Friday, 13th December 2024

ಬಲು ಅಪರೂಪ ನಮ್ ದೋಸ್ತಿ…!

ವಿದೇಶವಾಸಿ

dhyapaa@gmail.com

‘ನಾವು ಯಾವಾಗಲೂ ಮಾಡುತ್ತಿರುವುದನ್ನೇ ಮಾಡುತ್ತ ಕುಳಿತರೆ, ನಮಗೆ ಯಾವಾಗಲೂ ಸಿಗುವುದೇ ಸಿಗುತ್ತದೆಯೇ ವಿನಾ ಹೆಚ್ಚಿನದ್ದೇನೂ ಸಿಗುವುದಿಲ್ಲ, ಹೊಸತೇನೂ ಕಾಣುವುದಿಲ್ಲ’ ಎಂಬ ಮಾತಿದೆ. ಅದಕ್ಕಾಗಿಯೇ ಪ್ರಾಜ್ಞರು ‘ಬದಲಾವಣೆ ಜಗದ ನಿಯಮ’ ಎಂದಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಹೇಳಿದ ಮಾತು ನೆನಪಾಗುತ್ತದೆ- ‘ಹಳೆಯದನ್ನೇ ಮಾಡುವುದಕ್ಕೆ ತೆರಬೇಕಾದ ಬೆಲೆ, ಬದಲಾವಣೆಗೆ ಕಟ್ಟಬೇಕಾದ ಬೆಲೆಗಿಂತಲೂ ಹೆಚ್ಚಾಗಿರುತ್ತದೆ’.

ಬಿಲ್ ಕ್ಲಿಂಟನ್‌ರ ಕುರಿತು ವಿವಾದಗಳಿರಬಹುದು, ಪರ- ವಿರೋಧಗಳಿರಬಹುದು. ಆದರೆ ಅವರು ಬದಲಾವಣೆಯ ಕುರಿತು ಹೇಳಿದ ಈ ಮಾತನ್ನು ಸಾರಾ
ಸಗಟಾಗಿ ತಳ್ಳಿಹಾಕುವಂತಿಲ್ಲ. ಬದಲಾವಣೆಗೆ ನಮ್ಮ ಜೀವನಕ್ಕಿಂತ ಒಳ್ಳೆಯ ಉದಾಹರಣೆ ಬೇಕೆ? ಇಂದು ನಮ್ಮ ಆಹಾರ, ವಿಹಾರ, ತಂತ್ರಜ್ಞಾನ, ಉಳಿಯುವ ಮನೆ, ತೊಡುವ ಬಟ್ಟೆ, ಬಳಸುವ ವಸ್ತುಗಳು, ಎಲ್ಲವೂ ಬದಲಾಗಿವೆ. ಇವೆಲ್ಲ ಭೌತಿಕ ಬಿಡಿ. ಅದರ ಹೊರತಾಗಿ ಸಾಮಾಜಿಕವಾಗಿ, ರಾಜಕೀಯವಾಗಿಯೂ ಸಾಕಷ್ಟು ಬದಲಾವಣೆಯನ್ನು ನಾವು ಕಾಣುತ್ತಿದ್ದೇವೆ.

ಜಾರ್ಜ್ ಬರ್ನಾರ್ಡ್ ಶಾ ಹೇಳುವಂತೆ, ‘ಬದಲಾವಣೆಯಾಗದಿದ್ದರೆ ಪ್ರಗತಿ ಸಾಧ್ಯವಿಲ್ಲ. ತಮ್ಮ ಮನಸ್ಸನ್ನೇ ಬದಲಾಯಿಸಲು ಸಾಧ್ಯವಾಗದವರು
ಏನನ್ನೂ ಬದಲಾಯಿಸಲಾರರು’. ಇದು ಮನುಷ್ಯನ ವಿಷಯವಾದರೂ ಸರಿ, ರಾಜ್ಯದ ವಿಷಯವಾದರೂ ಸರಿ ಅಥವಾ ದೇಶದ ವಿಷಯವಾದರೂ ಸರಿ. ತಮ್ಮ ಭವಿತವ್ಯದ ಒಳಿತಿಗಾಗಿ ಬದಲಾಗುತ್ತಲೇ ಇರಬೇಕು. ಎಷ್ಟೋ ಬಾರಿ ಒಳ್ಳೆಯ ಸ್ನೇಹಿತರು ಪರಸ್ಪರ ವೈರಿಗಳಾಗುತ್ತಾರೆ, ವೈರಿಗಳೂ ಒಂದಾಗುತ್ತಾರೆ.
ಹಾಗೆಯೇ, ಮಿತ್ರ ರಾಷ್ಟ್ರಗಳೂ ಶತ್ರುಗಳಾಗುತ್ತವೆ, ಶತ್ರುಗಳೂ ಮಿತ್ರ ರಾಷ್ಟ್ರಗಳಾಗಿ ಬದಲಾಗುತ್ತವೆ.

