Monday, 4th November 2024

ಡಾ.ವಿಷ್ಣುವರ್ಧನ್‌: ಸಂಭಾವಿತ ನಟರ ದುರದೃಷ್ಟಗಳು !

ಹಂಪಿ ಎಕ್ಸ್’ಪ್ರೆಸ್‌

ದೇವಿ ಮಹೇಶ್ವರ ಹಂಪಿನಾಯ್ಡು

ಇಂದಿನ ಕಾಲಘಟ್ಟದಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್.ಎಲ್‌. ಭೈರಪ್ಪನವರು ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್
ಕಾರ್ನಾಡ್ ಇಬ್ಬರ ಸೈದ್ಧಾಂತಿಕತೆಯೂ ಭಿನ್ನ. ಭೈರಪ್ಪನವರು ತಮ್ಮ ಕೃತಿಗಳ ಮೂಲಕ ಭಾರತೀಯ ಪರಂಪರೆ ಸತ್ಯ ಇತಿಹಾಸ ವನ್ನು ಪ್ರತಿಪಾದಿಸಿದರೆ, ಕಾರ್ನಾಡ್ ಅವರು ಎಡಪಂಥವಾದವನ್ನು ಮೈಗೂಡಿಸಿಕೊಂಡು ಟೌನ್‌ಹಾಲ್ ಮುಂದೆ ದನದ ಕಬಾಬ್ ತಿಂದು ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿದವರು.

ಆದರೆ ಇವರಿಬ್ಬರ ಸಂವೇದನೆ ಕನ್ನಡದಲ್ಲಿ ಒಂದು ಮೈಲುಗಲ್ಲು ಸಾಧಿಸಿದ್ದು ಮಾತ್ರ ದಿಟ. 1972ರಲ್ಲಿ ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಬಿ.ವಿ.ಕಾರಂತ್ ಅವರೊಂದಿಗೆ ಜಂಟಿ ನಿರ್ದೇಶನ ಮಾಡಿ ಚಿತ್ರಕ್ಕೆ ಮತ್ತು ನಿರ್ದೇಶನಕ್ಕೆ ರಾಷ್ಟ್ರಪ್ರಶಸ್ತಿ ದಕ್ಕಿಸಿಕೊಂಡ ಖ್ಯಾತಿ ಕರ್ನಾಡ್ ಮತ್ತು ಬಿ.ವಿ.ಕಾರಂತ್ ಅವರಿಗೆ ಸಲ್ಲುತ್ತದೆ.

ದೇಶ ವಿದೇಶಗಳಲ್ಲಿಯೂ ಖ್ಯಾತಿ ಪಡೆದ ವಂಶವೃಕ್ಷ ಚಲನಚಿತ್ರದಲ್ಲಿ ಒಬ್ಬ ಸುಂದರ ಯುವನಟರೊಬ್ಬರ ಪರಿಚಯವಾಗುತ್ತೆ. ಆ ಸುರದ್ರೂಪಿ ನಟನೇ ಸಂಪತ್ ಕುಮಾರ್ ಎಂಬ ಯುವಕ. ಈ ಯುವಕನನ್ನು ಗಮನಿಸಿದ ಅಸಾಮಾನ್ಯ ನಿರ್ದೇಶಕ ಎಸ್.ಆರ್. ಪುಟ್ಟಣ್ಣ ಕಣಗಾಲ್ ಅವರು ತಮ್ಮ ಮಹತ್ವಾಕಾಂಕ್ಷೆಯ ತ.ರಾ.ಸುಬ್ಬರಾಯರ ಕಾದಂಬರಿಯಾಧಾರಿತ ಚಿತ್ರದ ನಾಯಕನ ಪಾತ್ರಕ್ಕೆ ಆರಿಸಿಕೊಳ್ಳುತ್ತಾರೆ. ಆ ಚಿತ್ರದಿಂದ ಆ ಯುವಕನ ಬದುಕೇ ಬದಲಾಗುತ್ತದೆ.

ಅಷ್ಟೇ ಅಲ್ಲ ಆತನ ಹೆಸರೂ ಬದಲಾಗುತ್ತದೆ. ಆ ಹೆಸರೇ ವಿಷ್ಣುವರ್ಧನ. ಮತ್ತು ಪ್ರಥಮ ಚಿತ್ರಕ್ಕೇ ರಾಜ್ಯಪ್ರಶಸ್ತಿ ಗಳಿಸಿದ ಚಿತ್ರ ನಾಗರಹಾವು. ಅದೇ ಚಿತ್ರದಲ್ಲಿ ಪಿಟೀಲು ಚೌಡಯ್ಯನವರ ಮೊಮ್ಮಗ ಅಮರನಾಥ ಎಂಬ ಹುಡುಗ ಅಂಬರೀಶನಾಗಿ ಚಿತ್ರರಂಗ ದಲ್ಲಿ ತಮ್ಮ ಪಯಣವನ್ನು ಆರಂಭಿಸುತ್ತಾರೆ. ಚಿತ್ರವೇನೋ ಬಹುಖ್ಯಾತಿ ಪಡೆದು ಅಮೋಘ ಪ್ರದರ್ಶನ ಕಂಡು ಪ್ರಶಸ್ತಿಯನ್ನೂ ಗಳಿಸುತ್ತದೆ.

