ಸ್ಮರಣೆ
ಎಲ್.ಪಿ.ಕುಲಕರ್ಣಿ
ಈ ವರ್ಷ ಫೆಬ್ರವರಿ ತಿಂಗಳನ್ನು ‘ವಿಜ್ಞಾನ ಮಾಸ’ ಎಂದು ಆಚರಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಫೆ.28 ವಿಜ್ಞಾನ ದಿನ ಆಚರಿಸುವುದರ ಜತೆಗೆ ಈ ತಿಂಗಳ ಪೂರ್ತಿ ಭಾರತದ ಮಹಾನ್ ವಿಜ್ಞಾನಿಗಳ ಸ್ಮರಣೆ ಮಾಡುವುದು ನಮಗೆ ಹೆಮ್ಮೆ ಯ ಸಂಗತಿ.
ಕಲಿಕೆ, ಸಾಧನೆಗಳಿಗೆ ಜಾತಿ, ಬಡತನಗಳು ಅಡ್ಡಿ ಬರುವುದಿಲ್ಲ ಎಂಬುದಕ್ಕೆ ಈ ಮಹಾನ್ ಚೇತನವೇ ಸಾಕ್ಷಿ. ಇಂದು ಬಹುಪಾಲು ವಿದ್ಯಾರ್ಥಿಗಳು ಸಕಲ ಸೌಕರ್ಯಗಳನ್ನು ಹೊಂದಿದವರೆ. ಆದರೆ, ಅಧ್ಯಯನ ಒಂದನ್ನು ಬಿಟ್ಟು ಉಳಿದೆ ಚಟುವಟಿಕೆಗಳಲ್ಲಿ ಬಹಳ ಮುಂದಿದ್ದಾರೆ.
ಉದಾಹರಣೆಗೆ ಮೊಬೈಲ್ ಒಂದನ್ನೇ ತೆಗೆದುಕೊಂಡು ನೋಡಿ. ಅದರಲ್ಲಿನ ಎಲ್ಲ ಮಾಹಿತಿಗಳೂ ಗೊತ್ತು. ಆದರೆ , ಅಲ್ಲಿರುವ
ಒಳ್ಳೆಯದಾದ, ನಮ್ಮ ಬದುಕಿಗೆ ದಾರಿದೀಪವಾಗಿರುವ ಮಾಹಿತಿಗಳ ಕಡೆ ಗಮನ ಕೊಡುವುದನ್ನು ಬಿಟ್ಟು ಅನಪೇಕ್ಷಿತ ವಿಷಯಗಳ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ನಮ್ಮ ಹಿರಿಯರು ಕಂಡ ಸಶಕ್ತ ಭಾರತ ನಿರ್ಮಾಣವಾಗು ವುದು ಕನಸಿನ ಮಾತಾಗೇ ಉಳಿಯಬಹುದು ಎಂದೆನಿಸುತ್ತದೆ. ಇಂತಹ ಜಿಡ್ಡುಗಟ್ಟಿದ ಮನೋಭಾವದಿಂದ ನಮ್ಮ ವಿದ್ಯಾರ್ಥಿ ಗಳು, ಯುವಕರು ಹೊರಬರಬೇಕು. ಹಾಗೆ ಬರಬೇಕಾದರೆ ನಮ್ಮ ನಡುವೇ ಇದ್ದು ಹತ್ತು ಹಲವು ಜನೋಪಕಾರಿ ಕಾರ್ಯಗಳನ್ನು ಮಾಡಿದವರ ಜೀವನದ ಆದರ್ಶ ಮೌಲ್ಯಗಳನ್ನು ಅಳವಡಿಸಿ ಕೊಳ್ಳುವ ಕಾರ್ಯ ನಡೆಯಬೇಕು.
