Saturday, 14th December 2024

ಕನಸುಗಳಿಂದ ನಾವು ಬುದ್ದಿವಂತರಾದೆವೇ ?

ಹಿಂದಿರುಗಿ ನೋಡಿದಾಗ

ನಮ್ಮ ಪೂರ್ವಜರು ‘ಬುದ್ಧಿವಂತ ಮಾನವ’ ಎಂಬ ಅಭಿದಾನವನ್ನು ಪಡೆಯುವುದಕ್ಕೆ ಮೊದಲ ಕಾರಣ ಸಹಕಾರ ತತ್ತ್ವ ಎಂಬುದನ್ನು ತಿಳಿದು ಕೊಂಡೆವು. ನಿಯಾಂದಾರ್ಥಾಲ್ ಆದಿಯಾಗಿ ದಾಯಾದಿ ಮಾನವರಲ್ಲಿಯೂ ಸಹಕಾರ ತತ್ತ್ವವಿದ್ದಿತು. ಆದರೆ ಅದು ಬಹುಪಾಲು ಕೌಟುಂಬಿಕ ಮಟ್ಟದಲ್ಲಿತ್ತು. ಇಡೀ ಸಮುದಾಯದಲ್ಲಿ ಪರಸ್ಪರ ಸಹಕಾರ ತತ್ತ್ವದ ಪರಿಚಯವಿರಲಿಲ್ಲ.

ಅದರಲ್ಲೂ ಅಪರಿಚಿತರೊಡನೆ ಸಹಕರಿಸುವುದು ಅವರಲ್ಲಿ ಅಸಾಧ್ಯದ ಮಾತಾಗಿತ್ತು. ಆದರೆ ಸೆಪಿಯನ್ ಪೂರ್ವಜರು ಸಮುದಾಯದ ಮಟ್ಟದಲ್ಲಿ ಸಹಕರಿಸುತ್ತಿದ್ದರು. ನೂರಾರು, ಸಾವಿರಾರು ಜನರು ಪರಸ್ಪರ ಪರಿಚಯವಿಲ್ಲದಿದ್ದರೂ ಅಗತ್ಯ ಬಂದಾಗ ಪರಸ್ಪರ ಸಹಕಾರದೊಡನೆ ಉದ್ದಿಷ್ಟ ಕಾರ್ಯ ವನ್ನು ನೆರವೇರಿಸುತ್ತಿದ್ದರು. ಜೀವಜಗತ್ತಿನಲ್ಲಿ ಮನುಷ್ಯರ ಹಾಗೆ ಪರಸ್ಪರ ಸಹಕಾರ- ಸೌಹಾರ್ದದಿಂದ ಬದುಕುವ ಉದಾಹರಣೆಗಳೇ ನಾದರೂ ಇವೆಯಾ ಎಂದು ಹುಡುಕ ಹೊರಟರೆ ನಮ್ಮ ಮುಂದೆ ಇರುವೆಗಳು ಹಾಗೂ ಜೇನುನೊಣಗಳ ಉದಾಹರಣೆಗಳು ಕಾಣುತ್ತವೆ. ಸಾವಿರಾರು ಇರುವೆಗಳು ಮತ್ತು ಜೇನುನೊಣಗಳು ಪರಸ್ಪರ ಸಹಕಾರದಿಂದ ಆಹಾರವನ್ನು ಸಂಪಾದಿಸುತ್ತವೆ.

