Friday, 13th December 2024

ಮಸಾಲೆ ದೋಸೆ ಅಂದರೆ ದೋಸೆಗಳ ಕಂಪನಿಗೆ ’ಎಂ.ಡಿ’

ತಿಳಿರು ತೋರಣ

srivathsajoshi@yahoo.com

ಅಕ್ಕಿಯೊಳಗನ್ನವನು ಮೊದಲಾರು ಕಂಡವನು? ಎಂದು ಕಗ್ಗದಲ್ಲಿ ಮಂಕುತಿಮ್ಮನು ಪ್ರಶ್ನಿಸಿದ ಧಾಟಿಯಲ್ಲೇ ‘ಅಕ್ಕಿ ಉದ್ದು ಬೆರೆಸಿ ದೋಸೆಯನು ಮೊದಲಾರು ಕಂಡವರು?’ ಎಂದು ಕೂಡ ಕೇಳಬಹುದಂತೆ! ‘ಉತ್ತರ ಮಾತ್ರ ತಿಳಿಯದು.

ದಕ್ಷಿಣ ಭಾರತೀಯರು ಎಂಬುದಂತೂ ಖಚಿತ. ಆದರೆ ಮಸಾಲೆ ದೋಸೆಯನ್ನು ಮೊದಲು ತಯಾರಿಸಿದ ಮಹಾಶಯ ಬೆಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಿನ ಶ್ರೀನಿವಾಸರಾವ್ ಎಂಬುದು ಖಚಿತ ಮಾಹಿತಿ ಅಷ್ಟೇ ಅಲ್ಲ, ಆ ಹೋಟೆಲಿನಲ್ಲಿ ಸಿದ್ಧಗೊಂಡ ಮಸಾಲೆ ದೋಸೆಗಳು ವಿಮಾನದ ಮೂಲಕ ಮುಂಬೈನ ದಕ್ಷಿಣ ಕನ್ನಡಿಗರ ಹೋಟೆಲುಗಳಿಗೆ ಸರಬರಾಜಾಗು ತ್ತಿದ್ದವಂತೆ.

ಜನ್ಮೇಪಿ ಗಗನಯಾನವನ್ನೇ ಕಾಣದಿರುವ ಅಸಂಖ್ಯಾತ ಮಂದಿಗೆ ಹೋಲಿಸಿದರೆ ಈ ತಿಂಡಿಯ ಭಾಗ್ಯ ದೊಡ್ಡದಲ್ಲವೇ!’- ಎನ್ನುತ್ತಾರೆ ಸಾಹಿತಿ ಕೆ.ಎನ್.ಭಗವಾನ್ (ಇನಿಷಿ ಯಲ್ಸ್ ಗಮನಿಸಿ. ಗೀತೆ ಸುಡುತ್ತೇನೆಂದು ಗಲಾಟೆಯೆಬ್ಬಿಸಿದ ವಿಚಾರವ್ಯಾಧಿ ಭಗವಾನ್ ಅಲ್ಲ; ಇವರು ಸಾತ್ತ್ವಿಕರು, ಸಜ್ಜನರು). ‘ಘಮಘಮ ಮಸಾಲೆ ದೋಸೆ’ ಎಂಬ ಪುಸ್ತಕದಲ್ಲಿ ‘ಮಸಾಲೆ ದೋಸೆಗೆ ಮಣೆ’ ಎಂಬ ಹರಟೆ ಬರಹದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದಕ್ಕೆ ನನ್ನ ತೀವ್ರ ಆಕ್ಷೇಪವಿದೆ! ದೋಸೆಯ ಪ್ರಪಿತಾಮಹರು ದಕ್ಷಿಣಭಾರತೀಯರೇ ಹೌದೆಂಬುದನ್ನು ಹೆಮ್ಮೆಯಿಂದ ಒಪ್ಪೋಣ. ಬೆಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಿನ ದೋಸೆ ಫೇಮಸ್ಸು ಮತ್ತದು ವಿಮಾನದ ಮೂಲಕ ಮುಂಬೈಗೆ ರವಾನೆ ಯಾಗುತ್ತಿತ್ತು ಎಂಬುದನ್ನೂ (ಸ್ವಲ್ಪ ಉತ್ಪ್ರೇಕ್ಷೆಯಿರಬಹುದಾದರೂ) ಬೇಕಿದ್ದರೆ ಒಪ್ಪೋಣ. ಆದರೆ, ಮಸಾಲೆ ದೋಸೆಯನ್ನು ಮೊದಲು ತಯಾರಿಸಿದ ಮಹಾಶಯ ವುಡ್ ಲ್ಯಾಂಡ್ಸ್‌ನ ಶ್ರೀನಿವಾಸರಾವ್ ಎಂಬ ಮಾತನ್ನಂತೂ ಉಡುಪಿ ಜಿಲ್ಲೆಯವನಾಗಿ ನಾನು ಒಪ್ಪಲಿಕ್ಕೆ ಬಿಲ್‌ಕುಲ್ ಸಿದ್ಧನಿಲ್ಲ.

ಹಾಗೊಂದು ವೇಳೆ ‘ಬೆಂಗಳೂರಿನಲ್ಲಿ ಮೊತ್ತಮೊದಲು ಮಸಾಲೆ ದೋಸೆ ತಯಾರಿಸಿದವರು…’ ಎಂಬ ಕೀರ್ತಿಯನ್ನು ಬೇಕಿದ್ದರೆ
ಅವರಿಗೆ ಅಂಟಿಸಲಿ. ಪರಂತು ಮಸಾಲೆದೋಸೆ ಹುಟ್ಟಿದ್ದೇ ಬೆಂಗಳೂರಿನಲ್ಲಿ ಎಂಬುದನ್ನು, ನಾನು ಬಿಡಿ, ಉಡುಪಿ ಜಿಲ್ಲೆಯ ವರಾರೂ ಒಪ್ಪಲಿಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಮಸಾಲೆ ದೋಸೆ ಹುಟ್ಟಿದ್ದು ಉಡುಪಿಯಲ್ಲೇ!