ಇದಕ್ಕೆ ಒಳ್ಳೆಯ ಉದಾಹರಣೆ, ಗಾಝಾದ ಇತ್ತೀಚಿನ ಯುದ್ಧ ಆರಂಭವಾಗುವುದಕ್ಕಿಂತ ಮೊದಲು, ಯುಎಇ ಮತ್ತು ಇಸ್ರೇಲ್ ಸ್ನೇಹಹಸ್ತ ಕುಲುಕಿದ್ದು.
ಸೌದಿ ಅರೇಬಿಯಾ, ಬಹ್ರೈನ್ ಕೂಡ ಅದೇ ಹಾದಿಯಲ್ಲಿದ್ದವು. ಕೆಲವೇ ವರ್ಷಗಳ ಹಿಂದೆ, ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಸ್ನೇಹ ಬಿಡಿ,
ಮಾತುಕತೆ ನಡೆಯುತ್ತದೆ ಎನ್ನುವುದನ್ನೇ ನಂಬುವಂತಿರಲಿಲ್ಲ. ಅಷ್ಟು ದೂರ ಹೋಗುವುದು ಏಕೆ? ಭಾರತ ಮತ್ತು ಅರಬ್ ರಾಷ್ಟ್ರಗಳ ನಡುವಿನ
ಸಂಬಂಧವನ್ನೇ ನೋಡಿದರೆ, ಹತ್ತು ವರ್ಷದ ಹಿಂದಿನ ಸಂಬಂಧಕ್ಕೂ ಇಂದಿನ ಸಂಬಂಧಕ್ಕೂ ಎಷ್ಟು ಬದಲಾಗಿದೆ ಎಂದು ತಿಳಿಯುತ್ತದೆ.

ಭಾರತದ ಗುಪ್ತಚರ ಇಲಾಖೆಯ ವರದಿಯ ಪ್ರಕಾರ, ೨೦೧೧ರಿಂದ ೨೦೧೩ರವರೆಗಿನ ಎರಡು ವರ್ಷದ ಅವಧಿಯಲ್ಲಿ ಅರಬ್ ದೇಶಗಳಿಂದ ಸುಮಾರು ೨೫ ಸಾವಿರ ಇಸ್ಲಾಂ ಧರ್ಮದ ಮೌಲ್ವಿಗಳು, ವಿದ್ವಾಂಸರು, ಬುದ್ಧಿಜೀವಿಗಳು ಧರ್ಮ ಪ್ರಚಾರಕ್ಕೆಂದು ಭಾರತಕ್ಕೆ ಬಂದಿದ್ದರು. ಅವರು ನಡೆಸುವ ವಿಚಾರ ಸಂಕಿರಣ, ಅಧ್ಯಯನ ಗೋಷ್ಠಿಯ ಹೆಸರಿನಲ್ಲಿ ಭಾರತಕ್ಕೆ ಬಂದ ಹಣ ಬರೋಬ್ಬರಿ ಒಂದು ಸಾವಿರದ ಏಳುನೂರು ಕೋಟಿ ರುಪಾಯಿ. ಅವೆಲ್ಲ ಯಾವುದೋ ಆಸ್ಪತ್ರೆ, ಶಾಲೆ, ಉದ್ಯಾನ, ಕೊನೆ ಪಕ್ಷ ಮಸೀದಿಗೂ ಬಳಕೆಯಾಗಲಿಲ್ಲ.