ಇರುವೆಗಳು ನೆಲದಲ್ಲಿ ಸುರಂಗಗಳನ್ನು ತೋಡಿ ತಮ್ಮದೇ ಆದ ‘ನಗರ’ವನ್ನು ಕಟ್ಟಿಕೊಂಡರೆ, ಜೇನುನೊಣ ಗಳು ಕಲಾತ್ಮಕವಾದ ಜೇನುಗೂಡನ್ನು ಕಟ್ಟಿಕೊಳ್ಳುತ್ತವೆ. ಗೂಡಿನಲ್ಲಿ ಮರಿಗಳ ಯೋಗಕ್ಷೇಮವನ್ನು ವಹಿಸುತ್ತವೆ. ಅಗತ್ಯ ಬಂದರೆ ಯುದ್ಧಕ್ಕೂ ಇವು ಸಿದ್ಧವಾಗುತ್ತವೆ. ಯುದ್ಧದಲ್ಲಿ ಹೋರಾ ಡುತ್ತಾ ತಮ್ಮ ಎದುರಾಳಿಗಳನ್ನು ಕೊಲ್ಲುತ್ತವೆ, ಇಲ್ಲವೇ ಅವುಗಳ ಆಕ್ರಮಣಕ್ಕೆ ಬಲಿಯಾಗುತ್ತವೆ. ಇರುವೆಗಳಲ್ಲಿ ನಾನಾ ನಮೂನೆಗಳಿವೆ. ಅವುಗಳಲ್ಲಿ ಕೊಯ್ಲು ಇರುವೆಯೂ (ಹಾರ್ವೆಸ್ಟರ್ ಆಂಟ್ಸ್) ಒಂದು. ಕೊಯ್ಲು ಇರುವೆಗಳಲ್ಲಿ ಐದು ವರ್ಗಗಳಿವೆ. ಆಹಾರಾನ್ವೇಷಕರು (ಫೋರೇಜರ್ಸ್), ಕಾರ್ಮಿಕ ಇರುವೆಗಳು (ಬಿಲ್ಡರ್ಸ್), ಸೈನಿಕರು (ವಾರಿಯರ್ಸ್), ದಾದಿಯರು ಹಾಗೂ ರಾಣಿ ಇರುವೆಗಳು. ಆಹಾರಾನ್ವೇಷಕರು ಇಡೀ ಸಮುದಾಯಕ್ಕೆ ಬೇಕಾದ ಆಹಾರವನ್ನು ಹುಡುಕಿಕೊಂಡು ಕಾಡಿನಲ್ಲಿ ಅಲೆಯುತ್ತವೆ.

ಅಲ್ಲಿ ಸಿಗಬಹುದಾದ ಸಸ್ಯ ಬೀಜಗಳನ್ನು, ಕಾಳುಗಳನ್ನು ಹೊತ್ತು ಗೂಡಿಗೆ ಹಿಂದಿರುಗುತ್ತವೆ. ಸಣ್ಣ ಪುಟ್ಟ ಕೀಟಗಳನ್ನೂ ಕೊಂದು ಗೂಡಿಗೆ ಹೊತ್ತು
ತರುತ್ತವೆ. ಕಾರ್ಮಿಕ ಇರುವೆಗಳ ಕೆಲಸ ಸುರಂಗವನ್ನು ಕೊರೆಯುವುದು, ಕಾಳುಗಳನ್ನು ಸಂಗ್ರಹಿಸುವುದಕ್ಕೆ ಕಣಜವನ್ನು ನಿರ್ಮಿಸುವುದು ಹಾಗೂ ರಾಣಿವಾಸಕ್ಕಾಗಿ ‘ಅಂತಃಪುರ’ವನ್ನು ಕಟ್ಟುವುದು ಇತ್ಯಾದಿ. ಸೈನಿಕ ಇರುವೆ ಗಳು, ಇರುವೆ ಸಮುದಾಯಗಳ ನಡುವೆ ನಡೆಯುವ ಯುದ್ಧಗಳಲ್ಲಿ ಕಾದಾಡುವುದು, ರಾಣಿ ಇರುವೆಯ ಕೆಲಸ ಮೊಟ್ಟೆಗಳನ್ನು ಇಡುತ್ತಾ ಹೋಗುವುದು.

