Thursday, 12th December 2024

Dr Vijay Darda Column: ಈ ಚುನಾವಣೆ ಮತ್ತು ರಾಜಕಾರಣದ ಆ ಯುಗ !

ಸಂಗತ

ಡಾ.ವಿಜಯ್‌ ದರಡಾ

ಇಂದು, ನನ್ನ ತಂದೆ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್‌ಜಿ ದರಡಾ ಅಲಿಯಾಸ್ ‘ಬಾಬುಜೀ’ ಅವರ ಪುಣ್ಯತಿಥಿ.
ಕಾಕತಾಳೀಯ ಎಂಬಂತೆ ಮಹಾರಾಷ್ಟ್ರದ ರಾಜಕಾರಣವೂ ಇದೇ ಸಂದರ್ಭದಲ್ಲಿ ಉಚ್ಛ್ರಾಯದಲ್ಲಿದೆ. ವಿಧಾನಸಭೆ ಚುನಾವಣೆ ಈಗಷ್ಟೇ ಮುಗಿದಿದೆ. ಸರಕಾರ ರಚನೆಯಾಗುವ ಸನ್ನಾಹದಲ್ಲಿದೆ. ಮುಂದಿನ ಐದು ವರ್ಷಗಳ ಕಾಲ ತಮ್ಮನ್ನು ಆಳಲು ಯಾರು ಯೋಗ್ಯರು ಎಂದು ಜನರಿಗೆ ಅನ್ನಿಸಿದೆಯೋ ಅವರನ್ನು ಜನರು ಚುನಾಯಿಸಿದ್ದಾರೆ. ಈ ಸಂದರ್ಭದಲ್ಲಿ ನನ್ನ ತಂದೆಯವರ ಕಾಲದ ರಾಜಕಾರಣ ನೆನಪಾಗುತ್ತದೆ.
ಅಂದಿನದು ಸ್ವಚ್ಛ ರಾಜಕಾರಣ. ಇಂದಿನ ರಾಜಕಾರಣದ ಬಗ್ಗೆಯಂತೂ ನಮಗೆ ಗೊತ್ತೇ ಇದೆ. ಇದೇನೂ ರಹಸ್ಯ ಸಂಗತಿಯಲ್ಲ. ಈ ಅಂಕಣವನ್ನು ರಾಜಕಾರಣದ ಚರ್ಚೆಗೇ ಮೀಸಲಿಡುತ್ತೇನೆ.

ಬಹಳ ಸಣ್ಣ ವಯಸ್ಸಿನಲ್ಲೇ ನಾನು ರಾಜಕಾರಣಕ್ಕೆ ತೆರೆದುಕೊಂಡವನು. ರಾಜಕಾರಣದ ಆಡುಂಬೊಲದಲ್ಲೇ ಬೆಳೆದವನು. ಆ ಕಾಲದ ರಾಜಕಾರಣಿಗಳಿಗೆ ಭಾರತವೆಂಬ ದುರ್ಬಲ, ಬಡ ಮತ್ತು ದೀರ್ಘಕಾಲದ ದಮನಿತ ದೇಶವನ್ನು ಜಾಗತಿಕ ರಂಗದಲ್ಲಿ ತಲೆಯೆತ್ತಿಸಿ ನಿಲ್ಲಿಸಬೇಕು
ಎಂಬ ಅದಮ್ಯ ತುಡಿತವಿತ್ತು. ಅವರು ರಾಜಕಾರಣ ಮಾಡುವುದರ ಏಕಮಾತ್ರ ಉದ್ದೇಶ ಅದೇ ಆಗಿತ್ತು. ಆಗ ದೇಶದ ಬೊಕ್ಕಸದಲ್ಲಿ ಹಣವಿರ ಲಿಲ್ಲ. ಆದರೂ ರಾಜಕೀಯ ನಾಯಕರು ದೊಡ್ಡ ದೊಡ್ಡ ಕನಸನ್ನೇ ಕಾಣುತ್ತಿದ್ದರು. ಅದಕ್ಕೆ ನನ್ನ ತಂದೆಯವರೂ ಹೊರತಾಗಿರಲಿಲ್ಲ. ರಾಷ್ಟ್ರಪಿತ ಮಹಾತ್ಮ ಗಾಂಽಜಿ, ಜವಾಹರಲಾಲ್ ನೆಹರು, ಲಾಲ್‌ಬಹಾದುರ್ ಶಾಸ್ತ್ರಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್‌ರವರು ದೇಶದ ಉದ್ಧಾರ ಕ್ಕಾಗಿ ಕಂಡ ಕನಸು ಮತ್ತು ಆದರ್ಶಗಳನ್ನು ಸಾಕಾರಗೊಳಿಸಲು ಬಾಬುಜೀ ಅವಿರತ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದರು. ದೇಶಕ್ಕಾಗಿ ಅವರಲ್ಲೂ ದೂರದೃಷ್ಟಿಯ ಕನಸುಗಳಿದ್ದವು.