ವಿಶ್ವದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಮಸೀದಿ ನಿರ್ಮಾಣಕ್ಕೆಂದು ಅರಬ್ ರಾಷ್ಟ್ರಗಳು ಮೊದಲಿಂದಲೂ ಹಣದ ಸಹಾಯ ಮಾಡಿಕೊಂಡು ಬಂದಿವೆ. ಅದಕ್ಕೆ ಹೋಲಿಸಿದರೆ, ಭಾರತದಲ್ಲಿ ಮಸೀದಿ ಕಟ್ಟಲು ಅರಬ್ ರಾಷ್ಟ್ರದ ಹಣ ಬಳಸಿದ್ದು ಕಡಿಮೆ ಎಂದೇ ಹೇಳಬಹುದು. ಭಾರತದಲ್ಲಿ ಕೊಲ್ಲಿ ರಾಷ್ಟ್ರದ ಹಣ ಹೆಚ್ಚಾಗಿ ಬಳಕೆಯಾದದ್ದು ಮದ್ರಸಾ ಗಳ ನಿರ್ಮಾಣಕ್ಕೆ ಮತ್ತು ಧರ್ಮ ಪ್ರಚಾರಕ್ಕೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶದಲ್ಲಿ ನೂರಕ್ಕಿಂತಲೂ ಕಮ್ಮಿ ಮದ್ರಸಾಗಳಿದ್ದವಂತೆ. ಸ್ವಾತಂತ್ರ್ಯ ಸಿಕ್ಕಿ ಅರವತ್ತು ವರ್ಷವಾದಾಗ ಈ ಸಂಖ್ಯೆ ಐದು ಲಕ್ಷಕ್ಕೆ ಏರಿತು. ಇದರಲ್ಲಿ ಅರಬ್ ರಾಷ್ಟ್ರಗಳ ಪಾಲು
ಹದಿನಾಲ್ಕು ಬಿಲಿಯನ್ ರುಪಾಯಿಗಳು ಎಂಬ ಅಂದಾಜಿದೆ.

ಸೌದಿ ಅರೇಬಿಯಾದ ಇಂದಿನ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಆಡಳಿತದ ಚುಕ್ಕಾಣಿ ಹಿಡಿಯುವುದಕ್ಕಿಂತ ಮೊದಲಿನ ಇಪ್ಪತ್ತು ವರ್ಷ ದಲ್ಲಿ, ವಿದೇಶಗಳಲ್ಲಿ ಧರ್ಮ ಪ್ರಚಾರಕ್ಕೆಂದೇ ದೇಶ ತೊಂಬತ್ತು ಬಿಲಿಯನ್ ಡಾಲರ್ ಖರ್ಚು ಮಾಡಿದೆ ಎಂಬ ವರದಿಯಿದೆ. ಒಂದು ಕಾಲದಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿದ್ದ ಗಲಭೆಗಳಿಗೆ, ಅಲ್ಲಿಯ ಯುವಕರಿಗೆ ಕಲ್ಲು ತೂರುವುದಕ್ಕೆ ಕೂಡ ವಿದೇಶಗಳಿಂದ ಹಣ ಬರುತ್ತಿತ್ತು ಎನ್ನುವುದು ಗುಟ್ಟಾಗಿ ಉಳಿದಿರಲಿಲ್ಲ. ಮೇಲ್ನೋಟಕ್ಕೆ ಪಾಕಿಸ್ತಾನದ ಮೂಲಕ ಹಣ ಹರಿದುಬರುತ್ತಿದೆ, ಪಾಕಿಸ್ತಾನ ಇವರಿಗೆ ತರಬೇತಿ ನೀಡುತ್ತಿದೆ ಎಂದು ಕಂಡರೂ, ಶ್ರೀಮಂತ ದೇಶವಲ್ಲದ ಪಾಕಿಸ್ತಾನ ಬೇರೆ ದೇಶದ ಸಹಾಯವಿಲ್ಲದೆ ಇದನ್ನೆಲ್ಲ ಮಾಡಿಸಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿತ್ತು.

