Saturday, 14th December 2024

Dr N Someshwara Column: ಸಯನೇಡ್‌ ಜೀವವನ್ನು ಸೃಜಿಸಬಲ್ಲದೆ ?

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ನಮ್ಮ ದೇಶದಲ್ಲಿ ‘ಮಾನವ ಬಾಂಬ್’ ಮೊದಲ ಬಾರಿಗೆ ಯಶಸ್ವಿಯಾಗಿ ಸಿಡಿದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಆಹುತಿ ತೆಗೆದುಕೊಂಡಿತು. ರಾಜೀವ್ ಗಾಂಧಿ ಹತ್ಯಾ ಪ್ರಕರಣದ ಪ್ರಧಾನ ಸೂತ್ರಧಾರ ಶಿವರಾಸನ್. ಆತನನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿ, ಸೆರೆ Sಹಿಡಿಯಲು ಪ್ರಯತ್ನಿಸಿದಾಗ, ಆತ ಸಯನೇಡ್ ಸೇವಿಸಿ ತನ್ನ ಸಹಚರರೊಡನೆ ಆತ್ಮಹತ್ಯೆಯನ್ನು ಮಾಡಿಕೊಂಡ. ಶಿವರಾಸನ್ ಬಳಿ ಸಯನೇಡ್ ಗುಳಿಗೆ ಇರುತ್ತದೆ ಎನ್ನುವುದನ್ನು ಮುಂಚಿತವಾಗಿ ತಿಳಿದಿದ್ದ ಪೊಲೀಸರು, ಸಯನೇಡ್ ವಿಷವನ್ನು ನಿಗ್ರಹಿಸಬಲ್ಲ ಪ್ರತಿವಿಷವನ್ನು
ಜರ್ಮನಿಯಿಂದ ತರಿಸಿ ಸಿದ್ಧವಾಗಿಟ್ಟುಕೊಂಡಿದ್ದರು. ಆದರೆ, ಅದನ್ನು ಉಪಯೋಗಿಸುವ ಅವಕಾಶವನ್ನೇ
ಕೊಡದೇ, ಶಿವರಾಸನ್ ಸಯನೇಡ್ ಗುಳಿಗೆಯನ್ನು ಸೇವಿಸಿ ಜೀವವನ್ನು ಬಿಟ್ಟಿದ್ದ.

‘ಸಯನೇಡ್’ ಎನ್ನುವುದು ಕೆಲವು ರಾಸಾಯನಿಕ ವಸ್ತುಗಳಿಗೆ ನೀಡಿರುವ ಸಮಷ್ಟಿ ಹೆಸರು. ಇದನ್ನು ‘ಸಯನೋ
ಗ್ರೂಪ್’ ಎಂದು ಕರೆಯುವರು. ಈ ಸಯನೋ ಗುಂಪಿನಲ್ಲಿರುವ ಸರ್ವಸಾಮಾನ್ಯ ಸಯನೇಡುಗಳೆಂದರೆ ಹೈಡ್ರೋ
ಜನ್ ಸಯನೇಡ್ ಸೋಡಿಯಂ ಸಯನೇಡ್ ಮತ್ತು ಪೊಟಾಸಿಯಮ್ ಸಯನೇಡ್. ಸಯನೇಡುಗಳು ಉಗ್ರಸ್ವರೂಪದ ವಿಷಗಳು. ಯಾವುದೇ ಸಯನೇಡು ನಮ್ಮ ದೇಹವನ್ನು ಪ್ರವೇಶಿಸಿತೆಂದರೆ, ಅದು ದೇಹದ ಜೀವಕೋಶಗಳಿಗೆ, ವಿಶೇಷ ವಾಗಿ ಮಿದುಳಿನ ನರಕೋಶಗಳಿಗೆ, ಆಕ್ಸಿಜನ್ ದೊರೆಯದಂತೆ ಮಾಡುತ್ತದೆ. ಅತ್ಯಂತ ತ್ವರಿತವಾಗಿ ತುರ್ತು ಚಿಕಿತ್ಸೆ ಯನ್ನು ನೀಡದಿದ್ದರೆ, ಸಾವು ತ್ವರಿತವಾಗಿ ನಿಮಿಷಗಳಲ್ಲಿ ಸಂಭವಿಸುತ್ತದೆ.

