ತನ್ನಿಮಿತ್ತ
ಚಂದ್ರಶೇಖರ ಬೇರಿಕೆ
1965 ರಲ್ಲಿ ಕರ್ನಾಟಕದ ಒಂದು ತಾಲೂಕಾಗಿ ರಚನೆಯಾದ ಭಾರತದ ದಕ್ಷಿಣ ಮೂಲೆಯಲ್ಲಿರುವ ಸಣ್ಣ ಊರಾದ ಸುಳ್ಯ ಬಹಳಷ್ಟು ಮಂದಿಗೆ ಅಪರಿಚಿತವೇ ಆಗಿತ್ತು. ಸುಳ್ಯ ತಾಲೂಕಿನವರೆಂದು ಪರಿಚಯಿಸಿಕೊಳ್ಳಲು ದಕ್ಷಿಣದ ಪ್ರಸಿದ್ಧ ತೀರ್ಥ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ಎಂಬ ಸ್ಥಳನಾಮವನ್ನು ಉಲ್ಲೇಖಿಸಬೇಕಾ ಗಿತ್ತು. ಪೂರ್ವಕ್ಕೆ ಕೊಡಗು, ದಕ್ಷಿಣಕ್ಕೆ ಕಾಸರಗೋಡು, ಪಶ್ಚಿಮಕ್ಕೆ ದಕ್ಷಿಣ ಕನ್ನಡದ ಇತರ ತಾಲೂಕುಗಳು ಮತ್ತು ಉತ್ತರಕ್ಕೆ ಹಾಸನ ಜಿಲ್ಲೆಯನ್ನು ಹೊಂದಿರುವ ಸುಳ್ಯ ಭೌಗೋಳಿಕವಾಗಿ ಮಲೆನಾಡ ತಪ್ಪಲಲ್ಲಿದೆ.
ತೆಂಗು, ಅಡಿಕೆ, ಬಾಳೆ, ರಬ್ಬರ್, ಕೊಕ್ಕೋ, ಕರಿಮೆಣಸು ಇತ್ಯಾದಿ ಬೆಳೆಗಳ ಕೃಷಿ ಪ್ರಾಧಾನ್ಯತೆಯೊಂದಿಗೆ ಗ್ರಾಮೀಣ ಸೊಗಡು, ಪ್ರಾಕೃತಿಕ ಶ್ರೀಮಂತಿಕೆಯನ್ನು ಹೊಂದಿದ್ದರೂ ಸುಳ್ಯ ತಾಲೂಕು ಆರ್ಥಿಕವಾಗಿ, ಸಾಮಾಜಿಕ ವಾಗಿ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದ ಪ್ರದೇಶವೇ ಆಗಿತ್ತು.
ಹೀಗೇ ತೆರೆಮರೆಯಲ್ಲಿದ್ದ ಸುಳ್ಯವನ್ನು ದೇಶದುದ್ದಕ್ಕೂ ಪರಿಚಯಿಸಿದ್ದು ಅದೊಂದು ಅದ್ಭುತ ಶಕ್ತಿ. ಶ್ರೀ ಚೆನ್ನಕೇಶವ ನೆಲೆ ನಿಂತ ಊರಿನಲ್ಲಿ ವಿದ್ಯಾ ದೇವತೆಯ ಕೃಪಾಶೀರ್ವಾದದಿಂದ ಉದಯಿಸಿದ ಆ ಶಕ್ತಿಯೇ ಡಾ.ಕುರುಂಜಿ ವೆಂಕಟರಮಣ ಗೌಡ (ಕೆವಿಜಿ).ಸುಳ್ಯವನ್ನು ಆಧುನಿಕತೆಯೆಡೆಗೆ ಕೈಹಿಡಿದು ಮುನ್ನಡೆಸಿ ಶಿಕ್ಷಣ ಕ್ರಾಂತಿಯ ಹರಿಕಾರ, ಶಿಕ್ಷಣ ಬ್ರಹ್ಮ, ಸುಳ್ಯದ ಮುಕುಟ ಪ್ರಾಯ, ಸುಳ್ಯದ ಅಮರಶಿಲ್ಪಿ ಎಂಬ ಹಿರಿಮೆಗೆ ಪಾತ್ರರಾದ ಕೆವಿಜಿ ಯವರು ಕುರುಂಜಿ ಎಂದೇ ಜನಜನಿತ.
