Saturday, 14th December 2024

ಜೋಗುಳ- ಸುಪ್ರಭಾತಗಳ ನಡುವೆ ನಿದಿರೆಯೆಂಬ ಕನಸಿನ ಲೋಕ !

ಯಶೋ ಬೆಳಗು

yashomathy@gmail.com

ಇತ್ತೀಚೆಗೆ ಕೆಲಸದ ಒತ್ತಡ ತುಸು ಹೆಚ್ಚೇ ಆಗಿರುವ ಕಾರಣ, ತಲೆಯಲ್ಲಿ ನಾನಾ ಟ್ರ್ಯಾಕುಗಳಲ್ಲಿ ಆಲೋಚನೆಗಳ ಮಿಂಚಿನ ಓಟ ಸಾಗಿರುತ್ತದೆ. ಎದುರಿಗೆ ಕುಳಿತವರ ಮಾತುಗಳು ಕೇಳಿಸಿಕೊಳ್ಳುತ್ತ ಅದಕ್ಕೆ ಪ್ರತಿಕ್ರಿಯಿಸುವ ನಡುವೆ ಮಿಂಚಂತೆ ಅದು ನನ್ನ ಆಲೋಚನೆಯ ಯಾವುದೋ ಧಾಟಿಗೆ ಮೌನದ
ಉತ್ತರ ನೀಡುತ್ತಿರುವಾಗ ತನ್ನ ಅರಿವಿಲ್ಲದಂತೆ ದನಿಯೂ ಜೊತೆಗೂಡಿ ಮಾತಾಗಿ ಹೊರಬಂದು, ಎದುರಿಗಿರುವವರನ್ನು ಗೊಂದಲದ ಗೂಡಿನಲ್ಲಿ ನೂಕಿ ಬಿಡುತ್ತದೆ. ಅವರು ಏನೂ ಅರ್ಥವಾಗದೇ, ಏನು ಹೇಳಲೂ ತೋಚದೆ ನೆಟ್ಟಗಣ್ಣು ಮಿಟುಕಿಸದೆ, ಕಂಗಾಲಾ ಗಿದ್ದನ್ನೂ ಗಮನಿಸದೆ ತನ್ನ ಪಾಡಿಗೆ ತಾನು ಮುಂದಕ್ಕೆ ಓಡಿಬಿಟ್ಟಿರುತ್ತದೆ.

ಇದನ್ನೆಲ್ಲ ಗಮನಿಸುತ್ತ ಬಹುಶಃ ನೀನು restless ಆಗಿದ್ದೀಯ ಅನಿಸುತ್ತೆ. ಸ್ವಲ್ಪ ಹೊತ್ತು ನಿದ್ರೆ ಮಾಡು ಆಮೇಲೆ ಮಾತಾಡೋಣವಂತೆ ಎಂದು ಹೇಳಿ, ಅವರು ಎದ್ದು ಹೋದ ನಂತರ ‘ಏನಾಯಿತು ಇವರಿಗೆ?’ ಅಂದು ಕೊಳ್ಳುತ್ತಲೇ ನನ್ನ ಕೆಲಸ ಮುಂದುವರೆಸುತ್ತೇನೆ. ಬಳಲಿಕೆಯಿಂದ ಕಣ್ಣು ತೂಗಿ ಬಂದಾಗ ಒಂದರೆ ಘಳಿಗೆ ಪುಟ್ಟ ನಿದ್ರೆ (nap)ಮಾಡಿ, ಮತ್ತೆ ಕೆಲಸ ಮುಂದುವರೆಸೋಣ ಅಂದುಕೊಳ್ಳುತ್ತ ದಿಂಬಿನ ಮಡಿಲಲ್ಲಿ ತಲೆ ಹುದುಗಿಸಿದರೆ ಅದ್ಯಾವ ಮಾಯದ ಬರುವ ನಿದಿರಾ ದೇವಿ ‘ಆ ಚಲ್ ಕೆ ತುಜೆ ಮೆ ಲೇಕೆ ಚಲೂ ಎಕ್ ಐಸೆ ಗಗನ್ ಕೆ ತಲೆ…. ಜಹಾ ಗಮ್ ಭಿ ನ ಹೋ, ಆಸೂಭಿ ನ ಹೋ, ಬಸ್ ಪ್ಯಾರ್ ಹಿ ಪ್ಯಾರ್ ರಹೇ…..’ ಅನ್ನುತ್ತ ಮಗುವಿನಂತೆ ನನ್ನನ್ನು ತನ್ನ ಕನಸಿನ ಲೋಕಕ್ಕೆ ಹೊತ್ತೊಯ್ದು ಬಿಡುತ್ತಾಳೆ.

