Friday, 13th December 2024

ರಾಷ್ಟ್ರ ರಕ್ಷಣೆಗೆ ತಂತ್ರ ರೂಪಿಸುವ ರಾಜತಾಂತ್ರಿಕ ನಿಪುಣ ದೊವಲ್

ಅಭಿವ್ಯಕ್ತಿ

ಡಾ.ಜಗದೀಶ್‌ ಮಾನೆ

ಇವರ ಹೆಸರು ಕೇಳುತ್ತಿದ್ದಂತೆ ಶತ್ರು ದೇಶಗಳ ಎದೆಯಲ್ಲಿ ನಡುಕ ಹುಟ್ಟುತ್ತದೆ. ರಾಷ್ಟ್ರದ್ರೋಹಿಗಳೆಲ್ಲರೂ ಪತರಗುಟ್ಟುತ್ತಾರೆ. ಇವರ ಜಾಣ್ಮೆ, ಚಾಣಾಕ್ಷತೆ, ಶತ್ರುಗಳ ಕುತಂತ್ರಕ್ಕೆ ಪ್ರತಿ ತಂತ್ರ ರೂಪಿಸಬಲ್ಲ ಅವರ ತಂತ್ರಗಾರಿಕೆ, ರಾಜತಾಂತ್ರಿಕತೆಯ ನಿಪುಣತೆ ಮತ್ತು ವಿದ್ರೋಹಕ ದುಷ್ಟ ಶಕ್ತಿಗಳನ್ನ ಹೆಡೆಮುರಿ ಕಟ್ಟಬಲ್ಲ ಅವರ ಚಾಣಕ್ಯ ನೀತಿಯು ಯಾವೊಬ್ಬ ಭಾರತಿಯನಿಗೆ ಇಷ್ಟ ಆಗದೇ ಇರಲು ಸಾಧ್ಯವೇ, ನೀವೆ ಹೇಳಿ? ಪಾಕಿಸ್ತಾನ, ಚೀನಾದಂಥ ಶತ್ರು ರಾಷ್ಟ್ರಗಳ ಕುತಂತ್ರ ಯೋಜನೆಗಳನ್ನೆಲ್ಲ ತಲೆಕೆಳಗೆ ಮಾಡಿ, ಅವರ ಹುಟ್ಟಡಗಿಸಿದ ಈ ವ್ಯಕ್ತಿಯೇ ರಾಷ್ಟ್ರೀಯ ಭದ್ರತೆಯ ಸಲಹೆಗಾರ ಅಜಿತ್ ದೋವಲ್.

ನಮಗೆ ಚೀನಾದ ಬೆಂಬಲವಿದೆ, ನಾವು ಶಕ್ತಿಶಾಲಿಯಾಗಿದ್ದೇವೆ, ಭಾರತದ ವಿರುದ್ಧ ಸೆಣಸಾಡಿ ಕಾಶ್ಮೀರವನ್ನು ಪಡೆದೇ ತೀರುತ್ತೇ ವೆಂದು ಹಗಲುಗನಸು ಕಂಡ, ಈಗಲೂ ಕಾಣುತ್ತಿರುವ ಪಾಕಿಸ್ತಾನವನ್ನು ಬುಡಸಮೇತ ನೆಲಸಮ ಮಾಡಿದವರು ಅಜಿತ್
ದೊವಲ. ಈಗ ನೆರೆಯ ರಾಷ್ಟ್ರಗಳಿಗೆ ಮಾತ್ರವಲ್ಲ ಅಮೆರಿಕಕ್ಕೂ ಭಾರತವನ್ನು ಎದುರು ಹಾಕಿಕೊಳ್ಳುವುದೆಂದರೆ ಬಗಲಿಗೆ ಕೆಂಡ
ಕಟ್ಟಿಕೊಂಡಂತೆ ಎಂಬುದು ಅರಿವಾಗಿದೆ.

