Saturday, 23rd November 2024

ಲೊಡ್ಡೆಗಳ ಆರ್ಯ, ದ್ರಾವಿಡ ವಾದ

ವೀಕೆಂಡ್ ವಿತ್ ಮೋಹನ್

camohanbn@gmail.com

ಲೊಡ್ಡೆಗಳು ಪಠ್ಯ ರಚನೆ ಸಂದರ್ಭದಲ್ಲಿ ಸಮಾಜ ವಿಜ್ಞಾನದ ಮೊದಲ ಭಾಗವನ್ನು ಆರ್ಯರ ಆಕ್ರಮಣದಿಂದಲೇ ಶುರು ಮಾಡುತ್ತಿದ್ದರು. ಭಾರತ ಒಂದು ಅನಾಗರಿಕ ದೇಶ, ಆರ್ಯರು ಭಾರತೀಯರಿಗೆ ನಾಗರಿಕತೆಯನ್ನು ಹೇಳಿಕೊಟ್ಟರೆಂದು ಇತಿಹಾಸದಲ್ಲಿ ಬರೆದರು.

ತಮಿಳುನಾಡು ರಾಜಕೀಯ ನಾಯಕರು ಬಿಜೆಪಿಯ ಬೇರುಗಳು ತಮ್ಮ ರಾಜ್ಯದಲ್ಲಿ ನೆಲೆಯೂರಲು ಶುರುಮಾಡಿದ ಮೇಲೆ ದಶಕಗಳ ಹಳೆಯ ದ್ರಾವಿಡ
ಸಿದ್ಧಾಂತದ ರಾಜಕೀಯ ಮಾಡುತ್ತಿರುವುದು ಜಗಜ್ಜಾಹೀರಾಗಿರುವ ವಿಷಯ. ತಮಿಳರ ತಲೆಯಲ್ಲಿ ದ್ರಾವಿಡರ ಹೆಸರಿನಲ್ಲಿ ಹಿಂದಿ ಭಾಷೆಯ ರಾಜಕೀಯದ ಫಸಲುಗಳನ್ನು ನಾಟಿ ಮಾಡುವ ಕಾರ್ಯ ಎಗ್ಗಿಲ್ಲದೆ ನಡೆಯು ತ್ತಿರುತ್ತದೆ. ಪ್ರಧಾನಮಂತ್ರಿಗಳು ತಮಿಳುನಾಡಿಗೆ ಭೇಟಿ ನೀಡುತ್ತಾರೆಂದು ತಿಳಿದರೆ ಸಾಕು, ದ್ರಾವಿಡ ಪಕ್ಷದ ಗ್ಯಾಂಗ್ ತನ್ನ ರಾಜಕೀಯ ಶುರು ಮಾಡುತ್ತದೆ. ಕೇಂದ್ರ ಸರಕಾರ ತಮಿಳುನಾಡಿಗೆ ಭರಪೂರ ಅನುದಾನ ಗಳನ್ನು ನೀಡಿದರೂ, ದ್ರಾವಿಡ ರಾಜಕಾರಣದ ಮೂಲಕ ಭಾರತೀಯ ಜನತಾ ಪಕ್ಷವನ್ನು ಸ್ಟಾಲಿನ್ ನೇತೃತ್ವದ ಸರಕಾರ ಸದಾ ಟೀಕಿಸುತ್ತಿರುತ್ತದೆ.