ಆ ದೊಡ್ಡ ದೊಡ್ಡ ನಾಯಕರ ಬಗ್ಗೆ ಯಾವಾಗಲೂ ಅವರು ನಮ್ಮ ಜತೆ ಮಾತನಾಡುತ್ತಿದ್ದರು. ಅವರ ರಾಜಕಾರಣ, ಕನಸು, ದೂರದೃಷ್ಟಿಯ ಬಗ್ಗೆ ಅನೇಕ ಕುತೂಹಲಕರ ಸಂಗತಿಗಳನ್ನು ಹೇಳುತ್ತಿದ್ದರು. ದೇಶದ ಜನಸಾಮಾನ್ಯರ ಸಂಕಷ್ಟಗಳ ಬಗ್ಗೆ ಅವರಿಗಿದ್ದ ಕಳವಳ ಮತ್ತು ಕಾಳಜಿಗಳು ಅವರ ಮಾತಿನಲ್ಲಿ ಎದ್ದು ಕಾಣುತ್ತಿದ್ದವು. ನಾನು ಮತ್ತು ನನ್ನ ತಮ್ಮ ರಾಜೇಂದ್ರ ಬಹಳ ಆಸಕ್ತಿಯಿಂದ ಅವರ ಮಾತುಗಳನ್ನು ಕೇಳಿಸಿಕೊಳ್ಳು ತ್ತಿದ್ದೆವು. ದೇಶದ ಮೂಲಭೂತ ಸ್ಥಿತಿಯನ್ನು ನಾವಿಬ್ಬರೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕೆಂದು ತಂದೆಯವರು ಬಯಸುತ್ತಿದ್ದರು.

ಅದಕ್ಕಾಗಿ ಅವರು ಭಾರತೀಯ ರೈಲ್ವೆಯ ಮೂರನೇ ದರ್ಜೆಯ ಬೋಗಿಯಲ್ಲಿ ನಮ್ಮಿಬ್ಬರನ್ನೂ ಕರೆದುಕೊಂಡು ವರ್ಷಗಟ್ಟಲೆ ದೇಶ ಸುತ್ತಿಸಿದ್ದರು. ಅಲ್ಲಿ ಜನಸಾಮಾನ್ಯರು ಅನುಭವಿಸುವ ಕಷ್ಟಕಾರ್ಪಣ್ಯಗಳು ನಮ್ಮ ಅರಿವಿಗೆ ಬರಲಿ ಮತ್ತು ಅವರ ಬಗ್ಗೆ ನಮ್ಮಲ್ಲಿ ಕರುಣೆ ಬೆಳೆಯಲಿ ಎಂಬುದು
ಅವರ ಉದ್ದೇಶವಾಗಿತ್ತು. ನಮ್ಮಿಬ್ಬರಲ್ಲಿ ಯಾರೂ ರಾಜಕಾರಣಕ್ಕೆ ಬರುವುದು ತಂದೆಯವರಿಗೆ ಇಷ್ಟವಿರಲಿಲ್ಲ. 1962ರಲ್ಲಿ ವಸಂತರಾವ್ ನಾಯಕ್ “ಏಕೆ ನೀವು ಇಬ್ಬರೂ ಮಕ್ಕಳನ್ನು ರಾಜಕಾರಣದಿಂದ ದೂರವಿರಿಸಿದ್ದೀರಿ?” ಎಂದು ತಂದೆಯವರ ಬಳಿ ಕೇಳಿದ್ದರು.