ನಾನೂ ಯಾವುದೇ ಪ್ರತಿರೋಧ ಒಡ್ಡದೆ ನನ್ನನ್ನು ನಾನು ಅವಳಿಗೆ ಸಮರ್ಪಿಸಿಕೊಂಡು ಬಿಡುತ್ತೇನೆ. ಸುಡು ಸುಡುವ ಬಿಸಿಲಿನ ತಾಪವಿಲ್ಲದೆ, ಬಸ್ಸು-ಟ್ರೇನಿನ ಜನಜಂಗುಳಿಯ ಗಿಜಿಗುಡುವಿಕೆಯಿಲ್ಲದೆ, ಗ್ಯಾಸು- ಪೆಟ್ರೋಲು ಗಳ ಜಂಜಾಟವಿಲ್ಲದೆ, ಹಸಿವು-ನೀರಡಿಕೆಗಳ ದಾಹವಿಲ್ಲದೆ, ಕಳುವು-ಸುಲಿಗೆಗಳ ಆತಂಕವಿಲ್ಲದೆ, ಮೇಲು-ಕೀಳುಗಳೆಂಬ ಬೇಧಗಳಿಲ್ಲದೆ ಅಹಂ-ಮತ್ಸರಗಳೆಂಬ ಹೊಯ್ದಾಟಗಳಿಲ್ಲದ ಸುಂದರ ಸ್ವಪ್ನ ಲೋಕದಲ್ಲಿ ವಿಹರಿಸಿ ಬಂದರೆ ಮನಸಿಗೆಂಥದೋ ಉಸ.

ಆದರೆ ಬೇಕೆಂದಾಗೆಲ್ಲ ನಿದ್ರಿಸಲು ಸಾಧ್ಯವೇ? ಆರೋಗ್ಯವಂತ ದೇಹಕ್ಕೆ ಎಷ್ಟು ಪ್ರಮಾಣದ ನಿದ್ರೆಯ ಅವಶ್ಯಕತೆ ಇರುತ್ತದೆ? ಬೆಳಗಿನ ನಿದ್ರೆ ಒಳ್ಳೆಯದೋ?
ರಾತ್ರಿಯ ನಿದ್ರೆ ಒಳ್ಳೆಯದೋ? ಮಕ್ಕಳಿಗೆ ಯಾಕೆ ಅಷ್ಟೊಂದು ನಿದ್ರೆ ಬರುತ್ತದೆ? ವಯಸ್ಕರಿಗೆ ಯಾಕೆ ನಿದ್ರೆ ಅಷ್ಟೊಂದು ಸತಾಯಿಸುತ್ತದೆ? ಸಹಜವಾದ ನಿದ್ರೆಗೂ ಬಲವಂತದ ನಿದ್ರೆಗೂ ಇರುವ ವ್ಯತ್ಯಾಸವೇನು? ನಿದ್ರಾ ಹೀನತೆ, ನಿದ್ರಾ ನಡಿಗೆಗಳಿಗೆ ಕಾರಣಗಳೇನು? ಇನ್ನು ಕೆಲವರಿಗೆ ಕೂತಕೂತ ನಿದ್ರೆ…. ಹಾಗಂತ ಅವರದ್ದು ಗಾಢ ನಿದ್ರೆಯೇನಲ್ಲ. ನಮ್ಮ ಹಾಯ್ ಬೆಂಗಳೂರು ಕಚೇರಿಯಲ್ಲಿ ನಾಗೇಶ್ ಅನ್ನುವ ಕಾರ್ ಡ್ರೈವರೊಬ್ಬರಿಗೆ ಇಂತಹ ನಿದ್ರೆಯ ತೊಂದರೆಯಿತ್ತು. ಬೇರೆ ಯಾವುದೇ ಕೆಲಸವಾದರೂ ಅಷ್ಟು ಸಮಸ್ಯೆಯಾಗುತ್ತಿರಲಿಲ್ಲ.