ತಮಿಳುನಾಡಿನಲ್ಲಿ ಒಂದು ಹಂತದ ಯಶಸ್ಸನ್ನು ಕಂಡಂತಹ ದ್ರಾವಿಡ ರಾಜಕಾರಣ ಈಗ ಕರ್ನಾಟಕ ರಾಜ್ಯ ಕ್ಕೂ ಕಾಲಿಟ್ಟಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷ ಜೈಪುರ ದಲ್ಲಿ ನಡೆದ ಚಿಂತನ ಶಿಬಿರದ ನಂತರ ಸಿದ್ದರಾಮಯ್ಯ ದ್ರಾವಿಡ ಮತ್ತು ಆರ್ಯ ರಾಜಕಾರಣವನ್ನುಕರ್ನಾಟಕದಲ್ಲಿ ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಬಾರಿಯ ಚುನಾವಣಾ ಸಂದರ್ಭದಲ್ಲಿ ಲಿಂಗಾಯಿತ ಧರ್ಮವನ್ನು ಒಡೆಯುವ ರಾಜಕಾರಣಕ್ಕೆ ಕೈ ಹಾಕಿದ್ದಂಥ ಕಾಂಗ್ರೆಸ್ ಸರಿಯಾದ ಪೆಟ್ಟನ್ನೇ ತಿಂದಿತ್ತು. ಅದೇ ರೀತಿ ಈ ಬಾರಿಯ ಚುನಾವಣೆಯಲ್ಲಿ ಅದೇ ಮಾದರಿಯ ಧರ್ಮ ಸಂಘರ್ಷಕ್ಕೆ ನಾಂದಿ ಹಾಡುವ ಆರ್ಯ ದ್ರಾವಿಡ ಸಿದ್ಧಾಂತದ ರಾಜಕೀಯವನ್ನು ಮಾಡಲಾಗುತ್ತಿದೆ.

ಇಡೀ ದಕ್ಷಿಣ ಭಾರತದ ರಾಜ್ಯಗಳಿಗೆ ದ್ರಾವಿಡ ರಾಜಕೀಯವನ್ನು ಹಬ್ಬಿಸಿದರೆ ರಾಷ್ಟ್ರೀಯ ಪಕ್ಷಗಳು ತಮ್ಮ ನೆಲೆಯ ನ್ನೂರಲು ಸಾಧ್ಯವಾಗುವುದಿಲ್ಲವೆಂಬುದು ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳ ಭ್ರಮೆ.ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರ ಹಿಡಿದ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಶಾಕ್ ನೀಡಿತ್ತು. ನಂತರ ಪುದುಚೆರಿಯಲ್ಲಿ ಅಧಿಕಾರ ಹಿಡಿಯುವ ಮೂಲಕ ೨ನೇ ರಾಜ್ಯವನ್ನು ತನ್ನದಾಗಿಸಿಕೊಂಡಿತು. ಮುಂದೆ
ತೆಲಂಗಾಣ ರಾಜ್ಯ ಭಾರತೀಯ ಜನತಾ ಪಕ್ಷದ ಪಾಲಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ತಮಿಳುನಾಡಿನ ಜನರನ್ನು ದ್ರಾವಿಡ ಹಾಗೂ ಆರ್ಯ ಸಿದ್ಧಾಂತದಲ್ಲಿ ಬಂಧಿಸಿದ ಹಾಗೆ ಇತರ ರಾಜ್ಯದ ಮತದಾರರನ್ನು ಬಂಧಿಸಲಾಗುವುದಿಲ್ಲ.

ಬ್ರಿಟಿಷರನ್ನು ಮೇಲೆ ನಡೆಸಿದ ಆಕ್ರಮಣವನ್ನು ಸಮರ್ಥಿಸಿಕೊಳ್ಳಲು ‘ಆರ್ಯ’ರ ಸುಳ್ಳು ಸಿದ್ಧಾಂತವನ್ನು ತಂದರು. ಬ್ರಿಟಿಷರಿಗಿಂತಲೂ ಮುನ್ನವೇ ಆರ್ಯರು ಭಾರತದ ಮೇಲೆ ಆಕ್ರಮಣ ನಡೆಸಿದ್ದರು. ತಾವು ಮೊದಲ ದಾಳಿಕೋರರಲ್ಲವೆಂಬುದು ಬ್ರಿಟಿಷರು ಸೃಷ್ಟಿಸಿದ ವಾದ. ಅನಾಗರಿಕರಾಗಿದ್ದಂಥ ಭಾರತೀಯರ ಮೇಲೆ ಆರ್ಯರು ಆಕ್ರಮಣ ಮಾಡಿ ಭಾರತೀಯರಿಗೆ ನಾಗರಿಕತೆಯನ್ನು ಹೇಳಿಕೊಟ್ಟರೆಂಬುದು ಆರ್ಯ ಸಿದ್ಧಾಂತವನ್ನು ಪ್ರತಿಪಾದಿಸುವವರ ವಾದ. ದಕ್ಷಿಣ
ಭಾರತೀಯರು ‘ದ್ರಾವಿಡ’ರು ಉತ್ತರ ಭಾರತರು ‘ಆರ್ಯರು’, ಮೂಲ ಭಾರತೀಯರಾದಂಥ ದ್ರಾವಿಡರ ಮೇಲೆ ಉತ್ತರ ಭಾರತದ ಆರ್ಯರು ಆಕ್ರಮಣ ನಡೆಸಿದ್ದರೆಂಬುದು ಇದರ ಮುಂದುವರಿದ ಭಾಗ.

ಬ್ರಿಟಿಷರು ಭಾರತೀಯ ಶಿಕ್ಷಣ ವ್ಯವಸ್ಥೆಯ ಬದಲಾವಣೆಯ ಹೆಸರಿನಲ್ಲಿ ಆರ್ಯ ಮತ್ತು ದ್ರಾವಿಡ ಸಿದ್ಧಾಂತವನ್ನು ಮುನ್ನೆಲೆಗೆ ತಂದು, ದೊಡ್ಡದೊಂದು ಸುಳ್ಳನ್ನು ಪ್ರತಿಪಾದಿಸಿದರು. ಅಂಥದ್ದೇ ಸುಳ್ಳು ಇತಿಹಾಸವನ್ನು ಓದಿ ಬೆಳೆದಿರುವ ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಉತ್ತರ ಮತ್ತು ದಕ್ಷಿಣ
ಭಾರತದ ನಡುವೆ ಕಂದಕವನ್ನು ಸೃಷ್ಟಿಸಲು ಆಗಾಗ ಈ ಸಿದ್ಧಾಂಥವನ್ನು ಮುನ್ನೆಲೆಗೆ ತರುತ್ತಿರುತ್ತಾರೆ. ಉತ್ತರ ಪ್ರದೇಶದ ‘ಸಿನೌಲಿ’ಎಂಬ ಹಳ್ಳಿಯಲ್ಲಿ ನಡೆದ
ಉತ್ಖನನದಲ್ಲಿ, 4 ವರ್ಷಗಳ ಹಿಂದೆ ಸುಮಾರು ೪,೫೦೦ ವರ್ಷ ಹಳೆಯ ಸಮಾಧಿಗಳ ಅವಶೇಷಗಳು ಸಿಕ್ಕಿವೆ. ಈ ಸಮಾಧಿಯಲ್ಲಿ ಯುದ್ಧ ಮಾಡಲು ಬಳಸುತ್ತಿದ್ದಂಥ ಗುರಾಣಿ ಗಳು ಸಿಕ್ಕಿವೆ. ಅವುಗಳ ಮೇಲೆ ಕೆತ್ತಿರುವ ಸುಂದರವಾದ ಕೆತ್ತನೆಗಳು ಕಾಣಿಸುತ್ತಿವೆ. ಸತ್ತ ವ್ಯಕ್ತಿಯನ್ನು ಸಮಾಧಿ ಮಾಡುವಾಗ ಆತನು ಬಳಸುತ್ತಿದ್ದಂಥ ವಸ್ತುಗಳನ್ನೂ ಅವನ ಜತೆಯಲ್ಲಿ ಸಮಾಧಿ ಮಾಡಿರುವುದು ಪತ್ತೆಯಾಗಿದೆ.