ಅಜ್ಞಾನವೆಂಬ ಕತ್ತಲೆ, ಮಬ್ಬು ಮುಸುಕಿದ ಊರಿಗೆ ಮತ್ತು ಆ ಊರಿನಲ್ಲಿ ನಡೆದಾಡುತ್ತಿದ್ದ ಜನರಿಗೆ ಜ್ಞಾನವೆಂಬ ಬೆಳಕನ್ನು ತೋರಿಸಿ ಕೈ ಹಿಡಿದ ಕರುಣಾಳು, ಮಾನವ ಸ್ವರೂಪಿ ದೇವರಾದ ಕುರುಂಜಿಯವರು ಡಿಸೆಂಬರ್ 26,1928ರಂದು ಸುಳ್ಯದ ಒಂದು ಬಡಕುಟುಂಬದಲ್ಲಿ ಜನಿಸಿದರು. ಮಹಾಲಿಂಗ ಮಾಸ್ತರ್ ಮತ್ತು ಲಕ್ಷ್ಮೀ ದಂಪತಿ ಗಳ ಆರು ಜನ ಗಂಡು ಮಕ್ಕಳು ಮತ್ತು ಓರ್ವ ಮಗಳ ಪೈಕಿ ಕುರುಂಜಿಯವರು ಎರಡನೆಯವರು.
1943ರಲ್ಲಿ ಅಂದರೆ ಕುರುಂಜಿಯವರು 15ರ ಹರೆಯದಲ್ಲಿರುವಾಗ ಅವರ ತಂದೆಯವರು ಕಾಲವಾದರು. ಕುಟುಂಬದ ಬಡತನದ ಮಧ್ಯೆ ತಾನು ಮತ್ತು ತನ್ನ ಹಿರಿಯ ಸಹೋದರ ಶಿಕ್ಷಣವನ್ನು ಮುಂದುವರೆಸಿದರೆ ತಮ್ಮ ಕಿರಿಯ ಸಹೋದರರ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಎಂಬುದನ್ನು ಮನಗಂಡು ಈ ಇಬ್ಬರೂ ತಮ್ಮ ಪ್ರಾಥಮಿಕ ಹಂತದ ವಿದ್ಯಾಭ್ಯಾಸಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿ ತಮ್ಮನ್ನು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಆದರೆ ಕೇವಲ ಕೃಷಿಯಿಂದ ಇಷ್ಟು ದೊಡ್ಡ ಸಂಸಾರವನ್ನು ನಿಭಾಯಿಸು ವುದು ಕಷ್ಟ ಎಂಬುದನ್ನು ಅರಿತು ಸಹೋದರರಿಬ್ಬರು ಕೃಷಿ ಜತೆಗೆ ಸುಳ್ಯ ಪೇಟೆಯಲ್ಲಿ ಒಂದು ಸಣ್ಣ ವ್ಯಾಪಾರವನ್ನು ಆರಂಭಿಸಿದರು.
