Wednesday, 11th December 2024

Dr Vijay Darda Column: ಮಹಾತ್ಮಾ ಗಾಂಧೀಜಿ ಈಗ ನಮ್ಮೊಂದಿಗೆ ಇದ್ದಿದ್ದರೆ!

ಸಂಗತ

ಡಾ.ವಿಜಯ್‌ ದರಡಾ

ಇನ್ನು ೨-೩ ಶತಮಾನಗಳ ಬಳಿಕ ಜನರು ಖಂಡಿತ ಗಾಂಧೀಜಿಯನ್ನು ದೇವರೆಂದು ಪೂಜಿಸುತ್ತಾರೆ. ಇಂದು ನಮಗೆ ಗಾಂಧೀಜಿ ಆದರ್ಶ ವ್ಯಕ್ತಿಯಾಗಿದ್ದರೆ, ಮುಂದಿನ ಶತಮಾನಗಳಲ್ಲಿ ಅವರು ದೇವರಾಗುತ್ತಾರೆ. ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಆಲ್ಬರ್ಟ್ ಐನ್‌ಸ್ಟೀನ್ ‘ಮಾಂಸ ಹಾಗೂ ರಕ್ತದಿಂದ ಕೂಡಿದ ಇಂಥ ವ್ಯಕ್ತಿಯೊಬ್ಬರು ಈ ಭೂಮಿಯ ಮೇಲೆ ಓಡಾಡಿದ್ದರು ಎಂಬುದನ್ನು ಮುಂದಿನ ತಲೆಮಾರಿನವರು ನಂಬುವುದೂ ಕಷ್ಟವಾಗುತ್ತದೆ’ ಎಂದಿದ್ದರು.

ನೀವು ಯಾವತ್ತೂ ಗಾಂಧೀಜಿಯನ್ನು ಭೇಟಿ ಮಾಡಿಲ್ಲ. ನಾನೂ ಭೇಟಿಯಾಗಿಲ್ಲ ಬಿಡಿ. ಆದರೆ ನಾನು ಅವರ ಬಗ್ಗೆ ನನ್ನ ತಂದೆಯವರಿಂದ ಸಾಕಷ್ಟು ಕೇಳಿ ತಿಳಿದುಕೊಂಡಿದ್ದೇನೆ. ನನ್ನ ತಂದೆ ಜವಾಹರಲಾಲ್ ದರಡಾ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರಾಗಿದ್ದರು. ನೀವು ಗಾಂಧೀಜಿಯನ್ನು ನಿಜವಾಗಿಯೂ ತಿಳಿದುಕೊಳ್ಳಬೇಕು ಅಂದರೆ ಸೇವಾಶ್ರಮಕ್ಕೆ ಭೇಟಿ ನೀಡಬೇಕು. ಇವತ್ತಿಗೂ ಗಾಂಧೀಜಿ ಅಲ್ಲಿ ಜೀವಂತವಾಗಿದ್ದಾರೆ!

ಇಂದು ಜಗತ್ತು ಯಾವ್ಯಾವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಬಯಸುತ್ತಿದೆಯೋ ಅಂಥ ಎಲ್ಲಾ ಸಂಗತಿಗಳ ಬಗ್ಗೆ ಗಾಂಧೀಜಿ ಆ ಸೇವಾಶ್ರಮದಲ್ಲೇ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದರು. ನಿಜಕ್ಕೂ ಅವರೊಬ್ಬ ಅಸಾಮಾನ್ಯ ಹಾಗೂ ಅದ್ಭುತ ವ್ಯಕ್ತಿ.