ಅದಕ್ಕೆ ಅವರು, “ಇವತ್ತಿನ ರಾಜಕಾರಣ ಬೇರೆ ರೀತಿಯದು” ಎಂದು ಚುಟುಕಾಗಿ ಉತ್ತರಿಸಿದ್ದರು. ಅಂದೇ ಅವರಿಗೆ ಭವಿಷ್ಯದ ಭಾರತದಲ್ಲಿ
ಅಬ್ಬರಿಸುವ ಜಾತಿ, ಧರ್ಮ ಮತ್ತು ವೈರತ್ವದ ರಾಜಕಾರಣದ ಸುಳಿವು ಸಿಕ್ಕಿತ್ತು. ಇಂಥ ಬೇಡದ ವಿಚಾರಗಳೇ ಮುಂದೆ ಈ ದೇಶದ ರಾಜಕಾರಣದ ಪ್ರಮುಖ ಸಂಗತಿಗಳಾಗುತ್ತವೆ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದರು. ತಮ್ಮ ಮಕ್ಕಳು ರಾಜಕಾರಣಕ್ಕೆ ಬಂದು ಭ್ರಮನಿರಸನರಾಗುವುದು ಬೇಡ ಮತ್ತು ಸಮಾಜದಲ್ಲಿ ನಂಬಿಕೆ ಕಳೆದುಕೊಳ್ಳುವುದು ಬೇಡ ಎಂದು ಅವರು ಬಯಸಿದ್ದರು. ಹೀಗಾಗಿ ನಾವಿಬ್ಬರೂ
ರಾಜಕಾರಣದಿಂದ ದೂರವಿದ್ದರೇ ಒಳ್ಳೆಯದು ಎಂಬುದು ಅವರ ಯೋಚನೆಯಾಗಿತ್ತು.

ಆದರೆ ವಿಽಯ ಬಳಿ ಬೇರೆಯದೇ ಯೋಜನೆಗಳಿದ್ದವು. 1998ರಲ್ಲಿ ಬಾಳಾಸಾಹೇಬ್ ಠಾಕ್ರೆಯವರು ನಮ್ಮ ನಾಗ್ಪುರದ ಮನೆಗೆ ಭೇಟಿ ನೀಡಿ, ನನ್ನನ್ನು ರಾಜ್ಯಸಭೆಗೆ ಕಳುಹಿಸುವ ಬಯಕೆ ವ್ಯಕ್ತಪಡಿಸಿದರು. ನನ್ನ ತಾಯಿ “ಮೊದಲು ಸೋನಿಯಾ ಗಾಂಧಿಯವರನ್ನು ಭೇಟಿಯಾಗು” ಎಂದರು.
ನಾನು ಸೋನಿಯಾರನ್ನು ಭೇಟಿಯಾದೆ. ಅವರು “ನಾನಿದರ ಬಗ್ಗೆ ಯೋಚನೆ ಮಾಡುತ್ತೇನೆ” ಅಂದರು.

ಅದರ ನಡುವೆ ನಾನು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಎಲ್ಲಾ ರಾಜಕೀಯ ಪಕ್ಷಗಳಿಂದಲೂ ನನಗೆ ವೋಟು ಸಿಕ್ಕವು. ಗೆದ್ದೆ. ಬಳಿಕ ಅಟಲ್ ಬಿಹಾರಿ ವಾಜಪೇಯಿಯವರಿಗೆ ಧನ್ಯವಾದ ಹೇಳಲು ಹೋಗಿದ್ದೆ. ಅವರೊಂದು ಮಹತ್ವದ ಸಲಹೆ ನೀಡಿದರು. “ಕಾಲ ಕೂಡಿ ಬಂದಾಗ ನಿಮ್ಮ ನಾಯಕರ ಜತೆಗೆ ಸ್ನೇಹ ಸಂಪಾದಿಸಿಕೊಳ್ಳಿ” ಎಂದರು. ನಂತರ ಆಗಿದ್ದು ಕೂಡ ಅದೇ. ಮಾಧವರಾವ್ ಸಿಂಽಯಾ ಅವರು, “ಸೋನಿಯಾ ಗಾಂಧಿಯವರನ್ನು ನೀವು ಭೇಟಿಯಾಗಬೇಕಂತೆ” ಎಂದು ಕರೆ ಕಳುಹಿಸಿದರು. ಆ ಸಭೆಯ ಬಳಿಕ ಕಾಂಗ್ರೆಸ್ ಪಕ್ಷ ನನಗೆ ಎರಡು ಅವಧಿಗೆ ರಾಜ್ಯಸಭಾ ಸದಸ್ಯತ್ವ ನೀಡಿತು.

