Wednesday, 9th October 2024

ನಿಸ್ವಾರ್ಥ ಸೇವೆಯ ಧ್ಯೋತಕ ಡಾ.ಬಿ.ಸಿ.ರಾಯ್

ಸಂಸ್ಮರಣೆ

ರಾಜು ಭೂಶೆಟ್ಟಿ

ವೈದ್ಯಕೀಯ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಎದುರಾಗುವ ಸವಾಲುಗಳನ್ನು ಸ್ವೀಕರಿಸಿ, ತಮ್ಮ ಜೀವನವನ್ನೇ ಮುಡಿಪಾಗಿಟ್ಟು ರೋಗಿಗಳ ಚಿಕಿತ್ಸೆ ಮಾಡುವ ವೈದ್ಯರ ಸೇವೆ ಸರ್ವಕಾಲಕ್ಕೂ ಸ್ಮರಣೀಯ. ಹೀಗಾಗಿ ಪ್ರತಿವರ್ಷದ ಜುಲೈ ೧ನ್ನು ‘ರಾಷ್ಟ್ರೀಯ ವೈದ್ಯರ ದಿನ’ವಾಗಿ ಆಚರಿಸಲಾಗುತ್ತದೆ. ಇದಕ್ಕೆ ಕಾರಣಕರ್ತರಾಗಿದ್ದು ಬಿ.ಸಿ. ರಾಯ್ ಎಂದೇ ಖ್ಯಾತರಾದ ಡಾ. ಬಿಧನ್ ಚಂದ್ರ ರಾಯ್.

ಖ್ಯಾತ ವೈದ್ಯ ಮತ್ತು ದೇಶಭಕ್ತರಾಗಿದ್ದ ಡಾ. ಬಿ.ಸಿ. ರಾಯ್ ಅವರು ೧೮೮೨ರ ಜುಲೈ ೧ರಂದು ಬಿಹಾರದ ಬಂಕೀಪೋರ್‌ನಲ್ಲಿ ಜನಿಸಿದರು. ಬಡರೋಗಿಗಳ ಬಗ್ಗೆ ಅಪಾರ ಕಾಳಜಿಯಿದ್ದ ಅವರು ರೋಗಿಗಳಿಂದ ಕೇವಲ ೨ ರು. ಪಡೆಯುತ್ತಿದ್ದರಂತೆ. ಒಬ್ಬ ವೈದ್ಯರಾಗಿ ಚಿಕಿತ್ಸೆ ನೀಡುತ್ತಿದ್ದು ದರ ಜತೆಗೆ ಅನೇಕ ಸಲ ದಾದಿಯಂತೆ ಸೇವೆ ಮಾಡು ತ್ತಿದ್ದುದು ವೈದ್ಯಕೀಯ ಸೇವೆಯಲ್ಲಿ ಅವರಿ ಗಿದ್ದ ಭಕ್ತಿಗೆ ದ್ಯೋತಕ.

ಓರ್ವ ನಿಸ್ವಾರ್ಥ ಸಮಾಜಸೇವಕರೂ ಆಗಿದ್ದ ಅವರು, ‘ದೇಶಕ್ಕಾಗಿ ಶ್ರಮವಹಿಸಿ ದುಡಿಯ ಬೇಕು. ಬದುಕಿನಲ್ಲಿ ಎಂಥ ಸಂದರ್ಭ ದಲ್ಲೂ ಧೈರ್ಯ, ಆತ್ಮವಿಶ್ವಾಸ ಕಳೆದುಕೊಳ್ಳ ಬಾರದು. ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕು, ಯಾವುದೇ ಕೆಲಸವನ್ನು ಅಸಾಧ್ಯ ಎಂದು ಹೇಳಬಾರದು’ ಎಂಬ ಪ್ರೇರಣಾ ದಾಯಿ ಮಾತುಗಳನ್ನಾಡುತ್ತಿದ್ದರು ಹಾಗೂ ಅದನ್ನು ಮಾಡಿ ತೋರಿಸಿದರು. ವೈದ್ಯ ಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ, ‘ನಿನ್ನ ಕೈಗಳು ಏನನ್ನು ಮಾಡಲು ಉತ್ಕೃಷ್ಟ ವಾಗಿವೆಯೋ ಅದನ್ನು ಪೂರ್ಣ ಸಾಮರ್ಥ್ಯದಿಂದ ಸಾಧಿಸಿ ತೋರಿಸು’ ಎಂಬ ಧ್ಯೇಯವಾಕ್ಯ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿ, ಅದನ್ನು ಜೀವನದುದ್ದಕ್ಕೂ ಅವರು ಪರಿಪಾಲಿಸಿದರು.