ಮೊದಲೇ ಪುಟ್ಟಣ್ಣನವರು ಅದೆಂಥಾ ಕಲಾವಿದರಾದರೂ ಕಪಾಳಕ್ಕೆ ಹೊಡೆದು ನೈಜ ಅಭಿನಯವನ್ನು ಪಡೆಯುವ ಕಠೋರ ನಿರ್ದೇಶಕರಾಗಿದ್ದವರು. ಅಂಥ ಪುಟ್ಟಣ್ಣನವರು ಮುಂದೆ ಹಲವಾರು ಚಿತ್ರಗಳಲ್ಲಿ ಅಂಬರೀಶ್ ಅವರನ್ನು ಕೈಬಿಡದೆ ಸಣ್ಣಪುಟ್ಟ ಪಾತ್ರಗಳನ್ನು ನೀಡುತ್ತಾ ಬೆಳೆಸುತ್ತಾರೆ. ಆದರೆ ವಿಷ್ಣು ಅವರ ವಿಚಾರದಲ್ಲಿ ಮಾತ್ರ ಹೀಗಾಗಲೇ ಇಲ್ಲ. ನಾಗರಹಾವು
ಚಿತ್ರೀಕರಣದ ಸೆಟ್‌ನಲ್ಲಿ ಪುಟ್ಟಣ್ಣನವರು ಮತ್ತು ವಿಷ್ಣು ಅವರ ಮಧ್ಯೆ ಅಚಾನಕ್ಕಾಗಿ ಸಂಭವಿಸಿದ ಒಂದು ಈಗೋ ಕಾರಣ ದಿಂದಾಗಿ ಪುಟ್ಟಣ್ಣನವರು ಮುಂದೆ ತಮ್ಮದೇ ಸಮುದಾಯದವರಾದ ವಿಷ್ಣು ಅವರೊಂದಿಗೆ ಚಿತ್ರ ಮಾಡದಿರಲು ಕಾರಣ ವಾಗುತ್ತೆ.

ಅಲ್ಲಿಂದಲೇ ಶುರುವಾಯಿತು ನೋಡಿ ವಿಷ್ಣುವರ್ಧನ್ ಅವರ ಕೆಟ್ಟ ದಿನಗಳು. ಅಂಥ ರಾಜಣ್ಣನವರ ಮೂರು ಚಿತ್ರಗಳನ್ನು (ಮಲ್ಲಮ್ಮನ ಪವಾಡ, ಸಾಕ್ಷಾತ್ಕಾರ, ಕರುಳಿನಕರೆ) ಚಿತ್ರಗಳನ್ನು ನಿರ್ದೇಶಿಸಿದ್ದ ಪುಟ್ಟಣ್ಣನವರು ಒಂದು ಚಿತ್ರ ಬರಿಯ ನಟನಿಂದ ಮಾತ್ರವಲ್ಲ ನಿರ್ದೇಶಕನಿಂದಲೂ ಖ್ಯಾತಿಗಳಿಸಿಬೇಕೆಂಬ ವೃತ್ತಿ ಘನತೆಯನ್ನು ಹೊಂದಿದ್ದರು. ಹೀಗಾಗಿ ರಾಜ್ ಅವರ ಚಿತ್ರ ನಿರ್ದೇಶನವೂ ಆ ಮೂರಕ್ಕೇ ಮುಕ್ತಾಯವಾಯಿತು.

ವಿಷ್ಣು ತಮ್ಮ ಮೂರನೇ ಚಿತ್ರ ಸೀತೆಯಲ್ಲ ಸಾವಿತ್ರಿ, ಮನೆ ಬೆಳಗಿದ ಸೊಸೆ ಎರಡು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಳ್ಳಲು ಆರಂಭಿಸಿದ ದಿನಗಳಲ್ಲಿ ಡಾ.ರಾಜ್ ಅವರ ಮೇಲಿನ ಗೌರವಕ್ಕೆ ಮಣಿದು ವಿಜಯಾರೆಡ್ಡಿ
ನಿರ್ದೇಶನದ ಗಂಧದಗುಡಿಯಲ್ಲಿ (1973) ಖಳನಾಯಕ ಕಾಡುಗಳ್ಳನ ಪಾತ್ರವನ್ನು ಒಪ್ಪಿಕೊಂಡು ನಟಿಸಿದರು.