‘ಘಮಘಮ ಮಸಾಲೆ ದೋಸೆ’ – ಇದು ನಾನು ಇತ್ತೀಚೆಗೆ ಓದಿದ ಪುಸ್ತಕ. ಇತ್ತೀಚಿಗೆ ಅಂದರೆ ಕಳೆದವಾರ ಭಾರತ ಪ್ರವಾಸ ಮುಗಿಸಿ ಅಮೆರಿಕಕ್ಕೆ ಹಿಂದಿರುಗುವಾಗ ವಿಮಾನದಲ್ಲಿ ಓದಿದ್ದು. ಪುಸ್ತಕ ಓದುವುದರಲ್ಲಿ ತುಂಬ ಹಿಂದುಳಿದವನು ನಾನು. ೩೮೦೦೦
ಅಡಿ ಎತ್ತರಕ್ಕೇರಿದಾಗ ಕಾಲಕ್ಷೇಪಕ್ಕಾಗಿ ಓದುವ ಹುಕಿ ಬಂದಿದ್ದರಿಂದ ಈ ಪುಸ್ತಕ ಲಕ್ಕಿ. ಹಾಗಲ್ಲ, ಮೈಸೂರಿಗೆ ಹೋಗಿದ್ದಾಗ ಅಲ್ಲಿ ಸನ್ಮಿತ್ರ ರಘುಪತಿ ತಾಮ್ಹಣಕರರು ಪ್ರೀತಿಯ ಉಡುಗೊರೆಯಾಗಿ ಕೊಟ್ಟದ್ದು ಈ ಪುಸ್ತಕ. ಇಷ್ಟು ಆಕರ್ಷಕ ಶೀರ್ಷಿಕೆ ಮತ್ತು ಮುಖಪುಟದಲ್ಲಿ ಗರಿಗರಿ ಮಸಾಲೆದೋಸೆಯ ಚಿತ್ರವೂ ಇರುವಾಗ, ಯಾರು ತಾನೆ ಓದದೆ ಇದ್ದಾರು? ‘ಓದುತ್ತ ಬಾಯಿಂದ ನೀರೂರಿ ಪುಟಗಳು ಒದ್ದೆಯಾದವೇ?’ ಎಂದು ಮಾತ್ರ ಕೇಳಬೇಡಿ.

ಹೌದೆಂದರೆ ಮುಜುಗರ, ಇಲ್ಲವೆಂದರೆ ಪುಸ್ತಕಕ್ಕೆ ಅವಮಾನ. ರಘುಪತಿ ತಾಮ್ಹಣಕರರು ಈ ಪುಸ್ತಕವನ್ನೇ ಉಡುಗೊರೆಯಾಗಿ ಕೊಡಲಿಕ್ಕೂ ಕಾರಣವಿದೆ. ಅವರದೊಂದು ಹರಟೆ ಬರಹವೂ ಇದರಲ್ಲಿದೆ! ‘ವರ್ಜೀನಿಯಾ ತತ್ತ್ವ ಮಸಾಲೆ ದೋಸೆ’ ಎಂದು, ವರ್ಷಗಳ ಹಿಂದೆ ಅವರು ಇಲ್ಲಿ ವರ್ಜೀನಿಯಾದಲ್ಲಿ ಮಗಳ ಮನೆಗೆ ಬಂದಿದ್ದಾಗಿನ ಅನುಭವಕಥನ. ಮೊನ್ನೆ ಅವರು ನನಗೆ ಈ ಪುಸ್ತಕವನ್ನು ಕೊಟ್ಟಾಗಿನ ದೃಶ್ಯವನ್ನೂ ಬಣ್ಣಿಸುತ್ತೇನೆ.

ಆವತ್ತು ಸಂಜೆಹೊತ್ತು ಒಂದರ್ಧ ಗಂಟೆಯ ಪುರುಸೊತ್ತಿನಲ್ಲಷ್ಟೇ ನಾನವರ ಮನೆಗೆ ಹೋಗಿದ್ದಾದರೂ, ಅವರ ಹೆಂಡತಿಯಿಂದ ಬಿಸಿಬಿಸಿ ದೋಸೆ ಮಾಡಿಸಿ ಉಪಚಾರ ಮಾಡಿದರು. ನನ್ನ ಪಕ್ಕ ಕೂತು ದೋಸೆ ತಿನ್ನುತ್ತಿರುವಾಗ ಎಡಕೈಯಲ್ಲಿ ಈ ಪುಸ್ತಕ ಹಿಡಿದುಕೊಂಡಿರುವ ಭಂಗಿಯದೊಂದು ಫೋಟೊ ಕ್ಲಿಕ್ಕಿಸಿಕೊಂಡರು. ಅಷ್ಟರಮಟ್ಟಿಗೆ ದೋಸೆಪ್ರಿಯ + ಅಕ್ಷರಪ್ರಿಯ ವ್ಯಕ್ತಿ ಅವರು. ‘ಪುಸ್ತಕ ಓದಿದ್ರಾ?’ ಎಂದು ಅವರಿನ್ನು ನನ್ನನ್ನು ಕೇಳುತ್ತಾರೆ. ಆಗ ನನ್ನ ಉತ್ತರ ಹೌದು ಎಂದಾಗಿರಬೇಕೆಂಬ ವಿಶೇಷ
ಮುತುವರ್ಜಿಯಿಂದಲೇ ಓದಿ ಮುಗಿಸಿದ್ದೇನೆ.