ಇತ್ತೀಚೆಗೆ ಚೀನಾ ಮತ್ತು ಪಾಕಿಸ್ತಾನಕ್ಕೆ ಬಹಳ ಚೆನ್ನಾಗಿ ಅರ್ಥ ಆಗಿದೆ. ಈ ಹಿಂದೆ ಇದೇ ಪಾಕಿಸ್ತಾನದಲ್ಲಿ ಆರೇಳು ವರ್ಷಗಳ ಕಾಲ
ನಿಗೂಢವಾಗಿದ್ದುಕೊಂಡು ಗೂಢಚಾರಿಕೆ ನಡೆಸಿ, ಅಲ್ಲಿನ ಮಾಹಿತಿಗಳನ್ನು ಕಲೆ ಹಾಕಿದ್ದ ದೊವಲ್ ರವರು ಕೂದಲೆಳೆ ಅಂತರ ದಲ್ಲಿ ಬಂಧನದಿಂದ ಬಚಾವ್ ಆಗಿ ಬಂದಿದ್ದರು.

ಉತ್ತರ ಪ್ರದೇಶದವರಾದ ಅಜಿತ್ ದೊವಲ, ಆಗ್ರಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರವಿಭಾಗದಲ್ಲಿ ಚಿನ್ನದ ಪದಕ ಪಡೆದು ಕೊಂಡವರು. ಐಪಿಎಸ್ ಪರೀಕ್ಷೆ ಪಾಸಾದ ನಂತರ “Intelligence Bureau Special officer’ ಆಗಿ ನಿಯುಕ್ತಿಗೊಂಡು ಸಮಸ್ಸಿತ ಸ್ಥಳಗಳಾದ ಕಾಶ್ಮೀರ, ಪಂಜಾಬ್ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಕೆಲಸ ಮಾಡಿದ್ದರು. ವಿಶೇಷವಾಗಿ ಸಿಕ್ಕಿಂ ರಾಜ್ಯದ ಪುನರ್ ರಚನೆಯಲ್ಲಿ ಹಾಗೂ ಮಿಜೋರಾಂನಲ್ಲಿ ಪೂರ್ಣಪ್ರಮಾಣದ ಅರಾಜಕತೆಯನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದವರು ದೊವಲ.

ಪೊಲೀಸ್ ಇಲಾಖೆಯಲ್ಲಿ ಅಧಿಕಾರ ಗಿಟ್ಟಿಸಿಕೊಂಡ ಕೇವಲ ಆರೇ ವರ್ಷಗಳಲ್ಲಿ ಪೊಲೀಸ್ ಮೆಡಲ್ ಮತ್ತು ಕೀರ್ತಿ ಚಕ್ರವನ್ನು
ಎದೆಗೇರಿಸಿಕೊಂಡ ಸಾಹಸಿ. ದೊವಲ್ ಸಾಕಷ್ಟು ಕಾರ್ಯಗಳನ್ನು ಮಾಡಿ 2005ರಲ್ಲಿ ನಿವೃತ್ತರಾದರು. ತದನಂತರ 2009ರಲ್ಲಿ ಸ್ವಾಮಿ ವಿವೇಕಾನಂದ ಫೌಂಡೇಶನ್ ಸ್ಥಾಪಿಸಿ ಇಡೀ ದೇಶಾದ್ಯಂತ ಭಾರತದ ಸುರಕ್ಷತೆಯ ಕುರಿತು ವಿಶೇಷ ಕಾರ್ಯಗಳನ್ನು ಮಾಡುತ್ತಿದ್ದರು. ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆದ ಕೂಡಲೇ ದೊವಲ್‌ರ ವಿಶೇಷ ಸಾಮರ್ಥ್ಯವನ್ನು ಗುರುತಿಸಿ 2014ರಲ್ಲಿ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಕ ಮಾಡಿದರು. ನರೇಂದ್ರ ಮೋದಿಯವರು ವಿದೇಶಗಳಿಗೆ ಹೋಗುವಂಥ ಸಂದರ್ಭಗಳಲ್ಲಿ ಅಲ್ಲಿನ ವ್ಯವಸ್ಥೆಗಳನ್ನು ಗಮನಿಸುವುದು, ಬೇಕಾದ ಎಲ್ಲಾ ತಯಾರಿಗಳನ್ನು ಮಾಡುವವರು ಇದೇ ಅಜಿತ್ ದೊವಲ್ ಎಂಬುದು ನಿಮಗೆ ಗೊತ್ತೇ?.