ವಿಷ್ಣು ಅವರ ದುರಂತವೆಂದರೆ ಆ ಚಿತ್ರವೂ ರಾಜ್ ಅವರೊಂದಿಗೆ ಕೊನೆಯ ಚಿತ್ರವಾಗಿ ಹೋಯ್ತು. ಆ ಚಿತ್ರದ ಬಂದೂಕಿನ ಘಟನೆ ಅವರ ಬದುಕಿನಲ್ಲಿ ಕೊನೆಯವರೆಗೂ ನೋವುಣ್ಣುವಂತೆ ಮಾಡಿತ್ತು. ಗಂಧದಗುಡಿಯ ನಿರ್ಮಾಪಕರಾದ ಎಂ.ಪಿ.ಶಂಕರ್ ಅವರ ಮಡದಿ ಮತ್ತು ಮಗಳು ಇತ್ತೀಚೆಗೆ ದುಃಖದಲ್ಲಿ ಹೇಳಿಕೊಂಡಿರುವಂತೆ ಅಸಲಿಗೆ ಆ ಘಟನೆಯಲ್ಲಿ ಯಾರ ತಪ್ಪೂ ಇರಲಿಲ್ಲ. ಕಾಡಿನಲ್ಲಿ ಗಂಧದಗುಡಿ ಚಿತ್ರೀಕರಣದ ಬಿಡುವಿನಲ್ಲಿ ಹಿರಿಯ ನಟ ಬಾಲಕೃಷ್ಣ ಮತ್ತು ಎಂ.ಪಿ. ಶಂಕರ್ ಅವರು ಆತ್ಮೀಯವಾಗಿ ಮಾತನಾಡಿಕೊಳ್ಳುತ್ತಾ (ಆ ಸ್ಥಳದಲ್ಲಿ ರಾಜ್ ಮತ್ತು ವಿಷ್ಣು ಇಬ್ಬರೂ ಇರಲಿಲ್ಲ) ಎಂ.ಪಿ. ಶಂಕರ್ ಅವರು ತಾವು ಪರವಾನಗಿ ಹೊಂದಿದ್ದ ಅಸಲಿ ಬಂದೂಕನ್ನು ಬಾಲಕೃಷ್ಣ ಅವರಿಗೆ ಸನ್ನಿವೇಶದ ರಿಹರ್ಸಲ್ಲಾಗಿ ಎತ್ತಿನೋಡಿ ಎಂದು ನೀಡುತ್ತಾರೆ.

ಆದರೆ ಬಾಲಕೃಷ್ಣ ಅವರು ಅಯ್ಯೋ ಇದು ಬಹಳ ತೂಕ ಇದ್ಯಪ್ಪಾ, ನನಗೆ ಅದೇ ನಕಲಿ ಬಂದೂಕು ಕೊಡಪ್ಪಾ ಎಂದು ವಾಪಸ್ಸು ನೀಡುತ್ತಾರೆ. ಅದನ್ನು ಎಂ.ಪಿ. ಶಂಕರ್ ಅವರು ಕೈಲಿಡಿದುಕೊಂಡು ಮಾತನಾಡುತ್ತಾ ತಲೆಕೆಳಕಾಗಿ ಇಟ್ಟಿದ್ದ ಬಂದೂಕಿನ ಟ್ರಿಗರ್ ಮೇಲೆ ಬೆರಳಿಟ್ಟು ಮೇಲೇಳುವಾಗ ಅದರ ಒತ್ತಡದಿಂದ ಒಂದು ಗುಂಡು ನೆಲಕ್ಕೆ ಸಿಡಿಯುತ್ತದೆ. ಅಷ್ಟೇ. ಆದರೆ ಇದು ಇಡೀ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸಿಡಿದು ವಿಷ್ಣುವರ್ಧನ್ ಅವರ ಮೇಲೆ ದೊಡ್ಡ ಅಪವಾದ ಕಳಂಕ ಸೋಟಿಸುತ್ತದೆ. ಈ ಸತ್ಯ ಘಟನೆಯನ್ನು ಹಿಂದೆ ಬಾಲಕೃಷ್ಣ ಅವರು ರೇಡಿಯೋ ಸಂದರ್ಶನದಲ್ಲಿ ವಿವರಿಸಿದ್ದರು.

ಹಿರಿಯ ಸಹ ಕಲಾವಿದ ಬೆಂಗಳೂರು ನಾಗೇಶ್ ಅವರೂ ಹೇಳಿಕೊಂಡಿದ್ದರು. ಆದರೆ ಪ್ರಮುಖವಾಗಿ ರಾಜಣ್ಣನವರು ಅದೆ ಕಟ್ಟುಕಥೆ, ಅಂತದ್ದೇನೂ ಆಗಿಲ್ಲ, ನಾನೂ ವಿಷ್ಣು ಆ ಜಾಗದಲ್ಲಿ ಇರಲೇ ಇಲ್ಲ, ವಿಷ್ಣು ಅವರ ಮೇಲಿನ ಆರೋಪ ಸುಳ್ಳು ಎಂದು ಒಂದೇ ಒಂದು ಹೇಳಿಕೆ ನೀಡಿದಿದ್ದರೆ ಮುಂದಿನ ಇತಿಹಾಸವೇ ಬದಲಾಗುತ್ತಿತ್ತು. ಆದರೆ ಆಗಾಗದೇ ಹೋದದ್ದು ದುರಂತ.