ಯುದ್ಧಕ್ಕೆ ಬಳಸುತ್ತಿದ್ದಂಥ ‘ರಥ’ಗಳ ಅವಶೇಷಗಳು ಸಿಕ್ಕಿವೆ. ರಥಗಳ ಚಕ್ರಗಳ ಮೇಲಿನ ಚಿತ್ತಾರಗಳ ಕುರುಹುಗಳನ್ನು ಕಾಣಬಹುದಾಗಿದೆ. ಕುದುರೆಗಳನ್ನು ಬಳಸಿ ಓಡಿಸುವ ರಥಗಳು ಇದಾಗಿದ್ದು, 4500 ವರ್ಷಗಳ ಹಿಂದೆ ಭಾರತದಲ್ಲಿ ಕುದುರೆಗಳಿದ್ದವೆಂಬುದಕ್ಕೆ ಸಾಕ್ಷಿಯಾಗಿದೆ. ಲೊಡ್ಡೆಗಳು ಪಠ್ಯ ರಚನೆ ಸಂದರ್ಭದಲ್ಲಿ ಸಮಾಜ ವಿಜ್ಞಾನದ ಮೊದಲ ಭಾಗವನ್ನು ಆರ್ಯರ ಆಕ್ರಮಣದಿಂದಲೇ ಶುರು ಮಾಡುತ್ತಿದ್ದರು. ಭಾರತ ಒಂದು ಅನಾಗರಿಕ ದೇಶ, ಆರ್ಯರು ಭಾರತೀಯರಿಗೆ ನಾಗರಿಕತೆಯನ್ನು ಹೇಳಿಕೊಟ್ಟರೆಂದು ಇತಿಹಾಸದಲ್ಲಿ ಬರೆದರು.

ಭಾರತವನ್ನು ಇಬ್ಭಾಗವಾಗಿಸಲು ಬ್ರಿಟಿಷರು ಬರೆಸಿದ ದ್ರಾವಿಡ ಸಿದ್ಧಾಂತದಲ್ಲಿ, ಉತ್ತರ ಭಾರತದವರನ್ನು ಆರ್ಯರ ಮೂಲದವರೆಂದು ಅವರೆಂದಿಗೂ ಸಹ ಮೂಲ ಭಾರತೀಯರಾಗಿರಲಿಲ್ಲ, ಕೇವಲ ದ್ರಾವಿಡರು ಮಾತ್ರ ಮೂಲ ಭಾರತೀಯರೆಂದು ಹೇಳಲಾಗಿತ್ತು. ತಮಿಳುನಾಡಿಗೆ ಕಾಲಿಟ್ಟಂಥ ಬ್ರಿಟಿಷ್ ಕ್ರಿಶ್ಚಿಯನ್ ಇವಾಂಜಲಿಸ್ಟರು ಹಿಂದೂ ಸಂಸ್ಕೃತಿಯನ್ನು ನಿಧಾನವಾಗಿ ನಾಶಪಡಿಸಿದರು. ತಮ್ಮ ಧರ್ಮ ಪ್ರಚಾರಕ್ಕಾಗಿ ಹಿಂದೂಗಳ ಆಚರಣೆಗಳನ್ನೇ ಬಳಸಿಕೊಂಡು,
ಕ್ರಿಶ್ಚಿಯನ್ ಧರ್ಮವನ್ನು ಭಾರತೀಯತೆಗನುಗುಣವಾಗಿ ಪಸರಿಸಿದರು. ವಿಪರ್ಯಾಸವೆಂದರೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ದೇವಸ್ಥಾನಗಳಿರುವ ರಾಜ್ಯ ತಮಿಳುನಾಡು, ಇಂಥ ರಾಜ್ಯದಲ್ಲಿ ದೇವರನ್ನೇ ನಂಬದ ಪಕ್ಷಕ್ಕೆ ಜನರು ಮತ ಹಾಕುತ್ತಾ ಬಂದಿದ್ದಾರೆ. ತಮಿಳುನಾಡಿನ ಬ್ರಾಹ್ಮಣ, ದಲಿತರ ನಡುವೆ ದೊಡ್ಡ ಕಂದಕವನ್ನು ಸೃಷ್ಟಿಸಲು ಬ್ರಿಟಿಷರು ದ್ರಾವಿಡ ಸಿದ್ಧಾಂತ ಬಳಸಿಕೊಂಡರು.

