Saturday, 7th September 2024

ನೀವು ಮಾತ್ರ ನನ್ನ ಜಾತಿ ಕೇಳಬಾರದು …

ಪ್ರಕಾಶಪಥ

ಪ್ರಕಾಶ್ ಶೇಷರಾಘವಾಚಾರ್‌

ರಾಹುಲ್ ಗಾಂಧಿಯವರು ಮುಂಗಡಪತ್ರದ ಮೇಲಿನ ಚರ್ಚೆಯಲ್ಲಿ ತಮ್ಮ ವಿಚಾರ ಮಂಡಿಸುವಾಗ, ಅದು ಮುಂಗಡಪತ್ರದ ಕುರಿತಾದ ಭಾಷಣ ಎಂಬುದನ್ನು ಮರೆತು ರಾಜಕೀಯ ಭಾಷಣ ಮಾಡಿದರು. ಕೇಂದ್ರ ಸರಕಾರವನ್ನು ಟೀಕಿಸಲು ಮಹಾಭಾರತದ ಚಕ್ರವ್ಯೂಹವನ್ನು ಮೋದಿ ಸರಕಾರಕ್ಕೆ ಹೋಲಿಸಿದರು.

ಲೋಕಸಭೆಯಲ್ಲಿ ಮುಂಗಡ ಪತ್ರದ ಮೇಲೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಮಾಡಿದ ಭಾಷಣದಿಂದ ಕಾಂಗ್ರೆಸ್ ಪಕ್ಷ ಪತರಗುಟ್ಟಿ ಹೋಗಿದೆ. ತಮ್ಮ ಜಾತಿ ಯಾವುದು ಎಂದು ಹೇಳಿಕೊಳ್ಳದಿರುವವರು ಜಾತಿಗಣತಿಯನ್ನು ಕೇಳುತ್ತಿದ್ದಾರೆ ಎಂಬುದಾಗಿ ರಾಹುಲ್ ಗಾಂಧಿಯವರ ಹೆಸರನ್ನು ಹೇಳದೆ ಅವರು ಮಾಡಿದ ಟೀಕೆಯು ಕಾಂಗ್ರೆಸ್ಸಿಗರನ್ನು ಕೆರಳಿಸಿದೆ. ‘ರಾಹುಲ್ ಗಾಂಧಿಯವರ ಜಾತಿ ಕೇಳುವುದಾ? ಇದೊಂದು ಅಸಾಂವಿಧಾನಿಕ ವರ್ತನೆ’ ಎಂದು ಅವರು ರೋದಿಸುತ್ತಿದ್ದಾರೆ ಕಾಂಗ್ರೆಸ್ಸಿಗರ ರೋದನಕ್ಕೆ ಮೋದಿ- ವಿರೋಧಿಗಳು ಮತ್ತು ‘ಇಂಡಿಯ’ ಮೈತ್ರಿಕೂಟದ ನಾಯಕರುಗಳು ದನಿಗೂಡಿಸಿ, ‘ರಾಹುಲ್ ಜಾತಿ ಕೇಳುವುದಾ? ಅದರಲ್ಲೂ ಲೋಕಸಭೆಯಲ್ಲಿ?’ ಎಂದು ಗರಬಡಿದ ಹಾಗೆ ಕೇಳುತ್ತಿದ್ದಾರೆ.