ಇನ್ನು ಎರಡು ಅಥವಾ ಮೂರು ಶತಮಾನಗಳ ಬಳಿಕ ಜನರು ಖಂಡಿತ ಗಾಂಧೀಜಿಯನ್ನು ದೇವರೆಂದು ಪೂಜಿಸು
ತ್ತಾರೆ. ಇಂದು ನಮಗೆ ಗಾಂಧೀಜಿ ಆದರ್ಶ ವ್ಯಕ್ತಿಯಾಗಿದ್ದರೆ, ಮುಂದಿನ ಶತಮಾನಗಳಲ್ಲಿ ಅವರು ದೇವರಾಗುತ್ತಾರೆ.
ಜಗತ್ತಿನ ಅತ್ಯಂತ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಆಲ್ಬರ್ಟ್ ಐನ್‌ಸ್ಟೀನ್ ಅವರು ‘ಮಾಂಸ ಹಾಗೂ ರಕ್ತದಿಂದ ಕೂಡಿದ ಇಂಥ ವ್ಯಕ್ತಿಯೊಬ್ಬರು ಈ ಭೂಮಿಯ ಮೇಲೆ ಓಡಾಡಿದ್ದರು ಎಂಬುದನ್ನು ಮುಂದಿನ ತಲೆಮಾರಿನವರು ನಂಬುವುದು ಕೂಡ ಕಷ್ಟವಾಗುತ್ತದೆ’ ಎಂದು ಹೇಳಿದ್ದರು. ಒಮ್ಮೆ ಊಹಿಸಿಕೊಳ್ಳಿ. ಅತ್ಯುನ್ನತ ಶಿಕ್ಷಣ ಪಡೆದ ವ್ಯಕ್ತಿಯೊಬ್ಬ ಆ ಕಾಲದಲ್ಲಿ ಜಗತ್ತಿನ ಅತ್ಯಂತ ಪ್ರಬಲ ಸಾಮ್ರಾಜ್ಯ ಎಂದು ಹೆಸರು ಪಡೆದ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಕೇವಲ ಅಹಿಂಸೆಯನ್ನೇ ಶಸ್ತ್ರವಾಗಿಸಿಕೊಂಡು ಹೋರಾಡುವುದು ಅಂದರೆ ಸಾಮಾನ್ಯ ಸಂಗತಿಯೇ? ಬ್ರಿಟಿಷ್ ಸಾಮ್ರಾಜ್ಯ ಬಹಳ ವಿಸ್ತಾರವಾಗಿತ್ತು, ಅಗಾಧ ಶ್ರೀಮಂತವಾಗಿತ್ತು ಹಾಗೂ ಆ ಸಾಮ್ರಾಜ್ಯದಲ್ಲಿ ಸೂರ್ಯ ಮುಳುಗುವುದೇ ಇಲ್ಲ ಎಂದು ಜಗತ್ತು ನಂಬಿತ್ತು.

ಅಂಥ ಅಸಾಮಾನ್ಯ ಶಕ್ತಿಶಾಲಿ ರಾಷ್ಟ್ರವನ್ನು ಎದುರುಹಾಕಿ ಕೊಳ್ಳುವುದು ಹುಡುಗಾಟವಲ್ಲ. ಒಂದು ಕಾಲದಲ್ಲಿ ಸೂಟು ಬೂಟು ಧರಿಸಿ ಓಡಾಡುತ್ತಿದ್ದ ವ್ಯಕ್ತಿ ಇದ್ದಕ್ಕಿ ದ್ದಂತೆ ಅದನ್ನು ತ್ಯಜಿಸಿ ತನ್ನ ಜೀವಮಾನಪೂರ್ತಿ ಸರಳಾತಿ ಸರಳ ಕಚ್ಚೆಪಂಚೆ ಉಟ್ಟು ಸ್ವಾತಂತ್ರ್ಯ ಹೋರಾಟ ನಡೆಸಲು ತೀರ್ಮಾನಿಸುವುದು ಸಣ್ಣ ಸಂಗತಿಯೇ? ಗಾಂಧೀಜಿ ಇದನ್ನು ಮಾಡಿದರು. ತನ್ನ ದೇಶದ ಜನರು ತನ್ನನ್ನೂ ತಮ್ಮೊಳಗೊಬ್ಬ ಸಾಮಾನ್ಯ ವ್ಯಕ್ತಿಯೆಂದು ಪರಿಗಣಿಸಲಿ, ಅವರಿಗೆ ಸ್ವಾತಂತ್ರ್ಯದ ಸುಖವೆಂದರೆ ಏನು ಎಂಬುದು ಅನುಭವಿಸುವುದಕ್ಕೆ ಸಿಗಲಿ ಎಂಬ ಕಾರಣದಿಂದ ಹೀಗೆ ಮಾಡಿದರು. ಚರಕದಂಥ ಅತ್ಯಂತ ಸರಳ ಹಾಗೂ ಸೋವಿ ಯಂತ್ರದ ಮೂಲಕ ನೂಲು ತೆಗೆದು ಬ್ರಿಟಿಷ್ ಸರಕಾರದ ಆರ್ಥಿಕ ಽಮಾಕಿನ ಮೇಲೆ ದಾಳಿ ನಡೆಸಿದರು. ಅದಕ್ಕೂ ಮೊದಲು ಬ್ರಿಟಿಷರು ನಮ್ಮ ದೇಶದ ಜವಳಿ ಕೈಮಗ್ಗಗಳನ್ನು ನಾಶಪಡಿಸಿದ್ದರು. ತಮ್ಮ ಬಟ್ಟೆಯನ್ನು ತಾವೇ ನೇಯ್ದುಕೊಳ್ಳುತ್ತಿದ್ದ ಭಾರತೀಯರು, ನಮ್ಮದೇ ದೇಶದ ಹತ್ತಿಯನ್ನು ಬಳಸಿಕೊಂಡು ಬ್ರಿಟಿಷರು ಬ್ರಿಟನ್ನಿನಲ್ಲಿ ಉತ್ಪಾದಿಸಿದ ಬಟ್ಟೆಯನ್ನು ದುಡ್ಡು ಕೊಟ್ಟು ಕೊಂಡು ಕೊಳ್ಳುವಂತೆ ಮಾಡಿದ್ದರು.

