Monday, 9th December 2024

Dr Sadhanshree Column: ಸುಖ ನಿದ್ದೆಯ ಸಾಧನೆಗೆ ಹೀಗಿರಲಿ ನಿಮ್ಮ ಜೀವನ !

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಡಾ.ಸಾಧನಶ್ರೀ

ನಿಮಗಿದು ಗೊತ್ತೇ? ಮುಂಜಾನೆ ಏಳುವುದು ಒಂದು ಜೈವಿಕ ಕ್ರಿಯೆ. ಸಹಜವಾಗಿ ಎಚ್ಚರವಾಗುವುದು ಒಬ್ಬ ಸ್ವಸ್ಥನ
ಲಕ್ಷಣವಾದರೆ, ಮುಂಜಾನೆಯಾದ ಮೇಲೂ ಸಹ ಸಹಜವಾಗಿ ಎಚ್ಚರವಾಗದಿರುವುದು ಒಂದು ರೋಗ. ಅದಕ್ಕೆ ಆಯುರ್ವೇದದ ಗ್ರಂಥಗಳಲ್ಲಿ ‘ಕೃಚ್ಛ್ರಾ ವಬೋಧ’ ಎಂಬ ಹೆಸರಿದೆ. ಚರಕಾಚಾರ್ಯರು ಹೇಳುತ್ತಾರೆ, ‘ಒಬ್ಬ ಸ್ವಸ್ಥನಿಗೆ ಈ ಲಕ್ಷಣ ಗಳಿರಬೇಕು – ನಿದ್ರಾಲಾಭೋ ಯಥಾಕಾಲಮ್ – ಸರಿಯಾದ ಸಮಯಕ್ಕೆ ನಿದ್ದೆ ಬರಬೇಕು,
ವೈಕಾರಿಕಾಣಾಂ ಚ ಸ್ವಪ್ನಾನಾಂ ಅದರ್ಶನಮ್ – ವಿಕೃತವಾದ ಸ್ವಪ್ನಗಳು ಬೀಳದಿರುವುದು ಮತ್ತು ಸುಖೇನ ಚ ಪ್ರತಿಬೋಧನಮ್ – ಸುಖವಾಗಿ, ಸಹಜವಾಗಿ ಎಚ್ಚರವಾಗಬೇಕು’ ಎಂದು.

ಸಹಜವಾಗಿ ಏಳುವುದು ಎಂದರೆ ಈ ರೀತಿ: ಏಳಲು ಯಾವುದೇ ಬಾಹ್ಯ ಪ್ರಚೋದನೆಯನ್ನು ಬಳಸುವ ಅವಶ್ಯಕತೆ ಇಲ್ಲದಿರುವುದು, ಹಿಂದಿನ ದಿನ ನಾವು ಸೇವಿಸಿದ ಆಹಾರ ಪೂರ್ಣ ಜೀರ್ಣಗೊಂಡು ಎದ್ದ ಕೂಡಲೇ ನೈಸರ್ಗಿಕ ಕ್ರಿಯೆಗಳಾದ ಮಲ ಮತ್ತು ಮೂತ್ರಗಳ ಪ್ರವೃತ್ತಿಯಾಗುವುದು. ಶರೀರದಲ್ಲಿ ಲಘುತ್ವ, ಇಂದ್ರಿಯಗಳಲ್ಲಿ ಚುರುಕುತನ, ಇಡೀ ದಿನ ಆಲಸ್ಯ-ಅಜೀರ್ಣ-ಮೈ ಭಾರ ಆಕಳಿಕೆಗಳಿಲ್ಲದೆ ಉತ್ಸಾಹದಿಂದ ಇರುವ ಸಾಮರ್ಥ್ಯವಿರುವುದು. ನಿದ್ದೆಯ ಈ ಲಕ್ಷಣಗಳನ್ನು ನಾವು ಸಾಧಿಸಬೇಕಾದರೆ ನಮ್ಮ ದಿನಚರಿಯಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ.