ರಾಹುಲ್ ಗಾಂಧಿಯವರು ಮುಂಗಡಪತ್ರದ ಮೇಲಿನ ಚರ್ಚೆಯಲ್ಲಿ ತಮ್ಮ ವಿಚಾರ ಮಂಡಿಸುವಾಗ, ಅದು ಮುಂಗಡಪತ್ರದ ಕುರಿತಾದ ಭಾಷಣ ಎಂಬುದನ್ನು ಮರೆತು ರಾಜಕೀಯ
ಭಾಷಣ ಮಾಡಿದರು. ಕೇಂದ್ರ ಸರಕಾರವನ್ನು ಟೀಕಿಸಲು ಮಹಾಭಾರತದ ಚಕ್ರವ್ಯೂಹವನ್ನು ಮೋದಿ ಸರಕಾರಕ್ಕೆ ಹೋಲಿಸಿದರು. ಮುಂಗಡಪತ್ರ ದಲ್ಲಿ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯ ಕುರಿತು ಒಂದಕ್ಷರವಿಲ್ಲ, ಎಂಎಸ್‌ಪಿ ಗ್ಯಾರಂಟಿ ಘೋಷಿಸಲಿಲ್ಲ, ಅಗ್ನಿವೀರರ ಪಿಂಚಣಿಗೆ ಹಣ ಮೀಸಲಿಟ್ಟಿಲ್ಲ ಎಂದು ಟೀಕಿಸಿದರು. ಮುಂಗಡಪತ್ರದಲ್ಲಿ ನೀಟ್ ಪರೀಕ್ಷೆಯ ಸಮಸ್ಯೆಯ ಪ್ರಸ್ತಾಪ ಹೇಗೆ ಪ್ರಸ್ತುತ ಎಂದು ಅರ್ಥಮಾಡಿಸಲಿಲ್ಲ. ವಿಶೇಷವಾಗಿ ಜಾತಿಗಣತಿಯ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸುತ್ತಾ, ಇದೇ ಸದನದಲ್ಲಿ ನಾವು ಜಾತಿಗಣತಿಯನ್ನು ತಂದೇ ತರುತ್ತೇವೆ ಎಂದು ಘೋಷಿಸಿದರು. ಐದು ವರ್ಷದ ನಂತರ ಬರುವ ಚುನಾವಣೆಯ ಪ್ರಚಾರದ ವೇದಿಕೆಯಾಯಿತು ಸದನ.

ಇವರ ಜಾತಿಯಾಧಾರಿತ ದಾಳಿಯು ಎಲ್ಲಿಗೆ ತಲುಪುತ್ತದೆ ಎಂದರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪ್ರತಿಗಳ ಮುದ್ರಣಕ್ಕೆ ಮುನ್ನ ನಡೆಸುವ ಹಲ್ವಾ ಸವಿಯುವ
ಕಾರ್ಯಕ್ರಮದ ಚಿತ್ರವನ್ನು ಪ್ರದರ್ಶಿಸಿ, ‘ಈ ಚಿತ್ರದಲ್ಲಿ ಒಬ್ಬನೇ ಒಬ್ಬ ದಲಿತ ಅಥವಾ ಆದಿವಾಸಿ ಮತ್ತು ಹಿಂದುಳಿದವರನ್ನು ನಾನು ಕಾಣುತ್ತಿಲ್ಲ. ಹಲ್ವಾ ಹಂಚುತ್ತಿರುವವರು ಶೇ.೨ ಅಥವಾ ೩ರ
ವರ್ಗಕ್ಕೆ ಸೇರಿದ ಜನ, ಹಾಗೆಯೇ ಹಲ್ವಾ ಪಡೆಯುತ್ತಿರುವವರು ಶೇ.೨ ಅಥವಾ ೩ರ ವರ್ಗಕ್ಕೆ ಸೇರಿದವರು’ ಎಂದು ಒಂದು ಸಮುದಾಯವನ್ನು ಗುರಿಯಾಗಿಸಿ ವಾಗ್ದಾಳಿ ಮಾಡಿದರು. ವಿರೋಧ ಪಕ್ಷದ ನಾಯಕರಾಗಿ ಮುಂಗಡಪತ್ರದ ಬಗ್ಗೆ ವಿಸ್ತೃತವಾಗಿ ವಿಷಯ ಮಂಡಿಸಿ ವಿತ್ತಸಚಿವೆಯನ್ನು ಇಕ್ಕಟ್ಟಿಗೆ ಸಿಲುಕಿಸುವುದಕ್ಕಿಂತ ಹೆಚ್ಚಾಗಿ ಅವರಿಗೆ ರಾಜಕೀಯ ಭಾಷಣವೇ ಪ್ರಿಯವಾಗಿತ್ತು!