ಈ ಮಧ್ಯೆ ತಾನು ಶಾನುಭೋಗರಾಗಬೇಕು ಎಂಬ ಇಚ್ಛೆ ಹೊಂದಿದ್ದ ಕುರುಂಜಿಯವರು ತನ್ನ ಹಿರಿಯ ಸಹೋದರನ ಒಪ್ಪಿಗೆ ಪಡೆದು ಸರ್ವೆ ತರಬೇತಿಗಾಗಿ ಕಾರ್ಕಳಕ್ಕೆ ತೆರಳಿದರು. ತರಬೇತಿ ಪಡೆದು ಸ್ವಗ್ರಾಮಕ್ಕೆ ಮರಳಿದ ಕುರುಂಜಿ ಯವರಿಗೆ ಎಲ್ಲೂ ಅವಕಾಶಗಳು ಸಿಗದೇ ಶಾನು ಭೋಗರಾಗುವ ಕನಸು ಮರೀಚಿಕೆ ಯಾಯಿತು. ಈ ಸಂದರ್ಭದಲ್ಲಿ ತನ್ನ ಹಿರಿಯ ಸಹೋದರ ತಮ್ಮ ವ್ಯಾಪಾರದ ಸಂಪೂರ್ಣ ಜವಾಬ್ದಾರಿಯನ್ನು ಕುರುಂಜಿಯವರಿಗೆ ನೀಡಿದರು. ಹೀಗೆ ವ್ಯಾಪಾರ ದಲ್ಲಿ ಪ್ರಗತಿಯಾದಂತೆ ಅಲ್ಲಿ ಗಳಿಸಿದ ಹಣವನ್ನು ಕೃಷಿ ಭೂಮಿಯಲ್ಲಿ ಬಿತ್ತಿದರು.
ಕೃಷಿಯಲ್ಲಿ ಕುರುಂಜಿಯವರು ಸಾಽಸಿದ ಪ್ರಗತಿ ಮತ್ತು ಸಾಧನೆಯನ್ನು ಗುರುತಿಸಿ ಅವರಿಗೆ ಕೃಷಿ ಇಲಾಖೆಯಿಂದ ಪ್ರಶಸ್ತಿಗಳೂ ದೊರೆತು ಇತರರಿಗೂ ಪ್ರೇರಣೆ ಯಾದರು, ಸ್ಪೂರ್ತಿಯಾದರು. ಸುಳ್ಯದ ಜನರು ಶಿಕ್ಷಣವನ್ನು ಪಡೆಯಲು ದೂರದೂರಿಗೆ ಹೋಗಬೇಕಾದ ಪ್ರಸಂಗವಿತ್ತು. ಶಿಕ್ಷಣ ವನ್ನು ಪಡೆಯಲೇಬೇಕು ಎಂದು ಪಣ ತೊಟ್ಟವರು ಮತ್ತು ಶ್ರೀಮಂತರ ಮಕ್ಕಳು ಪುತ್ತೂರು, ಮಂಗಳೂರಿನಲ್ಲಿರುವ ಶಿಕ್ಷಣ ಸಂಸ್ಥೆಗಳನ್ನು ನೆಚ್ಚಿಕೊಂಡರು. ಕೃಷಿಯಲ್ಲಿ ತೊಡಗಿಸಿಕೊಂಡ ಕುರುಂಜಿಯವರು ಬಾಲ್ಯದಿಂದಲೇ ಗಾಂಧೀಜಿಯವರ ತತ್ವ, ಚಿಂತನೆಗಳಿಂದ ಪ್ರೇರಿತರಾಗಿ ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಚಿಂತನೆ ಅವರಲ್ಲಿ ಮೊಳಕೆ ಯೊಡೆಯಿತ್ತು.