ಆಯುರ್ವೇದದ ಪ್ರಕಾರ ಹೇಳುವ, ಒಬ್ಬ ಸ್ವಸ್ಥನಿಗೆ ಬರಬೇಕಾದ ನಿದ್ದೆಯನ್ನು ಹಾಗೂ ನೂರು ಕಾಲ ನಮ್ಮನ್ನು ರಕ್ಷಿಸುವ ರೀತಿಯ ನಿದ್ದೆಯನ್ನು ನಾವು ಗಳಿಸಬೇಕಾದರೆ ನಮ್ಮ ಆಹಾರ-ವಿಹಾರ-ವಿಚಾರಗಳಲ್ಲಿ ಯಾವ
ರೀತಿಯ ಬದಲಾವಣೆಗಳನ್ನು ತಂದುಕೊಳ್ಳಬೇಕೆಂದು ಈ ಸಂಚಿಕೆಯಲ್ಲಿ ಚರ್ಚಿಸೋಣ.

ಮೊಟ್ಟ ಮೊದಲಿಗೆ ಸಿಹಿಯಾದ ರಾತ್ರಿಯ ನಿದ್ರೆಗೆ ಬೆಳಗ್ಗೆ ಬೇಗ ಏಳುವುದು ಮೊದಲನೆಯ ಸೋಪಾನ. ಬೇಗ
ಏಳುವುದು ಎಂದರೆ ಸೂರ್ಯೋದಯಕ್ಕೂ ಕನಿಷ್ಠ ಒಂದೂವರೆ ಗಂಟೆ ಮುಂಚೆ ಏಳುವುದು. ಸುಖ ನಿzಯ
ಸಾಧನೆಗೆ ಬೆಳಗ್ಗೆ ಬೇಗ ಏಳುವುದರಷ್ಟೇ ಮುಖ್ಯ, ಎದ್ದ ಕೂಡಲೇ ಸಹಜವಾಗಿ ಮಲಮೂತ್ರದ ವಿಸರ್ಜನೆ ಯಾಗುವುದು. ನಮ್ಮ ಮಲ ವಿಸರ್ಜನೆಗೂ ನಮ್ಮ ಜಠರಾಗ್ನಿಯ ಕ್ಷಮತೆಗೂ ನೇರವಾದ ಸಂಬಂಧವಿದೆ. ಮಲದ ವಿಸರ್ಜನೆಯಾಗಲಿಲ್ಲವೆಂದರೆ ನಾವು ಸೇವಿಸುವ ಆಹಾರವನ್ನು ಪಚನ ಮಾಡುವ ಅಗ್ನಿಯ ಚೋದನೆ ಆಗುವು ದಿಲ್ಲ. ಇದಾಗದಿದ್ದರೆ ದೇಹದ ಅವಯವಗಳು ಸಹ ತಮ್ಮ ಕಾರ್ಯ ಕ್ರಮತೆಯನ್ನು ಕಳೆದುಕೊಂಡು ಇದರ ದುಷ್ಪರಿಣಾಮ ನಿದ್ದೆಯ ಮೇಲೆ ಆಗುತ್ತದೆ.

ಮಲವಿಸರ್ಜನೆ ಆಗದಿರುವುದು ಒಂದು ರೀತಿಯ ಬೂದಿ ಮುಚ್ಚಿದ ಕೆಂಡದ ಹಾಗೆ. ಕೆಂಡವನ್ನು ಪ್ರಜ್ವಲಿಸಲು ಹೇಗೆ ಬೂದಿಯನ್ನು ತೆಗೆಯಬೇಕೊ ಹಾಗೆಯೇ ನಮ್ಮನ್ನು ಕಾಪಾಡುತ್ತಿರುವ ನಮ್ಮ ಅಂತರಾಗ್ನಿಯನ್ನು ಉದ್ದೀಪನ ಗೊಳಿಸಬೇಕಾದರೆ ಬೆಳಗ್ಗೆ ಎದ್ದ ಕೂಡಲೇ ಮಲವಿಸರ್ಜನೆ ಆಗುವುದು ಅತಿ ಮುಖ್ಯ. ಇದರಿಂದ ನಮ್ಮ ಇಡೀ ಶರೀರದ ಕಾರ್ಯಕ್ಷಮತೆ ಹೆಚ್ಚಾಗಿ ರಾತ್ರಿ ಸುಖ ನಿದ್ದೆಗೆ ದಾರಿ ಮಾಡಿಕೊಡುತ್ತದೆ.