ಬಡತನದಲ್ಲಿ ಜನಿಸಿ, ಕೇವಲ 8 ತಿಂಗಳ ಈ ಬಾಲಕ ತಂದೆಯನ್ನು ಕಳೆದುಕೊಂಡು ಅನಾಥನಾದ. ಹೆಣ್ಣಜ್ಜ, ಅಂದರೆ ತಾಯಿಯ ತಂದೆಯ ಹತ್ತಿರ ಬೆಳೆದು ದೊಡ್ಡವನಾದ ಈ ಮಗು ಮುಂದೊಂದು ದಿನ ದೇಶಕಂಡ ಅಪ್ರತಿಮ ವಿಜ್ಞಾನಿ ಹಾಗೂ
ಭಾರತದ ‘ಸಂಶೋಧನಾ ಪ್ರಯೋಗಾಲಯಗಳ ಪಿತಾಮಹ ’ ಎಂಬ ಖ್ಯಾತಿಗೆ ಪಾತ್ರನಾಗಿ, ಯುನಿವರ್ಸಿಟಿ ಗ್ರ್ಯಾಂಟ್ ಕಮೀಷನ್ (ಯುಜಿಸಿ)ನ ಚೇರ್ಮನ್ ಹುದ್ದೇ ಅಲಂಕರಿಸುತ್ತಾರೆ. ವಿಜ್ಞಾನದಲ್ಲಿ ಸಾಧನೆಮಾಡಿದ ಸಾಧಕರಿಗೆ ಪ್ರತಿವರ್ಷ ಇವರ ಹೆಸರಿನ ಭಾರತ ಸರಕಾರ ಪ್ರಶಸ್ತಿ ಕೊಡುತ್ತದೆಂದರೆ ಅದು ಸಾಮಾನ್ಯದ ಮಾತೇನು!.
ಆ ಮಗು ಬೇರಾರೂ ಅಲ್ಲ ಅವರೇ ಭಾರತದ ಮೇರು ವಿಜ್ಞಾನಿ ಡಾ.ಶಾಂತಿ ಸ್ವರೂಪ್ ಭಟ್ನಾಗರ್. ಇದೇ ಫೆಬ್ರವರಿ ೨೧ರಂದು ಅವರ 128ನೇ ಜನ್ಮದಿನವನ್ನು ಆಚರಿಸಿದ್ದೇವೆ. ಅಲ್ಲದೆ, ಪ್ರತೀ ವರ್ಷ ಫೆ.28ನ್ನು ಸಿ.ವಿ.ರಾಮನ್‌ರ ‘ರಾಮನ್ ಎಫೆಕ್ಟ್ ’ ಸಂಶೋಧನೆಯನ್ನು ಸ್ಮರಿಸುವ ಸಲುವಾಗಿ ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅಂದು ವಿಜ್ಞಾನ – ತಂತ್ರಜ್ಞಾನದ ಆಗು ಹೋಗು ಗಳು, ಈ ಕ್ಷೇತ್ರದಲ್ಲಿ ದುಡಿದ ಮಹನೀಯರನ್ನು ನೆನಪಿಸಿಕೊಂಡು ಬರಲಾಗುತ್ತಿದೆ. ಮೌಢ್ಯಾ ಲೋಚನೆಗಳನ್ನು ತೊಡೆದುಹಾಕಿ ವೈಜ್ಞಾನಿಕ ಆಲೋಚನೆಗಳನ್ನು ಬಿತ್ತುವ ಕೆಲಸ ನಡೆಯುತ್ತದೆ.
ಅಂದ ಹಾಗೆ ಈ ವರ್ಷ ಫೆಬ್ರವರಿ ತಿಂಗಳನ್ನು ‘ವಿಜ್ಞಾನ ಮಾಸಿಕ’ ಎಂದು ಆಚರಿಸುವಂತೆ ಕೇಂದ್ರ ಸರಕಾರ ಕರೆಕೊಟ್ಟಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ವಿಜ್ಞಾನ ಕಲಿಕೆ ಹಾಗೂ ಸಂಶೋಧನೆಗಳಿಗೆ ಬುನಾದಿ ಹಾಕಿಕೊಟ್ಟ ಡಾ.ಶಾಂತಿ ಸ್ವರೂಪ್ ಭಟ್ನಾಗರ್‌ರಂಥ ಮಹಾನ್ ಚೇತನಗಳ ಬಗ್ಗೆ ತಿಳಿದುಕೊಂಡು ಅವರ ಮಾರ್ಗದ ನಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ವೆಂದರೆ ತಪ್ಪಾಗಲಿಕ್ಕಿಲ್ಲ. ಶಹಾಪುರ ಜಿಯ (ಈಗಿನ ಪಾಕಿಸ್ತಾನ) ಭೇರು ಎಂಬಲ್ಲಿ ಪರಮೇಶ್ವರಿ ಸಹಾಯಿ ಭಟ್ನಾಗರ್ ಹಾಗೂ ಲಾಜ್ವಂತಿಯವರಿಗೆ 1894 ಫೆಬ್ರವರಿ 21ರಂದು ಜನಿಸಿದ ಮಗುವೆ ಶಾಂತಿ ಸ್ವರೂಪ್.