ನಾನು ಗಾಂಧಿಯವರ ಬದುಕಿನ ಪ್ರತಿಯೊಂದು ಮಜಲನ್ನೂ ಅಧ್ಯಯನ ಮಾಡಿದ್ದೇನೆ. ಅವರಂಥ ನಾಯಕ ಇನ್ನೊಮ್ಮೆ ಹುಟ್ಟಿಬರಲು ಸಾಧ್ಯವೇ ಇಲ್ಲ ಎಂದು ನನಗೆ ಅನ್ನಿಸಿದೆ. ಆದರೂ ಗಾಂಧೀಜಿ ಇನ್ನೊಮ್ಮೆ
ಹುಟ್ಟಿ ಬಂದು ನಮ್ಮೊಂದಿಗೆ ಬದುಕಲಿ ಎಂದು ಬಯಸುತ್ತೇನೆ! ಈ ಕಾಲದ ಕೆಲ ನಾಯಕರು ಹಾಗೂ ಹೊಸ ತಲೆಮಾರಿನ ಹುಡುಗರು ಹಿಂದೆಮುಂದೆ ಯೋಚಿಸದೆ ಗಾಂಧೀಜಿಯನ್ನು ಟೀಕಿಸುತ್ತಾರೆ. ಕೆಲವೊಮ್ಮೆ ಗಾಂಧೀಜಿಯನ್ನು ಅರ್ಥವೇ ಮಾಡಿಕೊಳ್ಳದೆ ಅವರ ಬಗ್ಗೆ ಅಸಂಬದ್ಧ ಮಾತನಾಡುತ್ತಾರೆ.

ನನ್ನ ಪ್ರಕಾರ ಅಂಥವರಿಗೆ ಗಾಂಧೀಜಿಯೆಂದರೆ ಏನು ಎಂಬುದು ಗೊತ್ತಿಲ್ಲ. ಅವರಿಗೆ ನಾನು ಕೇಳುವುದು ಇಷ್ಟೆ:
ನಮ್ಮ ದೇಶದ ಜನಸಾಮಾನ್ಯರು ಸ್ವಾತಂತ್ರ್ಯ ಹೋರಾಟದಲ್ಲಿ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳದೆ ಇದ್ದಿದ್ದರೆ ಬ್ರಿಟಿಷರು ಈ ದೇಶವನ್ನು ಬಿಟ್ಟು ಹೋಗುತ್ತಿದ್ದರೇ? ಇಲ್ಲ. ಪ್ರತಿಯೊಬ್ಬ ಸಾಮಾನ್ಯ ಭಾರತೀಯ ಪ್ರಜೆಯೂ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಿಕೊಂಡು ಹೋರಾಟಕ್ಕೆ ಇಳಿದಿದ್ದರಿಂದ ಬ್ರಿಟಿಷರು ಬ್ರಿಟನ್ನಿಗೆ ಮರಳಿ ಹೋಗಬೇಕಾಯಿತು. ಆ ಜಾಗೃತಿ ಮೂಡಿಸಿದವರು ಯಾರು? ಅನುಮಾನವೇ ಬೇಡ, ಅವರು ಮಹಾತ್ಮ ಗಾಂಧೀಜಿ.