ಹೀಗೆ ವೈದ್ಯಕೀಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಅವರ ಜನ್ಮದಿನವಾದ ಜುಲೈ ೧ನ್ನು ‘ವೈದ್ಯರ ದಿನ’ವಾಗಿ ಆಚರಿಸಿ ಅವರ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ. ಹೋರಾಟದ ಜೀವನ: ಕುಟುಂಬದಲ್ಲಿ ೫ನೇ ಹಾಗೂ ಕೊನೆಯ ಮಗನಾಗಿದ್ದ ಬಿ.ಸಿ. ರಾಯ್ ೧೪ರ ಹರೆಯದವರಾಗಿರುವಾಗ ತಾಯಿಯನ್ನು ಕಳೆದುಕೊಂಡರು. ಆದರೆ ತಾಯಿಲ್ಲದ ಕೊರತೆ ಮಕ್ಕಳನ್ನು ಕಾಡದಂತೆ ಅವರ ತಂದೆ ನೋಡಿಕೊಂಡರು. ಬಿಹಾರದ ಪಟನಾದಲ್ಲೇ ಪದವಿಯ ವರೆಗೆ ವ್ಯಾಸಂಗ ಮಾಡಿ ಗಣಿತದಲ್ಲಿ ಆನರ್ಸ್ ಪದವಿ ಪಡೆದ ರಾಯ್ ಅವರು ತರುವಾಯ ವೈದ್ಯಕೀಯ ಶಿಕ್ಷಣ ಪಡೆಯಲು ಮುಂದಾದರು. ಆದರೆ ಮೊದಲ ವರ್ಷವನ್ನು ಮುಗಿಸುವ ಸಂದರ್ಭದಲ್ಲಿ ಅವರು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಯಿತು.

Read E-Paper click here
ಕಾರಣ, ಅವರ ತಂದೆ ನೌಕರಿಯಿಂದ ನಿವೃತ್ತರಾಗಿದ್ದರು. ತೊಂದರೆಗಳು ಸಾಕಷ್ಟಿದ್ದರೂ ವೈದ್ಯರಾಗಬೇಕೆಂಬ ಛಲ ಜೀವಂತ ವಾಗಿದ್ದರಿಂದ ಸಹಪಾಠಿಗಳಿಂದ ವೈದ್ಯಕೀಯ ಪುಸ್ತಕಗಳನ್ನು ಎರವಲು ಪಡೆದು, ಇಲ್ಲವೇ ಗ್ರಂಥಾಲಯಗಳಲ್ಲಿ ಓದಿಗೆ ಹೆಚ್ಚಿನ ಸಮಯ ಮೀಸಲಿಟ್ಟು ಅಧ್ಯಯನವನ್ನು ಮುಂದುವರಿಸಿದರು. ಈ ಅವಧಿಯಲ್ಲಿ ಅವರಿಗೆ ವಿದ್ಯಾರ್ಥಿ ವೇತನ ದೊರೆತಿದ್ದು ಪೂರಕವಾಗಿ ಪರಿಣಮಿಸಿತು. ವೈದ್ಯಕೀಯ ಪದವಿ ಪಡೆದ ನಂತರ ಪ್ರಾಂತೀಯ ವೈದ್ಯಕೀಯ ಸೇವಾ ಇಲಾಖೆಯನ್ನು ಸೇರಿ ವೃತ್ತಿಯನ್ನು ಆರಂಭಿಸಿದರು.