ಸಾವಿನ ಹರಿಕಾರನಾದ ಸಯನೇಡ್, ನಮ್ಮ ಭೂಮಂಡಲ ರೂಪುಗೊಳ್ಳುವ ಆದಿಕಾಲದಲ್ಲಿಯೇ ಹುಟ್ಟಿತೆಂದರೆ
ಆಶ್ಚರ್ಯವಾಗುತ್ತದೆ. ಭೂಮಂಡಲದ ಆದಿ ವಾತಾವರಣದಲ್ಲಿ ಆಕ್ಸಿಜನ್, ಹೈಡ್ರೋಜನ್, ಕಾರ್ಬನ್, ನೈಟ್ರೋ ಜನ್ ಮುಂತಾದ ಪರಮಾಣುಗಳಿದ್ದವು. ಆ ವಾತಾವರಣದಲ್ಲಿ ನಿರಂತರವಾಗಿ ಹೊಡೆಯುತ್ತಿದ್ದ ಸಿಡಿಲುಗಳ ಉಗ್ರ ಉಷ್ಣತೆ ಮತ್ತು ಸೂರ್ಯನ ಅತಿನೇರಳೆ ಕಿರಣಗಳ ಪ್ರಭಾವದಲ್ಲಿ ಕಾರ್ಬನ್ ಮತ್ತು ಹೈಡ್ರೋಜನ್ ಸೇರಿ ಮೀಥೇ ನನ್ನು (CH4), ನೈಟ್ರೋಜನ್ ಮತ್ತು ಹೈಡ್ರೋಜನ್ ಸೇರಿ ಅಮೋನಿಯವನ್ನು (NH3), ಕಾರ್ಬನ್ ಮತ್ತು ಆಕ್ಸಿಜನ್ ಸೇರಿಕೊಂಡು ಕಾರ್ಬನ್ ಡೈಯಾಕ್ಸೈ ಡನ್ನು, ಹೈಡ್ರೋಜನ್ ಮತ್ತು ಆಕ್ಸಿಜನ್ ಸೇರಿಕೊಂಡು ನೀರನ್ನು (H2O) ಸೃಜಿಸಿದವು. ಹೀಗೆಯೇ ಮೀಥೇನ್ ಮತ್ತು ಅಮೋನಿಯಗಳು ಪರಸ್ಪರ ರಾಸಾಯನಿಕವಾಗಿ ವರ್ತಿಸಿ ಹೈಡ್ರೋಜನ್ ಸಯನೇಡನ್ನು ಉತ್ಪಾದಿಸಿದವು.

ಅಗ್ನಿಪರ್ವತಗಳು ಸಿಡಿದಾಗ ಉತ್ಪಾದನೆಯಾಗುವ ಅಧಿಕ ಉಷ್ಣತೆಯೂ ಹೈಡ್ರೋಜನ್ ಸಯನೇಡಿನ ಉತ್ಪಾದನೆಗೆ
ಕಾರಣವಾಗಿರಬಹುದು. ಮಳೆಯು, ವಾತಾವರಣದಲ್ಲಿ ತೇಲುತ್ತಿದ್ದ ಹೈಡ್ರೋಜನ್ ಸಯನೇಡ್ ಅಣುಗಳನ್ನು
ತೊಳೆದು ಭೂಮಿಗೆ ರವಾನಿಸಿತು. ಆದಿ ಸಮುದ್ರದಲ್ಲಿ ಹೈಡ್ರೋಜನ್ ಸಯನೇಡ್ ಸಹ ಸೇರಿಕೊಂಡಿತು. ಹೈಡ್ರೋ ಜನ್ ಸಯನೇಡ್ ಬಾಹ್ಯಾಕಾಶದಿಂದ ಭೂಮಿಗೆ ಬಂದಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಧೂಮ ಕೇತು ಮತ್ತು ಉಲ್ಕೆಗಳಲ್ಲಿ ಹೈಡ್ರೋಜನ್ ಸಯನೇಡ್ ಇರುವುದನ್ನು ಪತ್ತೆಹಚ್ಚಲಾಗಿದೆ. ಉದಾಹರಣೆಗೆ, ‘ಹೇಲ್-ಬಾಪ್’ ಧೂಮಕೇತುವಿನಲ್ಲಿ ಹೈಡ್ರೋಜನ್ ಸಯನೇಡ್ ಇರುವುದು ನಮಗೆ ತಿಳಿದಿದೆ. ಇಂದಿಗೆ ಸುಮಾರು 4.1-3.8 ಬಿಲಿಯನ್ ವರ್ಷಗಳ ಹಿಂದೆ, ಬಾಹ್ಯಾಕಾಶದಿಂದ ‘ಉಲ್ಕೆಗಳ ಮಹಾವರ್ಷ’ (ಲೇಟ್ ಹೆವಿ ಬೊಂಬಾರ್ಡ್‌ಮೆಂಟ್) ಉಂಟಾಯಿತು. ಆಗ ಅವುಗಳಲ್ಲಿದ್ದ ಹೈಡ್ರೋಜನ್ ಸಯನೇಡ್ ನಮ್ಮ ವಾತಾವರಣದಲ್ಲಿ ಹಾಗೂ ಸಾಗರದಲ್ಲಿ ಸಂಗ್ರಹವಾಯಿತು.

