ರಾತ್ರಿಯಿಡೀ ಪ್ರದರ್ಶನ ನೀಡಬೇಕಾದ್ದರಿಂದ ಸ್ತ್ರೀಯರಿಗೆ ಅದು ಕಷ್ಟಸಾಧ್ಯವಾದ ಕೆಲಸವಾಗಿತ್ತು. ಅಂದಿನ ದಿನಗಳಲ್ಲಿ ಬರಿ ಯಕ್ಷಗಾನವೊಂದರ ಅಲ್ಲದೇ ಸಂಗೀತ, ನಾಟಕ, ಭರತನಾಟ್ಯಗಳಂತಹ ಕಲೆಗಳಲ್ಲೂ ಮಹಿಳೆಯರು ಭಾಗವಹಿಸುತ್ತಿರಲಿಲ್ಲ. ನಾಟಕಗಳಲ್ಲಿ ಯಕ್ಷಗಾನದಂತೆ ಪುರುಷರೇ ಸ್ತ್ರೀವೇಷಗಳನ್ನೂ ನಿರ್ವಹಿಸುತ್ತಿದ್ದರು.

ಕುಮಾರ ಗಂಧರ್ವರಂತಹ ಪ್ರಸಿದ್ಧ ನಾಟಕದ ಸೀವೇಷಧಾರಿಗಳು ಅದೇ ಕಾಲದವರು ಎಂಬುದನ್ನು ಗಮನಿಸಬೇಕು. ಇಷ್ಟೇ ಅಲ್ಲದೆ ಕರಾವಳಿ ಭಾಗದಲ್ಲಿ ತೀರಾ ಇತ್ತೀಚಿನವರೆಗೂ ಯಕ್ಷಗಾನದಲ್ಲಿ ‘ಸಲಾಂ ಆಟ’ ಎಂಬ ಪದ್ಧತಿಯಿತ್ತು. ಮುಸಲ್ಮಾನ ಪ್ರೇಕ್ಷಕರನ್ನು ಓಲೈಸಲೆಂದೇ ಸ್ತ್ರೀವೇಷಧಾರಿಗಳು ಅವರ ಮುಂದೆ ವಿಶೇಷ ಕುಣಿತವನ್ನು ಪ್ರದರ್ಶಿಸಬೇಕಾಗಿತ್ತು. ಮುಜುರೆ ಒಪ್ಪಿಸಬೇಕಾಗಿತ್ತು! ಕಾಲಕ್ರಮೇಣ ಆ ಪದ್ಧತಿ ನಿಂತಿದೆ. ಪರಿಸ್ಥಿತಿ ಹೀಗಿದ್ದಾಗ ಯಾರು ತಾನೇ ಮಹಿಳೆಯರಿಂದ ‘ಸಲಾಂ ಆಟ’ ಕುಣಿಸಲು ಇಷ್ಟ ಪಡುತ್ತಾರೆ? ಅಲ್ಲದೆ ಯಕ್ಷಗಾನವು ಕಲಾತ್ಮಕತೆಯೊಂದಿಗೆ ಸೌಂದರ್ಯಕ್ಕೂ ಹೆಚ್ಚಿನ ಮಹತ್ವವನ್ನು ಕೊಟ್ಟಿರುವುದರಿಂದ, ಬಣ್ಣದ ವೇಷಗಳನ್ನು ಹಾಕಿಕೊಂಡ ಸ್ತ್ರೀ ಕಲಾವಿದರು ಪುರುಷರಿಂದ ಆಕರ್ಷಣೆಗೆ ಒಳಗಾಗುವುದು ಅವರ ರಕ್ಷಣೆಯ ದೃಷ್ಟಿಯಿಂದ ಒಳ್ಳೆಯದಲ್ಲವೆಂಬುದು ಸ್ತ್ರೀ
ವೇಷಧಾರಿಗಳ ನಿಷೇಧಕ್ಕೆ ಕಾರಣರಗಲೂಬಹುದು.

