ನಿಲುವುಗನ್ನಡಿ
ಯಗಟಿ ರಘು ನಾಡಿಗ್
ಅನುದಿನವೂ ಬೆಳಕಿನ ಸಹಜ ವಾತಾವರಣದಲ್ಲಿ ಇದ್ದವರನ್ನು ಕಗ್ಗತ್ತಲ ಕೋಣೆಗೆ ಒಮ್ಮೆ ಬಿಟ್ಟು ನೋಡಿ- ಕತ್ತಲಿಗೆ ಹೊಂದಿ ಕೊಳ್ಳಲಾಗದೆ ಅವರು ಕುಸಿದೇ ಹೋಗುತ್ತಾರೆ. ಅನುಗಾಲವೂ ಜತೆಯಲ್ಲಿದ್ದು ನಮ್ಮ ವ್ಯಕ್ತಿತ್ವದ ಒಂದು ಭಾಗವೇ ಆಗಿರುವ ಅಮೂಲ್ಯ ವಸ್ತು- ವಿಷಯವಾಗಲಿ, ವ್ಯಕ್ತಿ-ಶಕ್ತಿಯಾಗಲಿ ಹೀಗೆ ನಮ್ಮನ್ನು ಥಟ್ಟನೆ ಬಿಟ್ಟುಹೋದರೆ ಏನಾಗುತ್ತದೆ? ತುಂಬಿದ ವಾತಾವರಣದಲ್ಲಿದ್ದೂ ಒಂಥರಾ ಶೂನ್ಯ ನಮ್ಮನ್ನು ಆವರಿಸುತ್ತದೆ.
ಕನ್ನಡ ಚಿತ್ರರಸಿಕರಿಗೆ ಈಗ ಒದಗಿರುವ ಪರಿಸ್ಥಿತಿಯೂ ಅಂಥದೇ. ದಶಕಗಳಷ್ಟು ಕಾಲ ಬೆಳ್ಳಿತೆರೆಯಲ್ಲಿ ರಾರಾಜಿಸಿದ ಪದ್ಮಭೂಷಣ ಡಾ.ರಾಜಕುಮಾರ್ ಎಂಬ ದಿವ್ಯಚೇತನವಿಲ್ಲದೆ ಏನೋ ಒಂದು ರೀತಿಯ ಖಾಲಿಖಾಲಿ ಭಾವ…. ‘ರಾಜ್ಕುಮಾರ್’, ‘ಅಣ್ಣಾವ್ರು’ ಎಂದೆಲ್ಲ ಬಗೆಬಗೆಯಲ್ಲಿ ಕರೆಸಿಕೊಂಡ ಈ ಕಲಾವಿದ ಮತ್ತು ಮಾನವತಾವಾದಿಗೆ ಅವರ
ಹೆತ್ತವರು ಅದ್ಯಾವ ಗಳಿಗೆಯಲ್ಲಿ ‘ಮುತ್ತುರಾಜ’ ಎಂದು ಹೆಸರಿಟ್ಟರೋ ಗೊತ್ತಿಲ್ಲ. ಚಿತ್ರನಿರ್ದೇಶಕ ಎಚ್.ಎಲ.ಎನ್. ಸಿಂಹರವರು ‘ದೇವರಿಗೇ ಕಣ್ಣುಕೊಡುವ’ ಕಣ್ಣಪ್ಪನ ಪಾತ್ರವನ್ನು ಅದ್ಯಾವ ಗಳಿಗೆಯಲ್ಲಿ ಇವರಿಗೆ ತೊಡಿಸಿದರೋ ಗೊತ್ತಿಲ್ಲ. ಈ ಎರಡೂ ವಿದ್ಯಮಾನಗಳಿಗೆ ಅಣ್ಣಾವ್ರು ‘ಅನ್ವರ್ಥ’ರೇ ಆಗಿಹೋದರು, ‘ಪರ್ಯಾಯಪದ’ವೇ ಆಗಿಬಿಟ್ಟರು.