ಒಂದು ಹಂತದಲ್ಲಿ ಪಾಕಿಸ್ತಾನವೂ ಇದೇ ನೆಪದಲ್ಲಿ, ಧರ್ಮದ ಹೆಸರಿನಲ್ಲಿ ಅರಬ್ ರಾಷ್ಟ್ರಗಳಿಂದ ಸಾಕಷ್ಟು ಹಣ ಪಡೆಯುತ್ತಿತ್ತು. ಅರಬ್ ರಾಷ್ಟ್ರಗಳೂ ಅದಕ್ಕೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇನ್ನೂ ನೂರು ವರ್ಷಕ್ಕೆ ಸಾಕಾಗುವಷ್ಟು ತೈಲ ಸಂಪನ್ಮೂಲ ತಮ್ಮ ದೇಶದಲ್ಲಿದೆ ಎಂಬ ಭರವಸೆ ಇರುವಾಗ ಯಾರು ತಲೆ ಕೆಡಿಸಿಕೊಳ್ಳುತ್ತಾರೆ ಹೇಳಿ? ಮುಂದೊಂದು ದಿನ ತೈಲಕ್ಕೆ ಪರ್ಯಾಯ ವ್ಯವಸ್ಥೆ ಬರಬಹುದು, ಅದರಿಂದಾಗಿ ತಮ್ಮ ವ್ಯಾಪಾರಕ್ಕೆ ಹಾನಿಯಾಗಬಹುದು, ಬೇರೆಯ ವರನ್ನು ಉದ್ಧಾರ ಮಾಡಲು ಹೋಗಿ ತಾವು ಸಂಕಷ್ಟಕ್ಕೆ ಸಿಲುಕಬಹುದು ಎಂದು ಆ ಕ್ಷಣದಲ್ಲಿ ಯಾರೂ ಊಹಿಸಿರ ಲಿಕ್ಕಿಲ್ಲ.

ಕಾಲ ಹೇಗೆ ಬದಲಾಯಿತು ಎಂದರೆ, ಇಂದು ಎಲ್ಲ ಅರಬ್ ರಾಷ್ಟ್ರಗಳೂ ಅಭಿವೃದ್ಧಿಯ ಕಡೆ ಮುಖ ಮಾಡಿದವು. ಪೆಟ್ರೋಲ್, ಡೀಸೆಲ್‌ಗಳಿಗೆ ಬದಲಿ
ವ್ಯವಸ್ಥೆ ಬರುತ್ತಿದ್ದಂತೆಯೇ, ಕೊಲ್ಲಿ ರಾಷ್ಟ್ರಗಳೂ ಇತರ ಉತ್ಪನ್ನ, ಬೇರೆ ವ್ಯಾಪಾರದ ಹುಡುಕಾಟಕ್ಕೆ ತೊಡಗಿದವು. ಒಂದು ಸಣ್ಣ ಅಂಕಿ-ಅಂಶ ಹೇಳುವು
ದಾದರೆ, ಮುಂದಿನ ನಾಲ್ಕು ವರ್ಷದಲ್ಲಿ ಅಮೆರಿಕದಲ್ಲಿ ಹೊಸ ಕಾರಿನ ಮಾರಾಟದಲ್ಲಿ ಇಲೆಕ್ಟ್ರಿಕ್ ಕಾರಿನ ಸಂಖ್ಯೆ ಶೇಕಡ ಇಪ್ಪತ್ತರಷ್ಟಾಗಲಿದೆ. ಹಣದ
ಲೆಕ್ಕಾಚಾರದಲ್ಲಿ ಹೇಳುವುದಾದರೆ, ಸುಮಾರು ನೂರ ಐವತ್ತು ಬಿಲಿಯನ್ ಡಾಲರ್. ೨೦೩೦ರ ವೇಳೆಗೆ ಈ ಸಂಖ್ಯೆ ಶೇಕಡ ಮೂವತ್ತರಷ್ಟಾಗಲಿದೆ.