ಪ್ರಮುಖ ಕಾರ್ಯಾಚರಣೆಗಳು:

ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಖಲಿಸ್ಥಾನದ ಉಗ್ರವಾದಿಗಳು ಅವಿತುಕೊಂಡಿದ್ದರು. ಆ ಸಂದರ್ಭದಲ್ಲಿ ನಮ್ಮ ಸೇನೆ ಒಳಗಡೆ ಎಷ್ಟು ಜನ ಉಗ್ರರಿದ್ದಾರೆ ಮತ್ತು ಅವರ ಬಳಿ ಯಾವೆಲ್ಲ ಶಸ್ತ್ರಾಸ್ತ್ರಗಳು ಇವೆ ಎಂಬುದನ್ನು ತಿಳಿದುಕೊಳ್ಳಲು ವಿಫಲ ವಾಗಿತ್ತು. ಆಗ ಅಜಿತ್ ದೊವಲ್ ರಿಕ್ಷಾವಾಲಾನ ವೇಷದಲ್ಲಿ ಒಳನುಗ್ಗಿ ತಾನೂ ಐಎಸ್‌ಐ ಏಜೆಂಟ್ ಎಂದು ಪರಿಚಯಿಸಿಕೊಂಡು, ಅವರ ವಿಶ್ವಾಸಗಳಿಸಿ ಹೊರ ಬಂದ ದೊವಲ್ ಒಳಗಿರುವ ಇನ್ನೂರಕ್ಕೂ ಹೆಚ್ಚು ಉಗ್ರರು ಮತ್ತು ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳ ಸ್ಫೋಟಕದ ವಿಚಾರಗಳನ್ನೆಲ್ಲ ಸೈನಿಕರಿಗೆ ನೀಡಿದ್ದರು. ಅಲ್ಲದೆ ಒಳಗೆ ಅವಿತು ಕುಳಿತಿದ್ದ ಉಗ್ರರನ್ನು ಹೊರತರಲು, ಒಳಗಿನ ಕರೆಂಟ್ ಕಟ್ ಮತ್ತು ನೀರು ಬಂದ್ ಮಾಡುವ ಸಲಹೆ ಕೊಟ್ಟರು. ಇದಾದ ಏಳೆಂಟು ದಿನಗಳ ಬಳಿಕ ಆ ಎಲ್ಲಾ ಉಗ್ರರು ಸೇನೆಗೆ ಶರಣಾಗತರಾಗಿದ್ದರು.

ಒಮ್ಮೆ ದೊವಲ್‌ರವರು ಯುಎಸ್‌ಎಗೆ ಹೋಗಿದ್ದ ಸಂದರ್ಭದಲ್ಲಿ ಅಂದಿನ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಜೇಮ್ಸ್ ಮ್ಯಾಟೀಸ್ ವಿಶೇಷ ಅಧಿಕಾರಿಗಳಾದ ಜಾನ್ ಕೆಲ್ಲಿ, ಮ್ಯಾಕ್ ಮಾಸ್ಟರ್ ಅವರನ್ನು ಭೇಟಿ ಮಾಡಿ “Real time
intelligence Transfer’  ಎನ್ನುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರ ಅನ್ವಯ ಅವರಿಗೆ ಬಂದಂಥ Intelligence input ಗಳನ್ನು
ಆ ಕ್ಷಣಕ್ಕೆ ಭಾರತದೊಂದಿಗೆ ಹಂಚಿಕೊಳ್ಳುವುದು. ಪರಿಣಾಮವಾಗಿ ಜಗತ್ತಿನ ಯಾವ ಮೂಲೆಗಳಲ್ಲಿ ಏನಾಗುತ್ತದೆ ಅನ್ನುವ ವಿಚಾರಗಳನ್ನು ಭಾರತದಲ್ಲಿ ಕುಳಿತುಕೊಂಡು ತಿಳಿದುಕೊಳ್ಳಬಲ್ಲಂಥ ಸಾಮರ್ಥ್ಯವನ್ನು ಭಾರತದ Intelligence ಅಧಿಕಾರಿಗಳು
ಪಡೆದುಕೊಂಡರು.