ಏಕೆಂದರೆ, ಬದುಕಿನುದ್ದಕ್ಕೂ ಅವರು ಆಡಿದ್ದು ‘ಮುತ್ತಿನಂಥ’ ಮಾತುಗಳನ್ನೇ; ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ‘ದೇವರಿಗೆ’ ಕಣ್ಣುಕೊಟ್ಟು ‘ಚಿತ್ರರಂಗ’ ಪ್ರವೇಶಿಸಿದ ಅಣ್ಣಾವ್ರು, ಈ ಬದುಕೆಂಬ ‘ನಾಟಕರಂಗ’ದಿಂದ ನಿರ್ಗಮಿಸುವಾಗಲೂ ಓರ್ವ ‘ಅಭಿಮಾನಿ ದೇವರಿಗೆ’ ಕಣ್ಣುಕೊಟ್ಟೇ ನಿರ್ಗಮಿಸಿದರು.
ಇಂಥ ಅನರ್ಘ್ಯರತ್ನ ದೂರವಾಗಿರುವ ಕಹಿಸತ್ಯವನ್ನು ಅರಗಿಸಿಕೊಳ್ಳುವುದು ಅಭಿಮಾನಿಗಳ ಪಾಲಿಗೆ ಕಷ್ಟಸಾಧ್ಯವೇ ಸರಿ. ಅಣ್ಣಾವ್ರು ಚಿತ್ರರಸಿಕರಿಗೆ ಈ ಪರಿಯಲ್ಲಿ ಆಪ್ತರಾದದ್ದು ಹೇಗೆ? ತಾವು ನಿರ್ವಹಿಸಿದ ವೈವಿಧ್ಯಮಯ ಪಾತ್ರಗಳಿಂದಲೇ ಅಥವಾ ತಮ್ಮ ಮಾತು-ವರ್ತನೆಗಳಿಂದಲೇ? ಎಂದೊಮ್ಮೆ ಪ್ರಶ್ನಿಸಿಕೊಂಡರೆ, ಎರಡಕ್ಕೂ ‘ಹೌದು’ ಎನ್ನಬೇಕಾಗುತ್ತದೆ.
ಏಕೆಂದರೆ ಅವರು ನಿರ್ವಹಿಸದ ಪಾತ್ರಗಳೇ ಇಲ್ಲ. ‘ಮಂತ್ರಾಲಯ ಮಹಾತ್ಮೆ’ ಚಿತ್ರದಲ್ಲಿನ ಶ್ರೀ ರಾಘವೇಂದ್ರ ಸ್ವಾಮಿಗಳ
ಪಾತ್ರ, ‘ಬಡವರ ಬಂಧು’ವಿನ ಹೋಟೆಲ್ ಸಪ್ಲೈಯರ್, ‘ಕಸ್ತೂರಿ ನಿವಾಸ’ದ ತ್ಯಾಗಿ, ‘ಚಲಿಸುವ ಮೋಡಗಳು’ ಚಿತ್ರದ
ಲಾಯರ್, ‘ಆಪರೇಷನ್ ಡೈಮಂಡ್ ರ್ಯಾಕೆಟ್’ನ ಜೇಮ್ಸ್ ಬಾಂಡ್, ‘ಜ್ವಾಲಾಮುಖಿ’ಯ ಪತ್ರಕರ್ತ, ‘ಕಾಮನ ಬಿಲ್ಲು’ವಿನ ಬ್ರಾಹ್ಮಣ-ರೈತ, ‘ಭಾಗ್ಯದ ಲಕ್ಷ್ಮೀ ಬಾರಮ್ಮ’ದ ನಿರುದ್ಯೋಗಿ, ‘ಗಿರಿಕನ್ಯೆ’ಯ ಕಾರ್ಮಿಕ, ‘ಕೆರಳಿದ ಸಿಂಹ’ ಮತ್ತು ‘ಆಕಸ್ಮಿಕ’ ಚಿತ್ರಗಳ ಪೊಲೀಸ್ ಅಧಿಕಾರಿ, ‘ಕವಿರತ್ನ ಕಾಳಿದಾಸ’ದ ಕುರುಬರ ಪಿಳ್ಳೆ ಮತ್ತು ಕಾಳಿದಾಸದಂಥ ವೈವಿಧ್ಯಮಯ ಪಾತ್ರ ಗಳನ್ನು ಅಣ್ಣಾವ್ರು ಅನನ್ಯವಾಗಿ ಪೋಷಿಸಿದ್ದು, ‘ಬಭ್ರುವಾಹನ’ ಚಿತ್ರದ ಅರ್ಜುನ-ಬಭ್ರುವಾಹನ ಪಾತ್ರಗಳ ಆಳ ಹಾಗೂ ವಿಸ್ತಾರಗಳಿಗೆ ಸಾಕ್ಷಿ ಯಾಗಿದ್ದು- ಹೀಗೆ ಯಾವುದನ್ನು ಹೆಸರಿಸುವುದು, ಯಾವು ನ್ನು ಬಿಡುವುದು? ವ್ಯಕ್ತಿನಿರ್ಮಿತ ಸಮಾಜದಲ್ಲಿ ಇರ ಬಹುದಾದ ಇಂಥ ವಿಭಿನ್ನ ವ್ಯಕ್ತಿಗಳು ಮತ್ತು ವ್ಯಕ್ತಿತ್ವಗಳನ್ನು ರಾಜಣ್ಣ ಸಮರ್ಥವಾಗಿ ಪ್ರತಿನಿಧಿಸಿದ್ದಕ್ಕೇ ಆಯಾ ಕೆಲಸವನ್ನು
ನಿರ್ವಹಿಸುವ ‘ವೃತ್ತಿಪರರು’ ಅಣ್ಣಾವ್ರಲ್ಲಿ ತಮ್ಮನ್ನು ಕಂಡುಕೊಳ್ಳಲು ಮುಗಿಬಿದ್ದರು.
ಪರಿಣಾಮವಾಗಿ, ರಾಜಣ್ಣ ಯಶಸ್ವಿಯಾದರು. ಇಷ್ಟೇ ಆಗಿದ್ದಿದ್ದರೆ, ಇಂಥದೇ ಪಾತ್ರಗಳನ್ನು ನಿರ್ವಹಿಸಿದ ಇನ್ನಿತರ ನಟರಂತೆ, ಪರಭಾಷಾ ಕಲಾವಿದರಂತೆ ಅವರೂ ಒಬ್ಬ ‘ಸ್ಟಾರ್’ ಆಗಿ ತಮ್ಮನ್ನು ಬಿಂಬಿಸಿಕೊಳ್ಳಬಹುದಿತ್ತು. ಆದರೆ, ಅಣ್ಣಾವ್ರ ಹೃದಯ ಮಿಡಿದಿದ್ದು ಸರಳತೆ-ಸದ್ವರ್ತನೆಯೆಡೆಗೆ, ಸದಾಶಯದಿಂದ ಕೂಡಿದ ಮಾತುಗಳೆಡೆಗೆ. ಹೀಗಾಗಿ, ನೀರೊಳಗಿದ್ದೂ ನೀರಿಗೆ ಅಂಟಿಕೊಳ್ಳದ ತಾವರೆ ಎಲೆಯಂತೆ, ರಂಜಕ-ಭ್ರಾಮಕ-ಆಡಂಬರದ ಚಿತ್ರಜಗತ್ತಿನೊಳಗಿದ್ದೂ ಅವರು ಸರಳತೆಗೆ ಅನ್ವರ್ಥ ವಾದರು.