1953ರಲ್ಲಿ ‘ಮಿಲ್ಲರ್-ಯೂರೇ ಪ್ರಯೋಗ’ವು ನಡೆಯಿತು. ಈ ಪ್ರಯೋಗದಲ್ಲಿ ನಮ್ಮ ಭೂಮಂಡಲದ ಆದಿ ವಾತಾವರಣವನ್ನು ಕೃತಕವಾಗಿ ಸೃಜಿಸಿದರು. ಕೃತವಾಗಿ ಸಿಡಿಲನ್ನು ಹೊಡೆಯಿಸಿದರು. ಆಗ ರೂಪುಗೊಂಡ ಆದಿ ಅಣುಗಳಲ್ಲಿ (ಪ್ರೋಟೋ ಮಾಲೆಕ್ಯೂಲ್ಸ್) ಹೈಡ್ರೋಜನ್ ಸಯನೇಡ್ ಸಹ ಒಂದಾಗಿತ್ತು. ಹಾಗಾಗಿ ನಮ್ಮ ಆದಿ ಸಮುದ್ರದಲ್ಲಿ ಮೊತ್ತ ಮೊದಲ ಬಾರಿಗೆ ಆದಿಜೀವಿಯು ರೂಪುಗೊಳ್ಳಲು ಕಾರಣವಾದ ಅಮೈನೋ ಆಮ್ಲ, ನ್ಯೂಕ್ಲಿಕ್ ಆಮ್ಲಗಳ ಉತ್ಪಾದನೆಯಲ್ಲಿ ಹೈಡ್ರೋಜನ್ ಸಯನೇಡಿನ ಪಾತ್ರವಿದೆ. ಉದಾಹರಣೆಗೆ ಹೈಡ್ರೋಜನ್ ಸಯನೇಡ್ ಘನೀಕರಣದಿಂದ ‘ಅಡೆನಿನ್’ ಎನ್ನುವ ಅಮೈನೋ ಆಮ್ಲದ ಉತ್ಪಾದನೆ. ಡಿಸೆಂಬರ್ ೧೪, ೨೦೨೩ರಂದು
ಖಗೋಳ ವಿಜ್ಞಾನಿಗಳು ಶನಿಗ್ರಹದ ಉಪಗ್ರಹವಾದ ಎನ್ಸಿಲೇಡಸ್‌ನ ವಾತಾವರಣವನ್ನು ವೀಕ್ಷಿಸಿದರು. ಅಲ್ಲಿನ ವಾತಾವರಣದಲ್ಲಿ ಹೈಡ್ರೋಜನ್ ಸಲೈಡ್ ಇರುವುದು ಪತ್ತೆಯಾಗಿದೆ. ಬಹುಶಃ ಎನ್ಸಿಲೇಡಸ್‌ನಲ್ಲಿರುವ ಜಲರಾಶಿ ಯಲ್ಲಿ ಆದಿಜೀವಿಯು ಉಗಮವಾಗುವ ದಿನಗಳು ಬರಬಹುದು ಎಂದು ನಿರೀಕ್ಷಿಸಲಾಗಿದೆ. ಅಂತರ ತಾರಾ ಧೂಳಿ ನಲ್ಲಿ (ಇಂಟರ್ ಸ್ಟೆಲಾರ್ ಡಸ್ಟ್) ಹೈಡ್ರೋಜನ್ ಸಯನೇಡ್ ಇರುವುದನ್ನು ಪತ್ತೆ ಹಚ್ಚಲಾಗಿದೆ. ಹಾಗಾಗಿ ನಮ್ಮ ಬ್ರಹ್ಮಾಂಡ ರೂಪುಗೊಂಡ ಆದಿಯಲ್ಲಿಯೇ ಹೈಡ್ರೋಜನ್ ಸಯನೇಡ್ ರೂಪುಗೊಂಡಿತು ಎನ್ನಬಹುದು.