ತಾಲೂಕಿನಾದ್ಯಂತ ಬಡತನ, ಅನಕ್ಷರತೆ, ಅನಾರೋಗ್ಯದ ಸಮಸ್ಯೆಗಳನ್ನು ಕಂಡ ಕುರುಂಜಿ ಯವರು ಜನ ಸೇವೆಗೆ ಅಡಿಯಿಡುವ ಸಲುವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿ ಸುಳ್ಯ ಮಂಡಲ ಅಧ್ಯಕ್ಷರಾದರು. ಸುಳ್ಯದ ಗ್ರಾಮೀಣ ಪ್ರದೇಶದ ಮಕ್ಕಳು ದೂರದೂರುಗಳಿಗೆ ಹೋಗಿ ಶಿಕ್ಷಣ ಪಡೆಯುವುದು ಅಸಾಧ್ಯ ಎಂಬುದನ್ನು ಮನಗಂಡ ಕುರುಂಜಿಯವರು ನಮ್ಮೂರಿನ ಮಕ್ಕಳು ಪ್ರಾಥಮಿಕ ಹಂತದಿಂದ ಉನ್ನತ ಮಟ್ಟದವರೆಗಿನ ಶಿಕ್ಷಣವೆಲ್ಲವನ್ನೂ ಸುಳ್ಯದಲ್ಲಿಯೇ ಪಡೆಯುವಂತಾಗಬೇಕು ಎಂದು ಚಿಂತಿಸಿ ಕೆಲವು ಮುತ್ಸದ್ಧಿಗಳನ್ನು, ಸಾಮಾಜಿಕ ಚಿಂತಕರನ್ನು ಒಟ್ಟುಗೂಡಿಸಿ ತನ್ನ ಸಾರಥ್ಯದಲ್ಲಿ ಮಾರ್ಚ್ 2, 1967ರಂದು ಪಯಸ್ವಿನಿ ನದಿಯ ತಟದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್, ಕುರುಂಜಿಭಾಗ್, ಸುಳ್ಯ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಆದರೆ
ಕಾರಣಾಂತರ ಗಳಿಂದ ಸರಿಸುಮಾರು 9 ವರ್ಷಗಳ ಕಾಲ ಯಾವುದೇ ಶೈಕ್ಷಣಿಕ ಚಟುವಟಿಕೆ ಇಲ್ಲಿ ಆರಂಭವಾಗಲಿಲ್ಲ. ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನಗಳನ್ನು ಕೈ ಬಿಡದ ಕುರುಂಜಿಯವರು 1976ರ ಜುಲೈನಲ್ಲಿ ಕಲೆ, ವಾಣಿಜ್ಯ ವಿಭಾಗಗಳನ್ನೊಳಗೊಂಡ ನೆಹರು ಮೆಮೋರಿಯಲ್ ಕಾಲೇಜ್ ಎಂಬ ಹೆಸರಿನ ಚೊಚ್ಚಲ ಜ್ಞಾನ ದೇಗುಲವನ್ನು ಈ ಅಕಾಡೆಮಿಯಲ್ಲಿ ಆರಂಭಿಸಿದರು.
ಶಿಕ್ಷಣ ಪಡೆಯಲು ನೆಹರು ಮೆಮೋರಿಯಲ್ ಕಾಲೇಜಿಗೆ ಬರುವ ದೂರದೂರಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 1977ರಲ್ಲಿ ವಸತಿ ಗೃಹಗಳನ್ನು ಆರಂಭಿಸಿ ದರು. 1978ರಲ್ಲಿ ಪದವಿ ಪೂರ್ವ ಕಾಲೇಜನ್ನು ಸೇರ್ಪಡೆಗೊಳಿಸಿ, 1986-87ರಲ್ಲಿ ಪದವಿ ಪೂರ್ವ ವಿಜ್ಞಾನ ವಿಭಾಗವನ್ನು ಮತ್ತು 1989ರಲ್ಲಿ ವಿಜ್ಞಾನ ಪದವಿ ವಿಭಾಗ ವನ್ನು ಸೇರ್ಪಡೆಗೊಳಿಸಿದರು.