ಚಿತ್ರಪ್ರೇಮಿಗಳನ್ನು ಅಗಲುವುದಕ್ಕೆ ಕೆಲವೇ ದಿನ ಮುಂಚೆ, ತಮ್ಮ ಪುತ್ರ ಪುನೀತ್ ರಾಜ್ಕುಮಾರ್ ಅವರ ಚಿತ್ರವೊಂದರ ಚಿತ್ರೀಕರಣದ ವೇಳೆ ಏರ್ಪಡಿಸಲಾಗಿದ್ದ ಕಬಡ್ಡಿ ಆಟವನ್ನು ರಾತ್ರೋರಾತ್ರಿ ಎದ್ದು ಹೋಗಿ ನೋಡಿ, ಸಂಭ್ರಮಿಸಿ ಅಲ್ಲೇ ಕಾಫಿ ಹೀರಿದ್ದು, ಆಸ್ಪತ್ರೆಯಿಂದ ಹೊರಬರುವಾಗ ಭದ್ರತಾ ಸಿಬ್ಬಂದಿಯೊಬ್ಬರ ಕ್ಯಾಪ್ ತೆಗೆದುಕೊಂಡು ಧರಿಸಿ ಪುಟ್ಟಮಗುವಿನಂತೆ ನಲಿದದ್ದು ಇವೆಲ್ಲ ಇದಕ್ಕೆ ನಿದರ್ಶನಗಳು. ತಾವೊಬ್ಬ ಮಹಾನ್ ವ್ಯಕ್ತಿ ಮತ್ತು ಶಕ್ತಿ ಎಂಬ ಭಾವನೆಯನ್ನು ಅವರು ತಲೆಯಲ್ಲಿ ತುಂಬಿಕೊಂಡಿದ್ದಿದ್ದರೆ ಇದು ಸಾಧ್ಯವಾಗುತ್ತಿತ್ತೇ? ವಯಸ್ಸಾಗುತ್ತ ಹೋದಂತೆ, ವೃದ್ಧಾಪ್ಯ ಆವರಿಸಿದಂತೆ ಮನುಷ್ಯ ಮತ್ತೆ ಮಗುವಾಗುತ್ತಾನೆ ಎನ್ನುತ್ತಾರೆ ಬಲ್ಲವರು.
ಅಣ್ಣಾವ್ರು ಮಾಗುತ್ತ ಹೋದಂತೆ ಮಹಾಜ್ಞಾನಿಯಂತೆ ಪೋಸ್ ಕೊಡದೆ ಮಗುವಿನಂತೆ ನಡೆದುಕೊಳ್ಳುತ್ತಿದ್ದುದು, ಸರಳತೆಯ ಸಾಕಾರಮೂರ್ತಿಯಾಗಿದ್ದುದು ‘ಅಭಿಮಾನಿ ದೇವರ’ ಹೃದಯಗಳಲ್ಲಿ ಅವರು ಚಿರಸ್ಥಾಯಿಯಾಗಲು ಕಾರಣವಾಯಿತು ಎನ್ನಬಹುದಲ್ಲವೇ? ಅಣ್ಣಾವ್ರ ಮುಗ್ಧತೆ ಮತ್ತು ಸರಳತೆಗೆ ದ್ಯೋತಕವಾಗಬಲ್ಲ ಮತ್ತೊಂದು ಘಟನೆ ಇಲ್ಲಿದೆ- ಖ್ಯಾತ ಕಲಾವಿದ ಮೋಹನ್ ವೆರ್ಣೇಕರ್ ಅವರದ್ದು ಚುಕ್ಕಿಚಿತ್ರಗಳ ರಚನೆಯಲ್ಲಿ ಎತ್ತಿದ ಕೈ.