ಬೆಳಗಿನ ಸಮಯವನ್ನು ನಮ್ಮ ಆರೋಗ್ಯ ರಕ್ಷಣೆಗೆ ಮತ್ತು ಸ್ವಾಸ್ಥ್ಯ ಪಾಲನೆಗೆ ಬಳಸಿಕೊಳ್ಳುವುದು ಬುದ್ಧಿವಂತಿಕೆ. ಬೆಳಗ್ಗೆ ಮಲವಿಸರ್ಜನೆಯಾದ ಮೇಲೆ ಖಾಲಿ ಹೊಟ್ಟೆಯಲ್ಲಿ ಮಿತವಾಗಿ ವ್ಯಾಯಾಮವನ್ನು ಮಾಡಿ ಪೂರ್ತಿ ಶರೀರಕ್ಕೆ ಎಣ್ಣೆಯನ್ನು ಸವರಿಕೊಂಡು ಸ್ನಾನ ಮಾಡುವುದರಿಂದ ರಾತ್ರಿಯ ಸುಖ ನಿದ್ದೆ ಖಚಿತ. ಇಡೀ ಮೈಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದಕ್ಕೆ ಆಯುರ್ವೇದದಲ್ಲಿ ‘ಅಭ್ಯಂಗ’ವೆಂದು ಕರೆಯುತ್ತಾರೆ.

ಈ ರೀತಿ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಸಿಗುವ ಲಾಭಗಳ ಪಟ್ಟಿ ಬಹಳ ದೊಡ್ಡದು. ಅಭ್ಯಂಗವು ನಮ್ಮ ದೇಹದ ರಕ್ತ ಸಂಚಾರವನ್ನು ಹೆಚ್ಚು ಮಾಡುತ್ತದೆ- ಅಂದರೆ ಪೋಷಕಾಂಶಗಳನ್ನು ಪ್ರತಿಯೊಂದು ಜೀವಕಣಕ್ಕೂ
ತಲುಪಿಸಿ ಅದರಲ್ಲಿ ಶೇಖರಣೆಯಾಗಿರುವ ಬೇಡದ ವಸ್ತುಗಳು/ ಮಲಗಳನ್ನು ಹೊರತೆಗೆಯುತ್ತದೆ. ಇದರಿಂದ ಸಹಜವಾಗಿ ಆರೋಗ್ಯ ರಕ್ಷಣೆಯಾಗುತ್ತದೆ. ಇದರ ಜೊತೆಗೆ, ಅಭ್ಯಂಗವು ದೇಹಕ್ಕೆ ಆದ ಶ್ರಮವನ್ನು ನಿವಾರಿಸಿ, ಇಂದ್ರಿಯಗಳನ್ನು ಉತ್ತೇಜಿಸಿ, ಉದ್ರೇಕಭರಿತ ಮನಸ್ಸನ್ನು ಪ್ರಶಮನಗೊಳಿಸುತ್ತದೆ. ನಮ್ಮ ಇಡೀ ನರ ಮಂಡಲ ವನ್ನು ಇದು ಪ್ರಶಾಂತಗೊಳಿಸುವುದರಿಂದ ರಾತ್ರಿಯ ನಿದ್ದೆಗೆ ಯಾವುದೇ ಭಂಗವಾಗದ ಹಾಗೆ ಕಾಯುತ್ತದೆ ಈ ಅಭ್ಯಂಗ.