ಅಂದು ರಾಜ್ ಅವರು ಉತ್ತುಂಗದಲ್ಲಿದ್ದರು. ಹಾಗೆಯೇ ನಟಿ ಭಾರತಿಯವರು ಕನ್ನಡ ತೆಲುಗು ತಮಿಳು ಹಿಂದಿ ಸೇರಿದಂತೆ ಅರವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಮತ್ತು ರಾಜ್ ಅವರೊಂದಿಗೆ ಯಶಸ್ವಿ ಚಿತ್ರಗಳಲ್ಲಿ ನಟಿಸಿ ರಾಜ್ – ಭಾರತಿ ಯಶಸ್ವಿ ಜೋಡಿ ಯಾಗಿ ಖ್ಯಾತಿಗಳಿಸಿದ್ದರು. ಈ ಮಧ್ಯೆ ವಿಷ್ಣು ಅವರೊಂದಿಗೆ ಪ್ರೇಮಾಂಕುರವಾಗಿ ವಿವಾಹವಾಗುವ (1975) ಬಯಕೆ ಹೊಂದಿ ದ್ದರು. ಇಂಥ ಸಂದರ್ಭದಲ್ಲಿ 1973ರ ಗಂಧದಗುಡಿಯ ಬಂದೂಕಿನ ವಿಚಾರಕ್ಕೆ ರೆಕ್ಕೆಪುಕ್ಕಗಳನ್ನು ಸೃಷ್ಟಿಸಿ ವಿಷ್ಣುವರ್ಧನ ಅವರು ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣದಲ್ಲಿ ಅಸಲಿ ಬಂದೂಕನ್ನು ಬಾಲಕೃಷ್ಣ ಅವರ ಕೈಗೆ ಬರುವಂತೆ ಮಾಡಿ ಅವರಿಂದ ರಾಜ್ ಅವರನ್ನು ಮುಗಿಸುವ ಹುನ್ನಾರ ಹೊಂದಿದ್ದರು ಎಂಬ ಅಸಂಬದ್ಧ ಕಟ್ಟುಕಥೆ ಹರಡಿ, ಅದರಿಂದ ಸಾಕಷ್ಟು ಗಲಭೆಗಳಾಗಿ ಕೊನೆಗೆ ವಿಷ್ಣುವರ್ಧನ್ ಅವರು ಜೀವಭಯದಿಂದ ಚೆನ್ನೆ ಸೇರುವಂತೆ ಮಾಡಿಬಿಟ್ಟಿದ್ದರು.

ಇದರ ಹಿಂದಿನ ದುರುದ್ದೇಶ ಹೊಂದಿದ್ದ ವ್ಯಕ್ತಿಗಳಾರು, ಈ ಘಟನೆಯನ್ನು ಪರಾಮರ್ಶಿಸದ ಅಂಧಾಭಿಮಾನಿಳಾರು ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ. ಇದು ರಾಜ್ ಕುಟುಂಬ ಮತ್ತು ವಿಷ್ಣುವಿನ ಮಧ್ಯೆ ದೊಡ್ಡ ಕಂದಕವನ್ನು ಸೃಷ್ಟಿಸಿತು. ನಂತರ ವಿಷ್ಣು ಅವರು ಭಾರತಿಯವರೊಂದಿಗೆ ವಿವಾಹವಾದರು. ಒಂದೊಂದೇ ಚಿತ್ರಗಳನ್ನು ಒಪ್ಪಿಕೊಂಡರು. ವಿಷ್ಣುವರ್ಧನ್ ಅವರಿಗಾಗಿಯೇ ಕೆ.ಎಸ್.ಎಲ್‌.ಸ್ವಾಮಿ, ಜೋಸೈಮನ್, ಕೆಎಸ್‌ಆರ್ ದಾಸ್, ಭಾರ್ಗವ, ಡಿ.ರಾಜೇಂದ್ರಬಾಬು, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ದ್ವಾರಕೀಶ್‌ರಂಥ ಅನೇಕ ನಿರ್ದೇಶಕರು ಚಿತ್ರಕಥೆಗಳನ್ನು ಮಾಡಿ ವಿಷ್ಣು ಅವರನ್ನು ಚಿತ್ರರಂಗದಲ್ಲಿ ಬೇರೂರು ವಂತೆ ಬೆಳೆಸಿದರು.