ಹಾಗಾಗಿ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮುಂಬೈನಂಥ ದಾಳಿಗಳು ನಡೆಯಲು ಸಾಧ್ಯವಾಗಿಲ್ಲ. ಭಾರತದ ಯಾವುದೇ ಏರೋಪ್ಲೇನ್‌ಗಳು ಹೈಜಾಕ್ ಆದರೆ ಮೊದಲಿಗೆ ಕರೆ ಹೋಗುವುದು ದೊವಲ್‌ರಿಗೆ, 1971 ರಿಂದ 2005ರ ಅವಧಿಯಲ್ಲಿ 17 ಏರೋಪ್ಲೇನ್ ಹೈಜಾಕ್‌ಗಳನ್ನು ಹ್ಯಾಂಡಲ್ ಮಾಡಿದ್ದರು.  IC814 ಅನ್ನುವ ಭಾರತದ ವಿಮಾನ ನೇಪಾಳದಿಂದ ದೆಹಲಿಗೆ ಬರುವ ಸಂದರ್ಭದಲ್ಲಿ ಅದನ್ನು ಹೈಜಾಕ್ ಮಾಡಿದ್ದ ಉಗ್ರರು ಅಫಘಾನಿಸ್ತಾನದ ಕಂದನ್ ಪ್ರದೇಶಕ್ಕೆ ರವಾನಿಸಿದ್ದರು.

ಅದನ್ನು ಅತ್ಯಂತ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಿದ ಅಜಿತ್ ದೊವಲ್ 107 ಜನರನ್ನು ರಕ್ಷಣೆ ಮಾಡಿದ್ದರು. ಕಳೆದ ಹಲವಾರು ವರ್ಷಗಳ ಹಿಂದೆ ಐಸಿಸ್ ಉಗ್ರರ ಕಾರ್ಯಚಟುವಟಿಕೆಗಳ ಸ್ಲಿಪರ್‌ಸೆಲ್‌ಗಳಾಗಿದ್ದ ಹತ್ತಾರು ಜನರನ್ನು ದೊವಲ್‌ರ ಚಾಣಾಕ್ಷತನ ದಿಂದ ಭಾರತದಲ್ಲಿ ಬಂಧಿಸಲಾಗಿತ್ತು. ನರೇಂದ್ರ ಮೋದಿ ಅವರು ಪ್ರಧಾನಿ ಆದ ಬೆನ್ನಲ್ಲೇ ಇರಾಕ್‌ನಲ್ಲಿ ಅತ್ಯಂತ ಭಯಾನಕ ಘಟನೆಯೊಂದು ನಡೆದಿತ್ತು.

ಐಸಿಸ್ ಉಗ್ರರು ಇರಾಕ್‌ನಲ್ಲಿನ ತಿಕ್ರಿತ್ ಮತ್ತು ಮಸುಲ್ ಎನ್ನುವ ಎರಡು ನಗರಗಳನ್ನು ವಶಪಡಿಸಿ ಕೊಂಡಿದ್ದರು. ಅಲ್ಲಿನ ಆಸ್ಪತ್ರೆಯೊಂದರಲ್ಲಿದ್ದ 46 ಜನ ಭಾರತೀಯ ನರ್ಸ್‌ಗಳು ತಮಗರಿವಿಲ್ಲದಂತೆಯೇ ಉಗ್ರರ ವಶವಾಗಿದ್ದರು. ಆ ಸುದ್ದಿ ಜಗತ್ ಜಾಹೀರಾಗುತ್ತಿದ್ದ ಬೆನ್ನ ಭಾರತದಲ್ಲಿನ ಬುದ್ಧಿಜೀವಿಗಳು ಮೋದಿ ಅವರನ್ನು ಬಿಡಿಸುವ ಪ್ರಯತ್ನ ಮಾಡುತ್ತಿಲ್ಲ ಎಂಬುದಾಗಿ ಪ್ರಧಾನಿ ವಿರುದ್ಧ ವಿಷ ಕಾರಲು ಪ್ರಾರಂಭಿಸಿದ್ದರು.