ಭಾರತವೂ ಇಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ತೊಡಗಿದೆ. ಟೊಯೋಟಾ, ವೊಲ್ವೋದಂಥ ಪ್ರತಿಷ್ಠಿತ ಕಾರು ತಯಾರಕ ಸಂಸ್ಥೆಗಳು ಇನ್ನು ಕೆಲವೇ ವರ್ಷದಲ್ಲಿ ಗ್ಯಾಸೊಲಿನ್ ಕಾರು ಉತ್ಪಾದನೆ ನಿಲ್ಲಿಸಿ, ಇಲೆಕ್ಟ್ರಿಕ್ ಕಾರನ್ನು ಮಾತ್ರ ತಯಾರಿಸುವುದಾಗಿ ಘೋಷಿಸಿವೆ. ಅಲ್ಲಿಗೆ, ಕೇವಲ ಪೆಟ್ರೋಲ್, ಡೀಸೆಲ್ ಮಾತ್ರ ನಂಬಿಕೊಂಡು ದೇಶ ನಡೆಸಲು ಸಾಧ್ಯವಿಲ್ಲ ಎಂದು ಅರಿತ ದೇಶಗಳು, ತಾವೂ ಸೋಲಾರ್, ರಿನೆವೇಬಲ್ ಎನರ್ಜಿಯ ಯೋಜನೆಗೆ ಕೈಜೋಡಿ ಸುವುದಾಗಿ ಹೇಳಿವೆ. ಸೌದಿ ಅರೇಬಿಯಾದ ಬಹು ನಿರೀಕ್ಷಿತ ನಿಯೋಮ್ ಶಹರದಲ್ಲಿ ಇಲೆಕ್ಟ್ರಿಕ್ ಕಾರುಗಳ ಸಂಶೋಧನೆ ಮತ್ತು ಉತ್ಪಾದನೆ ಘಟಕ ತಲೆಯೆತ್ತಿ ನಿಲ್ಲುತ್ತಿದೆ ಎಂದರೆ ನೀವು ನಂಬಲೇಬೇಕು!

ನಿಮಗೆ ತಿಳಿದಿರಲಿ, ಸೌದಿ ಅರೇಬಿಯಾದಲ್ಲಿ ಮೊಹಮ್ಮದ್ ಬಿನ್ ಸಲ್ಮಾನ್ ಬಂದ ನಂತರ ಪೆಟ್ರೋಲಿಯಮ್ ಉತ್ಪನ್ನಗಳ ಹೊರತಾಗಿ ನಡೆಯುವ ಉದ್ಯಮ ಮೂರು ಪಟ್ಟು ಹೆಚ್ಚಿನ ಲಾಭ ಗಳಿಸುತ್ತಿದೆ! ತೈಲ ಉತ್ಪನ್ನವೊಂದನ್ನೇ ನಂಬಿಕೊಂಡು ಬದುಕಲು ಸಾಧ್ಯವಿಲ್ಲ ಎಂದು ಅರಿತ ದೇಶಗಳು
ವಿದೇಶಗಳಲ್ಲಿ ವ್ಯಾಪಾರಕ್ಕೆ ಹಣ ಹೂಡಲು ಮುಂದಾದವು. ಬಹುತೇಕ ಅರಬ್ ದೇಶಗಳು ತಮ್ಮ ಧರ್ಮ, ಆಚರಣೆಗಳನ್ನೆಲ್ಲ ತಮ್ಮ ದೇಶದ ಒಳಗಿಟ್ಟು
ಕೊಂಡು, ದೇಶದ ಬಾಗಿಲನ್ನು ತೆರೆದು ವಿಶ್ವವನ್ನು ಸ್ವಾಗತಿಸಲು ಮುಂದಾದವು. ಅಲ್ಲಿಗೆ ಧರ್ಮ ಪ್ರಚಾರಕ್ಕೆ, ಭಯೋತ್ಪಾದನೆಗೆ ಹಣ ಪೋಲಾಗು
ವುದು ಬಹುತೇಕ ನಿಂತುಹೋಯಿತು.

