Friday, 13th December 2024

ದೂರದರ್ಶನ: ಸಂಪರ್ಕ ಕ್ರಾಂತಿಯ ಹೆಗ್ಗುರುತು

ತನ್ನಿಮಿತ್ತ

ರಾಜಿ ಭೂಶೆಟ್ಟಿ

ಸಂಪರ್ಕ ಕ್ಷೇತ್ರದಲ್ಲಿನ ವೇಗವಾದ ಕ್ರಾಂತಿಯಿಂದಾಗಿ ಇಂದು ಇಡೀ ವಿಶ್ವವೇ ಒಂದು ಹಳ್ಳಿಯಂತಾಗಿದೆ ಎಂದರೆ ಅತಿಶಯೋಕ್ತಿ ಯಾಗಲಾರದು. ಅದರಲ್ಲೂ ವಿಶೇಷವಾಗಿ ಸಂವಹನ ಮತ್ತು ಜಾಗತೀಕರಣದಲ್ಲಿ ದೂರದರ್ಶನದ ಪಾತ್ರ ತುಂಬಾ ಅದ್ಭುತ ವಾದದ್ದು.

ಇಂದು ದೂರದರ್ಶನ ಎಂಬುದು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿ ಸ್ಥಾನ ಪಡೆದಿದೆ. ಜಗತ್ತಿನ ಯಾವುದೇ
ಮೂಲೆಯಲ್ಲಿ ನಡೆಯುತ್ತಿರುವ ಕ್ರೀಡೆಗಳು, ಮನರಂಜನೆ, ಹವಾಮಾನ ವರದಿ, ಶೈಕ್ಷಣಿಕ ಕಾರ್ಯಕ್ರಮಗಳು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದಕ್ಕೆ ಕೊನೆ ಎಂಬುದೇ ಇರುವುದಿಲ್ಲ ಅಷ್ಟರಮಟ್ಟಿಗೆ ದೂರದರ್ಶನ ನಮ್ಮ ಜೀವನವನ್ನು ಪ್ರಭಾವಿಸಿದೆ. ಅಂತರ್ಜಾಲದಲ್ಲಾದ ಕ್ರಾಂತಿಕಾರಿ ಬದಲಾವಣೆಗಳಿಂದ ಲ್ಯಾಪ್ ಟಾಪ್, ಮೊಬೈಲ್‌ಗಳ ಬಳಕೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರು ಕೂಡ ದೂರದರ್ಶನದ ಪ್ರಭಾವ ಮಾತ್ರ ಕುಗ್ಗಿಲ್ಲ, ಕುಗ್ಗುವುದು ಇಲ್ಲವೆಂದೇ ಹೇಳಬಹುದು.

ವಿಶ್ವದ ಮೊದಲ ಟೆಲಿವಿಷನ್ ಫಾರಂ ನವೆಂಬರ್ 21, 1996 ರಲ್ಲಿ ನಡೆಯಿತು. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ದಿನವನ್ನು ಅಂದರೆ ನ.೨೧ನ್ನು ವಿಶ್ವ ದೂರದರ್ಶನ ದಿನವನ್ನಾಗಿ ಆಚರಿಸುವುದಕ್ಕೆ ತೀರ್ಮಾನಿಸಲಾಯಿತು. ಜಾಗತೀಕರಣದ ಈ ಸಂದರ್ಭದಲ್ಲಿ ದೂರದರ್ಶನದ ಪಾತ್ರವನ್ನು ಅರಿಯುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಟಿ. ವಿ. ಸಂಶೋಧನೆಯ ಇತಿಹಾಸ- ದೂರದರ್ಶನದ ಸಂಶೋಧನೆಯಲ್ಲಿ ಹಲವಾರು ವಿಜ್ಞಾನಿಗಳ ನಿರಂತರ ಪರಿಶ್ರಮವಿದೆ. ಪಾಲ್ ನಿಫ್ರೋ ಎಂಬ ವಿಜ್ಞಾನಿ ೧೮೮೪ರಲ್ಲಿ ಮೊದಲ ಬಾರಿಗೆ ದೂರದರ್ಶನ ಕಚ್ಚಾ ಯಂತ್ರವನ್ನು ನಿರ್ಮಿಸಿದ್ದರು. ಇದು ೨೪ ರಂಧ್ರಗಳನ್ನು ಹೊಂದಿದ್ದ ಡಿಸ್ಕನ್ನು ಆಧರಿಸಿತ್ತು. ಇದು ಅಷ್ಟು ಯಶಸ್ವಿಯಾಗದಿದ್ದರೂ ಮುಂದಿನ ವಿಜ್ಞಾನಿಗಳಿಗೆ ಸಂಶೋಧನೆ ಕೈಗೊಳ್ಳಲು ಪ್ರೋತ್ಸಾಹವಾಹಿತೆಂದು ಹೇಳಬಹುದಾಗಿದೆ. 1927ರಲ್ಲಿ ಅಮೆರಿಕದ ವಿಜ್ಞಾನಿಯೊಬ್ಬರು ಮೊದಲ ಬಾರಿಗೆ ಸಂಪೂರ್ಣ ಕ್ರಿಯಾತ್ಮಕ ವಿಡಿಯೊ ಕ್ಯಾಮೆರಾ ಟ್ಯೂಬ್‌ನ ಆವಿಷ್ಕಾರ ಮಾಡಿದರು.