ತಂದೆ ಪರಮೇಶ್ವರಿ ಸಹಾಯಿ ಭಟ್ನಾಗರ್ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪದವಿ ಗಳಿಸಿ ಅಲ್ಲಿನ ಸ್ಥಳೀಯ ಪ್ರೌಢಶಾಲೆಯ
ಮುಖ್ಯೋಪಾಧ್ಯಾಯರಾಗಿದ್ದರು. ಅವರೊಬ್ಬ ಪ್ರಗತಿಪರ ಚಿಂತಕರಾಗಿದ್ದರು. ದುರದೃಷ್ಟವಶಾತ್, ಶಾಂತಿ ಸ್ವರೂಪ್ ಎಂಟು ತಿಂಗಳ ಮಗುವಾಗಿzಗ ತಂದೆ ತೀರಿಕೊಂಡರು. ಆಗ ಮನೆಯಲ್ಲಿ ಕಡುಬಡತನ ತಾಂಡವವಾಡಹತ್ತಿತು. ಹೀಗಾಗಿ ಚಿಕ್ಕ ಬಾಲಕ ಹೆಣ್ಣಜ್ಜ, ಅಂದರೆ ತಾಯಿಯ ತಂದೆ ಪ್ಯಾರೇ ಲಾಲ್ ಹತ್ತಿರ ಬೆಳೆಯಬೇಕಾಯಿತು. ಪ್ಯಾರೇ ಲಾಲ್ ರೂರ್ಕಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಮುಖ್ಯ ಎಂಜಿನಿಯರ್ ಆಗಿದ್ದರು.
ಅಂದರೆ ಹೇಳಬೇಕೆ, ಮನೆಯಲ್ಲಿ ಅದು ಇದು ಯಂತ್ರಗಳ ಬಿಡಿಭಾಗಗಳು, ವೈಜ್ಞಾನಿಕ ಅಳತೆಪಟ್ಟಿಗಳನ್ನೊಳಗೊಂಡಂತೆ ಹಲವಾರು ಉಪಕರಣಗಳು ಇರುತ್ತಿದ್ದವು. ಕುತೂಹಲದಿಂದ ಈ ಎಲ್ಲ ಉಪಕರಣಗಳನ್ನು ವೀಕ್ಷಿಸುತ್ತಿದ್ದ ಬಾಲಕ ಶಾಂತಿ ಸ್ವರೂಪ್, ಅವುಗಳನ್ನು ಕೈಯಲ್ಲಿ ಹಿಡಿದು ಆಟವಾಡುತ್ತಿದ್ದನು. ಇದನ್ನು ಗಮನಿಸಿದ ಅಜ್ಜನಿಗೆ ಬಹಳ ಸಂತೋಷವಾ ಗುತ್ತಿತ್ತು. ಆತನ ಕುತೂಹಲ ತಣಿಸಲು ವಿಭಿನ್ನ ಆಟಿಕೆಗಳನ್ನು ತಂದು ಕೊಡುತ್ತಿದ್ದರು.
ಆಟದಲ್ಲಿ ಮಗ್ನರಾಗಿರುತ್ತಿದ್ದ ಶಾಂತಿ ಸ್ವರೂಪ್, ಅಜ್ಜ ತಂದ ಆಟಿಕೆಗಳನ್ನು ಮುರಿದು – ಹರಿದು ಅವುಗಳ ಒಳಗಿನ ಭಾಗ ಹೇಗಿದೆ? ಇದರ ಬಣ್ಣ ಹೀಗೇಕಿದೆ? ಎಂದು ಕೇಳುತ್ತಿದ್ದನು. ಅಲ್ಲದೇ ಆಟಿಕೆಗಳನ್ನು ತುಂಡರಿಸಿ ಮತ್ತೆ ಮೊದಲಿನ ಹಾಗೆ ಜೋಡಿಸುತ್ತಿದ್ದರು.