ಇಂಥ ಜೀವದಾಯಕ ಹೈಡ್ರೋಜನ್ ಸಯನೇಡ್, ಜೀವವನ್ನು ತೆಗೆಯುತ್ತದೆ ಎಂದರೆ, ಅದು ಎಂಥ ವಿಪರ್ಯಾಸ ವಾಗಿದೆ! ನಮ್ಮ ಭೂಮಿಯ ಮೇಲೆ ಇರುವ ಅನೇಕ ಗಿಡ, ಮರ, ಹಣ್ಣು, ಕಾಯಿ, ಬೀಜಗಳಲ್ಲಿ ಸಯನೋ ಗುಂಪಿನ ವಿಷವಸ್ತುಗಳಿರುತ್ತವೆ. ಇವುಗಳ ಪ್ರಾಥಮಿಕ ಪರಿಚಯವಿರುವುದು ಒಳ್ಳೆಯದು. ಮರಗೆಣಸು (ಕಸಾವ) ನಮಗೆಲ್ಲ ರಿಗೂ ಪರಿಚಿತವಾಗಿರುವಂಥದ್ದು. ಇದರ ವೈಜ್ಞಾನಿಕ ನಾಮಧೇಯ ಮ್ಯಾನಿಹಾಟ್ ಎಸ್ಕ್ಯುಲೆಂಟ. ಇದರಲ್ಲಿ ‘ಲಿನಾ ಮರಿನ್’ ಮತ್ತು ‘ಲೋಟಸ್ಟ್ರಾಲಿನ್’ ಎಂಬ ಸಯನೋಜೆನಿಕ್ ಗ್ಲೈಕೋಸೈಡುಗಳಿವೆ. ಅಂದರೆ ಸಯನೇಡನ್ನು ಉತ್ಪಾದಿಸಬಲ್ಲ ರಾಸಾಯನಿಕಗಳು. ಮರಗೆಣಸನ್ನು ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಜನರು ತಮ್ಮ ದೈನಂದಿನ ಆಹಾರವನ್ನಾಗಿ ಉಪಯೋಗಿಸುತ್ತಾರೆ.

ಮರಗೆಣಸು, ನಮ್ಮ ಭಾರತದ ಮಲಬಾರ್ ತೀರಪ್ರದೇಶದ ಜನರ ಮುಖ್ಯ ಆಹಾರ. ಇದನ್ನು ಬೇಯಿಸಿ ಇಲ್ಲವೆ ಸುಟ್ಟು ಉಪಯೋಗಿಸುವುದಿದೆ. ಅಲ್ಲದೆ ಹುಳಿ ಮತ್ತು ಪಲ್ಯದ ರೀತಿಯಲ್ಲಿ ಸಹ ಉಪಯೋಗಿಸುವುದುಂಟು. ಇದರಿಂದ ಹಿಟ್ಟು ಮತ್ತು ಕೃತಕ ಅಕ್ಕಿ ತಯಾರು ಮಾಡುವುದಿದೆ. ಫಿಲಿಪೀನ್ಸ್‌ನಲ್ಲಿ ಇದರಿಂದ ಮದ್ಯ ತಯಾರಿಸು ತ್ತಾರೆ. ಇದರ ಹಿಟ್ಟು ಬಿಸ್ಕತ್ತು ತಯಾರಿಕೆಗೂ, ಗಂಜಿಯು ಬಟ್ಟೆಗಳಿಗೆ ಹಾಕಲೂ ಒದಗುತ್ತದೆ.

ಮರಗೆಣಸಿನ ಹಿಟ್ಟನ್ನು ಚಪಾತಿ, ಪೂರಿ ಇತ್ಯಾದಿಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಇದರಿಂದ ರವೆ
ತಯಾ ರಿಸಿ ಉಪ್ಪಿಟ್ಟು, ಸಜ್ಜಿಗೆ, ಇಡ್ಲಿ ಮುಂತಾದವನ್ನು ಮಾಡಬಹುದು. ಆದರೆ ಇವೆಲ್ಲವನ್ನು ಸಿದ್ಧಪಡಿಸಲು
ಮರಗೆಣಸನ್ನು ವಿಷರಹಿತವನ್ನಾಗಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಇದು ಅನಾಹುತಕ್ಕೆ ಎಡೆ ಮಾಡಿಕೊಡುತ್ತದೆ.
ಕಹಿ ಬಾದಾಮಿ, ಸೇಬು, ಚೆರ್ರಿ, ಪೀಚ್, ಏಪ್ರಿಕಾಟ್ ಮುಂತಾದವುಗಳ ಬೀಜಗಳಲ್ಲಿ ‘ಅಮಿಗ್ಡಲಿನ್’ ಎಂಬ
ಸಯನೇಡ್ ಉತ್ಪಾದಕವಿರುತ್ತದೆ. ಲೀಮಾ ಅವರೆಯಲ್ಲಿ (-ಸಿಯೋಲಸ್ ಲುನಾಟಸ್) ಲಿನಾಮರಿನ್ ಸಯನೇಡ್
ಉತ್ಪಾದಕವಿರುತ್ತದೆ. ಜೋಳದಲ್ಲಿಯೂ (ಸೋರ್ಘಮ್ ಬೈಕಲರ್) ‘ದುರ್ರಿನ್’ ಎಂಬ ಸಯನೇಡ್ ಉತ್ಪಾದಕ ವಿರುತ್ತದೆ.