ಅವರು ದೇಶದ ಮೂಲೆಮೂಲೆಗಳನ್ನು ಸುತ್ತಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ದೇಶದ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲೂ ಬ್ರಿಟಿಷರ ನಿಜವಾದ ಉದ್ದೇಶವೇನೆಂಬುದನ್ನು ಅಚ್ಚೊತ್ತುವಂತೆ ಮಾಡಿದರು. ಅವರ ಮಾತು, ಬರಹ ಹಾಗೂ ನಡೆಗಳು ಎಷ್ಟು ಸರಳ ಮತ್ತು ಮನವರಿಕೆಯಾಗುವಂತೆ ಇದ್ದವು ಅಂದರೆ, ಆ ಕಾಲದ ಮಕ್ಕಳು ಕೂಡ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು.

ಸ್ವಾತಂತ್ರ್ಯ ಹೋರಾಟದ ಅನೇಕ ಕತೆಗಳನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ನನ್ನ ತಂದೆ ಜವಾಹರಲಾಲ್ ದರಡಾ ಅವರಿಂದ ನಾನು ಕೇಳಿದ್ದೇನೆ. ನನಗೆ ಇವತ್ತಿಗೂ ಹಚ್ಚಹಸಿರಾಗಿ ನೆನಪಿರುವುದೆಂದರೆ ಗಾಂಧೀಜಿ ಇಂಗ್ಲೆಂಡ್‌ನಲ್ಲಿ 5ನೇ ಕಿಂಗ್ ಜಾರ್ಜ್‌ನನ್ನು ಭೇಟಿಯಾದ ಕತೆ. ಅದು ನನ್ನ ಮನಸ್ಸಿನ ಮೇಲೆ ಗಾಢ ಪ್ರಭಾವ ಉಂಟುಮಾಡಿದೆ. ರಾಜನನ್ನು ಭೇಟಿಯಾಗಲು ಗಾಂಧೀಜಿ ಹೋದಾಗ ಇವರ ವೇಷಭೂಷಣ ನೋಡಿ ಅರಮನೆಯ ಅಧಿಕಾರಿಗಳು ಇರಿಸು ಮುರಿಸುಗೊಂಡಿದ್ದರು. ಆದರೂ ಅದಕ್ಕೆ ಸೊಪ್ಪು ಹಾಕದೆ ಕೇವಲ ಕಚ್ಚೆಪಂಚೆ ಹಾಗೂ ಶಲ್ಯದಲ್ಲೇ ಹೋಗಿ ಗಾಂಧೀಜಿ ರಾಜನನ್ನು ಭೇಟಿಯಾಗಿದ್ದರು.

ಮರಳಿ ಬಂದ ಮೇಲೆ ಅವರ ಬಳಿ ಪತ್ರಕರ್ತರೊಬ್ಬರು, ‘ನೀವು ಪಂಚೆ ಉಟ್ಟುಕೊಂಡು ಹೋಗಿ ರಾಜನನ್ನು ಭೇಟಿಯಾಗಿದ್ದು ಸರಿಯೇ?’ ಎಂದು ಕೇಳಿದ್ದರು. ಅದಕ್ಕೆ ಗಾಂಧೀಜಿ ಹೇಳಿದ್ದೇನು ಗೊತ್ತಾ? ‘ರಾಜನೇ ನಮಗಿಬ್ಬರಿಗೂ ಸಾಕಾಗುವಷ್ಟು ಬಟ್ಟೆ ಧರಿಸಿದ್ದ!’ ಸೂಕ್ಷ್ಮವಾಗಿ ಯೋಚಿಸಿ ನೋಡಿ. ಇದು ತಮಾಷೆಯ ಉತ್ತರವಲ್ಲ. ಇದು ಬಹಳ ಶಕ್ತಿಶಾಲಿಯಾದ ಹೇಳಿಕೆ. ಇದರಲ್ಲಿ ಗಾಢ ಅರ್ಥ ಅಡಗಿದೆ.