ಪುಸ್ತಕದ ಉಪಶೀರ್ಷಿಕೆ ತಿಳಿಸುವಂತೆ ‘ಮಸಾಲೆ ದೋಸೆಗೆ ಸಂಬಂಧಿಸಿದ ಹಿರಿಯ ಲೇಖಕರ ಆಯ್ದ ಬರಹಗಳು’ ಇದರಲ್ಲಿವೆ. ಒಂದ್ನಿಮಿಷ ತಾಳಿ, ಉಪಶೀರ್ಷಿಕೆಯನ್ನು ಇನ್ನೊಮ್ಮೆ ನಿಧಾನವಾಗಿ ಓದಿ ನೋಡಿ. ಮಸಾಲೆ ದೋಸೆಗೆ ಸಂಬಂಧಿಸಿದ ಹಿರಿಯ ಲೇಖಕರು…! ನಿಜ. ಹಿರಿಯ ಲೇಖಕರೇನು, ಮಸಾಲೆ ದೋಸೆಯೊಡನೆ ನಮಗೆಲ್ಲರಿಗೂ ಅವಿನಾಭಾವ ಸಂಬಂಧವೇ.

ಇದು ಅಂಕಿತ ಪುಸ್ತಕ ಪ್ರಕಾಶನದವರ 857ನೆಯ ಪ್ರಕಟಣೆ. ಖ್ಯಾತ ಹಾಸ್ಯಸಾಹಿತಿ ವೈ.ಎನ್.ಗುಂಡೂರಾವ್ ಈ ಪುಸ್ತಕದ ಸಂಪಾದಕರು. ಅವರೂ ಸೇರಿದಂತೆ ಒಟ್ಟು 25 ಲೇಖಕರ 25 ಬರಹಗಳು. ಎಲ್ಲವೂ ಮಸಾಲೆ ದೋಸೆಯ ಪರಿಪರಿಯ ಪ್ರವರ ಗಳು, ಪ್ರಸ್ತುತಿಗಳು. ಒಂದರಂತೆ ಇನ್ನೊಂದಲ್ಲ, ಹಾಗಾಗಿ ಮತ್ತೆಮತ್ತೆ ಒಂದೇ ವಿಷಯ ಓದಿದಂತೆ ಅನಿಸುವುದಿಲ್ಲ. ಅಲ್ಲದೇ
ಇವು ಇಂಥದೊಂದು ಪುಸ್ತಕಕ್ಕಾಗಿ ಹೇಳಿ ಬರೆಸಿಕೊಂಡ ಲೇಖನಗಳಲ್ಲ.

ಈ ಹಿಂದೆ ಆತ್ಮಚರಿತ್ರೆಗಳಲ್ಲೋ ಅಭಿನಂದನಾ ಗ್ರಂಥಗಳಲ್ಲೋ ಮತ್ತೆಲ್ಲೋ ಪ್ರಕಟವಾದ ಲೇಖನಗಳನ್ನು- ಅವು ಮಸಾಲೆ ದೋಸೆಯನ್ನು ಕುರಿತಾದವು ಎಂದು- ಸಂಗ್ರಹಿಸಿ ಮಾಡಿರುವ ಸಂಕಲನ. ನನಗಿದರ ಪರಿಕಲ್ಪನೆಯೇ ತುಂಬ ಇಷ್ಟವಾಯಿತು. ಮತ್ತೆ ಆ 25 ಬರಹಗಾರರೂ ಕಾಂಜಿಪೀಂಜಿಗಳೇನಲ್ಲ. ವಿ.ಸೀತಾರಾಮಯ್ಯ, ಪು.ತಿ.ನರಸಿಂಹಾಚಾರ್, ಎಂ.ಎಸ್. ನರಸಿಂಹ ಮೂರ್ತಿ, ಎಚ್.ಕೆ.ರಂಗನಾಥ್, ಕೆ.ಎಸ್.ನರಸಿಂಹಸ್ವಾಮಿ, ಟಿ.ವಿ.ವೆಂಕಟಾಚಲ ಶಾಸ್ತ್ರೀ, ಶತಾವಧಾನಿ ಆರ್.ಗಣೇಶ್ ಮೊದಲಾದ ಘಟಾನುಘಟಿಗಳು!

ವಿಷಯ ಮಸಾಲೆ ದೋಸೆಯೇ ಆದರೂ ಲೇಖನಸಾಮರ್ಥ್ಯದ ಹರಹು ಮತ್ತು ಬರವಣಿಗೆಯಲ್ಲಿ ಹೂರಣ ವೈವಿಧ್ಯ ಎಷ್ಟಿರ ಬಹುದೆಂದು ಊಹಿಸಲಿಕ್ಕೆ ಅದೊಂದೇ ಅಂಶ ಸಾಕು.

ಉದಾಹರಣೆಗೆ ಪು.ತಿ.ನ ಬರಹದ ಒಂದು ಭಾಗ: ‘ನಿಜವಾಗಿ ಮಸಾಲೆ ದೋಸೆ ಕ್ರಾಂತಿಕಾರಕವಾದ ವಸ್ತು. ಅದು ಹಿಟ್ಟಿನ ಮುದ್ದೆಯಂತೆ ಸರಳವಾದ ಉಣಿಸಲ್ಲ. ಬಹು ಸಂಕೀರ್ಣವಾದದ್ದು. ಅನೇಕ ತಂತಿಗಳಿಂದ ಕೂಡಿ ಶ್ರುತಿಗೆ ಸಿದ್ಧವಾದ ಪಿಟೀಲಿನ ಮೇಲೆ ಕುಶಲವಾದಕನು ಕಮಾನನ್ನು ಆಡಿಸುವ ಹಾಗಾಗುತ್ತದೆ.