ಛಲಗಾರ ರಾಯ್: ಉನ್ನತ ವ್ಯಾಸಂಗ ಮಾಡುವ ಬಯಕೆ ಸುರಿಸಿದಾಗ ಸೇಂಟ್ ಬಾರ್ತಲೋಮಿ ಸಂಸ್ಥೆಯನ್ನು ಸೇರಲು ಲಂಡನ್‌ಗೆ ತೆರಳಿದರು ರಾಯ್. ಆದರೆ ಅಲ್ಲಿನ ಡೀನ್, ಏಷ್ಯಾ ಖಂಡದಿಂದ ಬಂದಿದ್ದ ಯಾವುದೇ ವಿದ್ಯಾರ್ಥಿಗೆ ಪ್ರವೇಶ ಕೊಡಲು ಒಪ್ಪುತ್ತಿರಲಿಲ್ಲ. ಹೀಗಾಗಿ ತಮ್ಮ ಅರ್ಜಿ ತಿರಸ್ಕೃತವಾದರೂ ರಾಯ್ ಪ್ರಯತ್ನವನ್ನು ಬಿಡದೆ ಸುಮಾರು ೩೦ ಬಾರಿ ಅರ್ಜಿಯನ್ನು ಸಲ್ಲಿಸಿದರಂತೆ. ಕೊನೆಗೆ ಇವರ ಪ್ರಯತ್ನಕ್ಕೆ ಜಯ ದೊರೆತು ಅರ್ಜಿ ಅಂಗೀಕೃತವಾಯಿತು. ೨ ವರ್ಷ ೩ ತಿಂಗಳಲ್ಲಿ ಎಂಆರ್‌ಸಿಸಿ ಮತ್ತು ಎಫ್ ಆರ್‌ಸಿಎಸ್ ಪದವಿಗಳನ್ನು ಗಳಿಸಿದ ರಾಯ್ ೧೯೧೧ರಲ್ಲಿ ಭಾರತಕ್ಕೆ ಮರಳಿದರು.

ಅಭಿವೃದ್ಧಿ ಪರ್ವ ಆರಂಭ: ಭಾರತಕ್ಕೆ ವಾಪಸಾದ ತಕ್ಷಣ ರಾಯ್ ಅವರು ಕಲ್ಕತ್ತ ವೈದ್ಯಕೀಯ ಕಾಲೇಜಿನಲ್ಲಿ, ಕ್ಯಾಂಪ್ ಬೆಲ್
ವೈದ್ಯಕೀಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೋದಿಸಿದರು. ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಸುಧಾರಿಸಲು ಜಾದವ್‌ಪುರ್
ಕ್ಷಯ ಆಸ್ಪತ್ರೆ, ಚಿತ್ತರಂಜನ್ ಸೇವಾಸದನ್, ಆರ್.ಜಿ. ಖೇರ್ ವೈದ್ಯಕೀಯ ಕಾಲೇಜು, ಕಮಲಾ ನೆಹರು ಆಸ್ಪತ್ರೆ, ವಿಕ್ಟೋರಿಯಾ ಸಂಸ್ಥೆ, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆಗಳನ್ನು ಸ್ಥಾಪಿಸಲು ಶ್ರಮಿಸಿದರು. ೧೯೨೬ರಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಚಿತ್ತರಂಜನ್ ಸೇವಾಸದನ ಆರಂಭಿಸಲಾಯಿತು.

ಖರಗಪುರದಲ್ಲಿ ಐಐಟಿಯನ್ನು ಸ್ಥಾಪಿಸಲು ರಾಯ್ ಕಾರಣಕರ್ತರಾದರು. ೧೯೨೫ರಲ್ಲೇ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದ
ರಾಯ್ ಅವರು ‘ಗ್ರಾಂಡ್ ಓಲ್ಡ್ ಮ್ಯಾನ್ ಆಫ್ ಬೆಂಗಾಲ್’ ಎಂದೇ ಖ್ಯಾತರಾಗಿದ್ದ ಸುರೇಂದ್ರನಾಥ ಬ್ಯಾನರ್ಜಿಯವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಅವರ ಜನಪ್ರಿಯತೆಗೆ ದ್ಯೋತಕ. ರಾಯ್ ಅವರ ನಿಸ್ವಾರ್ಥ ಸೇವೆಯನ್ನು ಮನಗಂಡಿದ್ದ ಜನರು ಅವರ ಮೇಲೆ ಅಪಾರ ವಿಶ್ವಾಸವಿಟ್ಟು ಚುನಾಯಿಸಿದ್ದರು. ೧೯೨೫ರಲ್ಲಿ ಅವರು ಶಾಸನ ಸಭೆಯಲ್ಲಿ ನಿರ್ಣಯವೊಂದನ್ನು ಮಂಡಿಸಿ ಹೂಗ್ಲಿ ನದಿ ತೀವ್ರವಾಗಿ ಕಲುಷಿತಗೊಂಡಿರುವ ಬಗ್ಗೆ ಅಧ್ಯಯನ ನಡೆಸಬೇಕೆಂದು ಹೇಳುವ ಮೂಲಕ ಗಮನ ಸೆಳೆದರು. ಆ ನದಿಯನ್ನು ಶುದ್ಧ ವಾಗಿಡಲು ಸ್ವತಃ ಅತ್ಯುತ್ತಮ ಸಲಹೆಗಳನ್ನು ನೀಡಿದರು.