ಇವೆಲ್ಲ ಮಹಿಳೆಯರ ಭದ್ರತೆಯ ಉದ್ದೇಶದಿಂದ ಜಾರಿಗೊಂಡವೇ ಹೊರತು, ಪುರುಷ ಪ್ರಧಾನ್ಯತೆಯನ್ನು ಸೃಷ್ಟಿಮಾಡುವುದಕ್ಕಲ್ಲ ಎಂಬುದನ್ನು ಅರ್ಥ ಮಾಡಿ ಕೊಳ್ಳಬೇಕು. ಯಕ್ಷಗಾನದಲ್ಲಿ ಸೀಯರು ಪಾಲ್ಗೊಳ್ಳದಿರಲು ಇನ್ನೊಂದು ಕಾರಣವೆಂದರೆ ಅವರ ಜೈವಿಕ ವಿಶೇಷತೆ. ಯಕ್ಷಗಾನ ಮೇಳಗಳು ಬೇಸಿಗೆಯಿಡೀ ಒಂದೂರಿನಿಂದ ಮತ್ತೊಂದು ಊರಿಗೆ ಪ್ರಯಾಣ ಮಾಡುವ ಅನಿವಾರ್ಯತೆಯಿರುವುದರಿಂದ ಅಷ್ಟು ಪ್ರಯಾಣವನ್ನು ಮಾಡಿ, ರಾತ್ರಿಯಿಡೀ ಪ್ರದರ್ಶನ ನೀಡುವುದು ಸ್ತ್ರೀಯರ ದೈಹಿಕ ಸಾಮರ್ಥ್ಯಕ್ಕೆ ಕಷ್ಟಸಾಧ್ಯ. ಮಹಿಳೆಯರು ಋತುಮತಿಯರಾದಾಗ ದೈಹಿಕ ಶ್ರಮವೇ ಮುಖ್ಯವಾಗಿರುವ ಮುಮ್ಮೇಳದ ಪಾತ್ರ ಗಳನ್ನು ನಿಭಾಯಿಸುವುದು ಕಷ್ಟವಾಗುತ್ತಿತ್ತು. ಅದಲ್ಲದೇ ಅವರು ಗರ್ಭಿಣಿ, ಬಾಣಂತಿಯರಾದ ಸಮಯದಲ್ಲಿ ವರ್ಷದ ಹಲವು ತಿಂಗಳುಗಳೇ ಕಳೆದು ಹೋಗುವು ದರಿಂದ ಯಕ್ಷಗಾನ ಮೇಳವನ್ನು ನಡೆಸುವುದು ಸುಲಭದ ಕೆಲಸವಲ್ಲ.

ಅದನ್ನು ಪ್ರಬಂಧಕಾರ್ತಿ ಗುರುತಿಸದೆ ಹೋದದ್ದು ಆಶ್ಚರ್ಯವೇ ಸರಿ. ಇದಲ್ಲದೇ ಯಕ್ಷಗಾನ ಭಾಗವತಿಕೆಗೆ ಪೂರಕವಾದ ಕಂಠಶಕ್ತಿ, ಚಂಡೆ-ಮದ್ದಳೆಗಳ ವಾದನಕ್ಕೆ ಬೇಕಾದ ದೈಹಿಕಶಕ್ತಿ ಸೀಯರಿಗೆ ಪೂರಕವಾಗಿಲ್ಲ ಎಂಬುದೂ ಮಹಿಳೆಯರು ಯಕ್ಷಗಾನಕ್ಕೆ ಬರದಿರಲು ಮುಖ್ಯ ಕಾರಣ. ದೊಡ್ಡ ದೊಡ್ಡ ಪಗಡೆ, ಕಿರೀಟ, ಮರದಿಂದ ತಯಾರಿಸಿದ ಭಾರವಾದ ಆಭರಣಗಳು, ಸೀಸ, ಅಂಟು, ಪ್ಲಾಸ್ಟಿಕ್, ಬೆತ್ತದಂತಹ ವಸ್ತುಗಳನ್ನು ಬಳಸಿ ಮಾಡಿದ ಅಲಂಕಾರ, ಗೆಜ್ಜೆ, ಹೊಟ್ಟೆಗೆ ಬಿಗುವಾಗಿ ಸುತ್ತಿದ ವಸ್ತ್ರಗಳನ್ನು ಹಾಕಿಕೊಂಡು ಮುಮ್ಮೇಳದಲ್ಲಿ ರಾತ್ರಿಯಿಡೀ ಕುಣಿದು, ಅರ್ಥಹೇಳುವುದು ಸ್ತ್ರೀಯರ ದೈಹಿಕ ಬಲತೆಯನ್ನು ಗಮನಿಸಿದರೆ, ಅವರಿಗೆ ಕಷ್ಟವಾದದ್ದು ಎಂಬುದೂ ಮತ್ತೊಂದು ಮುಖ್ಯ ಕಾರಣ.