ಅಭ್ಯಂಗದ ಜೊತೆ ನಮ್ಮ ನಿzಯನ್ನು ಕಾಯುವ ಮತ್ತೊಂದು ದಿನಚರಿ ಎಂದರೆ ‘ನಸ್ಯ’. ನಸ್ಯವೆಂದರೆ
ಆಯುರ್ವೇದದ ಪ್ರಕಾರ ಮೂಗಿಗೆ ಪ್ರತಿನಿತ್ಯ ಕೆಲವು ಹನಿ ಎಣ್ಣೆ ಅಥವಾ ತುಪ್ಪವನ್ನು ಹಾಕಿಕೊಳ್ಳುವುದು. ಸ್ನಾನ ಮಾಡುವ ಮುನ್ನ ವಾತಾವರಣಕ್ಕನುಸಾರವಾಗಿ, ನಮ್ಮ ಶರೀರಕ್ಕೆ ಸೂಕ್ತವಾದ ಎಣ್ಣೆ ಅಥವಾ ತುಪ್ಪವನ್ನು ಸ್ವಲ್ಪ ಬೆಚ್ಚಗೆ ಮಾಡಿ ಮೂಗಿನ ಎರಡೂ ಹೊಳ್ಳಕ್ಕೆ ಎರಡು- ಎರಡು ಹನಿಯನ್ನು ಬಿಟ್ಟುಕೊಂಡು, ಗಂಟಲಿಗೆ ಬಂದ ಜೆಡ್ಡಿನಂಶವನ್ನು ಉಗಿಯುವುದು. ಇದು ನೇರವಾಗಿ ನಮ್ಮ ಮೆದುಳಿನ ಮೇಲೆ ಪ್ರಭಾವ ಮಾಡಿ, ಶಿರಸ್ಸಿನ ಪ್ರದೇಶ ಗಳಲ್ಲಿರುವ ನೋವು, ತಾಪ, ಉರಿಗಳನ್ನು ಕಡಿಮೆ ಮಾಡಿ, ಇಂದ್ರಿಯಗಳಿಗೆ ಪ್ರಸನ್ನತೆಯನ್ನು ಎರೆದು ಸಕಾಲದಲ್ಲಿ ನಿzಯನ್ನು ನೀಡಿ ನಮ್ಮನ್ನು ಕಾಪಡುತ್ತದೆ.

ಉತ್ತಮ ನಿದ್ದೆಗಾಗಿ ಮುಂಜಾನೆ ಎದ್ದು, ಮಿತವಾದ ವ್ಯಾಯಾಮವನ್ನು ಮಾಡಿ ಅಭ್ಯಂಗ ಮತ್ತು ನಸ್ಯವನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದು ನಮ್ಮ ವಿಹಾರದ ಮುಖ್ಯ ಬದಲಾವಣೆಗಳು. ಇದರ ಜೊತೆಗೆ, ಇಡೀ ದಿನ ನಾವು ಮಾಡುವ ಕೆಲಸವು ಸರಿಯಾದ ಮಾರ್ಗದಲ್ಲಿದ್ದು, ಧರ್ಮ ಪರವಾಗಿದ್ದರೆ ರಾತ್ರಿ ನಿದ್ದೆಯನ್ನು ನಮ್ಮಿಂದ ದೋಚಿ ಕೊಳ್ಳಲು ಯಾರಿಗೂ ಸಾಧ್ಯವಾಗುವುದಿಲ್ಲ. ಇವಿಷ್ಟು ವಿಹಾರದ ವಿಷಯ. ಇನ್ನು ಆಹಾರದ ವಿಚಾರಕ್ಕೆ
ಬರೋಣ.

ಆಹಾರ ಮತ್ತು ನಿದ್ರೆಗೆ ಬಿಡಿಸಲಾಗದ ನಂಟಿದೆ ಎಂದರೆ ನೀವು ನನ್ನನ್ನು ನಂಬಲೇಬೇಕು. ಆಹಾರ ಕ್ರಮ ಸರಿಯಾಗಿದ್ದರೆ ನಿದ್ದೆ ಉತ್ತಮವಾಗಿರುತ್ತದೆ. ಉತ್ತಮ ನಿದ್ದೆಯು ಆಹಾರವನ್ನು ಸರಿಯಾಗಿ ಜೀರ್ಣ ಗೊಳಿಸುತ್ತದೆ.