ಸ್ವಾರಸ್ಯಕರ ಘಟನೆ: ಡಾ. ರಾಯ್ ಅವರು ಗಾಂಧೀಜಿಯವರ ಖಾಸಗಿ ವೈದ್ಯರಾಗಿದ್ದರು. ೧೯೩೩ರಲ್ಲಿ ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಚಳವಳಿ ತೀವ್ರ ಗೊಂಡಿದ್ದ ಕಾಲದಲ್ಲಿ ಗಾಂಧೀಜಿ ಪೂನಾದ ಪರ್ಣಕುಟಿ ಯಲ್ಲಿ ಉಪವಾಸ ವ್ರತವನ್ನು ಕೈಗೊಂಡಿದ್ದರು. ಆ ಸಂದರ್ಭದಲ್ಲಿ ರಾಯ್ ಅವರು ಬಾಪೂಜಿಗೆ ಕೆಲವು ಔಷಧಿಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದರು. ಆದರೆ ಬಾಪೂಜಿ, ಆ ಔಷಧಿಗಳು ಭಾರತದಲ್ಲಿ ತಯಾರಾಗಿಲ್ಲವೆಂಬ ಕಾರಣಕ್ಕೆ ತೆಗೆದುಕೊಳ್ಳಲು ನಿರಾಕರಿಸಿ, ರಾಯ್ ಅವರನ್ನುದ್ದೇಶಿಸಿ ‘ನಾನೇಕೆ ನಿಮ್ಮಿಂದ ಔಷಧಿಯನ್ನು ತೆಗೆದುಕೊಳ್ಳಬೇಕು? ನೀವು ನನ್ನ ೪೦೦ ದಶಲಕ್ಷ ದೇಶವಾಸಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವಿರಾ?’ ಎಂದು ಕೇಳಿದರು. ಅದಕ್ಕೆ ರಾಯ್, ‘ನಾನು ಚಿಕಿತ್ಸೆ ನೀಡುತ್ತಿರುವುದು ಕೇವಲ ಒಬ್ಬ ಗಾಂಧೀಜಿಗೆ ಅಲ್ಲ, ೪೦೦ ದಶಲಕ್ಷ ದೇಶ ವಾಸಿಗಳನ್ನು ಪ್ರತಿನಿಧಿಸುತ್ತಿರುವ ಗಾಂಧೀಜಿಗೆ’ ಎಂದು ಉತ್ತರಿಸಿದರು.