ಆದರೆ ರಾಜ್ – ವಿಷ್ಣು ಮಧ್ಯೆ ನಿಷ್ಕಂಳಕ ಪ್ರೀತಿ ಗೌರವ ಇತ್ತಾದರೂ ಕೆಲ ಅಭಿಮಾನಿ ವರ್ಗಗಳು ಅದರ ಮುಖಂಡರು ಹೊರ ಜಗತ್ತಿಗೆ ಅವರ ಮಧ್ಯೆ ನಿರಂತರ ಅಂತರ ಜಾರಿಯಲ್ಲಿರುವಂತೆ ಮಾಡಿಬಿಟ್ಟರು. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಶಿವರಾಜ್ ಕುಮಾರ್ ಮತ್ತು ವಿಷ್ಣು ಒಟ್ಟಿಗೆ ಅಭಿನಯದ ಕೃಷ್ಣಾರ್ಜುನ ಎಂಬ ಚಿತ್ರ ಪತ್ರಿಕೆಗಳಲ್ಲಿ ಘೋಷಣೆಯಾಗಿತ್ತು. ಆದರೆ ಅಂಥ ಸಾಧ್ಯತೆಯೂ ಅಗೋಚರ ಶಕ್ತಿಗಳಿಂದ ತಪ್ಪಿಹೋಯಿತು.

ಹೀಗೆ ಅನೇಕ ಸಂದರ್ಭಗಳಲ್ಲಿ ವಿಷ್ಣು ಅವರ ತಾಳ್ಮೆ, ಸಹನೆ, ಪ್ರಬುದ್ಧತೆಯನ್ನು ಮೆಚ್ಚಲೇ ಬೇಕು. ಎಲ್ಲಿಯೂ ರಾಜ್ ಕುಟುಂಬದ ಮೇಲಾಗಲಿ ಅಭಿಮಾನಿ ಸಮೂಹದ ಮೇಲಾಗಲಿ ಒಂದು ಅಸಮಧಾನದ ಮಾತನ್ನೂ ಆಡದೆ ರಾಜ್ ಅವರನ್ನು ಗೌರವಿಸಿ ಕೊಂಡೇ ಸಾಗಿದರು. ಅನೇಕ ವೇದಿಕೆಗಳಲ್ಲಿ ಒಬ್ಬರಿಗೊಬ್ಬರು ಅಪ್ಪಿಕೊಂಡು ಪರಸ್ಪರ ಪ್ರೀತಿ ತೋರಿದ್ದರು. ಕೊನೆಗೂ ರಾಜ್ ಅವರು ವಿಷ್ಣುವರ್ಧನ್ ಅವರ ಮೂರ್ನಾಲ್ಕು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನು ನೀಡಿ ತಮ್ಮಿಬ್ಬರಲ್ಲಿದ್ದ ಅನ್ಯೋನತೆಯನ್ನು ಸಾರಿದ್ದರು.

ಆದರೆ ಎಡವಟ್ಟು ಮಾಡಿದ್ದು ಮಾತ್ರ ಇಬ್ಬರ ಮಧ್ಯೆಯಲ್ಲಿದ್ದ ಕೆಲ ಅಭಿಮಾನಿಗಳು ಮತ್ತು ಚಿತ್ರರಂಗದ ಕೆಲ ಸ್ವಾರ್ಥಿಗಳು ಎಂಬುದು ಸತ್ಯ. ಕನ್ನಡ ಚಿತ್ರರಂಗದಲ್ಲಿ ರಾಜ್ ಅವರ ನಂತರ ವಿಷ್ಣುವರ್ಧನ್ ಅವರೇ ನಾಯಕರು ಎನ್ನುವಷ್ಟು ಖ್ಯಾತಿ ಗಳಿಸಿದ ವಿಷ್ಣು ಬರಬರುತ್ತಾ ಹೇಗಾದರು ಎಂದರೆ ತಮಗೆ ತಾವೇ ಅಂತರ್ಮುಖಿಯಾಗುತ್ತಾ ಸಾಗಿದರು. ತಮ್ಮೊಳಗೊಬ್ಬ ದಾರ್ಶನಿಕನನ್ನು ಸ್ಥಾಪಿಸಿಕೊಂಡು ಸಾತ್ವಿಕ ಜೀವನ ನಡೆಸಲಾರಂಭಿಸಿದರು.

ಇದು ಅವರ ಚಿತ್ರಗಳ ಪಾತ್ರಗಳ ಆಯ್ಕೆಯ ಮೇಲೂ ಪರಿಣಾಮ ಬೀರಿದ್ದವು. ನಿಜಜೀವನದಲ್ಲಷ್ಟೇ ಅ, ಚಿತ್ರಗಳಲ್ಲೂ ಅವರ ಪಾತ್ರಗಳ ಸಂಭಾಷಣೆ ಕಡಿಮೆಯಾಯಿತು. ಅಭಿನಯದಲ್ಲೂ ಮೌನವೇ ಮಾತುಗಳಾದವು, ಕಣ್ಣು ಕೈ ಸನ್ನೆಯ ತಮ್ಮ
ಅಭಿನಯವನ್ನು ಹೆಚ್ಚಾಗಿ ತೋರಿಸಲಾರಂಭಿಸಿದರು. ಅಧ್ಯಾತ್ಮ ಅಲೌಕಿಕತೆ ಹೆಚ್ಚಾಗಿ ನಡೆನುಡಿ ವ್ಯಕ್ತಿತ್ವದಲ್ಲಿ ಸಂತನಂತೆ ಬದಲಾಗಿ ನೋಡುವುದಕ್ಕೆ ಶಿರಡಿ ಸಾಯಿಬಾಬಾನಂತೆ ಕಾಣತೊಡಗಿದರು.