ಬಾಲ್ಯದಲ್ಲಿನ ಇಂತಹ ಚಟುವಟಿಕೆಗಳೇ ಮುಂದೆ ಶಾಂತಿಸ್ವರೂಪರಿಗೆ ವಿಜ್ಞಾನದ ಕಡೆ ಒಲವು ಮೂಡಿಸಿದ್ದವು. ಐಐಟಿಯಲ್ಲಿ ಬಿ.ಟೆಕ್ ಪದವಿ ಪಡೆದು, ವಿಜ್ಞಾನ ಜನಪ್ರಿಯಗೊಳಿಸುವಲ್ಲಿ ವೈಜ್ಞಾನಿಕ ಆಟಿಕೆಗಳನ್ನು ತಯಾರಿಸಿ ಶಾಲಾ ಮಕ್ಕಳನ್ನೇ ಮೊದಲು ಮಾಡಿಕೊಂಡು ಎಲ್ಲ ವಯೋಮಾನದವರಲ್ಲಿ ವಿಜ್ಞಾನ ಕಲಿಕೆಯ ಆಸಕ್ತಿ ಮೂಡಿಸುತ್ತಿರುವ ಪದ್ಮಶ್ರೀ ವಿಜೇತ ಅರವಿಂದ ಗುಪ್ತ ಅವರು ಹತ್ತು ಹಲವು ವಿಜ್ಞಾನಿಗಳ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ.
ಅವರಲ್ಲಿ ಡಾ.ಶಾಂತಿ ಸ್ವರೂಪ್ ಭಟ್ನಾಗರ್ ಕುರಿತಾದ ಲೇಖನ ಎಲ್ಲರಿಗೂ ಹಿಡಿಸುತ್ತದೆ. ಲೇಖನದಲ್ಲಿ ಗುಪ್ತಾರವರು ಭಟ್ನಾಗರ್ ಅವರ ಕುರಿತು ಬರೆದ ಅಂಶಗಳಲ್ಲಿ ಕೆಲವನ್ನು ಯಥಾವತ್ತು ಇಲ್ಲಿ ಬಳಸಿಕೊಂಡಿರುವೆ. ಮನೆಯೇ ಮೊದಲ ಪಾಠಶಾಲೆ ಎಂಬಂತೆ, ಹೀಗೆ ಆಟವಾಡುತ್ತಿದ್ದ ಶಾಂತಿಸ್ವರೂಪರಿಗೆ ಅಜ್ಜ ಪ್ಯಾರೇ ಲಾಲ್, ಉರ್ದು ಕವನ ಹಾಗೂ ಕೆಲವು ಸಾಹಿತ್ಯಿಕ ಕಥೆಗಳನ್ನು ಓದಿ ಹೇಳುತ್ತಿದ್ದರು.
ಶಾಂತಿಸ್ವರೂಪರ ಪ್ರಾಥಮಿಕ ವಿದ್ಯಾಭ್ಯಾಸ ಒಂದು ಪ್ರೈವೇಟ್ ಮಖ್ತಾಬ್ ( ಇಸ್ಲಾಂ ಗ್ರಂಥಾಲಯ)ದಲ್ಲಿ ಆಯಿತು. 1907 ರವರೆಗೆ, ಅವರು ಉತ್ತರಪ್ರದೇಶದ ಸಿಕಂದರಾ ಬಾದ್‌ನಲ್ಲಿನ ಎ.ವಿ. ಹೈಸ್ಕೂಲಿನಲ್ಲಿ ಓದಿದರು. ನಂತರ ಲಾಹೋರಿಗೆ ಹೋಗು ವಂತೆ ಅವನ ಕುಟುಂಬ ಸ್ನೇಹಿತರು ಸಲಹೆ ನೀಡಿದರು. ಹೀಗಾಗಿ ಲಾಹೋರಿನ ದಯಾಲ್ ಸಿಂಗ್ ಪ್ರೌಢಶಾಲೆಯಲ್ಲಿ ಅವರ ಮುಂದಿನ ವ್ಯಾಸಂಗ ಜರುಗಿತು.