ಅವರ ಛಾಯಾಗ್ರಾಹಕ ಮಿತ್ರರೊಬ್ಬರು ‘ಬನ್ನಿ, ಅಣ್ಣಾವ್ರ ಪರಿಚಯ ಮಾಡಿಸ್ತೇನೆ’ ಅಂತ ಮೋಹನ್ರನ್ನು ಅಣ್ಣಾವ್ರ ಮನೆಗೆ ಕರೆದುಕೊಂಡು ಹೋದರು. ‘ಚುಕ್ಕಿಚಿತ್ರ’ ಎಂಬ ಕಲಾಪ್ರಕಾರದ ಕುರಿತು ಕೇಳಿಸಿಕೊಂಡ ಅಣ್ಣಾವ್ರು, ‘ಹೌದೇ? ಆ ರೀತೀನೂ ಒಂದು ಕಲೆ ಇದೆಯೇ?’ ಎಂದು ಆಶ್ಚರ್ಯಚಕಿತರಾದಾಗ, ಮೋಹನ್ ತಮ್ಮ ಹೆಗಲುಚೀಲವೆಂಬ ಬತ್ತಳಿಕೆಗೆ ಕೈಹಾಕಿ ತಾವು ರಚಿಸಿದ್ದ ರಾಜಣ್ಣನ ಚುಕ್ಕಿಚಿತ್ರವನ್ನು ತೆಗೆದು ಅವರ ಕೈಗಿತ್ತರು.
ನೋಡನೋಡುತ್ತಿದ್ದಂತೆಯೇ, ‘ಪಾರ್ವತೀ… ಪಾರ್ವತೀ ಇಲ್ಲಿ ನೋಡು’ ಎಂದು ಪುಟ್ಟ ಮಗುವಿನಂತೆ ಸಂಭ್ರಮಿಸಿ ಚಿತ್ರವನ್ನು ಪತ್ನಿ ಪಾರ್ವತಮ್ಮ ನವರಿಗೆ ತೋರಿಸಿದ ಅಣ್ಣಾವ್ರು, ಅಲ್ಲಿಯೇ ಇದ್ದ ಸ್ಕೆಚ್ಪೆನ್ ಎತ್ತಿಕೊಂಡು, ‘ನಿಮ್ಮ ಈ ಕಲೆ ಜೀವಂತ ವಾಗಿದೆ’ ಎಂಬ ‘ಷರಾ’ವನ್ನೂ ಬರೆದರು. ಈ ಸಂಗತಿಯನ್ನು ಮೋಹನ್ ಹಂಚಿಕೊಳ್ಳುತ್ತ, ‘ಒಂದು ಕಲೆ ಮತ್ತೊಂದು ಕಲೆಯನ್ನು ಗೌರವಿಸುವ ಪರಿ ಇದೇ ಇರಬಹುದೇ?’ ಎನ್ನುವಾಗ ಅವರ ಕಣ್ಣುಗಳು ಕೊಳಗಳಾಗಿದ್ದವು. ಈ ಬರಹದೊಂದಿಗೆ ಇರುವುದು ಆ ಅಪರೂಪದ ಚುಕ್ಕಿಚಿತ್ರವೇ..!
ನಟನೆ-ಸದ್ವರ್ತನೆ-ಸನ್ನುಡಿಗಳ ಜತೆಗೆ ಅಣ್ಣಾವ್ರ ಪ್ರತಿಭೆಗೆ ಹಲವು ಮಗ್ಗುಲುಗಳಿದ್ದವು. ಗೀತಗಾಯನದಲ್ಲಿ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನು ತಂದಿತ್ತ ‘ಜೀವನಚೈತ್ರ’ ಚಿತ್ರದ ‘ನಾದಮಯ ಈ ಲೋಕವೆ’ ಗೀತೆಗೆ ವಾಸ್ತವವಾಗಿ ರಾಗ ಸಂಯೋಜಿಸಿದ್ದು ಸ್ವತಃ ಅಣ್ಣಾವ್ರೇ, ಸ್ವರಪ್ರಸ್ತಾರವನ್ನು ಮಾತ್ರ ಸಂಗೀತ ನಿರ್ದೇಶಕರು ಹಾಕಿದ್ದು ಎಂಬ ವಿಷಯವಾಗಲಿ, ಅವರು ಸಿತಾರ್ ವಾದ್ಯವನ್ನು ನುಡಿಸಬಲ್ಲವರಾಗಿದ್ದರು ಎಂಬ ಸಂಗತಿಯಾಗಲಿ ಹೊರಜಗತ್ತಿಗೆ ತಿಳಿದದ್ದು ಕಮ್ಮಿ.