ರಾಹುಲರ ಲೆಕ್ಕಾಚಾರವನ್ನು ಪಂಕ್ಚರ್ ಮಾಡಿದ್ದು ಸಂಸದ ಅನುರಾಗ್ ಠಾಕೂರ್ ಮತ್ತು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು. ಇವರಿಬ್ಬರೂ ಪೈಪೋಟಿಯ ಮೇಲೆ ರಾಹುಲರ ಹಲ್ವಾ ಟೀಕೆಯನ್ನು ಚಿಂದಿ ಮಾಡಿದರು. ಯುಪಿಎ ಸರಕಾರದ ಅವಧಿಯ ಹಲವಾರು ಹಗರಣಗಳನ್ನು ನೆನಪಿಸಿದ ಅನುರಾಗ್‌ರವರು, ‘ಇದರಲ್ಲಿ ಹಲ್ವಾ ತಿಂದವರು ಯಾರು?’ ಎಂದು ತೀಕ್ಷ್ಣವಾಗಿ ಚುಚ್ಚಿ, ‘ರಾಹುಲ್‌ರವರೇ ಹಲ್ವಾ ಸಿಹಿಯಾಗಿತ್ತಾ? ಅಥವಾ ಕಹಿಯಾಗಿತ್ತಾ?’ ಎಂದು ಲೇವಡಿ ಮಾಡಿ ಕಾಂಗ್ರೆಸ್ ಪಾಳಯವನ್ನು ನಿರುತ್ತರಗೊಳಿಸಿದರು. ಕಳೆದ ಒಂದು ವರ್ಷದಿಂದ ರಾಹುಲ್ ಗಾಂಧಿಯವರು ಪದೇಪದೆ ಪ್ರಸ್ತಾಪಿಸುತ್ತಿರುವುದು ಜಾತಿಗಣತಿಯನ್ನು ಮತ್ತು ಜಾತಿಯಾಧಾರಿತ ವಿಷಯಗಳನ್ನು. ಇವರು ಪ್ರತಿಯೊಬ್ಬರ ಜಾತಿಯ ಬಗ್ಗೆ ಪ್ರಶ್ನೆ ಕೇಳುವುದು ಸಮ್ಮತವು.

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ, ನಿಮ್ಮ ಜಾತಿ ಯಾವುದು? ನಿಮ್ಮ ಮಾಲೀಕರ ಜಾತಿ ಯಾವುದು? ಎಂದು ಪ್ರಶ್ನಿಸುತ್ತಾರೆ. ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಅವರು, ‘ರಾಹುಲ್ ಗಾಂಧಿಯವರು ಪತ್ರಕರ್ತರ ಜಾತಿ ಕೇಳಿದ್ದು ಸಂವಿಧಾನಬದ್ಧವಾಗಿದೆ’ ಎಂದು ಸಮರ್ಥಿಸುತ್ತಾರೆ. ಆದರೆ ಅನುರಾಗ್ ಠಾಕೂರ್‌ರವರು ಸದನದಲ್ಲಿ ಜಾತಿಯ ಬಗ್ಗೆ ಪ್ರಶ್ನೆ ಮಾಡಿದಾಗ ಅದನ್ನು ಸಂವಿಧಾನ ವಿರೋಧಿ ನಡವಳಿಕೆ ಎಂದು ಅಬ್ಬರಿಸುತ್ತಾರೆ. ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿಗಳ ಜಾತಿಯನ್ನು ಮುಂದಿಟ್ಟುಕೊಂಡು ಪ್ರಶ್ನಿಸುತ್ತಾರೆ. ಹಾಗೆಯೇ ನ್ಯಾಯಾಽಶರ ನೇಮಕದಲ್ಲಿಯೂ ಇವರು ಜಾತಿಯ ಕುರಿತು ಪ್ರಶ್ನಿಸುತ್ತಾರೆ. ‘ನರೇಂದ್ರ ಮೋದಿಯವರು ಎರಡು ರೀತಿಯ ಸೈನಿಕರನ್ನು ಸೃಷ್ಟಿಸಿದ್ದಾರೆ. ಒಂದು ವರ್ಗವು ಬಡವರು, ದಲಿತರು, ಆದಿವಾಸಿಗಳು, ಹಿಂದುಳಿದವರು, ಅಲ್ಪ ಸಂಖ್ಯಾತರು ಮತ್ತು ಆರ್ಥಿಕವಾಗಿ ದುರ್ಬಲರಾಗಿರುವವರನ್ನು ಒಳಗೊಂಡಿದ್ದರೆ, ಇನ್ನೊಂದು ವರ್ಗವು ಶ್ರೀಮಂತರ ಮಕ್ಕಳನ್ನು ಒಳಗೊಂಡಿದೆ’ ಎಂದು ಹೇಳುವ ಮೂಲಕ ರಾಹುಲರು ಸೈನಿಕರ ನಡುವೆಯೂ ಜಾತಿಯ ಒಡಕು ಮೂಡಿಸಲು ಹಿಂಜರಿಯುವುದಿಲ್ಲ.