ಪ್ರವೀಣನಾದ ವಲಲನು ಹದವರಿತು ನಿರ್ಮಿಸಿದ ಮಸಾಲೆ ದೋಸೆಯ ಮೊದಲ ತುಣುಕು ರಸನೆಗೆ ಸೋಕಿದಾಗ, ಕಾಂತೆಯ ಪ್ರಣಯ ಕೋಪದಂತೆ ಹೊರಗೆ ಕಟು, ಒಳಗೆ ಮೃದು. ಅಗ್ನಿಸಾಕ್ಷ್ಯವಾಗಿ ವರಿಸಿದ ಗೃಹಿಣಿಯೊಡನೆ ನಾವು ನಡೆಸುವ ಗಾರ್ಹಸ್ಥ್ಯ ದಂತಲ್ಲ ಅದರೊಳಗಿನ ಮಸಾಲೆಯ ರುಚಿ; ಅನ್ಯಸ್ತ್ರೀ ಕಟಾಕ್ಷದಂತಿದೆ ಆ ಪಲಾಂಡು ಮಾಧುರ‍್ಯ. ಇಂಗಿನ ಕಹಿ, ಮೆಂತ್ಯದ ಒಗಚು, ಹಸಿಶುಂಠಿ ಹಸಿಮೆಣಸಿನಕಾಯಿ ಮೆಣಸುಗಳ ವಿಶಿಷ್ಟವಾದ ಖಾರಗಳು, ಪಲ್ಯದ ಕಾಯಿಗಳ ವಿವಿಧ ಮಾಧುರ‍್ಯ, ಹಿಟ್ಟುಗಳ ಹುದುಗಿನ ಹಿತವಾದ ಹುಳಿ, ತುಪ್ಪದ ಕಂಪು, ಬೆಣ್ಣೆಯ ವಿಪುಲಾರ್ದ್ರತೆ- ಈ ಸಮೃದ್ಧ ರಸಗಳನ್ನು ಹೊಂದಿಸಿ, ಸುತ್ತಲೂ ಕೆನ್ನಾಲಗೆಯನ್ನು ಚಾಚಿ ಕಾವಲಿಯ ಮೇಲಿರುವ ಭಕ್ಷ್ಯವನ್ನು ರುಚಿ ನೋಡಲು ಹವಣಿಸುವ ಅಗ್ನಿದೇವನನ್ನು ನೀರಿನಿಂದ ದಟ್ಟಿಸುತ್ತಾ, ಕಣ್ಣಿಗೆ ನಾಲಗೆಯ ಹರಿತವನ್ನು ಕೊಟ್ಟು ಒಂದು ಕ್ಷಣವೂ ಹಿಂಚು ಮುಂಚಿಲ್ಲದಂತೆ ಸಿದ್ಧ ಕ್ಷಣದಲ್ಲಿ ಎಲೆಗಿಳಿಸುವ ಕುಶಲ ಬಾಣಸಿಗನ ಕುಶಲ ಕೃತಿ ಈ ಮಸಾಲೆ ದೋಸೆ.

ಇದಕ್ಕೆ ಯಾವ ರಸನಾವಂತ ಮರುಳಾಗಲೊಲ್ಲ?’ ಟಿ.ವಿ.ವೆಂಕಟಾಚಲ ಶಾಸ್ತ್ರೀಯವರ ಬರಹದಿಂದ ಒಂದು ಸ್ಯಾಂಪಲ್: ‘ಹೋಟೇಲಿನ ಮಸಾಲೆ ದೋಸೆ ತಿನ್ನಲು ಬೇಕಾಗಿರುವ ಮುಖ್ಯ ಪರಿಕರವೆಂದರೆ ರುಚಿಯಾಗಲೀ ಹದವಾಗಲೀ ಅಲ್ಲ; ಎಣ್ಣೆಯಾಗಲೀ ಬೆಣ್ಣೆಯಾಗಲೀ ಅಲ್ಲ; ಪೂರ್ವಗ್ರಹ ಪೋಷಿತವಾದ ಒಂದು ಮನೋಧರ್ಮ. ಸಮಾಜಘಟಕವಾಗಿರುವ ತಾನು ಹತ್ತು ಜನದಂತೆ ಹೋಗಬೇಕು, ಮಸಾಲೆ ತಿನ್ನಬೇಕು, ಹಾಕೊಂದು ಮಸಾಲೆ, ಅಷ್ಟೇ! ಮ್ಯಾಚು ನಮ್ಮ ಕಡೆ, ಹುಯ್ಯೊಂದು ಮಸಾಲೆ; ಪ್ಯಾಸಾಯಿತೇ ನಿನಗೆ, ಮಸಾಲೆ ಹಾಕಿಸು; ಮಗಳಿಗೆ ಗಂಡು ಸಿಕ್ಕಿತೇ, ಮಸಾಲೆ ಪೀಕಿಸು.

ಕೆಲಸವೋ, ಮಸಾಲೆ… ಇದೊಂದು ದೊಡ್ಡ ತರಹೆ ದೋಸೆ- ಜನಮನ್ನಣೆಗೆ ಕೊಡುವ, ಪಡೆಯುವ ಒಂದು ಬಗೆ ಟ್ರೀಟ್- ಹೋಟೆಲುಪ್ರಿಯ ಕರ್ನಾಟಕದ ಅಳಿಯಂದಿರುಗಳಿಗೆ ಉಡುಪಿ ಮಾವಂದಿರುಗಳು ಯಥೇಚ್ಛವಾಗಿ ಹಂಚಿ ಹಬ್ಬಿಸಿರುವ ಫ್ಲೂ
ರೋಗ!’- ಇದನ್ನವರು ೧೯೫೭ರಲ್ಲಿ ‘ವಿನೋದ’ ಸಂಚಿಕೆಗೆ ಬರೆದದ್ದು. ಆಗಲೇ ಜನರಿಗೆ ಹೋಟೆಲಿನ ಮಸಾಲೆ ದೋಸೆಯ
ವ್ಯಾಮೋಹ ಅಷ್ಟಿತ್ತಾದರೆ ಒಂದುವೇಳೆ ಈಗ ಬರೆದಿರುತ್ತಿದ್ದರೆ!? ಶಾಸ್ತ್ರಿಗಳಿಗೆ ಹೋಟೆಲಿನ ದೋಸೆ ಇಷ್ಟವಿಲ್ಲ.