ವಾಸ್ತವದಲ್ಲಿ ಆ ಉಗ್ರರಿಂದ ಅವರನ್ನು ಬಿಡಿಸುವುದು ಕೂಡಾ ಸುಲಭದ ಮಾತಾಗಿರಲಿಲ್ಲ. ಆದರೆ ಅಜಿತ್ ದೊವಲ್‌ರ ಮಾಸ್ಟರ್ ಸ್ಟ್ರೋಕ್ ಹೇಗಿತ್ತೆಂದರೆ, ಆ ತಕ್ಷಣವೇ ದೊವಲ್ ಇರಾಕ್‌ಗೆ ತೆರಳಿ ಅಲ್ಲಿ ಏನು ಮಾತುಕತೆಗಳನ್ನಾಡಿದ್ದರೋ ದೇವರೆ ಬಲ್ಲ, ಅದು ಇದುವರೆಗೂ ಬಹಿರಂಗಗೊಳ್ಳಲಿಲ್ಲ. ಆದರೆ 23 ದಿನಗಳಲ್ಲಿ ಉಗ್ರರಿಂದ ಬಂಧನಕ್ಕೊಳಗಾಗಿದ್ದ ಆ 46 ಜನ ನರ್ಸ್‌ಗಳನ್ನು ಬಿಡುಗಡೆಗೊಳಿಸಿದ ಬೆನ್ನ ಇಡೀ ಭಾರತ ಸಂಭ್ರಮದ ಮನೆಯಾಗಿತ್ತು.

ಹಿಂದಿನ ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸೆ ಚೀನಾಕ್ಕೆ ಸಪೋರ್ಟ್ ಮಾಡುತ್ತಿದ್ದ, ಚೀನಾದ ಯುದ್ಧ ನೌಕೆಗಳು ಶ್ರೀಲಂಕಾದ ಪೋರ್ಟ್ ಗಳಲ್ಲಿ ನಿಲ್ಲುತ್ತಿದ್ದವು. ಇದನ್ನು ವಿರೋಧಿಸಿದ ಭಾರತ ಶ್ರೀಲಂಕಾಗೆ ವಾರ್ನ್ ಮಾಡಿತ್ತಾದರೂ ಭಾರತದ ಮಾತಿಗೆ ಲಂಕಾ ಕವಡೆ ಕಾಸಿನ ಕಿಮ್ಮತ್ತನ್ನು ಕೊಟ್ಟಿರಲಿಲ್ಲ. ಆಗ ಲಂಕಾಗೆ ಹೋಗಿದ್ದ ದೋವಲ್, ರಾಜಪಕ್ಸೆಯನ್ನು ಮಾತನಾಡಿಸುವ ನೆಪದಲ್ಲಿ ಅಲ್ಲಿನ ವಿರೋಧ ಪಕ್ಷದ ನಾಯಕರುಗಳಾಗಿದ್ದ ವಿಕ್ರಮ್ ಸಿಂಗೆ, ಸಿರಿಸಿಂಗೆ ಹಾಗೂ ಚಂದ್ರಿಕಾ ಕುಮಾರ ತುಂಗೆ ಅವರನ್ನ ಮಾತನಾಡಿಸಿ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗಟ್ಟು ಗೊಳಿಸಿದರು. ಅಲ್ಲದೆ ಆಗ ಅಲ್ಲಿನ ಚುನಾವಣೆಗಳನ್ನು ಬೈಕಟ್ ಮಾಡಲು ನಿರ್ಧರಿಸಿದ್ದ ತಮಿಳು ಪಾರ್ಟಿಯನ್ನು ಕೂಡಾ ಜತೆಗೆ ಸೇರಿಸಿದ್ದರ ಪರಿಣಾಮವಾಗಿ ನಂತರ ನಡೆದ ಚುನಾವಣೆಯಲ್ಲಿ ರಾಜಪಕ್ಸೆ ಸೋತು ಹೋದರು.

ದೊವಲ್‌ರ ಚಾಣಾಕ್ಷತೆ ಹೇಗಿತ್ತೆಂದರೆ ಚೀನಾದ ವಿಚಾರದಲ್ಲಿ ಬದಲಾಗದ ರಾಜಪಕ್ಸೆಯನ್ನೇ ಚುನಾವಣೆಯಲ್ಲಿ ಬದಲಾಯಿಸಿ
ಬಿಟ್ಟರು. ಪರಿಣಾಮ ಇವತ್ತು ಶ್ರೀಲಂಕಾ ಭಾರತದ ಪರ ಇದೆ.