ಅಂದರೆ, ಗಾಂಧೀಜಿಯವರು ಆರೋಗ್ಯವಾಗಿ ಸದೃಢವಾಗಿದ್ದರೆ ಮಾತ್ರ ದೇಶವಾಸಿಗಳು ಆರೋಗ್ಯವಾಗಿದ್ದಂತೆ ಎಂಬರ್ಥದ ಈ ಮಾತಿಗೆ ಗಾಂಧೀಜಿಯವರು ತಮ್ಮ ಪಟ್ಟು ಸಡಿಲಿಸಿ ರಾಯ್ ಅವರು ಕೊಟ್ಟ ಔಷಧಿಯನ್ನು ಸ್ವೀಕರಿಸಿದರು. ಹೀಗೆ ಗಾಂಧೀಜಿ ಯವರಿಗೆ ಹಾಗೂ ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಕೆನಡಿಯವರಿಗೂ ಚಿಕಿತ್ಸೆ ನೀಡಿದ ಕೀರ್ತಿ ರಾಯ್ ಅವರಿಗೆ ಸಲ್ಲುತ್ತದೆ.
ಪಶ್ಚಿಮ ಬಂಗಾಳದ ನವಶಿಲ್ಪಿ: ೧೯೪೮ರ ಜನವರಿ ೨೩ರಂದು ಡಾ. ಬಿ.ಸಿ. ರಾಯ್ ಅವರು ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಂದಿನಿಂದ ಅಖಂಡ ೧೪ ವರ್ಷ ಹಾಗೂ ೧೫೮ ದಿನಗಳ ಕಾಲ ಅದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರು. ಜನರ ಆರೋಗ್ಯ ಸುಧಾರಣೆಗಾಗಿ ಸಾಕಷ್ಟು ಆಸ್ಪತ್ರೆಗಳನ್ನು ನಿರ್ಮಿಸಿದ್ದರ ಜತೆಗೆ, ಆರ್ಥಿಕ ಸಮಸ್ಯೆ, ಬಡತನ, ನಿರುದ್ಯೋಗ, ಆಹಾರ ಕೊರತೆ ನೀಗಿಸಲು ನಿರಂತರವಾಗಿ ಶ್ರಮಿಸಿದರು.

ಅತ್ಯಾಧುನಿಕ ಕಾರ್ಖಾನೆಗಳು, ನೂರಾರು ಶಾಲಾ ಕಾಲೇಜುಗಳನ್ನು ಸ್ಥಾಪಿಸಿದರು. ಹೀಗೆ ಪಶ್ಚಿಮ ಬಂಗಾಳದ ಸರ್ವತೋಮುಖ
ಅಭಿವೃದ್ಧಿಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ, ನಿಸ್ವಾರ್ಥ ಸೇವೆಯ ಮೂಲಕ ಜನರ ಮನದಲ್ಲಿ ಅಚ್ಚಳಿಯದಂತೆ ಉಳಿದು ‘ಪಶ್ಚಿಮ ಬಂಗಾಳದ ನವಶಿಲ್ಪಿ’ ಎಂದು ಮನೆಮಾತಾದರು. ಭಾರತ ಸರಕಾರವು ೧೯೬೧ರ ಫೆಬ್ರುವರಿ ೪ ರಂದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ಡಾ. ಬಿ.ಸಿ. ರಾಯ್ ಅವರಿಗೆ ನೀಡಿ ಗೌರವಿಸಿತು. ೧೯೭೬ರಲ್ಲಿ ಅವರ ಹೆಸರಿನಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಆರಂಭಿಸಲಾಯಿತು.

ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಹೀಗೆ ಡಾ. ಬಿ.ಸಿ. ರಾಯ್ ಅವರು ಒಬ್ಬ ಅತ್ಯುತ್ತಮ
ವೈದ್ಯರಾಗಿ, ಆಡಳಿತಗಾರರಾಗಿ, ಮುತ್ಸದ್ದಿಯಾಗಿ ದೇಶಕ್ಕೆ ಸಲ್ಲಿಸಿದ ಸೇವೆ ಅವಿಸ್ಮರಣೀಯ. ವಿದೇಶಕ್ಕೆ ಹೋಗಿ ತಮ್ಮ ವೈದ್ಯಕೀಯ ವೃತ್ತಿಯಿಂದ ಹಣಗಳಿಸಲು ಅವರಿಗೆ ಸಾಕಷ್ಟು ಅವಕಾಶಗಳಿದ್ದರೂ, ತಮ್ಮ ಸೇವೆಯನ್ನು ದೇಶಕ್ಕಾಗಿ, ಬಡ ಜನರ ಏಳಿಗೆಗಾಗಿ ಮೀಸಲಿಟ್ಟ ಅವರು ಕೇವಲ ವೈದ್ಯರಾಗಿ, ರಾಜಕಾರಣಿಯಾಗಿ ಉಳಿಯದೆ ಜನರ ಹೃದಯದಲ್ಲಿ ದೇವರ ಸ್ಥಾನ ಪಡೆದರು. ಇಂಥ ಮಹಾನ್ ಚೇತನವಾದ ಡಾ. ಬಿ.ಸಿ.ರಾಯ್ ಅವರು ೧೯೬೨ರ ಜುಲೈ ೧ರಂದು ನಿಧನರಾದರು.