ಹಾಗೆಯೇ ಕೆಲವು ಸಿಹಿಗೆಣಸು, ಯಾಮ್, ಅಗಸೆ ಬೀಜ, ಎಳೇ ಬಿದಿರಿನಲ್ಲಿ (ಕಳಲೆಯಲ್ಲಿ) ಸಯನೇಡ್ ಘಟಕ ಗಳಿರುತ್ತವೆ. ಕಳಲೆಯ ತುದಿಯಲ್ಲಿ ಹೈಡ್ರೋಜನ್ ಸಯನೇಡ್ ಪ್ರಮಾಣ ಗರಿಷ್ಠವಿದ್ದು, ಬುಡದ ಕಡೆಗೆ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಸಯನೋಜನಕಗಳ ವಿಷ ಪ್ರಭಾವವನ್ನು ಕಡಿಮೆ ಮಾಡಲು ನಾನಾ ವಿಧಾನ ಗಳನ್ನು ಬಳಸುವುದುಂಟು. ಮೊದಲನೆಯದು ನೀರಿನಲ್ಲಿ ನೆನೆಸುವುದು ಹಾಗೂ ಹುಳಿಯಿಸುವುದು. ಮರಗೆಣಸನ್ನು ನೆನೆಯಿಸಿ, ಹುಳಿಯಿಸಿದಾಗ ಬ್ಯಾಕ್ಟೀರಿಯಗಳು ಹೈಡ್ರೋಜನ್ ಸಯನೇಡನ್ನು ಲಯಗೊಳಿಸಿ ಅಪಾಯವನ್ನು ನಿವಾರಿಸುತ್ತವೆ. ಎರಡನೆಯ ವಿಧಾನ ಕುದಿಸುವುದು. ಮರಗೆಣಸನ್ನು ಹಾಗೂ ಲೀಮಾ ಅವರೆಯನ್ನು 10-15 ನಿಮಿಷಗಳ ಕಾಲ ಕುದಿಸಿದರೆ ಸಯನೇಡ್ ನಾಶವಾಗುತ್ತದೆ.

ಚೆರ್ರಿ, ಪೀಚ್, ಏಪ್ರಿಕಾಟ್ ಅನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿದರೆ ಅಥವಾ ಹುರಿದರೆ, ಅದರಲ್ಲಿರುವ ಸಯನೇಡ್ ನಾಶವಾಗುತ್ತದೆ. ಸಯನೇಡ್ ಇರುವ ಹಣ್ಣು-ತರಕಾರಿಗಳ ಬೀಜಗಳನ್ನು ಯಾವುದೇ ಕಾರಣಕ್ಕೂ ಹಸಿಯಾಗಿ ತಿನ್ನಬಾರದು. ನೀರಿನಲ್ಲಿ ನೆನೆಯಿಸಿ/ ಹುಳಿಯಿಸಿ/ಕುದಿಸಿ/ಹುರಿದು ಬಳಸಬೇಕು. ಇಲ್ಲಿ ಒಂದು ವಿಶೇಷ ಮಾಹಿತಿ ಯನ್ನು ಗಮನಿಸಬೇಕು. ಸಿಗರೇಟಿನ ಹೊಗೆಯಲ್ಲಿ ಹೈಡ್ರೋಜನ್ ಸಯನೇಡ್ ಇರುತ್ತದೆ. ಹಾಗಾಗಿ ಅತ್ಯಲ್ಪ ಪ್ರಮಾಣದ ಈ ಸಯನೇಡ್ ಮಿದುಳಿಗೆ ಆಕ್ಸಿಜನ್ ಪೂರೈಕೆಯಾಗದಂತೆ ತಡೆಯುತ್ತಾ ಧೂಮಪಾನಿಗಳನ್ನು ನಿಧಾನವಾಗಿ ಕೊಲ್ಲುವ ವಿಷಯವಾಗಿದೆ. ವಾಹನಗಳು ಉಗುವ ಹೊಗೆಯಲ್ಲಿ ಹೈಡ್ರೋಜನ್ ಸಯನೇಡ್ ಇರುತ್ತದೆ. ಹಾಗೆಯೇ ಕೆಲವು ಪ್ಲಾಸ್ಟಿಕ್ಕನ್ನು ಸುಡುವಾಗಲೂ ಹೈಡ್ರೋಜನ್ ಸಯನೇಡ್ ಉತ್ಪಾದನೆಯಾಗಿ ಪ್ರಕೃತಿಯನ್ನು ಸೇರುತ್ತದೆ.