‘ಮನೆಯ ದೋಸೆಯು ಗರತಿಯಂತೆ ಗಂಭೀರವಾದದ್ದು, ಹಿತವಾದದ್ದು, ಆರೋಗ್ಯಕರವಾದದ್ದು. ಹೋಟೆಲು ದೋಸೆಯು ಹಾದಿ
ಬೀದಿಯ ರತಿಯಂತೆ ಲಘುವಾದದ್ದು, ಅಹಿತವಾದದ್ದು, ರೋಗಜನಕವಾದದ್ದು. ಮನೆಯಾತ ಹೆಂಡತಿಯನ್ನು ಸ್ವಲ್ಪ
ಪುಸಲಾಯಿಸಿ ತಾಜಾ ಮಾಡಿದರೆ ಎಂಥ ದಿವಿನಾದ ದೋಸೆಯನ್ನಾದರೂ ಕಾವಲಿಯ ಮೇಲಿನಿಂದ ನಾಲಗೆಯ ಮೇಲೆ ತಂದು ಕುಣಿಸಬಹುದು’ ಎನ್ನುತ್ತಾರವರು.

ಎಲ್ಲ ಲೇಖನಗಳೂ ಮಸಾಲೆ ದೋಸೆಯ ವರ್ಣನೆ ಅಂತಷ್ಟೇ ಅಂದುಕೊಳ್ಳಬೇಡಿ! ಓರಗೆಯ ಸ್ನೇಹಿತರಿಗೆ, ಆಕಾಶವಾಣಿಯಲ್ಲಿ
ಸಹೋದ್ಯೋಗಿಗಳಿಗೆ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಿ.ಸೀ ಅವರು ಕೊಡುತ್ತಿದ್ದ ಮಸಾಲೆ ದೋಸೆ ಆತಿಥ್ಯವನ್ನು ನೆನೆಸಿಕೊಂಡ ವರಿದ್ದಾರೆ. ಈ ಮಾತು ಎಚ್. ನರಸಿಂಹಯ್ಯ ಮತ್ತು ಜಿ.ಪಿ.ರಾಜರತ್ನಂ ಅವರಿಗೂ ಅನ್ವಯ. ಅವರೂ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಮಸಾಲೆ ದೋಸೆ ತಿನ್ನಿಸಿದವರೇ.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಬಸವನಗುಡಿಯ ವಿದ್ಯಾರ್ಥಿಭವನಕ್ಕೆ ಪಾದ ಬೆಳೆಸಿ, ಅಲ್ಲಿ ತಂದಿಟ್ಟ ಗರಿಗರಿ ಮಸಾಲೆದೋಸೆಯನ್ನು ತಮ್ಮ ಮೃದುವಾದ ಕೈಗಳಿಂದ ಮುರಿದು, ನಿಧಾನವಾಗಿ ಬಾಯಿಗಿಟ್ಟು, ಮೊಗಲಾಯಿ ಶೈಲಿಯಲ್ಲಿ ಚಪ್ಪರಿಸಿದಾಗ ಮಾಧ್ಯಮಗಳ ‘ಪಾಪರಾಜ್ಜಿ’ಗಳು ಅದನ್ನೇ ದೊಡ್ಡ ಸುದ್ದಿಯಾಗಿಸಿದ್ದು, ಆಮೇಲೆ ವಿರೋಧಪಕ್ಷಗಳೂ ಪತ್ರಕರ್ತರೂ ಅದರಿಂದಲೇ ಕೃಷ್ಣರನ್ನು ಕೆಣಕಿದ್ದು, ನಗುಮೊಗಕ್ಕೆ ಖ್ಯಾತರಾದ ಕೃಷ್ಣ ಕೋಪೋದ್ರಿಕ್ತರಾದದ್ದು… ವಿಡಂಬನಾ ತ್ಮಕವಾಗಿ ಬರೆದಿದ್ದಾರೆ ಎಚ್.ಎಲ್. ಕೇಶವಮೂರ್ತಿ.

ವಿದ್ಯಾರ್ಥಿಭವನಕ್ಕೆ ಸಾಹಿತಿಗಳೂ ಹೋಗುತ್ತಿದ್ದರೆಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ವೈ.ಎನ್.ಗುಂಡೂರಾವ್ ಲೇಖನದಿಂದ
ಒಂದೆರಡು ಚಿತ್ರಣಗಳು: ‘ಬರಹಗಾರರ ಬರವಣಿಗೆಗೆ ಪ್ರೇರಕಶಕ್ತಿಯೂ ಮಸಾಲೆದೋಸೆಯೇ ಇರಬಹುದೇನೋ! ಏಕೆಂದರೆ ಮಲ್ಲೇಶ್ವರದಲ್ಲಿದ್ದ ಜಿ.ಪಿ.ರಾಜರತ್ನಂ ಕೂಡ ದೋಸೆಪ್ರಿಯರಾಗಿದ್ದು ಹಲವಾರು ಬಾರಿ ವಿದ್ಯಾರ್ಥಿಭವನದ ದೋಸೆಗಾಗಿಯೇ ಮಲ್ಲೇಶ್ವರದಿಂದ ನಡೆದು ಬರುತ್ತಿದ್ದರು. ದಟ್ಟಿ ಪಂಚೆ ಉಟ್ಟು, ಮೇಲೊಂದು ತುಂಡು ಪಂಚೆ ಹೊದ್ದು ಬರುವಾಗಲೇ ವಿಶಿಷ್ಟ ವಾಗಿ ಎಂಟ್ರಿ ಕೊಟ್ಟು ನಿರ್ದಿಷ್ಟವಾದ ಕುರ್ಚಿಯಲ್ಲಿ ಬಂದು ಕೂಡುತ್ತಿದ್ದಂತೆ ಪರಿಚಾರಕ ಸು.ವಿ.ಮೂರ್ತಿ ಇವರ ಮುಂದೆ ಬಂದು ನಿಂತರೆ ಮಧ್ವಾಚಾರ್ಯರ ರೀತಿ ಎರಡು ಬೆರಳೆತ್ತಿ ತೋರಿಸಿದರೆ ಎರಡು ಮಸಾಲೆ ಎಂದರ್ಥ.