ಹಾಗೆ ಇಟ್ಟ ಮೊಟ್ಟೆಗಳು ಮರಿಗಳಾದಾಗ ಅವುಗಳ ಯೋಗಕ್ಷೇಮವನ್ನು ದಾದಿ ಇರುವೆಗಳು ನೋಡಿಕೊಳ್ಳುತ್ತವೆ. ಹೀಗೆ ಆಯಾ ವರ್ಗದ ಇರುವೆಗಳು ತಮ್ಮ ತಮ್ಮ ಕೆಲಸವನ್ನು ಕ್ಲುಪ್ತವಾಗಿ ಮಾಡಿಕೊಂಡು ಹೋಗುವ ಕಾರಣ, ಇರುವೆಗಳ ಸಮಸ್ತ ಸಮುದಾಯವು ನೆಮ್ಮದಿಯಿಂದ ತಮ್ಮ ಬದುಕನ್ನು
ನಡೆಸಲು ಸಾಧ್ಯವಾಗುತ್ತದೆ. ಇದು ಇರುವೆಗಳಲ್ಲಿ ಕಂಡು ಬರುವ ಪರಸ್ಪರ ಸಹಕಾರದ ಸ್ಥೂಲ ಸ್ವರೂಪ. ಇದನ್ನು ಮತ್ತಷ್ಟು ವಿಶದವಾಗಿ ತಿಳಿಯಲು ಪ್ರಯತ್ನಿಸೋಣ. ಇರುವೆಗಳ ಸಾಮ್ರಾಜ್ಯದಲ್ಲಿ ಕ್ಷಿಪ್ರಕ್ರಾಂತಿ ಎನ್ನುವುದು ಇಲ್ಲವೇ ಇಲ್ಲ. ಹಾಗಾಗಿ ಇರುವೆಗಳ ರಾಣಿ ತನ್ನ ಹುಟ್ಟಿದ ದಿನದಿಂದ ಸಾಯುವ ಕೊನೆಯ ದಿನದವರೆಗೆ ರಾಣಿಯಾಗಿಯೇ ಉಳಿಯುತ್ತದೆ.

ಇತರ ಇರುವೆಗಳು ರಾಣಿಯ ಪಟ್ಟಕ್ಕೆ ಆಸೆಯನ್ನು ಪಡುವುದಿಲ್ಲ. ಹಾಗಾಗಿ ರಾಣಿಯ ಸ್ಥಾನವು ಅಬಾಧಿತ. ಸುರಂಗಗಳನ್ನು ನಿರ್ಮಿಸುವ ಇರುವೆಗಳು ತಮಗೆ ದೊರೆಯುತ್ತಿರುವ ಸಂಬಳ ಸಾಲದೆಂದು ಎಂದಿಗೂ ಮುಷ್ಕರ ಹೂಡುವುದಿಲ್ಲ. ಕಾರ್ಮಿಕ ಇರುವೆ ಗಳಲ್ಲಿ ಕಾರ್ಮಿಕ ಸಂಘಗಳು ಇರುವುದಿಲ್ಲ. ಹಾಗಾಗಿ ಚುನಾವಣೆಗಳ ಪ್ರಶ್ನೆಯೇ ಬರುವುದಿಲ್ಲ. ಸೈನಿಕ ಕಣಗಳು ಹಠಾತ್ ರಾಣಿಯ ವಿರುದ್ಧ ದಂಗೆಯೆದ್ದು, ರಾಣಿಯನ್ನು ಕೊಂದು, ತಾವೇ ಸಮುದಾಯದ ಮುಖ್ಯಸ್ಥನಾಗಲು ಎಂದೆಂದೂ ಪ್ರಯತ್ನಿಸುವುದಿಲ್ಲ. ಯಾವ ಸಮುದಾಯದ ಜತೆ ಯುದ್ಧ ಮಾಡಬೇಕು/ಯುದ್ಧವನ್ನು ಮಾಡಬಾ ರದು/ ಸಂಧಿಯನ್ನು ಮಾಡಿಕೊಳ್ಳಬೇಕು ಇತ್ಯಾದಿ ರಾಜಕೀಯ ವಿಚಾರಗಳ ಬಗ್ಗೆ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ. ದಾದಿ ಇರುವೆಗಳು ತಮಗೆ ‘ಸಾಮಾಜಿಕ ನ್ಯಾಯ’ ದೊರೆಯುತ್ತಿಲ್ಲ; ನಾವೇಕೆ ಮಕ್ಕಳ ಕಕ್ಕ-ಉಚ್ಚೆಯನ್ನು ಬಳಿಯುವ ಕನಿಷ್ಠ ಕೆಲಸವನ್ನು ಮಾಡಬೇಕು? ನಾವೂ ‘ಅಧ್ಯಾಪಕ’, ‘ಎಂಜಿನಿಯರ್’, ‘ಡಾಕ್ಟರ್’ ಆಗುತ್ತೇವೆ ಇತ್ಯಾದಿಯಾಗಿ ವಾದವನ್ನು ಮಂಡಿಸಿ ತಮ್ಮ ಕೆಲಸವನ್ನು ಬಿಟ್ಟು ಹೋಗುವುದಿಲ್ಲ.