ಇಲ್ಲಿ ವಿಜ್ಞಾನ ಹಾಗೂ ಉರ್ದು – ಈ ಎರಡೂ ವಿಷಯಗಳನ್ನು ಕಲಿತರು. 1911ರಲ್ಲಿ, ತಮ್ಮ 17ನೇ ವಯಸ್ಸಿನಲ್ಲಿ, ಕಾಕಂಬಿ
ಹಾಗೂ ಕಾರ್ಬನ್‌ಯುಕ್ತ ವಸ್ತುಗಳನ್ನು ಒಂದು ಒತ್ತಡದಲ್ಲಿ ಕಾಯಿಸುವ ಮೂಲಕ ಬ್ಯಾಟರಿಗೆ ಪರ್ಯಾಯ ಕಾರ್ಬನ್
ಎಲೆಕ್ಟ್ರೋಡ್‌ಗಳನ್ನು ತಯಾರಿಸುವ ವಿಧಾನದ ಬಗ್ಗೆ, ಆಗ ಅಲಹಾಬಾದಿನಿಂದ ಪ್ರಕಟವಾಗುತ್ತಿದ್ದ ‘ಲೀಡರ್’ ಪತ್ರಿಕೆಯಲ್ಲಿ
ಅವರು ತಮ್ಮ ಪ್ರಥಮ ಲೇಖನವನ್ನು ಪ್ರಕಟಿಸಿದರು. 1916ರಲ್ಲಿ ಶಾಂತಿಸ್ವರೂಪರು ಲಾಹೋರಿನ ಫರ್ಮನ್ ಕ್ರಿಶ್ಚಿಯನ್
ಕಾಲೇಜಿನಿಂದ ಭೌತಶಾಸ್ತ್ರದಲ್ಲಿ ಬಿ.ಎಸ್.ಸಿ ಪದವಿ ಪಡೆದರು.
1919ರಲ್ಲಿ ಅದೇ ಕಾಲೇಜಿನಿಂದ ರಾಸಾಯನ ಶಾಸ್ತ್ರದಲ್ಲಿ ಎಂ.ಎಸ್.ಸಿ.ಯನ್ನೂ ಮುಗಿಸಿದರು. ಆಗ ಒಬ್ಬ ಭೌತಶಾಸ್ತ್ರದ
ವಿದ್ಯಾರ್ಥಿ ತನ್ನ ಉನ್ನತ ವ್ಯಾಸಂಗಕ್ಕಾಗಿ ರಾಸಾಯನಶಾಸ್ತ್ರವನ್ನು ಆಯ್ದುಕೊಳ್ಳಬಹುದಿತ್ತು. ಆದರೆ ಇದು ಈಗ ಅಸಾಧ್ಯ ಮಾತು! ಅಂತೆಯೇ ಶಾಂತಿ ಸ್ವರೂಪ್ ಭೌತಶಾಸ್ತ್ರ ಅಧ್ಯಯನ ಮಾಡಿದ್ದರೂ ಕೂಡ ರಾಸಾಯನಶಾಸ್ತ್ರದಲ್ಲಿ ಬಹಳ ಆಸಕ್ತಿ ಇತ್ತು.
ಹೀಗಾಗಿ ರಾಸಾಯನಶಾಸದಲ್ಲಿ ಉನ್ನತ ಸಂಶೋಧನೆಗಳನ್ನು ಮಾಡಲು ದಯಾಳ್ ಸಿಂಗ್ ಕಾಲೇಜಿನಿಂದ ಸಿಕ್ಕ ಸ್ಕಾಲರ್ ಶಿಪ್
ಸಹಾಯದಿಂದ ಇಂಗ್ಲೆಂಡ್ ಮೂಲಕ ಅಮೆರಿಕಾಕ್ಕೆ ತೆರಳಲು ಸಿದ್ಧರಾದರು.