ಆದರೆ ಹೇಳೀಕೇಳೀ ಅವರದ್ದು ಚಾಲಕ ವೃತ್ತಿ. ರಸ್ತೆಯ ನಡುವೆ ಸಿಗ್ನಲುಗಳು ಬಿದ್ದರೆ ಅಷ್ಟರ ಗೊರ್ ಗೊರ್ ಎಂದು ಗೊರಕೆ ಹೊಡೆಯುವಷ್ಟು ನಿದ್ರೆ ಮಾಡಿದರೂ ಗ್ರೀನ್ ಸಿಗ್ನಲ್ ಬಿದ್ದ ಕೂಡಲೇ ಎಚ್ಚರವಾಗಿ ಸುರಕ್ಷಿತವಾಗಿ ಕಾರು ಚಲಾಯಿಸುತ್ತಿದ್ದುದ್ದು ಜಗತ್ತಿನ ಎಂಟನೇ ಆಶ್ಚರ್ಯದಂತಿತ್ತು ನಮಗೆಲ್ಲ. ಅದೇ ರೀತಿ ಸಭೆ-ಸಮಾರಂಭಗಳಲ್ಲಿ ಹೀಗೆ ನಿದ್ರೆಗೆ ಜಾರುವ ನಾಯಕರನ್ನೂ ನಾವು ನೋಡಿದ್ದೇವೆ. ಇನ್ನು ಕಥೆಗಾರರೂ, ಪತ್ರಕರ್ತರೂ, ಸಂಪಾದಕರೂ ಆಗಿದ್ದ ರವಿ ಬೆಳಗೆರೆಯವರು, ಹಗಲು-ರಾತ್ರಿಗಳೆಂಬ ಬೇಧಗಳಿಲ್ಲದೆ ನಿದ್ರೆ ಬಂದಾಗಲೇ ರಾತ್ರಿ ಎಚ್ಚರವಾದಾಗಲೇ ಹಗಲು ಎನ್ನುತ್ತ ತಮ್ಮದೇ ಹೊಸ ಲೋಕ ಸೃಷ್ಟಿಸಿಕೊಂಡಿದ್ದರೂ ಕೆಲಸದ ಒತ್ತಡದಲ್ಲಿ ಒಮ್ಮೊಮ್ಮೆ ಸಂಪೂರ್ಣ ನಿದ್ರೆಯಾಗದೆ ನಿದ್ರಾ ನಡಿಗೆಯೆಂಬ ಖಾಯಿಲೆ ಗಂಟು ಬಿದ್ದಿತ್ತು.

ಅವರು ಎಚ್ಚರದಲ್ಲಿದ್ದಾರೋ? ನಿದ್ರೆಯಲ್ಲಿದ್ದಾರೋ ಅನ್ನುವುದು ನನಗಂತೂ ಗೊತ್ತೇ ಆಗುತ್ತಿರಲಿಲ್ಲ. ಕ್ರಮೇಣ ಜೊತೆಗಿರುತ್ತ ಇರುತ್ತ ಅದರ ವ್ಯತ್ಯಾಸದ ಅರಿವಾಯಿತು. ಅದು ಅವರಿಗೆ ಚಿಕ್ಕಂದಿನಿಂದಲೂ ಇದ್ದ ಅಭ್ಯಾಸವೆಂಬುದೂ ಆನಂತರವೇ ತಿಳಿದಿದ್ದು. ಕಾಲೇಜಿನಲ್ಲಿ ಮೇಷ್ಟ್ರಾಗಿದ್ದಾಗ ಒಮ್ಮೆ ಮಧ್ಯ ರಾತ್ರಿ ಎದ್ದು ಕುಳಿತು ಜಬರ್ದಸ್ತಾಗಿ ರಷಿಯನ್ ಕ್ರಾಂತಿಯ ಬಗ್ಗೆ ಪಾಠ ಮಾಡಿಬಿಡುತ್ತಿದ್ದರಂತೆ.