ಜಾತಿಗಣತಿಯನ್ನು ಬಲವಾಗಿ ಅಪ್ಪಿಕೊಂಡಿರುವ ರಾಹುಲ್ ಗಾಂಧಿಯವರು, ಕರ್ನಾಟಕದಲ್ಲಿ ೨೦೧೫ರಲ್ಲಿ ಕಾಂಗ್ರೆಸ್ ಸರಕಾರ ಕಾಂತರಾಜ್‌ರವರ ನೇತೃತ್ವದಲ್ಲಿ ಕೈಗೊಂಡ ಜಾತಿಗಣತಿ ವರದಿಯನ್ನು ೨೦೨೪ ಆದರೂ ಬಿಡುಗಡೆ ಮಾಡಿಲ್ಲ; ತಮ್ಮದೇ ಪಕ್ಷದ ಸರಕಾರವು ಮತ್ತೆ ೨೦೨೩ರಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಜಾತಿಗಣತಿಯ ವರದಿಯನ್ನು ಬಹಿರಂಗಪಡಿಸಲು ಸಾಧ್ಯವಾಗಿಲ್ಲ ಎಂಬುದನ್ನು ಮರೆತಂತಿದೆ. ಜಾತಿಗಣತಿಯ ಬಗ್ಗೆ ಅವರಿಗೆ ಬದ್ಧತೆ ಇದ್ದಿದ್ದರೆ, ಕರ್ನಾಟಕದಲ್ಲಿ ೧೮೫ ಕೋಟಿ ರು. ವೆಚ್ಚ ಮಾಡಿ ಸಿದ್ಧಪಡಿಸಿರುವ ಜಾತಿಗಣ
ತಿಯ ವರದಿಯನ್ನು ಬಿಡುಗಡೆ ಮಾಡಿ ಎಂದು ಸಿದ್ದರಾಮಯ್ಯನವರಿಗೆ ತಾಕೀತು ಮಾಡಬೇಕಿತ್ತು. ವಾಸ್ತವವಾಗಿ ರಾಜ್ಯದ ಜಾತಿಗಣತಿಯ ವರದಿಯನ್ನು ಬಿಡುಗಡೆಗೊಳಿಸಿ ಅದರಿಂದ ಉಂಟಾದ ಲಾಭವನ್ನು ರಾಷ್ಟ್ರಮಟ್ಟದಲ್ಲಿ ಉಲ್ಲೇಖಿಸಿ ಇತರ ರಾಜ್ಯಗಳಿಗೆ ಮಾದರಿಯಾಗುವ ಸುವರ್ಣಾವಕಾಶ ಇವರಿಗಿದೆ.