ಜೀವಜಗತ್ತಿನಲ್ಲಿ ಕೆಲವು ಕೀಟಗಳು ಹಾಗೂ ಪ್ರಾಣಿಗಳು ಆತ್ಮರಕ್ಷಣೆಗಾಗಿ ಸಯನೇಡನ್ನು ಪ್ರಯೋಗಿಸುತ್ತವೆ. ಸಹಸ್ರ
ಪಾದಿ/ಸಾವಿರಕಾಲಿನ ಹುಳು/ಒನಕೆ ಬಂಡಿ/ಚರಟದ ಹುಳು ಅಥವ ಕಪ್ಪರಚೆಟ್ಟಿ (ಮಿಲಿಪೀಡ್)ಗಳು ನಮಗೆ ಪರಿಚಿತ ವಾಗಿರುವಂಥವು. ಅವುಗಳಲ್ಲಿ ‘ಅಫೆಲೋರಿಯ’ ಮತ್ತು ‘ಹರಪಾಫೆ’ ಕುಲಕ್ಕೆ ಸೇರಿದಂಥವು ಹೈಡ್ರೋಜನ್
ಸಯನೇಡನ್ನು ಉತ್ಪಾದಿಸಬಲ್ಲವು. ‘ಬರ್ನೆಟ್ ಮಾತ್’ (ಜ಼ೈಗೀನ ಫಿಲಿಪೆಂಡ್ಯುಲೆ) ಲಿನಾಮಾರಿನ್, ಲೋಟಸ್ಟ್ರಾಲಿನ್
ಅನ್ನು ಉತ್ಪಾದಿಸುತ್ತದೆ. ‘ಲೇಡಿ ಬರ್ಡ್ ಬೀಟಲ್’ ಮತ್ತು ‘ಹೆಲಿಕೋನಿಯಸ್ ಚಿಟ್ಟೆ’ಗಳೂ ಸಯನೇಡನ್ನು ಉತ್ಪಾದಿ
ಸಬಲ್ಲವು. ‘ಆರ್ಮಡಿಲ್ಲಿಡಿಯಮ್ ವಲ್ಗೇರ್’ ಎಂಬ ಮರದ ಹೇನು (ವುಡ್ ಲೈಸ್) ಸಯನೇಡ್ ಅನಿಲವನ್ನು ಉತ್ಪಾದಿಸಿ ತನ್ನ ಶತ್ರುಗಳನ್ನು ಕೊಲ್ಲುತ್ತದೆ. ಕೆಲವು ಕಡಲ ಬಸವನಹುಳುಗಳು (ಸೀ ಸ್ಲಗ್ಸ್) ಸಯನೇಡನ್ನು ಉತ್ಪಾದಿಸಿ ಆತ್ಮರಕ್ಷಣೆಯನ್ನು ಮಾಡಿಕೊಳ್ಳಬಲ್ಲವು.