ಪ್ರಬಂಧದಲ್ಲಿ ಲೇಖಕಿ ಯಕ್ಷಗಾನದ ಪ್ರೇಕ್ಷಕ ವರ್ಗದಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಮಾಡಿ ಅಸಮಾನತೆಯನ್ನು ಸೃಷ್ಟಿ ಮಾಡಿದ್ದಾರೆ ಎಂದು
ಉಖಿಸಿzರೆ. ಹಿಂದೆ ದೂರ ದೂರದ ಊರುಗಳಿಂದ ಜನರು ನಡೆದುಕೊಂಡು ಯಕ್ಷಗಾನಕ್ಕೆ ಬರುತ್ತಿದ್ದರು. ವಾಹನ ವ್ಯವಸ್ಥೆ ಇಲ್ಲದ ಕಾರಣ ಬೆಳಗಿನವರೆಗೂ
ಅಲ್ಲಿಯೇ ಕುಳಿತಿರುವ ಅನಿವಾರ್ಯತೆಯಿತ್ತು. ರಾತ್ರಿಯ ಸಮಯದಲ್ಲಿ, ಅದರಲ್ಲೂ ಜನರು ನಿದ್ರೆಯ ಮಂಪರಿನಲ್ಲಿರುವಾಗ ಸ್ತ್ರೀ ಪುರುಷರಿಗೆ ಬೇರೆ ಬೇರೆ ಆಸನ
ವ್ಯವಸ್ಥೆಯನ್ನು ಕಲ್ಪಿಸುವುದು ಸ್ತ್ರೀಯರ ರಕ್ಷಣೆಯ ದೃಷ್ಟಿಯಿಂದ ಅಗತ್ಯವಾಗಿತ್ತು.

ಅತ್ಯಾಚಾರ, ಸುಲಿಗೆ, ಬಲಾತ್ಕಾರಗಳಿಂದ ಮಹಿಳೆಯರನ್ನು ರಕ್ಷಿಸಲು ಈ ವ್ಯವಸ್ಥೆಯನ್ನು ಮಾಡಿದ್ದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ಮಹಿಳೆ ಮತ್ತು ಪುರುಷರನ್ನು ಬೇರೆ ಬೇರೆಯಾಗಿ ಕೂರಿಸುವುದು ಯಕ್ಷಗಾನದಲ್ಲಿ ಮಾತ್ರ ಕಂಡುಬರುವುದೇ? ಯಾವುದೇ ಕಲೆ ಯಾವ ಸ್ವರೂಪದಿಂದ ಹುಟ್ಟಿದೆಯೋ ಅದೇ ಸ್ವರೂಪವನ್ನು ಇಟ್ಟುಕೊಂಡು ಸಾರ್ವಕಾಲಿಕವಾಗಿ ಪ್ರಯೋಗಗೊಳ್ಳಲು ಸಾಧ್ಯವಿಲ್ಲ. ಅದು ಮನುಷ್ಯರ ಸೃಜನಶೀಲತೆಗಳ ನಡುವೆ ಸಿಲುಕಿ ಬದಲಾವಣೆಗೆ ತುತ್ತಾಗುತ್ತಲೇ ಇರುತ್ತದೆ. ಸಮಾಜದ ಆರ್ಥಿಕ ವ್ಯವಸ್ಥೆ, ಸಾಮಾಜಿಕ ಸ್ಥಿತಿಗತಿ, ರಾಜಕೀಯ ವಿದ್ಯಮಾನಗಳ ಪ್ರಭಾವಕ್ಕೆ ಸಿಕ್ಕಿ ಕಾಲಕಾಲಕ್ಕೆ ತನ್ನ ಸ್ವರೂಪವನ್ನು
ಬದಲಾಯಿಸಿಕೊಳ್ಳುತ್ತಲೇ ಸಾಗುತ್ತದೆ. ಕಲೆ ಕಾಲದ ಸಂವೇದನೆಗಳಿಗೆ ಅನುಗುಣವಾಗಿ ಬದಲಾಗಲೇಬೇಕಾಗುತ್ತದೆ. ಅದು ಸಾರ್ವಕಾಲಿಕವಾಗಿ ಜೀವಂತ ವಾಗಿರಲು ಈ ಪರಿವರ್ತನೆ ಅನಿವಾರ್ಯವೂ ಹೌದು.