ಆಹಾರಾನ್ವೇಷಕ ಇರುವೆಗಳು ‘ಚಳಿ, ಮಳೆ, ಗಾಳಿ, ಬಿಸಿಲು ಎನ್ನದೇ ನಾವು ನಮ್ಮ ಜೀವಮಾನ ಪೂರ್ತಿ ಅಲೆದು ಅಲೆದು ಆಹಾರವನ್ನು ಸಂಪಾದಿಸ ಬೇಕು, ಉಳಿದವರೆಲ್ಲ ಕುಳಿತು ತಿನ್ನಬೇಕು; ಇದು ಯಾವ ಸೀಮೆಯ ನ್ಯಾಯ? ಇದು ನಮ್ಮ ಶೋಷಣೆಯಲ್ಲವೇ?’ ಎಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಿಲ್ಲ. ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಕೆಲಸವನ್ನು ಹಾಗೆಯೇ ಇಂದಿಗೂ ಮಾಡಿಕೊಂಡು ಬರುತ್ತಿವೆ. ಈ ವರ್ಗಗಳ ಕೆಲಸ ಕಾರ್ಯಗಳಲ್ಲಿ ಕಿಂಚಿತ್ತೂ ಬದಲಾವಣೆಯಾಗಿಲ್ಲ. ಅಂದು ಹೇಗೆ ತಮ್ಮ ತಮ್ಮ ಕೆಲಸವನ್ನು ಕ್ಲುಪ್ತವಾಗಿ ಮಾಡುತ್ತಾ ಗುಂಪಿನ ಹಿತಕ್ಕಾಗಿ ಸಹಕರಿಸುತ್ತಿದ್ದವೋ, ಇಂದಿಗೂ ಹಾಗೆಯೇ ಸಹಕರಿಸುತ್ತಿವೆ.

ನಮ್ಮ ಪೂರ್ವಜರಲ್ಲಿ ಈ ರೀತಿಯ ಸಹಕಾರವು ಇರಲಿಲ್ಲ, ಇರಲು ಸಾಧ್ಯವೇ ಇರಲಿಲ್ಲ. ಅವರ ಪರಸ್ಪರ ಸಹಕಾರದ ಸ್ವರೂಪವು ಕಾಲ, ದೇಶ, ಸಮಯಕ್ಕೆ ತಕ್ಕ ಹಾಗೆ ಬದಲಾಗುತ್ತಿತ್ತು. ನಮ್ಮ ಪೂರ್ವಜರ ಸಾವಿರಾರು ವರ್ಷಗಳ ಹಿಂದಿನ ಕಥೆಯನ್ನು ಬಿಡೋಣ. ಇಂದಿಗೆ ಸುಮಾರು ೨೫೦-೩೦೦ ವರ್ಷಗಳ ಹಿಂದಿನ ನಮ್ಮ ಇತಿಹಾಸದತ್ತ ಒಮ್ಮೆ ಗಮನವನ್ನು ಹರಿಸೋಣ. ಆಗ ನಮ್ಮ ಭೂಮಿಯ ಎಲ್ಲ ಭಾಗಗಳಲ್ಲಿ ರಾಜ ಮಹಾರಾಜರೇ ಆಡಳಿತವನ್ನು ನಡೆಸುತ್ತಿದ್ದರು. ಈಗ ಚುನಾವಣೆಗಳ ಮೂಲಕ ಪ್ರತಿನಿಧಿಗಳ ಆಯ್ಕೆ ನಡೆದು, ಅವರಲ್ಲಿ ಅಧ್ಯಕ್ಷ/ಉಪಾಧ್ಯಕ್ಷ/ಪ್ರಧಾನ ಮಂತ್ರಿ/ಮಂತ್ರಿ/ ಶಾಸಕರು ಆಯ್ಕೆಯಾಗಿ ಅವರು ಪಾರ್ಲಿಮೆಂಟಿನಲ್ಲಿ ಸೇರಿ ದೇಶದ ಆಡಳಿತವನ್ನು ನಿರ್ವಹಿಸುತ್ತಾರೆ.