ಆಗ ಜಗತ್ತಿನ ಪ್ರಥಮ ಮಹಾಯುದ್ಧ ನಡೆಯುತ್ತಿದ್ದ ಕಾಲವಾದ್ದರಿಂದ ಅಮೆರಿಕಾಕ್ಕೆ ಹೋಗಲು ಹಡಗು ಸಿಗುವುದೇ ಕಷ್ಟವಾ ಯಿತು. ಅದಕ್ಕಾಗಿ ಮರಳಿ ಇಂಗ್ಲೆಂಡಿನ ಉಳಿದುಕೊಂಡು ಯುನಿವರ್ಸಿಟಿ ಕಾಲೇಜು ಸೇರಿದರು. ಅಲ್ಲಿನ ಭೌತಶಾಸ್ತ್ರ ಪ್ರೊಫೆಸರ್ ಎಫ್.ಜಿ.ಡಾನ್ನರ್ ಅವರ ಸಹಾಯದಿಂದ ‘ಆನ್ ಸಾಲ್ಯುಬಿಲಿಟಿ ಆಫ್ ಬೈವೇಲೆಂಟ್ ಆಂಡ್ ಸಾಲ್ಟ್ಸ್ ಆಫ್ ಹೈಯರ್ ಆಸಿಡ್ಸ್ ಆಂಡ್ ಟ್ರೈವೇಲೆಂಟ್ ಸಾಲ್ಟ್ಸ್ ಆಫ್ ಹೈಯರ್ ಆಸಿಡ್ಸ್ ದೇರ್ ಎಫೆಕ್ಟ್ ಆನ್ ದಿ ಸರ್ಫೇಸ್ ಟೆನ್ಷನ್ ಆಫ್ ಆಯಿಲ್ಸ್’ ಎಂಬ ಅವರ ಪ್ರಬಂಧಕ್ಕೆ 1921ರಲ್ಲಿ ಡಿ.ಎಸ್.ಸಿ ಪದವಿಯೂ ಸಿಕ್ಕಿತು.
1921ಆಗಸ್ಟ್‌ನಲ್ಲಿ ಭಾರತಕ್ಕೆ ಬಂದ ಭಟ್ನಾಗರ್ ರಾಸಾಯನಶಾಸ ಪ್ರೊಫೆಸರ್ ಆಗಿ ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿಯೇ ಕೇವಲ ಮೂರು ವರ್ಷದ ಕಡಿಮೆ ಅವಧಿಯಲ್ಲಿ ರಾಸಾಯನಿಕ ಸಂಶೋಧನೆಯ ಸಕ್ರಿಯ ಶಿಕ್ಷಣ ಸಂಸ್ಥೆಯೊಂದನ್ನು ರೂಪಿಸಿದರು. ಅಲ್ಲದೇ ಬನಾರಸ್ ಹಿಂದೂ ವಿವಿಯ ಸಾಂಪ್ರದಾಯಿಕ ಹಿಂದಿ ಸ್ತುತಿಯನ್ನು (ಕುಲಗೀತೆ) ಸಹ ಬರೆದರು. ಆ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳಲ್ಲಿ ಅಜ್ಜ ಪ್ಯಾರೇ ಲಾಲ್ ಕವನ ಹಾಗೂ ಸಾಹಿತ್ಯದ ಬಗ್ಗೆ ಒಲವು ಮೂಡಿಸಿದ ಕ್ಷಣಗಳನ್ನು ನೆನೆಯುತ್ತಾರೆ ಭಟ್ನಾಗರ್.