‘ಬಭ್ರುವಾಹನ’ ಚಿತ್ರದ ‘ಆರಾಧಿಸುವೆ ಮದನಾರಿ’ ಗೀತೆಯ ಶಾಸ್ತ್ರೀಯ ಮಟ್ಟು ಕೇಳಿ ಮೂಗಿನ ಮೇಲೆ ಬೆರಳಿಡದ ಸಂಗೀತ ಗಾರರಿಲ್ಲ. ‘ಕವಿರತ್ನ ಕಾಳಿದಾಸ’ ಚಿತ್ರದ ಸಂಸ್ಕೃತ ಶ್ಲೋಕಗಳನ್ನಾಗಲಿ, ‘ಎರಡು ಕನಸು’, ‘ಅನುರಾಗ ಅರಳಿತು’ ಚಿತ್ರ ಗಳಲ್ಲಿನ ಅವರ ಇಂಗ್ಲಿಷ್ ಸಂಭಾಷಣೆಯನ್ನಾಗಲಿ ಕೇಳಿದವರು, ಅಣ್ಣಾವ್ರು ಓದಿದ್ದು ಕೇವಲ ಮೂರನೆಯ ತರಗತಿಯವರೆಗೆ ಎಂಬ ಸಂಗತಿಯನ್ನು ನಂಬಲು ಹಿಂಜರಿಯಬಹುದು..!
ಕೈಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿದ ಮಾತ್ರಕ್ಕೆ ತಾವೊಬ್ಬ ಸೂಪರ್ಸ್ಟಾರ್ ಎಂದು ಭ್ರಮಿಸಿ ಸಂದರ್ಶನಗಳಲ್ಲಿ ಗತ್ತಿನ ಪೋಸ್ ಕೊಡುವ ಕೆಲ ನಟ-ನಟಿಯರನ್ನು ಕಂಡಾಗ ತಮಾಷೆ ಎನಿಸುತ್ತದೆ. ಹೀಗೆ ವರ್ತಿಸುವ ಮೂಲಕ ಇವರೆಲ್ಲ ತಮ್ಮ ಕಲಿಕೆಗೊಂದು ಪೂರ್ಣವಿರಾಮ ಹಾಕಿಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆ ಕಾಡುತ್ತದೆ. ರಾಜಣ್ಣನವರೂ ಇದೇ ರೀತಿ ಪೋಸ್
ಕೊಡುವವರಾಗಿದ್ದಿದ್ದರೆ, ಪ್ರಾಯಶಃ ಅವರು ಜನರ ಮನಸ್ಸಲ್ಲಿ ನಿಲ್ಲುತ್ತಿರಲಿಲ್ಲವೇನೋ. ಆದರೆ ಅವರು ಕಾಲ್ಷೀಟ್ ಕೊಟ್ಟಿದ್ದು ಕೇವಲ ಚಿತ್ರಗಳಿಗಷ್ಟೇ ಅಲ್ಲ, ನಿರಂತರ ಕಲಿಕೆಗೂ.
ಎಷ್ಟೇ ಎತ್ತರಕ್ಕೇರಿದ್ದರೂ ತಾವಿನ್ನೂ ವಿದ್ಯಾರ್ಥಿ ಎಂಬ ವಿನಯ ಅವರಲ್ಲಿ ಮನೆಮಾಡಿದ್ದರಿಂದಲೇ, ‘ಹೀರೋ’ ಆಗಿ ಚಿತ್ರರಂಗ ಪ್ರವೇಶಿಸಿದ ಅವರು ಕೊನೆಯ ಚಿತ್ರದವರೆಗೂ ‘ಹೀರೋ’ ಆಗಿಯೇ ವಿಜೃಂಭಿಸಲು, ಜನರ ಹೃದಯಗಳಲ್ಲಿ ‘ಹೀರೋಚಿತವಾಗಿ’ (ವೀರೋಚಿತವಾಗಿ) ನೆಲೆಯೂರಲು ಸಾಧ್ಯವಾಯಿತು.