ಸೈನಿಕರು ಸಾಮಾನ್ಯವಾಗಿ ಖಡ್ಗ, ಬಿಲ್ಲು-ಬಾಣ, ಭರ್ಜಿಗಳ ನೆರ ವಿನಿಂದ ಯುದ್ಧವನ್ನು ಮಾಡುತ್ತಿದ್ದರು. ಈಗ ಎಕೆ-೪೭, ಟ್ಯಾಂಕ್, ವಿಮಾನ, ಕ್ಷಿಪಣಿ, ಉಪಗ್ರಹ ಆಧಾರಿತ ಯುದ್ಧ ಗಳು ನಡೆಯುತ್ತಿವೆ. ರೈತರು ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದರು. ಇಂದು ರೈತರ ಮಕ್ಕಳು ರೈತಾಪಿ ಕೆಲಸವನ್ನು
ಬಿಟ್ಟು ಎಲ್ಲ ರೀತಿಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು. ಅಂದು ನಡೆದುಕೊಂಡು ಇಲ್ಲವೇ ಎತ್ತಿನ ಗಾಡಿಯಲ್ಲಿ ಅಥವಾ ಕುದುರೆಯ ಮೇಲೆ ಪ್ರಯಾಣ ಮಾಡಬೇಕಾಗಿತ್ತು. ಇಂದು ಇಡೀ ಭೂಮಂಡಲದ ಒಂದು ತುದಿಯಿಂದ ಮತ್ತೊಂದು ತುದಿಗೆ ನಾಲ್ಕು ಗಂಟೆಗಳಲ್ಲಿ ಪ್ರಯಣಿಸಬ ಹುದಾಗಿದೆ. ಅನ್ಯಗ್ರಹಗಳಲ್ಲಿ ವಸಾಹತನ್ನು ನಿರ್ಮಿಸುವ ಕನಸನ್ನು ಕಾಣುತ್ತಿದ್ದೇವೆ.

ನಾವು ಇರುವೆಗಳಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಪರಸ್ಪರ ಸಹಕರಿಸುತ್ತಾ ಕೆಲಸವನ್ನು ಮಾಡಬಲ್ಲೆವು, ಇದು ನಿಜ. ಆದರೆ ನಾವು ಇರುವೆಗಳ ಹಾಗೆ ಕೇವಲ ೪-೫ ಕೆಲಸಗಳಿಗೆ ಮಾತ್ರ ನಮ್ಮನ್ನು ಸೀಮಿತಗೊಳಿಸಿಕೊಂಡಿದ್ದರೆ ಬಹುಶಃ ನಮ್ಮ ಸಾಧನೆಯು ಇರುವೆಗಳ ಸಾಧನೆಗಿಂತ ಭಿನ್ನವಾಗಿರು ತ್ತಿರಲಿಲ್ಲ. ಆದರೆ ನಮ್ಮ ಸಾಧನೆಯು ಕಲ್ಪನಾ ತೀತವಾದದ್ದು! ಈ ಸಾಧನೆಯು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಗೆ ಎರಡು ವಿವರಣೆಗಳು ಈಗಾಗಲೇ ನಮಗೆ ದೊರೆತಿವೆ. ಮೊದಲನೆಯದು, ದೊಡ್ಡ ಪ್ರಮಾಣದಲ್ಲಿ ಸಹಕರಿಸಿದ್ದು. ಎರಡನೆಯದು ಒಬ್ಬರು ಒಂದೇ ರೀತಿಯ ಕೆಲಸವನ್ನು ಮಾಡಬೇಕು ಎಂಬ ‘ಕಟ್ಟುಪಾಡಿನಿಂದ’ ಮುಕ್ತವಾಗಿ ತಮಗೆ ಇಷ್ಟವಾದ ಕೆಲಸಗಳಲ್ಲಿ ತೊಡಗಿದ್ದು.

ಇವೆರಡೂ ನಿಜವೇ! ಆದರೆ ಇವಷ್ಟೇ ನಮ್ಮ ಸರ್ವತೋಮುಖ ಪ್ರಗತಿಗೆ ಕಾರಣವಾಯಿತೇ? ಎಂದರೆ ಬಹುಶಃ ‘ಇಲ್ಲ’ ಎನ್ನುವ ಉತ್ತರವನ್ನು ನೀಡ ಬೇಕಾಗುತ್ತದೆ. ನಮ್ಮ ರಾಷ್ಟ್ರಪತಿಗಳಾಗಿದ್ದ ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಯುವಜನತೆಗೆ ಕನಸನ್ನು ಕಾಣಲು ಕರೆಯಿತ್ತಿದ್ದರು. ಅವರ ಕರೆಯ ಬಗೆಗಿನ ಕೆಲವು ಉಕ್ತಿಗಳನ್ನು ಗಮನಿಸೋಣ. ‘ನಿಮ್ಮ ಕನಸುಗಳಿಗೆ ನಿಮ್ಮ ಜೀವನವನ್ನು ಮಾತ್ರವಲ್ಲ, ನಿಮ್ಮ ಸುತ್ತಮುತ್ತಲಿನ ಪ್ರಪಂಚವನ್ನೇ ಬದಲಾ ಯಿಸುವ ಸಾಮರ್ಥ್ಯವಿದೆ’ (Dreams have the potential to change not only your life but also the world around you). ‘ಕನಸುಗಳೆಂದರೆ ರೆಕ್ಕೆಗಳು. ಅದು ನಿಮ್ಮನ್ನು ಉತ್ತಮ ಭವಿಷ್ಯದತ್ತ ಹಾರಲು ನೆರವಾಗುತ್ತವೆ’ (Dreams are the wings that will help you fly towards a better future).

‘ನಿಮ್ಮ ಕನಸುಗಳು ನಿಮ್ಮ ಯಶಸ್ಸಿನ ನೀಲಿನಕ್ಷೆಗಳಾಗಿವೆ. (Your dreams are the blueprints of your success). ‘ಕನಸನ್ನು ಕಾಣಿ, ಉನ್ನತವಾಗಿ ಯೋಚಿಸಿ, ಅದಕ್ಕಾಗಿ ಶ್ರಮಿಸಿ, ನೀವು ಶ್ರೇಷ್ಠತೆಯನ್ನು ಸಾಧಿಸುವಿರಿ’ (Dream big, think big, believe big, and the results will be big). ‘ಕನಸುಗಳು ಶ್ರೇಷ್ಠತೆಯನ್ನು ಸಾಧಿಸಲು ಅಗತ್ಯವಾದ ಪ್ರೇರೇಪಣೆಯನ್ನು ನೀಡುವ ಶಕ್ತಿಯಾಗಿವೆ’ (Dreams are the fuels those motivate and empower you to
achieve greatness). ಕಲಾಮ್ ಅವರ ಉಕ್ತಿಗಳ ಆಶಯವೇ ಸೆಪಿಯನ್ ಪೂರ್ವಜರಿಗೆ ಬುದ್ಧಿವಂತ ಮಾನವ ನಾಗಲು ಅಗತ್ಯವಾದ ‘ಸೂಪರ್ ಪವರ್’ ನೀಡಿತು ಎಂದರೆ ಆಶ್ಚರ್ಯವಾಗುತ್ತದೆ.