ಮುಂದುವರೆದು ಕಾನೂನು ಶಿಕ್ಷಣ ಆಕಾಂಕ್ಷಿಗಳಿಗೆ ಅನುಕೂಲವಾಗಲೆಂದು 1990ರ ಆಗಸ್ಟ್‌ನಲ್ಲಿ ಕೆವಿಜಿ ಕಾನೂನು ಕಾಲೇಜು ಅನ್ನು ಸ್ಥಾಪಿಸಿದರು. 1991ರ ಜೂನ್‌ನಲ್ಲಿ ಸುಳ್ಯದಲ್ಲಿ ಕೆವಿಜಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯನ್ನು ತೆರೆದರು. 1992ರಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಎಂಬ ಗ್ರಾಮೀಣ ಪ್ರದೇಶದಲ್ಲಿ ಕೆವಿಜಿ ಪ್ರೌಢಶಾಲೆಯನ್ನು ಆರಂಭಿಸಿದರು. ಹಳ್ಳಿಗಳಲ್ಲೂ ಶಿಕ್ಷಣ ದೊರೆಯುವಂತಾಗಲು ಪ್ರಯತ್ನಿಸಿ ಶ್ರೀ ಶಾರದಾ ಹೆಮ್ಮಕ್ಕಳ ಸಂಯುಕ್ತ ಪದವಿ ಪೂರ್ವ ಕಾಲೇಜು, ಶ್ರೀ ಶಾರದಾ ಮಹಿಳಾ ಕಾಲೇಜು, ನೆಹರು ಸ್ಮಾರಕ ಸಂಯುಕ್ತ ಪದವಿ ಪೂರ್ವ ಕಾಲೇಜು, ಅರಂತೋಡು, ಜ್ಯೋತಿ ಪ್ರೌಢ ಶಾಲೆ, ಪೆರಾಜೆ, ಕೊಡಗು ಇವುಗಳ ಸ್ಥಾಪನೆಗೂ ಕಾರಣೀಭೂತರಾದರು. 1980ರಲ್ಲಿ ಆರಂಭಗೊಂಡ ಅರಂತೋಡು ನೆಹರೂ ಸ್ಮಾರಕ ಪ್ರೌಢಶಾಲೆಯನ್ನು 1991ರಲ್ಲಿ ಕಲಾ ಮತ್ತು ವಿಜ್ಞಾನ ವಿಭಾಗಗಳನ್ನೊಳಗೊಂಡ ಪದವಿಪೂರ್ವ ಕಾಲೇಜನ್ನಾಗಿ ಮೇಲ್ದರ್ಜೆಗೇರಿಸಿದರು.
ತಾಂತ್ರಿಕ ಶಿಕ್ಷಣದ ಮಹತ್ವವನ್ನರಿತು 1984 ಸೆಪ್ಟೆಂಬರ್‌ನಲ್ಲಿ ಕೆವಿಜಿ ಪಾಲಿಟೆಕ್ನಿಕ್ ಕಾಲೇಜ್ ಮತ್ತು 1986ರ ಅಕ್ಟೋಬರ್‌ನಲ್ಲಿ ಕೆವಿಜಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅನ್ನು ಆರಂಭಿಸಿದರು. 1986ರ ಸೆಪ್ಟೆಂಬರ್‌ನಲ್ಲಿ ಸುಳ್ಯದಲ್ಲಿ ಮತ್ತು 1995ರ ಆಗಸ್ಟ್‌ನಲ್ಲಿ ಕೊಡಗಿನ ಭಾಗಮಂಡಲದಲ್ಲಿ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ 1996ರ ಜುಲೈನಲ್ಲಿ ಭಾಗಮಂಡಲದಲ್ಲಿ ಕೆವಿಜಿ ಪ್ರಥಮ ದರ್ಜೆ ಕಾಲೇಜು ಅನ್ನು ಆರಂಭಿಸಿದರು. 1998ರಲ್ಲಿ ಎಂಬಿಎ, 1999ರಲ್ಲಿ ಎಂಸಿಎ ಮತ್ತು 2003ರಲ್ಲಿ ಎಂ.ಟೆಕ್ ಅನ್ನು ಸುಳ್ಯದಲ್ಲಿ ಆರಂಭಿಸಿದರು. ತನ್ನ ಶಿಕ್ಷಣ ಸಾಮ್ರಾಜ್ಯವನ್ನು ರಾಜ್ಯ ರಾಜಧಾನಿ ಬೆಂಗಳೂರಿಗೂ ವಿಸ್ತರಿಸಿದ ಕುರುಂಜಿಯವರು 2000ನೇ ಇಸವಿಯಲ್ಲಿ ಎನ್.ಎಸ್.ವಿ.ಕೆ ಶ್ರೀ ವೆಂಕಟೇಶ್ವರ ಪಾಲಿಟೆಕ್ನಿಕ್ ಕಾಲೇಜು, ಮತ್ತುಎನ್.ಎಸ್.ವಿ.ಕೆ ಶ್ರೀ ವೆಂಕಟೇಶ್ವರ ದಂತ
ಮಹಾವಿದ್ಯಾಲಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡರು.
