Saturday, 14th December 2024

ಕಲಿಕೆಯು ಕನಸಿನ ಗರಿಗೆದರಿಸಲಿ

ಅಭಿಪ್ರಾಯ

ಅನೀಶ್ ಬಿ. ಕೊಪ್ಪ

ನಾಗಾಲೋಟದಲ್ಲಿ ಓಡುತ್ತಿರುವ ಇಂದಿನ ಯುಗದಲ್ಲಿ ಶಿಕ್ಷಣ ಎಂಬುದು ಜೀವನದ ಓಟಕ್ಕೆ ಅತ್ಯಗತ್ಯವಾದ ಇಂಧನವಿದ್ದಂತೆ. ಅಭಿರುಚಿಯನ್ನು ಹುಟ್ಟಿಸುವುದು ಶಿಕ್ಷಣದ ಉದ್ದೇಶವೇ ಹೊರತು, ಒಬ್ಬರು ಕಲಿತದ್ದನ್ನು ಮತ್ತೊಬ್ಬರಿಗೆ ಹೇಳುವುದಲ್ಲ ಎಂಬ ಫ್ರೆಂಚ್ ಬರಹಗಾರ ಗಯಟೆ ಹೇಳಿದ್ದಾರೆ. ಶಿಕ್ಷಣ ವಿವಿಧ ರಂಗಗಳಲ್ಲಿ ಅಭಿರುಚಿ ಬಿತ್ತುವಂತಿರಬೇಕು.

ಮೆಕಾಲೆಯ ಬಳುವಳಿಯಾದಂತಹ ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ‘ಅಧಿಕ ಅಂಕ’ ಎಂಬ ಹುಚ್ಚು ಕುದುರೆಯ ಬೆನ್ನತ್ತಿ ಓಡುವ, ಅದರ ಸಾರ್ಥಕತೆ ಕಾಣುವ ಪರಿಪಾಠ ವಾಗಿದೆ. ಆದರೆ ಆಶಾದಾಯಕ ಬೆಳವಣಿಗೆ ಎಂಬಂತೆ, ರಾಷ್ಟ್ರೀಯ ಶಿಕ್ಷಣ ನೀತಿ-2020 ಹೊಸ ಸ್ವರೂಪದಲ್ಲಿ ವಿದ್ಯಾರ್ಥಿಗಳ ಕೌಶಲ್ಯಕ್ಕೂ ಆದ್ಯತೆ ನೀಡು ತ್ತಿರುವುದು ಸ್ತುತ್ಯಾರ್ಹ ವಿಚಾರ. ನಮ್ಮಲ್ಲಿ ಸದ್ಯ ಚಾಲ್ತಿಯಲ್ಲಿರುವ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳಿಸಿದ ಜ್ಞಾನ ಮತ್ತು ಕೌಶಲ ಗಳ ಮೌಲ್ಯಮಾಪನಕ್ಕಿಂತಲೂ ಆತ ತರಗತಿಯಲ್ಲಿ ಕಲಿತ ಪುಸ್ತಕ eನವನ್ನು ಪರೀಕ್ಷೆ ಆಗಿರುವುದೇ ಹೆಚ್ಚು.

ಪುಸ್ತಕದ ಹೊರತಾಗಿ ಆತ ಏನೇ ಪ್ರತಿಭೆ ಹೊಂದಿದ್ದರೂ, ವಿಶೇಷ ಕೌಶಲವನ್ನು ಬೆಳೆಸಿಕೊಂಡು ಸಾಧನೆಯ ಪಥದಲ್ಲಿ ಸಾಗುತ್ತಿದ್ದರೂ ಅವನ ಯಾವುದೇ ಪ್ರತಿಭೆಗೆ ಬೆಲೆ ಇಲ್ಲದಂತಾಗಿ, ಪರೀಕ್ಷಾ ಅಂಕಗಳ ಆಧಾರ ದಲ್ಲಿಯೇ ಅವನ ಜಾಣ್ಮೆಯನ್ನು ಅಳತೆ ಮಾಡಲಾಗುತ್ತಿದೆ. ಬದುಕನ್ನು ಎದುರಿಸುವ ವಿಚಾರ ಹಾಗಿರಲಿ,
ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಯೊಬ್ಬ ತನ್ನ ದಿನನಿತ್ಯದ ಜವಾಬ್ದಾರಿಗಳನ್ನಾದರೂ ಸಮರ್ಥನಾಗಿ ನಿರ್ವಹಿಸಬಲ್ಲನೇ? ಅದಕ್ಕೆ ಬೇಕಾದ ಸಾಮಾನ್ಯ ವಿವೇಕ, ವ್ಯವಹಾರ, ಸಂವಹನದ ಕೌಶಲತೆಯನ್ನು ಅವನಲ್ಲಿ ಶಿಕ್ಷಣ ಪದ್ಧತಿ ಬೆಳೆಸಿದೆಯೇ? ಇಲ್ಲವಾದರೆ ಶಿಕ್ಷಣ ಅವನಿಗೇನು ಕೊಟ್ಟಿದೆ? ನೂರಕ್ಕೆ ನೂರು ಅಂಕ ಕೊಟ್ಟ ಪರೀಕ್ಷೆ ಅವನ ಯಾವ ಜ್ಞಾನವನ್ನು ಅಳೆದಿದೆ? ಎಂಬೆ ಪ್ರಶ್ನೆಗಳು ಪ್ರಶ್ನಾರ್ಥಕಗಳಾಗಿಯೇ ಉಳಿದಿರುವುದು ಖೇದಕರ ಸಂಗತಿ.