ಪಾಕ್ ಮತ್ತು ಚೀನಾಕ್ಕೆ ಭಾರತ ನೀಡಿದ ಮಾಸ್ಟರ್ ಸ್ಟ್ರೋಕ್: ಜಮ್ಮು ಕಾಶ್ಮೀರ ವಿಚಾರದಲ್ಲಿ ಆ ಕಡೆ ಪಾಕಿಸ್ತಾನ, ಈ ಕಡೆ ನೀಚ ಚೀನಾ ಇವೆರಡೂ ದೇಶಗಳಿಗೂ ಗಡಿ ಹಂಚಿಕೊಂಡಿರುವ ಜಮ್ಮು ಕಾಶ್ಮೀರವನ್ನು ಹೇಗಾದರೂ ಮಾಡಿ ತಮ್ಮ ಕೈವಶ
ಮಾಡಿಕೊಳ್ಳಬೇಕೆಂದು ಜಿದ್ದಿಗೆ ಬಿದ್ದಿರುವ ಈ ಎರಡೂ ರಾಷ್ಟ್ರಗಳು ಪ್ರತಿದಿನ ಯಾವುದಾದರೊಂದು ಗಲಾಟೆಗಳಿಗೆ ಜನ್ಮನೀಡುತ್ತಲೇ ಇರುತ್ತಿದ್ದವು. ಆದರೀಗ ಈ ಎರಡು ರಾಷ್ಟ್ರಗಳಿಗೆ ಭಾರತ ಬಹುದೊಡ್ಡ ಹೊಡೆತ ಕೊಟ್ಟಿದೆ. ಅಜಿತ್ ದೊವಲ್ ಕಣಿವೆ ನಾಡಿನಲ್ಲಿ ಶತ್ರುಗಳು ‘ಕೈ ಕಟ್ ಬಾಯ್ ಮುಚ್’ ಅನ್ನುವ ಹಾಗೆ ಮಹತ್ವದ ತಂತ್ರವೊಂದನ್ನು ರೂಪಿಸಿದ್ದಾರೆ.

ಕಳೆದ ವರ್ಷದಲ್ಲಿ ಭಾರತ ಕೇವಲ ಚೀನಾ ವೈರಸ್ ಜತೆಗೆ ಹೋರಾಟ ಮಾಡುವುದಷ್ಟೇ ಅಲ್ಲದೆ ಸಾಕ್ಷಾತ್ ಚೀನಾ ವಿರುದ್ಧವೂ
ಹೋರಾಡುವ ಪರಿಸ್ಥಿತಿ ಎದುರಾಗಿತ್ತು. ಚೀನಾ ತನ್ನ ಅಸುರಾವತಾರದ ದೈತ್ಯ ಪ್ರದರ್ಶನ ಮಾಡುತ್ತಲೇ ಇತ್ತು. ಒಂದೊಮ್ಮೆ ಸೈಲೆಂಟ್ ಆದಂತೆ ನಾಟಕ ಮಾಡುತ್ತಿದ್ದ ಚೀನಾ ತೆಪ್ಪಗೇನೂ ಕುಳಿತಿರಲಿಲ್ಲ, ಸದ್ದಿಲ್ಲದೆ ಸೇಡು ತೀರಿಸಿಕೊಳ್ಳಲು ಪ್ರಯತ್ನ ವಿಟ್ಟಿತ್ತು. ಆದರೆ ಈ ವಿಚಾರಗಳನ್ನರಿತ ಭಾರತ ಸದಾ ಜಾಗೃತಿಯಲ್ಲಿಯೇ ಇತ್ತು, ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ಶಸಾಸಗಳನ್ನು ಗಡಿಯೂದ್ದಕ್ಕೂ ಹರಡಿತ್ತು.