ಮಾತಿಲ್ಲ ಕತೆಯಿಲ್ಲ. ಎಲ್ಲವೂ ಸಂಜ್ಞೆ. ಒಂದರನಂತರ ಒಂದು, ಬಿಸಿಬಿಸಿಯಾಗಿ ಕಾವಲಿಯಿಂದೆತ್ತಿ ತಂದು ತಟ್ಟೆಗೆ ಹಾಕಬೇಕು. ದೋಸೆಯ ಹದಕ್ಕೆ ಸರಿಯಾಗಿ ಚಟ್ಣಿಯ ಮೇಳ. ಎರಡು ಮಡಿಕೆ ಮಡಿಚಿಕೊಂಡು ಹಬೆಯಾಡುತಲಿದ್ದ ದೋಸೆಯ ಮೇಲ್ಭಾಗ ದಲ್ಲಿ ಹಾಕಿದ ದಪ್ಪ ಬೆಣ್ಣೆ ಮುದ್ದೆಯನ್ನು ತೋರ‍್ಬೆರಳಿನಿಂದ ಸವರುತ್ತ, ದೋಸೆಯ ಮೈಗೆ ಪೆಟ್ಟಾಗದಂತೆ ಹದವಾಗಿ ಮುರಿದು ಚಟ್ಣಿಯಲ್ಲಿ ಮುಳುಗಿಸಿ ಬಾಯಿಗಿಟ್ಟುಕೊಂಡು ನಿರ್ಲಿಪ್ತತೆಯಿಂದ ಮೆಲ್ಲತೊಡಗಿದರೆ ಅದರ ಸ್ವಾದ ನಾಲಗೆಗಂಟಿ ಜಠರಕ್ಕೆ ಸಿಗ್ನಲ್ ಕಳುಹಿಸಿದರೆ, ನಾಸಿಕವು ದೋಸೆಯ ಘಮಘಮ ವಾಸನೆಯನ್ನು ಮೆದುಳಿಗೆ ತಲುಪಿಸಿದಾಗ ದೋಸೆ ತಿಂದ ಮನಸ್ಸು ವಿಶಿಷ್ಟ ಸುಖವನ್ನನುಭವಿಸುತ್ತಿದ್ದುದನ್ನು ರಾಜರತ್ಮಂರವರ ಮುಖದಲ್ಲಿ ಕಾಣಬಹುದಿತ್ತು.’

ಆಹಾ! ಎಂಥ ಬಣ್ಣನೆ! ಹಾಗೆಯೇ, ‘ಡಿವಿಜಿಯವರು ಬಂದರೆ ಮೂರು ಜನ ಕೂಡುವ ಬೆಂಚಿನ ಮೇಲೆ ವಿಶಾಲವಾಗಿ ತಮ್ಮ ದೇಹವನ್ನು ಹರಡಿ ಎರಡು ಕೈಯನ್ನು ಬೆನ್ನ ಹಿಂದಿನ ಒರಗು ಬೆಂಚಿನ ಮೇಲೆ ತೂಗುಬಿಟ್ಟು, ಬಂದು ನಿಂತ ಪರಿಚಾರಕರಿಗೆ ತೋರು ಬೆರಳೆತ್ತಿ ತೋರಿಸಿದರೆ ಒಂದು ಗರಿಗರಿ ಮಸಾಲೆ ದೋಸೆ ಎಂದೇ ಅರ್ಥ.

ಬಿಸಿಬಿಸಿಯಾಗಿ ತಂದಿಟ್ಟ ದೋಸೆಯ ಅಂಚನ್ನು ಮುರಿದು, ಚಟ್ಣಿಯಲ್ಲಿ ಹೊರಳಿಸಿ ಮಜ್ಜನ ಮಾಡಿಸಿ, ದೋಸೆ ತಿಂದ ನಂತರ ಕೊಟ್ಟ ಪೇಪರ್ ತುಂಡಿನಿಂದ ಕೈಗಂಟಿದ ಜಿಡ್ಡನ್ನು ಒರೆಸಿ ತಟ್ಟೆಗೆ ಹಾಕಿ ಪರಿಚಾರಕರ ಮುಖವನ್ನು ಮತ್ತೊಮ್ಮೆ ನೋಡಿದರೆ ಒಂದು ಸ್ಟ್ರಾಂಗ್ ಕಾಫಿ ಎಂದೇ ಅರ್ಥ.’ ಎಂ.ಎಸ್.ನರಸಿಂಹಮೂರ್ತಿಯವರ ಬರಹದಲ್ಲಿ ಇನ್ನೊಂದು ಕಿಕ್. ‘ಅಪ್ಪಣ್ಣಾಚಾರ್ರ ಹೋಟೆಲ್ ನೆನಪಿಸಿಕೊಂಡೆ. ಹದಿನೈದು ವರ್ಷಗಳ ಹಿಂದೆ ಅದು ಬಹಳ ಪ್ರಖ್ಯಾತಿ ಗಳಿಸಿತ್ತು.