ರಾಜ್ ಕುಮಾರ್ ಸಾವಿನ ನಂತರ ವಿಷ್ಣು ಆಗಾಗಲೇ ಅಧ್ಯಾತ್ಮ ಚಿಂತನೆಗೆ ಒಳಗಾಗಿದ್ದರು. ರಾಜ್ ಅವರ ಆತ್ಮದೊಂದಿಗೆ ಮಾತನಾಡಿದ್ದಾಗಿ ಅವರು ಹೇಳಿಕೊಂಡಿದ್ದರು. ಇದು ಅಂದು ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿತ್ತು. ಹೀಗಿದ್ದ ವಿಷ್ಣು 2009ರಲ್ಲಿ ಇಡೀ ರಾಜ್ಯವೇ ನಂಬಲಾಗದ ಅನಿರೀಕ್ಷಿತ ಅಕಾಲಿಕವಾಗಿ ಕೇವಲ ಐವತ್ತೊಂಬತ್ತು ವಯಸ್ಸಿಗೇ ಸಾವನ್ನಪ್ಪಿದ್ದು ದುರ್ವಿಽಯೇ ಹೌದು. ಆಗೆ ಜನ ಮಾತಾಡಿಕೊಂಡದ್ದೇನೆಂದರೆ ವಿಷ್ಣುವಿನ ಆಪ್ತಗೆಳೆಯ ಅಂಬರೀಶ್ ಮಧ್ಯಪಾನ ಧೂಮಪಾನ
ಮಾಂಸಹಾರ ಸೇವಿಸಿದರೂ ಗಟ್ಟಿಮುಟ್ಟಾಗಿದ್ದರು.

ಆದರೆ ಪುಳಿಚಾರು ವಿಷ್ಣುವರ್ಧನ್ ಹೇಗೆ ಇಷ್ಟುಬೇಗ ಕಾಲವಾದರು ಎಂದು ಚಿಂತಿಸಿದ್ದರು. ಸಾವಿಗೆ ದೂಡುವಷ್ಟು ವಿಷ್ಣುವಿನ ಆರೋಗ್ಯಕ್ಕೆ ಏನಾಗಿತ್ತು ಎಂಬುದನ್ನು ಪ್ರಶ್ನಿಸುವಂತಾಗಿತ್ತು. ರಾಜ್ ಅವರಷ್ಟು ನಟನಾ ಸಾಮರ್ಥ್ಯವನ್ನು ಹೊಂದಿರದಿದ್ದರೂ ಅವರದೇ ಆದ ಮ್ಯಾನರಿಸಂ ಪಾತ್ರಗಳ ಆಯ್ಕೆ ಸಾಮಾಜಿಕ ಸಂದೇಶ ನೀಡುವ ಚಿತ್ರಗಳ ಮೂಲಕ ಈಗಲೂ ದೊಡ್ಡ ಅಭಿಮಾನಿ
ಸಮೂಹವನ್ನು ಹೊಂದಿzರೆ. ಎಂಬತ್ತು ತೊಂಬತ್ತರ ದಶಕದಲ್ಲಿ ಕಾಲೇಜು ಕನ್ಯೆಯರಿಗಂತೂ ವಿಷ್ಣು ಅವರು ಕನಸಿನರಾಜ ರಾಗಿದ್ದರು. ಈ ಮಧ್ಯೆ ವಿಷ್ಣು ಅವರಿಗೆ ಸ್ಪಾರ್‌ಪಟ್ಟ ಕಟ್ಟುವುದರಲ್ಲಿ ಶ್ರಮಿಸಿದ್ದ ದ್ವಾರಕೀಶ್ ಅವರು ವಿಷ್ಣು ಅವರಿಂದ ದೂರ ಸರಿಯುವಂತಾಯಿತು.

ಅಷ್ಟೇ ಅಲ್ಲದೆ ವಿಷ್ಣುಗೆ ಪರ್ಯಾಯವೆಂಬಂತೆ ಹೊಸ ಕಳ್ಳ ಹಳೇ ಕುಳ್ಳ ಚಿತ್ರವನ್ನು ಮಾಡಿ ಶಶಿಕುಮಾರ್ ಅವರಿಗೆ ಅವಕಾಶ ನೀಡಿ ವಿಷ್ಣುವರ್ಧನ್ ಅವರಿಗೆ ಟಾಂಗ್ ಕೂಡಾ ನೀಡಿದರು. ಆದರೆ ವಿಷ್ಣು ತೊಂಬತ್ತರ ದಶಕದಲ್ಲಿ ಭಾರ್ಗವ ನಿರ್ದೇಶನದಲ್ಲಿ ಸಾಲುಸಾಲು ಸೋಲನ್ನು ಕಂಡಾಗ ಅದೇ ದ್ವಾರಕೀಶ್ ರಾಯರು ಬಂದರು ಮಾವನ ಮನೆಗೆ ಚಿತ್ರದ ಮೂಲಕ ಮತ್ತೇ ಯಶಸ್ವಿ ಪಯಣಕ್ಕೆ ಕಾರಣರಾದರು.