ಹೈಡ್ರೋಸಯನಿಕ್ ಆಸಿಡ್/ಫಾರ್ಮಾನೈಟ್ರೈಲ್ /ಫಾರ್ಮಿಕ್ ಆಸಿಡ್ ನೈಟ್ರೈಲ್/ಅಸಿಡಮ್ ಬೊರಾಸ್ಸಿಕಮ್
ಮುಂತಾದ ಹೆಸರುಗಳಿರುವ ಹೈಡ್ರೋಜನ್ ಸಯನೇಡನ್ನು ಪಿಯರಿ ಮ್ಯಾಕ್ವರ್ (೧೭೧೮-೧೭೮೪) ಎಂಬ ವಿಜ್ಞಾನಿ ಯು ೧೭೫೨ರಲ್ಲಿ ಕಂಡುಹಿಡಿದ. ಹೈಡ್ರೋಜನ್ ಸಯನೇಡಿನಿಂದ ಸೋಡಿಯಂ ಸಯನೇಡ್ ಮತ್ತು ಪೊಟಾಷಿಯಂ ಸಯನೇಡನ್ನು ತಯಾರಿಸಬಹುದು. ಇವನ್ನು ಚಿನ್ನ ಮತ್ತು ಬೆಳ್ಳಿಯನ್ನು ಹೊರತೆಗೆಯಲು ಬಳಸುವುದುಂಟು.

ಹಾಗೆಯೇ ಎಲೆಕ್ಟ್ರೋಪ್ಲೇಟಿಂಗ್ ಪ್ರಕ್ರಿಯೆಯಲ್ಲಿ ಸಯನೇಡ್ ಅಗತ್ಯ. ಸಯನೇಡ್ ಧೂಮದಿಂದ ಕೀಟಗಳನ್ನು ಹಾಗೂ ದಂಶಕಗಳನ್ನು (ರೋಡೆಂಟ್ಸ್) ನಿವಾರಿಸಬಹುದು. ಆದರೆ ಈ ಧೂಮವನ್ನು ಎಚ್ಚರಿಕೆಯಿಂದ ಬಳಸ ಬೇಕಾಗುತ್ತದೆ. ಹೈಡ್ರೋಜನ್ ಸಯನೇಡನ್ನು ಔಷಧವನ್ನಾಗಿ ಬಳಸುವ ಪ್ರಯತ್ನಗಳು ನಡೆದವು. 1970ರ ದಶಕದಲ್ಲಿ ‘ಲೀಟ್ರೈಲ್’ ಎಂಬ ಸಯನೇಡ್ ಘಟಕವನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲೆತ್ನಿಸಿ ಸಂಪೂರ್ಣವಾಗಿ ವಿಫಲ ರಾದರು. ಅತ್ಯಂತ ಉಗ್ರ ರಕ್ತದ ಏರೊತ್ತಡದಲ್ಲಿ, ರಕ್ತದ ಒತ್ತಡವನ್ನು ತಗ್ಗಿಸಲು ‘ಸೋಡಿಯಂ ನೈಟ್ರೊ ಪ್ರುಸೈಡ್’ ಅನ್ನು ಬಳಸುವ ಪ್ರಯತ್ನಗಳು ನಡೆದವು. ಆದರೆ ಈಗ ಉತ್ತಮ ಔಷಧಗಳು ದೊರೆತಿರುವುದರಿಂದ ಈ ಸಯನೇಡ್ ಘಟಕವನ್ನು ಬಳಸುವುದಿಲ್ಲ.

ಹೈಡ್ರೋಜನ್ ಸಯನೇಡ್, ಮಾನವನ ಹತ್ಯೆಗೆ ಹಾಗೂ ಆತ್ಮಹತ್ಯೆಗೆ ಕುಖ್ಯಾತವಾಗಿದೆ. ವಿಶ್ವದ ಮೊದಲನೆಯ
ಮಹಾಯುದ್ಧದಲ್ಲಿ ಫ್ರೆಂಚರು (1916) ಮತ್ತು ಅಮೆರಿಕನ್ನರು (1918) ಸಯನೇಡ್ ಬಾಂಬ್ ಪ್ರಯೋಗಿಸಿದರು. ಹೈಡ್ರೋಜನ್ ಸಯನೇಡ್ ಅನಿಲವು ಗಾಳಿಗಿಂತ ಹಗುರ. ಹಾಗಾಗಿ ವಿಷಾನಿಲವು ಗಾಳಿಯಲ್ಲಿ ಮೇಲೆ ಮೇಲೇರಿ ತೇಲಿಹೋಯಿತು. ನೆಲದ ಮೇಲಿದ್ದ ಸೈನಿಕರನ್ನು ಅಷ್ಟಾಗಿ ಕೊಲ್ಲಲಿಲ್ಲ. ವಿಶ್ವದ ಎರಡನೆಯ ಮಹಾಯುದ್ಧದಲ್ಲಿ ಅಮೆರಿಕದ ಅಧ್ಯಕ್ಷ ಹ್ಯಾರಿ ಟ್ರೂಮನ್, ಜಪಾನನ್ನು ಆಕ್ರಮಿಸಲು ರೂಪಿಸಿದ್ದ ‘ಆಪರೇಷನ್ ಡೌನ್ ಫೌಲ್’ನಲ್ಲಿ ಜಪಾನಿಯರ ಮೇಲೆ ‘ಸಯನೋಜೆನ್ ಕ್ಲೋರೈಡ್’ ಅನ್ನು ಪ್ರಯೋಗಿಸಲು ನಿರ್ಧರಿಸಿದ್ದ. ಆದರೆ ಅಷ್ಟರಲ್ಲಿಯೇ ‘ಮ್ಯಾನ್‌ಹಟ್ಟನ್ ಯೋಜನೆ’ ಫಲಪ್ರದವಾಗಿದ್ದ ಕಾರಣ, ಪರಮಾಣು ಬಾಂಬನ್ನೇ ಜಪಾನಿನ ಹಿರೋಷಿಮ ಮತ್ತು ನಾಗಾಸಾಕಿ ನಗರಗಳ ಮೇಲೆ ಹಾಕಿದ.