1980ರಲ್ಲಿ ಕುರುಂಜಿ ಕಾರ್ಸ್ ಜನರಲ್ ಆಸ್ಪತ್ರೆಯನ್ನು ತೆರೆದು ಹಾಗೆಯೇ ಹಳ್ಳಿಗಳಿಗೂ ಆರೋಗ್ಯ ಸೇವೆ ಒದಗಿಸುವ ಸಲುವಾಗಿ 1991ರಲ್ಲಿ ಕೆವಿಜಿ ಸಂಚಾರಿ ಆರೋಗ್ಯ ಘಟಕವನ್ನು ಆರಂಭಿಸಿದರು. 1991 ಅಕ್ಟೋಬರ್‌ನಲ್ಲಿ ದಂತ ವೈದ್ಯಕೀಯ ಕಾಲೇಜು ಮತ್ತು 1996ರ ಸೆಪ್ಟೆಂಬರ್‌ನಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಆರಂಭಿಸಿದರು.
2002ರಲ್ಲಿ ಕೆವಿಜಿ ಮೆಡಿಕಲ್ ಕಾಲೇಜನ್ನು ಆರಂಭಿಸಿದ ಕುರುಂಜಿಯವರು ತಾನು ಕಂಡ ದೊಡ್ಡ ಕನಸೊಂದನ್ನು ಸಾಽಸಿ ಜೀವನದ ಸಾರ್ಥಕತೆಯನ್ನು ಈಡೇರಿಸಿಕೊಂಡರು. ಗ್ರಾಮೀಣ ಪ್ರದೇಶದ ಜನರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕು ಹಾಗೂ ತಾವು ಸ್ಥಾಪಿಸಿದ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ನೀಡಿ ಅವರ ಬಾಳನ್ನು ಬೆಳಗಬೇಕು ಎಂಬುದು ಕುರುಂಜಿಯವರ ಮಹತ್ವಾಕಾಂಕ್ಷೆಯಾಗಿತ್ತು ಮತ್ತು ಅದನ್ನು ಸಾಧಿಸಿದರು.
ಕುರುಂಜಿಯವರು ತಾನು ಸಂಪತ್ತು ಗಳಿಸಿ ಆಗರ್ಭ ಶ್ರೀಮಂತನಾಗಬೇಕೆಂಬ ಸ್ವಾರ್ಥದಿಂದ, ದುರಾಸೆಯಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿಲ್ಲ. ಬಡತನದಿಂದಾಗಿ ಶಿಕ್ಷಣ ತ್ಯಜಿಸಿದ ಅರ್ಥಾತ್ ಶಿಕ್ಷಣ ವಂಚಿತರಾದ ಕುರುಂಜಿಯವರು ವ್ಯಾಪಾರದಿಂದ ತಾನು ಗಳಿಸಿದ ಆದಾಯವನ್ನು ಕೃಷಿಗೆ ಮತ್ತು ಕೃಷಿ ಮೂಲಗಳಿಂದ ಬಂದ ಆದಾಯವನ್ನು ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ ವಿನಿಯೋಗಿಸಿದವರು. ಶೂನ್ಯದಿಂದ ಮೇಲೆದ್ದು ಮಾನವೀಯತೆಯಲ್ಲಿ ಶ್ರೀಮಂತಿಕೆಯನ್ನು ಪ್ರದರ್ಶಿಸಿದ ಕುರುಂಜಿಯವರು ಒಬ್ಬ ನಿಸ್ವಾರ್ಥ ಸೇವಕರು ಮತ್ತು ಧಣಿವರಿಯದ ಧೀಮಂತರಾಗಿದ್ದರು. ಜಾತಿ, ಮತ, ಧರ್ಮಗಳನ್ನು ಮೀರಿ ಸಂಘ ಸಂಸ್ಥೆ ಗಳಿಗೆ, ನೂರಕ್ಕಿಂತಲೂ ಹೆಚ್ಚು ಮಹಿಳಾ ಮಂಡಲಗಳಿಗೆ, ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ, ದೇವಸ್ಥಾನಗಳಿಗೆ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಅತಿ ಹೆಚ್ಚಿನ ದೇಣಿಗೆ, ಹಣಕಾಸಿನ ನೆರವು ನೀಡಿ ಹೃದಯ ವೈಶಾಲ್ಯತೆ
ಮೆರೆದವರು. ಇಂದು ದಕ್ಷಿಣ ಕನ್ನಡ ಸುಶಿಕ್ಷಿತರ ಅಥವಾ ಬುದ್ದಿವಂತರ ಜಿಲ್ಲೆ ಎಂದೆನಿಸಿಕೊಳ್ಳಬೇಕಾದರೆ ಮತ್ತು ಸದರಿ ಜಿಲ್ಲೆಯ ಮಂಗಳೂರು ನಂತರದ ಎರಡನೇ ಅತಿ ಹೆಚ್ಚು ಕಾಲೇಜುಗಳನ್ನು ಹೊಂದಿದ ತಾಲೂಕು ಎಂದು ಸುಳ್ಯ ಗುರುತಿಸಿಕೊಳ್ಳಬೇಕಾದರೆ ಅದಕ್ಕೆ ಕುರುಂಜಿಯವರ ಕೊಡುಗೆ ಅಮೋಘ ಮತ್ತು ಅನನ್ಯವಾದುದು.
ಜ್ಞಾನವೇ ಬೆಳಕು, ಅಜ್ಞಾನವೇ ಕತ್ತಲು ಎಂದೆನ್ನುತ್ತಾ 1967ರಲ್ಲಿ ಕುರುಂಜಿಯವರು ಹಚ್ಚಿದ ಹಣತೆ ಇಂದು ಸುಳ್ಯದ ಜನತೆಗೆ ಪ್ರಕಾಶಮಾನವಾಗಿ ಬೆಳಕು ನೀಡುತ್ತಿದೆ. ದೂರದರ್ಶಿತ್ವ ಮತ್ತು ಮಹತ್ವಾಕಾಂಕ್ಷೆಯ ಫಲವಾಗಿ ಈಗ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯದ ವಿದ್ಯಾರ್ಥಿಗಳೂ ಇಲ್ಲಿ ಜ್ಞಾನಾರ್ಜನೆ ಮಾಡು ತ್ತಿದ್ದಾರೆ. ಈ ದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಮಹನೀಯರುಗಳೆನಿಸಿಕೊಂಡವರು ಹಲವರು. ಆದರೆ ಯಾವುದೇ ಆರ್ಥಿಕ ಹಿನ್ನೆಲೆಯಿಲ್ಲದೇ ಸ್ವಂತ ದುಡಿಮೆಯ ಸಂಪಾದನೆಯನ್ನು ಸಮಾಜಕ್ಕಾಗಿ ತ್ಯಾಗ
ಮಾಡಿದವರಲ್ಲಿ ಕುರುಂಜಿಯವರೂ ಒಬ್ಬರು ಎನ್ನುವುದು ಅವರ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತದೆ. ಅವರ ಸೇವೆಯನ್ನು ಪರಿಗಣಿಸಿ ಅಂತಾರಾಷ್ಟ್ರೀಯ ಪ್ರಶಸ್ತಿಗಳೂ ದೊರೆತಿದೆ. ಆದರೆ ರಾಷ್ಟ್ರಮಟ್ಟದ ಯಾವುದೇ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು, ಮನ್ನಣೆಗಳು ಕುರುಂಜಿಯವರಿಗೆ ದೊರೆಯಲಿಲ್ಲ ಎಂಬ ಕೊರಗು ಸುಳ್ಯದ ಜನತೆಯನ್ನು ಸದಾ ಕಾಡುತ್ತಿದೆ.