ಗಾಂಧೀಜಿಯ ಜೀವನಶೈಲಿಯೇ ಹಾಗಿತ್ತು. ಅವರ ಚಿಂತನೆಗಳು ಬಹಳ ಸರಳವೂ, ಉದಾತ್ತವೂ ಆಗಿದ್ದವು. ಅವರು ನುಡಿದಂತೆ ನಡೆದರು ಮತ್ತು ನಡೆದಂತೆ ಉಪದೇಶ ಮಾಡಿದರು. ಆದ್ದರಿಂದಲೇ ದೇಶದ ಜನರು ಪ್ರೀತಿಯಿಂದ ಅವರನ್ನು ‘ಮಹಾತ್ಮ’ ಎಂದು ಕರೆಯಲು ಆರಂಭಿಸಿದರು. ಮಹಾತ್ಮ ಅಂದರೆ ಏನು ಅರ್ಥ? ಇದನ್ನು ಸಂತ ಎಂದು
ವಿಶ್ಲೇಷಣೆ ಮಾಡಬಾರದು. ಆ ಕಾಲದಲ್ಲೇ ಕೆಲವರು ‘ಗಾಂಧೀಜಿಯೆಂದರೆ ರಾಜಕಾರಣಿಯಾಗಲು ಹೊರಟಿರುವ
ಒಬ್ಬ ಸಂತ’ ಎಂದು ಟೀಕಿಸಿದ್ದರು.

ಅದಕ್ಕೆ ಗಾಂಧೀಜಿ, ‘ತಪ್ಪು ತಪ್ಪು. ನನ್ನನ್ನು ಬೇಕಾದರೆ ನೀವು ಸಂತನಾಗಲು ಹೊರಟ ರಾಜಕಾರಣಿ ಎಂದು ಕರೆಯಿರಿ’ ಎಂದು ಹೇಳಿದ್ದರು. ತಾವು ಅನುಸರಿಸುತ್ತಿರುವ ಸತ್ಯ ಮತ್ತು ಅಹಿಂಸೆಯ ಹಾದಿ ಹೊಸತಲ್ಲ, ಅದು ಈ ಭೂಮಿಯಲ್ಲಿರುವ ಪುರಾತನ ಪರ್ವತಗಳಷ್ಟೇ ಹಳೆಯದು ಎಂದು ಹೇಳಿದ್ದರು. ಹಿಂಸೆಯು ಯಾವುದೇ ರೂಪ ದಲ್ಲಿದ್ದರೂ ಅದರಿಂದ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಇದನ್ನು ಅವರು ಜನರಿಗೂ ಮನವರಿಕೆ ಮಾಡಿಕೊಟ್ಟಿದ್ದರು. ಹೀಗಾಗಿಯೇ ಜಗತ್ತಿನಾದ್ಯಂತ ನಾನಾ ದೇಶಗಳ ಜನರು ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು.

ಅಮೆರಿಕದಲ್ಲಿ ಕರಿಯರ ಹಕ್ಕುಗಳಿಗಾಗಿ ಹೋರಾಡಿದ ಕ್ರಾಂತಿಕಾರಿ ಮಾರ್ಟಿನ್ ಲೂಥರ್ ಕಿಂಗ್ ಅವರು
ಗಾಂಧೀಜಿಯ ಸಿದ್ಧಾಂತವನ್ನೇ ಅಳವಡಿಸಿಕೊಂಡಿದ್ದರು. ಗಾಂಧೀಜಿಯವರ ಮಾರ್ಗವನ್ನು ಅನುಸರಿಸಿ ಡಜನ್‌ಗಟ್ಟಲೆ ದೇಶಗಳು ಸ್ವಾತಂತ್ರ್ಯ ಗಳಿಸಿದವು. ಗಾಂಧೀಜಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಮಾತ್ರ ಹೋರಾಡಿದರು ಎಂದು ಈ ತಲೆಮಾರಿನ ತರುಣರು ಭಾವಿಸಬಾರದು. ಅವರು ಸ್ವಾತಂತ್ರ್ಯಾನಂತರ ಈ ದೇಶ ಹೇಗೆ ಅಭಿವೃದ್ಧಿ ಹೊಂದಬೇಕು ಎಂಬುದರ ಬಗ್ಗೆಯೂ ಸಾಕಷ್ಟು ಯೋಚಿಸಿದ್ದರು ಮತ್ತು ಆ ಚಿಂತನೆಗಳನ್ನು ಜನಮಾನಸದಲ್ಲಿ ಬಿತ್ತಿದ್ದರು. ಹಳ್ಳಿ ಗಳು ಉದ್ಧಾರವಾಗದ ಹೊರತು ಭಾರತ ಉದ್ಧಾರವಾಗುವುದಿಲ್ಲ, ಹೀಗಾಗಿ ಮೊದಲು ಭಾರತದ ಹಳ್ಳಿಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಹೇಳಿದ್ದರು.