ಮಧ್ಯೆ ಮಧ್ಯೆ ‘understand?’ ಅನ್ನುವ ಹೂಂ ಕಾರದ ಪ್ರಶ್ನೆ ಬೇರೆ. ಮತ್ತೊಮ್ಮೆ ಹೀಗೇ ರಾತ್ರಿ ಎದ್ದು ನಡೆಯುತ್ತಾ ಹೋದವರು ಇದ್ದಿಲಿನ ಚೀಲದೊಳಕ್ಕೆ ತಲೆ ತೂರಿಸಲು ಯತ್ನಿಸಿ ಕರ್ರ‍ಗಾಗಿ ಹೋಗಿದ್ದರಂತೆ. ಮತ್ತೊಮ್ಮೆ ಎದ್ದು ಹಾಸಿಗೆಯೆಲ್ಲ ಕಿತ್ತಾಕುತ್ತಾ ಏನನ್ನೋ ಹುಡುಕುತ್ತಿದ್ದಾಗ, ಮನೆಯವರಿಗೆ ಅರ್ಥವಾಗಿ ಏನು ಬೇಕು? ಎಂದು ಕೇಳಿದಾಗ, ‘ಚೇಳು!’ ಎಂದು ದೊಡ್ಡದನಿಯಲ್ಲಿ ಘೋಷಿಸಿ ಮತ್ತೆ ಮಲಗಿ ನಿದ್ರೆ ಹೋಗಿದ್ದು, ಬಳ್ಳಾರಿಯ ಮನೆಯಮ್ಮೆ ಹೊರಗೆಲ್ಲ ಓಡಾಡಿ, ಕಾಲ ತುಂಬ ಕೆಸರು ಮೆತ್ತಿಕೊಂಡು ಬಂದು ಮಲಗಿದ್ದು, ಆಫೀಸಿನಮ್ಮೆ ಎದ್ದು ಸ್ಟೂಲಿನ ಮೇಲೆ ಇಸ್ತ್ರಿ ಪಟ್ಟಿಗೆ ಇಟ್ಟಿದೀರಿ, ಸ್ಟೂಲು ಸುಡುತ್ತಿದೆ ಎಂದು ಎಚ್ಚರಿಸಿ ಏನು ಹೇಳುತ್ತಿದ್ದಾರೆ ಅಂತ ಅರ್ಥಮಾಡಿ ಕೊಳ್ಳುವಷ್ಟರೊಳಗೆ ನಿದ್ರೆ ಮಾಡಿ ಬಿಟ್ಟಿರುತ್ತಿದ್ದುದು, ಊರಿಗೆ ಹೋಗಿದ್ದಾಗ ಹೌಸಿನಲ್ಲಿ ಎದ್ದು ಎಲ್ಲ ದೀಪಗಳನ್ನೂ ಹಾಕಿ ಜೊತೆಗಿದ್ದ ವಿಠ್ಠಲಮೂರ್ತಿಯನ್ನು ಕಾಡಿದ್ದು, ದಿಲ್ಲಿಯ ಹೊಟೇಲೊಂದರ ಲಿಫ್ಟಿನಲ್ಲಿ ನಾಲ್ಕಾರು ಬಾರಿ -ರಿಂದ -ರಿಗೆ ಓಡಾಡಿದ್ದರ ಬಗ್ಗೆ ಅವರೇ ಹೇಳುತ್ತಿದ್ದ ಕಥೆಗಳು ಬಹಳ ವರ್ಣರಂಜಿತವಾಗಿರುತ್ತಿದ್ದವು. ಅದನ್ನು ತಮ್ಮ ಖಾಸ್ ಬಾತ್‌ಗಳಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ ಕೂಡ.