ರಾಜೇಂದ್ರನ ರಾಜಕೀಯ ಪ್ರವೇಶ ಕೂಡ ಇದೇ ರೀತಿ ಯೋಜನಾರಹಿತವಾಗಿತ್ತು. ಮಾಧವರಾವ್ ಸಿಂಧಿಯಾ ಮತ್ತು ಎ.ಆರ್.ಅಂತುಳೆಯವರಂಥ ನಾಯಕರು ಔರಂಗಾಬಾದ್ (ಈಗ ಛತ್ರಪತಿ ಸಂಭಾಜಿನಗರ) ಕ್ಷೇತ್ರದಿಂದ ರಾಜೇಂದ್ರ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಿದ್ದರು. ಅವನು ಅದಾಗಲೇ ಬಹಳ ಜನಪ್ರಿಯ ಮುಖಂಡನಾಗಿ ಬೆಳೆದಿದ್ದ. ಹೀಗಾಗಿ ಸುಲಭವಾಗಿ ಚುನಾವಣೆಯಲ್ಲಿ ಗೆದ್ದು, ಮೊದಲ
ಬಾರಿಗೇ ಸಚಿವನೂ ಆಗಿಬಿಟ್ಟ. ನಂತರ ಇನ್ನೂ ಎರಡು ಅವಧಿಗೆ ಅವನು ಮಂತ್ರಿಯಾಗಿ ಕೆಲಸ ಮಾಡಿದ. ಹೀಗಾಗಿ ನಮ್ಮಿಬ್ಬರ ರಾಜಕೀಯ ಪ್ರವೇಶವೂ ಬಹಳ ಅನಿರೀಕ್ಷಿತವಾಗಿತ್ತು. ಆದರೆ ನಾವು ಸಾಂಪ್ರದಾಯಿಕ ರಾಜಕಾರಣವನ್ನು ಎಂದೂ ಮಾಡಲಿಲ್ಲ. ಅದರ ಬದಲಿಗೆ
ನಮ್ಮ ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲೇ ಸಾಗಿ, ಅವರು ನೀಡಿದ ಸಲಹೆಗಳನ್ನು ಪಾಲಿಸುತ್ತಾ, ಅವರ ದೂರದೃಷ್ಟಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲೇ ಕೆಲಸ ಮಾಡಿದೆವು. ನಮ್ಮ ರಾಜಕಾರಣದ ಉದ್ದೇಶ ಸಮಾಜ ಸೇವೆಯಾಗಿತ್ತು. ಜನರ ಹಿತದ ಮುಂದೆ ಬೇರೆಲ್ಲವೂ ನಮಗೆ ಗೌಣವಾಗಿದ್ದವು.

ನನ್ನ ತಂದೆಯವರ ಕಾಲದ ರಾಜಕಾರಣದ ವಿಶೇಷವೆಂದರೆ, ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ನಾಯಕರ ನಡುವೆ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ವೈಯಕ್ತಿಕ ಮಟ್ಟದಲ್ಲಿ ಯಾರಿಗೂ ಯಾರ ಬಗ್ಗೆಯೂ ದ್ವೇಷವಿರುತ್ತಿರಲಿಲ್ಲ. ಇವತ್ತಿನ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಇವತ್ತು ರಾಜಕೀಯ ರಂಗ ಎಷ್ಟು ದ್ವೇಷಪೂರಿತವಾಗಿದೆ ಅಂದರೆ, ಇಲ್ಲಿ ಸೇಡು ತೀರಿಸಿಕೊಳ್ಳಲು ಒಬ್ಬರ ಮೇಲೊಬ್ಬರು ಹಲ್ಲೆ ನಡೆಸುತ್ತಾರೆ.
ರಾಜಕಾರಣಿಗಳ ಹೆಂಡತಿ-ಮಕ್ಕಳ ಮೇಲೂ ದಾಳಿ ಮಾಡುತ್ತಾರೆ. ರಕ್ತ ಹರಿಯುತ್ತದೆ. ಕೊಲೆಗಳು ನಡೆಯುತ್ತವೆ.