ಅದೇ ಸಮಯಕ್ಕೆ ಕೊಲ್ಲಿ ರಾಷ್ಟ್ರಗಳ ಮಗ್ಗುಲಲ್ಲೇ ಒಂದು ಮುಳ್ಳು ಹುಟ್ಟಿಕೊಂಡಿತು. ಸೌದಿ ಅರೇಬಿಯಾದ ಪಕ್ಕದ ಯೆಮೆನ್‌ನಲ್ಲಿ ಹೌತಿಯಂಥ
ಆತಂಕಿ ಸಂಘಟನೆಗಳು ತಲೆ ಎತ್ತಿದವು. ಅವರನ್ನು ನಿಯಂತ್ರಣಕ್ಕೆ ತರಲು ಸೌದಿ ಅರೇಬಿಯಾ ನೇತೃತ್ವದಲ್ಲಿ ಒಂಬತ್ತು ದೇಶಗಳು ಒಟ್ಟಾಗಿ ನಿರಂತರ
ಒಂಬತ್ತು ವರ್ಷ ಯುದ್ಧ ಮಾಡಬೇಕಾಯಿತು. ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡುತ್ತಿದೆ ಎಂಬ ಒಂದೇ ಕಾರಣಕ್ಕೆ ಸೌದಿ, ಬಹ್ರೈನ್,
ಯುಎಇಯಂಥ ದೇಶಗಳು, ತಮ್ಮ ಪಕ್ಕದಲ್ಲೇ ಇರುವ ಕತಾರ್‌ನೊಂದಿಗೆ ಕೆಲವು ವರ್ಷಗಳ ಕಾಲ ಸಂಬಂಧವನ್ನೇ ಕಡಿದುಕೊಂಡವು.

ಅರಬ್ ರಾಷ್ಟ್ರಗಳ ಹೊಸ ತಲೆಮಾರುಗಳಾದ, ಅಬುಧಾಬಿಯ ರಾಜರುಗಳಾಗಿದ್ದ ಶೇಖ್ ಝಾಯೆದ್ ಬಿನ್ ಸುಲ್ತಾನ್, ಶೇಖ್ ಖಲೀಫ್ ಬಿನ್ ಝಾಯೆದ್, ಈಗಿನ ದೊರೆ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್, ದುಬೈ ಆಳುವ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್, ಸೌದಿ ಅರೇಬಿಯಾದ ಮೊಹಮ್ಮದ್ ಬಿನ್ ಸಲ್ಮಾನ್, ಇವರೆಲ್ಲ ಜಗತ್ತನ್ನು ವಿಶಾಲ ದೃಷ್ಟಿಕೋನದಿಂದ ಕಂಡವರು. ಪಾಶ್ಚಿಮಾತ್ಯ ದೇಶಗಳಂತೆ ಅಥವಾ ಅದಕ್ಕಿಂತಲೂ ಹೆಚ್ಚು ತಮ್ಮ ದೇಶ ಅಭಿವೃದ್ಧಿ ಹೊಂದಬೇಕು ಎಂದು ಕನಸು ಕಂಡದ್ದಷ್ಟೇ ಅಲ್ಲ, ಆ ನಿಟ್ಟಿನಲ್ಲಿ ಶ್ರಮಿಸಿದವರು, ಶ್ರಮಿಸುತ್ತಿರುವವರು.