ಸರಿಯಾಗಿ ಜೀರ್ಣವಾದ ಆಹಾರವು ಸುಖ ನಿದ್ದೆಗೆ ಅವಶ್ಯಕ. ಹಾಗಾಗಿ ಸುಖ ನಿದ್ದೆಯನ್ನು ಸಾಈಸಲು ನಮ್ಮ ಆಹಾರವನ್ನು ಸುಧಾರಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ. ಆಯುರ್ವೇದದ ಪ್ರಕಾರ ನಾವು ಸೇವಿಸುವ ಆಹಾರವಷ್ಟೇ ಸರಿಯಾಗಿದ್ದರೆ ಸಾಲದು. ಅದನ್ನು ತಯಾರಿಸುವ ಕ್ರಮ ಹಾಗೆಯೇ ಅದನ್ನು ಸೇವಿಸುವ ರೀತಿಯೂ ಅಷ್ಟೇ ಮುಖ್ಯ. ಹಾಗಾಗಿ ಆಯುರ್ವೇದೋಕ್ತ ಆಹಾರ ವಿಜ್ಞಾನದ ಕೆಲವು ಅಂಶಗಳನ್ನು ಇಲ್ಲಿ ಅರ್ಥ ಮಾಡಿಕೊಳ್ಳುವುದು ಸಮಂಜಸ. ನಾವೆಲ್ಲರೂ ಆಹಾರದ ವಿಷಯದಲ್ಲಿ ನೆನಪಿಡಬೇಕಾದ ಮೊದಲನೆಯ ವಿಷಯವೆಂದರೆ ಹಸಿವು ಚೆನ್ನಾಗಿದ್ದಾಗ ಮಾತ್ರ ಆಹಾರವನ್ನು ಸೇವಿಸುವುದು ಅವಶ್ಯಕ. ಹಾಗೆಯೇ, ರಾತ್ರಿ ಊಟವನ್ನು ನಾವು ಮಲಗುವ ಕನಿಷ್ಠ ಒಂದೂವರೆ ತಾಸು ಮುಂಚೆ ಮಾಡಬೇಕು.

ಏಕೆಂದರೆ, ನಾವು ಮಲಗಿದಾಗ ನಮ್ಮ ಜಠರದಲ್ಲಿ ಜೀರ್ಣಕ್ರಿಯೆ ಇನ್ನೂ ನಡೆಯುತ್ತಿದ್ದರೆ, ಸಕ್ರಿಯವಾಗಿದ್ದರೆ
ಇದು ನಿದ್ದೆಗೆ ಅಡ್ಡಿ ಮಾಡುತ್ತದೆ. ಸಾಮಾನ್ಯವಾಗಿ ನಾವು 10 ಗಂಟೆಗೆ ಮಲಗುವ ಅಭ್ಯಾಸವಿದ್ದರೆ 8.30 ಒಳಗೆ
ರಾತ್ರಿಯ ಆಹಾರವನ್ನು ಸೇವಿಸಬೇಕು. ರಾತ್ರಿ ಊಟವಾದ ನಂತರ ಉದರವನ್ನು ಮೃದುವಾಗಿ ಮಾರ್ದನ ಮಾಡಿಕೊಂಡು ನಂತರ ನೂರರಿಂದ ಇನ್ನೂರು ಹೆಜ್ಜೆಗಳಷ್ಟು ಮೃದುವಾಗಿ ನಡೆದಾಡಬೇಕು. ಇದರಿಂದ
ಜೀರ್ಣಕ್ರಿಯೆಯು ಸರಾಗವಾಗಿ ನಿದ್ದೆಗೆ ಯಾವುದೇ ಭಂಗ ಬರುವುದಿಲ್ಲ. ನಾವು ರಾತ್ರಿ ಸೇವಿಸುವ ಆಹಾರವು ಸುಲಭವಾಗಿ ಜೀರ್ಣವಾಗುವಂತಹದ್ದಾಗಿರಬೇಕು.