ಹಳೆಯ ಹೆಂಚಿನ ಮನೆ. ಒಂದು ಮೂಲೆಯಲ್ಲಿ ದೊಡ್ಡ ಕಾವಲಿ. ಅದರ ಪಕ್ಕದಲ್ಲಿ ತೆಂಗಿನಕಡ್ಡಿಯ ಪೊರಕೆ. ಕಾವಲಿಗೆ ನೀರು
ಚಿಮುಕಿಸಿ ಒಮ್ಮೆ ಪೊರಕೆಯಿಂದ ಗುಡಿಸಿ ದೋಸೆ ಸುತ್ತುವುದು. ಹತ್ತಿರದಲ್ಲಿ ಜಿರಲೆಗಳು ಓಡಾಡಿದರೆ ಅದೇ ಪೊರಕೆಯಿಂದ
ಒಂದು ಹೊಡೆತ! ಎಣ್ಣೆಯ ಕಮಟುವಾಸನೆಯಿಂದ ಆ ಪೊರಕೆ ದೋಸೆಗೆ ಪರಿಮಳ ಕೊಡುವುದರಲ್ಲಿ ಪ್ರಧಾನ ಪಾತ್ರ ವಹಿಸಿತ್ತು.’
ಇದಕ್ಕಿಂತ ನೈಜ ಚಿತ್ರಣ ಬೇರೇನು ಬೇಕು! ಋಷಿಮೂಲ ನದೀಮೂಲಗಳನ್ನೆಲ್ಲ ಹುಡುಕಿಕೊಂಡು ಹೋಗಬಾರದಂತೆ.

ಹಾಗೆ ಮಸಾಲೆದೋಸೆ ತಯಾರಾಗುವ ಅಡುಗೆಮನೆಯತ್ತ ಕಣ್ಣುಹಾಯ್ದರೂ ಜಾಣಕುರುಡು ತೋರಬೇಕು. ಈ ಪೊರಕೆ ವಿಚಾರ ನನ್ನನ್ನು ತಟ್ಟಲಿಕ್ಕೆ ಮುಖ್ಯ ಕಾರಣ, ಹದಿನೈದು ವರ್ಷಗಳ ಹಿಂದೆ ನಾನೊಮ್ಮೆ ವಿಚಿತ್ರಾನ್ನ ಅಂಕಣದಲ್ಲಿ ‘ಸ್ಪಾನಿಷ್ ನಾಡಿನಲ್ಲಿ ಪೊರ್ಕೆ ಮತ್ತು ಮಸಾಲೆದೋಸೆ’ ಎಂಬ ಲೇಖನ ಬರೆದಿದ್ದೆ.

ಕಂಪನಿ ಕೆಲಸದಲ್ಲಿ ನಾನು ಪೋರ್ಟರಿಕೊ ದ್ವೀಪರಾಷ್ಟ್ರದ ರಾಜಧಾನಿ ಸ್ಯಾನ್ ಹ್ವಾನ್ ನಗರಕ್ಕೆ ಭೇಟಿಯಿತ್ತದ್ದು, ಅಲ್ಲಿ ಒಂದು ದಿನ ಡಿನ್ನರ್‌ಗೆ ‘ತಂತ್ರ’ ಎಂಬ ಹೆಸರಿನ ಇಂಡೋ-ಲ್ಯಾಟಿನ್ ರೆಸ್ಟೊರೆಂಟ್‌ಗೆ ಹೋದದ್ದು, ಪೋರ್ಟರಿಕೊದಲ್ಲಿ ಜನರಾಡುವ ಸ್ಪಾನಿಷ್ ಭಾಷೆಯಲ್ಲಿ ‘ಪೊರ್ಕೆ’ ಎಂಬ ಪದ (‘ಏಕೆಂದರೆ’ ಎಂಬ ಅರ್ಥ) ಪದೇ ಪದೇ ಕೇಳಿಬರುತ್ತಿದ್ದದ್ದು, ಅದನ್ನು ನಾನು ತಂತ್ರ ರೆಸ್ಟೊರೆಂಟ್‌ನಲ್ಲಿ ಸವಿದ ಮಸಾಲೆದೋಸೆಗೆ (ಅದರ ತಯಾರಿ ವಿಧಾನಕ್ಕೆ) ತಮಾಷೆಗೆಂದೇ ಅನ್ವಯಿಸಿದ್ದು, ರೆಸ್ಟೊರೆಂಟ್‌ನ ಮಾಲಿಕ ರಮೇಶ್ ಪಿಳ್ಳೈ ಎಂಬುವವರನ್ನು ಮಾತನಾಡಿಸಿ ಅವರೊಡನೆ ಫೋಟೊ ತೆಗೆಸಿಕೊಂಡು ಅವರದೊಂದು ಮಿನಿ ಸಂದರ್ಶನ ನಡೆಸಿದ್ದು, ಒಟ್ಟಾರೆಯಾಗಿ ಆ ರೋಚಕ ಅನುಭವವನ್ನು ಅಂಕಣಬರಹವಾಗಿಸಿದ್ದು ಎಲ್ಲ ನೆನಪಾಯಿತು.

ಅಂದರೆ ಒಂದು ಮಸಾಲೆ ದೋಸೆಗೂ ಮಧುರಸ್ಮೃತಿಗಳ ಮೆರವಣಿಗೆ ಹೊರಡಿಸುವ ತಾಕತ್ತು ಎಷ್ಟಿದೆ ನೋಡಿ! ಇಂತಿರುವ ಮಸಾಲೆ ದೋಸೆ ಮಹಾತ್ಮೆಗೆ ಈಗ ನನ್ನ ಕಡೆಯಿಂದಲೂ ಒಂದು ಸ್ವಾರಸ್ಯಕರ ತುಣುಕನ್ನು ಸೇರಿಸಿ ಈ ಹರಟೆಯನ್ನು ಮುಗಿಸು ತ್ತೇನೆ. ನಮ್ಮ ಕರಾವಳಿಯಲ್ಲಿ ನಾವು ಚಿತ್ಪಾವನರೂ ಸೇರಿದಂತೆ ಕೆಲವು ಸಮುದಾಯಗಳಲ್ಲಿ ದೀಪಾವಳಿಗೆ ದೋಸೆಯೇ ವಿಶೇಷ. ಅದೂ ಹೇಗೆಂದರೆ ಅಕ್ಕಿ-ಉದ್ದು ನೆನೆಸಿಟ್ಟು ರುಬ್ಬಿದ ಹಿಟ್ಟಿಗೆ ಸ್ವಲ್ಪೇಸ್ವಲ್ಪ ಅರಿಶಿನವನ್ನೂ ಬೆರೆಸಿ ಮಾಡಿದ ಹಳದಿ ದೋಸೆ.