ಇವರೆಲ್ಲ ಪ್ರಪಂಚ ತಮ್ಮ ದೇಶವನ್ನು ಬೇರೆಯದೇ ದೃಷ್ಟಿಕೋನದಿಂದ ನೋಡುವಂತಾಗಬೇಕು, ವಿಶ್ವದ ಇತರ ರಾಷ್ಟ್ರಗಳ ಜತೆಗೆ ತಾವೂ ಹೆಜ್ಜೆ ಹಾಕುವಂತಾಗಬೇಕು ಎಂದು ಕನಸು ಕಂಡರು. ಈ ಬೆಳವಣಿಗೆಯಿಂದಾಗಿ, ಕೊಲ್ಲಿ ರಾಷ್ಟ್ರಗಳು ಪಾಕಿಸ್ತಾನದಿಂದ ದೂರವಾಗಿ ಭಾರತಕ್ಕೆ ಹತ್ತಿರವಾಗ
ತೊಡಗಿದವು. ಪರಿಣಾಮವಾಗಿ, ಭಾರತ ಯಾವತ್ತೂ ತಮ್ಮನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎನ್ನುವ ಸತ್ಯದ ಅರಿವು ಬಹುತೇಕ ಕೊಲ್ಲಿ ರಾಷ್ಟ್ರಗಳಿಗೆ ಅರ್ಥ ವಾಗತೊಡಗಿತ್ತು. ಅದಕ್ಕೆ ತಕ್ಕಂತೆ ಕಳೆದ ಒಂದು ದಶಕದಲ್ಲಿ ಜಾಗತಿಕವಾಗಿ ಭಾರತದ ನಿಲುವು, ಮುಸ್ಲಿಂ ರಾಷ್ಟ್ರಗಳೊಂದಿಗಿನ ಇಂದಿನ ಸರಕಾರದ ನಡೆ, ಇತ್ಯಾದಿಗಳು ಹೊಸ ಬಾಂಧವ್ಯಕ್ಕೆ ಬುನಾದಿ ಯಾದವು. ಸೌದಿ ಅರೇಬಿಯಾದಲ್ಲಿ ಯೋಗ ಶಿಕ್ಷಣ, ಅಲ್ಲಿಯ ಶಾಲೆಗಳಲ್ಲಿ ರಾಮಾಯಣ-ಮಹಾ ಭಾರತವನ್ನು ಓದಿಸುವ ವಿಚಾರ, ಯುಎಇಯ ಅಬುಧಾಬಿಯಲ್ಲಿ ಸ್ವಾಮಿನಾರಾಯಣ ಮಂದಿರದ ನಿರ್ಮಾಣ, ಕತಾರ್‌ನಲ್ಲಿ ಮರಣದಂಡನೆಗೆ
ಒಳಗಾದ ಎಂಟು ಭಾರತೀಯ ನೌಕಾಸೇನೆಯ ಪೂರ್ವ ಅಧಿಕಾರಿಗಳಿಗೆ ಜೀವದಾನ, ಎಲ್ಲವೂ ಈ ಬಾಂಧವ್ಯದ ಫಲಶೃತಿಯೇ ಹೊರತು ಇನ್ನೇನೂ
ಅಲ್ಲ.

ಇವೆಲ್ಲ ಒಂದು ಕಡೆಯಾದರೆ, ಇನ್ನೊಂದೆಡೆ ಕೊಲ್ಲಿ ರಾಷ್ಟ್ರಗಳು ಕಾಶ್ಮೀರದಲ್ಲಿ ಹಣ ಹೂಡಲು ಮುಂದಾಗಿವೆ. ಭಾರತದ ಇತರ ಭಾಗಗಳಲ್ಲಿ
ಈಗಾಗಲೇ ಸಾಕಷ್ಟು ಹಣ ಹೂಡಿರುವ ಕೊಲ್ಲಿಯ ಕಂಪನಿಗಳು ಕಾಶ್ಮೀರದಲ್ಲಿ ಹಣ ಹೂಡಲು ಮುಂದಾದದ್ದು ವಿಶೇಷವೇ. ಅಲ್ ತಯ್ಯಾರ್ ಗ್ರೂಪ್,
ಎಮಿರೇಟ್ಸ್ ರಾಯಲ್ ಇಂಟರ್‌ನ್ಯಾಷನಲ್ ಗ್ರೂಪ್, ಅಲ್ ಹಶೇಮಿ ಗ್ರೂಪ್‌ನ ಜತೆಗೆ, ವಿಶ್ವದ ಅತಿ ಅತ್ತರದ ಕಟ್ಟಡ ನಿರ್ಮಿಸಿದ ಎಮಾರ್ ಗ್ರೂಪ್
ಸೇರಿದಂತೆ ಒಟ್ಟು ಮೂವತ್ತಕ್ಕೂ ಹೆಚ್ಚು ಕೊಲ್ಲಿಯ ಕಂಪನಿಗಳು ಕಾಶ್ಮೀರದಲ್ಲೇ ಹಣ ಹೂಡಲು ಮುಂದಾಗಿವೆ. ಕಳೆದ ವರ್ಷ ಭಾರತ ಮತ್ತು ಯುಎಇ ನಡುವೆ ಪರಸ್ಪರ ಎಂಬತ್ತೈದು ಬಿಲಿಯನ್ ಡಾಲರ್‌ನಷ್ಟು ವಹಿವಾಟು ನಡೆದಿದೆ.