ಉದಾಹರಣೆಗೆ- ದಕ್ಷಿಣ ಭಾರತದಲ್ಲಿದ್ದು ರಾತ್ರಿ ಪನ್ನೀರ್, ಪರೋಟ, ಗೋಬಿ ಮಂಚೂರಿ, ಉದ್ದಿನ ದೋಸೆ, ವಡೆ, ಮೊಸರಿನಂತಹ ಆಹಾರವನ್ನು ಸೇವಿಸಿದರೆ ಸುಖ ನಿದ್ದೆ ದೂರದ ಮಾತು. ಹಾಗಾಗಿ ರಾತ್ರಿ ಹೆಸರು ಬೇಳೆಯಿಂದ
ಮಾಡಿದ ಪೊಂಗಲ, ಅನ್ನ ತಿಳಿಸಾರು, ತಂಬುಳಿ, ಸೂಪ್‌ಗಳಂತಹ ಲಘುವಾದ ಆಹಾರವನ್ನು ಸೇವಿಸಬೇಕು. ಆಹಾರದಲ್ಲಿ ಉಪ್ಪು, ಖಾರ, ಹುಳಿ, ಎಣ್ಣೆ ಮತ್ತು ಮಸಾಲೆಗಳನ್ನು ಹೆಚ್ಚಾಗಿ ಬಳಸದಿದ್ದರೆ ಒಳಿತು. ಬಹಳ ಮುಖ್ಯವಾಗಿ, ನಾವು ಸೇವಿಸುವ ಆಹಾರವು ಸ್ನಿಗ್ಧವಾಗಿರಬೇಕು. ಅಂದರೆ, ಆಹಾರದಲ್ಲಿ ಒಳ್ಳೆ ಜಿಡ್ಡಿನ ಪ್ರಯೋಗ ವಿರಬೇಕು.

ಉದಾಹರಣೆಗೆ, ನಮಗೆ ಅಭ್ಯಾಸವಿರುವ ತುಪ್ಪವನ್ನು ಪ್ರತಿನಿತ್ಯ ಆಹಾರದಲ್ಲಿ ಸೇವಿಸಲೇಬೇಕು. ತುಪ್ಪವನ್ನು ಬಿಸಿಯಾದ ಆಹಾರದ ಜೊತೆಗೆ ಸೇವಿಸಿ, ಜೊತೆಗೆ ಬಿಸಿ ನೀರನ್ನು ಕುಡಿದರೆ ಅದರಿಂದ ಯಾವುದೇ ಅಡ್ಡ ಪರಿಣಾಮ ಗಳು ಆಗುವುದಿಲ್ಲ. ಇನ್ನು ಆಯುರ್ವೇದ ಖಚಿತ ವಾಕ್ಯವೆಂದರೆ- ಆಹಾರದಲ್ಲಿ ಹಾಲು, ತುಪ್ಪ, ಬೆಣ್ಣೆಯ ಹಿತಮಿತವಾದ ಪ್ರಯೋಗವು ನಿದ್ದೆಯ ಪ್ರಮಾಣವನ್ನು ಹಾಗೂ ಗುಣವನ್ನು ಸುಧಾರಿಸುತ್ತದೆ! ರಾತ್ರಿ ಊಟದ ಪ್ರಮಾಣವು ಮಧ್ಯಾಹ್ನದ ಆಹಾರಕ್ಕಿಂತ ಕಡಿಮೆ ಇರಬೇಕು. ಆಗ ಸುಖವಾದ ನಿದ್ರೆಗೆ ಜಾರಲು ಸುಲಭ.