ಇಡೀ ಜೀವಜಗತ್ತಿನಲ್ಲಿ ಯಾವುದೇ ಜೀವಿಗೆ ಇಲ್ಲದಿರುವಂಥ ಸಾಮರ್ಥ್ಯವು ಮನುಷ್ಯನಿಗೆ ಇದೆ. ಅದುವೇ ಕಲ್ಪಿಸಿಕೊಳ್ಳುವ ಸಾಮರ್ಥ್ಯ. ಹಗಲುಗನಸನ್ನು ಕಾಣುವಂಥ ಸಾಮರ್ಥ್ಯ. ತಮ್ಮ ಕಣ್ಣೆದುರಿಗೆ ಇಲ್ಲದ ವಸ್ತುಗಳ ಬಗ್ಗೆ, ನಡೆಯಲಾಗದ ವಿಚಾರಗಳ ಬಗ್ಗೆ, ಹೀಗೆಯೇ ಆದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಆಶಿಸುವ ಬಗ್ಗೆ, ಅವೆಲ್ಲವನ್ನು ಅರ್ಥ ವತ್ತಾಗಿ ಪೋಣಿಸಿ, ಅದನ್ನು ಅತಿರಂಜಿತವಾಗಿ ಹೇಳುವ ಸಾಮರ್ಥ್ಯವು ಮನುಷ್ಯರಿಗೆ ಮಾತ್ರವಿದೆ. ಹಾಗೆ ಹೇಳಿದ ಕಥೆಗಳನ್ನು ಇತರ ಮನುಷ್ಯರು ಬಹಳ ಆಸ್ಥೆಯಿಂದ ಕೇಳುವುದರ ಜತೆಯಲ್ಲಿ ಅದನ್ನು ಅಕ್ಷರಶಃ ನಂಬುತ್ತಾರೆ. ಹಾಗೆ ನಂಬಿದುದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಿದ್ಧವಾಗುತ್ತಾರೆ. ಇಂಥ ಸಂವಹನ ಸಾಮರ್ಥ್ಯವು ಇರುವೆ, ಜೇನುನೊಣ, ಚಿಂಪಾಂಜಿ, ಗೊರಿಲ್ಲಗಳಿಗೆ ಇಲ್ಲ. ಚಿಂಪಾಂಜಿ ಗಳಲ್ಲಿ ಸಂವಹನವೇ ಇಲ್ಲವೇ ಎಂದರೆ, ಖಂಡಿತಾ ಇದೆ ಎಂದು ಖಚಿತವಾಗಿ ಹೇಳಬೇಕಾಗುತ್ತದೆ.