ಗ್ರಾಮೀಣಾಭಿವೃದ್ಧಿ ಎಂಬ ಪರಿಕಲ್ಪನೆ ನಮಗೆ ದೊರೆತಿದ್ದೇ ಗಾಂಧೀಜಿಯಿಂದ. ಅವರು ನಮ್ಮನ್ನು ಬಿಟ್ಟು ಹೋಗಿ ಮುಕ್ಕಾಲು ಶತಮಾನವೇ ಕಳೆದಿದ್ದರೂ ನಾವು ಗ್ರಾಮೀಣಾಭಿವೃದ್ಧಿಯ ಸಿದ್ಧಾಂತವನ್ನು ಆಡಳಿತದ ನೀತಿಯಲ್ಲಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದೇವೆ. ಈ ದೇಶದಲ್ಲಿ ಮೊದಲ ಬಾರಿಗೆ ಸ್ವಚ್ಛತೆಯ ಮಹತ್ವದ ಬಗ್ಗೆ ಮಾತನಾಡಿದವರು ಗಾಂಧೀಜಿ. ಪ್ರತಿಯೊಬ್ಬ ಪ್ರಜೆಗೂ ಸ್ವಚ್ಛತೆ ಹಾಗೂ ನೈರ್ಮಲ್ಯದ ಪರಿಕಲ್ಪನೆ ತಲುಪಬೇಕು ಎಂದು ಅವರು ಬಯಸಿದ್ದರು.

ಮಹಿಳೆಯರು ಶೈಕ್ಷಣಿಕವಾಗಿ ಮುಂದೆ ಬಂದು ಸ್ವಾವಲಂಬಿಯಾಗುವುದಕ್ಕೂ ಅವರು ದಾರಿ ತೋರಿಸಿದರು. ಬದುಕಿನ ನಾನಾ ಕ್ಷೇತ್ರಗಳಿಗೆ ಅನ್ವಯಿಸುವ ಅದೆಷ್ಟೋ ಸಿದ್ಧಾಂತಗಳನ್ನು ಗಾಂಧೀಜಿ ನೀಡಿದರು. ತನ್ಮೂಲಕ ಯುವಕರಿಗೆ ಸ್ಪೂರ್ತಿದಾಯಕವಾದ ಅಸಂಖ್ಯ ಸಂಗತಿಗಳನ್ನು ಬಿಟ್ಟುಹೋದರು. ಇಂದಿನ ಹೊಸ ತಲೆಮಾರಿನ ಮಕ್ಕಳು ಕೂಡ ಅವರಿಂದ ಕಲಿಯಬೇಕಾದುದು ಸಾಕಷ್ಟಿದೆ.

ಆದರೆ, ಸಮಸ್ಯೆಯೇನೆಂದರೆ ಈ ಕಾಲದ ಮಕ್ಕಳಿಗೆ ಗಾಂಧೀಜಿಯ ಬಗ್ಗೆ ಹೆಚ್ಚು ಮಾಹಿತಿಯೇ ಇಲ್ಲ. ಅವರು
ಗಾಂಧೀಜಿಯ ಬದುಕು ಹಾಗೂ ಬೋಧನೆಗಳ ಬಗ್ಗೆ ಬಹಳ ಕಡಿಮೆ ತಿಳಿದುಕೊಂಡಿದ್ದಾರೆ. ಏಕೆ ಹೀಗಾಯಿತು? ಅವರಿಗೆ ಗಾಂಧೀಜಿಯ ಬಗ್ಗೆ ತಿಳಿಸಿಕೊಡುವುದು ನಮ್ಮ ಕರ್ತವ್ಯವಾಗಿತ್ತು. ಈ ಕರ್ತವ್ಯದಲ್ಲಿ ನಾವೇಕೆ ಸೋತೆವು? ನಮ್ಮ ಶಿಕ್ಷಣ ಸಂಸ್ಥೆಗಳು ಕೂಡ ಗಾಂಧೀಜಿ ಬಗ್ಗೆ ಮಕ್ಕಳಿಗೆ ತಿಳಿಸಬೇಕಿತ್ತು.