ಇದು ಯುಎಇ ಮತ್ತು ಭಾರತದ ನಡುವೆ ಒಂದು ವರ್ಷದಲ್ಲಿ ನಡೆದ ವ್ಯಾಪಾರದ ಗರಿಷ್ಠ ಮೊತ್ತ. ಅದರೊಂದಿಗೆ, ಭಾರತ ಮತ್ತು ಯುಎಇ ನಡುವೆ
ಸಮುದ್ರದ ಅಡಿಯಲ್ಲಿ ರೈಲು ಸಂಚಾರದ ಯೋಜನೆ ನಡೆದಿದ್ದು, ಆ ಯೋಜನೆಯ ಮೊತ್ತ ಬರೋಬ್ಬರಿ ಒಂದು ಟ್ರಿಲಿಯನ್ ಡಾಲರ್ ಎಂದು ಅಂದಾ ಜಿಸಲಾಗಿದೆ. ಅದಲ್ಲದೆ, ಒಮಾನ್ ದೇಶದ ಕೆಲವು ಕಂಪನಿಗಳು ಸ್ಟೇಟ್ ಬ್ಯಾಂಕ್ ಮೂಲಕ ಭಾರತದಲ್ಲಿ ಎರಡೂವರೆ ಸಾವಿರ ಕೋಟಿ ರೂಪಾಯಿ ಹಣ ಹೂಡಲು ಮುಂದಾಗಿವೆ. ಭಾರತದ ಎಲ್ ಆಂಡ್ ಟಿ, ಇನೋಸಿಸ್, ಟಾಟಾ, ವಿಪ್ರೊ, ಶೋಭಾ ಮೊದಲಾದ ಕಂಪನಿಗಳು ಇಂದು ಅರಬ್ ರಾಷ್ಟ್ರದಲ್ಲಿ ಬೇರುಬಿಟ್ಟುಕೊಂಡಿವೆ.

ಕಳೆದ ಒಂದೂವರೆ ವರ್ಷದಲ್ಲಿ ಭಾರತದ ಐದು ನೂರಕ್ಕೂ ಹೆಚ್ಚು ಕಂಪನಿಗಳು ಕೊಲ್ಲಿ ರಾಷ್ಟ್ರಗಳಲ್ಲಷ್ಟೇ ಅಲ್ಲ, ಆಫ್ರಿಕಾದ ಮುಸ್ಲಿಂ ರಾಷ್ಟ್ರಗಳಾದ ಸುಡಾನ್, ಈಜಿಪ್ಟ್‌ಗಳಲ್ಲೂ ನೋಂದಣಿ ಮಾಡಿಕೊಂಡಿದ್ದಲ್ಲದೆ, ಮುನ್ನೂರು ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಹಣ ಹೂಡಿವೆ. ಸ್ನೇಹ ಯಾವತ್ತೂ ಏಕಮುಖ ವಾಗಿರಲು ಸಾಧ್ಯವಿಲ್ಲ, ಅಲ್ಲವೇ? ಇದಕ್ಕೆ ಭಾರತದ ಇತ್ತೀಚಿನ ರಾಜತಾಂತ್ರಿಕ ನಡೆಯೂ ಕಾರಣ ಎನ್ನುವುದರಲ್ಲಿ ಅನುಮಾನ ವಿಲ್ಲ. ಒಂದು ಕಡೆ ಭಾರತದೊಂದಿಗಿನ ಎಲ್ಲ ಮನಸ್ತಾಪ ಗಳು, ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ಅರಬ್ ದೇಶಗಳು ಹತ್ತಿರವಾಗುತ್ತಿದ್ದರೆ, ಇನ್ನೊಂದು ಕಡೆ ಅದೇ ದೇಶಗಳು ಪಾಕಿಸ್ತಾನದಿಂದ ದೂರ ಸರಿಯುತ್ತಿವೆ. ಯಾವತ್ತೂ ಹಾಗೆಯೇ, ಒಂದೇ ತೆರನಾದ ಸಂಸ್ಕೃತಿಯವರ ನಡುವೆ ಇರುವ ಸ್ನೇಹಕ್ಕಿಂತ ಬೇರೆ ಬೇರೆ ಸಂಸ್ಕೃತಿಯುಳ್ಳವರ ನಡುವೆ ಇರುವ ಸ್ನೇಹ ಅಪರೂಪದ್ದಾಗಿರುತ್ತದೆ! ಒಪ್ಪಿಕೊಳ್ಳುವ, ಬದಲಾಗುವ ಮನೋಭಾವ ಇರಬೇಕು ಅಷ್ಟೇ.