ನಿದ್ರಾ ನಡಿಗೆಯಲ್ಲಿರುವವರ ಕಣ್ಣುಗಳು ನಿಚ್ಚಳವಾಗಿ ತೆರೆದುಕೊಂಡಿರುತ್ತವೆ. ನೋಡಿದವರಿಗೆ ನಿದ್ರೆಯಿಂದ ಸಂಪೂರ್ಣ ಎಚ್ಚರವಾಗಿದ್ದಾರೇನೋ ಎಂಬಂತಿರುತ್ತದೆ. ಆದರೆ ಅವರಿಗೆ ಅದ್ಯಾವುದೂ ನೆನಪಿರುವುದಿಲ್ಲ. ಇನ್ನು ನಿದ್ರಾ ನಡಿಗೆಯಲ್ಲಿರುವವರನ್ನು ಯಾವ ಕಾರಣಕ್ಕೂ ಮುಟ್ಟಿ, ಅಲುಗಾಡಿಸಿ ಎಚ್ಚರಿಸಬಾರದು ಎಂದು ಹೇಳುತ್ತಾರೆ. ಆದರೆ ಅದರಿಂದ ಅಂತಹ ತೊಂದರೆಯೇನೂ ಆಗುವುದಿಲ್ಲ. ಸ್ವಲ್ಪಕಾಲ ಗಲಿಬಿಲಿಗೊಳಗಾಗಿ ಆನಂತರ ಸಹಜ ಸ್ಥಿತಿಗೆ ಬರುತ್ತಾರೆ. ಇಂಥದೇ ಕಥೆಗಳು ನಿದ್ರೆಯಲ್ಲಿ ಮಾತಾಡುವವರದ್ದೂ ಕೂಡ. ಒಮ್ಮೊಮ್ಮೆ ನಮ್ಮ ಹಿಮವಂತನೂ ನಿದ್ರೆಯಲ್ಲಿ ತನ್ನ ಗೆಳೆಯರೊಂದಿಗೆ ಆಡುವಂತೆ ಜೋರು ದನಿಯಲ್ಲಿ ಮಾತಾಡುತ್ತಿರುತ್ತಾನೆ.

ಅವನೂ ಒಮ್ಮೊಮ್ಮೆ ತನ್ನ ಅಪ್ಪನಂತೆಯೇ ದೊಡ್ಡ ಕಣ್ಣು ಬಿಟ್ಟುಕೊಂಡು ಏನೇನೋ ಮಾತಾಡಿ ಒಂದು ನಗು ಬಿಸಾಕಿ ನಿದ್ರೆಗೆ ಜಾರಿ ಬಿಡುತ್ತಾನೆ.
ಬೆಳಗ್ಗೆ ಎದ್ದ ಕೂಡಲೇ ನೀನು ಹೀಗೆಲ್ಲ ಮಾತಾಡುತ್ತಿದ್ದೆ ಎಂದು ಗೇಲಿ ಮಾಡಿದರೆ ಹೇ…. ಹೋಗಮ್ಮಾ ಎಂದು ನಾಚಿಕೊಳ್ಳುತ್ತಾ ಎದ್ದು ಹೋಗುತ್ತಾನೆ.
ಇದೆಲ್ಲ ನಿದ್ರೆಯ ನಡುವೆ ಬರುವ ಅಡಚಣೆಗಳಾದರೆ ಇನ್ನು ಹತ್ತಿರವೇ ಸುಳಿಯದ ನಿದ್ರೆಯ ಕತೆಗಳೂ ನೂರಾರು. ನಿದ್ರೆಯನ್ನು ಗೆದ್ದವನು ಅರ್ಜುನ ನಂತೆ!

ಅದಕ್ಕೇ ಅವನಿಗೆ ಗುಡಾಕೇಶ ಎಂಬ ನಾಮಾಂಕಿತ. ನಿದ್ರೆ ಇಲ್ಲದೆಯೂ ಯಾವುದೇ ತೊಂದರೆಯಿಲ್ಲದಂತೆ ಸುಖವಾಗಿದ್ದವನು. ಆದರೆ ನಮ್ಮಂಥ ಸಾಮಾನ್ಯ ಜನರು ಅರ್ಜುನನಾಗಲು ಸಾಧ್ಯವೇ? ನಿದ್ರೆಗೆ ‘ವೈಷ್ಣವಿಪಾಪ್ಮಾ’ ಎಂಬ ಹೆಸರೂ ಇದೆಯಂತೆ. ಸರ್ವಪ್ರಾಣಿಗಳನ್ನು ವ್ಯಾಪಕವಾಗಿ ಆವರಿಸಿ ಕೊಳ್ಳುವುದರಿಂದ ಇದಕ್ಕೆ ‘ವೈಷ್ಣವೀ’ ಎಂದೂ, ನಮ್ಮ ನಿತ್ಯಕರ್ಮಗಳ ಸಾಧನೆಗೆ ತಡೆಯೊಡ್ಡುವುದರಿಂದ ‘ಪಾಪ್ಮಾ’ ಎಂದೂ ಕರೆಯುತ್ತಾರಂತೆ. ಅತಿಯಾಗಿ ನಿದ್ರಿಸಿದರೆ ಕುಂಭಕರ್ಣನ ಹೋಲಿಕೆ.