ಈ ಸಾಧನೆಗಾಗಿಯೇ ಇವರನ್ನು ದೂರದರ್ಶನದ ಪ್ರವರ್ತಕ ಎಂದು ಕರೆಯುವರು. ನಂತರದ ಕಾಲಘಟ್ಟದಲ್ಲಿ ಜಾನ್‌ಲೋಗಿ ಬೈಡರ್ ಇವರೊಬ್ಬ ಸ್ಕಾಟ್‌ಲ್ಯಾಂಡ್‌ನ ಸಂಶೋಧಕ, ಎಲೆಕ್ಟ್ರಿಕಲ್ ಎಂಜಿನಿಯರ್ ಇವರು ವಿಶ್ವದಲ್ಲಿಯೇ ಪ್ರಥಮವಾಗಿ ದೂರ ದರ್ಶನ ಕಾರ್ಯದ ಮಾದರಿಯನ್ನು ೧೯೨೬ರ ಜ.೨೬ರಂದು ಯಶಸ್ವಿಯಾಗಿ ಪ್ರದರ್ಶಿಸಿದರು.

ಇದರೊಂದಿಗೆ ಸಾರ್ವಜನಿಕ ವಾಗಿ ಜಗತ್ತಿನಲ್ಲಿಯೇ ಮೊದಲ ಬಾರಿಗೆ ಕಲರ್ ಟಿ.ವಿ ಸಿಸ್ಟಮ್ ಮತ್ತು ಪ್ರಥಮ ಶುದ್ಧ ಎಲೆಕ್ಟ್ರಾನಿಕ್ ಕಲರ್ ಟೆಲಿವಿಜೆನ್ ಪಿಕ್ಚರ್ ಟ್ಯೂಬ್‌ನ್ನು ಪ್ರದರ್ಶಿಸಿದ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾದರು. ವಿಶ್ವಕ್ಕೆ ದೂರದರ್ಶನದ ಕೊಡುಗೆ ನೀಡಿ 1946ರಲ್ಲಿ ನಿಧನರಾದರು. ವಿಶ್ವ ದೂರದರ್ಶನ ದಿನ ಆಚರಿಸುವ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸದಿದ್ದರೆ ಆ ದಿನ
ಅಪೂರ್ಣವಾಗುತ್ತದೆ.

ವಿಶ್ವ ದಾಖಲೆ ನಿರ್ಮಿಸಿದ ರಾಮಾಯಣ ಧಾರಾವಾಹಿ- ಕೋವಿಡ್‌ನಿಂದಾದ ಲಾಕ್‌ಡೌನ್ ಸಂದರ್ಭದಲ್ಲಿ ಜನರ ಬೇಸರ ಕಳೆ ಯುವ ಉದ್ದೇಶದಿಂದ ದೂರದರ್ಶನವು ರಾಮಾಯಣ ಧಾರಾವಾಹಿಯನ್ನು ದಿನದ ಎರಡು ಸಮಯ ಮರು ಪ್ರಸಾರ ಆರಂಭಿ ಸಿತ್ತು. ಇದು ನಿರೀಕ್ಷೆಗೂ ಮೀರಿ ಜನಪ್ರಿಯತೆ ಪಡೆದುಕೊಂಡಿತು. ಅಷ್ಟೆ ಅಲ್ಲ ಜಗತ್ತಿನಲ್ಲಿಯೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಮನರಂಜನಾ ಕಾರ್ಯಕ್ರಮವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಇದರೊಂದಿಗೆ ಮಹಾಭಾರತ, ಶ್ರೀ ಕೃಷ್ಣ ಮುಂತಾದ ಪೌರಾಣಿಕ ಧಾರಾವಾಹಿಗಳನ್ನು ಮರು ಪ್ರಸಾರ ಮಾಡಲಾಯಿತು. ಮಕ್ಕಳು,
ಹಿರಿಯರು ಎಲ್ಲರನ್ನೊಳಗೊಂಡು ಮನೆಯ ಮಂದಿಯಲ್ಲಿ ಕುಳಿತುಕೊಂಡು ಇಂತಹ ಪೌರಾಣಿಕ ಧಾರಾವಾಹಿಯನ್ನು ವೀಕ್ಷಿಸಿ ಸಂತೋಷಪಟ್ಟರು. ಇದು ದೂರದರ್ಶನಕ್ಕಿರುವ ಶಕ್ತಿ ಎಂತಹದ್ದು ಎಂಬುದನ್ನು ತೋರಿಸಿದೆ. ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಬೆಳೆಸುವ, ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ರಚನಾತ್ಮಕ ಕಾರ್ಯಕ್ರಮಗಳು ಇನ್ನೂ ಹೆಚ್ಚು-ಹೆಚ್ಚಾಗಿ ಬರಬೇಕಿದೆ.