ಚುನಾವಣೆ ನಡೆಯುವ ಒಂದೆರಡು ತಿಂಗಳ ಕಾಲ ಇಂತಹುದೇ ಘಟನೆಗಳು ವರದಿಯಾಗುತ್ತಿರುತ್ತವೆ. ರಾಜಕಾರಣ ಈ ಮಟ್ಟಕ್ಕೆ ಏಕೆ ಅಧಃಪತನ ಗೊಂಡಿದೆ ಎಂದು ನಾನು ಯೋಚಿಸುತ್ತಾ ಕುಳಿತುಕೊಳ್ಳುತ್ತೇನೆ. ನನ್ನ ತಂದೆಯವರು ಅಟಲ್ ಬಿಹಾರಿ ವಾಜಪೇಯಿ ಮಹಾರಾಷ್ಟ್ರಕ್ಕೆ ಚುನಾವಣಾ ಪ್ರಚಾರಕ್ಕೆಂದು ಬಂದಾಗ ಅವರಿಗೆ ಕಾರಿನ ವ್ಯವಸ್ಥೆ ಮಾಡಿಸಿದ್ದರ ಬಗ್ಗೆ ಹಿಂದೆ ಒಂದು ಅಂಕಣದಲ್ಲಿ ಹೇಳಿದ್ದೆ! ನನ್ನ ತಂದೆ ಕಾಂಗ್ರೆಸ್ ನಾಯಕರು, ಅಟಲ್‌ಜೀ ಜನಸಂಘದವರು. ಇನ್ನೊಂದು ಘಟನೆ ಈಗ ನೆನಪಾಗುತ್ತಿದೆ. ಯವತ್ಮಾಲ್ ಜಿಲ್ಲಾ ಪರಿಷತ್ ಚುನಾವಣೆಗೆ ಗೋವಿಂದರಾವ್ ಬುಚ್ಕೆ ಸ್ಪರ್ಧಿಸಿದ್ದರು.

ಅವರೊಮ್ಮೆ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರಕ್ಕೆಂದು ಓಡಾಡುತ್ತಿದ್ದರು. ಒಂದು ಕಡೆ ಅವರ ಕಾರು ಕೆಟ್ಟು ನಿಂತುಬಿಟ್ಟಿತ್ತು. ಆ ಸಮಯಕ್ಕೆ ಸರಿಯಾಗಿ ನನ್ನ ತಂದೆಯವರೂ ಅಲ್ಲೇ ಕಾರಿನಲ್ಲಿ ಹಾದು ಹೋಗುತ್ತಿದ್ದರು. ಅವರು ಗೋವಿಂದರಾವ್‌ರನ್ನು ಕರೆದು ಕಾರಿನಲ್ಲಿ ಕುಳ್ಳಿರಿಸಿಕೊಂಡು ಚುನಾವಣಾ ಪ್ರಚಾರದ ರ‍್ಯಾಲಿಯ ಸ್ಥಳದವರೆಗೂ ಬಿಟ್ಟು ಬಂದಿದ್ದರು. ಇಂದು ಎದುರಾಳಿ ರಾಜಕೀಯ ಪಕ್ಷದ ನಾಯಕರಿಗೆ ಹೀಗೆ ಯಾರಾದರೂ ಸಹಾಯ ಮಾಡುವುದನ್ನು ಊಹಿಸಿಕೊಳ್ಳಲು ಸಾಧ್ಯವೇ? ತಂದೆಯವರು ಕಲಿಸಿಕೊಟ್ಟ ಈ ಸಹಕಾರ, ಪರಸ್ಪರರನ್ನು ಗೌರವಿಸುವ ವಿಧಾನ ಹಾಗೂ ಔದಾರ್ಯದ ರಾಜಕಾರಣವನ್ನು ನಾನು ಮತ್ತು ನನ್ನ ತಮ್ಮ ಇಂದಿಗೂ ಪಾಲಿಸುತ್ತಿದ್ದೇವೆ.