ಹಿಟ್ಲರ್ ಹಾಗೂ ಅವನ ಬಳಗದವರು ನಡೆಸಿದ ಸಾಮೂಹಿಕ ಹತ್ಯಾಕಾಂಡಗಳಲ್ಲಿ (ಹಾಲೋಕಾಸ್ಟ್) ಯೆಹೂದಿ
ಗಳನ್ನು ಕೊಲ್ಲಲು ಹೈಡ್ರೋಜನ್ ಸಯನೇಡನ್ನು ಪರಿಣಾಮಕಾರಿಯಾಗಿ ಬಳಸಿದರು. ಥರ್ಡ್ ರೀಚ್ ಸದಸ್ಯರಾದ ಗೋಬೆಲ್ಸ್, ಹಿಮ್ಲರ್, ಗೋರಿಂಗ್ ಮುಂತಾದವರು ಆತ್ಮಹತ್ಯೆಯನ್ನು ಮಾಡಿಕೊಳ್ಳಲು ದ್ರವರೂಪದ ಹೈಡ್ರೋಜನ್
ಸಯನೇಡನ್ನು ಉಪಯೋಗಿಸಿದ್ದು ಒಂದು ದೊಡ್ಡ ವಿಪರ್ಯಾಸವಾಗಿದೆ. ಯಾವ ಸಯನೇಡಿನಿಂದ ಸಾವಿರಾರು
ಜನರನ್ನು ಕೊಂದರೋ, ಅದೇ ಸಯನೇಡಿಗೆ ಅವರೂ ಬಲಿಯಾದರು. ಗಯಾನ ದೇಶದ ಜೋನ್ಸ್ ಟೌನಿನ ‘ಪೀಪಲ್ಸ್
ಟೆಂಪಲ್ ಕಲ್ಟ್’ ಸಮುದಾಯಕ್ಕೆ ಸೇರಿದ 900 ಜನರು ಸಯನೇಡ್ ಬೆರೆತ ಪಾನೀಯವನ್ನು ಸೇವಿಸಿ ಮರಣಿಸಿದರು.

ಕೆಲವು ಪ್ಲಾಸ್ಟಿಕ್ಕನ್ನು ಸುಟ್ಟಾಗ ಹೈಡ್ರೋಜನ್ ಸಯನೇಡ್ ಉತ್ಪಾದನೆಯಾಗುತ್ತದೆ. ಇಂಥ ಪ್ರಕರಣಗಳಲ್ಲಿ 119
ಜನರು ಪ್ಯಾರಿಸ್ಸಿನಲ್ಲಿ (1973) ಹಾಗೂ 303 ಯಾತ್ರಿಗಳು ಸೌದಿ ಅರೇಬಿಯಾದ ರಿಯಾದ್‌ನಲ್ಲಿ (1990) ಸತ್ತರು.

ಸಯನೇಡ್ ಒಂದು ಎರಡಲುಗಿನ ಖಡ್ಗ !

ಇದನ್ನೂ ಓದಿ: Rahul Gandhi Marriage: ಸಂಸದೆ ಪ್ರಣಿತಿ ಶಿಂಧೆ ಜತೆ ರಾಹುಲ್‌ ಗಾಂಧಿ ಮದುವೆ? ಸೋಶಿಯಲ್‌ ಮೀಡಿಯಾದಲ್ಲಿ ಹಸಿ-ಬಿಸಿ ಚರ್ಚೆ