ರಾಜಣ್ಣ ಇಂದು ನಮ್ಮೊಂದಿಗಿಲ್ಲ. ಆದರೆ ಈ ಕಹಿಸತ್ಯವನ್ನು ಅರಗಿಸಿಕೊಳ್ಳಲಾಗದಂಥ ಮನಸ್ಥಿತಿ ಚಿತ್ರರಸಿಕರದ್ದು. ಏಕೆಂದರೆ, ‘ಬೆಳಗ್ಗೆ ಹೊರಹೋದ ಮಗ ಇನ್ನೂ ಏಕೆ ಹಿಂದಿರುಗಿಲ್ಲ?’ ಎಂದು ಮನೆಬಾಗಿಲ ಕಟಾಂಜನದ ಬಳಿ ನಿಂತು, ನೋಡಿನೋಡಿ ಒಳಬಂದು ಕೂರುವ ಮಮತಾಮಯಿ ತಾಯಿಯಂತೆ ಬಹಳಷ್ಟು ಚಿತ್ರರಸಿಕರು ಅವರನ್ನು ಇದಿರು ನೋಡುತ್ತಿದ್ದಾರೆ. ತನ್ನ ಆರಾಧ್ಯದೈವ ಶ್ರೀರಾಮ ಇನ್ನೂ ಏಕೆ ಬರಲಿಲ್ಲವೆಂದು ಕಾಯುವ ‘ಶಬರಿ’ಯ ನಿರೀಕ್ಷೆ ಹಲವರ ಕಣ್ಣಲ್ಲಿ. ಭಾರತೀಯರು ಪುನರ್ಜನ್ಮದಲ್ಲಿ ನಂಬಿಕೆ ಇಟ್ಟಿರುವ ಜನ. ಮೇಲಾಗಿ, ಶ್ರೀ ಆದಿಶಂಕರಾಚಾರ್ಯರು ‘ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ’ ಎಂದಿದ್ದಾರೆ.
ಈ ಜನನಂಬಿಕೆ ಮತ್ತು ಆಚಾರ್ಯೋಕ್ತಿಗಳು ನಿಜವಾಗಲಿ. ರಾಜಣ್ಣನವರ ‘ಮನೆ’ ಇರುವುದು ಇ; ಅವರು ಈಗ ಅಲ್ಲಿಗೆ ಹೋಗಿರುವುದು ‘ಸುಮ್ಮನೆ’…! ‘ಸಾವಿರ ಜನುಮದ ಪುಣ್ಯವೊ ಏನೋ ನಾನೀ ನಾಡಲಿ ಜನಿಸಿರುವೇ’ ಎಂದು ‘ಮಯೂರ’ ಚಿತ್ರದಲ್ಲಿ ತಮ್ಮ ‘ಜನ್ಮಕಾರಣ’ ನೀಡಿದ್ದ ಅಣ್ಣಾವ್ರು, ಅದರ ಮುಂದುವರಿದ ಭಾಗವೋ ಎಂಬಂತೆ ‘ಮುಂದಿನ ನನ್ನ ಜನ್ಮ ಬರೆದಿಟ್ಟಾನಂತೆ ಬ್ರಹ್ಮ ಇಲ್ಲಿಯೇ ಇಲ್ಲಿಯೇ, ಎಂದಿಗೂ ನಾನಿಲ್ಲಿಯೇ’ ಎಂದು ‘ಆಕಸ್ಮಿಕ’ ಚಿತ್ರದಲ್ಲಿ ತಮ್ಮ ಪುನರ್ಜನ್ಮದ
ಭವಿಷ್ಯವನ್ನೂ ನುಡಿದಿದ್ದಾರೆ.
ಅವರ ಭವಿಷ್ಯ ಸುಳ್ಳಾಗದಿರಲಿ, ಪುನರ್ಜನ್ಮ ತಡವಾಗದಿರಲಿ…..