ವಿಷ್ಣುವರ್ಧನ್ ಅವರ ಸಾವು ಅಭಿಮಾನಿಗಳು ಸಹಿಸಿಕೊಳ್ಳಲಾಗಲಿಲ್ಲ. ಆ ನಂತರ ನಡೆದ ಬೆಳವಣಿಗೆಗಳು ವಿಷ್ಣು ಬದುಕಿದ್ದಾಗ ಇದ್ದ ಘನತೆಗೆ ತಕ್ಕುದದ್ದಾಗಿರಲಿಲ್ಲ. ರಾಜ್ ಅವರಿಗೇನೋ ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕಕ್ಕೆ ಅವಕಾಶ ನೀಡಿದ ಸರಕಾರ
ವಿಷ್ಣು ಅವರ ಪಾರ್ಥೀವ ಶರೀರವನ್ನು ಬಾಲಕೃಷ್ಣ ಅವರ ಮಕ್ಕಳ ವಿವಾದದಲ್ಲಿದ್ದ ಅಭಿಮಾನ್ ಸ್ಟುಡಿಯೋ ಸಮೀಪದಲ್ಲಿ ಅಂತ್ಯಕ್ರಿಯೆ ನಡೆಸಿತು.

ಇದರಿಂದಾಗಿ ವಿಷ್ಣು ಅವರ ಸಮಾಧಿ ಮತ್ತು ಸ್ಮಾರಕ ಸ್ಥಾಪನೆ ನೆನೆಗುದಿಗೆ ಬಿತ್ತು. ಮುಂದೆ ಪಾರ್ವತಮ್ಮ ನವರ ಅಂತಿಮ ಸಂಸ್ಕಾರಕ್ಕೂ ರಾಜ್ ಅವರ ಪಕ್ಕದ ಸರಕಾರಿ ಜಾಗ ಸ್ಥಾನಮಾನ ದೊರಕಿತು. ಇದರ ಮಧ್ಯೆ ಅಂಬರೀಶ್ ಅವರ  ಮೃತದೇಹವನ್ನು ಮುಖ್ಯಮಂತ್ರಿ ಯಾಗಿದ್ದ ಕುಮಾರಸ್ವಾಮಿಯವರು ಬೆಂಗಳೂರಿನಿಂದ ಮಂಡ್ಯಕ್ಕೆ ತಂದು ಅಭಿಮಾನಿಗಳಿಗೆ ಅಂಬರೀಶ್‌ ಗಿಂತಲೂ ಬಹುದೊಡ್ಡ (?) ಕಾಣಿಕೆಯನ್ನು ನೀಡಿ, ಅದೇ ಕಂಠೀರವ ಸ್ಟುಡಿಯೋ ಸ್ಥಳದ ಸಮಾಧಿ ಮತ್ತು ಸ್ಮಾರಕಕ್ಕೆ ಅವಕಾಶ ನೀಡಿದರು.

ಆದರೆ ವಿಷ್ಣು ಸಮಾಧಿಯ ಸ್ಥಳವೇ ವಿವಾದಗ್ರಸ್ಥವಾಗಿ ಬೇಸತ್ತ ಭಾರತಿಯವರು ವಿಷ್ಣು ಹುಟ್ಟೂರಾದ ಮೈಸೂರಿನ ಸ್ಥಳಾವಕಾಶ
ಕೋರಿದರು. ಅದೂ ಅಷ್ಟು ಬೇಗ ಇತ್ಯಾರ್ಥವಾಗದೆ ದಶಕ ಕಳೆದು ಹೋಯಿತು. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ನವರು ಮೈಸೂರಿನ ಸ್ಮಾರಕ ನಿರ್ಮಿಸಲು ಚಾಲನೆ ನೀಡಿದ್ದಾರೆ. ಅಭಿಮಾನಿಗಳು ಮತ್ತು ಕುಟುಂಬದ ಹರಕೆಯಂತೆ ವಿಷ್ಣು ಸ್ಮಾರಕ ಶೀಘ್ರವಾಗಿ ಮೇಲೇಳಲಿ.