ಇವುಗಳ ಜೊತೆಗೆ, ನಾವು ಸಂಜೆಯ ಸಮಯವನ್ನು ಹೇಗೆ ಕಳೆಯುತ್ತೇವೆ ಅನ್ನುವುದು ಸಹ ನಮ್ಮ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ಮಲಗುವ ಕೊನೆಯ ಕ್ಷಣದವರೆಗೂ ನಾವು ಲ್ಯಾಪ್ಟಾಪ್/ ಫೋನ್/ ಟಿವಿ ಇತ್ಯಾದಿ ಗಳಲ್ಲಿ ನಮ್ಮ ಮನಸ್ಸನ್ನು ತೊಡಗಿಸಿಕೊಂಡರೆ, ಇದರಿಂದ ಕ್ರಮೇಣ ನಿದ್ದೆಯ ಗುಣಮಟ್ಟವು ಕಡಿಮೆಯಾಗುತ್ತದೆ. ಹಾಗಾಗಿ ಸಂಜೆ 7.00 ಗಂಟೆ ಒಳಗೆ ನಮ್ಮ ಎಲ್ಲಾ ಬಾಹ್ಯ ಚಟುವಟಿಕೆಗಳನ್ನು ಸಮಾಪ್ತಗೊಳಿಸಿ ತದನಂತರ ಮನಸ್ಸನ್ನು ಎಲ್ಲ ರೀತಿಯ ಉದ್ರೇಕಗಳಿಂದ ತಿಳಿ ಮಾಡಿಕೊಳ್ಳುವುದು ಅತ್ಯವಶ್ಯಕ. ಈ ಸಮಯವನ್ನು ಶರೀರ-ಇಂದ್ರಿಯ ಮತ್ತು ಮನಸ್ಸುಗಳನ್ನು ನಿz ಮಾಡುವುದಕ್ಕೆ ತಯಾರಿಗೊಳಿಸಬೇಕು.

ನೆನಪಿಡಿ, ಸಂಜೆಯ ಹೊತ್ತಿನಲ್ಲಿ ದೈಹಿಕ ಚಟುವಟಿಕೆಗಳಿಂದ ದೂರವಿರಬೇಕು. ಆಯುರ್ವೇದದ ಪ್ರಕಾರ ಸಂಜೆಯ ವ್ಯಾಯಾಮ ನಿಷಿದ್ಧ. ಅಂತೆಯೇ, ಸಂಜೆ ಐದು ಗಂಟೆಯ ನಂತರ ಕಾಫಿ- ಟೀಗಳ ಸೇವನೆ ಬೇಡ. ಸಂಜೆಯ ಸಮಯ ವನ್ನು ಸಂಗೀತ ಕೇಳುವುದರಲ್ಲಿ, ಒಳ್ಳೆಯ ಪುಸ್ತಕ ಓದುವುದರಲ್ಲಿ, ಯಾವುದಾದರೂ ಮಂತ್ರಗಳನ್ನು ಆಲಿಸುವುದು ಅಥವಾ ಪಾರಾಯಣ ಮಾಡುವುದರಲ್ಲಿ, ಮೃದುವಾದ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಲ್ಲಿ ಹಾಗೂ ನಮ್ಮ ಪ್ರೀತಿ ಪಾತ್ರರಾದ ಸ್ನೇಹಿತರು ಮತ್ತು ಪರಿವಾರದ ಜೊತೆ ಸಮಯವನ್ನು ಕಳೆಯುವುದರಲ್ಲಿ ತೊಡಗಿಸಿಕೊಳ್ಳ ಬೇಕು. ಬೇಗ ಊಟ ಮುಗಿಸಿ ನೂರು ಹೆಜ್ಜೆ ನಡೆದು ಒಂದುವರೆ ಗಂಟೆ ಬಿಟ್ಟು ಮಲಗಬೇಕು. ಮಲಗುವ ಮುನ್ನ ಎರಡೂ ಪಾದಗಳಿಗೆ ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಸವರಿಕೊಂಡು, ಎರಡರಿಂದ ಮೂರು ನಿಮಿಷ ಮಸಾಜ್ ಮಾಡಿಕೊಂಡು, ಅಂತೆಯೇ ನೆತ್ತಿಗೆ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ಮಲಗಬೇಕು.