ಅಂಗೈಯಲ್ಲಿ ಬೆಣ್ಣೆಯಿದ್ದರೂ ತುಪ್ಪಕ್ಕಾಗಿ ಹುಡುಕುವ ಹಾಗೆ ರಾಹುಲ್‌ರವರು ಕಾಂತರಾಜ್ ವರದಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಪ್ರಯತ್ನಿಸದೆ, ರಾಷ್ಟ್ರಮಟ್ಟದಲ್ಲಿ ಜಾತಿಗಣತಿಯ
ಬಗ್ಗೆ ಅಬ್ಬರಿಸುವುದು ರಾಜಕೀಯವಾಗಿ ಲಾಭ ಬರಲಿ ಎಂಬ ಕಾರಣಕ್ಕಾಗಿ ಮಾತ್ರ. ನಿರ್ಮಲಾ ಸೀತಾರಾಮನ್‌ರವರು ಸದನದಲ್ಲಿ ಮುಂಗಡಪತ್ರದ ಮೇಲೆ ಉತ್ತರ ನೀಡುವಾಗ,
ರಾಹುಲ್ ಗಾಂಧಿಯವರಿಂದ ಹೊಮ್ಮಿದ ಜಾತಿಯ ಆರೋಪಕ್ಕೆ ತಿರುಗೇಟು ಕೊಡುವಾಗ, ಮೀಸಲಾ ತಿಯ ವಿಷಯದಲ್ಲಿನ ಕಾಂಗ್ರೆಸ್ಸಿನ ಇತಿಹಾಸವನ್ನು ನೆನಪಿಸಿ ಇಕ್ಕಟ್ಟಿಗೆ ಸಿಲುಕಿಸಿದರು. ರಾಹುಲ್ ಗಾಂಧಿಯವರ ಮುತ್ತಾತ ನೆಹರುರವರು ೧೯೬೧ರ ಜೂನ್ ೨೭ರ ಪತ್ರವೊಂದರಲ್ಲಿ, ಜಾತಿ ಆಧಾರಿತ ಕೋಟಾಗಳು ಮತ್ತು ಸವಲತ್ತುಗಳ ಸಂಪ್ರದಾಯದ ಬಗ್ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಾರೆ.

‘ನಾನು ಯಾವುದೇ ರೀತಿಯ ಮೀಸಲಾತಿಯನ್ನು ಇಷ್ಟಪಡುವುದಿಲ್ಲ, ವಿಶೇಷವಾಗಿ ಸೇವೆಯಲ್ಲಿ. ಅಸಮರ್ಥತೆ ಮತ್ತು ಎರಡನೇ ದರ್ಜೆಯ ಮಾನದಂಡಗಳಿಗೆ ಕಾರಣವಾಗುವ ಸಂಗತಿಗಳ
ವಿರುದ್ಧ ನಾನು ಬಲವಾಗಿ ಪ್ರತಿಕ್ರಿಯಿಸುತ್ತೇನೆ’ ಎಂದು ಅವರು ಬರೆದಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು, ‘ನಾ ಜಾತ್ ಪರ್ ನಾ ಪಾತ್ ಪರ್, ಮೊಹರ್ ಲಗೇಗಿ ಹಾಥ್ ಪರ್’ ಎಂಬ ಘೋಷಣೆಯನ್ನೇ ರಚಿಸಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ೧೯೮೫ರ ಮಾರ್ಚ್‌ನಲ್ಲಿ ಪತ್ರಕರ್ತ ಅಲೋಕ್ ಮೆಹ್ತಾ ಅವರಿಗೆ ನೀಡಿದ ಸಂದರ್ಶನದಲ್ಲಿ, ‘ಮೀಸಲಾತಿಯ ಹೆಸರಿನಲ್ಲಿ ಅವಿವೇಕಿಗಳಿಗೆ ಬಡ್ತಿ ನೀಡಬೇಡಿ’ ಮತ್ತು ‘ಮೀಸಲಾತಿಯ ಹೆಸರಿನಲ್ಲಿ ಮೂರ್ಖರನ್ನು ಪ್ರಚಾರ ಮಾಡುವುದರಿಂದ ಇಡೀ ದೇಶಕ್ಕೆ ಹಾನಿಯಾಗುತ್ತದೆ’ ಎಂದು ಹೇಳಿದ್ದರು.