ಮುಂದೆ 1924ರಲ್ಲಿ ಲಾಹೋರಿನ ಪಂಜಾಬ್ ವಿವಿಯಲ್ಲಿ, ಯುನಿವರ್ಸಿಟಿ ಕೆಮಿಕಲ್ ಲ್ಯಾಬೊರೇಟರೀಸ್‌ನ ನಿರ್ದೇಶಕರಾಗಿ ಸೇರಿಕೊಳ್ಳುತ್ತಾರೆ. ಅಲ್ಲಿ 16 ವರ್ಷ ಸೇವೆ ಸಲ್ಲಿಸಿದ ಭಟ್ನಾಗರ್, ಆ ಅವಧಿಯಲ್ಲಿ 100ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆಯುತ್ತಾರೆ. ಅಟೋಕ್ ತೈಲ್ ಸಂಸ್ಥೆಯು ತೈಲಕ್ಕಾಗಿ ನೆಲವನ್ನು ಕೊರೆಯುತ್ತಿದ್ದಾಗ, ಬೈರಿಗೆಗಳು ಮಣ್ಣು ಮತ್ತು ಉಪ್ಪು ನೀರಿನಲ್ಲಿ ಸಿಲುಕಿಕೊಂಡವು. ಭಟ್ನಾಗರ್ ಅತ್ಯಂತ ಚಾಣಾಕ್ಷತನದಿಂದ ತೂಗಾಡುತ್ತಿದ್ದ ಮಣ್ಣಿನ ಸ್ನಿಗ್ಧತೆಯನ್ನು ಅಂಟು ಸೇರಿಸಿ ಕಡಿಮೆಗೊಳಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿದರು.
ಈ ಕಾರ್ಯವನ್ನು ಮೆಚ್ಚಿ ಆ ಸಂಸ್ಥೆಯು ಭಟ್ನಾಗರ್ ಅವರಿಗೆ 150000 ರು.ಗಳನ್ನು ಕೊಡುತ್ತದೆ. ಭಟ್ನಾಗರ್ ಆ ಹಣವನ್ನು ತಮ್ಮ ಸ್ವಂತಕ್ಕೆ ಬಳಸದೇ, ಸಂಪೂರ್ಣ ಹಣವನ್ನು ಪಂಜಾಬ್ ವಿವಿಯಲ್ಲಿ ಪೆಟ್ರೋಲಿಯಂ ಸಂಶೋಧನಾ ವಿಭಾಗವನ್ನು ಸ್ಥಾಪಿಸಲು ಬಳಸುತ್ತಾರೆ. 1930ರ ದಶಕದಲ್ಲಿ, ಭಾರತದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಮತ್ತು ಉದ್ದಿಮೆಗಳ ಅಭಿವೃದ್ಧಿಗಾಗಿ ಯಾವುದೇ ಸಂಶೋಧನಾ ಪ್ರಯೋಗಾಲಯಗಳಿರಲಿಲ್ಲ. ಎರಡನೆಯ ಮಹಾಯುದ್ಧ ಆರಂಭವಾಗುವ ತುಸು ಮುಂಚೆ, ಭಾರತ
ಸರಕಾರವು ವೈಜ್ಞಾನಿಕ ಹಾಗೂ ಔದ್ಯೋಗಿಕ ಸಂಶೋಧನಾ ಸಮಿತಿಯನ್ನು ಸ್ಥಾಪಿಸಿತು.
1939ರ ಡಿಸೆಂಬರ್‌ನಲ್ಲಿ ಭಾರತ ಸರಕಾರಕ್ಕೆ ವೈಜ್ಞಾನಿಕ ಹಾಗೂ ಔದ್ಯೋಗಿಕ ಸಂಶೋಧನಾ ಸಲಹೆಗಾರರಾಗಿ ನೇಮಕ ಗೊಂಡರು. ಹೀಗೆ, 1942ರ ಸೆಪ್ಟೆಂಬರ್ 26ರಂದು ವೈಜ್ಞಾನಿಕ ಹಾಗೂ ಔದ್ಯೋಗಿಕ ಸಂಶೋಧನಾ ಮಂಡಳಿಯ (CSIR) ಜತೆ ಅವರ 15 ವರ್ಷಗಳ ದೀರ್ಘ ಸಹಯೋಗ ಆರಂಭವಾಯಿತು. ಭಟ್ನಾಗರ್ ಅವರ ಕಾರ್ಯಶೈಲಿ ಹಾಗೂ ಕೆಲಸದ ಚಾಕಚಕ್ಯತೆ ಯನ್ನು ಕಂಡು ಅಂದಿನ ಪ್ರಧಾನಿ ನೆಹರು ಬೆರಗಾಗಿದ್ದರು. ಭಾರತದಲ್ಲಿ ವೈಜ್ಞಾನಿಕ ಪ್ರಯೋಗಾಲಯ ಗಳು, ಸಂಶೋಧನಾ ಸಂಸ್ಥೆಗಳು ಹೆಚ್ಚು ಹೆಚ್ಚು ತಲೆಯೆತ್ತಲಿ ಎಂಬ ಉದ್ದೇಶದಿಂದ ಭಟ್ನಾಗರ್, ಸದಾ ಬ್ಯೂಸಿ ಇರುತ್ತಿದ್ದ ಪ್ರಧಾನಿ ನೆಹರೂ ಅವರನ್ನು, ಅವರ ಬೆಳಗಿನ ವಾಕಿಂಗ್ ಸಮಯ ದಲ್ಲಿ ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸುತ್ತಾ ತಾವು ಸ್ಥಾಪಿಸ ಬೇಕೆಂದಿರುವ ಸಂಶೋಧನಾ ಸಂಸ್ಥೆಗಳ ಬಗ್ಗೆ ಪ್ರಸ್ತಾಪಮಾಡಿಬಿಡುತ್ತಿದ್ದರು.