ಸಿಂಹವು ಬರುವು ದನ್ನು ನೋಡಿದ ಮೊದಲ ಚಿಂಪಾಂಜಿಯು ಜೋರಾಗಿ ಚೀರಿ ಚೀರಿ ಇಡೀ ಗುಂಪನ್ನು ಎಚ್ಚರಿಸುತ್ತದೆ. ಆಗ ಎಲ್ಲ ಚಿಂಪಾಂಜಿಗಳು ಸುರಕ್ಷಿತ ಸ್ಥಳವನ್ನು ಸೇರಿಕೊಳ್ಳುತ್ತವೆ. ‘ನನ್ನ ಮುಂದೆ ಒಂದು ಚಿಂಪಾಂಜಿ ಕಂಡುಬಂದಿತು. ಅದು ಭೂಮಿಯಿಂದ ಆಕಾಶದವರೆಗೆ ಏಕವಾಗಿ ಬೆಳೆಯಿತು’ ಎನ್ನುವ ಕಲ್ಪನೆಯು ಚಿಂಪಾಂಜಿಗಳಿಗಾಗಲಿ ನಮ್ಮ ನಿಯಾಂದಾರ್ಥಾಲ್ ಮಾನವರಿಗಾಗಲಿ ಇದ್ದಿರಲಿಲ್ಲ. ಹಾಗಿದ್ದ ಮೇಲೆ ಸೆಪಿಯನ್ ಪೂರ್ವಜರಿಗೆ ಮಾತ್ರ ಈ ಸಾಮರ್ಥ್ಯವು ಹೇಗೆ ಬಂದಿತು ಎಂಬ ಪ್ರಶ್ನೆಯನ್ನು ಕೇಳಿದರೆ, ಅದಕ್ಕೆ ಖಚಿತವಾದ ಉತ್ತರವು ಸದ್ಯಕ್ಕೆ ನಮಗೆ ಗೊತ್ತಿಲ್ಲ ಎಂದೇ ಹೇಳಬೇಕಾಗುತ್ತದೆ. ನಮ್ಮ ಡಿಎನ್‌ಎಗಳಲ್ಲಿ ಎಂಥ ಬದಲಾವಣೆಗಳು ಸಂಭವಿಸಿದವು ಎಂಬುದು ನಮಗೆ ತಿಳಿದಿಲ್ಲ. ನಮ್ಮ ಪೂರ್ವಜರ ಮಿದುಳಿನ ಎರಡು ಭಾಗಗಳಲ್ಲಿ ಹೊಚ್ಚ ಹೊಸ ಸಂಪರ್ಕವು ಹಠಾತ್ತನೆ ರೂಪುಗೊಂಡು ಈ ಸಾಮರ್ಥ್ಯವು ಬಂದಿರಬೇಕು.

ಅನೇಕ ಸಲ ಅನಿರೀಕ್ಷಿತಗಳು ಅತ್ಯುತ್ತಮ ಫಲಿತಾಂಶವನ್ನೇ ನೀಡಬಹುದು. ರಾಂಟ್ಜನ್ ಎಕ್ಸ್-ರೇ ಕಂಡುಹಿಡಿದದ್ದು, ಫ್ಲೆಮಿಂಗ್ ಪೆನಿಸಿಲಿನ್
ಕಂಡುಹಿಡಿದದ್ದು, ಗುಡ್ ಇಯರ್ ರಬ್ಬರ್ ಕಂಡುಹಿಡಿದದ್ದು ಆಕಸ್ಮಿಕವಾಗಿ ಅಲ್ಲವೆ! ಅಂಥದ್ದೇನೋ ನಮ್ಮ ವಂಶವಾಹಿಗಳಲ್ಲಿ ಸಂಭವಿಸಿರಬೇಕು. ಬಹುಶಃ ಇಂಥ ಅವಘಡವು ನಿಯಾಂದಾರ್ಥಾಲ್ ಮಾನವರಲ್ಲಿ ನಡೆಯಲಿಲ್ಲ. ಹಾಗಾಗಿ ಅವರು ನಮ್ಮ ಪೂರ್ವಜರೊಡನೆ ಸ್ಪರ್ಧಿಸಲಾರದೇ
ಹೋದರು. ಕಲ್ಪಿಸಿಕೊಳ್ಳುವ, ಹಗಲುಗನಸನ್ನು ಕಾಣುವ ಸಾಮರ್ಥ್ಯವು ನಿಜಕ್ಕೂ ನಮಗೆ ಹೇಗೆ ಬಂದಿತು ಎನ್ನುವುದು ಗೊತ್ತಿಲ್ಲ. ಈ ಬಗ್ಗೆ ಮುಂದೆ ಎಂದಾದರೊಂದು ದಿನ ವಿಜ್ಞಾನಿಗಳು ಪತ್ತೆ ಹಚ್ಚಿಯಾರು!