ಅವೂ ತಮ್ಮ ಕಾರ್ಯದಲ್ಲಿ ವಿಫಲವಾಗಿವೆ. ಈ ದೇಶದ ಮಣ್ಣಿನಲ್ಲಿ ಜನಿಸಿದ, ಜಗತ್ತೇ ಬೆರಗಿನಿಂದ ಗೌರವಿಸುವ
ಅಸಾಮಾನ್ಯ ವ್ಯಕ್ತಿಯನ್ನೇ ನಮ್ಮ ಮುಂದಿನ ತಲೆಮಾರುಗಳು ಮರೆತರೆ ಹೇಗೆ? ಜಗತ್ತಿನ 80ಕ್ಕೂ ಹೆಚ್ಚು ದೇಶಗಳಲ್ಲಿ
ಗಾಂಧೀಜಿಯ 110ಕ್ಕೂ ಹೆಚ್ಚು ಪುತ್ಥಳಿಗಳಿವೆ. ಈ ಗೌರವ ಪಡೆದ ಭಾರತದ ಏಕೈಕ ವ್ಯಕ್ತಿ ಗಾಂಧೀಜಿ. ಅವರ ಬಗ್ಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲೂ ಪಾಠ ಮಾಡಲಾಗುತ್ತದೆ. ಆದರೆ, ನಾವು ನಮ್ಮದೇ ದೇಶದಲ್ಲಿರುವ ಸೇವಾಗ್ರಾಮವನ್ನು ಮರೆತಿದ್ದೇವೆ.

ಗಾಂಧೀಜಿಯನ್ನು ನಾವು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನಿರ್ಲಕ್ಷಿಸುತ್ತಿದ್ದೇವೆ. ಜಾತಿ, ಧರ್ಮ, ಪಂಥ ಹಾಗೂ
ಬಣ್ಣವನ್ನು ಆಧರಿಸಿ ಕ್ಷುಲ್ಲಕ ಹಾಗೂ ಅಸಂಬದ್ಧ ಸಿದ್ಧಾಂತಗಳಿಗೆ ಸಮಾಜದಲ್ಲಿ ಮಹತ್ವ ದೊರೆಯುವಂತೆ ಮಾಡಿದ್ದೇವೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಕೆಲಸ ಮಾಡುತ್ತಿರುವವರು ಗಾಂಧೀಜಿಯನ್ನು ಇನ್ನೊಮ್ಮೆ ಓದಬೇಕು. ಆಗ ತಾವು ಸಮಾಜಕ್ಕೆ ಹೇಗೆ ವಿಷ ಉಣಿಸುತ್ತಿದ್ದೇವೆ ಎಂಬುದು ಅವರಿಗೆ ಮನವರಿಕೆಯಾಗುತ್ತದೆ. ನಾವಿಂದು ಗಾಂಧೀಜಿಯ ಸ್ಮಾರಕವಾದ ಸೇವಾಗ್ರಾಮವನ್ನು ಇಡೀ ದೇಶ ತಿರುಗಿ ನೋಡುವಂತೆ ಅಭಿವೃದ್ಧಿ ಪಡಿಸಬೇಕಿದೆ. ಭಾರತದ ಜನರಷ್ಟೇ ಅಲ್ಲ, ವಿದೇಶಗಳಿಂದಲೂ ಅಲ್ಲಿಗೆ ಪ್ರವಾಸಿಗರು ಬರುವಂತೆ ಅದನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗಿ ರೂಪಿಸಬೇಕಿದೆ.

ಗಾಂಧೀಜಿ ಕುರಿತಾದ ಸಿನಿಮಾವನ್ನು ನಮ್ಮ ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ತೋರಿಸಬೇಕಿದೆ. ನಮ್ಮ ರಾಜಕಾರಣಿ ಗಳಿಗೂ, ಅಧಿಕಾರಿಗಳಿಗೂ ಗಾಂಧೀಜಿಯನ್ನು ಇನ್ನೊಮ್ಮೆ ಅರ್ಥ ಮಾಡಿಸಬೇಕಿದೆ. ಏಕೆಂದರೆ, ನಮ್ಮ ದೇಶದ ಸಮಸ್ಯೆಗಳಿಗೆ ಗಾಂಧಿ ಮಾರ್ಗವೇ ನಿಜವಾದ ಪರಿಹಾರ.

(ಲೇಖಕರು ಹಿರಿಯ ಪತ್ರಿಕೋದ್ಯಮಿ)

ಇದನ್ನೂ ಓದಿ: Dr Vijay Darda Column: ನಂಬಿಕೆಯನ್ನಾದರೂ ರಾಜಕೀಯದಿಂದ ದೂರವಿಡಿ!