ನಾವಿಬ್ಬರೂ ಕಾಂಗ್ರೆಸ್ ಪಕ್ಷದಲ್ಲಿದ್ದರೂ, ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಜತೆಗೆ ಸೌಹಾರ್ದಯುತ ಸಂಬಂಧ ಹೊಂದಿದ್ದೇವೆ. ಸಂಸತ್ತಿನಲ್ಲಿ
ಒಮ್ಮೊಮ್ಮೆ ನಾನು ವಿರೋಧ ಪಕ್ಷಗಳ ಸಂಸದರ ಜತೆಗೆ ಬಹಳ ತೀಕ್ಷ್ಣವಾದ ಚರ್ಚೆಯಲ್ಲಿ ತೊಡಗುತ್ತಿದ್ದೆ. ಆದರೆ, ನಂತರ ಪಾರ್ಲಿಮೆಂಟ್‌ನ ಸೆಂಟ್ರಲ್ ಹಾಲ್‌ನಲ್ಲಿ ಅವರ ಜತೆಗೇ ಕುಳಿತು ಟೀ ಕುಡಿಯುತ್ತಿದ್ದೆ. “ನೀನೇನನ್ನು ನಂಬುತ್ತೀಯೋ ಅದನ್ನು ಬಲವಾಗಿ ಪ್ರತಿಪಾದಿಸು. ಆದರೆ ಬೇರೆಯವರ ಅಭಿಪ್ರಾಯಕ್ಕೂ ಗೌರವ ನೀಡು. ಯಾವುದೇ ವಿಷಯಕ್ಕೆ ಬೇರೆ ಬೇರೆ ಆಯಾಮಗಳು ಇರುತ್ತವೆ. ಒಂದು ವಿಚಾರದಲ್ಲಿ ಹಲವು ಅಭಿಪ್ರಾಯಗಳು ಮೇಳೈಸಿದಾಗ ಮಾತ್ರ ಅದು ಸುಂದರ ಸಂಗತಿಯಾಗಿ ರೂಪುಗೊಳ್ಳುತ್ತದೆ. ಹೀಗಾಗಿ ಹೊಸ ಹೊಸ ಐಡಿಯಾಗಳನ್ನು
ಕೇಳಿಸಿಕೋ. ಯಾವಾಗಲೂ ಬೇರೆಯವರ ಮಾತನ್ನು ಕಿವಿಗೊಟ್ಟು ಆಲಿಸು” ಎಂದು ತಂದೆಯವರು ಹೇಳುತ್ತಿದ್ದರು. ನಾನದನ್ನು ಪಾಲಿಸುತ್ತೇನೆ.
ತಂದೆಯವರೇ ಇದನ್ನು ಇವತ್ತು ಹೇಳಿದ್ದರೆ ಯಾರಾದರೂ ಕೇಳುತ್ತಾರಾ? ಅಥವಾ ನಾನು ಹೇಳಿದರೆ ಯಾರಾದರೂ ಕೇಳಿಸಿಕೊಳ್ಳುತ್ತಾರಾ? ಇವತ್ತಿನ ರಾಜಕೀಯ ಪರಿಸ್ಥಿತಿ ಹೇಗಿದೆ ಅಂದರೆ, ಭಿನ್ನವಾದ ಅಭಿಪ್ರಾಯವನ್ನು ಯಾರಾದರೂ ಹೇಳಿದರೆ ಅವರಿಗೆ ದೇಶದ್ರೋಹಿಯ ಪಟ್ಟ ಕಟ್ಟಿಬಿಡುತ್ತಾರೆ.

ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ವೇಳೆ ನನ್ನ ತಂದೆಯವರು ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಹೇಳುತ್ತಿದ್ದ ಒಂದು ದಂತಕತೆಯನ್ನು ನೆನಪಿಸಿಕೊಂಡಿದ್ದೆ. ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಲ್ಲಿ ವಾಜಪೇಯಿಯವರು ಜವಾಹರಲಾಲ್ ನೆಹರು ಅವರನ್ನು ವಾಚಾಮಗೋಚರವಾಗಿ
ಟೀಕಿಸುತ್ತಿದ್ದರು. ಆದರೂ ಕಲಾಪದ ಬಳಿಕ ಸೆಂಟ್ರಲ್ ಹಾಲ್ ನಲ್ಲಿ ಸಿಕ್ಕಾಗ ನೆಹರೂ ಅವರು, “ಬಹಳ ಚೆನ್ನಾಗಿ ಮಾತನಾಡಿದಿರಿ!” ಎಂದು ಅಟಲ್‌ಜೀಗೆ ಅಭಿನಂದನೆ ಹೇಳುತ್ತಿದ್ದರಂತೆ.