ಭಾರತದ ಪರಾಕ್ರಮ, ದಿಟ್ಟತನವನ್ನರಿತ ಚೀನಾ ಕಂಗಾಲಾಗಿ ಭಾರತ ದೊಂದಿಗೆ ಸ್ನೇಹದ ಕುರಿತಾಗಿ ಮಾತನಾಡಲು ಶುರು ಮಾಡಿತು. ನಂತರ ನಡೆದ ಬೆಳವಣಿಗೆಯಲ್ಲಿ ಚೀನಾ ಗಡಿಯಿಂದ ಕಾಲ್ಕೀಳುವ ನಿರ್ಧಾರಕ್ಕೆ ಬಂದಿತು. ಚೀನಾಗೆ ಜ್ಞಾನೋದಯ ವಾದ ಬೆನ್ನ ಪಾಕಿಸ್ತಾನ ಕೂಡಾ ಭಾರತದ ಸ್ನೇಹ ಸಿಕ್ಕರೆ ಸಾಕು ಅಂತ ಚಾತಕ ಪಕ್ಷಿಯಂತೆ ಕಾಯುತ್ತಿತ್ತು.

ಭಾರತದೊಂದಿಗೆ ನಡೆದ ಮಾತುಕತೆಯ ನಂತರ ಪಾಕಿಸ್ತಾನ ಇನ್ಮುಂದೆ ಇಬ್ಬರು ಜಂಟಿಯಾಗಿ ಲೈನ್ ಆಪ್ ಕಂಟ್ರೋಲ್‌ನಲ್ಲಿ ಕದನ ವಿರಾಮ ಘೋಷಿಸಿದ್ದಾರೆ. ಕಳೆದ ಫೆಬ್ರವರಿ 24ರ ಮಧ್ಯರಾತ್ರಿಯಿಂದಲೇ ಕಣಿವೆ ನಾಡಿನಲ್ಲಿ ಶಾಂತಿಯ ಘೋಷ ಮೊಳಗಿದೆ. ಕಳೆದ ಹದಿನೆಂಟು ವರ್ಷಗಳ ನಂತರ ಕದನ ವಿರಾಮ ಘೋಷಣೆ ಆಗಿದೆ. 2003ರಲ್ಲಿ ವಾಜಪೇಯಿ ಪ್ರಧಾನಿ ಆಗಿದ್ದ ಸಂದರ್ಭ ದಲ್ಲಿ ಕದನ ವಿರಾಮ ಘೋಷಣೆ ಆಗಿತ್ತು. ಆದರೆ ನರಿ ಬುದ್ಧಿಯ ಪಾಕಿಸ್ತಾನ ಅಂದು ಅದನ್ನು ಉಲ್ಲಂಘಿಸಿ ಮತ್ತೆ ಮನಮೋಹನ್ ಸಿಂಗ್‌ರ ಅವಧಿಯಲ್ಲಿ ತನ್ನ ಅಟ್ಟಹಾಸವನ್ನು ಮೆರೆದಿತ್ತು.

2005ರಿಂದ ಇಲ್ಲಿಯವರೆಗೆ 1350 ಬಾರಿ LOCಯಲ್ಲಿ ಕದನ ವಿರಾಮದ ಉಲ್ಲಂಘನೆ ಮಾಡಿದೆ. ಅದರಲ್ಲಿ ಉಭಯದೇಶಗಳ 49 ಜನ ಮಹಿಳೆಯರು, 26 ಮಕ್ಕಳು ಸೇರಿದಂತೆ 371 ಜನ ಬಲಿಯಾಗಿದ್ದರೆಂದು ವರದಿಗಳು ಹೇಳಿದ್ದವು. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತರದ ಆರೆಳು ವರ್ಷದಲ್ಲಿ ಭಾರತ ಪಾಕಿಸ್ತಾನಕ್ಕೆ ಮುಟ್ಟಿ ಮುಟ್ಟಿ ನೋಡಿಕೊಳ್ಳುವಂಥ ಹೊಡೆತಗಳನ್ನು ಸರಿಯಾಗಿಯೇ ಕೊಡುತ್ತ ಬಂದಿದೆ.