ಬಿಜೆಪಿಯ ರಾಷ್ಟ್ರ ನಾಯಕರನ್ನು ಆರ್ಯರೆನ್ನುವ ಸಿದ್ದರಾಮಯ್ಯನವರಿಗೆ ತಮ್ಮದೇ ಪಕ್ಷದ ಅಧಿನಾಯಕಿ ಅಂಟೋನಿಯೋ ಮೈನೋ ಉತ್ತರ ಭಾರತದ ಆರ್ಯಳಾಗಿ ಯಾಕೆ ಕಾಣಿಸುತ್ತಿಲ್ಲ? ಆಕೆಯ ಮಗ ರಾಹುಲ್ ಗಾಂಧಿ ಯಾಕೆ ಉತ್ತರ ಭಾರತದ ಆರ್ಯನಾಗಿ ಕಾಣಿಸುತ್ತಿಲ್ಲ? ಮನಮೋಹನ್ ಸಿಂಗ್ ಯಾಕೆ ಆರ್ಯರಾಗಿ ಕಾಣಿಸುತ್ತಿಲ್ಲ? ಅಕ್ಕಪಕ್ಕದಲ್ಲಿರುವ ಹೊಗಳು ಭಟರು ಹೇಳಿಕೊಡುವ ವಿಚಾರವನ್ನು ನಂಬಿಕೊಂಡು ಹೇಳಿಕೆಗಳನ್ನು ನೀಡುತ್ತಾ ಹೋದರೆ
ಲಿಂಗಾಯಿತ ಧರ್ಮ ಒಡೆಯುವ ವಿಷಯದಲ್ಲಾದಂಥ ಸನ್ನಿವೇಶವೇ ಕಾಂಗ್ರೆಸ್ ಪಕ್ಷಕ್ಕೆ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಆರ್ಯ, ದ್ರಾವಿಡ ಸಿದ್ಧಾಂತದ ಮೂಲಕ ತಮ್ಮ ಧರ್ಮ ಪ್ರಚಾರ ಮಾಡುವಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲಿಲ್ಲ, ಬದಲಾಗಿ ಹೆಚ್ಚಾಗಿ ಭಾರತೀಯತೆಯನ್ನು ಕ್ರಿಶ್ಚಿಯನ್ ಧರ್ಮದ ಆಚರಣೆಗಳಲ್ಲಿ ಬಳಸಿಕೊಂಡು ಧರ್ಮ ಪ್ರಚಾರ ಮಾಡಿದರು ಮತ್ತು ತಮಿಳುನಾಡಿನಲ್ಲಿ ಮಾತ್ರ ಹೆಚ್ಚಿನ ಯಶಸ್ಸು ಕಂಡರು. ಬ್ರಿಟಿಷರು ತಾವು ಭಾರತ ಬಿಟ್ಟು ತೊಲಗಿದ ನಂತರವೂ ನಮ್ಮ ದೇಶದಲ್ಲಿ ಬೇರು ಬಿತ್ತಿ ಬೆಳೆಸಿರುವ ಕೆಲವು ಮರಗಳು ಆಗಾಗ ಗಾಳಿ ಬೀಸುತ್ತಿರುವಂತೆ ಮಾಡಿದ್ದಾರೆ.ನಮ್ಮಲ್ಲಿನ ಭವ್ಯ ಪರಂಪರೆಯನ್ನು ಪಠ್ಯಗಳ ಮೂಲಕ ಮರೆಮಾಚುವಲ್ಲಿ ಅವರು ಯಶಸ್ವಿ ಯಾಗಿದ್ದರು.