ಮೊನ್ನೆ ವಿಜಯರಂಗರಾಜು ಎಂಬ ಅವಿವೇಕಿಯೊಬ್ಬ ಇಲ್ಲಸಲ್ಲದ ಆರೋಪಗಳೊಂದಿಗೆ ಹೀನಾಯವಾಗಿ ವಿಷ್ಣು ಅವರ ಕುರಿತು ಮಾತನಾಡಿ ಕೊನೆಗೆ ಪಶ್ಚಾತಾಪವಾಗಿ ತಲೆಬಾಗಿಸಿ ಕ್ಷಮೆಯಾಚಿಸಿದ್ದ. ಈಗ ನೋಡಿದರೆ ಮಾಗಡಿ ರಸ್ತೆಯ ಟೋಲ್‌ಗೇಟ್
ಬಳಿಯಿದ್ದ ಪ್ರತಿಮೆ ಹೊಡೆದುರುಳಿಸಿ ಅವಮಾನಿಸಿದ್ದಾರೆ. ಬದುಕಿದ್ದಾಗಲೂ ಒಂದು ರೀತಿಯ ಅಳುಕಿನ ನಡೆದು ಹೋಗಿ, ಸಾವಿನ ನಂತರವೂ ನತದೃಷ್ಟನಾದದ್ದು ವಿಷ್ಣು ವಿಪರ್ಯಾಸ. ಒಂದೊಮ್ಮೆ ವಿಷ್ಣುವರ್ಧನ್ ಬ್ರಾಹ್ಮಣನಾಗಿರದೆ ಪ್ರಬಲ ಜಾತಿ
ಯವರಾಗಿದ್ದಿದ್ದರೆ ಜಾತಿನಾಯಕರು ಜಾತಿ ಮಠಾಧೀಶರುಗಳು ಸರಕಾರದ ಬೆನ್ನು ಬಿದ್ದು ಕೆಲಸ ಮಾಡಿಸಿಕೊಳ್ಳುತ್ತಿದ್ದರು.

ಜೈಲಿಗೆ ಹೋಗಿಬಂದವರನ್ನೆ ಕೇವಲ ಜಾತಿಕಾರಣಕ್ಕೆ ಮೆರವಣಿಗೆ ಮಾಡಿ ಜೈಕಾರ ಹಾಕುವ ಅನೈತಿಕತೆಗಳ ಯಾರಿಗೂ ಕೆಡಕು ವಂಚನೆ ದ್ರೋಹ ಅಕ್ರಮ ಹಣ ಸಂಪಾದನೆ ಮಾಡದೆ ಅನೈತಿಕ ವಿಚಾರಗಳಿಗೆ ಒಳಗಾಗದೆ ತಾಳ್ಮೆ, ಸಹನೆ, ಸೌಜನ್ಯದಿಂದ ಕಲಾಸೇವೆಯಲ್ಲಿ ಬದುಕಿ ಮುಂದೆ ಮೂರು ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿದ ಸಭ್ಯ ಸಜ್ಜನ ಸಂಭಾವಿತ ನಟ ವಿಷ್ಣುಗೆ ಸರಕಾರ ಮತ್ತು ಸಮಾಜ ಸಾರ್ಥಕ ಗೌರವ ನೀಡಲಿ.

ಕನ್ನಡ ಚಿತ್ರರಂಗದಲ್ಲಿ ರಾಜ್ ಅವರ ನಂತರ ವಿಷ್ಣುವರ್ಧನ್ ಅವರೇ ನಾಯಕರು ಎನ್ನುವಷ್ಟು ಖ್ಯಾತಿಗಳಿಸಿದ ವಿಷ್ಣು ಬರಬರುತ್ತಾ ಹೇಗಾದರು ಎಂದರೆ ತಮಗೆ ತಾವೇ ಅಂತರ್ಮುಖಿಯಾಗುತ್ತಾ ಸಾಗಿದರು. ತಮ್ಮೊಳಗೊಬ್ಬ ದಾರ್ಶನಿಕನನ್ನು
ಸ್ಥಾಪಿಸಿಕೊಂಡು ಸಾತ್ವಿಕ ಜೀವನ ನಡೆಸಲಾರಂಭಿಸಿದರು. ಇದು ಅವರ ಚಿತ್ರಗಳ ಪಾತ್ರಗಳ ಆಯ್ಕೆಯ ಮೇಲೂ ಪರಿಣಾಮ
ಬೀರಿದ್ದವು. ನಿಜಜೀವನದಲ್ಲಷ್ಟೇ ಅ, ಚಿತ್ರಗಳಲ್ಲೂ ಅವರ ಪಾತ್ರಗಳ ಸಂಭಾಷಣೆ ಕಡಿಮೆಯಾಯಿತು.ವಿಷ್ಣುವರ್ಧನ್ ಅವರ ಸಾವು ಅಭಿಮಾನಿಗಳು ಸಹಿಸಿಕೊಳ್ಳಲಾಗಲಿಲ್ಲ. ಆ ನಂತರ ನಡೆದ ಬೆಳವಣಿಗೆ ಗಳು ವಿಷ್ಣು ಬದುಕಿದ್ದಾಗ ಇದ್ದ ಘನತೆಗೆ ತಕ್ಕುದದ್ದಾಗಿರಲಿಲ್ಲ.