ಸೂರ್ಯೋದಯದ ನಂತರವೂ ನಿದ್ರಿಸಿದರೆ ಸೋಮಾರಿಗಳೆಂಬ ಪಟ್ಟ. ರಾತ್ರಿಯಿಡೀ ಎಚ್ಚರವಿದ್ದು ಕೆಲಸ ಮಾಡಿದರೆ, ಅದೇನು ಯಾವಾಗ್ಲೂ ಗೂಬೆ ಥರಾ ಎದ್ದಿರ್ತೀಯ ಅನ್ನುವ ಕೊಂಕು. ಆರೋಗ್ಯವಂತ ದೇಹಕ್ಕೆ ಆರರಿಂದ ಏಳು ಗಂಟೆಗಳ ಕಾಲ ನಿದ್ರೆ ಅತಿ ಅವಶ್ಯಕ. ನಿದ್ರೆ ಮಿತವಾಗಿದ್ದರೆ ಶರೀರ-ಮನಸುಗಳು ಉಲ್ಲಾಸದಿಂದ ಚಟುವಟಿಕೆಯಿಂದಿರುತ್ತದೆ. ಅದೇ ಅತಿಯಾದ ನಿದ್ರೆಯಾದರೆ ಆಲಸಿಗಳಾಗುತ್ತಾರೆ. ಮಕ್ಕಳಲ್ಲಿ ನಿದ್ರಾ ಅವಧಿಯ ಬೆಳವಣಿಗೆಯ ಹಾರ್ಮೋನ್ ಉತ್ಪತ್ತಿಯಾಗಿ ಅವರು ಬೆಳೆಯಲು ಅನುಕೂಲ ಮಾಡಿಕೊಡುತ್ತದೆ.

ನಿದ್ರೆಯಿಂದಾಗಿ ಶಕ್ತಿಯ ಉಳಿತಾಯದ ಜೊತೆಗೆ ಜೀವಕೋಶಗಳ ರಿಪೇರಿಯಾಗುತ್ತದೆ. ಕನಸುಗಳ ಮೂಲಕ ನಮ್ಮ ಅದುಮಿಟ್ಟ ಭಾವನೆ, ಅನಿಸಿಕೆ, ಪ್ರತಿ
ಭಟನೆಯ ಕಲ್ಪನೆಗಳು ಕನಸಿನಲ್ಲಿ ಗರಿಗೆದರುವ ಮೂಲಕ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಈಗಂತೂ ಪರೀಕ್ಷಾ ಸಮಯ. ಹೈಸ್ಕೂಲು-ಪಿಯುಸಿ
ಮಕ್ಕಳಿಗಂತೂ ಆತಂಕದಿಂದ ನಿದ್ರೆಯೆಂದರೆ ಭಯಬೀಳುವಂತಾಡುತ್ತಾರೆ. ನಿದ್ರೆಯಲ್ಲಿ ಮೈಮರೆಯದಂತೆ ಪಕ್ಕದ ಅಲಾರ್ಮ್ ಸೆಟ್ ಮಾಡಿಟ್ಟು ಕೊಂಡಿರುತ್ತಾರೆ.