ಮಲಗಿದ ಮೇಲೆ ಕಣ್ಣು ಮುಚ್ಚಿ ಇಡೀ ಶರೀರವನ್ನು ಸಡಿಲಗೊಳಿಸಿ ನಂತರ ಉಸಿರಾಟದ ಮೇಲೆ ಗಮನಹರಿಸಬೇಕು. ಉಸಿರಾಟಕ್ಕೂ ಮನಸ್ಸಿಗೂ ನೇರವಾದ ಸಂಬಂಧವಿದೆ. ಉಸಿರಾಟವನ್ನು ಗಮನಿಸುತ್ತಾ, ಮನಸ್ಸನ್ನು ಉಸಿರಾಟದ ಮೇಲೆ ಕೇಂದ್ರೀಕರಿಸಿದಾಗ ಮನಸ್ಸಿನ ಚಿಂತೆ-ವಿಚಾರಗಳ ಅಲೆ ನಿಧಾನವಾಗಿ ಮೆಲ್ಲಗಾಗಿ ಸುಲಭವಾಗಿ ನಿದ್ದೆಗೆ
ಜಾರಬಹುದು. ಇದರ ಜೊತೆಗೆ, ಮಲಗುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳುವುದು ಬಹಳ ಮುಖ್ಯ.

ಮನಸಲ್ಲಿರುವ ಬೇಡದ ಭಾವನೆಗಳನ್ನು, ಉದ್ರೇಕಗಳನ್ನು, ದುಃಖ ನೋವುಗಳನ್ನು ಶಮನಗೊಳಿಸಿ, ಸತ್ ಚಿಂತನೆ ಯಲ್ಲಿ ತೊಡಗಿಸಿ, ಉತ್ತಮ ವಿಚಾರಗಳನ್ನು ಆಲೋಚಿಸುತ್ತಾ ಮಲಗುವುದು ಅತ್ಯಂತ ಆರೋಗ್ಯಕರ. ‘ಚಿಂತೆ
ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಅನ್ನುವ ಗಾದೆ ಇದ್ದರೂ, ಈಗಿನ ಕಾಲದಲ್ಲಿ ಚಿಂತೆ ಇಲ್ಲದವನನ್ನು ಹುಡುಕು ವುದು ಅಸಾಧ್ಯ. ಮಲಗುವ ಮುನ್ನ ಚಿಂತೆಯನ್ನು ಯಾರು ಬಿಡಬಲ್ಲ ಅವನಿಗೆ ಸಂತೆಯಲ್ಲಿ ನಿದ್ದೆ ಬರುವುದು ಖಂಡಿತ ಅನ್ನುವುದು ಈಗಿನ ಕಾಲಕ್ಕೆ ಸೂಕ್ತ.

ಆಗೋದೆ ಒಳ್ಳೆಯದಕ್ಕೆ ಆಗುತ್ತದೆ ಎನ್ನುವ ಭಾವನೆಯನ್ನು ಗಟ್ಟಿಗೊಳಿಸಿ, tomorow will be a better day ಅನ್ನುವ ಸಂಕಲ್ಪವನ್ನು ಸ್ಥಾಪಿಸಿಕೊಂಡು ಮಲಗಿಕೊಂಡರೆ, ಸುಖವಾದ ನಿದ್ದೆ ನಮ್ಮ ಪಾಲಾಗುವುದು ಖಂಡಿತ. ಕೊನೆಯದಾಗಿ ಒಂದು ಆರ್ಷವಾಣಿ – ನಿದ್ರಾಯತ್ತಂ ಸುಖಂ ದು:ಖಂ ಪುಷ್ಟಿಃ ಕಾರ್ಶ್ಯಂ
ಬಲಾಬಲಮ್| ವೃಷತಾ ಕ್ಲೀಬತಾ ಜ್ಞಾನಮಜ್ಞಾನಂ ಜೀವಿತಂ ನ ಚ || ಸುಖ-ದುಃಖ, ಪುಷ್ಟಿ-ಕೃಶತೆ, ಬಲ-
ದೌರ್ಬಲ್ಯ, ವೃಷತೆ-ಕ್ಲೀಬತೆ, ಜ್ಞಾನ-ಅಜ್ಞಾನ ಮತ್ತು ಜೀವನ-ಮರಣ- ಎಲ್ಲವೂ ನಿದ್ರೆಯನ್ನೇ
ಅವಲಂಬಿಸಿದೆ!

ಇದನ್ನೂ ಓದಿ: Dr Sadhanasree Column: ರಾತ್ರಿ ನಿದ್ದೆಯ ವರವೂ, ಹಗಲು ನಿದ್ದೆಯ ಶಾಪವೂ