ಶತಾಯಗತಾಯ ಪ್ರಧಾನಿ ಯನ್ನು ಒಪ್ಪಿಸಿ ಸಂಸ್ಥೆಗಳನ್ನು ಸ್ಥಾಪಿಸಿಯೇ ಬಿಡುತ್ತಿದ್ದರು. ನಿಧನರಾಗುವ ವೇಳೆಗಾಗಲೇ 12
ರಾಷ್ಟ್ರೀಯ ಪ್ರಯೋಗಾಲಯ ಗಳನ್ನು ಸ್ಥಾಪಿಸಿ ಕಾರ್ಯ ನಿರ್ವಹಿಸುವಂತೆ ಮಾಡಿದ ಯಶಸ್ಸು ಭಟ್ನಾಗರ್ ಅವರಿಗೆ ಸಲ್ಲುತ್ತದೆ. ಇವುಗಳ ಪೈಕಿ ದೊಡ್ಡ ಸಂಸ್ಥೆಗಳಾದ ಪುಣೆಯ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ ಮತ್ತು ದೆಹಲಿಯ ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ ಸಹ ಇದ್ದವು.
ಕೇರಳದಲ್ಲಿರುವ ಮಾನಜೈಟ್ ಮರಳನ್ನು ಬಳಸಿಕೊಳ್ಳಲು ಭಟ್ನಾಗರ್ ಅವರು ‘ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್’ ಸಂಸ್ಥೆ ಯನ್ನು ಸ್ಥಾಪಿಸಿದರು. ತಮ್ಮ ಜೀವಮಾನದಲ್ಲಿ ಹತ್ತು ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದರು; ಅಣುಶಕ್ತಿ ನಿಯೋಗದ ಕಾರ್ಯದರ್ಶಿ ಯಾಗಿದ್ದರು. 1936ರಲ್ಲಿ ಆರ್ಡರ್ ಆಫ್ ದಿ ಬ್ರಿಟೀಷ್ ಎಂಪೈರ್, 1941ರಲ್ಲಿ ನೈಟ್ ಹುಡ್, 1943ರಲ್ಲಿ ರಾಯಲ್ ಸೊಸೈಟಿಯ ಫೆಲೋಶಿಪ್, 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದ ದಿನಗಳಲ್ಲಿ ಹಲವಾರು ವೈಜ್ಞಾನಿಕ ಸಂಶೋಧನಾ ಲಯಗಳನ್ನು ಸ್ಥಾಪಿಸಿದ ಡಾ. ಶಾಂತಿ ಸ್ವರೂಪ್ ಭಾಟ್ನಾಗರ್ ಅವರು ಸ್ವತಂತ್ರ ಭಾರತದ ಪ್ರಪ್ರಥಮ ವೈಜ್ಞಾನಿಕ ಶಿಲ್ಪಿ’ ಎಂಬ ಹೆಗ್ಗಳಿಕೆಗೆ ಪಾತ್ರರಾದರು.