ಸರ್ಜಿಕಲ್ ಸ್ಟ್ರೈಕ್ ಆದಮೇಲಂತೂ ಪಾಕಿಗಳ ಮರ್ಯಾದೆ ಮೂರಾಬಟ್ಟೆಯಾದರೆ, ಏರ್ ಸ್ಟ್ರೈಕ್ ಆದಮೆಲಂತೂ ಇದ್ದಬಿದ್ದ ಅಲ್ಪಸ್ವಲ್ಪ ಮರ್ಯಾದೆ ಕೂಡಾ ಮಣ್ಣುಪಾಲಾಗಿ ಹೋಗಿತ್ತು. ತನ್ನ ಅಭಿವೃದ್ಧಿ ಮರೆತು ಭಾರತಕ್ಕೆ ಸಮಸ್ಯೆ ಕೊಡುವುದನ್ನೇ ತನ್ನ ಅಜೆಂಡಾವನ್ನಾಗಿ ಮಾಡಿಕೊಂಡಿದ್ದ ಪಾಕಿಸ್ತಾನದ ಪರಿಸ್ಥಿತಿ ಚೀನಾ ಅಮೆರಿಕದ ಮುಂದೆ ಭಿಕ್ಷೆ ತಟ್ಟೆ ಹಿಡಿದು ನಿಲ್ಲುವಂತಾಗಿತ್ತು. ಚೀನಾ ಪಾಕಿಗಳ ಕೈ ಬಿಟ್ಟ ನಂತರ ಪಾಕಿಸ್ತಾನ ಭಾರತದ ಮುಂದೆ ಮಂಡಿಯೂರಿದೆ.

ರಣಾಂಗಣವಾಗಬೇಕಿದ್ದ ಪ್ಯಾಂಗಾಂಗ್ ಸರೋವರದ ತೀರದಲ್ಲಿನ ವಾತಾವರಣದಲ್ಲಿ ಶಾಂತಿ ನಿರ್ಮಾಣವಾಯಿತು. ಎರಡು ದೇಶಗಳ ನಡುವೆ ನಡೆದ ಹತ್ತಾರು ಸುತ್ತಿನ ಮಾತುಕತೆಯ ನಂತರ ಚೀನಾ ಇದೀಗ ಭಾರತದ ಗಡಿಯಿಂದ ದೂರ ಉಳಿಯಲು
ತೀರ್ಮಾನಿಸಿದೆ. ಭಾರತದ ಪರಾಕ್ರಮಕ್ಕೆ ಚೀನಾ ಸೈಲೆಂಟ್ ಆಗಿರುವಾಗ ಇನ್ನು ಚೀನಾ ಛೂ ಬಿಟ್ಟರೆ ಬೊಗಳುವ ಪಾಕಿಸ್ತಾನಕ್ಕೆ ಯಾವ ದಿಕ್ಕೂ – ದೆಸೆ ತೋಚದೆ ಇದೀಗ ಅದು ಕೂಡಾ ಭಾರತದ ಮುಂದೆ ಮಂಡಿಯೂರಿದೆ.

ಭಾರತದ ರಕ್ಷಣೆಗಾಗಿ ತನ್ನ ಇಡೀ ಜೀವನವನ್ನೇ ಮುಡಿಪಾಗಿಟ್ಟು, ಉಗ್ರರನ್ನು ಮಟ್ಟ ಹಾಕಿ, ನಕ್ಸಲರು ಉಸಿರೆತ್ತಲು ಬಿಡದಂತೆ ಮಾಡಿದವರು, ರಾಷ್ಟ್ರಕ್ಕೆ ಅಂಟಿದ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿದ ಚಾಣಕ್ಯರ ಚಾಣಕ್ಯ, ಬೇಟೆಗಾರರನ್ನೇ ಬೇಟೆ ಯಾಡೋ ಈ ರಣಬೇಟೆಗಾರ ಈ ಅಜಿತ್ ದೊವಲ. ಇದೀಗ ಐಸಿಸ್ ಉಗ್ರರನ್ನು ಮಟ್ಟಹಾಕಲು ಸೂತ್ರಬದ್ಧ ಯೋಜನೆ ಯೊಂದನ್ನು ರೂಪಿಸುತ್ತಿದ್ದಾರೆ. ಅದರಲ್ಲಿ ಯಶಸ್ಸನ್ನು ಕಾಣುವಂಥ ಶಕ್ತಿಯನ್ನು ನೀಡಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತ, ಅವರಿಗೊಂದು ಹ್ಯಾಟ್ಸಾಪ್..!