ಪ್ರವರ್ಧಮಾನದ ಅಧ್ಯಾಯದ ಉತ್ತುಂಗದಲ್ಲಿ ತೇಲಾಡುತ್ತಿದ್ದ ಸುಳ್ಯದ ಜನತೆಗೆ ಆಗಸ್ಟ್ 7, 2013ರಂದು ಬರ ಸಿಡಿಲು ಬಡಿದಂತಾಯಿತು, ಮತ್ತೆ ಅನಾಥ ಭಾವ ಮೂಡಿತ್ತು. ತಮ್ಮ ಕನಸುಗಳನ್ನು ಸಾಕಾರಗೊಳಿಸುತ್ತಾ ಸುಳ್ಯ ಜನತೆ ಸರಾಗವಾಗಿ ಉಸಿರಾಡುವಂತೆ ಮಾಡಿದ ಕುರುಂಜಿಯವರು ಅಂದು ತಮ್ಮ ಉಸಿರು ನಿಲ್ಲಿಸಿದರು. ಈ ಸಂದರ್ಭದಲ್ಲಿ ಭಾರತದ ಮಾಜಿ ಪ್ರಧಾನಿ ಎಲ್.ಕೆ ಅಡ್ವಾಣಿಯವರು ಸಂತಾಪ ಸೂಚಕವಾಗಿ ಹೇಳಿದ್ದು, ಗ್ರಾಮೀಣ ಪ್ರದೇಶ ವಾಗಿದ್ದು ಇಷ್ಟೊಂದು ವಿದ್ಯಾಸಂಸ್ಥೆಗಳನ್ನು ಹೊಂದಿ ಅಭಿವೃದ್ಧಿ ಕಂಡ ಸುಳ್ಯದಂತಹ ಇನ್ನೊಂದು ಸ್ಥಳವನ್ನು ನಾನು ನೋಡಿಲ್ಲ. ಇದಕ್ಕೆಲ್ಲಾ ಕಾರಣ ಒಬ್ಬನೇ ವ್ಯಕ್ತಿ.
ಅವರು ಡಾ. ಕುರುಂಜಿ ವೆಂಕಟರಮಣ ಗೌಡರು.ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ದುಡಿಮೆ ಅನಿವಾರ್ಯವಾದಾಗ ಶಿಕ್ಷಣ ತ್ಯಜಿಸಿ ದುಡಿದು ಸಂಪಾದಿಸಿದ ಹಣದಿಂದ ಜ್ಞಾನ ದೇಗುಲಗಳನ್ನು ನಿರ್ಮಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ ಮಹಾನ್ ವ್ಯಕ್ತಿ, ವಿದ್ಯಾದಾನಿ, ಅಕ್ಷರ ದಾಸೋಹಿ, ಸುಳ್ಯದ ಅಮರಶಿಲ್ಪಿ ಕುರುಂಜಿಯವರು ಪೂಜ್ಯರು,
ಪ್ರಾತಃಸ್ಮರಣೀಯರೂ ಆಗಿದ್ದಾರೆ. ದೇಹ ಅದೃಶ್ಯವಾದರೂ ಸುಳ್ಯದ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಕುರುಂಜಿಯವರಿಗೆ ಪುಣ್ಯತಿಥಿಯ ಈ ಸಂದರ್ಭದಲ್ಲಿ ಕೋಟಿ ನಮನಗಳು.