ಹಾಗೆಯೇ ಯಕ್ಷಗಾನವೂ ’ಪುರುಷ ಪ್ರಧಾನತೆ’ ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡು, ಟೀಕೆ ಟಿಪ್ಪಣಿಗಳಿಗೆ ಒಳಗಾಗುತ್ತಲೇ ತನ್ನ ಸ್ವರೂಪ, ಸಂದರ್ಭಗಳನ್ನು ಮೀರಿ ಬೆಳೆಯುತ್ತ ಬಂತು. ಇಂದು ಎಲ್ಲ ಕ್ಷೇತ್ರಗಳಂತೆ ಯಕ್ಷಗಾನ ದಲ್ಲಿಯೂ ಸೀಯರು ಮುಂಚೂಣಿಯಲ್ಲಿದ್ದಾರೆ. ಭಾಗವತಿಕೆ, ಚಂಡೆ-ಮದ್ದಳೆ ಸೇರಿದಂತೆ ಮುಮ್ಮೇಳದಲ್ಲಿಯೂ ಮಹಿಳೆಯರು ಗುರುತಿಸಿಕೊಳ್ಳುತ್ತಿದ್ದಾರೆ. ಸಮಾಜವೂ ಲೇಖಕಿ ಹೇಳಿದಂತೆ ‘ಪುರುಷ ಪ್ರಧಾನತೆ’ಗೆ ಒತ್ತುಕೊಡದೇ ಸ್ತ್ರೀಯರನ್ನು ಪ್ರೋತ್ಸಾಹಿಸುತ್ತಿದೆ.

ಇನ್ನು ಲೇಖಕಿ ಯಕ್ಷಗಾನ ಕಲಾವಿದರೆಲ್ಲರೂ ದ್ವಿಲಿಂಗಿಗಳು, ಸೀವೇಷಧಾರಿಗಳು ಸಲಿಂಗಕಾಮಿಗಳು ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾದರೆ ಶತಮಾನ ಗಳಿಂದ ಸಾವಿರಾರು ಯಕ್ಷಗಾನ ಕಲಾವಿದರು ಹೆಂಡತಿ, ಮಕ್ಕಳೊಂದಿಗೆ ಸುಖವಾಗಿ ಸಂಸಾರ ಮಾಡುತ್ತಿಲ್ಲವೇ? ಯಕ್ಷಗಾನ ಕಲಾವಿದರ ಮಾನಹಾನಿಯಾಗು ವಂತಹ ಹೇಳಿಕೆಯನ್ನು ನೀಡಿರುವ ಲೇಖಕಿಗೆ ಈ ಕಲಾವಿದರೆಲ್ಲರೂ ದ್ವಿಲಿಂಗಿಗಳು, ಸಲಿಂಗಕಾಮಿಗಳು ಎನ್ನಲು ಆಧಾರವೇನಿದೆ? ಇದ್ದರೂ ಆ ಆಧಾರದ ಮೌಲ್ಯ, ಆಳ, ಸತ್ವಗಳೆಷ್ಟು? ಈ ಪ್ರಬಂಧ ಮಾಡಿದ ಆಪಾದನೆಯನ್ನೇ ಗಣನೆಗೆ ತೆಗೆದುಕೊಂಡು ಯಕ್ಷಗಾನ ಕಲಾವಿದರು ದ್ವಿಲಿಂಗಿಗಳು, ಸಲಿಂಗಕಾಮಿಗಳು ಎಂಬುದನ್ನೇ ಸತ್ಯವೆಂದು ಭಾವಿಸಿ, ಸಾವಿರಾರು