ವಿದ್ಯಾರ್ಥಿಯು ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಂತಹ ಪಬ್ಲಿಕ್ ಪರೀಕ್ಷೆಗಳಲ್ಲಿ ಪಡೆದ ಅಂಕಗಳೇ ಮಕ್ಕಳ ಒಟ್ಟಾರೆ ಭವಿಷ್ಯದ ಅಡಿಗಲ್ಲುಗಳೆಂಬಂತೆ ಬಿಂಬಿಸಲಾಗುತ್ತಿದೆ. ನಿದ್ದೆ ಮಾಡುವ ಆರೇಳು ತಾಸು ಹೊರತಾಗಿ ಉಳಿದೆಲ್ಲ ಸಮಯದಲ್ಲೂ ವಿದ್ಯಾರ್ಥಿಗಳನ್ನು ‘ಅಂಕ’ಗಳೆಂಬ ವೃಕ್ಷಗಳಲ್ಲಿ ಭರಪೂರ ಫಲಕೊಡ ಬೇಕೆಂದು ನಾನಾ ರೀತಿಯ ಕಸರತ್ತುಗಳನ್ನು ಮಾಡಲಾಗುತ್ತದೆ. ಈ ರೀತಿಯಲ್ಲಿ ಪರೀಕ್ಷಾ ಚೌಕಟ್ಟಿಗೆ ಅಣಿಗೊಳಿಸಲಾಗುತ್ತಿದೆ. ಮಕ್ಕಳ ಬಾಲ್ಯವೆಂಬ ಅಮೂಲ್ಯ ಕ್ಷಣಗಳನ್ನು ಹೊಸಕಿಹಾಕ ಲಾಗುತ್ತಿದೆ. ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸುವ ಹೊರತಾಗಿ ಅವರ ವಿದ್ಯಾರ್ಥಿ ಜೀವನಕ್ಕೆ ಇನ್ನೇನೂ ಗುರಿಗಳೇ ಇಲ್ಲ. ಹಾಗಾಗಿಯೇ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತೆಂದರೆ ಪ್ರಾಣ ಕಳೆದುಕೊಂಡಿರುವ ಅಮಾಯಕ ಜೀವಗಳು ಅದೆಷ್ಟೋ ಇವೆ.

ಸಮಾಜವು ಎಲ್ಲಾ ರಂಗದಲ್ಲಿ ಅಭಿವೃದ್ಧಿ ಹೊಂದಿದರೆ ಮಾತ್ರ ಸತ್ಪಥದ ದಿಕ್ಸೂಚಕವಾಗುತ್ತದೆ. ಸಾಧನೆಯ ಮುಕುಟಕ್ಕೆ ಅಂಕ ಗಳಿಕೆಯ ನಾಗಾಲೋಟದ ಓಟವು ಎಷ್ಟು ಮುಖ್ಯವೋ ಅಂತೆಯೇ, ನೀರಜ್ ಚೋಪ್ರಾರಂತಹ ಕ್ರೀಡಾಪಟು, ಲತಾ ಮಂಗೇಶ್ಕರ್‌ರಂತಹ ಹಾಡುಗಾರ್ತಿ,ಡಾ.ರಾಜ್ ಕುಮಾರ್‌ರಂತಹ ನಟ, ಬರಹಗಾರರು, ಇತ್ಯಾದಿ ಎಲ್ಲಾ ಕ್ಷೇತ್ರದಲ್ಲಿನ ವ್ಯಕ್ತಿಗಳೂ ಬೇಕು. ಅಂಕಗಳಿಕೆಯ ಓಟದಲ್ಲಿ ಒಂದಿಷ್ಟು ಬದಲಾವಣೆಯನ್ನು ತಂದು, ಮಕ್ಕಳ ಅರಿವಿನ ಬೆಳವಣಿಗೆಯ
ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಉತ್ತಮಗೊಳಿಸುವ ಪ್ರಯತ್ನದತ್ತ 2020 ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಮುಂದಡಿಯನ್ನಿಡುತ್ತಿದೆ. ಈ ನೀತಿಯನ್ವಯ, ವಿದ್ಯಾರ್ಥಿಯ ಪ್ರಗತಿ ಪತ್ರಗಳಲ್ಲಿ ಕೇವಲ ಅಂಕಗಳು ಹಾಗೂ ಟಿಪ್ಪಣಿಗಳ ಬದಲು, ಕೌಶಲ ಮತ್ತು ಅರ್ಹತೆಗಳ ಸಮಗ್ರ ವರದಿಯನ್ನು ನೀಡಲು ಉದ್ದೇಶಿಸಿರುವುದು ಒಂದಿಷ್ಟು ಹೊಸ ಆಶಾಕಿರಣವನ್ನು ಬೆಳಗಿಸಿದೆ.

ಶಿಕ್ಷಣವು ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು. ಜೀವನದಲ್ಲಿ ಮುನ್ನಡೆಸುವ ಸಾಮರ್ಥ್ಯ ನೀಡಬೇಕು ಎಂದು ಜಿಡ್ಡು ಕೃಷ್ಣಮೂರ್ತಿಯವರು ಹೇಳಿದಂತೆ, ಪ್ರತಿ ವ್ಯಕ್ತಿಯನ್ನೂ ಪರಿಪೂರ್ಣ ಮಾನವನನ್ನಾಗಿ ಮಾಡುವತ್ತ ಜೀವನದ ಏಳು-ಬೀಳುಗಳನ್ನು ಸಮರ್ಥವಾಗಿ ಮುನ್ನಡೆಸುವತ್ತ ಶಿಕ್ಷಣವು ದಾರಿದೀಪವಾಗಬೇಕು.