ನರಕಚತುರ್ದಶಿಯಂದು ಬೆಳಗ್ಗೆ ತೈಲಾಭ್ಯಂಗ ಆದಮೇಲೆ ದೋಸೆ ಫಳ್ಹಾರ ಆರಂಭವಾದರೆ ಮೂರು ದಿನ ಮೂರು ಹೊತ್ತೂ ದೋಸೆಯೇ. ಆಫ್‌ಕೋರ್ಸ್ ಬೇರೆ ಭಕ್ಷ್ಯಭೋಜ್ಯಗಳನ್ನು, ಸಿಹಿತಿಂಡಿಗಳನ್ನೂ ಮಾಡುವುದಿದೆಯೆನ್ನಿ. ಆದರೂ ಪ್ರಧಾನ ಭೂಮಿಕೆ ದೋಸೆಯದೇ. ಆದರೆ ಒಂದೇ ಥರ ದೋಸೆ ತಿನ್ನಲಿಕ್ಕೆ ಬೋರೆನಿಸುತ್ತದೆಯಲ್ವಾ. ಅದಕ್ಕಾಗಿ ದೋಸೆಗೇ ವಿಧವಿಧ
ವೇಷಭೂಷಣ ತೊಡಿಸುವುದು. ಹಾಗೆ ನಮ್ಮನೆಯಲ್ಲಿ ನಡೆದುಕೊಂಡು ಬಂದಿರುವ (ಇದು ನಮ್ಮಲ್ಲಿಗೆ ಅಜ್ಜನ ಮನೆಯಿಂದ ಬಂದದ್ದು) ಒಂದು ಸಂಪ್ರದಾಯವೆಂದರೆ ದೀಪಾವಳಿಯ ಅಮಾವಾಸ್ಯೆಯಂದು ಸಂಜೆ ಮಸಾಲೆ ದೋಸೆಯ ಅದ್ದೂರಿ ಪ್ರಯೋಗ. ಹಬ್ಬಕ್ಕೆ ಮನೆಮಂದಿಯೆಲ್ಲ ಸೇರಿ ಕಳೆಗಟ್ಟಿರುವುದರಿಂದ ಆ ವೈಭೋಗ ಮತ್ತೂ ಹೆಚ್ಚಿರುತ್ತದೆ.

ಹತ್ತಿಪ್ಪತ್ತು ಜನರಿದ್ದರಂತೂ ಮಾಮೂಲಿ ಗ್ಯಾಸ್‌ಸ್ಟವ್-ಕಾವಲಿ ಅಲ್ಲ ಕಟ್ಟಿಗೆ ಒಲೆಯ ಮೇಲೆ ದೊಡ್ಡ ತವಾ ಇಟ್ಟು ಅದರ ಮೇಲೆ
ದೋಸೆ ಹುಯ್ಯೋಣವಾಗುವುದು. ರಂಗಸಜ್ಜಿಕೆ ಪರಿಪೂರ್ಣವಾಗುವುದಕ್ಕೆ ಬೇಕಿದ್ದರೆ ಕ್ಲೀನಾಗಿರುವ ಒಂದು ಪೊರಕೆ ಕೂಡ.
ಥೇಟ್ ಒಂದು ಟಿಪಿಕಲ್ ಉಡುಪಿ ರೆಸ್ಟೊರೆಂಟ್‌ನಂತೆಯೇ. ಅಲ್ಲಿ ನಿಜವಾಗಿ ಮಸಾಲೆ ದೋಸೆಯ ರುಚಿಗಿಂತಲೂ, ದೋಸೆಗಾಗಿ
ಕಾಯುವ ಆ ಕಾತರದ ಕ್ಷಣಗಳು, ‘ಲುಕ್ಕಿಂಗ್ ಫಾರ್ವರ್ಡ್ ಟು’ಗೇ ಹೆಚ್ಚು ಮಹತ್ತ್ವ. ಎಲ್ಲಿಯವರೆಗೆಂದರೆ ಮಸಾಲೆ ದೋಸೆ
ಎಂದು ಪೂರ್ತಿ ಹೆಸರು ಕೂಡ ಹೇಳಲಿಕ್ಕಿಲ್ಲ, ಈವತ್ತು ‘ಎಂ.ಡಿ’ ಎಂದು ಹ್ರಸ್ವ ಸಂಕೇತಾಕ್ಷರ ಬಳಸುವುದು. ಅದರ ಪೂರ್ಣರೂಪ
‘ಮಸಾಲೆ ದೋಸೆ’ ಅಂತಲೂ ಆಗುತ್ತದೆ. ದೋಸೆಗಳದೇನಾದರೂ ಕಂಪನಿ ಸ್ಥಾಪಿಸಿದರೆ ‘ಮ್ಯಾನೇಜಿಂಗ್ ಡೈರೆಕ್ಟರ್’ ಎಂದು ಕೂಡ
ಆಗುತ್ತದೆ! ಆ ಹುದ್ದೆಗೆ ಅವಿರೋಧ ಆಯ್ಕೆಯಾಗಲಿಕ್ಕೆ, ಅಭಿಷಿಕ್ತ ದೊರೆಯಾಗಲಿಕ್ಕೆ ಮಸಾಲೆ ದೋಸೆಗೆ ಮಾತ್ರ ಅರ್ಹತೆ, ಘನತೆ,
ಗತ್ತು-ಗಾಂಭೀರ್ಯ ಇರುವುದು. ನೀವೇನಂತೀರಿ?