ಕಲಾವಿದರ ಸಂಸಾರದಲ್ಲಿ ಒಡಕು ಮೂಡಿದರೆ ಅದಕ್ಕೆ ಹೊಣೆ ಯಾರು? ಶಿವರಾಮ ಕಾರಂತರಂತಹ ವಿದ್ವಜ್ಜನರು ಬೆಳೆಸಿ, ಬೆಳಗಿಸಿ ಹೋದ ಯಕ್ಷಗಾನಕ್ಕೆ ಇಂತಹ ಗುರುತರ ಆಪಾದನೆಯನ್ನು ಮಾಡಿರುವುದರ ಹಿಂದೆ ದುರುದ್ದೇಶವಿಲ್ಲದಿರದು. ಯುಜಿಸಿ ಈ ಪ್ರಬಂಧವನ್ನು ಪ್ರಕಟಿಸಿರುವುದರಿಂದ, ಜನರಿಗೆ ಶಾಶ್ವತ ಆಕರವಾಗಿ ಪ್ರಬಂಧ ಒದಗಲ್ಪಡುವುದರಿಂದ ಯಕ್ಷಗಾನ ಕಲೆ ಮತ್ತು ಕಲಾವಿದರ ಕುರಿತು ಮಾಡಿರುವ ಆರೋಪವೇ ಸತ್ಯವೆಂದು ಜನರು ನಂಬಲ್ಪಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇನ್ನೂ ಬದುಕಿ, ಬಾಳಬೇಕಾದ ಯುವಕಲಾವಿದರ ಭವಿಷ್ಯ ಮತ್ತು ವೈಯಕ್ತಿಕ ಬದುಕಿನ ಮೇಲೆ ಈ ಆಪಾದನೆ ದುಷ್ಪರಿಣಾಮವನ್ನು ಬೀಳದಿರದು. ಸಾವಿರಾರು ಯಕ್ಷಗಾನ ಕಲಾವಿದರ ಭಾವನೆಗೆ ನೋವುಂಟು ಮಾಡಿರುವ ಪ್ರಬಂಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಯೋಗ್ಯವಾಗಿದೆ. ಯುಜಿಸಿಯು  ತಕ್ಷಣ ಈ ಪ್ರಬಂಧವನ್ನು ರದ್ದುಗೊಳಿಸಿ, ಜನತೆಗೆ ತಪ್ಪು ಸಂದೇಶ ರವಾನೆಯಾಗುವುದನ್ನು ತಪ್ಪಿಸಬೇಕು. ಯಕ್ಷಗಾನ ಮೇಳಗಳು, ಅದರ ಮುಖ್ಯಸ್ಥರು, ಕಲಾವಿದರು
ಒಗ್ಗಟ್ಟಾಗಿ ಪ್ರಬಂಧವನ್ನು ರದ್ದುಗೊಳಿಸಲು ಒತ್ತಾಯಿಸಬೇಕು. ನಮ್ಮ ಕಲೆ, ಸಂಸ್ಕೃತಿ, ಪರಂಪರೆಗಳನ್ನು ಆಧಾರರ ಹಿತವಾಗಿ ಹಳಿಯುವ, ಟೀಕಿಸುವ, ಕಲಾವಿದರ ತೇಜೋವಧೆಗೆ ಮುಂದಾಗುವವರಿಗೆ ಇದೊಂದು ಪಾಠವಾಗಲಿ.