ಮಂಡಲ್ ವರದಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾದಾಗ, ಅದರ ಜಾರಿಯನ್ನು ರಾಜೀವ್ ಗಾಂಧಿ ಬಲವಾಗಿ ವಿರೋಧಿಸಿದ್ದರು. ೧೯೫೩ರಲ್ಲಿ ಕಾಕಾ ಸಾಹೇಬ್ ಕಾಲೇಕರ್
ನೇತೃತ್ವದಲ್ಲಿ ಹಿಂದುಳಿದ ವರ್ಗದವರ ಆರ್ಥಿಕ ಪರಿಸ್ಥಿತಿ ಅಧ್ಯಯನ ಮತ್ತು ಪರಿಹಾರ ನೀಡಲು ನೇಮಕ ಮಾಡಿದ್ದ ಆಯೋಗವು ೧೯೫೫ರಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು
ಶಿ-ರಸು ಮಾಡುವ ವರದಿಯನ್ನು ಸಲ್ಲಿಸುತ್ತದೆ. ಆದರೆ ಆ ವರದಿಯನ್ನು ಅಂಗೀಕಾರ ಮಾಡದೆ ಧೂಳುತಿನ್ನಲು ಬಿಡಲಾಗುತ್ತದೆ. ೧೯೮೦ರಲ್ಲಿ ಮಂಡಲ್ ಆಯೋಗವು ತನ್ನ ವರದಿಯನ್ನು ಸಲ್ಲಿಸಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಶಿಫಾರಸು ಮಾಡುತ್ತದೆ; ಆದರೆ ಅಂದಿನ ಕಾಂಗ್ರೆಸ್ ಸರಕಾರವು ಈ ವರದಿಯನ್ನೂ ಶೀತಲಪೆಟ್ಟಿಗೆಗೆ ಸೇರಿಸುತ್ತದೆ.

೧೯೯೨ರ ತಿರುಪತಿ ಎಐಸಿಸಿ ಅಧಿವೇಶನದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆದಾಗ ಪರಿಶಿಷ್ಟ ವರ್ಗಕ್ಕೆ ಸೇರಿದವರು ಒಬ್ಬರೂ ಆಯ್ಕೆಯಾಗುವುದಿಲ್ಲ. ಮುಜುಗರಕ್ಕೆ ಒಳಗಾದ ಕಾಂಗ್ರೆಸ್ ಚುನಾವಣೆಯನ್ನು ರದ್ದುಮಾಡಿ ನೇಮಕಾತಿ ಪ್ರಕ್ರಿಯೆಗೆ ಹಿಂದಿರುಗುತ್ತದೆ. ರಾಹುಲ್ ಗಾಂಧಿಯವರು ಕಾಂಗ್ರೆಸ್ಸಿನ ಜಾತ್ಯತೀತ ಸಿದ್ಧಾಂತಕ್ಕೆ ತಿಲಾಂಜಲಿ ನೀಡಿ, ಜಾತಿ ರಾಜಕಾರಣದ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ೨೦೧೭ರ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಹುಲರು ಸೋಮನಾಥ ದೇವಾಲಯಕ್ಕೆ ಭೇಟಿಯಿತ್ತಾಗ, ಹಿಂದೂಯೇತರರಿಗೆ ಮೀಸಲಿದ್ದ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅನುಭವವನ್ನು ದಾಖಲಿಸುತ್ತಾರೆ. ಗುಜರಾತಿನ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ತಾವು ಹಿಂದುವಲ್ಲ ಎಂದು ತಿಳಿಸುವ ವರ್ತನೆಯು ಬಿಜೆಪಿ ಚುನಾವಣಾ ಪ್ರಚಾರಕ್ಕೆ ಒಳ್ಳೆಯ ಆಹಾರವಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ತಪ್ಪಿನ ಅರಿವಾಗಿ ವಿವಾದವನ್ನು ತಣ್ಣಗೆ ಮಾಡಲು ಮುಂದಾಗುತ್ತದೆ, ‘ರಾಹುಲ್ ಗಾಂಧಿಯವರು ಜನೇದಾರಿ ಹಿಂದೂ’ ಎಂದು ಸುರ್ಜೇವಾಲ ಸ್ಪಷ್ಟನೆ ನೀಡುತ್ತಾರೆ.