ಅದಕ್ಕೆ ಪ್ರತಿಯಾಗಿ ವಾಜಪೇಯಿ ಕೂಡ ನೆಹರುರನ್ನು ತುಂಬಾ ಗೌರವಿಸುತ್ತಿದ್ದರು. ಅವರೇ ನನ್ನ ಬಳಿ ಒಂದು ಕತೆ ಹೇಳಿದ್ದರು. ೧೯೭೭ರಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾಗಿದ್ದರು. ಆಗ ಸೌತ್ ಬ್ಲಾಕ್‌ನಲ್ಲಿ ನೆಹರು ಫೋಟೋ ಇಲ್ಲದಿರುವುದು ಅವರ ಗಮನಕ್ಕೆ ಬಂತು.
ಫೋಟೋ ಏನಾಯಿತು ಎಂದು ಅಽಕಾರಿಗಳ ಬಳಿ ವಿಚಾರಿಸಿದರು. ಮುಜುಗರಕ್ಕೆ ಒಳಗಾದ ಅಧಿಕಾರಿಗಳು ಅದೇ ದಿನ ನೆಹರು ಫೋಟೋ ಅಳವಡಿಸಿದ್ದರು.

ಪರಸ್ಪರರನ್ನು ಗೌರವಿಸುವ ಇಂಥ ವಾತಾವರಣವೇ ಇಂದು ಕಣ್ಮರೆಯಾಗಿದೆ. ಚುನಾವಣಾ ಪ್ರಚಾರದ ವೇಳೆ ನಡೆದ ಹಿಂಸಾಚಾರಗಳನ್ನು ನೋಡಿ ನನಗೆ ಆಘಾತವಾಗಿತ್ತು. ಮಹಾರಾಷ್ಟ್ರ ಎಂದೂ ಈ ರೀತಿ ಇರಲಿಲ್ಲ! ಆದರೇನು ಮಾಡುವುದು, ನಾವು ಹೊಸ ಯುಗದಲ್ಲಿ
ದ್ದೇವೆ. ಹಳೆಯದನ್ನು ಹಿಂದಿಕ್ಕಿ ಕಾಲವೇ ಹೊಸತರ ಹಿಂದೆ ಓಡುತ್ತಿದೆ. ಈ ಕಾಲದ ರಾಜಕಾರಣಿಗಳಿಗೆ ನನ್ನದು ಒಂದೇ ಮನವಿ. ಕೇವಲ ಗೆಲುವನ್ನು ಮಾತ್ರ ನೋಡಬೇಡಿ. ಎಲ್ಲರನ್ನೂ ಗೌರವಿಸಿ. ಒಳ್ಳೆಯ ನಡವಳಿಕೆ ಬಹಳ ಮುಖ್ಯ. ರಾಜಕೀಯ ಪಕ್ಷಗಳು ಸಂಕುಚಿತ ಮನೋಭಾವವನ್ನು ಬಿಟ್ಟು ಬೆಳೆಯಬೇಕು. ಗೌರವದ ಮಾತು ಬಂದಾಗ ನನ್ನ ತಂದೆಯವರ ಕಾಲದ ಇನ್ನೂ ಒಂದು ಘಟನೆ ನೆನಪಾಗುತ್ತದೆ.
ಯವತ್ಮಾಲ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿತ್ತು. ಜಾಂಬುವಂತರಾವ್ ಧೋತೆ ಎದುರು ನನ್ನ ತಂದೆ ಸೋತಿದ್ದರು. ಅದು ಧೋತೆಯವರಿಗೆ ಚೊಚ್ಚಲ ಗೆಲುವಾಗಿತ್ತು. ಅವರ ವಿಜಯೋತ್ಸವದ ಮೆರವಣಿಗೆ ಗಾಂಧಿ ಚೌಕಕ್ಕೆ ಬಂದಾಗ ತಂದೆಯವರು ಸ್ವತಃ ಅಲ್ಲಿಗೆ ಹೋಗಿ,
ಧೋತೆಗೆ ಮಾಲಾರ್ಪಣೆ ಮಾಡಿ, ಅಭಿನಂದನೆ ಸಲ್ಲಿಸಿದ್ದರು.

ಮಹಾರಾಷ್ಟ್ರ ಮತ್ತು ದೇಶದ ಪ್ರಗತಿಗೆ ಇಂಥ ಉದಾರ ಮನೋಭಾವದ ರಾಜಕಾರಣದ ಅಗತ್ಯವಿದೆ. ನಾನು ಹಳೆಯ ದಿನಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.

(ಲೇಖಕರು ಹಿರಿಯ ಪತ್ರಿಕೋದ್ಯಮಿ)

ಇದನ್ನೂ ಓದಿ: dr vijay Darda