ಕರ್ನಾಟಕದಲ್ಲಿ ನಡೆಯುತ್ತಿರುವ ಪಠ್ಯ ಪುಸ್ತಕ ದಂಗಲ್ ವಿಚಾರದಲ್ಲಿಯೂ ಅಷ್ಟೇ, ಹುದುಗಿಟ್ಟಿದ್ದಂಥ ಇತಿಹಾಸವನ್ನು ಪರಿಷ್ಕರಣೆಯ ಮೂಲಕ ಹೇಳ ಹೊರಟರೆ ಲೊಡ್ಡೆಗಳು ವಿರೋಧಿಸುತ್ತಾರೆ. ತಮಗೆ ದಶಕಗಳ ಕಾಲ ಗಂಜಿ ನೀಡುತ್ತಿದ್ದಂಥ ಬ್ರಿಟಿಷರ ಆರ್ಯ ಹಾಗೂ ದ್ರಾವಿಡ ಸಿದ್ಧಾಂತಗಳನ್ನು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ಓದದಿದ್ದರೆ ತಮಗಾಗುವ ಗಂಜಿ ನಷ್ಟದ ಪ್ರಮಾಣವನ್ನು ಅವರಿಗೆ ಊಹಿಸಲು ಸಾಧ್ಯವಾಗುತ್ತಿಲ್ಲ. ಕುವೆಂಪು ಹೆಸರಲ್ಲಿ ರಾಜಕೀಯ ಮಾಡುತ್ತಾರೆ. ಕೆಂಪೇಗೌಡರ ಪಾಠವನ್ನು ಕೈಬಿಟ್ಟಿದ್ದಂಥ ಬರಗೂರು ಗ್ಯಾಂಗ್ ಬಗ್ಗೆ ಮಾತನಾಡುವುದಿಲ್ಲ.

ಭಗತ್ ಸಿಂಗ್ ಪಠ್ಯದ ವಿಚಾರದಲ್ಲಿ ರಾಜಕೀಯ ಮಾಡುತ್ತಾರೆ. ಸುಳ್ಳುಗಳ ಸರಮಾಲೆಯನ್ನೇ ಹೇಳಿ ಅದೇ ಸುಳ್ಳುಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಗಳಿಗೆ ಪತ್ರ ಬರೆಯುತ್ತಾರೆ. ಭಾವನಾತ್ಮಕ ಸುಳ್ಳುಗಳನ್ನೇ ತುಂಬಿದ ಪತ್ರವನ್ನು ತಮ್ಮ ಮಾವೋಗ್ಯಾಂಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಾರೆ. ಎಸ್‌ಎಲ್ ಭೈರಪ್ಪನವರು ಹೇಳಿದಂತೆ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ ರಾಷ್ಟ್ರೀಯ ವಾದಿ ಚಿಂತಕರ ಸಲಹೆಗಳನ್ನು ಮಾವೋವಾದಿ ಗಳು ಪರಿ ಗಣಿ ಸುವುದಿಲ್ಲ. ತಮ್ಮ ಸುಳ್ಳು ಅನಾವರಣಗೊಳಿಸುವವರನ್ನು ಲೊಡ್ಡೆಗಳು ದೂರವಿಟ್ಟಿರುತ್ತಾರೆ.

ಆರ್ಯ ಹಾಗೂ ದ್ರಾವಿಡ ಸಿದ್ಧಾಂತಗಳನ್ನು ದೇಶಾದ್ಯಂತ ಪರಿಚಯಿಸಲು ಬ್ರಿಟಿಷರ ಜತೆ ಕೈಜೋಡಿಸಿದ ಲೊಡ್ಡೆಗಳು, ಆ ಸಿದ್ಧಾಂತಗಳ ಪರವಾಗಿ ವೈeನಿಕ ಪುರಾವೆಗಳನ್ನು ನೀಡಲಾಗದೆ ಸಂಪೂರ್ಣವಾಗಿ ನೆಲಕಚ್ಚಿದ್ದಾರೆ. ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರ ಪರವಾಗಿ, ಸ್ವತಂತ್ರ್ಯಾ ನಂತರ ಬ್ರಿಟಿಷರು ನೆಟ್ಟಿರುವ ಟೊಳ್ಳು ಸಿದ್ಧಾಂತಗಳನ್ನು ಪೋಷಿಸಿಕೊಂಡು ಬರುವಲ್ಲಿ ಲೊಡ್ಡೆಗಳು ಯಶಸ್ವಿಯಾಗಿದ್ದರು. ಕಾಲ ಬದಲಾಗಿದೆ. ಪಾಪಿಗಳ ಕೊಡ ತುಂಬಿ ತುಳುಕುತ್ತಿದೆ. ಲೊಡ್ಡೆಗಳ
ಬಣ್ಣ ಬಟಾ ಬಯಲಾಗುತ್ತಿದೆ. ತಾವು ಪೋಷಿಸಿಕೊಂಡು ಬಂದಂಥ ಸಿದ್ಧಾಂತದ ಸುಳ್ಳುಗಳ ಅನಾವರಣವಾಗುತ್ತಿದ್ದಂತೆ ನೀರಿನಿಂದ ಹೊರಬಂದು ಒದ್ದಾಡುವ ಮೀನಿನಂತೆ ವಿಲವಿಲ ಒದ್ದಾಡುತ್ತಿದ್ದಾರೆ.

ಕರ್ನಾಟಕದ ಹಲವು ಪ್ರತಿಷ್ಠಾನಗಳು ಲೊಡ್ಡೆಗಳ ಗಂಜಿ ಕೇಂದ್ರಗಳಾಗಿವೆ. ಮುಂದಿನ ದಿನಗಳಲ್ಲಿ ಅಲ್ಲಿಯೂ ತಮ್ಮ ಗಂಜಿ ಲೋಟಗಳು ಬರಿದಾಗುವ ಭಯ
ಲೊಡ್ಡೆಗಳನ್ನು ಕಾಡುತ್ತಿದೆ. ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಂಡೂರಿದ್ದ ಲೊಡ್ಡೆಗಳ ಸುಳ್ಳುಗಳ ಅನಾವರಣವಾಗುತ್ತಿದೆ. ಲೊಡ್ಡೆಗಳು ತಮ್ಮ ಸುಳ್ಳುಗಳ ಮೂಲಕ ಕಟ್ಟಿಕೊಂಡಿದ್ದ ಸಾಮ್ರಾಜ್ಯ ಅಧಪತನದೆಡೆಗೆ ಸಾಗುತ್ತಿರುವುದಂತೂ ಸತ್ಯ. ಅವರ ವಾದವನ್ನು ಪೋಷಿಸಿಕೊಂಡು ಬಂದ ಕಾಂಗ್ರೆಸ್ ರಾಜಕೀಯ ಗಾಳವಾಗಿದ್ದಂಥ ವಿಚಾರಗಳೆಲ್ಲವೂ ನೆಲಕಚ್ಚಿವೆ. ಕರ್ನಾಟಕದಲ್ಲಿ ಮತ್ತದೇ ನೆಲಕಚ್ಚಿರುವ ಆರ್ಯ ಮತ್ತು ದ್ರಾವಿಡ ಸಿದ್ಧಾಂತದ ವಾದವನ್ನಿಟ್ಟುಕೊಂಡು ಕಾಂಗ್ರೆಸ್
ರಾಜಕೀಯ ಮಾಡುತ್ತಿದೆ.