೨೦೧೮ರಲ್ಲಿ ರಾಜಸ್ಥಾನದ ಪುಷ್ಕರ್‌ನಲ್ಲಿ ಪೂಜೆ ಮಾಡಿಸುವಾಗ ರಾಹುಲ್‌ರವರು ತಾವೊಬ್ಬ ಕಾಶ್ಮೀರಿ ಬ್ರಾಹ್ಮಣ, ದತ್ತಾತ್ರೇಯ ಗೋತ್ರದವರು ಎಂದು ಗುರುತಿಸಿಕೊಳ್ಳುತ್ತಾರೆ.
ಸದನದಲ್ಲಿ ತಮ್ಮ ಚಕ್ರವ್ಯೂಹದ ತಂತ್ರಗಾರಿಕೆ ವಿಫಲವಾದ ಕಾರಣ, ಈಗ ತಮ್ಮ ಮನೆಯ ಮೇಲೆ ಜಾರಿ ನಿರ್ದೇಶನಾಲಯದವರು (ಇ.ಡಿ) ದಾಳಿ ಮಾಡಲು ಉದ್ದೇಶಿಸಿದ್ದಾರೆ, ಅವರಿಗಾಗಿ ಚಾಯ್ ಮತ್ತು ಬಿಸ್ಕತ್ತು ಕಾದಿದೆ ಎಂಬ ಆಧಾರರಹಿತ ಆರೋಪವನ್ನು ‘ಎಕ್ಸ್’ (ಟ್ವಿಟರ್) ಮಾಧ್ಯಮದ ಮೂಲಕ ಮಾಡಿದ್ದಾರೆ. ಇದು ಕೇವಲ ಸುದ್ದಿಯಲ್ಲಿರಲು ಅವರು ಮಾಡಿರುವ ಮತ್ತೊಂದು
ತಂತ್ರವಾಗಿದೆ. ಜಾತಿಯ ವಿಚಾರದಲ್ಲಿ ಕಾಂಗ್ರೆಸ್ ಅನುಸರಿಸುತ್ತಿರುವ ಇಬ್ಬಗೆಯ ನೀತಿಗೆ ರಾಹುಲ್ ಗಾಂಧಿ ಉತ್ತಮ ಉದಾಹರಣೆಯಾಗಿದ್ದಾರೆ.

ರಾಹುಲರು ಪತ್ರಕರ್ತರ, ಪ್ರಧಾನಮಂತ್ರಿಯ, ಸೈನಿಕರ, ನ್ಯಾಯಾಽಶರ ಜಾತಿಯನ್ನು ಪ್ರಶ್ನಿಸಬಹುದು ಮತ್ತು ಜಾತಿಗಣತಿ ಬೇಡಿಕೆಯ ಮೂಲಕ ೧೪೦ ಕೋಟಿ ಭಾರತೀಯರ ಜಾತಿ ಕೇಳಲು
ಒತ್ತಾಯಿಸಬಹುದು; ಆದರೆ ತಮ್ಮ ಜಾತಿಯ ಬಗ್ಗೆ ಪ್ರಶ್ನೆ ಎದ್ದ ಕೂಡಲೇ, ‘ಇದು ನನಗೆ ಮಾಡುತ್ತಿರುವ ಅಪಮಾನ’ ಎನ್ನುತ್ತಾರೆ. ರಾಹುಲ್ ನೀಡುತ್ತಿರುವ ಸಂದೇಶವು ಸ್ಪಷ್ಟವಾಗಿದೆ. ಅದೆಂದರೆ- ‘ಗಾಂಧಿ ಕುಟುಂಬ ಪ್ರಶ್ನಾತೀತ. ನಿಮ್ಮ ಜಾತಿಯನ್ನು ನಾನು ಕೇಳಬಹುದು, ಆದರೆ ನನ್ನ ಜಾತಿಯನ್ನು ನೀವು ಕೇಳಬಾರದು’.

(ಲೇಖಕರು ಬಿಜೆಪಿಯ ವಕ್ತಾರರು)

Leave a Reply

Your email address will not be published. Required fields are marked *

error: Content is protected !!