ಜೊತೆಗೆ ಓಡಿಬರುವ ನಿದ್ರೆಯನ್ನು ದೂಡಲು – ತುಂಬ ಕಾಫಿ-ಟೀ. ಇನ್ನು ಟೆಕ್ಕಿಗಳಿಗಂತೂ ಹಗಲು ರಾತ್ರಿಗಳಾಗಿ, ರಾತ್ರಿ ಹಗಲುಗಳಾಗಿ ಬದಲಾಗಿ ಹೋಗಿ ಜೀವನ ವ್ಯವಸ್ಥೆಯೇ ಅಯೋಮಯವಾಗಿ ಬಿಟ್ಟಿದೆ. ಇದೆಲ್ಲದರ ನಡುವೆ ಕನಸುಗಣ್ಣುಗಳನ್ನು ಬಲವಂತದಿಂದ ಎಚ್ಚರಿಸಿ ಶಾಲೆಗೆ ಓಡಿಸುವ ಪೋಷಕರಿಗೆ ಹಿಡಿಶಾಪ ಹಾಕುತ್ತಾ ಶಾಲೆಯ ಪಾಠಗಳ ನಡುವೆಯೇ ನಿದ್ರೆಯ ಮಂಪರಿನಲ್ಲಿ ಜೋಲಿ ಹೊಡೆಯುವ ಪುಟ್ಟ ಪುಟ್ಟ ವಿದ್ಯಾರ್ಥಿಗಳು, ಅಮ್ಮನ ಜೋಗುಳ ಕೇಳುತ್ತಾ ಜೋಳಿಗೆಯ ಕಮ್ಮಗೆ ನಿದ್ರೆಗೆ ಜಾರುವ ಕಂದಮ್ಮಗಳು. ಆಹಾ ನಿದ್ರೆಯೇ!

ನೀನೆಷ್ಟು ಚೆಂದ…..ನೀನಿರದ ಬದುಕೆಷ್ಟು ಬರಡು! ಇವೆಲ್ಲವೂ ನಿದ್ರೆಯ ಗಮ್ಮತ್ತಿನ ವಿಚಾರಗಳಾದರೆ, ಇನ್ನು ನಿದ್ರಾಹೀನತೆಯಿಂದ ಬಳಲುವವರ ವಿಚಾರವೂ ಸಾಕಷ್ಟಿದೆ. ಸಾಮಾನ್ಯವಾಗಿ ದಣಿದ ದೇಹ-ಮನಸಿಗೆ ಮಲಗಿದ ಹತ್ತು ಹದಿನೈದು ನಿಮಿಷಗಳೊಳಗೆ ನಿದ್ರೆ ಆವರಿಸಿಬಿಡುತ್ತದೆ. ಆದರೆ ಮನಸಿ ನಲ್ಲಿ ಚಿಂತೆ, ಭಯ, ದುಃಖ, ಕೋಪ, ಅವಮಾನದ ನೋವು, ನಾಳೆ ಏನಾಗುತ್ತದೋ ಎಂಬ ಆತಂಕ, ಕೆಟ್ಟ ವಿಚಾರಗಳು, ದೈಹಿಕಹಾಗೂ ಮಾನಸಿಕ ಕಾಯಿಲೆಗಳು, ಸಮಯದ ನಿರಂತರ ಬದಲಾವಣೆಯಿಂದಾಗಿ ಹಾಗೂ ದುಶ್ಚಟಗಳಿಂದಾಗಿ ನಿದ್ರಾಭಂಗವಾಗುತ್ತದೆ. ನಿದ್ರೆಗೆಟ್ಟರೆ ಅಥವಾ ಕಡಿಮೆ ನಿದ್ರೆ ಯಿಂದಾಗಿ ವ್ಯಕ್ತಿ ಮಂಕಾಗುತ್ತಾನೆ, ಸಕ್ರಿಯನಾಗಿ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗುವುದಿಲ್ಲ. ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಕಡಿಮೆ ಯಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ನಿದ್ರೆಯನ್ನು ಕಸಿಯುತ್ತಿರುವ ಪ್ರಮುಖ ವಸ್ತುವೆಂದರೆ ಮೊಬೈಲುಗಳು! ಹೀಗಾಗಿ ಮಲಗುವ ಮುನ್ನ ಆದಷ್ಟೂ ಮೊಬೈಲುಗಳಿಂದ
ದೂರವಿದ್ದು ಸುಂದರ ಸ್ವಪ್ನಲೋಕನ್ನು ನಿಮ್ಮದಾಗಿಸಿಕೊಳ್ಳಿ.